ತಲಕಾಡು ಮತ್ತು ಪಂಚಲಿಂಗ ದರ್ಶನ ಒಂದು ನೋಟ

ಮೈಸೂರು - 0 Comment
Issue Date : 03.12.2013

ಇದು ಕೇವಲ ಧಾರ್ಮಿಕ ಸ್ಥಳವಷ್ಟೇ ಅಲ್ಲ, ಪ್ರವಾಸಿ ತಾಣವೂ ಹೌದು. ಕಾವೇರಿಯ ಮಡಿಲಲ್ಲಿರುವ ಈ ಸ್ಥಳ ಟಿ ನರಸೀಪುರ ತಾಲೂಕಿನಲ್ಲಿದೆ. ಈ ನಗರವು ತನ್ನ ಐದು ದೇವಾಲಯಗಳಿಗೆ ಪ್ರಸಿದ್ಧವಾಗಿದೆ.  ಅವುಗಳೆಂದರೆ ವೈಧ್ಯನಾಥೇಶ್ವರ, ಪಾತಳೇಶ್ವರ, ಮರಳೇಶ್ವರ, ಅರ್ಕೇಶ್ವರ ಮತ್ತು ಮಲ್ಲಿಕಾರ್ಜುನ ದೇವಾಲಯಗಳು. ಈ ಎಲ್ಲಾ ದೇವಾಲಯಗಳು ಪ್ರತಿವರ್ಷ ಮರಳಿನಲ್ಲಿ ಮುಚ್ಚಿ ಹೋಗುತ್ತಿರುತ್ತವೆ. ಆದರೆ ಇತ್ತೀಚೆಗೆ ಇವುಗಳು ಮರಳಿನಲ್ಲಿ ಮುಚ್ಚಿ ಹೋಗದಂತೆ ಕಾಪಾಡುವ ಪ್ರಯತ್ನಗಳು ನಿರಂತರವಾಗಿ ಸಾಗುತ್ತಿರುತ್ತವೆ. ಈ ಪ್ರಾಂತ್ಯದಲ್ಲಿ ಶಿವನ ದೇವಾಲಯಗಳೊಂದಿಗೆ ಒಂದು ವಿಷ್ಣು ದೇವಾಲಯವು ಇತ್ತು. ಅದನ್ನು ಕೀರ್ತಿನಾಥೇಶ್ವರ ದೇವಾಲಯವೆಂದು ಕರೆಯುತ್ತಾರೆ. ಇದನ್ನು ಈಗ ಪುನರ್ ನಿರ್ಮಾಣ ಮಾಡಲಾಗುತ್ತಿದೆ.

ಈ ನಗರದ ಪಕ್ಕದಲ್ಲಿಯೆ ಕಾವೇರಿ ನದಿ ಹರಿಯುತ್ತಿದ್ದು ಅದು ಇಲ್ಲಿ ತೀಕ್ಷ್ಣವಾದ ತಿರುವು ಪಡೆದುಕೊಳ್ಳುತ್ತದೆ. ಹಾಗಾಗಿ ಇಲ್ಲಿನ ನದಿ ತೀರ ಮತ್ತು ಅದರ ಸುತ್ತಲಿನ ದೃಶ್ಯಗಳು ನಯನ ಮನೋಹರವಾಗಿರುತ್ತವೆ. ತಲಕಾಡು ಪ್ರತಿ ಹನ್ನೆರಡು ವರ್ಷಗಳಿಗೊಮ್ಮೆ ನಡೆಯುವ ಪಂಚಲಿಂಗ ದರ್ಶನ ಉತ್ಸವದಿಂದ ಭಾರಿ ಜನಪ್ರಿಯತೆ ಪಡೆದಿದೆ, ಇತ್ತೀಚೆಗೆ 2009ರಲ್ಲಿ ಈ ಉತ್ಸವ ನಡೆಯಿತು, ಪಂಚಲಿಂಗ ದರ್ಶನವು ಕಾರ್ತಿಕ ಮಾಸದ ಅಮಾವಾಸ್ಯೆಯಂದು ಕುಹ ಯೋಗ ಮತ್ತು ವಿಶಾಖ ನಕ್ಷತ್ರಗಳು ಒಟ್ಟಿಗೆ ಬಂದಾಗ ಜರುಗುತ್ತದೆ. ಮಳವಳ್ಳಿ ಮತ್ತು ಟಿ ನರಸೀಪುರದಿಂದ ಸುಮಾರು 30 ಕಿ. ಮೀ. ದೂರದಲ್ಲಿ ಈ ಸ್ಥಳವಿದೆ. ದಟ್ಟವಾದ ಅರಣ್ಯದಿಂದಾಗಿ ಈ ಸ್ಥಳಕ್ಕೆ ತಲಕಾಡು ಎಂಬ ಹೆಸರು ಬಂದಿದೆ. ಗಂಗರ, ಚೋಳರು, ಹೊಯ್ಸಳರು ಈ ಪ್ರದೇಶವನ್ನು ಆಳಿದ್ದಾರೆ.

ಮರಳಿನಿಂದ ಆವೃತವಾಗಿರುವ ಈ ಸ್ಥಳ ನೋಡುಗರ ಆಕರ್ಷಣೆ. ಇಲ್ಲಿ ಕಾವೇರಿಯು ಯಾವುದೇ ಆರ್ಭಟವಿಲ್ಲದೆ, ಪ್ರಶಾಂತವಾಗಿ ಹರಿಯುತ್ತದೆ. ಈಜಾಡಲು ಇದು ಸೂಕ್ತ ಸ್ಥಳ. ಇಲ್ಲಿ ಬೋಟಿಂಗ್ ಕೂಡ ಮಾಡಬಹುದು. ಮರಳಿನಲ್ಲಿ ಅಡ್ಡಾಡಬಹುದು. ದೇವಾಲಯಗಳಿಂದ ಕೂಡಿದ ಐತಿಹಾಸಿಕ ಸ್ಥಳ. ಆಸ್ತಿಕ ನಾಸ್ತಿಕರಿಬ್ಬರನ್ನೂ ಸೆಳೆಯುವ ಈ ತಾಣದ ಸುತ್ತ ಹೆಣೆದುಕೊಂಡಿರುವ ಕಥೆಗಳು ನೂರಾರು. ಈ ಊರಿಗೆ  ತಲಕಾಡು ಎಂಬ ಹೆಸರು ಹೇಗೆ ಬಂತೆಂಬುದಕ್ಕೆ ಒಂದು ಕಥೆಯಾದರೆ, ಇಡೀ ಊರು ಮರಳಿನಿಂದ ಮುಚ್ಚಿ ಹೋಗಿರುವುದಕ್ಕೆ ಮತ್ತೊಂದು ಕಥೆ ಇದೆ.

ತಲಾ ಮತ್ತು ಕಾಡ ಎಂಬ ಇಬ್ಬರು ಕಿರಾತ ಸೋದರರಿಂದ ಈ ಊರಿಗೆ ತಲಕಾಡು ಎಂದು ಹೆಸರು ಬಂದಿದೆ ಎಂಬುದು ಸ್ಥಳ ಪುರಾಣ. ಅರಮನೆಗಳ ನಗರಿ ಮೈಸೂರಿಗೆ 58 ಕಿ.ಲೋ ಮೀಟರ್ ದೂರದಲ್ಲಿರುವ ಈ ಊರಿನಲ್ಲಿ ಪಂಚಲಿಂಗಗಳ ಪೈಕಿ ಮೂರು ಲಿಂಗಗಳಿವೆ.

ವೈದ್ಯೇಶ್ವರ, ಪಾತಾಳೇಶ್ವರ ಹಾಗೂ ಮರಳೇಶ್ವರ ದೇವಾಲಯಗಳು ಇಲ್ಲಿನ ವೈಶಿಷ್ಟ್ಯ. ಪಂಚಲಿಂಗಗಳ ಪೈಕಿ ಮತ್ತೆರೆಡು ಲಿಂಗಗಳಾದ ಅರ್ಕೇಶ್ವರ ದೇವಾಲಯ ಇಲ್ಲಿಗೆ 4 ಕಿಲೋ ಮೀಟರ್ ದೂರದ ವಿಜಯಪುರದಲ್ಲೂ, ಮಲ್ಲಿಕಾರ್ಜುನ ದೇಗುಲ ಮುಡುಕುತೊರೆಯಲ್ಲೂ ಇದೆ.

ತಲಕಾಡಿನ ಶಿವನಿಗೆ ಗಜಾರಣ್ಯನಾಥ ಎಂದೂ ಕರೆಯುತ್ತಾರೆ. ಇದಕ್ಕೂ ಒಂದು ಕಥೆಯಿದೆ. ಆನೆಯ ಜನ್ಮ ಪಡೆದಿದ್ದ ಸೋಮದತ್ತನೆಂಬ ಋಷಿ ಮತ್ತು ಆತನ ಶಿಷ್ಯರು ಇಲ್ಲಿ ಮೋಕ್ಷ ಪಡೆದಿದ್ದರಿಂದ ಇದು ಗಜಾರಣ್ಯ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ತಲಕಾಡು ಹಿಂದೆ ಗಂಗ ಅರಸರ ರಾಜಧಾನಿಯಾಗಿತ್ತು. ಗಂಗರಸ ಹರಿವರ್ಮ ಇಲ್ಲಿ ನೆಲೆಸಿದ್ದನೆಂಬುದಕ್ಕೆ ಶಾಸನದ ಬಲವೂ ಇದೆ. ಚೋಳರೂ ಈ ಕ್ಷೇತ್ರವನ್ನು ಆಳಿದ್ದು, ಆಗ ಇದು ರಾಜರಾಜಪುರ ಎಂದೂ ಕರೆಸಿಕೊಂಡಿತ್ತು. ನಂತರ ಇದು ಹೊಯ್ಸಳರ ಆಳ್ವಿಕೆಗೆ ಕೂಡ ಒಳಪಟ್ಟು ಪುರೋಭಿವೃದ್ಧಿ ಹೊಂದಿತು.

1342ರಲ್ಲಿ ವಿಜಯನಗರದರಸರ ಆಳ್ವಿಕೆಯಲ್ಲಿ ಸ್ಥಳೀಯ ಮಾಧವ ಮಂತ್ರಿ ಊರಿನಂಚಿನಲ್ಲಿ ಪ್ರಶಾಂತವಾಗಿ ಹರಿಯುತ್ತಿದ್ದ ಕಾವೇರಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಿಸಿದ. ಪರಿಣಾಮವಾಗಿ ಊರು ಮರಳ ಗುಡ್ಡವಾಗಿ ಪರಿಣಮಿಸಿತೆನ್ನುತ್ತಾರೆ ಕೆಲವರು. ಆದರೆ, ತಲಕಾಡು ಮರಳಾದ ಬಗ್ಗೆ ಬೇರೆಯದೇ ಕಥೆ ಇದೆ.

ವಿಜಯನಗರದರಸ ಪ್ರತಿನಿದಿಯಾದ ಶ್ರೀರಂಗರಾಯ ಎಂಬಾತ ಶ್ರೀರಂಗಪಟ್ಟಣವನ್ನಾಳುತ್ತಿದ್ದ. ಅವನಿಗೆ ಬೆನ್ನುಪಣಿರೋಗ ಬಂದು ಯಾವ ಔಷಧದಿಂದಲೂ ಗುಣವಾಗದಿದ್ದಾಗ ವೈದ್ಯನಾಥೇಶ್ವರನಿಗೆ ಪೂಜೆ ಮಾಡಿ ತನ್ನ ರೋಗದಿಂದ ಮುಕ್ತಿಪಡೆಯಲು ತಲಕಾಡಿಗೆ ಆಗಮಿಸಿದ. ಪತಿ ಮರಣಾವಸ್ಥೆಯಲ್ಲಿರುವನೆಂದು ತಿಳಿದ ರಾಣಿ ತಾನೂ ಜೊತೆಗೆ ಬಂದಳು. ರಾಜ ತಲಕಾಡಿನಲ್ಲಿ ತನ್ನ ಕೊನೆಯುಸಿರೆಳೆದ. ಆತನ ಪತ್ನಿ ಅಲಮೇಲಮ್ಮ ತಲಕಾಡಿನ ಸನಿಹದ ಮಾಲಂಗಿ ಗ್ರಾಮದಲ್ಲಿ ನೆಲೆಸಿದಳು. ಆಗ ರಾಜನಿಲ್ಲದ ಶ್ರೀರಂಗಪಟ್ಟಣವನ್ನು ಮೈಸೂರು ಅರಸರು ತಮ್ಮ ಕೈವಶ ಮಾಡಿಕೊಂಡರು. ಆಗ ಅವರಿಗೆ ಅಲಮೇಲಮ್ಮ ಬಳಿ ಇರುವ ಅಮೂಲ್ಯ ಅಭರಣಗಳ ವಿಷಯ ತಿಳಿಯಿತು. ಅದನ್ನು ಪಡೆಯಲು ಸೈನ್ಯ ಸಮೇತ ಧಾವಿಸಿದರು. ಆಗ ದಾರಿಕಾಣದ ಅಲಮೇಲಮ್ಮ ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ, ಮೈಸೂರು ಅರಸರಿಗೆ ಮೊಮ್ಮಕ್ಕಳೇ ಆಗದಿರಲಿ ಎಂದು ಶಪಿಸಿ, ತಾನೂ ಮಾಲಂಗಿ ಮಡುವಿಗೆ ಮುಳುಗಿ ಸತ್ತಳಂತೆ. ಹೀಗಾಗೇ ತಲಕಾಡು ಮರಳಾಯಿತು, ಮಾಲಂಗಿ ಮಡುವಾಯಿತು, ಮೈಸೂರು ಅರಸರಿಗೆ ವಂಶೋದ್ಧಾರಕ ಸಂತಾನ ಭಾಗ್ಯವೇ ಇರಲಿಲ್ಲ ಎಂದು ಮತ್ತೊಂದು ಕಥೆ ಹೇಳುತ್ತದೆ.

ಇಂತಹ ಇತಿಹಾಸ ಪ್ರಸಿದ್ಧ ಹಾಗೂ ಪುರಾಣ ಪ್ರಸಿದ್ಧವಾದ ಊರಿನಲ್ಲಿ ಗಂಗರು, ಚೋಳರು, ಹೊಯ್ಸಳರು 30ಕ್ಕೂ ಹೆಚ್ಚು ದೇವಾಲಯ ಕಟ್ಟಿಸಿದ್ದರೆನ್ನುತ್ತದೆ ಇತಿಹಾಸ. ಈಗ ಇಲ್ಲಿ ವೈದ್ಯನಾಥೇಶ್ವರ, ಪಾತಾಳೇಶ್ವರ, ಕೀರ್ತಿನಾರಾಯಣ, ಮರಳೇಶ್ವರ ಹಾಗೂ ಚೌಡೇಶ್ವರಿಯ ಐದು ದೇವಾಲಯಗಳಿವೆ. ಮತ್ತೊಂದು ದೇವಾಲಯ ಇತ್ತೀಚಗಷ್ಟೇ ಉತ್ಖನನ ಕಾಲದಲ್ಲಿ ಹೊರಹೊಮ್ಮಿದೆ.

ವೈದ್ಯೇಶ್ವರ ದೇವಾಲಯ ಇಲ್ಲಿರುವ ಭವ್ಯ ದೇಗುಲ. ಕೀರ್ತಿನಾರಾಯಣ ದೇಗುಲ ಹೊಯ್ಸಳರು ಕಟ್ಟಿಸಿದ ಏಕಮಾತ್ರ ದೇಗುಲ. ವೈದ್ಯೇಶ್ವರ ಊರಿನ ಪ್ರಮುಖ ದೇಗುಲ. ಇದನ್ನು ಮಾಧವ ಮಂತ್ರಿ ಕಟ್ಟಿಸಿದನೆಂದು ಪ್ರತೀತಿ.

ಕಣಶಿಲೆಯಿಂದ ನಿರ್ಮಿಸಿರುವ ಈ ದೇಗುಲದಲ್ಲಿ ಸುಂದರ ಶಿಲ್ಪಾಲಂಕರಣಗಳಿವೆ. ಹೊರಬಿತ್ತಿಯ ಬಲ ಭಾಗದಲ್ಲಿ ಮೂಷಿಕ ವಾಹನನಾದ ಗಣಪನ ಸುಂದರ ಕೆತ್ತನೆಯಿದೆ. ಅಡ್ಡ ಪಟ್ಟಿಕೆಗಳಲ್ಲಿ ಹಲವು ಶಿಲ್ಪಗಳಿವೆ.

ವಿಶಾಲವಾದ ಪ್ರಾಕಾರದಲ್ಲಿ ಸಣ್ಣ ಸಣ್ಣ ಇತರ ದೇವರ ಗುಡಿಗಳಿವೆ. ಮುಖ್ಯದ್ವಾರದ ಬಳಿ ಸುಂದರ ಕೆತ್ತನೆಯ 10 ಅಡಿ ಎತ್ತರದ ದ್ವಾರಪಾಲರ ಮೂರ್ತಿಗಳಿವೆ. ಇಷ್ಟು ಎತ್ತರವಾದ ದ್ವಾರಪಾಲಕ ಮೂರ್ತಿಗಳನ್ನು ಮತ್ತಾವ ದೇವಾಲಯದಲ್ಲೂ ನೋಡಲು ಸಿಗುವುದಿಲ್ಲ. ದ್ರಾವಿಡ-ಹೊಯ್ಸಳ ಶೈಲಿಯ ಈ ದೇಗುಲದಲ್ಲಿರುವ ಗರ್ಭಗುಡಿಯಲ್ಲಿ ಸುಂದರ ಶಿವಲಿಂಗವಿದೆ. ಕಂಚಿನ ನಟರಾಜ ಹಾಗೂ ಸುಂದರವಾದ ಉತ್ಸವ ಮೂರ್ತಿ ಮನಮೋಹಕವಾಗಿದೆ.

ಕಾರ್ತಿಕ ಬಹುಳ ಅಮಾವಾಸ್ಯೆಯ ಸೋಮವಾರ ಸೂರ್ಯಚಂದ್ರರಿಬ್ಬರೂ ವೃಶ್ಚಿಕ ರಾಶಿಯಲ್ಲಿ ಸೇರಿದಾಗ ಸಂಭವಿಸುವ ಕುಹುಯೋಗದಲ್ಲಿ ಇಲ್ಲಿ ಪಂಚಲಿಂಗ ದರ್ಶನಕ್ಕಾಗಿ ಲಕ್ಷಾಂತರ ಭಕ್ತರು ಸೇರುತ್ತಾರೆ.

ಗೋಕರ್ಣ ತೀರ್ಥದಲ್ಲಿ ಮಿಂದು ವೈದ್ಯೇಶ್ವರನನ್ನೂ, ಉತ್ತರವಾಹಿನಿಯಲ್ಲಿ ಮಿಂದು ಅರ್ಕೇಶ್ವರನನ್ನೂ, ಪೂರ್ವವಾಹಿನಿಯಲ್ಲಿ ಸ್ನಾನ ಮಾಡಿ ಪಾತಾಳೇಶ್ವರನನ್ನೂ, ಪಶ್ಚಿಮ ವಾಹಿನಿಯಲ್ಲಿ ಮಿಂದು ಮಲ್ಲಿಕಾರ್ಜುನೇಶ್ವರನನ್ನೂ, ದಕ್ಷಿಣ ವಾಹಿನಿಯಲ್ಲಿ ಮಿಂದು ಮರಳೇಶ್ವರನನ್ನೂ ಪೂಜಿಸುತ್ತಾರೆ.

ಕೆಲವೊಮ್ಮೆ 4 ವರ್ಷದ ಅವಧಿಯಲ್ಲೊಮ್ಮೆ, ಮತ್ತೆ ಕೆಲವು ಬಾರಿ 14, 15 ವರ್ಷಗಳಿಗೊಮ್ಮೆ ಈ ಕುಹುಯೋಗ ಪ್ರಾಪ್ತವಾಗುತ್ತದೆ. ಈ ಹಿಂದೆ 1908, 1905, 1925, 1938, 1952, 1959, 1966, 1979, 1986 ಹಾಗೂ 1993ರಲ್ಲಿ ನಡೆದಿತ್ತು.  ಈ ವರ್ಷ 2013 ರ ಡಿಸೆಂಬರ್ 2 ರಂದು ಪಂಚಲಿಂಗ ದರ್ಶನವು ಕೊನೆಯ ಕಾರ್ತೀಕ ಸೋಮವಾರದ ಯೋಗ ಗಳಿಗೆಯಲ್ಲಿ ಆರಂಭವಾಯಿತು. ಡಿಸೆಂಬರ 7 ರವರೆಗೆ ಈ ಉತ್ಸವ ನಡೆಯಲಿದೆ. ದೇಗುಲದ ಅನತಿ ದೂರದಲ್ಲೇ ಮಂದಗತಿಯಲ್ಲಿ ಹರಿಯುವ ತಿಳಿನೀರ ಕಾವೇರಿ ನದಿಯಲ್ಲಿ ಆಡಿ ನಲಿಯುತ್ತಾರೆ. ನೀಲಾಗಸದ ಛಾಯೆಯಲ್ಲಿ ಕಂಗೊಳಿಸುವ ಈ ನದಿಯಲ್ಲಿ ತೆಪ್ಪದ ದೋಣಿ ವಿಹಾರ ಎಲ್ಲರಿಗೂ ಪ್ರಿಯವಾಗುತ್ತದೆ.

  

   

Leave a Reply