ತಾಯಿ ಭಾರತಿ ಬಂಜೆಯಲ್ಲ

ಸೇವಾ ವಿಭಾಗ - 0 Comment
Issue Date : 29.05.2015

ವಿಶ್ವ ಯೋಗದಿನವನ್ನು ಹಾಸನದಲ್ಲಿ ಜೂನ್ 21 ರಂದು ಆಚರಿಸುವುದಕ್ಕಾಗಿ ಒಂದು ಸಮಿತಿಯನ್ನು ರಚಿಸಲು ಒಬ್ಬ ಹಿರಿಯರ ಮನೆಗೆ ಅವರನ್ನು ಮಾತಾಡಿಸಲು ಹೋಗಿದ್ದೆವು.ನಾವು ಮೂವರಿದ್ದೆವು. ನಾವು ಆರೆಸ್ಸೆಸ್ ಎಂಬುದು ಅವರಿಗೆ ಚೆನ್ನಾಗಿ ಗೊತ್ತು. ಅವರು ಮಾತನಾಡಲು ಆರಂಭಿಸಿದರು….
ವೈಯಕ್ತಿಕವಾಗಿ ನಿಮ್ಮ ಮೂವರ ಬಗ್ಗೆಯೂ ನನಗೆ ಅತ್ಯಂತ ಗೌರವವಿದೆ. ಆರೆಸ್ಸೆಸ್‌ನ ಕವಾಯತು,ಶಿಸ್ತನ್ನು ನಾನು ಬಹಳವಾಗಿ ಒಪ್ಪುತ್ತೇನೆ. ಆದರೆ ನನಗೂ ನಿಮಗೂ ಬೇಸಿಕ್ ಡಿಫರೆನ್ಸ್ ಇದೆ… ಅವರು ಮಾತನಾಡುತ್ತಿದ್ದರು. ನಾವು ಮೌನವಾಗಿ ಕೇಳುತ್ತಿದ್ದೆವು.
ಆ ಹಿರಿಯರ ಮನದಾಳದ ಚಿಂತನೆಗಳು ಬಲು ಚೆನ್ನಾಗಿವೆ. ಸಮಾಜದಲ್ಲಿ ಮೇಲು-ಕೀಳು ಅಳಿಯಬೇಕು, ಸಮಾನತೆ ಬರಬೇಕು, ಹಿಂದು ಸಮಾಜ ಸದೃಢವಾಗಬೇಕು… ಇತ್ಯಾದಿ… ಇತ್ಯಾದಿ
ಅವರ ಮನದ ಭಾವನೆ, ನಮ್ಮ ಮನದ ಭಾವನೆ ಒಂದೇ ಆಗಿದೆ.ಆದರೆ ಸಮಾಜದಲ್ಲಿ ಇರುವ ತಾರತಮ್ಯವನ್ನು ಕಿತ್ತುಹಾಕಬಲ್ಲ ಶಕ್ತಿ ಆರೆಸ್ಸೆಸ್‌ಗೆ ಮಾತ್ರವೇ ಇದೆ, ಆರೆಸ್ಸೆಸ್‌ನವರು ಈ ವಿಚಾರದಲ್ಲಿ ತಮ್ಮ ಪೂರ್ಣ ಸಾಮರ್ಥ್ಯವನ್ನು ಬಳಸುತ್ತಿಲ್ಲ, ಎಂಬುದು ಅವರ ನೋವಿನ ಮಾತು.
ನೋಡಿ, ಹೇಗಿದೆ? ಇಂಥ ಸಮಸ್ಯೆಗಳನ್ನು ತೊಲಗಿಸುವ ಶಕ್ತಿ ಬೇರೆ ಯಾರಿಗೂ ಇಲ್ಲ ಎಂಬ ಸತ್ಯ ಅವರಿಗೆ ಗೊತ್ತಿದೆ. ಅವರ ಮನದ ಇಚ್ಚೆಯೂ ಇದೆ. ಆರೆಸ್ಸೆಸ್‌ನವರು ಮನಸ್ಸು ಮಾಡಿದರೆ ಆಗುತ್ತೆ. ಆದರೆ ಯಾಕೋ ಅವರು ಪೂರ್ಣ ಮನಸ್ಸು ಮಾಡುತ್ತಿಲ್ಲ- ಎಂಬುದು ಅವರ ಅಭಿಪ್ರಾಯ.
ಅದು ಅವರ ಅಭಿಪ್ರಾಯ ಅಷ್ಟೆ. ಆರೆಸ್ಸೆಸ್ ಒಂಬತ್ತು ದಶಕಗಳಿಂದ ಸಮಾಜದಲ್ಲಿನ ಅಸ್ಪೃಶ್ಯತೆಯನ್ನು ಕಿತ್ತು ಹಾಕಲು ತನ್ನ ಎಲ್ಲಾ ಪ್ರಯತ್ನವನ್ನು ಮಾಡುತ್ತಲೇ ಇದೆ. ಅದರಲ್ಲಿ ಅದು ಬಹುಪಾಲು ಯಶಸ್ವಿಯೂ ಆಗಿದೆ. ಆದರೆ ಇಂಥ ಒಂದು ದೊಡ್ದ ಸಮಾಜದಲ್ಲಿ ಅಸ್ಪೃಶ್ಯತಾ ಆಚರಣೆಯಂತಹ ವಿಷವನ್ನು ಆರೆಸ್ಸೆಸ್ ಮಾತ್ರವೇ ಕಿತ್ತು ಹಾಕಬೇಕೆಂಬುದು ಹಲವರ ಬಯಕೆ.
ಹಲವು ಮಠ – ಮಂದಿರಗಳ ಉದಾಹರಣೆ ಕೊಟ್ಟರು.ಅಲ್ಲಿನ ಆಸಮಾನತೆ ಧೋರಣೆ ಗಳ ಬಗ್ಗೆ ಹೇಳಿದರು. ನಾನು ‘ನಿಮ್ಮ ಬಗ್ಗೆ ನಮಗೆ ಅತ್ಯಂತ ಗೌರವವಿದೆ. ನೀವು ನಮ್ಮ ಚಟುವಟಿಕೆಗಳನ್ನು ಒಳಹೊಕ್ಕು ಗಮನಿಸಬೇಕು.ಯಾವುದೋ ಮಠಮಂದಿರಗಳಲ್ಲಿ ಅಸಮಾನತೆ ಇದ್ದರೆ -ಅದಕ್ಕೆ ನಮ್ಮನ್ನು ಹೊಣೆಮಾಡಬಾರದು.’
– ‘ನೀವು ಅಂಥ ಮಠಮಂದಿರಗಳಿಗೂ ಬೆಂಬಲ ಕೊಡ್ತೀರಿ. ನೀವು ಸರಿಯಾಗಿ ಮನಸ್ಸು ಮಾಡಿದರೆ ಅಂಥ ಮಠಮಂದಿರಗಳಲ್ಲಿನ ಅಸ್ಪೃಶ್ಯತಾ ಆಚರಣೆಯನ್ನು ನಿಲ್ಲಿಸಬಹುದು.’
– ‘ಆಯಾ ಕ್ಷೇತ್ರಗಳಲ್ಲಿನ ಕಾರ್ಯಕರ್ತರು ಅಸ್ಪೃಶ್ಯತಾ ಆಚರಣೆ ವಿರುದ್ಧವಾಗಿ ತಮ್ಮ ಶಕ್ತ್ಯಾನುಸಾರ ಕೆಲಸ ಮಾಡುತ್ತಲೇ ಇದ್ದಾರೆ. ಆದರೂ ಇಂಥ ಒಂದು ಕೆಟ್ಟ ಆಚರಣೆ ಹೋಗಲೇ ಬೇಕು.ಅದು ಎಲ್ಲರ ಹೊಣೆ’ ಎಂದೆ.
ಹಿಂದು ಸಮಾಜವು ಇನ್ನೂ ಸದೃಢವಾಗಬೇಕೆಂಬ ಆಶೆಯನ್ನು ಹೊಂದಿರುವ ಆ ಹಿರಿಯರು ತಮ್ಮ ಇಳಿ ವಯಸ್ಸಿನಲ್ಲಿ ಹಲವಾರು ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಸಮಾಜದಲ್ಲಿ ಇಂಥ ಸಾಮಾಜಿಕ ಕಳಕಳಿ ಇರುವ ವ್ಯಕ್ತಿಗಳ ಸಂಖ್ಯೆ ಕಡಿಮೆ ಏನಿಲ್ಲ. ಇಂಥ ಸಮಾಜಮುಖಿ ಜನರನ್ನು ಒಂದು ವೇದಿಕೆಯಲ್ಲಿ ತರುವ ಕೆಲಸವನ್ನು ಸಾಮಾಜಿಕ ಕಾರ್ಯಕರ್ತರು ಮಾಡಬೇಕು. ಭಾರತಮಾತೆ ಬಂಜೆಯಲ್ಲ. ಅವಳ ಕೀರ್ತಿಯನ್ನು ಹೆಚ್ಚಿಸುವ ಕೆಲಸವನ್ನು ಎಂದಿಗಿಂತ ಇಂದು ಮಾಡುವುದು ಕಾಲದ ಕರೆಯಾಗಿದೆ.

– ಹರಿಹರಪುರ ಶ್ರೀಧರ್‍

   

Leave a Reply