This page was exported from Vikrama [ http://vikrama.in ]
Export date: Sun Mar 11 4:14:43 2018 / +0000 GMT

ತಾರತಮ್ಯಕ್ಕೆ ವಿದಾಯ ಹೇಳಿದ ಆ ಘಟನೆಗಳು ಪ್ರಾಂತ ವಿ.ಹಿಂ.ಪ.ನ ಧರ್ಮಾಚಾರ್ಯ ಪ್ರಮುಖರ ಮಗಳ ಮದುವೆಯ ಸಂದರ್ಭ. ಹರಿಜನ ಸಮುದಾಯದ ಪೀಠಾಧಿಪತಿಗಳಾದ ಆದಿಜಾಂಬವ ಮಠಾಧೀಶರನ್ನು ಮದುವೆಗೆ ಬಂದು ವಧುವರರನ್ನು ಆಶೀರ್ವದಿಸುವಂತೆ ಕೇಳಿಕೊಳ್ಳಲಾಯಿತು. ಆ ಕಾರ್ಯಕರ್ತರು, ಶಿವಮೊಗ್ಗದ ಪ್ರಸಿದ್ಧ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರು. ಸಮಾರಂಭ ಏರ್ಪಾಡಾಗಿದ್ದುದು ಅದೇ ದೇವಸ್ಥಾನದೊಳಗೆ ತುಂಬ ಮಂದಿ ಆಹ್ವಾನಿತರ ಸಮಕ್ಷಮದಲ್ಲಿ.
ಸ್ವಯಂಸೇವಕರು ಇನ್ನೂ ಒಂದು ದಿಸೆಯಲ್ಲಿ ಕ್ರಾಂತಿಕಾರಕ ಹೆಜ್ಜೆಗಳನ್ನಿಟ್ಟ ಉದಾಹರಣೆಗಳೂ ಇವೆ. ಆಂಧ್ರದ ವಿಭಾಗ ಪ್ರಚಾರಕರ ತಮ್ಮ-ಸ್ವತಃ ಆತನೂ ಸ್ವಯಂಸೇವಕನೇ-ತನ್ನ ಮಗಳನ್ನು ಓರ್ವ ಹರಿಜನ ಯುವಕನಿಗಿತ್ತು ಮದುವೆ ಮಾಡಲು ನಿರ್ಧರಿಸಿದರು. ಓರ್ವ ಯೋಗ್ಯ ವರನನ್ನು ಹುಡುಕಿ ಆತನ ಕುಟುಂಬದವರೊಡನೆ ಮದುವೆಯ ಮಾತುಕತೆ ನಡೆಸಿದಾಗ ಅವರು ಮೊದಲು ಹಿಂಜರಿದರು. ಏಕೆಂದರೆ ಹುಡುಗಿಯ ಕಡೆಯವರು ‘ಮೇಲ್ಜಾತಿ'ಯವರು. ಆದರೆ ಕೊನೆಗೆ ಅವರೂ ಸಂತೋಷದಿಂದ ಒಪ್ಪಿದರು. ಎರಡೂ ಕುಟುಂಬಗಳು ತಮ್ಮ ನೆಂಟರಿಷ್ಟರೊಡನೆ ಮದುವೆಗೆ ಬಂದು ಹೊಸ ದಂಪತಿಗಳ ಮೇಲೆ ತಮ್ಮ ಹಾರ್ದಿಕ ಶುಭಾಶಯಗಳ ಮಳೆಯನ್ನೇ ಸುರಿಸಿದರು.
ಕರ್ನಾಟಕದ ಮಂಗಳೂರಿನ ಓರ್ವ ಕಾಲೇಜು ಅಧ್ಯಾಪಕರು ಉತ್ತಮ ಗುಣ ನಡತೆಯುಳ್ಳ ತನ್ನ ಓರ್ವ ಹರಿಜನ ಸಹೋದ್ಯೋಗಿಯೊಡನೆ ತಮ್ಮ ತಂಗಿಯ ಮದುವೆ ಮಾಡಬೇಕೆಂದು ನಿರ್ಧರಿಸಿ ಆಕೆಯ ಅಭಿಪ್ರಾಯ ಕೇಳಿದರು. ಆಕೆ, ‘ಅಣ್ಣಾ, ನಿನ್ನ ಮೇಲೆ ನನಗೆ ಪೂರ್ತಿ ನಂಬಿಕೆ ಇದೆ. ನೀನು ಏನೇ ನಿರ್ಧಾರ ಕೈಗೊಂಡರೂ ಅದು ನನ್ನ ಹಿತಕ್ಕಾಗಿಯೇ ಎಂದು ನಾನು ಭಾವಿಸುವೆ'' ಎಂದು ಉತ್ತರಿಸಿದಳು. ಆ ಸ್ವಯಂಸೇವಕರು ತಮ್ಮ ತಂದೆ-ತಾಯಿಗಳನ್ನು ಒಪ್ಪಿಸುವಲ್ಲಿಯೂ ಯಶಸ್ವಿಯಾದರು. ಆ ಹರಿಜನ ಸಹೋದ್ಯೋಗಿಗೆ ಇನ್ನಿಲ್ಲದಂತಹ ಆಶ್ಚರ್ಯ, ಹಾಗೆಯೇ ಅಧ್ಯಾಪಕ ವರ್ಗ ಮತ್ತು ವಿದ್ಯಾರ್ಥಿವೃಂದಕ್ಕೂ ಕೂಡ. ತುಂಬ ಸೌಹಾರ್ದಮಯ ವಾತಾವರಣದಲ್ಲಿ ಮದುವೆ ಸಾಂಗವಾಗಿ ನೆರವೇರಿತು. ವಾಸ್ತವವಾಗಿ ಅದೊಂದು ಸಾಮಾಜಿಕ ಸಮಾರಂಭವೇ ಆಯಿತು. ಅದರಲ್ಲಿ ಪಾಲ್ಗೊಂಡ ಎಲ್ಲರಿಗೂ ಅದೊಂದು ಮರೆಯಲಾಗದ ಸಂದೇಶ ನೀಡಿತ್ತು.
ಸಂಘದ ಸ್ವಯಂಸೇವಕರು ಕೈಗೊಂಡ ಇಂತಹ ಕ್ರಾಂತಿಕಾರಿ ಕ್ರಮಗಳಿಂದ ಪ್ರಭಾವಿತರಾದ ಕರ್ನಾಟಕದ ಉಪೇಕ್ಷಿತ ವರ್ಗದ ಇಬ್ಬರ ಅಭಿಪ್ರಾಯಗಳು ಇಲ್ಲಿ ಉಲ್ಲೇಖಿನೀಯ.
ಗಂಗಾಧರಯ್ಯನವರು ತುಮಕೂರಿನ ಸಿದ್ಧಾರ್ಥ ವಿದ್ಯಾಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ. ಮಂಗಳೂರಲ್ಲಿ ಡಾ. ಹೆಡಗೇವಾರ್ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ನಡೆದ ಬೃಹತ್ ಸಾರ್ವಜನಿಕ ಸಮಾರಂಭದ ಅಧ್ಯಕ್ಷ ಸ್ಥಾನದಿಂದ ತಮ್ಮ ನಾಲ್ಕು ದಶಕಗಳ ಅನುಭವದ ಹಿನ್ನೆಲೆಯಲ್ಲಿ ಅವರು ಆಡಿದ ಮಾತುಗಳು: ‘ಗಾಂಧಿಜೀ ಹಾಗೂ ಡಾ. ಅಂಬೇಡ್ಕರರು ಅಸ್ಪೃಶ್ಯತೆಯ ನಿವಾರಣೆಗಾಗಿ ಮಾಡಿದ ಪ್ರಯತ್ನಗಳು ಅಪೂರ್ಣವಾಗಿಯೇ ಉಳಿದವು. ಆದರೆ ಅದೇ ಕಾರ್ಯವನ್ನೀಗ ಸಂಘ ಕೈಗೆತ್ತಿಕೊಂಡಿದೆ. ಆ ಇಬ್ಬರೂ ಮಹಾಪುರುಷರ ಕಟ್ಟಾ ಅನುಯಾಯಿಯಾಗಿರುವ ನನಗೆ ನಮ್ಮ ಹರಿಜನ ಬಂಧುಗಳ ಸರ್ವತೋಮುಖ ಏಳಿಗೆ ಸಂಪೂರ್ಣ ಹಿಂದು ಜಮಾಜದ ಮಾನಸಿಕ ಪರಿರ್ವತನೆಯ ಮೂಲಕ ಮಾತ್ರ ಸಾಧ್ಯ ಎಂದು ಅನಿಸುತ್ತದೆ. ಈ ಪ್ರಯತ್ನದಲ್ಲಿ ಸಂಘವು ಸಫಲಗೊಂಡಿರುವುದನ್ನು ನಾನು ಕಾಣುತ್ತಿರುವುದರಿಂದ ಅದರೊಂದಿಗೆ ಹಾರ್ದಿಕವಾಗಿ ಸಹಕರಿಸುವುದು ಅಗತ್ಯವೆಂದು ನನ್ನೆಲ್ಲ ಸಹಕಾರಿಗಳಿಗೂ ಹೇಳಬಯಸುೆ'.
ಮೈಸೂರು ಜಿಲ್ಲೆಯ ಮೀಸಲು ಕ್ಷೇತ್ರದ ಸಂಸತ್ಸದಸ್ಯ ವಿ. ಶ್ರೀನಿವಾಸ ಪ್ರಸಾದ್ ಅವರು ಮೈಸೂರಿನಲ್ಲಿ ನಡೆದ ಇಂತಹದೇ ಸಮಾರಂಭದಲ್ಲಿ ಮಾತನಾಡುತ್ತಾ ಹೇಳಿದರು:
‘ಸಾವಿರಾರು ಮಂದಿ ಮಹಾತ್ಮರು ಹುಟ್ಟಿದ ನಮ್ಮ ನಾಡಿನಲ್ಲಿ ಅಸ್ಪೃಶ್ಯತೆಯಂತಹ ಕಲಂಕ ಇನ್ನೂ ಉಳಿದಿರುವುದು ದುರ್ದೈವ. ಹಿಂದು ಸಮಾಜದಲ್ಲಿನ ಈ ದೋಷವನ್ನು ಪ್ರಾಮಾಣಿಕ ಪ್ರಯತ್ನದಿಂದ ತೊಲಗಿಸಲು ಸಂಘದಿಂದ ಮಾತ್ರ ಸಾಧ್ಯವಿದೆ. ಸಂಘದ ಶಿಬಿರದಲ್ಲಿ ಜಾತಿಯ ಉಲ್ಲೇಖ ಸಹ ಮಾಡದೆ, ಜಾತೀಯತೆ ಹಾಗೂ ಮೇಲು-ಕೀಳು ಇತ್ಯಾದಿ ಭಾವನೆಗಳನ್ನು ದೂರಗೊಳಿಸಿದ್ದ ಯಶಸ್ವಿ ಪ್ರಯೋಗ ಕಂಡು ಮಹಾತ್ಮಾ ಗಾಂಧೀಜಿಯವರು ಸಹ ಮೆಚ್ಚುಗೆ ಪ್ರಕಟಿಸಿದ್ದರು. ಇಂತಹ ಸಂಘದ ಸ್ವಯಂಸೇವಕನೆನಿಸಿಕೊಳ್ಳಲು ನನಗೂ ಅಭಿಮಾನವಿದೆ. ನಿಃಸ್ವಾರ್ಥಭಾವದಿಂದ ದುಡಿಯುವ ಸಾವಿರಾರು ಶ್ರದ್ಧಾವಂತರು ಇಲ್ಲಿ ಇರುವುದರಿಂದ ನಮ್ಮ ಸಾಮಾಜಿಕ ದೋಷವನ್ನು ಸರಿಪಡಿಸುವುದರಲ್ಲಿ ಸಂಘವು ನಿಶ್ಚಿತವಾಗಿ ಯಶಸ್ವಿಯಾಗಬಹುದು ಎಂಬ ಭರವಸೆ ನನಗಿದೆ'.

 

 


Post date: 2014-11-07 11:14:09
Post date GMT: 2014-11-07 05:44:09
Post modified date: 2014-11-07 11:14:09
Post modified date GMT: 2014-11-07 05:44:09

Powered by [ Universal Post Manager ] plugin. MS Word saving format developed by gVectors Team www.gVectors.com