ತುಂಟ ಮಕ್ಕಳು ಮತ್ತು ತಾಯಿ

ಮಹಿಳೆ ; ಲೇಖನಗಳು - 0 Comment
Issue Date :

-ಅಭಿಸಾರಿಕಾ

ತುಂಟ ಮಕ್ಕಳೆಂದರೆ ಮನೆಯಲ್ಲಿ ಎಲ್ಲರಿಗೂ ಪ್ರೀತಿಯೇ. ಅದರಲ್ಲೂ ತಾಯಿಗಂತೂ ಗಂಭೀರವಾಗಿರುವ ಮಕ್ಕಳಿಗಿಂತ ತರಲೆ ಮಾಡುವ ಮಕ್ಕಳ ಬಗ್ಗೆಯೇ ಪ್ರೀತಿ ಹೆಚ್ಚು. ಹುಟ್ಟಿದಾಗಿನಿಂದ ತಾಯಿಯ ನಿದ್ದೆಕೆಡಿಸಿ, ಪ್ರತಿದಿನ ತಾಯಿಗೆ ಗೋಳು ನೀಡುವ ತುಂಟ ಮಕ್ಕಳನ್ನು ಬೆಳೆಸುವುದು ಸುಲಭದ ಕೆಲಸವಲ್ಲ. ಅವರು ಬೆಳೆದು ಸ್ವಾವಲಂಬಿಯಾಗುವವರೆಗೂ ತಾಯಿಗೆ ನೆಮ್ಮದಿಯಿಲ್ಲ.
ತುಂಟ ಮಕ್ಕಳನ್ನು ನೋಡಿ ಮೆಚ್ಚುವವರು ಹಲವರು. ಅವರ ಚೇಷ್ಟೆಯನ್ನು ನೋಡಿ ನಕ್ಕವರೂ ಹಲವರು. ಆದರೆ ಅಮ್ಮ ಮಾತ್ರವೇ ಅವರ ಬಗ್ಗೆ ಪ್ರತಿಕ್ಷಣ ನಿಗಾ ವಹಿಸಿ, ಅವರಿಂದ ಮತ್ತೊಬ್ಬರಿಗೆ ತೊಂದರೆಯಾಗದಂತೆ ಕಾಯ್ದುಕೊಳ್ಳುತ್ತಾಳೆ. ನಿಮ್ಮ ಮಗ ನಮ್ಮ ಮನೆಯ ಗಾಜು ಒಡೆದ, ನನ್ನ ಮಗನ ಸೈಕಲ್ ಪಂಚರ್ ಮಾಡಿದ, ನಮ್ಮನೆಯ ಮಾವಿನ ಮರದಲ್ಲಿರೋ ಹಣ್ಣನ್ನೆಲ್ಲ ಕಿತ್ತ… ಇಂಥ ಬಗೆ ಬಗೆಯ ದೂರುಗಳಿಗೆ ಕಿವಿಯಾದವಳು ಅಮ್ಮನೇ.
ಮತ್ತೊಬ್ಬರಿಗೆ ತೊಂದರೆ ಕೊಡುವಂತೆ ತುಂಟಾಟ ಆಡಬೇಡ ಎಂದು ಅಮ್ಮ ಮಗನಿಗೆ ಅದೆಷ್ಟು ಸಾರಿ ಬುದ್ಧಿ ಹೇಳುತ್ತಾಳೋ ಲೆಕ್ಕವಿಲ್ಲ. ಎಂದಿಗೂ ಚೇಷ್ಟೆಯಲ್ಲೇ ಕಾಲ ಕಳೆಯುವ ಮಗನ ಆರೋಗ್ಯದ ಕುರಿತು ಅಡಿಗಡಿಗೆ ಕಾಳಜಿ ವಹಿಸಿ, ಆತನ ಓದು-ಬರಹದ ಬಗ್ಗೆಯೂ ಚಿಂತಿಸಿ ತನ್ನ ಬದುಕಿನ ಬಹುಕಾಲವನ್ನು ಅವನ ಯೋಚನೆಯಲ್ಲೇ ಅಮ್ಮ ಕಳೆಯುತ್ತಾಳೆ. ಅವನ ಬಗ್ಗೆ ಎಷ್ಟೇ ಪ್ರೀತಿಯಿದ್ದರೂ ಅದ್ಯಾವುದನ್ನೂ ಅಮ್ಮ ತೋರಿಸಿಕೊಳ್ಳುವುದಿಲ್ಲ. ಆಗಾಗ ಗದರಿ, ಬೈದು, ತುಂಟಾಟ ತೀರಾ ಅತಿರೇಕಕ್ಕೆ ಹೋದಾಗ ಒಮ್ಮೊಮ್ಮೆ ಹೊಡೆದೂ ಬುದ್ಧಿ ಹೇಳುತ್ತಾಳೆ.
ರಜಾ ಬಂತೆಂದರೆ ಸಾಕು ಈ ಮಕ್ಕಳ ಮೇಲೆ ಕಣ್ಣಿಡುವುದು ತೀರಾ ಪ್ರಯಾಸದ ಕೆಲಸ. ದೇವರು ಇನ್ನೂ ನಾಲ್ಕು ಜೊತೆ ಕಣ್ಣು ನೀಡಬಾರದಿತ್ತೆ ಎನ್ನಿಸುವ ಹಾಗಿರುತ್ತದೆ ಅವರ ತುಂಟಾಟ. ಪ್ರತಿದಿನ ಶಾಲೆಗೆ ಹೋಗುವ ಇವರು ಬರುವವರೆಗೂ ತಲೆಬಿಸಿ. ಇವತ್ತು ಇನ್ಯಾವ ದೂರು ತರುತ್ತಾನೋ ಎಂಬ ಭಯ. ಇಷ್ಟೆಲ್ಲ ಇದ್ದಿರೂ ಅವರ ಮೇಲಿನ ಪ್ರೀತಿಗೆ ಮಾತ್ರ ಬರವಿಲ್ಲ.
ಈ ತುಂಟ ಮಕ್ಕಳು ಒಮ್ಮೆ ಹುಷಾರು ತಪ್ಪಿದರೂ ಸಾಕು ಅಮ್ಮನ ಆತಂಕ ಹೇಳತೀರದು. ಇಡೀ ದಿನ ಓಡಾಡುತ್ತ, ತರಲೆ ಮಾಡುತ್ತಿರುವವರು ಇದ್ದಕ್ಕಿದ್ದಂತೆ ಹುಷಾರು ತಪ್ಪಿ ಸುಮ್ಮನಾಗಿಬಿಟ್ಟರೆ ಇಡೀ ಮನೆಯೂ ಬಣಬಣ. ಅಂಥವರ ಗೈರು ಎದ್ದು ಕಾಣುತ್ತದೆ.
ತುಂಟ ಮಕ್ಕಳಲ್ಲಿ ಹಠವೂ ಜಾಸ್ತಿ. ಅವರು ಏನನ್ನಾದರೂ ಕೇಳಿದರೆ ಅದನ್ನು ಕೊಡಲೇ ಬೇಕು. ಇಲ್ಲವೆಂದರೆ ಆಕಾಶ-ಭೂಮಿ ಒಂದು ಮಾಡುವುದಕ್ಕೂ ಅವರು ರೆಡಿ. ಇಂಥವರನ್ನು ಓಲೈಸಿಯೇ ದಾರಿಗೆ ತರಬೇಕೇ ಹೊರತು ಹೊಡೆಯುವುದರಿಂದ, ಬೈಯುವುದರಿಂದ ಅವರು ಖಂಡಿತ ಹಾದಿಗೆ ಬರುವುದಿಲ್ಲ.
ಅವರು ಏನಾದರೂ ಪ್ರಶ್ನೆ ಕೇಳಿದರೆ ಅವರಿಗೆ ಸಮಾಧಾನವಾಗುವಂಥ ಉತ್ತರ ನೀಡಬೇಕು. ಅವರು ಸಾವಿರ ಪ್ರಶ್ನೆ ಕೇಳಿದರೂ ಸಂಯಮದಿಂದ ಉತ್ತರಿಸಬೇಕು. ತಮ್ಮ ಪ್ರಶ್ನೆಗೆ ಸೂಕ್ತ ಉತ್ತರ ಸಿಗುವವರೆಗೂ ಅವರು ಸುಮ್ಮನಾಗುವುದಿಲ್ಲ.
ಅವರು ಏನೇ ತಪ್ಪು ಮಾಡಿದರೂ ಏಕಾಏಕಿ ಬೈಯದೆ ಸಹನೆಯಿಂದ ಬುದ್ಧಿ ಹೇಳಬೇಕು. ಮತ್ತೊಬ್ಬರೊಂದಿಗೆ ಅವರನ್ನು ಹೋಲಿಸಿ ಮಾತನಾಡಬಾರದು. ಈ ತುಂಟ ಮಕ್ಕಳ ಎದುರಲ್ಲಿ ಅವರನ್ನು ಎಂದಿಗೂ ಹೊಗಳುವುದಕ್ಕೂ ಹೋಗಬೇಡಿ. ಅತಿಯಾಗಿ ಹೊಗಳಿ ಅವರ ತುಂಟಾಟ ಅಧಿಕ ಪ್ರಸಂಗವಾಗಿ ಬದಲಾಗುವುದಕ್ಕೆ ಎಂದಿಗೂ ಅವಕಾಶ ಮಾಡಿಕೊಡಬೇಡಿ. ಏಕೆಂದರೆ ಮಕ್ಕಳು ಮಕ್ಕಲಾಗಿದ್ದರೇನೇ ಚೆಂದ. ತುಂಟಾಟವೇ ಆದರೂ ಅದಕ್ಕೆ ಮಕ್ಕಳ ಮುಗ್ಧತೆಯ ಲೇಪವಾಗಬೇಕೇ ಹೊರತು ವಯಸ್ಸನ್ನು ಮೀರಿದ ಅಧಿಕ ಪ್ರಸಂಗ ಅದರಲ್ಲಿದ್ದರೆ ಎಲ್ಲರಿಗೂ ಇರಿಸು ಮುರಿಸಾಗುತ್ತದೆ.
ತಮ್ಮ ವಯಸ್ಸನ್ನು ಮರೆತವರಂತೆ ಮಕ್ಕಳಾಡುವ ಕೆಲವು ಅಧಿಕ ಪ್ರಸಂಗದ ಮಾತನ್ನು ಕೇಳಿ ನಕ್ಕು, ಅದನ್ನು ನಾಲ್ಕು ಜನರೆದುರು ಹೇಳಿಕೊಂಡು ಬಾಯಿಚಪ್ಪರಿಸಿದರೆ ಮಕ್ಕಳಿಗೆ ಮತ್ತಷ್ಟು ಪ್ರೋತ್ಸಾಹ ನೀಡಿದಂತಾಗುತ್ತದೆ. ಪುಟ್ಟ ಮಗುವಿನ ಆಭರಣವೇ ಮುಗ್ಧತೆ. ಅದೇ ಇಲ್ಲದಿದ್ದರೆ ಎಷ್ಟೇ ತುಂಟರಾಗಿದ್ದರೂ ಮಕ್ಕಳು ಇಷ್ಟವಾಗುವುದಿಲ್ಲ. ಹೀಗೆ ಮಕ್ಕಳು ಮುಗ್ಧತೆಯನ್ನು ಮರೆಯುವುದಕ್ಕೆ ಪಾಲಕರು ಎಂದಿಗೂ ಪ್ರೋತ್ಸಾಹ ನೀಡಬಾರದು.
ತುಂಟ ಮಕ್ಕಳು ಬೆಳೆಯುತ್ತಲೇ ಅವರನ್ನು ಖಂಡಿತ ಅಮ್ಮ ಮಿಸ್ ಮಾಡಿಕೊಳ್ಳುತ್ತಾಳೆ. ಏಕೆಂದರೆ ವಯಸ್ಸಾಗುತ್ತಾ ಅವರು ತುಂಟಾಟವನ್ನೆಲ್ಲ ಕ್ರಮೇಣ ಬಿಟ್ಟು ವಯೋಸಹಜ ಗಾಂಭೀರ್ಯವನ್ನು ಲೇಪಿಸಿಕೊಳ್ಳುತ್ತಾರೆ. ದಿನ ಕಳೆಯುತ್ತ ಅಮ್ಮ- ಮಗನ ನಡುವಿನ ಬಾಂಧವ್ಯದಲ್ಲೂ ಅಂತರ ಸೃಷ್ಟಿಯಾಗುತ್ತದೆ. ತನ್ನ ತುಂಟ ತನವನ್ನೆಲ್ಲ ಸಹಿಸಿಕೊಂಡು, ತನ್ನೊಳಗೆ ಸಂಸ್ಕರವನ್ನು ಬಿತ್ತಿದ, ಬದುಕಿಗೊಂದು ಗುರಿ ನೀಡಿದ ಅಮ್ಮನ ತ್ಯಾಗ, ಸಹನೆ, ಪ್ರೀತಿ ಎಲ್ಲವೂ ಹೆಚ್ಚಿನ ಮಕ್ಕಳಿಗೆ ನೆನಪಿರುವುದಿಲ್ಲ. ಆದರೆ ಅಮ್ಮ ಮಾತ್ರ ಜೀವನದ ಕೊನೆಯವರೆಗೂ ಈ ತುಂಟ ಮಕ್ಕಳ ಬಾಲ್ಯವನ್ನು ಕಣ್ಣಿಗೆ ಕಟ್ಟುವಷ್ಟು ನೆನಪಿನಲ್ಲಿಟ್ಟುಕೊಳ್ಳುತ್ತಾಳೆ. ಸಮಯ ಸಿಕ್ಕಾಗಲೆಲ್ಲ ಅದನ್ನೇ ಹೇಳಿಕೊಂಡು ಖುಷಿ ಪಡುತ್ತಾಳೆ. ಆ ಖುಷಿಯ ಕಣ್ಣನ್ನೊಮ್ಮೆ ಆಳವಾಗಿ ಇಣುಕಿದರೆ ಕಷ್ಟಪಟ್ಟು ಬೆಳೆಸಿದ ಮಗ ಇಂದು ತನ್ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾನೆಂಬ ವಿಷಾದವೂ ಬೆರೆತಿರುವುದು ಕಾಣಿಸುತ್ತದೆ.
ಮುಂದೊಮ್ಮೆ ತಮ್ಮ ಮಕ್ಕಳೂ ಸಹಿಸಲಾಗದಷ್ಟು ತುಂಟಾಟ ಮಾಡಲಾರಂಭಿಸಿದಾಗಲೇ ಮಕ್ಕಳಿಗೆ ತಮ್ಮಮ್ಮನ ಕಷ್ಟ, ತ್ಯಾಗ, ಅಕ್ಕರೆ, ಸಹನೆಯ ಅರಿವಾಗುತ್ತದೆ.

   

Leave a Reply