ತೆಂಗು – ಏಕೆ ಬೇಕು ಪರ್ಯಾಯ?

ಕೃಷಿ - 0 Comment
Issue Date : 15.11.2013

ರಾಜ್ಯದ ಪ್ರಮುಖ ವಾಣಿಜ್ಯ ಬೆಳೆ ತೆಂಗು ಬೆಳೆಯು ಒಣಗುವಿಕೆ ಮತ್ತು ರೋಗ ಬಾಧೆಯಿಂದಾಗಿ ಉತ್ಪಾದನೆಯ ಪ್ರಮಾಣ ಕಡಿಮೆ ಆಗುತ್ತಿದೆ ಮತ್ತು ಉತ್ಪಾದನಾವೆಚ್ಚ ಹೆಚ್ಚಾಗುತ್ತಿರುವುದರಿಂದ ತೆಂಗಿನ ಕೃಷಿಕರು ನಷ್ಟ ಅನುಭವಿಸುತ್ತಿದ್ದಾರೆ. ಬರದಿಂದಾಗಿ 2013-2014ರ ಸಾಲಿನಲ್ಲಿ 743 ಕೋಟಿ ನಷ್ಟವಾಗಿದೆ. ಆದ್ದರಿಂದ ಪರ್ಯಾಯ ಬೆಳೆಗಳತ್ತ ರಾಜ್ಯ ಸರ್ಕಾರ ತನ್ನ ಒಲವು ತೋರಿಸಿದೆ. ಪರ್ಯಾಯ ಬೆಳೆಗಳಾಗಿ ಮಾವು, ಹಲಸು, ದಾಳಿಂಬೆ, ಹುಣಸೆ, ಪೇರಳೆ, ಗೇರುಬೀಜ, ಮಾವು, ಕೋಕೋ ಇತ್ಯಾದಿ ಬೆಳೆಗಳನ್ನು ಬೆಳೆಯಬೇಕು. ಮಳೆಯ ಕೊರತೆ ಎದುರಿಸುತ್ತಿರುವ ಪ್ರದೇಶದಲ್ಲಿ ನೀರಾವರಿ ಸೌಲಭ್ಯವಿಲ್ಲದೇ ಇದ್ದರೇ ಒಣಗುವಿಕೆ ಮತ್ತು ರೋಗಬಾಧೆಯಿಂದ ಬಳಲುತ್ತಿರುವ ತೆಂಗಿನ ಮರಗಳನ್ನು ಬುಡಸಮೇತ ಕಿತ್ತು ಹಾಕಬೇಕು ಎಂದು ನಿರ್ಧರಿಸಲಾಗಿದೆ. ತೆಂಗಿಗೆ ಪರ್ಯಾಯವಾಗಿ ಬಹುವಾರ್ಷಿಕ ಬೆಳೆಯಾದ ತಾಳೆಬೆಳೆಯನ್ನು ಪ್ರೋತ್ಸಾಹಿಸಲು ಕೂಡ ರಾಜ್ಯ ಸರ್ಕಾರ ನಿರ್ಧರಿಸಿದೆ.  ಗೋರಖ್ ಸಿಂಗ್ ಕಮೀಟಿ ಮತ್ತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ  ವರದಿ ಆಧರಿಸಿ ಈ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರಸ್ಥಾವನೆ ಸಲ್ಲಿಸಲಾಗಿದೆ.

ರಾಜ್ಯದಲ್ಲಿ ತೆಂಗು ಬೆಳೆಯು ನಷ್ಟದಲ್ಲಿರುವುದರಿಂದ ಸರ್ಕಾರ ತೆಗೆದುಕೊಂಡ ಈ ನಿರ್ಧಾರ ಮೇಲ್ನೋಟಕ್ಕೆ ಸರಿ ಎಂದು ಕಂಡು ಬಂದರೂ ತೆಂಗಿನ ಉಪಯೋಗ ಮತ್ತು ಜನರು  ತೆಂಗಿನ ಮೇಲಿನ ಅವಲಂಬನೆಯನ್ನು ಗಣನೆಗೆ ತೆಗೆದುಕೊಂಡರೆ ತೆಂಗಿನ ಕೃಷಿಯಿಂದ ವಿಮುಖರಾಗುವುದು ಆರೋಗ್ಯಕರ ಬೆಳವಣಿಗೆ ಅಲ್ಲ.

ನಮ್ಮ ನಾಡಿನಲ್ಲಿ ತೆಂಗಿಲ್ಲದೇ ಯಾವುದೇ ಶುಭ ಸಮಾರಂಭಗಳು ನಡೆಯುವುದಿಲ್ಲ.  ತೆಂಗಿನಗರಿ, ನಾರು, ಮೊದಲಾದವುಗಳಿಂದ  ಹಲವು ಪರಿಸರ ಸ್ನೇಹಿ ವಸ್ತುಗಳನ್ನು ತಯಾರಿಸಬಹುದು. ತೆಂಗಿನ ಬಳಕೆಯಿಲ್ಲದೇ ರಾಜ್ಯದ ದಕ್ಷಿಣ ಭಾಗದ ಕೆಲವು ಜಿಲ್ಲೆಗಳ ಅಡುಗೆಮನೆಯನ್ನು ಊಹಿಸಿಕೊಳ್ಳಲು ಸಾಧ್ಯವಿಲ್ಲ.  ದೋಸೆ, ಇಡ್ಲಿ, ವಡೆಗೆ ತೆಂಗಿನಕಾಯಿ ಚಟ್ನಿಗಿಂತ ಪರ್ಯಾಯ ಎಲ್ಲಿದೆ? ನೆಗಡಿ ಬಂದಿತೆಂದು ಮೂಗನ್ನು ಕೊಯ್ದುಕೊಳ್ಳಲು ಸಾಧ್ಯವೂ ಅಲ್ಲ, ಸಾಧುವೂ ಅಲ್ಲ. ಬದಲಾಗಿ ತೆಂಗಿನ ಬೆಳೆ ಎದುರಿಸುತ್ತಿರುವ ಸಮಸ್ಯೆಗಳನ್ನು ಕೂಲಂಕಷವಾಗಿ ಅಧ್ಯಯನ ಮಾಡಿ ಅವುಗಳ ಪರಿಹಾರಕ್ಕೆ  ಸೂಕ್ತ ಕ್ರಮ ಕೈಗೊಳ್ಳಬೇಕು.

ಬಹು ರಾಷ್ಟ್ರೀಯ ಕಂಪನಿಗಳ ಪಾನೀಯ ಉತ್ಪನ್ನಗಳಂತೆ ಎಳನೀರನ್ನು ಸಂಸ್ಕರಿಸಿ ಮಾರಾಟ  ಮಾಡುವುದು ಮತ್ತು ಅದರ ಉಪಯೋಗದ ಕುರಿತಾಗಿ ಜನರಲ್ಲಿ ಅರಿವು ಮೂಡಿಸಿ ನಮ್ಮಿಂದ ವಿದೇಶಗಳಿಗೆ ಹರಿದು ಹೋಗುವ ಅಪಾರ ಪ್ರಮಾಣದ ಹಣ ನಮ್ಮ ರೈತರಿಗೆ ಸಿಗುವಂತಾದರೆ ತೆಂಗು ಬೆಳೆಯಿಂದ ಎದುರಿಸುತ್ತಿರುವ ನಷ್ಟವನ್ನು ತಡೆಯಬಹುದು. ಜನರಿಗೆ ಆರೋಗ್ಯ ಒದಗಿಸಬಹುದು ಮತ್ತು ವಿದೇಶಿ ವಿನಿಮಯದ ಹೊರಹರಿವು ತಡೆಯುವುದರ ಜೊತೆಗೆ ರೈತರ ಆರ್ಥಿಕ ಪರಿಸ್ಥಿತಿ ಕೂಡ ಚೇತರಿಸುವಂತೆ ಮಾಡಬಹುದು. ಸರ್ಕಾರ ಆ ನಿಟ್ಟಿನಲ್ಲೊಮ್ಮೆ ಯೋಚಿಸಬೇಕಿದೆ.

   

Leave a Reply