ತ್ರಿವಳಿ ತಲಾಖ್ ಬೇಡ! ಬೇಡ! ಬೇಡ!

ಲೇಖನಗಳು - 0 Comment
Issue Date :

-ರೋಹಿತ್ ಚಕ್ರತೀರ್ಥ

ಬುರ್ಖಾದೊಳಗಿನ ಬೇಗುದಿ ಅಳಿಸಲು ಸುಪ್ರೀಮ್ ಕೋರ್ಟಿನ ಮುನ್ನುಡಿ

2017ರ ಆಗಸ್ಟ್ 22. ಮುಸ್ಲಿಂ ಮಹಿಳೆಯರ ಪಾಲಿಗೆ ಐತಿಹಾಸಿಕ ದಿನ. ತಲಾಖ್ ತಲಾಖ್ ತಲಾಖ್ ಎಂದು ಮೂರು ಸಲ ಹೇಳಿ ಕಟ್ಟಿಕೊಂಡವಳನ್ನು ಕೈ ಬಿಡಲು ಗಂಡಿಗಿದ್ದ ಅನುಕೂಲಕ್ಕೆ ಬೀಗಮುದ್ರೆ ಬಿದ್ದ ದಿನ ಇದು. ಆದರೆ, ತ್ರಿವಳಿ ತಲಾಖ್ ಒಂದು ಅಮಾನವೀಯ ಕ್ರಮ; ಹೆಣ್ಣಿನ ಘನತೆಯನ್ನು ಪ್ರಶ್ನಿಸುವ ಕಂದಾಚಾರ ಎಂಬುದನ್ನು ಸಾಧಿಸಿ ತೋರಿಸಲು ನಾವು ಇಷ್ಟು ವರ್ಷ ತೆಗೆದುಕೊಂಡೆವಲ್ಲ ಎನ್ನುವುದೇ ನಿಜವಾದ ವಿಪರ್ಯಾಸ ಮತ್ತು ದುರಂತ. ಹಿಂದೂ ಸಮುದಾಯದೊಳಗಿರುವ ಸಣ್ಣ ಸಣ್ಣ ಕಟ್ಟುಪಾಡುಗಳನ್ನೂ ಪ್ರಶ್ನಿಸುತ್ತಿದ್ದ; ಇಲ್ಲಿದ್ದ ಆಚರಣೆಗಳಿಗೆಲ್ಲ ಮೌಢ್ಯದ ಹಣೆಪಟ್ಟಿ ಹಚ್ಚಿ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ದೇಶದ ಮಾನ ಹರಾಜಿಗಿಡಲು ಹವಣಿಸುತ್ತಿದ್ದ ನೂರಾರು ಬುದ್ಧಿಜೀವಿಗಳು ಸುಪ್ರೀಮ್ ಜಗತ್ತಿನೊಳಗಿನ ತಲಾಖ್‌ನ ಕರಾಳತೆಯನ್ನು ಪ್ರಶ್ನಿಸಿರಲೇ ಇಲ್ಲ. ಮುಸ್ಲಿಂ ಸಮುದಾಯಕ್ಕೆ ಸಂಬಂಧಿಸಿದ ಮೌಢ್ಯಗಳನ್ನು ಚರ್ಚೆಗೆತ್ತಿಕೊಂಡಾಗೆಲ್ಲ ಈ ಬುದ್ಧಿಜೀವಿಗಳು ಒಂದೋ ಮುಗುಮ್ಮಾಗುತ್ತಿದ್ದರು; ಕಾಣೆಯಾಗುತ್ತಿದ್ದರು ಇಲ್ಲವೇ ಅವೆಲ್ಲ ಧಾರ್ಮಿಕ ಸಂಗತಿ, ಅವನ್ನು ಪ್ರಶ್ನಿಸಲು ನಮಗೇನಿದೆ ಅಧಿಕಾರ ಎಂದು ತಿಪ್ಪೆ ಸಾರಿಸಿ ವಿಷಯಾಂತರ ಮಾಡಿಬಿಡುತ್ತಿದ್ದರು. ಮುಸ್ಲಿಂ ಸಮುದಾಯದೊಳಗೆ ತ್ರಿವಳಿ ತಲಾಖ್ ಆಚರಣೆ ಶತಮಾನಗಳಿಂದ ಜಾರಿಯಲ್ಲಿದ್ದರೂ ಅದು ಮೊತ್ತಮೊದಲ ಬಾರಿಗೆ ಕೋರ್ಟಿನ – ಅದರಲ್ಲೂ ಸುಪ್ರೀಮ್ ಕೋರ್ಟಿನ ಮೆಟ್ಟಿಲು ಹತ್ತಿದ್ದು ಶಾ ಬಾನೋ ಪ್ರಕರಣದಲ್ಲಿ. 62 ವರ್ಷದ, ಐದು ಮಕ್ಕಳ ತಾಯಿಯಾಗಿದ್ದ ಆಕೆಯನ್ನು ಪತಿರಾಯ 1978ರಲ್ಲಿ ಮೂರು ತಲಾಖ್ ಉಚ್ಚರಿಸಿ ವಿಚ್ಛೇದನ ಕೊಟ್ಟುಬಿಟ್ಟಿದ್ದ. ದಿಕ್ಕಿಲ್ಲದ ಅನಾಥೆಯಾದ ನನ್ನನ್ನೂ ನನ್ನ ಐದು ಮಕ್ಕಳನ್ನೂ ಮನೆಯಿಂದ ಹೊರಹಾಕಿರುವುದು ಮಾತ್ರವಲ್ಲದೆ ಜೀವನಾಂಶ ಕೊಡದೆ ಕರ್ತವ್ಯದಿಂದ ನುಣುಚಿಕೊಂಡಿದ್ದಾನೆ ಎಂದು ಹೇಳಿ ಆಕೆ ತನ್ನ ಪತಿಯ ವಿರುದ್ಧ ದಾವೆ ದಾಖಲಿಸಿದಳು. ಪ್ರಕರಣ ಕೊನೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಹೋಗಿ 1985ರಲ್ಲಿ ನ್ಯಾಯಾಲಯ ಬಾನೋ ಪರವಾಗಿ ತೀರ್ಪಿತ್ತಿತು. ಸರ್ವೋಚ್ಚ ನ್ಯಾಯಾಲಯ ಹೇಳಿದ ಮಾತು ಅಂತಿಮ ಎಂದು ಈ ದೇಶದ ಕೆಲವು ಮತಧರ್ಮಗಳು ಮಾತ್ರ ಪರಿಗಣಿಸುವುದೋ ಏನೋ! ಕೆಲವು ಮತಗಳಿಗೆ ದೇಶದ ಸರ್ವೋನ್ನತ ನ್ಯಾಯಾಲಯದ ಮಾತು ಕೂಡ ಲಗಾವಾಗುವುದಿಲ್ಲ! ಯಾಕೆಂದರೆ ಶಾ ಬಾನೋಗೆ ಅನ್ಯಾಯವಾಗಿದೆ; ಆಕೆಗೆ ವಿಚ್ಛೇದನ ಕೊಟ್ಟಿರುವ ಪತಿ ಪರಿಹಾರವನ್ನೂ ಕೊಡಬೇಕು ಎಂದು ನ್ಯಾಯಾಲಯ ಹೇಳಿದ್ದೇ ತಡ, ಇಡೀ ದೇಶದಲ್ಲಿ ಉಗ್ರಚಳವಳಿ ಮಾಡುವುದಾಗಿ ಮುಸ್ಲಿಂ ಸಂಘಟನೆಗಳು ಹೇಳಿಕೆ ಕೊಟ್ಟುಬಿಟ್ಟವು! ತನ್ನ ಮತಬ್ಯಾಂಕ್ ಅನ್ನು ಸರ್ವತ್ಯಾಗ ಮಾಡಿಯಾದರೂ ರಕ್ಷಿಸಿಕೊಳ್ಳಲು ಟೊಂಕ ಕಟ್ಟಿದ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರಕಾರ, ಸರ್ವೋಚ್ಚ ನ್ಯಾಯಾಲಯ ಕೊಟ್ಟಿದ್ದ ತೀರ್ಪನ್ನು ನಿರಾಕರಿಸುವಂಥ, ಪ್ರಶ್ನಿಸುವಂಥ, ಅಳಿಸಿಹಾಕುವಂಥ ಕಾನೂನನ್ನು ಜಾರಿಗೆ ತಂದಿತು! ಶಾ ಬಾನೋ ಮತ್ತು ಆಕೆಯಂಥ ಸಾವಿರಾರು ಮಂದಿಗೆ ಅನ್ಯಾಯವಾದರೂ ಪರವಾಯಿಲ್ಲ; ತನ್ನ ಅತಿಮುಖ್ಯ ಮತಗಳು ಕಳೆದುಹೋಗಬಾರದೆಂಬ ಕಾಳಜಿಯಿಂದ ಕಾಂಗ್ರೆಸ್, ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ವಿರುದ್ಧವಾದ ಮಸೂದೆ ಮಂಡಿಸಿ ಸುಪ್ರೀಮ್ ಗಂಡಸರ ತಲಾಖ್ ಹಕ್ಕನ್ನು ಉಳಿಸಿಕೊಟ್ಟಿತು!

ತಮಾಷೆ ನೋಡಿ – ಸುಪ್ರೀಮ್ ಮತಗ್ರಂಥದ ಉಗ್ರಪ್ರತಿಪಾದಕರೆಂದೇ ಕರೆಸಿಕೊಳ್ಳುವ ಪಾಕಿಸ್ತಾನ ಮತ್ತು ಬಾಂಗ್ಲಾದೇಶ (ಆಗಿನ್ನೂ ಪೂರ್ವ ಪಾಕಿಸ್ತಾನ) 1961ರಲ್ಲೇ ತ್ರಿವಳಿ ತಲಾಖ್‌ಅನ್ನು ಅಮಾನ್ಯಗೊಳಿಸಿವೆ. ಮುಸ್ಲಿಂ ಬಾಹುಳ್ಯ ಇರುವ ಟ್ಯುನೀಷಿಯಾ ಮತ್ತು ಅಲ್ಜೀರಿಯಾ ಎರಡೂ ತ್ರಿವಳಿ ತಲಾಖ್ ಅನ್ನು ಕಾನೂನುಬದ್ಧ ಎಂದು ಪರಿಗಣಿಸುವುದಿಲ್ಲ. ಮುಸ್ಲಿಮರಿಂದಲೇ ತುಂಬಿಹೋಗಿರುವ ಮಲೇಷ್ಯಾದಲ್ಲಿ ಕೂಡ ಈ ತಲಾಖ್‌ಗೆ ಗೌರವ ಇಲ್ಲ. ಅಪಘಾನಿಸ್ತಾನ, ಮೊರೊಕ್ಕೋ, ಜೋರ್ಡಾನ್, ಕುವೈಟ್ – ಇವು ನಾಲ್ಕೂ ಮುಸ್ಲಿಂ ಬಾಹುಳ್ಯ ಮತ್ತು ಪ್ರಾಬಲ್ಯ ಇರುವ ರಾಷ್ಟ್ರಗಳು. ಆದರೆ ತ್ರಿವಳಿ ತಲಾಖ್‌ಗೆ ಗೇಟ್‌ಪಾಸ್ ಕೊಟ್ಟಿವೆ. ಶತಮಾನಗಳ ಕಾಲ ಒಟ್ಟೊಮನ್ ಟರ್ಕರಿಂದ ಆಳಿಸಿಕೊಂಡ ಖಲೀಫರ ನಾಡು ಟರ್ಕಿ, ನಂಬಿದರೆ ನಂಬಿ, ತ್ರಿವಳಿ ತಲಾಖ್ ಅನ್ನು ನಿಷೇಧಿಸಿದ್ದು 1926ರಲ್ಲಿ! ಸುಪ್ರೀಮ್ ದೇಶಗಳೆಂದು ಹೇಳಿಕೊಳ್ಳುವ ಇವೆಲ್ಲವೂ ದಶಕಗಳಷ್ಟು ಹಿಂದೆಯೇ ಮೂರು ತಲಾಖ್ ಪದ್ಧತಿಗೆ ತಲಾಖ್ ಕೊಟ್ಟು ಸಾಗಹಾಕಿದ್ದರೆ ಸೆಕ್ಯುಲರ್ ಭಾರತ ಮಾತ್ರ ಅದನ್ನು ಪೋಷಿಸಿಕೊಂಡು ಬಂದಿತ್ತು! ನಮ್ಮ ಆಚರಣೆಗಳನ್ನು ಮುಟ್ಟಿದರೆ ಹುಷಾರ್ ಎಂದು ಮುಸ್ಲಿಂ ಸಂಘಟನೆಗಳು ಇಷ್ಟು ವರ್ಷವೂ ಗುಟುರು ಹಾಕುತ್ತಲೇ ಬಂದಿದ್ದವು. ಅವುಗಳನ್ನು ಎದುರು ಹಾಕಿಕೊಂಡು ಅನ್ಯಾಯಕ್ಕೊಳಗಾದ ಹೆಂಗಸರಿಗೆ ನ್ಯಾಯ ದೊರಕಿಸಿಕೊಡುವದಕ್ಕೆ ಮಾತ್ರ ಯಾವ ರಾಜಕೀಯ ಪಕ್ಷವೂ ಮುಂದೆ ಬಂದಿರಲಿಲ್ಲ.

 ಮೊದಮೊದಲು ಮೌಖಿಕವಾಗಿ ತಲಾಖ್ ಹೇಳುವ ಪದ್ಧತಿ ಇದ್ದರೆ, ನಂತರ ತಂತ್ರಜ್ಞಾನ ಮುಂದುವರಿದಂತೆ ಆ ಕಂದಾಚಾರವೂ ಅಪ್‌ಡೇಟ್ ಆಗುತ್ತಾ ಬಂತು. ಇಂದು ತಲಾಖ್ ಪ್ರಕರಣಗಳಲ್ಲಿ ಒಟ್ಟು ಶೇಕಡಾ 66ರಷ್ಟು ಮಂದಿ ಮೌಖಿಕ ತಲಾಖ್ ಮೂಲಕ ಬೇರ್ಪಡುತ್ತಿದ್ದಾರೆ. ಆದರೆ ಉಳಿದ 34% ಜನ ಆಧುನಿಕ ರೀತಿಗಳಿಗೆ ಒಗ್ಗಿಕೊಂಡಿದ್ದಾರೆ. ತಲಾಖ್ ಪ್ರಕರಣಗಳಲ್ಲಿ 7.6%ರಷ್ಟು ಪ್ರಕರಣಗಳು ಪತ್ರದ ಮೂಲಕ ತಲಾಖ್ ಕೊಟ್ಟುಕೊಳ್ಳುವುದರಲ್ಲಿ ಮುಗಿಯುತ್ತವೆ. 3.4% ಮಂದಿ ಫೋನ್‌ನಲ್ಲಿ ತಲಾಖ್ ಕೊಟ್ಟಿದ್ದಾರೆ. 0.8%ರಷ್ಟು ಜನ ಈಮೇಲ್ ಮತ್ತು ಎಸ್‌ಎಮ್‌ಎಸ್ ಮೂಲಕ ತಲಾಖ್ ಕೊಟ್ಟು ತಮ್ಮ ಸಂಗಾತಿಗಳನ್ನು ತೊರೆದಿದ್ದಾರೆ! ಇನ್ನುಳಿದ 22.3% ಜನ ಇವಲ್ಲದೆ ಇನ್ನೂ ಹಲವು ವಿಧಾನಗಳಲ್ಲಿ ತಲಾಖ್ ಕೊಟ್ಟಿದ್ದಾರೆ. ಕನಸಿನಲ್ಲಿ ತಲಾಖ್ ಎಂದು ಕನವರಿಸಿದ ತಪ್ಪಿಗೆ ಬೇರ್ಪಡಬೇಕಾಗಿ ಬಂದ ಪ್ರಸಂಗಗಳೂ ಉಂಟು! ತಲಾಖ್ ಅನ್ನು ನಿಷೇಧಿಸಬೇಕು ಎಂದು ಐದು ಮಂದಿ ವಿಚ್ಚೇದಿತೆಯರು ಮತ್ತು ಎರಡು ಮಾನವ ಹಕ್ಕು ಹೋರಾಟದ ಪರವಾಗಿರುವ ಸಂಘಟನೆಗಳು ಸರ್ವೋಚ್ಚ ನ್ಯಾಯಾಲಯಕ್ಕೆ ಹೋದಾಗ, ತಲಾಖ್ ವ್ಯವಸ್ಥೆ ಇರಲಿ ಎಂದು ವಾದಿಸಲು ಬಂದವರು ಕಾಂಗ್ರೆಸ್ ಸರಕಾರದಲ್ಲಿ ಸಚಿವರೂ ಆಗಿದ್ದ ಕಪಿಲ್ ಸಿಬಲ್. ವಿಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಇಲಾಖೆಯ ಸಚಿವರಾಗಿದ್ದ ಸಿಬಲ್ ಸಾಹೇಬರು ತಲಾಖ್ ಬೇಕು ಎಂದು ವಾದಿಸಲು ಕೊಟ್ಟ ಸಮರ್ಥನೆ ಏನು ಎಂದರೆ ತಲಾಖ್ ಅನ್ನು ಮುಸ್ಲಿಮರು 1400 ವರ್ಷಗಳಿಂದ ಆಚರಿಸಿಕೊಂಡು ಬಂದಿದ್ದಾರೆ ಮತ್ತು ಪ್ರವಾದಿ ಮಹಮ್ಮದ್ ಪೈಗಂಬರರೇ ಅದನ್ನು ಊರ್ಜಿತಗೊಳಿಸಿದ್ದಾರೆ ಎಂಬುದು! ಆದರೆ, ಮುಸ್ಲಿಮರೊಳಗೇ ಇರುವ ಕೆಲವು ಪಂಡಿತರು ಇಡೀ ಕುರಾನ್‌ನಲ್ಲಿ ತ್ರಿವಳಿ ತಲಾಖ್‌ನ ಉಲ್ಲೇಖ ಇಲ್ಲ ಎಂದು ಹೇಳುತ್ತಾರೆ! ತಲಾಖ್‌ನ ಪ್ರಸ್ತಾಪ ಮತಗ್ರಂಥದಲ್ಲಿ ಇದೆಯೋ ಇಲ್ಲವೋ ಎಂಬುದೇ ಇನ್ನೂ ಖಚಿತವಾಗಿಲ್ಲ ಎಂದಮೇಲೆ, ಅಂಥ ಅಸ್ಪಷ್ಟ ದಾಖಲೆಗಳನ್ನು ಎದುರಿಟ್ಟುಕೊಂಡು ಸರ್ವೋಚ್ಚ ನ್ಯಾಯಾಲಯದಲ್ಲಿ ಚರ್ಚೆ ನಡೆಯುತ್ತದೆ ಎಂದರೆ ಏನು ಹೇಳೋಣ!

  ಸರ್ವೋಚ್ಚ ನ್ಯಾಯಾಲಯದ ಪಂಚ ನ್ಯಾಯವಾದಿಗಳ ಪೀಠ ತಲಾಖ್ ವಿಷಯದಲ್ಲಿ ಸರ್ವಾನುಮತದ ನಿರ್ಣಯವೇನೂ ಕೈಗೊಂಡಿಲ್ಲ. ನ್ಯಾಯಮೂರ್ತಿಗಳಾದ ಕುರಿಯನ್ ಜೋಸೆಫ್, ರೊಹಿಂಟನ್ ಪಾಲಿ ನಾರಿಮನ್ ಮತ್ತು ಉದಯ್ ಉಮೇಶ್ ಲಲಿತ್ ತಲಾಖ್ ಅಮಾನವೀಯ, ಅಸಾಂವಿಧಾನಿಕ ಪದ್ಧತಿ ಎಂದು ಅತ್ಯಂತ ಸ್ಪಷ್ಟ ಶಬ್ದಗಳಲ್ಲಿ ಹೇಳಿದರೆ ನ್ಯಾಯಮೂರ್ತಿ ಅಬ್ದುಲ್ ನಜೀರ್ ಮತ್ತು ಮುಖ್ಯ ನ್ಯಾಯಮೂರ್ತಿ ಜಗದೀಶ್ ಸಿಂಗ್ ಖೆಹರ್, ತಲಾಖ್ ಒಂದು ಧಾರ್ಮಿಕ ವಿಚಾರ; ಅದರಲ್ಲಿ ನ್ಯಾಯಾಲಯ ಹಸ್ತಕ್ಷೇಪ ಮಾಡುವುದು ಸರಿಯಲ್ಲ ಎಂಬ ಮಾತುಗಳನ್ನು ತೇಲಿಬಿಟ್ಟಿದ್ದಾರೆ. ಹೆಚ್ಚು ದೂರ ಹೋಗಬೇಕಿಲ್ಲ; ಕೇವಲ ಒಂದು ವರ್ಷದ ಹಿಂದೆ ಶಬರಿಮಲೆಗೆ ಮಹಿಳೆಯರ ಪ್ರವೇಶ ಸರಿಯೇ ತಪ್ಪೇ ಎಂಬ ವಿಚಾರ ಚರ್ಚೆಗೆ ಬಂದಾಗ ಇದೇ ಸರ್ವೋಚ್ಚ ನ್ಯಾಯಾಲಯ, ಮಹಿಳೆಯರ ಹಕ್ಕುಗಳ ಬಗ್ಗೆ ಯೋಚಿಸಬೇಕಾದಾಗ ಧರ್ಮದೊಳಗಿನ ಕಟ್ಟುಪಾಡುಗಳೇನು ಎಂಬುದು ನಮಗೆ ಮುಖ್ಯವಾಗಬಾರದು – ಎಂದು ಹೇಳಿತ್ತು! ಅಂದರೆ ಈ ದೇಶದಲ್ಲಿ ಹಿಂದೂಗಳಿಗೊಂದು ನ್ಯಾಯ, ಮುಸ್ಲಿಮರಂಥ ಅಲ್ಪಸಂಖ್ಯಾತರಿಗೊಂದು ನ್ಯಾಯ ಎಂಬುದನ್ನು ಸರ್ವೋಚ್ಚ ನ್ಯಾಯಾಲಯ ಕೂಡ ಪಾಲಿಸುತ್ತದೆ ಎಂಬ ಅರ್ಥ ಬರುವುದಿಲ್ಲವೇ?

 ಮೇಲಾಗಿ ತಲಾಖ್ ವಿಷಯದಲ್ಲಿ ತೀರ್ಪು ಕೊಡಲು ಆರಿಸಿದ ಐದು ಮಂದಿ ಐದು ಮತ/ಧರ್ಮಗಳಿಗೆ ಸೇರಿರುವಂತೆ ಎಚ್ಚರಿಕೆ ತೆಗೆದುಕೊಳ್ಳಲಾಯಿತಂತೆ. ಕುರಿಯನ್ ಜೋಸೆಫ್ ಕ್ರಿಶ್ಚಿಯನ್, ನಾರಿಮನ್ ಪಾರ್ಸಿ, ಲಲಿತ್ ಹಿಂದೂ, ಖೆಹರ್ ಸಿಖ್ ಮತ್ತು ಅಬ್ದುಲ್ ನಜೀರ್ ಮುಸ್ಲಿಂ ಸಮುದಾಯಗಳಿಗೆ ಸೇರಿದವರು. ಹೀಗೆ ಬೇರೆ ಬೇರೆ ಮತ-ಧರ್ಮಗಳಿಗೆ ಸೇರಿದವರು ಇರಬೇಕು ಎಂದು ಹೇಳುವುದರ ಔಚಿತ್ಯ ಏನು? ನ್ಯಾಯವಾದಿಗಳು – ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಕೆಲಸ ಮಾಡುತ್ತಿದ್ದರೂ ನಿಷ್ಪಕ್ಷಪಾತಿಗಳಾಗಿರುತ್ತಾರೆ ಎಂದು ನಂಬುವಂತಿಲ್ಲ ಎಂದೇ? ಕಲಿತ ನ್ಯಾಯಶಾಸ್ತ್ರಕ್ಕಿಂತ ಅವರಿಗೆ ಹುಟ್ಟಿನಿಂದ ಬಂದ ಜಾತಿ-ಧರ್ಮಗಳೇ ಮುಖ್ಯವಾಗುತ್ತವೆ; ಆಗಬಹುದು ಎಂಬ ಭಯವೇ? ಈ ಭಯಕ್ಕೆ ಪುಷ್ಟಿ ಕೊಡುವಂತೆ ಅಬ್ದುಲ್ ನಜೀರ್ ಎಂಬ ಮುಸ್ಲಿಂ ನ್ಯಾಯಮೂರ್ತಿಗಳು ಕೊನೆಗೂ ತಲಾಖ್ ಪರವಾಗಿಯೇ ಮತ ಚಲಾಯಿಸಿ ತಮ್ಮ ಮತನಿಷ್ಠೆಯನ್ನು ಸಾಬೀತುಪಡಿಸಿದರು! ಸರ್ವೋಚ್ಚ ನ್ಯಾಯಾಲಯದ ಅಂತಿಮ ತೀರ್ಪನ್ನು ಓದುವ ಮುನ್ನ ನ್ಯಾಯವಾದಿಯಾಗಿ ತನ್ನ ಅಭಿಪ್ರಾಯ ಏನು ಎಂಬುದನ್ನು ಓದಿ ಹೇಳಿದ ಮುಖ್ಯ ನ್ಯಾಯಮೂರ್ತಿ ಖೆಹರ್ ಅವರು, ತಲಾಖ್ ಎಂಬುದು ಒಂದು ಸಮುದಾಯದೊಳಗಿನ ಆಚರಣೆ. ಅದು ಮುಸ್ಲಿಂ ವೈಯಕ್ತಿಕ ಕಾನೂನಿನ ಚೌಕಟ್ಟಿನಲ್ಲಿ ಬರುವ ವಿಷಯ. ಹಾಗಾಗಿ ಅದರ ಕುರಿತು ಭಾರತದ ಸಾಂವಿಧಾನಿಕ ನ್ಯಾಯಾಲಯಗಳು ಅಂತಿಮ ನಿರ್ಣಯ ತೆಗೆದುಕೊಳ್ಳಲು ಅಸಮರ್ಥ. ಕೇಂದ್ರ ಸರಕಾರ ಆರು ತಿಂಗಳ ಗಡುವಿನಲ್ಲಿ ತಲಾಖ್ ಮೇಲೆ ಕಾನೂನು ರೂಪಿಸಲಿ – ಎಂದರು. ಅವರ ಅಭಿಪ್ರಾಯವನ್ನು ಗೌರವಿಸೋಣ; ಆದರೆ ಭಾರತದ ಸಂವಿಧಾನ ಮುಸ್ಲಿಂ ವೈಯಕ್ತಿಕ ಕಾನೂನು ಎಂಬ ವಿಚಾರದ ಬಗ್ಗೆ ಒಂದೇ ಒಂದು ಸಲವೂ ಪ್ರಸ್ತಾಪ ಮಾಡುವುದಿಲ್ಲವಲ್ಲ! ಹಾಗಿರುವಾಗ, ಮುಸ್ಲಿಂ ವೈಯಕ್ತಿಕ ಕಾನೂನು ಸಂವಿಧಾನಕ್ಕೆ ವಿರುದ್ಧ ಹೇಗಾಗುತ್ತದೆ? ಸಾಂವಿಧಾನಿಕ ಕಾನೂನು ಇರುವ ದೇಶದಲ್ಲಿ ಯಾವುದು ಸರ್ವೋನ್ನತ – ದೇಶದ ಸಂವಿಧಾನವೋ ಅಥವಾ ಯಾವುದೋ ನಿರ್ದಿಷ್ಟ ಮತ/ಧರ್ಮ/ಸಂಸ್ಥೆಯ ಸೀಮಿತ ಸಂವಿಧಾನವೋ? ಬಿಡಿ, ತಲಾಖ್ ಅನ್ನು ನಿಷೇಧಿಸಬೇಕು ಎಂದು ಹೇಳಿದ ನ್ಯಾಯವಾದಿಗಳ ವಾದಗಳೂ ಅಷ್ಟೇನೂ ಉತ್ಕೃಷ್ಟ ಎನ್ನುವಂತೆ ಇರಲಿಲ್ಲ. ಅವರಲ್ಲೊಬ್ಬರು, ತಲಾಖ್ ಅನ್ನು ಹನಾಫಿ ಕಾನೂನು ಕೂಡ ಮಾನ್ಯ ಮಾಡುವುದಿಲ್ಲ; ಹಾಗಾಗಿ ಅದನ್ನು ನಾವೂ ಮಾನ್ಯ ಮಾಡಬಾರದು – ಎಂಬ ವಾದ ಮುಂದಿಟ್ಟರು. ಇಂಥವೆಲ್ಲ ಅತ್ಯಂತ ದುರ್ಬಲ ವಾದಗಳು. ಹನಾಫಿಯಲ್ಲಿಲ್ಲ; ಹಾಗಾಗಿ ನಮಗೂ ಬೇಡ ಎಂದು ಹೇಳುವಾಗಲೇ ಹನಾಫಿಯಲ್ಲಿದ್ದರೆ ಆಗ ಒಪ್ಪುತ್ತೀರಾ? ಎಂಬ ವಾದವೂ ಹುಟ್ಟಿಕೊಳ್ಳುತ್ತದೆ ಅಲ್ಲವೆ? ಭಾರತದಲ್ಲಿ ಹಿಂದೂ ಪ್ರಜೆಗಳಿಗೆ ಜೆಜಿಯಾ ತೆರಿಗೆ ವಿಧಿಸಬೇಕು ಎಂದು ಇದೇ ಹನಾಫಿ ಕಾನೂನು ಹೇಳುತ್ತದೆ. ಹಾಗಾದರೆ, ಆ ಮಾತುಗಳನ್ನು ಎತ್ತಿಹಿಡಿದು ಹಿಂದೂಗಳಿಗೆ ವಿಶೇಷ ತೆರಿಗೆಯ ಕ್ರಮ ಜಾರಿಗೊಳಿಸುತ್ತೀರಾ ಎಂಬ ಪ್ರಶ್ನೆ ಉದ್ಭವಿಸುತ್ತದೆ; ಇನ್ನೋರ್ವ ನ್ಯಾಯವಾದಿಗಳು, ತಲಾಖ್ ಎಂಬುದು ಕುರಾನ್‌ನಲ್ಲಿ ಇಲ್ಲದ ಸಂಗತಿ; ಹಾಗಾಗಿ ವಿರೋಧಿಸೋಣ ಎಂದರು. ಅದೇ ಮತಗ್ರಂಥದಲ್ಲಿ, ಮಾತು ಕೇಳದ ಹೆಂಡತಿಗೆ ಪತಿ ಹೊಡೆಯಬಹುದು ಎಂದು ಹೇಳಿದ್ದಾರೆ. ಅಂದಮಾತ್ರಕ್ಕೆ ನ್ಯಾಯಾಲಯ ಆ ಮಾತನ್ನು ಮಾನ್ಯ ಮಾಡುತ್ತದೆಯೇ ಎಂಬ ಪ್ರಶ್ನೆ ಬರುತ್ತದೆ. ಬಹುಶಃ ನ್ಯಾಯಾಲಯಗಳಿಗೆ ಧರ್ಮಗ್ರಂಥಗಳನ್ನು ಎಷ್ಟು ಅವಲಂಬಿಸಬೇಕು; ಸಂವಿಧಾನ ಮತ್ತು ಧರ್ಮಗ್ರಂಥಗಳ ನಡುವಿನ ತಿಕ್ಕಾಟದಲ್ಲಿ ಯಾವುದನ್ನು ಎತ್ತಿಹಿಡಿಯಬೇಕು ಎಂಬ ವಿಷಯದಲ್ಲಿ ಗೊಂದಲಗಳು ಇನ್ನೂ ಬಗೆಹರಿಯದೆ ಇರುವುದೇ ಎಷ್ಟೋ ಸಮಸ್ಯೆಗಳು ಸಾಯದೆ ಜೀವಂತವಿರುವುದಕ್ಕೆ ಕಾರಣ ಅನ್ನಿಸುತ್ತದೆ.

 ತಲಾಖ್ ಪದ್ಧತಿಯನ್ನು ಆರು ತಿಂಗಳ ಅವಧಿಗೆ ನಿಷೇಧಿಸಿ, ಅಷ್ಟರಲ್ಲಿ ಕೇಂದ್ರ ಸರಕಾರ ಒಂದು ಕಾನೂನನ್ನು ಸದನದೊಳಗೆ ಮಂಡಿಸಿ ಬಹುಮತದ ಒಪ್ಪಿಗೆ ಪಡೆದು ಜಾರಿಗೆ ತರಲಿ ಎಂದು ನ್ಯಾಯಾಲಯ ಹೇಳಿದ್ದೇನೋ ಸರಿ. ಆದರೆ, ತಲಾಖ್ ಒಂದು ಅನಿಷ್ಟ ಎಂದು ಇಂದಿಗೂ ಮುಸ್ಲಿಂ ಸಮುದಾಯದೊಳಗಿನ ವ್ಯಕ್ತಿಗಳಿಗೆ, ವಿದ್ಯಾವಂತರನ್ನೂ ಒಳಗೊಂಡು, ಮನವರಿಕೆಯಾಗಿರುವಂತೆ ಕಾಣುವುದಿಲ್ಲ. ತಲಾಖ್ ತೀರ್ಪು ಬಂದ ಮರುದಿನದ ಒಂದು ಪತ್ರಿಕೆಯಲ್ಲಿ ಅದೇ ಸಮುದಾಯದ ಕೆಲವು ಗಣ್ಯ ವ್ಯಕ್ತಿಗಳ ಹೇಳಿಕೆಗಳನ್ನು ಗಮನಿಸುತ್ತಿದ್ದೆ. ಶಿವಮೊಗ್ಗದ ಡಾ. ಎಸ್. ಮನ್ಸೂರ್ ಮೀರಾನ್ ಎಂಬ ವೈದ್ಯರೊಬ್ಬರು, ಸರಕಾರದ ಕಾನೂನು ಏನೇ ಇದ್ದರೂ ನಮಗೆ ಕುರಾನ್ ಏನು ಹೇಳುತ್ತದೆ ಎನ್ನುವುದೇ ಮುಖ್ಯ. ಹೆಣ್ಣುಮಕ್ಕಳ ರಕ್ಷಣೆ ಬಗ್ಗೆ ಪ್ರವಾದಿಗಳು ಹಿಂದೆಯೇ ನಿಯಮ ರೂಪಿಸಿದ್ದು, ಕೆಲವರು ದುರ್ಬಳಕೆ ಮಾಡಿಕೊಂಡಿರಬಹುದು ಅಷ್ಟೆ ಎಂದಿದ್ದಾರೆ! ಸುಪ್ರೀಂ ಕೋರ್ಟ್ ತೀರ್ಪು ಏನೇ ಇದ್ದರೂ 1400 ವರ್ಷಗಳ ಹಿಂದೆಯೇ ಪ್ರವಾದಿಗಳು ನಿಯಮ ಮಾಡಿದ್ದಾರೆ. ಕುರಾನ್ ನಿಯಮಗಳಿಂದ ಮುಸ್ಲಿಂ ಮಹಿಳೆಯರಿಗೆ ಯಾವುದೇ ಅನ್ಯಾಯವಾಗುತ್ತಿಲ್ಲ. ಕುರಾನ್ ಮತ್ತು ಷರಿಯತ್ ಕಾನೂನೇ ನಮಗೆ ಮುಖ್ಯ ಎಂದು ಹಜ್ರತ್ ಖ್ವಾಜಾ ಗರೀಬ್ ನವಾಜ್ ಸೇವಾ ಸಮಿತಿ ಅಧ್ಯಕ್ಷ ಮಹಮ್ಮದ್ ಷಫೀವುಲ್ಲಾ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಯಾವುದೇ ಧರ್ಮದ ಆಚರಣೆಗಳನ್ನು ಕಾನೂನು, ಕಟ್ಟಳೆಗಳ ಮೂಲಕ ನಿಯಂತ್ರಿಸುವುದು ಸರಿಯಲ್ಲ. ತ್ರಿವಳಿ ತಲಾಖ್ ರದ್ದುಪಡಿಸುವ ಮೂಲಕ ಸುಪ್ರೀಂ ಕೋರ್ಟ್ ಮುಸ್ಲಿಂ ಸಂಪ್ರದಾಯ ಮತ್ತು ಧಾರ್ಮಿಕ ಚೌಕಟ್ಟಿನಲ್ಲಿ ಮೂಗು ತೂರಿಸಿದೆ – ಇದು ರಾಮನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ ಅವರ ನುಡಿ! ಮಂಜೇಶ್ವರದ ಶಾಸಕ ಪಿ.ಬಿ. ಅಬ್ದುಲ್ ರಜಾಕ್, ಇದೊಂದು ಧಾರ್ಮಿಕ ವಿಚಾರ. ಸುಪ್ರೀಂ ಕೋರ್ಟ್ ನಿರ್ಣಯದ ಬಳಿಕ ಲೀಗ್ ವರಿಷ್ಠ ಕುಂಜಾಲಿಕುಟ್ಟಿ ಸಾಹೇಬರು ನೀಡುವ ಹೇಳಿಕೆಯೇ ಅಂತಿಮ ಎಂದು ಹೇಳುವ ಮೂಲಕ, ತನಗೆ ಸರ್ವೋಚ್ಚ ನ್ಯಾಯಾಲಯಕ್ಕಿಂತಲೂ ತನ್ನ ಧರ್ಮಗುರುವಿನ ಹೇಳಿಕೆಯೇ ಅಂತಿಮ ಎಂಬ ಸೂಚನೆ ಕೊಟ್ಟಿದ್ದಾರೆ. ದುರಂತವೆಂದರೆ ಇವರೆಲ್ಲರೂ ಶಿಕ್ಷಿತರು; ಸಮಾಜದಲ್ಲಿ ವಿವಿಧ ಗೌರವಾನ್ವಿತ ಹುದ್ದೆಗಳಲ್ಲಿರುವವರು; ಸಮಾಜದ ಜನರ ಅನಿಸಿಕೆಗಳನ್ನು ರೂಪಿಸಬಲ್ಲ ಶಕ್ತಿ ಇರುವವರು. ಇವರ ಅಭಿಪ್ರಾಯಗಳೇ ಇಷ್ಟೊಂದು ಸಂಕುಚಿತವಾಗಿದ್ದರೆ ಇನ್ನು ಅಶಿಕ್ಷಿತ, ಕಂದಾಚಾರಿ, ಮೂಲಭೂತವಾದಿ ಕೂಪಮಂಡೂಕಗಳ ಕಟ್ಟರ್ ಅಭಿಪ್ರಾಯಗಳು ಅದೆಷ್ಟು ಅಸಮಕಾಲೀನವಾಗಿರಬಹುದು? ಯೋಚಿಸಿದರೇ ಭಯವಾಗುತ್ತದೆ.

 ತ್ರಿವಳಿ ತಲಾಖ್ ಅನ್ನು ನಿಷೇಧಿಸುತ್ತಿರುವ 23ನೇ ದೇಶ ಭಾರತ. ಈಗಾಗಲೇ ಮಲೇಷ್ಯ, ಯುನೈಟೆಡ್ ಅರಬ್ ಎಮಿರೇಟ್ಸ್, ಶ್ರೀಲಂಕಾ, ಈಜಿಪ್ಟ್‌ನಂಥ ಹಲವು ದೇಶಗಳು ಈ ಅಮಾನವೀಯ ಪದ್ಧತಿಗೆ ಫುಲ್‌ಸ್ಟಾಪ್ ಇಟ್ಟಿವೆ. ತ್ರಿವಳಿ ತಲಾಖ್ ಇರುವುದರಿಂದಲೇ ಇಷ್ಟು ದಿನ ಗಲ್ಫ್ ದೇಶಗಳ ಅರಬರು ಕೇರಳ, ಹೈದರಾಬಾದ್ ಮುಂತಾದ ಪ್ರದೇಶಗಳಿಗೆ 2-3 ತಿಂಗಳ ಪ್ರವಾಸಕ್ಕೆ ಬಂದು, ಬಂದಾಗ ಇಲ್ಲಿನ ಸ್ಥಳೀಯ ಹೆಂಗಸರನ್ನು ಮದುವೆಯಾಗಿ, ಹಗಲಿರುಳೆನ್ನದೆ ಭೋಗಿಸಿ, ಕೊನೆಗೆ ತ್ರಿವಳಿ ತಲಾಖ್ ಕೊಟ್ಟು ಗಲ್ಫ್ ವಿಮಾನ ಹತ್ತುತ್ತಿದ್ದರು. ಹೀಗೆ ಪ್ರತಿ ವರ್ಷ ಬಂದು ಭಾರತದಲ್ಲುಳಿದು ಇಲ್ಲಿನ ಹೆಂಗಸರನ್ನು ಬಳಸಿಕೊಳ್ಳುವ ಅರಬರಿಂದ ಸಿಗುವ ಪುಡಿಗಾಸಿಗಾಗಿ ತಮ್ಮ ಸ್ವಂತ ಮಕ್ಕಳನ್ನೇ ಆ ಮಾಂಸದಂಧೆಗೆ ಇಳಿಸುತ್ತಿದ್ದ ಕುಟುಂಬಗಳೂ ಭಾರತದಲ್ಲಿದ್ದವು; ಇನ್ನೂ ಇವೆ. ಬೊಳುವಾರು ಮಹಮ್ಮದ್ ಕುಂಞಿಯವರ ಮುತ್ತುಚ್ಚೇರ ಕತೆ ಈ ವಾಸ್ತವದ ಸುತ್ತಲೇ ಸುತ್ತುತ್ತದೆ. ಕಾಮಕ್ಕಾಗಿ ಧರ್ಮದ ಹೊದಿಕೆ ಸುತ್ತಿಕೊಳ್ಳುತ್ತಿದ್ದ ನೂರಾರು ರಾಕ್ಷಸರಿಗೆ ಬರೆ ಹಾಕಲಿಕ್ಕಾದರೂ ತಲಾಖ್ ಕಾನೂನು ಈ ದೇಶದಲ್ಲಿ ಆದಷ್ಟು ಬೇಗ ಜಾರಿಗೊಳ್ಳಬೇಕಾಗಿದೆ. ಎಲ್ಲ ಅಪಸವ್ಯಗಳ ಹೊರತಾಗಿಯೂ ನಮ್ಮ ಸರ್ವೋಚ್ಚ ನ್ಯಾಯಾಲಯ ಆ ದಿಕ್ಕಿನಲ್ಲಿ ಒಂದು ದೃಢ ಹೆಜ್ಜೆ ಇಟ್ಟಿದೆಯಲ್ಲ ಎಂಬುದೇ ಸಮಾಧಾನ.

   

Leave a Reply