ದಲಿತ ವೀರಾಂಗನೆಯರು – 1857

ಇತಿಹಾಸ - 0 Comment
Issue Date : 23.04.2016

-ಸಿ.ಎಸ್‍.ಶಾಸ್ತ್ರೀ

ಭಾರತದ ಸ್ವಾತಂತ್ರ್ಯ ಹೋರಾಟ 1857ರಿಂದಲೇ ಪ್ರಾರಂಭವಾಯಿತೆಂಬುದಾಗಿ ತಿಳಿಯುವುದಾದರೆ ಅದರಲ್ಲಿ ಪಾಲ್ಗೊಂಡವರನ್ನು ದೇಶಭಕ್ತರಾಗಿ, ರಾಷ್ಟ್ರೀಯ ನಾಯಕರಾಗಿ ಕಾಣುವ ಐತಿಹಾಸಿಕ ಅನಿವಾರ್ಯತೆ ಕಂಡುಬರುತ್ತದೆ. ಆ ಸ್ವಾತಂತ್ರ್ಯ ಹೋರಾಟದ ಅಥವಾ ದಂಗೆಯ ಇತಿಹಾಸದಲ್ಲಿ ನಮಗೆ ಪರಿಚಿತರಾಗಿರುವುದು ಕೆಲವೇ ಕೆಲವು ಹೆಸರುಗಳು. ಆದರೆ, ಆ ಹೋರಾಟದಲ್ಲಿ ಅಸಂಖ್ಯಾತ ಜನರು ಸ್ವಾತಂತ್ರ್ಯಕ್ಕಾಗಿ ಪ್ರಾಣತೆತ್ತರು. ಅವರಲ್ಲಿ ಮೇಲ್‌ಸ್ತರದ ನಾಯಕರ ಹೆಸರು ಇತಿಹಾಸದಲ್ಲಿ ದಾಖಲೆಯಾಗಿದೆಯಾದರೆ, ಕೆಳಸ್ತರಗಳ, ದಲಿತರ ಹೆಸರುಗಳನ್ನು ಇತಿಹಾಸದಲ್ಲಾಗಲೀ ಅಥವಾ ದಾಖಲೆಗಳಲ್ಲಾಗಲೀ ಕಾಣಿಸಿಗುವುದು ಕಷ್ಟ. ಇತ್ತೀಚೆಗೆ, ದಲಿತರ ಪಾತ್ರ ಮತ್ತು ಕೊಡುಗೆಗಳ ಬಗ್ಗೆ ಸಾಕಷ್ಟು ಸಾಹಿತ್ಯ ಹಾಗೂ ಸಾಮಾಜಿಕ ಪ್ರಜ್ಞೆ ತಲೆಯೆತ್ತಿದೆ. (1857 Essays From Economic And political Weekly – 2008) 1857ರ ಮೇಲ್ವರ್ಗೀಯ ಸ್ವರೂಪ ಹಿಂದೂ ರಾಜರ, ಮುಸಲ್ಮಾನರ, ಜಮೀನ್ದಾರರ, ಸೈನಿಕರ ಹಾಗೂ ವಿದ್ವಾಂಸರ ಬ್ರಿಟಿಷರ ವಿರುದ್ಧದ ಹೋರಾಟದ್ದಾಗಿದೆ. ಮೆಟ್‌ಕಾಫ್ ಅವರ ಅಭಿಪ್ರಾಯದಂತೆ, ಅದು ಕೇವಲ ದಂಗೆಯಾಗಲೀ ಸ್ವಾತಂತ್ರ್ಯ ಹೋರಾಟವಾಗಲೀ ಆಗಿರಲಿಲ್ಲ. ಅದು ಸಂಪ್ರದಾಯಬದ್ಧರು ತಮ್ಮ ಬ್ರಿಟಿಷ್-ಪೂರ್ವಸ್ಥಾನದ ಮರುಸ್ಥಾಪನೆಗಾಗಿ ಕೈಗೊಂಡ ಕಾರ್ಯವಾಗಿತ್ತು. (Thomas R. Metecalf, ‘The Aftermath of the Revolt – India, 1857-70’ – 1964) ಇತ್ತೀಚೆಗಿನ ದಲಿತ ಸಾಹಿತ್ಯದ ಪ್ರಕಾರ, ದಲಿತರಿಗೆ ಬ್ರಿಟಿಷ್ ಪೂರ್ವದ ಅವರ ಸ್ಥಾನವನ್ನು ಕಳೆದುಕೊಳ್ಳಲು ಏನೂ ಇರಲಿಲ್ಲ. ಆದುದರಿಂದ ಅವರದು ನಿಜವಾದ ಸ್ವಾತಂತ್ರ್ಯ ಹೋರಾಟವಾಗಿತ್ತು. ಆ ದಲಿತ ಹೋರಾಟದಲ್ಲಿ ಕ್ಷೌರಿಕರೂ, ಮಡಕೆ ಮಾಡುವವರೂ, ನೇಯ್ಗೆಯವರೂ, ಚಮ್ಮಾರರೂ ಪಾಲ್ಗೊಂಡಿದ್ದರು. ದಲಿತ ಸಾಹಿತ್ಯ ಅವರ ರಾಷ್ಟ್ರೀಯ ಭಾವನೆ, ದೇಶಭಕ್ತಿ ಹಾಗೂ ಪ್ರತಿಷ್ಠೆಯ ಕೆಚ್ಚೆದೆಯ ಹೋರಾಟವನ್ನು ಪ್ರತಿಬಿಂಬಿಸುವುದಾಗಿದೆ. 1857ರ ಹೋರಾಟದಲ್ಲಿ ಪಾಲ್ಗೊಂಡು ಪರಾಕ್ರಮ ಪ್ರದರ್ಶಿಸಿದ ದಲಿತ ಪುರುಷರಿಗಿಂತ ದಲಿತ ಸ್ತ್ರೀಯರೇ ಹೆಚ್ಚು ಹೆಸರುವಾಸಿಯಾಗಿದ್ದಾರೆ! (Charu Gupta, ”Dalit Viranganas and Revolution of 1857”) ಅವರಲ್ಲಿ ಪ್ರಮುಖರಾದವರು ಕೋರೀ ಜಾತಿಯ ಜಾಲ್‌ಕರೀ ಬಾ, ಪಾಸೀಯವಳಾದ ಉದಾದೇವಿ, ಲೋದಿಯವಳಾದ ಆವಂತೀ ಬಾ, ಭಾಂಗೀ ಪಂಗಡದ ಮಹಾಬೀರೀ ದೇವಿ ಮತ್ತು ಗುರ್‌ಜಾರೀ ಆಶಾದೇವಿ. ಅವರ ಮೇಲೆ ಕಥೆಗಳು, ಪದ್ಯಗಳೂ, ಪಾಡ್ಡನಗಳೂ, ನಾಟಕಗಳೂ, ಜೀವನಚರಿತ್ರೆಗಳೂ ಬಂದಿರುತ್ತವೆ.

arsid3373033 ಜಾಲ್‌ಕರೀ ಬಾಯ ತವರೂರು ಝಾನ್ಸೀ, ಅವಳ ಗಂಡ ಪುರಣ್ ಕೋಲೀ ಝಾನ್ಸೀರಾಜ ಗಂಗಾಧರ್‌ರಾವ್ ಕೈಕೆಳಗೆ ಸಾಮಾನ್ಯ ಸೈನಿಕನಾಗಿದ್ದ. ಜಾಲ್‌ಕರೀ ಅವಳ ಗಂಡನ ನೇಯ್ಗೆಯ ವೃತ್ತಿಯಲ್ಲಿ ಸಹಕರಿಸುತ್ತಿದ್ದಳು. ಚಿಕ್ಕಂದಿನಲ್ಲೇ ಧೈರ್ಯ-ಸಾಹಸ ಪ್ರವೃತ್ತಿಯ ಅವಳು, ಒಮ್ಮೆ, ಒಬ್ಬಂಟಿಗಳಾಗಿ ಹೆಬ್ಬುಲಿಯೊಂದನ್ನು ಕೊಂದಿದ್ದಳು. (Naimisharay Virangana Jalkaki Bai) ಅವಳು ತೋರಿಕೆಯಲ್ಲಿ ಝಾನ್ಸಿರಾಣಿ ಲಕ್ಷ್ಮೀಬಾಯಿಯನ್ನೇ ಹೋಲುತ್ತಿದ್ದಳು! ಜಾಲ್‌ಕರೀ ಬಾ, ರಾಣಿಯ ನಂಬಿಕೆಗೂ ಪ್ರೀತಿಗೂ ಪಾತ್ರಳಾಗಿದ್ದಳು ಮತ್ತು ‘ದುರ್ಗಾದಳ’ವೆಂಬ ಸ್ತ್ರೀ-ಪಡೆಯ ಮುಖ್ಯಸ್ಥಳಾಗಿದ್ದಳು. ಬ್ರಿಟಿಷರು ಝಾನ್ಸೀ ಕೋಟೆಗೆ ಮುತ್ತಿಗೆ ಹಾಕಿದಾಗ ಜಾಲ್‌ಕರೀ ಬಲವಾದ ಹೋರಾಟ ನೀಡಿದಳು. ಅವಳು ರಾಣಿಯ ವೇಷಧರಿಸಿ, ಝಾನ್ಸೀರಾಣಿಗೆ ತಪ್ಪಿಸಿಕೊಳ್ಳಲು ಸಲಹೆ ನೀಡಿ, ದಂತೀಯದ್ವಾರ ಹಾಗೂ ಭಾಂಡಾರೀ ದ್ವಾರಗಳಲ್ಲಿ ಸೈನ್ಯ ಸಂಘಟಿಸಿ ಅದ್ಭುತ ಹೋರಾಟ ಮಾಡಿದಳು. ಒಂದು ಹೇಳಿಕೆಯಂತೆ ಝಾನ್ಸೀರಾಣಿ ಯುದ್ಧದಿಂದ ದೂರಸರಿದು, ತಪ್ಪಿಸಿಕೊಂಡು ನೇಪಾಳ ಸೇರಿದಳು. ಮತ್ತು 1915ರಲ್ಲಿ ಮರಣಹೊಂದಿದಳು (80 ವರ್ಷ). ಜಾಲ್‌ಕರೀಯ ಗಂಡ ಹೋರಾಡುತ್ತಾ ಅಸುನೀಗಿದ. ಆ ಮಧ್ಯೆ ಬ್ರಿಟಿಷ್ ಸೈನಿಕರಿಗೆ ಅವಳ ನಿಜರೂಪ ತಿಳಿಯಿತು ಮತ್ತು ಅವಳ ಮೇಲೆ ಗುಂಡಿನ ಸುರಿಮಳೆಯಾಯಿತು. ಅಸಾಧ್ಯ ಹೋರಾಟ ನೀಡಿದ ಆ ವೀರನಾರಿ ಬ್ರಿಟಿಷರ ಗುಂಡಿಗೆ ಬಲಿಯಾದಳು. ಇನ್ನೊಂದು ಹೇಳಿಕೆಯಂತೆ ಅವಳು ತಪ್ಪಿಸಿಕೊಂಡು 1890ರ ತನಕ ಜೀವಿಸಿದ್ದಳು.
ಉದಾದೇವಿ, ಲಕ್ನೋ ಸಮೀಪ ಜನಿಸಿದ ಪಾಸೀ ಮಹಿಳೆ. ಅವಳನ್ನು ‘‘ಜಗ್‌ರಾಣೀ’’ ಎಂದೂ ಕರೆಯಲಾಗಿತ್ತು. ಮಕ್ಕಾಪಾಸೀ ಎಂಬಾತ ಅವಳನ್ನು ವಿವಾಹವಾಗಿದ್ದ. ಅವಳು ಬೇಗಂ ಹಜರತ್ ಮಹಲ್‌ಳ ಸೇವೆಗೆ ಸೇರಿ ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದಳು. ಅವಳೂ ಯುದ್ಧವಿದ್ಯೆ ಕಲಿತು ಬೇಗಂಗೆ ನಿಕಟ ಸೇನಾನಿಯಾದಳು. ಅವಳನ್ನು ಮುಖ್ಯಪಡೆಯ ಮುಖ್ಯಸ್ಥಳನ್ನಾಗಿ ನೇಮಿಸಲಾಗಿತ್ತು. ಚಿನಹಟ್ ರಣಾರಂಗದಲ್ಲಿ ಅವಳ ಗಂಡ ಅಸುನೀಗಿದ. ಕ್ಯಾಂಬೆಲ್ (Campbell) ನೇತೃತ್ವದಲ್ಲಿ ಬ್ರಿಟಿಷ್ ಸೈನ್ಯ ಸಿಕಂದರಾಬಾದಿನ ಮೇಲೆ ದಾಳಿ ಮಾಡಿದಾಗ ಉದಾದೇವಿ ಬ್ರಿಟಿಷ್‌ರ ವಿರುದ್ಧ ಹೋರಾಡಿದಳು. ಗೋರ್ಡನ್‌ಅಲೆಗ್ಸಾಂಡರ್ ಹೇಳುವಂತೆ ಆ ಹೋರಾಟದಲ್ಲಿ ಬಲಶಾಲಿ ಸ್ತ್ರೀಯರು (Amazons) ಬ್ರಿಟಿಷರ ವಿರುದ್ಧ ಹೋರಾಡಿದ್ದರು. ಅವರು ಕೊಬ್ಬು ಸವರಿದ ಕೋವಿ-ತೋಟೆಗಳನ್ನು ಉಪಯೋಗಿಸಲು ಹಿಂಜರಿಯಲಿಲ್ಲ. ಉದಾದೇವಿ ಅಲ್ಲೇ ಸಮೀಪದಲಿದ್ದ ಒಂದು ಮರವನ್ನೇರಿ ಸುಮಾರು 30-36 ಬ್ರಿಟಿಷ್ ಸೈನಿಕರನ್ನು ಗುಂಡಿಟ್ಟು ಕೊಂದಳು! ಅವಳನ್ನು ಆಮೇಲೆ ಗಮನಿಸಿದ ಆಂಗ್ಲ ಸೈನಿಕರು ಅವಳಿಗೆ ಗುಂಡಿಕ್ಕಿ ಮರದಿಂದ ಕೆಳಗೆ ಬೀಳಿಸಿ ಹತ್ಯೆಗೈದರು. ಅವಳ ಶೌರ್ಯ-ಸಾಹಸಕ್ಕೆ ಕ್ಯಾಂಬೆಲ್ ಕೂಡಾ ತಲೆದೂಗಿದರು!
ಆಶಾದೇವಿ ಗುರ್ಜರೀ ಮತ್ತೋರ್ವ ಸಾಹಸೀ ಮಹಿಳೆ. 1857ರ ಮೇ 8ರಂದು ಹೋರಾಟಗಾರ್ತಿಯರಾದ ಮಹಾವೀರೀ ದೇವಿ, ರಹೀಮೀ ಗುರ್ಜರೀ, ಭಗವಾನೀ ದೇವಿ, ಭಗವತೀ ದೇವಿ, ನಾಮ್‌ಕೌರ್, ರಾಜ್‌ಕೌರ್, ರಣವೀರೀ ವಾಲ್ಮೀಕಿ, ಸೆಹೀಜಾ ವಾಲ್ಮೀಕಿ, ಶೋಭಾ ವಾಲ್ಮೀಕಿ ಮತ್ತು ಹಬೀಬಾ ಗುರ್ಜರೀ ಮತ್ತು ಇಂದ್ರಾಕೌರ್ ಎಂಬವರನ್ನೊಳಗೊಂಡ ಪಡೆಯೊಂದಿಗೆ ಬ್ರಿಟಿಷರ ವಿರುದ್ಧ ಹೋರಾಡಿದಳು. ಆದರೆ ಅವರೆಲ್ಲರೂ ವೀರಮರಣವನ್ನಪ್ಪಿದರು. (P.S.Verma, ed. ‘Dalit pira’ – 1992)
ಆವಂತೀ ಬ್ಯಾ ಮಧ್ಯಪ್ರದೇಶದ ರಾಮಘರ್‌ನ ರಾಣಿ. ಅವಳು ಬ್ರಿಟಿಷರ ವಿರುದ್ಧ ಹೋರಾಡಿ ಸೋಲುವ ಸಂದರ್ಭದಲ್ಲಿ ಆತ್ಮಾರ್ಪಣೆಗೈದಳು. ಅವಳೊಂದಿಗೆ ಅನೇಕ ದಲಿತ ವೀರನಾರಿಯರು ಬ್ರಿಟಿಷರ ವಿರುದ್ಧ ಹೋರಾಡಿ ಹತರಾದರು. ಭಾಂಗೀ ಪಂಗಡದ ಮಹಾಬೀರೀ ದೇವಿ ಮುಜಾಫರ್‌ನಗರದಲ್ಲಿ ಸುಮಾರು 22 ಸ್ತ್ರೀಯರ ಹೋರಾಟದ ಪಡೆಯನ್ನು ಸಂಘಟಿಸಿ ಬ್ರಿಟಿಷರ ವಿರುದ್ಧ ಹೋರಾಡಿದಳು. ಅವಳು ಅನೇಕ ಬ್ರಿಟಿಷ್ ಸೈನಿಕರನ್ನು ಹೊಡೆದುರುಳಿಸಿ ಕಟ್ಟಕಡೆಗೆ ತನ್ನವರೊಂದಿಗೆ ಸಾವಿಗೀಡಾದಳು.

arsid3373033 ದಲಿತ ವೀರಾಂಗನೆಯರ ಮೇಲಿನ ಸಾಹಿತ್ಯ ಅವರ ಕೊಡುಗೆಗಳನ್ನು ಮೇಲ್‌ಸ್ತರದ ಇತಿಹಾಸದಲ್ಲಿ ನಿರ್ಲಕ್ಷಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಮೂಡಿಬಂದಿದೆ. ಅದರಲ್ಲಿ ಅವರ ವೈವಿಧ್ಯಮಯ ವ್ಯಕ್ತಿತ್ವದ ಹೆಗ್ಗಳಿಕೆಯನ್ನು ಕಾಣಬಹುದಾಗಿದೆ. ಆ ದಲಿತ ವೀರಾಂಗನೆಯರು ಸಹಜ ಸ್ತ್ರೀ ಸೌಂದರ್ಯದ ಪರಾಕ್ರಮಶಾಲಿಗಳು ಮಾತ್ರವಲ್ಲದೆ ಸ್ವಜಾತಿಯ, ಸ್ವಧರ್ಮದ, ಸ್ವದೇಶದ ಸ್ವಾತಂತ್ರ್ಯ ಉಪಾಸಕರಾಗಿ ಜೀವದ ಹಂಗು ತೊರೆದು ಹೋರಾಡಿ ಇತಿಹಾಸದಲ್ಲಿ ಸದ್ದಿಲ್ಲದೇ ಅಮರರಾದ ನಾರೀಮಣಿಗಳು.

   

Leave a Reply