ದುರ್ಗಾ ಪೂಜೆ ರಾಷ್ಟ್ರದ ವೈಭವದ ದಾರಿ

ಭಾರತ - 0 Comment
Issue Date : 23.09.2014

ಇಂದು ನಮ್ಮ ಸಮಾಜಕ್ಕೆ ಸುತ್ತಲೂ ಶತ್ರುಗಳು ಮುತ್ತಿದ್ದಾರೆ. ಬಿಳಿಯ ರಾಕ್ಷಸರೇ ಅಲ್ಲ, ಭಾರತದ ಮಾಂಗಲ್ಯ ಕಸಿಯಲು ಹಳದಿಯ ರಾಕ್ಷಸರು ಸಿದ್ಧರಾಗಿ ನಿಂತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಮಗೆ ರಕ್ಷಣೆ ಎಲ್ಲಿ? ಹೇಗೆ? ಇದರ ಉತ್ತರ ಇಲ್ಲಿದೆ.

ತ್ವಂ ಹಿ ದುರ್ಗಾ ದಶಪ್ರಹರಣ ಧಾರೀಣೀಂ ಎಂದು ಸ್ವರ್ಗೀಯ ಬಂಕಿಂ ಚಂದ್ರರು ಮಾತೆ ಭಾರತಿಯನ್ನು ಸ್ತುತಿಸಿದ ನುಡಿ ಭಾರತೀಯರಿಗೆಲ್ಲ ಚಿರಪರಿಚಿತ. ಪರಕೀಯರ ರಾಕ್ಷಸೀ ದಬ್ಬಾಳಿಕೆಯ ಅಡಿಯಲ್ಲಿ ಸಮಾಜ ನಿರ್ಬಲವಾಗಿ ನರಳುತ್ತಾ ತನಗಿನ್ನು ಉಳಿಗಾಲವಿಲ್ಲವೆಂದು ದೈನ್ಯತೆಯ, ಶರಣಾಗತಿಯ ಸ್ಥಿತಿ ಮುಟ್ಟಿದಾಗ ಬಂಗಾಲದಲ್ಲಿ ಸನ್ಯಾಸಿಗಳ ತಂಡವೊಂದು ಈ ರಾಷ್ಟ್ರೀಯ ಅನಾಹುತವನ್ನು ತಪ್ಪಿಸಲೆಂದು ಸಂಘಟಿತವಾಗಿ ಇಂಗ್ಲಿಷರನ್ನು ವಿರೋಧಿಸಲು ಅವರಿಗೆ ಸ್ಪೂರ್ತಿ ನೀಡಿದ ಗೀತೆ ವಂದೇ ಮಾತರಂ. ಅದರದ್ದೇ ಭಾಗ ಈ ಶಕ್ತಿಮಾತೆಯ ವರ್ಣನೆ.

ದುರ್ಗಾಪೂಜೆಯ ಮಹತ್ವ

ಈ ರೀತಿಯ ದುರ್ಗಾಸ್ತುತಿ ಭಾರತಕ್ಕೆ ಹೊಸದೇನಲ್ಲ ನಾಡಿನ ಜನರ ಮೇಲೆ ಅಸಹ್ಯ ಆಕ್ರಮಣ, ದಬ್ಬಾಳಿಕೆ ನಡೆದು ಪರಕೀಯರ ದಮನ ಚಕ್ರದ ಕ್ರೂರ ತುಳಿತಕ್ಕೆ ಸಿಕ್ಕಿ ಸಮಾಜದ ಅಸ್ಮಿತೆ, ಆತ್ಮವಿಶ್ವಾಸಗಳು ಹಾರಿಹೋದಾಗ ಪುನಃ ಈ ಆತ್ಮವಿಶ್ವಾಸ, ಸ್ಥೈರ್ಯಗಳನ್ನು ತುಂಬಲು ಶಕ್ತಿಮಾತೆಯ ಪೂಜೆ, ದುರ್ಗಿಯ ಅವಾಹನೆ ನಮ್ಮ ಭಾರತದಲ್ಲಿ ನಡೆದಿದೆ. ತತ್ಫಲವಾಗಿ ಜನರಲ್ಲಿ ವಿಶ್ವಾಸ, ಪರಕೀಯರನ್ನು ಎದುರಿಸಿ ನಾಶಮಾಡುವ ಅದಮ್ಯ ಪರಾಕ್ರಮ ಮೂಡಿಬಂದುದು ನಮ್ಮ ಐತಿಹಾಸಿಕ ಅನುಭವ.

ದುರ್ಗಾಮಾತೆಯ ಮೂರ್ತಿ ಸರ್ವರಿಗೂ ಪರಿಚಿತವಾದದ್ದೇ. ಕಂಠದಲ್ಲಿ ರುಂಡಮಾಲೆ, ಕೈಗಳಲ್ಲಿ ಖಡ್ಗ, ಗದೆ ಇತ್ಯಾದಿ ಆಯುಧಗಳು. ದುರ್ಜನರ ದುರುಳತೆಯನ್ನು ನಾಮಾವಶೇಷಗೊಳಿಸುವ ರೌದ್ರ ನಗೆ. ಈ ರೀತಿಯ ಧೀರ ಮೂರ್ತಿಯನ್ನು ಕಂಡು ಆನಂದ ಪಡುವವರಿಗಿಂತ ಭಯಭಕ್ತಿಗಳಿಂದ ಪೂಜಿಸುವವರೇ ಹೆಚ್ಚು. ಪ್ರತಿಯೊಂದು ಗ್ರಾಮಕ್ಕೂ ರಕ್ಷಾದೇವಿಯಾಗಿ, ಸರ್ವರ ಸಂರಕ್ಷಣೆಯ ಭಾರ ಹೊತ್ತ ಮಾತೆ ಅವಳು. ಆಕೆಯ ನಾಮಗಳು ಹಲವುಚಂಡಿ, ಕಾಳಿ, ಚಾಮುಂಡಿ, ಭೈರವಿ ಇತ್ಯಾದಿ. ದುರ್ಗಾ ಹೆಸರಂತೂ ಸರ್ವಸಾಮಾನ್ಯ ಬಳಕೆಯ ಹೆಸರಾಗಿದೆ.

ನಮ್ಮ ಸಂಸ್ಕೃತಿಯೊಡನೆಯೇ ಬೆಳೆದು ಬಂದ ಪ್ರಕೃತಿ ಪೂಜೆಯ ಜೊತೆಗೆ ಪ್ರಕೃತಿಗಾಧಾರವಾದ ಶಕ್ತಿಪೂಜೆ ಹೆಚ್ಚು ಪ್ರಚಲಿತವಾಗಿತ್ತೆನ್ನಲಡ್ಡಿಯಿಲ್ಲ. ಇಂದಿನ ವಿಜ್ಞಾನಿಗಳು ಅಪಾರ ಸಂಶೋಧನೆ ನಡೆಸಿ ಜಗತ್ತಿನ ಮೂಲ ಅಣುಪರಮಾಣುಗಳಲ್ಲ, ಶಕ್ತಿ (Energy)ಎಂಬ ನಿಶ್ಚಯಕ್ಕೆ ಬಂದು ಮುಟ್ಟಿದ್ದಾರೆ. ನಮ್ಮ ಸಂಸ್ಕೃತಿಯ ಆರಾಧಕರಿಗೆ ಇದು ಪ್ರಾರಂಭದ ವಿಷಯ. ಮೊದಲು ದಿವ್ಯಶಕ್ತಿ, ಆ ಶಕ್ತಿಮಾತೆಯ ಮೂಲಕ ಮಿಕ್ಕ ಕ್ರಿಯಾಶಕ್ತಿಗಳು ; ಸೃಷ್ಠಿಸ್ಥಿತಿಸಂಹಾರಗಳು ತ್ರಿಮೂರ್ತಿ ರೂಪದಲ್ಲಿ ಪ್ರಕಟವಾದುವುಇದು ಬಹು ಹಿಂದೆಯೇ ಘೋಷಿತವಾಗಿದ್ದ ಸಂಗತಿ. ಅದನ್ನೇ ಅವರು ಶಕ್ತಿಮಾತೆ, ಹೈಮವತೀ, ದುರ್ಗಾ, ಅಂಬಾ, ಇತ್ಯಾದಿ ನಾಮಗಳಿಂದ ಕರೆದರು. ಲಲಿತಾ ಸಹಸ್ರನಾಮದಲ್ಲಿ ಮಾತೆಯನ್ನು ಉನ್ವೇಷ ನಿಮೇಷ ಉತ್ಪನ್ನ ವಿಪನ್ನ ಭುವನಾವಳೀ, ಕರಾಂಗುಳಿ ನಖೋತ್ಪನ್ನ ನಾರಾಯಣ ದಶಾಕೃತೀ ಎಂದು ವರ್ಣಿಸಿದ್ದಾರೆ. ಈ ಮಾತೆ ಕಾಲದೇಶಗಳನ್ನು ದಾಟಿದವಳು, ಅವುಗಳ ಆಚೆ ಇರುವವಳು. ಅವುಗಳಿಗೆ ಜನ್ಮವಿತ್ತವಳು. ಆಕೆ ರೆಪ್ಪೆ ಹೊಡೆದು ಮುಚ್ಚುವಷ್ಟರಲ್ಲಿ ಭುವನ ಭುವನಗಳು ಹುಟ್ಟಿ ಹುಟ್ಟಿ ಸಾಯುವುವಂತೆ ! ಆಕೆಯ ಬೆರಳ ತುದಿಯಲ್ಲಿ ನಾರಾಯಣನ ದಶಾವತಾರಗಳು ಆಗುವುವಂತೆ ! ಸೃಷ್ಠಿಸ್ಥಿತಿ ಲಯಗಳು ಆಕೆಯ ಆಜ್ಞೆಯಂತೆಯೇ ನಡೆಯುವುವು. ಬ್ರಹ್ಮಾ ವಿಷ್ಣು ಮಹೇಶ್ವರರು ಆಕೆಯ ಚೆಲುಗೂಸುಗಳು !

ಇಂತಹ ಅದ್ವೀತಿಯ ಶಕ್ತಿ ಸಂಪನ್ನಳಾದ ಮಾತೆಯನ್ನು ಅರ್ಚನೆ ಮಾಡಿದ ಈ ಭಾರತ ಸಾಮರ್ಥ್ಯಶಾಲಿಯಾಗಿ, ವಿಶ್ವವಂದ್ಯವಾಗಿದ್ದರಲ್ಲಿ ಆಶ್ಚರ್ಯವೇನಿಲ್ಲ. ಪೂಜೆಗೆ ತಕ್ಕಫಲ ಎಂಬುದು ನಮ್ಮ ಹಿರಿಯರ ಅನುಭವದ ನುಡಿ. ಅದರಂತೆ ಭಾರತದ ಸರ್ವಾಂಗೀಣ ಪ್ರಗತಿಗೆ ಈ ದುರ್ಗಾಪೂಜೆ ಪ್ರೇರಣೆ ನೀಡಿತು ಎನ್ನಲಡ್ಡಿಯಿಲ್ಲ.

ಶಕ್ತಿಪೂಜಕ ವಿಕ್ರಮಾದಿತ್ಯ

ಇತಿಹಾಸಪೂರ್ವದ ಮಾತು ಹೀಗಿದ್ದರೆ, ಇತಿಹಾಸದಲ್ಲಿ ಈ ವಿಚಾರ ಮತ್ತಷ್ಟು ಸ್ಪಷ್ಟವಾಗಿ ಪ್ರಕಾಶಿತವಾಗಿ ನಮಗೆ ಮಾರ್ಗದರ್ಶನ ಮಾಡುತ್ತದೆ.

ಹಿಂದುಸ್ಥಾನದ ಸಂಪತ್ಸಮೃದ್ಧಿಯನ್ನು ಕಂಡು ಮನಸೋತು, ಬಾಯಲ್ಲಿ ನೀರೂರಿ ಇದನ್ನು ಆಕ್ರಮಿಸಲೆಂದು, ತಮ್ಮ ಪ್ರಭುತ್ವ ಸ್ಥಾಪಿಸಲೆಂದು ಯತ್ನಿಸಿದವರು ಬಹುಜನ. ಶಕರೂ ಅವರೊಲ್ಲೊಬ್ಬರು. ಬರ್ಬರರಾದ ಅವರ ಸೇನೆ ಅತಿ ಪ್ರಚಂಡ ಧಾಳಿ ನಡೆಸಿತು. ಸಣ್ಣ ಪುಟ್ಟ ರಾಜ್ಯಗಳೇನಕವು ಒಂದೊಂದಾಗಿ ಅವರ ಕೈವಶವಾದವು. ಈ ಅನಾರ್ಯರ ಭಯಂಕರ ಅಘಾತದೆದುರು ನಿಲ್ಲುವ ಸ್ಥೈರ್ಯ, ಪರಾಕ್ರಮ ಲುಪ್ತವಾಗಿ ಹೋಗಿದೆಯೇನೋ ಎಂಬ ಭ್ರಮೆ, ನಿರಾಶೆ ಎಲ್ಲರ ಮನಸ್ಸನ್ನಾವರಿಸಿತ್ತು. ಆದರೆ ಅಷ್ಟರಲ್ಲಿ ವಿಕ್ರಮಾದಿತ್ಯನ ಉದಯವಾಯ್ತು. ದುರ್ಗಿಮಾತೆಯ ಪೂಜೆಮಾಡಿ, ಆ ಶಕ್ತಿಮಾತೆಯ ಆವಾಹನೆಮಾಡಿ ಹೊರಟ ವಿಕ್ರಮನ ಸಿಂಹಪರಾಕ್ರಮದೆದುರು ಶಕಸೇನೆ ನಿಲ್ಲಲಾರದೆ ಓಡಿಹೋಯಿತು ! ಶಕಾರಿ ವಿಕ್ರಮಾದಿತ್ಯನ ಜಯಭೇರಿ ಎಲ್ಲೆಲ್ಲೂ ಮೊಳಗಿತುವಿಕ್ರಮ ಶಕೆ ಪ್ರಾರಂಭವಾಯ್ತು. ಹೀಗೆ ಪರರ ಆಕ್ರಮಣವನ್ನು ದೂರವಿಡಲು ದುರ್ಗಾಮಾತೆಯ ಪೂಜೆ ಸಹಾಯಕವಾದ ಪ್ರಸಂಗ ಇದೊಂದಾದರೆ ಮುಂದಿನ ಪ್ರಸಂಗ ಮತ್ತಷ್ಟು ತಾಂತ್ರಿಕವಾಗಿ, ಉದ್ಬೋಧಕವಾಗಿದೆ. ಶಕಾರಿ ಶಕರನ್ನು ದೂರ ಇಟ್ಟಿದ್ದ, ಅಷ್ಟೆ. ಅವನು ತನ್ನ ಪರಾಕ್ರಮದಿಂದ ಅವರು ಮುಂಬರದಂತೆ ತಡೆದಿದ್ದ. ಆದರೆ ಅವನು ಕಾಲವಾಗುತ್ತಲೇ ಶಕರ ಅಘಾತ ಮತ್ತೆ ಪ್ರಾರಂಭವಾಯ್ತು.

ಶಕಪುರುಷ ಶಾಲಿವಾಹನ

ಇಂತಹ ಶತ್ರುವನ್ನು ಹಾಗೇ ಬಿಟ್ಟರೆ, ಅಥವಾ ತಾತ್ಕಾಲಿಕವಾಗಿ ತಡೆಹಿಡಿದರೆ ಮಾತ್ರ ಸಮಸ್ಯೆ ಪರಿಹಾರವಾಗದು. ಅವರು ಸದಾಕಾಲಕ್ಕೂ ನಾಮಾವಶೇಷರಾಗಬೇಕು. ಅದಕ್ಕೆ ಯೋಗ್ಯ ವ್ಯವಸ್ಥೆ ಬೇಕು. ಅಂತಹ ವೈರಿಗಳನ್ನು ಪ್ರತ್ಯೇಕವಾಗಿಡದೆ ಅವರೆಲ್ಲರನ್ನೂ ಜೀರ್ಣಿಸಿಕೊಳ್ಳುವ ಸಾಮರ್ಥ್ಯ ನಿರ್ಮಾಣವಾದರೆ, ಇಂತಹ ವೈರಿಗಳ ಭಯವೇ ಸಮಾಜಕ್ಕಿರಲಾರದು. ಆದ್ದರಿಂದ ಇಡೀ ಸಮಾಜ ಸಾಮರ್ಥ್ಯಶಾಲಿಯಾಗಿ, ಏಕಪುರುಷನಂತೆ ವಿರಾಡ್ರೂಪಿಯಾಗಿ ನಿಲ್ಲಬೇಕು.

ಇಂತಹ ಮಹತ್ಕಾರ್ಯದ ಧೀರಧೀಕ್ಷೆ ತೊಟ್ಟವನೊಬ್ಬ ಸಾಧಾರಣ ಯುವಕಶಾಲಿವಾಹನ. ಪರಕೀಯರ ಆಕ್ರಮಣದ ಮಾತಿರಲಿ, ಅವರು ಹಿಂದೂ ಸಮಾಜದ ಕಡೆಗೆ ಕೆಟ್ಟ ದೃಷ್ಠಿಯಿಂದ ನೋಡುವ ಸಾಹಸ ಸಹ ಆಗದಂತೆ ಸಮಾಜವನ್ನು ಚೈತನ್ಯಗೊಳಿಸಲು ಮುಂದೆ ಬಂದ. ಅತಿ ಅಪೂರ್ವ, ಅಸದೃಶ ಕಾರ್ಯಯೋಜನೆ ಅವನದು.

ಅವನ ಸಂಘಟನೆಯ ಪ್ರಥಮ ಸೋಪಾನ ಅದೇ ಚಿರಪೂಜಿತ ಶಕ್ತಿಮಯೀ ದುರ್ಗಿ ! ಆಕೆಯ ಪ್ರತಿಮೆಗಳು ನಗರಗಳಲ್ಲಿ, ಪಟ್ಟಣಗಳಲ್ಲಿ, ಗ್ರಾಮಗಳಲ್ಲಿ ಮನೆಮನೆಗಳಲ್ಲಿ ಪ್ರಕಟವಾದುವು. ಎಲ್ಲ ಒಂದೇ ಆಕಾರದವು. ಶ್ಯಾಮಲ ವರ್ಣದ ಆ ದೇವಿ ಎಂಟೂ ಕೈಗಳಲ್ಲಿ ಖಡ್ಗ, ಚಾಪ, ಗದಾ, ತೋಮರ ಇತ್ಯಾದಿ ಆಯುಧಗಳನ್ನು ಧರಿಸಿದ್ದಾಳೆ. ಅಹಿತರ, ರಾಕ್ಷಸರ ರುಧಿರವನ್ನು ಹೀರಲು ತವಕಿಸುತ್ತಿರುವ ಕೆನ್ನಾಲಿಗೆ ಹೊರ ಚಾಚಿದೆ. ಕೊರಳಲ್ಲಿ ರುಂಡಮಾಲೆ ಧರಿಸಿರುವ ಈ ದುರ್ಗಾಮಾತೆ ಶ್ವೇತವರ್ಣದ ರಾಕ್ಷಸನನ್ನು ಪದತಲದಲ್ಲಿ ಮೆಟ್ಟಿ ರೌದ್ರ ತಾಂಡವವಾಡುತ್ತಾ, ಪ್ರಳಯಂಕರಿಯಾಗಿದ್ದಾಳೆ. ಆಕೆಯ ಮುಖದ ರೌದ್ರತೆಗೆ ಇಡೀ ವಿಶ್ವ ಬೆದರಿಕೆಯಿಂದ ಮೂಕಾಗುವಂತಿದೆ. ಕೆಳಗೆ ಬಿದ್ದಿರುವ ಬಿಳಿಯ ರಾಕ್ಷಸ ಕೈ ಮುಗಿದು ತ್ರಾಹಿ ತ್ರಾಹಿ ಎಂದು ನರಳುತ್ತಾ ಇದ್ದಾನೆ 

ಇಷ್ಟು ಸುಂದರವಾಗಿ, ರೂಪಿತವಾದ ಈ ಸಾದೃಶ್ಯದ ಸಂದೇಶ ಪ್ರತಿಯೊಬ್ಬ ಹಿಂದುವಿನ ಎದೆ ಮುಟ್ಟಿತು. ದುರ್ಗಿಯನ್ನು ಆವಾಹನ ಮಾಡಿಕೊಂಡು ಹಿಂದೂ ಸಿಂಹ ಘರ್ಜಿಸುತ್ತಾ ಮೇಲೆದ್ದಿತ್ತು. ಹಿಂದೂ ಸಿಂಹ ದಿಟ್ಟತನದಿಂದ ಘರ್ಜಿಸಿ ಪರಾಕ್ರಮ ಪ್ರದರ್ಶಿಸಹೊರಟರೆ ಎದುರು ನಿಲ್ಲುವ ಎದೆಗಾರಿಕೆ ಯಾರಿಗಿದೆ ? ಪರಕೀಯರ ಆಕ್ರಮಣದಿಮದ ರೋಸಿಹೋಗಿದ್ದ ಸಮಾಜದ ಸುಪ್ತ ಶಕ್ತಿ, ದುರ್ಗಿಯ ಆವಾಹನೆಯಿಂದ ಜಾಗೃತವಾಯ್ತು. ಶಾಲಿವಾಹನನಂತಹ ಮೇಧಾವಿಯ ಅನುಪಮ ಮಾರ್ಗದರ್ಶನವೂ ಜೊತೆಗೂಡಿತು.

ಇಂತಹ ದೈವೀಶಕ್ತಿಯೆದುರು ಸೆಣಸಿದರೆ ಉಳಿಯುವುದುಂಟೇ ? ಆ ಪ್ರಚಂಡ ಪರಾಕ್ರಮದ ದಳ್ಳುರಿಗೆ ಸಿಕ್ಕಿ ಶಕರು ಬೆಂದುಹೋದರು. ಶಕರ ಹೆಸರು ಚರಿತ್ರೆಯಲ್ಲಿ ಉಳಿಯಿತು ಅಷ್ಟೆ. ಶಕನೆಂದೆನ್ನಿಸಿಕೊಳ್ಳುವವನು ಯಾರೂ ಉಳಿಯಲಿಲ್ಲ. ದುರ್ಗಾಮಾತೆಯ ಆವಾಹನೆಯ ಫಲ ಅದು.

ಅಷ್ಟೇಕೆ ಇತ್ತೀಚೆಗೆ ವಿಶ್ವದಲ್ಲಿ ಹಿಂದೂ ಧರ್ಮದ ವಿಜಯ ದುಂದುಭಿಯನ್ನು ಮೊಳಗಿಸಿದ ವಿವೇಕಾನಂದರನ್ನು ಆಕರ್ಷಿಸಿ ಅವರಿಗೆ ಆಧ್ಯಾತ್ಮದ ಮಾರ್ಗ ತೋರಿಸಿದ ಗುರುದೇವ ಪರಮಹಂಸರ ಸಾಧನೆಯೂ ಮಂಗಳಮಾತೆ ದುರ್ಗಿಯ ಪಾವನ ಪಾದದಡಿಯಲ್ಲೇ ಆಯಿತು. ಹೀಗೆ ಲೌಕಿಕವಾಗಿ, ಪಾರಮಾರ್ಥಿಕವಾಗಿ ಸಮಾಜದ ಅಭ್ಯುತ್ಥಾನಕ್ಕೆ ದುರ್ಗಾಪೂಜೆ ಅನನ್ಯ ಸಹಕಾರಿಯಾಗಿದೆ.

ಇಂದಿನ ಕಾರ್ಯ

ಇಂದು ನಮ್ಮ ಸಮಾಜಕ್ಕೆ ಸುತ್ತಲೂ ಶತ್ರುಗಳು ಮುತ್ತಿದ್ದಾರೆ. ಬಿಳಿಯ ರಾಕ್ಷಸರೇ ಅಲ್ಲ, ಭಾರತದ ಮಾಂಗಲ್ಯ ಕಸಿಯಲು ಹಳದಿಯ ರಾಕ್ಷಸರೂ ಸಿದ್ಧರಾಗಿ ನಿಂತಿದ್ದಾರೆ. ಹೀಗೆ ನಾನಾ ವರ್ಣದ ನಾನಾರೂಪದ ರಾಕ್ಷಸರು ನಮ್ಮನ್ನು ನುಂಗಲು ನಿಂತಿರುವಾಗ, ಅವರಿಗೆ ಸಹಾಯ ನೀಡುವ ಆ ರಾಕ್ಷಸರ ಪರಿವಾರ ಭಾರತವನ್ನೆಲ್ಲ ಆವರಿಸಿರುವಾಗ, ನಮಗೆ ರಕ್ಷಣೆಯೆಲ್ಲಿ ? ಹೇಗೆ ? ಎಂಬ ನಿಸ್ಸಹಾಯಕ, ನಿರಾಶದಾಯಕ ಪ್ರಶ್ನೆ ಜನಮನವನ್ನಾವರಿಸಿದೆ. ಇಡೀ ವಿಶ್ವ ಎದುರಾದರೂ ನುಂಗಿ ನೀರುಕುಡಿಯುವೆನೆಂಬ ವಿಕ್ರಮನ ಛಲ, ಶಾಲಿವಾಹನನ ತೇಜಸ್ಸು ಇಂದು ಕಾಣುತ್ತಿಲ್ಲ. ಬದಲಾಗಿ ದೊಡ್ಡ ದೊಡ್ಡ ತತ್ವಗಳ ಢಾಂಬಿಕ ಶಬ್ದಜಾಲದಲ್ಲಿ ಜನರನ್ನು ಸಿಕ್ಕಿಸಿ, ಅವರನ್ನು ಮೋಸಗೊಳಿಸಿ ತಾವೂ ಮೋಸಹೋಗುವ ಪ್ರಯತ್ನ ನಡೆದಿದೆ. ಆಕ್ರಮಣವನ್ನೆದುರಿಸಿದರೆ ವಿಶ್ವಶಾಂತಿಗೆ ಭಂಗಬಂದೀತು, ಯುದ್ಧವಾದೀತು ಎಂಬ ಭಯಪೂರ್ಣ ವಿಚಾರದಿಂದಲೇ ನಾವು ಭಾರತವನ್ನು ಉಳಿಸಲಾರೆವು. ಕೇವಲ ಶಾಂತಿ, ಸಹಬಾಳ್ವೆ, ಪಂಚಶೀಲ, ಅಹಿಂಸಾ ಇತ್ಯಾದಿ ಮಂತ್ರಗಳು ನಮ್ಮನ್ನು ರಕ್ಷಿಸಲಾರವು. ದುರ್ಗಾಮಾತೆಯನ್ನು ರಾಷ್ಟ್ರದೇವತೆಯನ್ನಾಗಿ ಸ್ವೀಕರಿಸಿ ಶಸ್ತ್ರಪೂಜೆಯನ್ನು ಸಾರ್ವತ್ರಿಕವಾಗಿ ಆಚರಿಸಿದಾಗಲೇ ಇಂದಿನ ಪೌರುಷಹೀನ, ನಿಸ್ಸತ್ವ ವಾತಾವರಣ ನಾಶವಾದೀತು. ಸಮಾಜದಲ್ಲಿ ಸ್ಥೈರ್ಯ, ಆತ್ಮವಿಶ್ವಾಸ ಮೂಡಿ ಜಗತ್ತಿನೆದುರು ಗೌರವದಿಂದ, ಸ್ವಾಭಿಮಾನದಿಂದ ಬಾಳಬಲ್ಲ ಸಾಮರ್ಥ್ಯ ಪ್ರಕಟವಾದೀತು. ಶಕಾರಿ ವಿಕ್ರಮಾದಿತ್ಯ ಹಾಗೂ ಸರ್ವದಮನ ಶಾಲಿವಾಹನರ ಭವ್ಯ ಪರಂಪರೆಯನ್ನು ಮುಂದುವರಿಸುವ ಸಾಹಸ ಜನರಲ್ಲಿ ಪ್ರಕಟವಾದರೆ ಸಮಾಜ ಚೈತನ್ಯಶಾಲಿಯಾದೀತು. ಈ ದೃಷ್ಠಿಯಿಂದ ದುರ್ಗಾಪೂಜೆ, ಶಸ್ತ್ರಪೂಜೆ ಮಾಡಿ ಭಾರತಮಾತೆಯ ವೈಭವದ ಪ್ರತಿಷ್ಠಾಪನೆಗಾಗಿ ಸಿದ್ಧ ಖಡ್ಗರಾಗಬೇಕಾಗಿದೆ. ಇಡೀ ಸಮಾಜ ಒಬ್ಬ ವ್ಯಕ್ತಿಯಂತೆ ಕಾರ್ಯೋನ್ಮುಖವಾಗಬೇಕಾಗಿದೆ. ಇದೇ ಇಂದಿನ ಪ್ರಥಮ ಕಾರ್ಯ.


– ಶ್ರೀ ನ
ಕೃಷ್ಣಪ್ಪ 

   

Leave a Reply