ದೇಗುಲಗಳಿಗೆ ಕನ್ನ ಹಾಕಿ ಸರಕಾರಗಳ ಅನ್ನ ಸಂಪಾದನೆ !

ಲೇಖನಗಳು - 0 Comment
Issue Date :

 

-ಬಿನು ಪಿ ಕಾನ್ಡಿಯಿಲ್,
-ರೋಹಿತ್ ಚಕ್ರತೀರ್ಥ

ದುಡ್ಡಿಗೆ ವಾಸನೆಯಿಲ್ಲ

ರಾಜ್ಯದೊಳಗೆ ಯಾವೆಲ್ಲ ದೇವಸ್ಥಾನಗಳು ಸ್ವಲ್ಪ ಲಾಭ ಮಾಡಿಕೊಳ್ಳುತ್ತಿವೆಯೋ ಅವೆಲ್ಲವನ್ನೂ ದೇವಸ್ವಮ್ ತನ್ನ ತೆಕ್ಕೆಗೆ ತೆಗೆದುಕೊಂಡು ನುಂಗಿಹಾಕುವುದು ಹಳೇ ಜಾಯಮಾನವೇ. ದೇವರನ್ನು ನಂಬದ, ನಾಸ್ತಿಕ ಕಮ್ಯುನಿಸ್ಟ್ ಸರಕಾರಕ್ಕೆ ಅತಿ ಹೆಚ್ಚು ಲಾಭ ಗಳಿಸಿಕೊಡುವುದು ದೇವಸ್ಥಾನಗಳು, ಅವುಗಳಲ್ಲಿ ಸಂಗ್ರಹವಾದ ಆಸ್ತಿಕರ ದುಡ್ಡು ಎಂಬುದು ವಿಪರ್ಯಾಸ ಮತ್ತು ದೊಡ್ಡ ಜೋಕ್. ರೋಮನ್ ದೊರೆಯೊಬ್ಬ ಸಾರ್ವಜನಿಕರ ಮೂತ್ರಕ್ಕೆ ತೆರಿಗೆ ಹಾಕಿ ದುಡ್ಡು ಸಂಗ್ರಹಿಸಿದ್ದನಂತೆ. ಛೀ, ಹೀಗೂ ದುಡ್ಡು ಸಂಗ್ರಹಿಸಬೇಕೇ ಎಂದು ಮೂಗು ಮುರಿದ ಮಗನಿಗೆ ಆತ “ದುಡ್ಡಿಗೆ ವಾಸನೆ ಇಲ್ಲ” ಎಂದು ಹೇಳಿ ಕೈಯಲ್ಲಿದ್ದ ಚಿನ್ನದ ನಾಣ್ಯವನ್ನು ಮೂಗಿಗೆ ಹಿಡಿದಿದ್ದನಂತೆ! ಹಾಗೆ, ಈ ಕೇರಳದ ಸರಕಾರಗಳು ಹಿಂದೂಗಳನ್ನು ತುಚ್ಛೀಕರಿಸಿ, ಹಿಂದೂವಿರೋಧಿ ಆಡಳಿತ ನಡೆಸಿ, ದೇವರನ್ನು ನಂಬದಿರಿ ಎಂದು ಪ್ರಚಾರ ಮಾಡಿ, ಕೊನೆಗೆ ಅವೇ ದೇವರುಗಳಿಂದ ದುಡ್ಡು ಪೀಕಿ ತಮ್ಮ ನಷ್ಟ ತುಂಬಿಸಿಕೊಳ್ಳುತ್ತವೆ!!

  • ಧಾರ್ಮಿಕ ದತ್ತಿ ಕಾಯ್ದೆಯ ಪ್ರಕಾರ 43,000 ದೇವಸ್ಥಾನಗಳು ಆಂಧ್ರಪ್ರದೇಶದಲ್ಲಿ (ಹಿಂದಿನ ಅವಿಭಜಿತ ಆಂಧ್ರ) ಸರಕಾರದ ಸುಪರ್ದಿಗೆ ಬಂದವು. ಅಷ್ಟು ದೇವಸ್ಥಾನಗಳಿಂದ ಸಂಗ್ರಹಿಸಿದ ದುಡ್ಡಲ್ಲಿ ಸರಕಾರ ಮರಳಿ ದೇವಸ್ಥಾನಗಳಿಗೆ ಕೊಟ್ಟದ್ದು 18% ಮಾತ್ರ. ಉಳಿದ 82% ಆದಾಯ, ದೇವಸ್ಥಾನಗಳಿಗೆ ಅಥವಾ ಹಿಂದೂ ಧರ್ಮಕ್ಕೆ ಯಾವ ರೀತಿಯಲ್ಲೂ ಸಂಬಂಧಿಸದ ಕೆಲಸಗಳಿಗೆ ವಿನಿಯೋಗವಾಯಿತು.
  • ಭಾರತದಲ್ಲೇ ಎರಡನೇ ಅತ್ಯಂತ ಶ್ರೀಮಂತ ದೇವಾಲಯವಾದ ತಿರುಪತಿ ವರ್ಷವೊಂದಕ್ಕೆ ಸಂಗ್ರಹಿಸಿಕೊಟ್ಟ ಆದಾಯ 31,000 ಕೋಟಿ ರೂಪಾಯಿಗಳು. ಅದರಲ್ಲಿ 85%ಕ್ಕೂ ಹೆಚ್ಚಿನ ಆದಾಯವನ್ನು ರಾಜ್ಯ ಸರಕಾರ, ಹಿಂದೂ ಧರ್ಮಕ್ಕೆ ಸಂಬಂಧವಿಲ್ಲದ ಕಾರ್ಯಗಳಿಗೆ ವಿನಿಯೋಗಿಸಿ ಕೈ ತೊಳೆದುಕೊಂಡಿತು.
  • ಕರ್ನಾಟಕಕ್ಕೆ ಬನ್ನಿ. ಇಲ್ಲಿ ತನ್ನ ವಶದಲ್ಲಿರುವ 2 ಲಕ್ಷ ದೇವಸ್ಥಾನಗಳಿಂದ ಸರಕಾರ ಗಿಟ್ಟಿಸಿದ ಬಿಟ್ಟಿ ಆದಾಯ ವರ್ಷಕ್ಕೆ 79 ಕೋಟಿ ರೂಪಾಯಿಗಳು. ಅದರಲ್ಲಿ 7 ಕೋಟಿ ರೂಪಾಯನ್ನು ದೇವಸ್ಥಾನಗಳ ಅಭಿವೃದ್ಧಿಗೆ ಮರಳಿಸಿದರೆ ಉಳಿದ ದುಡ್ಡಲ್ಲಿ 59 ಕೋಟಿ ರೂಪಾಯನ್ನು ಮದರಸಾಗಳಿಗೂ ಹಜ್ ಯಾತ್ರೆಯ ಸಬ್ಸಿಡಿಗೂ ಖರ್ಚು ಮಾಡಿತು. ಉಳಿದ 13 ಕೋಟಿ ರೂಪಾಯನ್ನು ಚರ್ಚುಗಳಿಗೆ ಕೊಟ್ಟಿತು.
  • ಕೇರಳದ ಪ್ರಸಿದ್ಧ ಗುರುವಾಯೂರು ದೇವಸ್ಥಾನದ ಅಷ್ಟೂ ಸಂಪಾದನೆಯನ್ನು ಅಲ್ಲಿನ ಸರಕಾರ ದೇವಸ್ಥಾನಗಳಿಗೆ ಯಾವ ರೀತಿಯಲ್ಲೂ ಸಂಬಂಧಿಸದ ಸರಕಾರೀ ಯೋಜನೆಗಳಿಗೆ ಬಳಸಿಕೊಂಡಿತು. ನಮ್ಮ ಕಟ್ಟಡಗಳು ಬಿದ್ದು ಹಾಳಾಗುವಂಥ ಶಿಥಿಲಾವಸ್ಥೆಯಲ್ಲಿವೆ. ದಯವಿಟ್ಟು ಅವುಗಳ ಜೀರ್ಣೋದ್ಧಾರ ಮಾಡಿ ಎಂದು ಅರ್ಜಿ ಹಾಕಿ ವಿನಂತಿಸಿಕೊಂಡಿದ್ದ 45 ದೇವಾಲಯಗಳಿಗೆ ಸರಕಾರ ಬಿಡಿಗಾಸನ್ನೂ ಬಿಡುಗಡೆ ಮಾಡಲಿಲ್ಲ.
  • ಹಿಂದೂಗಳಿಗೆ ಪವಿತ್ರವೆನಿಸಿದ ಶಬರಿಮಲೆಯ ಸಾವಿರಾರು ಎಕರೆಗಳನ್ನು ಅದೇ ಸರಕಾರ ಮಿಷನರಿ ಕಾರ್ಯಗಳಿಗೆಂದು ಬಿಟ್ಟುಕೊಟ್ಟಿದೆ.
  • ಒರಿಸ್ಸಾದ ಕತೆ ಗೊತ್ತೆ? ಪುರಿಯ ಜಗನ್ನಾಥನಿಗೆಂದು ಉಂಬಳಿ ಬಿಟ್ಟಿದ್ದ ಭೂಮಿಯಲ್ಲಿ ಬರೋಬ್ಬರಿ 70,000 ಎಕರೆಗಳನ್ನು ಸರಕಾರ ವಶಪಡಿಸಿಕೊಂಡು ಸಿಕ್ಕ ಸಿಕ್ಕವರಿಗೆ ಮಾರಿ ಸಾವಿರಾರು ಕೋಟಿ ರೂಪಾಯಿಗಳ ಆದಾಯ ಮಾಡಿಕೊಂಡಿದೆ.

ಇವಿಷ್ಟು ಕಪೋಲಕಲ್ಪಿತ ಕತೆಗಳಲ್ಲ. ನಮ್ಮ ದೇಶದ ವಿವಿಧ ರಾಜ್ಯಗಳಲ್ಲಿ ದಿನನಿತ್ಯ ನಡೆಯುತ್ತಿರುವ ಹಗಲು ದರೋಡೆಯ ವಿವರಗಳು. ದುರಂತವೆಂದರೆ, ಇವನ್ನೆಲ್ಲ ವಿದೇಶೀ ಪ್ರಜೆಯೊಬ್ಬರು ಇಲ್ಲಿಗೆ ಬಂದು ದೇವಸ್ಥಾನಗಳನ್ನು ಸುತ್ತಾಡಿ ಹಲವಾರು ಸರಕಾರೀ ಕಚೇರಿಗಳನ್ನೂ, ಇಲಾಖೆಗಳನ್ನೂ ಹತ್ತಿಳಿದು ಸಂಪೂರ್ಣ ಸತ್ಯವನ್ನು ಅನಾವರಣ ಮಾಡುವವರೆಗೂ ನಮಗೆ ಗೊತ್ತೇ ಇರಲಿಲ್ಲ! ಸ್ಟೀಫನ್ ನ್ಯಾಪ್ ಎಂಬ ವಿದೇಶಿಗ, ಹಿಂದೂ ಧರ್ಮದತ್ತ ಆಕರ್ಷಿತರಾಗಿ, ಇಲ್ಲಿಗೆ ಬಂದಿಳಿದ ಮೇಲೆ ದೇವಸ್ಥಾನಗಳಲ್ಲಾಗುತ್ತಿರುವ ಲೂಟಿಯನ್ನು ಕಣ್ಣಾರೆ ಕಂಡು ಅದರ ಹಿಂದೆ ಬಿದ್ದರು. ಹಲವು ವರ್ಷಗಳ ಹಗಲಿರುಳಿನ ಅಧ್ಯಯನ ಮಾಡಿದ ಮೇಲೆ ಅವರಿಗೆ ಈ ದೇಶದಲ್ಲಿ ದೇವಸ್ಥಾನಗಳಿಂದ ಪ್ರತಿದಿನವೂ ಅದೆಷ್ಟು ಸಹಸ್ರ ಕೋಟಿ ರೂಪಾಯಿಗಳನ್ನು ನುಂಗಿ ನೀರು ಕುಡಿಯಲಾಗುತ್ತಿದೆಯೆಂಬುದರ ವಿಶ್ವರೂಪ ಕಾಣಲುಸಿಕ್ಕಿತು. ಅವುಗಳನ್ನೆಲ್ಲ ಕ್ರೋಢೀಕರಿಸಿ Crimes Against India and the Need to Protect Ancient Vedic Tradition ಎಂಬ ಮಾಹಿತಿಪೂರ್ಣ ಪುಸ್ತಕವೊಂದನ್ನು ನ್ಯಾಪ್ 2009ರಲ್ಲಿ ಬರೆದರು. ವಿಪರ್ಯಾಸ ನೋಡಿ, ನ್ಯಾಪ್ ಅವರ ಪುಸ್ತಕ ಬಿಡುಗಡೆಯಾಗಿ 8 ವರ್ಷಗಳೇ ಕಳೆದಿವೆ. ಇಂಥದೊಂದು ದೊಡ್ಡ ಭ್ರಷ್ಟಾಚಾರ, ಅಥವಾ ಸರಕಾರೀ ಲೂಟಿ ನಮ್ಮ ಕಣ್ಣೆದುರು ನಡೆಯುತ್ತಿರುವುದು ಹಿಂದೂಗಳ್ಯಾರನ್ನೂ ಕೆರಳಿಸಿಲ್ಲ! ಲಕ್ಷಾಂತರ ಭಕ್ತರು ದೇವರಿಗೆ ಎಂದು ಸಮರ್ಪಿಸುವ ವರ್ಷಗಳ ಉಳಿತಾಯದ ಹಣ, ಅಲ್ಲೆಲ್ಲೋ ಸರಕಾರೀ ಖಜಾನೆಗೆ ಹೋಗಿ, ಅಲ್ಲಿಂದ ಹಿಂದೂಗಳಿಗೆ ಸಂಬಂಧವಿಲ್ಲದ ಕೆಲಸಗಳಿಗೆಲ್ಲ ಬಳಕೆಯಾಗುತ್ತಿದೆ ಎಂಬುದು ಒಂದು ಸಮಸ್ಯೆ ಎಂದೂ ಹಿಂದೂಗಳಿಗೆ ಅನ್ನಿಸಿಲ್ಲ!

 ಕರ್ನಾಟಕದ ವಿಷಯವನ್ನೇ ತೆಗೆದುಕೊಳ್ಳೋಣ. ಇಲ್ಲಿ ಎಲ್ಲಕ್ಕಿಂತ ಅತಿ ಹೆಚ್ಚು ಆದಾಯ ಗಳಿಸಿಕೊಡುತ್ತಿರುವ ಕ್ಷೇತ್ರ ಕುಕ್ಕೆಯ ಸುಬ್ರಹ್ಮಣ್ಯ ದೇವಸ್ಥಾನ. ಬಹುಶಃ ಈ ವರ್ಷ ಇದರ ಆದಾಯ 100 ಕೋಟಿ ರೂಪಾಯಿ ಮುಟ್ಟಬಹುದು. ಆದರೆ ದೇವಸ್ಥಾನದ ಒಳಗಿನ ಗರ್ಭಗುಡಿಯ ಛಾವಣಿ ಮಳೆಗಾಲದಲ್ಲಿ ಸೋರುತ್ತಿದೆ! ನಿಜಕ್ಕೂ ಸಂಕಲ್ಪಶಕ್ತಿ ಇದ್ದಿದ್ದರೆ ಈ ದೇವಸ್ಥಾನದ ಸಂಪೂರ್ಣ ಜೀರ್ಣೋದ್ಧಾರವನ್ನು ಸರಕಾರ ಮಾಡಬಹುದಿತ್ತು; ಕ್ಷೇತ್ರದ ಆಸುಪಾಸಿನಲ್ಲಿ ಭಕ್ತರಿಗಾಗಿ ಉಚಿತ ಅಥವಾ ಕಡಿಮೆ ದರದ ಉತ್ತಮ ಗುಣಮಟ್ಟದ ಛತ್ರಗಳನ್ನು ಕಟ್ಟಿಸಬಹುದಿತ್ತು; ದೇವಸ್ಥಾನದ ವತಿಯಿಂದ ನೂರಾರು ಶಾಲೆಗಳನ್ನು ನಡೆಸಬಹುದಿತ್ತು; ಉತ್ತಮ ಕಲ್ಯಾಣ ಮಂಟಪಗಳನ್ನು ಕಟ್ಟಿಸಿ ಬಡವರಿಗೆ ಉಚಿತವಾಗಿ ನೀಡಬಹುದಿತ್ತು. ಇತ್ತು..ಇತ್ತು..ಇತ್ತು, ಅಷ್ಟೆ! ಆದರೆ ಅವ್ಯಾವುವೂ ಆಗಿಲ್ಲ. ದೇವಸ್ಥಾನವೆಂಬ ಚಿನ್ನದ ಮೊಟ್ಟೆ ಇಡುವ ಕೋಳಿಯು ಗಳಿಸಿಕೊಟ್ಟ ಆದಾಯವನ್ನೆಲ್ಲ ಸರಕಾರ ನಷ್ಟದಲ್ಲಿ ಮುಳುಗೇಳುತ್ತಿರುವ ಇಲಾಖೆಗಳ ಹೆಗ್ಗಣಗಳ ಬಾಯಿಗೆ ಹಾಕುವ ಕೆಲಸವನ್ನಷ್ಟೇ ಮಾಡುತ್ತಿದೆ. ಯಾರದ್ದೋ ದುಡ್ಡು, ಎಲ್ಲಮ್ಮನ ಜಾತ್ರೆ ಎಂಬುದು ತಿರುವುಮುರುವಾಗಿ ಇಲ್ಲಿ ಎಲ್ಲಮ್ಮನ ದುಡ್ಡು, ಸರಕಾರದ ಜಾತ್ರೆ ಎಂಬಂತಾಗಿದೆ.

 ಈ ಎಲ್ಲ ಹಿನ್ನೆಲೆಯಲ್ಲಿ ನಾವು ಇದೀಗ ಕೇರಳದ ಗುರುವಾಯೂರಿನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳನ್ನು ನೋಡಬೇಕು. ಗುರುವಾಯೂರಿನ ಪಾರ್ಥಸಾರಥಿ ದೇವಸ್ಥಾನವನ್ನು ಕೇರಳ ಸರಕಾರ ತನ್ನ ದೇವಸ್ವಮ್ ಇಲಾಖೆಯ ಸುಪರ್ದಿಗೆ ತರಬೇಕೆಂದು ಪ್ರಯತ್ನಪಡುತ್ತಿರುವುದು ಇಂದು ನಿನ್ನೆಯ ಸಂಗತಿಯಲ್ಲ. ರಾಜ್ಯದೊಳಗಿರುವ ಯಾವುದಾದರೂ ದೇವಾಲಯ ಅಲ್ಪಸ್ವಲ್ಪ ಲಾಭ ದಾಖಲಿಸುತ್ತಿದೆಯೆಂಬ ವಾಸನೆ ಸಿಕ್ಕರೆ ಸಾಕು, ಆ ಕೂಡಲೇ ದೇವಸ್ವಮ್ ಚುರುಕಾಗುತ್ತದೆ. ಆ ದೇವಾಲಯದಲ್ಲಿ ಇಲ್ಲದ ವಿವಾದಗಳನ್ನು ಸೃಷ್ಟಿಸುತ್ತದೆ. ಅಲ್ಲಿ ಭ್ರಷ್ಟಾಚಾರ ನಡೆಯುತ್ತಿದೆಯೆಂಬ ಹುಯಿಲು ಹಬ್ಬಿಸುತ್ತದೆ. ದೇವಾಲಯದ ಆಡಳಿತ ನೋಡಿಕೊಳ್ಳುತ್ತಿರುವವರನ್ನು ಇಲ್ಲಸಲ್ಲದ ಪ್ರಕರಣಗಳಲ್ಲಿ ಸಿಕ್ಕಿಸಿ, ಆ ಮೂಲಕ ದೇವಾಲಯವನ್ನು ತನ್ನ ಸುಪರ್ದಿಗೆ ಕೊಡಬೇಕೆಂದು ನ್ಯಾಯಾಲಯವನ್ನು ಕೋರುತ್ತದೆ. ಇಂಥ ಬೇಡಿಕೆಯೊಂದು ಸರಕಾರದಿಂದ ಬರಲಿ ಎಂದೇ ಕಾದು ಕೂತಿರುವಂಥ ನ್ಯಾಯಾಲಯಗಳು ಕೂಡಲೇ ದೇವಾಲಯವನ್ನು ವಶಪಡಿಸಿಕೊಳ್ಳುವ ಆದೇಶವನ್ನೂ ಕೊಟ್ಟುಬಿಡುತ್ತವೆ. ಹೀಗೆ ಯಾವುದೇ ಕಷ್ಟ ಇಲ್ಲದೆ, ಯಾವ ರೀತಿಯಲ್ಲೂ ಬೆವರು ಹರಿಸದೆ, ದೇವಸ್ವಮ್ ಇಲಾಖೆ ಒಂದು ಚಿನ್ನದ ಮೊಟ್ಟೆ ಇಡುವ ಕೋಳಿಯನ್ನು ತನ್ನ ಬುಟ್ಟಿಗೆ ಹಾಕಿಕೊಳ್ಳುತ್ತದೆ! ಗುರುವಾಯೂರಿನ ಪಾರ್ಥಸಾರಥಿ ದೇವಾಲಯ ಅದರ ಸಧ್ಯದ ಟಾರ್ಗೆಟ್.

 ಪಾರ್ಥಸಾರಥಿ ದೇವಸ್ಥಾನದಲ್ಲಿ ಭ್ರಷ್ಟಾಚಾರ ನಡೆದಿದೆ, ಮೊಕ್ತೇಸರರು ದುಡ್ಡಿನ ಅವ್ಯವಹಾರ ಮಾಡಿದ್ದಾರೆ ಎಂಬುದು ದೇವಸ್ವಮ್‌ನ ಆರೋಪ. ಭ್ರಷ್ಟಾಚಾರ ನಡೆದಿದ್ದರೆ ಪೊಲೀಸ್ ಕೇಸ್ ದಾಖಲಿಸಬಹುದು. ನ್ಯಾಯಾಲಯದಲ್ಲಿ ದಾವೆ ಹೂಡಬಹುದು. ಭ್ರಷ್ಟಾಚಾರ ನಡೆದಿರುವುದು ಸಾಬೀತಾಯಿತೆಂದೇ ಇಟ್ಟುಕೊಳ್ಳೋಣ; ಆ ನಷ್ಟವನ್ನು ತಪ್ಪಿತಸ್ಥನಿಂದ ತುಂಬಿಸಿಕೊಳ್ಳಬಹುದು. ತಪ್ಪಿತಸ್ಥನನ್ನು ಕಾನೂನಿನ ಮೂಲಕ ಶಿಕ್ಷಿಸಬಹುದು. ಭ್ರಷ್ಟಾಚಾರ ನಡೆಯಿತೆಂದ ಮಾತ್ರಕ್ಕೆ ದೇವಾಲಯವನ್ನು ಏಕಾಏಕಿ ಸರಕಾರ ವಹಿಸಿಕೊಳ್ಳಬೇಕೆಂದು ಕಾನೂನು ಮಾಡಿದವರು ಯಾರು? ಸರಕಾರದ ಸುಪರ್ದಿಗೆ ಬಂದಮೇಲೆ ಈ ದೇವಾಲಯಗಳಲ್ಲಿ ಭ್ರಷ್ಟಾಚಾರ ಆಗುವುದಿಲ್ಲ ಎಂದು ಏನು ಖಾತರಿ ಇದೆ? ಕಳೆದೆರಡು ತಿಂಗಳಿಂದ ಗುರುವಾಯೂರಿನ ಪಾರ್ಥಸಾರಥಿ ಎಲ್ಲ ಹೈ ಡ್ರಾಮಾಗಳಿಗೂ ಸಾಕ್ಷಿಯಾಗಿದ್ದಾನೆ. ಒಂದೂವರೆ ತಿಂಗಳ ಹಿಂದೆ ಸೆಪ್ಟೆಂಬರ್ 22ರಂದು, ದೇವಸ್ವಮ್‌ನ ಅಧಿಕಾರಿಗಳು ಈ ದೇವಾಲಯಕ್ಕೆ ನುಗ್ಗಲು ಯತ್ನಿಸಿದ್ದರು. ಆದರೆ ದೇವಾಲಯದ ಭಕ್ತರು ಮತ್ತು ಆಡಳಿತ ಮಂಡಳಿಯವರು ಅದಕ್ಕೆ ಅವಕಾಶ ಕೊಟ್ಟಿರಲಿಲ್ಲ. ಭಕ್ತರು ದೇವಾಲಯದ ಒಳಗಿಂದ ಅಗುಳಿ ಹಾಕಿ ದೇವಸ್ವಮ್‌ನವರಿಗೆ ಪ್ರವೇಶ ನಿರಾಕರಿಸಿದ್ದರು.

ಆದರೆ, ಛಲ ಬಿಡದ ದೇವಸ್ವಮ್ ಇದೇ ನವೆಂಬರ್ 7ರಂದು ಮುಂಜುಮುಂಜಾನೆ ಮೂರು ಗಂಟೆಯ ಹೊತ್ತಿಗೆ ಸಕಲ ಸಶಸ್ತ್ರ ಪೊಲೀಸ್ ವ್ಯವಸ್ಥೆಯ ಬೆಂಬಲದೊಂದಿಗೆ ದೇವಾಲಯಕ್ಕೆ ನುಗ್ಗಿ ಭಂಡಾರದ ಕೀಲಿಕೈಗಳನ್ನು ವಶಪಡಿಸಿಕೊಂಡಿದೆ.

 ಕೆಲವು ವರ್ಷಗಳ ಹಿಂದೆ, ಕೆಲವು ದೇವಸ್ಥಾನಗಳನ್ನು ಆಯಾ ಊರುಗಳ ವಿಶ್ವಸ್ಥ ಮಂಡಳಿಗಳಿಗೆ ಬಿಟ್ಟುಕೊಡೋಣ ಎಂಬ ಪ್ರಸ್ತಾಪ ಬಂದಾಗ ಮಲಬಾರ್ ದೇವಸ್ವಮ್‌ನವರು ಮುಷ್ಕರ ಮಾಡಿ ವಿರೋಧಿಸಿದ್ದರು. ಒಂದೊಂದು ದೇಗುಲದಿಂದಲೂ ಇವರು ನುಂಗಿ ನೊಣೆಯುತ್ತಿರುವ ಪಾಯಸದೂಟದ ಪ್ರಮಾಣ ಎಷ್ಟು ಎಂಬುದನ್ನು ಈ ಘಟನೆಯಿಂದಲೇ ಅಂದಾಜಿಸಬಹುದು. ಒಂದೆರಡು ವರ್ಷಗಳ ಹಿಂದೆ, ಉತ್ಸವಗಳ ಸಂದರ್ಭದಲ್ಲಿ ದೇವಾಲಯಗಳಲ್ಲಿ ಸುಡುಮದ್ದು ಬಳಸಬಹುದೇ ಎಂಬ ಚರ್ಚೆ ನಡೆದಾಗ ಮಲಬಾರ್ ದೇವಸ್ವಮ್ ಅದನ್ನೂ ವಿರೋಧಿಸಿತ್ತು! ಹಿಂದೂಗಳನ್ನು ಕೆರಳಿಸುವ, ಅವರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡುವ ಯಾವ ಕಾನೂನಿದ್ದರೂ ಅದನ್ನು ತೆರೆದ ಬಾಹುಗಳಿಂದ ಸ್ವಾಗತಿಸುವ ದೇವಸ್ವಮ್, ಅದೇ ಹಿಂದೂಗಳ ಕಾಸಿನಲ್ಲಿ ತನ್ನ ಹೊಟ್ಟೆ ಹೊರೆಯುತ್ತಿದೆ ಎಂಬುದು ಆಶ್ಚರ್ಯ ಮತ್ತು ವಿಪರ್ಯಾಸದ ಸಂಗತಿ.

ನಿಜವಾಗಿಯೂ ಹಿಂದೂಗಳಿಗೆ ಏನಾಗಿದೆ?

ಯಾಕೆ ನಾವು ಇನ್ನೂ ಇನ್ನೂ ನಮ್ಮ ದೇವಾಲಯಗಳನ್ನು ಸರಕಾರಗಳ ನಿಯಂತ್ರಣಕ್ಕೆ ಬಿಟ್ಟುಕೊಡುತ್ತಿದ್ದೇವೆ? ದೇವಸ್ಥಾನಗಳನ್ನು ಸರಕಾರ ನಡೆಸಬೇಕು ಎಂದು ಯಾವ ಕಾನೂನು ಹೇಳಿದೆ? ಸಂವಿಧಾನದಲ್ಲಂತೂ ಈ ಪ್ರಸ್ತಾಪ ಇಲ್ಲ. ಸರಕಾರಗಳು, ಅನಾಯಾಸವಾಗಿ ಮೆಲ್ಲಬಹುದಾದ ಜೇನುಗೂಡುಗಳು ಎಂಬ ಕಾರಣಕ್ಕೆ ದೇವಸ್ಥಾನಗಳನ್ನು ನಿರ್ವಹಿಸುತ್ತಿವೆಯೇ ಹೊರತು ಅವಕ್ಕೆ ಹಿಂದೂ ಭಾವನೆಗಳ ಮೇಲೆ ಎಳ್ಳಷ್ಟೂ ಕಾಳಜಿ ಇಲ್ಲ ಎಂಬುದು ಮತ್ತೆ ಮತ್ತೆ ಸಾಬೀತಾದ ಸಂಗತಿ. ನಮ್ಮ ರಾಜ್ಯದಲ್ಲಿ ಇತ್ತೀಚೆಗೆ ಮುಖ್ಯಮಂತ್ರಿಗಳು ಕೋಳಿ, ಮೀನು ತಿಂದು ದೇವಸ್ಥಾನಕ್ಕೆ ಹೋಗಿದ್ದರು. ಹಾಗೆ ಹೋಗಿಬಂದ ಮೇಲೆ ತನ್ನ ನಡೆಯನ್ನು ಸಮರ್ಥಿಸಿಕೊಂಡೂ ಮಾತಾಡಿದರು. ಇನ್ನು ಕೆಲದಿನಗಳಲ್ಲಿ ಅವರು ಚಪ್ಪಲಿ ಹಾಕಿಕೊಂಡೇ ದೇಗುಲದ ಒಳ ಹೋಗಿ, ಅದನ್ನೂ ಸಮರ್ಥಿಸಿಕೊಂಡರೂ ನಾವೆಲ್ಲ ತೆಪ್ಪಗೆ ಒಪ್ಪಿಕೊಳ್ಳುತ್ತೇವೆ. ಯಾಕೆಂದರೆ ಅವೆಲ್ಲ ತಪ್ಪು, ಅಂಥ ವಿಷಯಗಳಿಗೆ ಉಗ್ರವಾಗಿ ಪ್ರತಿಭಟಿಸಬೇಕು ಎಂಬ ಪ್ರಜ್ಞೆ ಕೂಡ ಹಿಂದೂಗಳಲ್ಲಿ ಇಂಗಿಹೋಗಿದೆ. ಕರ್ನಾಟಕ ರಾಜ್ಯದಲ್ಲಿರುವ ಮುಜರಾಯಿ ದೇವಸ್ಥಾನಗಳಲ್ಲಿ ಒಂದು ಸುತ್ತು ಹೊಡೆದು ಬನ್ನಿ. ಅವ್ಯವಸ್ಥೆ, ಅಶುಚಿ, ಅವ್ಯವಹಾರಗಳು ಕಣ್ಣಿಗೆ ರಾಚುತ್ತವೆ. ನಮ್ಮ ಮುಜರಾಯಿ ದೇವಸ್ಥಾನಗಳು ಇತ್ತೀಚೆಗೆ ದುಡ್ಡು ಸಂಗ್ರಹಿಸುವ ಸುಂಕದ ಕಟ್ಟೆಗಳಾಗಿವೆಯೇ ಹೊರತು ನಿಜಾರ್ಥದಲ್ಲಿ ಧಾರ್ಮಿಕ ಶ್ರದ್ಧಾಕೇಂದ್ರಗಳಾಗಿ ಉಳಿದಿಲ್ಲ. ರಾಜ್ಯದ ಹೆಚ್ಚಿನ ಮುಜರಾಯಿ ದೇವಸ್ಥಾನಗಳಲ್ಲಿ ಕಲೆ, ಸಂಸ್ಕೃತಿಗಳನ್ನು ಉತ್ತೇಜಿಸುವ ಯಾವ ಕಾರ್ಯಕ್ರಮಗಳೂ ಇಲ್ಲ. ದೇವಸ್ಥಾದ ದುಡ್ಡಲ್ಲಿ ನಡೆಸುವ ಗೋಶಾಲೆಗಳಿಲ್ಲ. ದೇವಸ್ಥಾನದಲ್ಲಿ ಒಳ್ಳೆಯ ಬಿಸಿಯೂಟದ ವ್ಯವಸ್ಥೆ ಇಲ್ಲ. ದೇವಸ್ಥಾನದ ಆವರಣದಲ್ಲಿ ಸುಲಭ ದರಕ್ಕೆ ಕೋಣೆ ಬಾಡಿಗೆ ಕೊಡುವ ಛತ್ರಗಳಿಲ್ಲ. ಮುಜರಾಯಿ ದೇವಸ್ಥಾನಗಳ ಪುಷ್ಕರಣಿಗಳನ್ನು ನೋಡಿಕೊಳ್ಳುವುದಕ್ಕೂ ಜನ ಇಲ್ಲ. ಕೇರಳದ ಸ್ಥಿತಿ ಕೂಡ ಹೆಚ್ಚುಕಡಿಮೆ ಹೀಗೆಯೇ ಇದೆ. ಇವೆರಡೇ ಏನು, ಭಾರತದ ಹೆಚ್ಚಿನ ರಾಜ್ಯಗಳಲ್ಲಿ ಸರಕಾರಗಳ ನಿಯಂತ್ರಣದಲ್ಲಿರುವ ದೇವಸ್ಥಾನಗಳಲ್ಲಿ ಒಂದು ಬಗೆಯ ಕೃತಕತೆ ಕಣ್ಣಿಗೆ ಹೊಡೆದು ಕಾಣುತ್ತದೆ. ಧರ್ಮಕ್ಷೇತ್ರವೆಂಬ ಪಾವಿತ್ರ್ಯ ಹೋಗಿ ಅವೆಲ್ಲ ದುಡ್ಡು ಬಾಚಲು ತೆರೆಯಲ್ಪಟ್ಟ ವಾಣಿಜ್ಯ ಮಳಿಗೆಗಳ ಸ್ವರೂಪ ಪಡೆಯುತ್ತಿವೆ.

ನೆನಪಿಡಿ: ಈ ದೇಶದಲ್ಲಿ ಚರ್ಚುಗಳು, ಮಸೀದಿಗಳು ಜನರಿಂದ ಸಂಗ್ರಹಿಸುವ ದುಡ್ಡಿನಲ್ಲಿ ಒಂದೇ ಒಂದು ರೂಪಾಯಿ ಕೂಡ ಸರಕಾರದ ಖಜಾನೆಗೆ ಹೋಗುವುದಿಲ್ಲ. ಆದರೆ, ಚರ್ಚು, ಮಸೀದಿಗಳ ನಿರ್ವಹಣೆಗೆ ಸರಕಾರ ಕೊಡುವ ಲಕ್ಷ ಲಕ್ಷ ಅನುದಾನದಲ್ಲಿ ಹಿಂದೂ ಭಕ್ತರು ದೇವಸ್ಥಾನಗಳಲ್ಲಿ ಹುಂಡಿಗೆ ಹಾಕಿದ ದುಡ್ಡಿನ ಅಂಶ ಇರುತ್ತದೆ. ಈ ಬಗ್ಗೆ ಮೊದಲು ಜಾಗೃತಿ, ಬಳಿಕ ಹೋರಾಟ – ರೂಪಿಸದೆ ಹೋದರೆ ಹಿಂದೂಗಳ ಅವನತಿಯನ್ನು ಈ ಹಿಂದೂಸ್ತಾನದಲ್ಲಿ ತಡೆಯುವುದು ಯಾರಿಗೂ ಸಾಧ್ಯವಿಲ್ಲದ ಮಾತು!

   

Leave a Reply