ದೇವರ ಆರಾಧನೆಯಿಂದ ಹೆಚ್ನಚಿ ಫಲ ಲಭ್ಯ: ಶ್ರೀಗಳು

ಶಿವಮೊಗ್ಗ - 0 Comment
Issue Date : 04.03.2014

ಹೊಸನಗರ: ಸಾಮೂಹಿಕವಾಗಿ ದೇವರನ್ನು ಆರಾಧಿಸುವುದರಿಂದ ಹೆಚ್ಚಿನ ಫಲವು ಲಭಿಸುವುದು ಎಂದು ಕೂಡ್ಲಿ ಶೃಂಗೇರಿ ಮಹಾಸಂಸ್ಥಾನದ ಡಾ. ವಿದ್ಯಾಭಿನವ ವಿದ್ಯಾರಣ್ಯ ಭಾರತಿ ಸ್ವಾಮಿಗಳವರು ಅಭಿಪ್ರಾಯಪಟ್ಟಿದ್ದಾರೆ.
ಕಾರಣಗಿರಿ ರಾಷ್ಟ್ರೋತ್ಥಾನ ಬಳಗದ ಆಶ್ರಯದಲ್ಲಿ ಸಿದ್ಧಿವಿನಾಯಕ ಸಭಾಭವನದಲ್ಲಿ ಸಹಸ್ರಾಧಿಕ ಸಾಮೂಹಿಕ ಸತ್ಯನಾರಾಯಣ ಪೂಜೆಯ ಧರ್ಮಜಾಗರಣ ಸಭೆಯಲ್ಲಿ ಅವರು ಮಾತನಾಡುತ್ತಿದ್ದರು.
ಧರ್ಮವನ್ನು ಆಚರಿಸುವುದರ ಮೂಲಕ ಅದನ್ನು ಉಳಿಸಬೇಕಾಗಿದೆ. ಧರ್ಮವೆಂದರೆ ಕೇವಲ ಪೂಜೆ ಪುನಸ್ಕಾರಗಳಷ್ಟೇ ಅಲ್ಲ. ಇನ್ನೊಬ್ಬರಿಗೆ ಹಿತವಾಗುವಂತೆ ಮಾಡುವ ಎಲ್ಲ ಒಳ್ಳೆಯ ಕೆಲಸಗಳೂ ಧರ್ಮವೇ. ಸಾಮೂಹಿಕ ಸತ್ಯನಾರಾಯಣ ಪೂಜೆಯಿಂದ ಸಮಾಜದಲ್ಲಿ ಸಾಮರಸ್ಯ ಉಂಟಾಗಲು ಸಾಧ್ಯ ಎಂದರು.
ಖ್ಯಾತ ವಾಗ್ಮಿ ಹಿರೇಮಗಳೂರು ಕಣ್ಣನ್ ಮಾತನಾಡಿ, ಸತ್ಯನಾರಾಯಣ ಪೂಜೆಯನ್ನು ಮಾಡುವುದಷ್ಟೇ ಅಲ್ಲದೆ ಅದರಲ್ಲಿನ ತಾತ್ವಿಕ ಹಿನ್ನೆಲೆಯನ್ನು ಮೈಗೂಡಿಸಿಕೊಳ್ಳಬೇಕು. ಭಕ್ತಿ ಶ್ರದ್ಧೆಗಳಿಂದ ಪೂಜೆ ಮಾಡುವುದಲ್ಲದೆ ಸಮಾಜಕ್ಕೆ ಒಳಿತಾಗುವಂತೆ ನಡೆದುಕೊಳ್ಳಬೇಕು ಎಂದರು. ಡಾ. ಹಾದಿಗಲ್ಲು ಲಕ್ಷ್ಮೀನಾರಾಯಣರವರು ಸತ್ಯನಾರಾಯಣ ವ್ರತ ಕಥೆಯ ಮಹಿಮೆಯನ್ನು ವಿವರಿಸಿ ಸತ್ಯವನ್ನು ನುಡಿಯುವುದು ಮತ್ತು ಧರ್ಮದಂತೆ ನಡೆಯುವುದು ಅವಶ್ಯ. ಭಗವಂತನ ಪೂಜೆಯೆಂದರೆ ಭಾರತಾಂಬೆಯ ಪೂಜೆಯಾಗಬೇಕು. ದೇಶದ ಹಿತಕ್ಕಾಗಿ ಎಲ್ಲರೂ ಕೆಲಸ ಮಾಡಬೇಕೆಂದರು.
ಕುಶಲಕರ್ಮಿ ಕಿಟ್ಟಿಕುಲಾಲ ಹಾಗೂ ಅಂಬಿಗ ಶಂಕರ ಬಿಲ್ಸಾಗರ ಇವರನ್ನು ಸನ್ಮಾನಿಸಲಾಯಿತು. ಬಳಗದ ಅಧ್ಯಕ್ಷ ಎನ್.ಡಿ ನಾಗೇಂದ್ರ ರಾವ್ ಅಧ್ಯಕ್ಷತೆ ವಹಿಸಿದ್ದರು. ಕಲಾಭಾರತಿ ತಂಡ ಪ್ರಾರ್ಥಿಸಿ, ಹನಿಯ ರವಿ ನಿರೂಪಿಸಿ, ವಿ.ಎನ್. ಸುಬ್ರಹ್ಮಣ್ಯ ವಂದಿಸಿದರು.

   

Leave a Reply