ದೇಹದಿಂದ ದೂರವಾದೆ ಏಕೆ ಆತ್ಮವೇ ಈ ಸಾವು ನ್ಯಾಯವೇ?

ಯುವ - 0 Comment
Issue Date : 08.05.2015

ಅಶ್ವಂ ನೈವ ಗಜಂ ನೈವ
ವ್ಯಾಘ್ರಂ ನೈವ ಚ ನೈವ ಚ
ಅಜಾಪುತ್ರಂ ಬಲಿಂ ದದ್ಯಾತ್
ದೇವೋ ದುರ್ಬಲ ಘಾತಕಃ

ಈ ಶ್ಲೋಕ ಹೇಳುವಂತೆ, ಯಾರು ಕೂಡಾ ದೇವರಿಗೆ ಕುದುರೆ, ಆನೆ ಮತ್ತು ಹುಲಿಯನ್ನು ಬಲಿ ಕೊಡುವುದಿಲ್ಲ. ದುರ್ಬಲವಾದಂತಹ ಕುರಿಮರಿಯನ್ನೇ ಬಲಿ ಕೊಡುತ್ತಾರೆ. ನಮ್ಮ ದೇಶದಲ್ಲಿ ರೈತನನ್ನು ನೋಡಿದರೆ ಅದೇ ರೀತಿ ಅನಿಸುತ್ತದೆ. ಆತ್ಮಹತ್ಯೆ ಮಹಾಪಾಪ ಎಂದು ಹೇಳುವ ದೇಶ ನಮ್ಮದು. ಆದರೆ ನಮ್ಮ ದೇಶದಲ್ಲೇ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಜಾಸ್ತಿಯಾಗುತ್ತ ಹೊರಟಿದೆ. ಈಗಿನ ಕಾಲಘಟ್ಟದಲ್ಲಿ ಆತ್ಮಹತ್ಯೆ ಎಂದರೆ ಮಕ್ಕಳು ಆಡುವ ಆಟದಂತಾಗಿದೆ. ಯಾವ್ಯಾವುದೋ ಚಿಕ್ಕ ಚಿಕ್ಕ ವಿಷಯಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಆಗ್ರಸ್ಥಾನದಲ್ಲಿ ನಮ್ಮ ರೈತ ಸಮುದಾಯವು ಒಂದು.
ಭಾರತದ ಅನ್ನದಾತ, ಭಾರತದ ಬೆನ್ನೆಲುಬು, ಕೋಟ್ಯಾಂತರ ಜನರಿಗೆ ತನ್ನ ಬೆವರು ಸುರಿಸಿ ಬೆಳೆ ಬೆಳೆದು ಅನ್ನ ನೀಡುವಂತಹ ಶ್ರಮಜೀವಿ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಒಂದು ವಿಷಾದದ ಸಂಗತಿ. ಸಾವಿರಾರು ಜನ ರೈತರು ತಾವು ಮಾಡಿದ ಸಾಲ ತೀರಿಸಲಾಗದೆ, ತಾನು ಸತ್ತ ಮೇಲೆ ಅನುಕಂಪದಿಂದ ಸರ್ಕಾರ ನೀಡುವ ಹಣ ಬಂದು ಮನೆ ನಡೆದರೆ ಸಾಕು ಎಂಬ ಚಿಂತನೆಯಿಂದಲೋ ಅಥವಾ ಇನ್ನು ಅನೇಕ ಕಾರಣಗಳಿಂದಲೋ ಆತ್ಮಹತ್ಯೆ ಮಾಡಿಕೊಳ್ಳಲಾಗುತ್ತಿದೆ. ಇದಕ್ಕೆಲ್ಲಾ ನಾವು ಸರ್ಕಾರವನ್ನು ದೂಷಿಸುತ್ತೇವೆ. ಆದರೆ ಸರ್ಕಾರದಷ್ಟೇ ನಾವೂ ಕಾರಣರೆಂಬುವುದನ್ನು ರೈತ ಸಮುದಾಯ ಮರೆತಿದೆ ಎನ್ನಿಸುತ್ತದೆ. ಹಿಂದೆ ಕೆಲವೊಂದು ಗಾದೆ ಇದ್ದವು, ಈಗಲೂ ಪ್ರಚಲಿತದಲ್ಲಿವೆ. ಉದಾ: ಹಾಸಿಗೆ ಇದ್ದಷ್ಟು ಕಾಲುಚಾಚು, ಕೈ ಕೆಸರಾದರೆ ಬಾಯಿ ಮೊಸರು, ಆಳಾಗಿ ದುಡಿ ಅರಸನಾಗಿ ಉಣ್ಣು ಇತ್ಯಾದಿ ಸೇರಿದಂೆ ಇನ್ನೂ ಅನೇಕ ಗಾದೆಗಳಿವೆ. ಆಗಿನ ಕಾಲದಲ್ಲಿ ಸ್ವಾಭಿಮಾನಿಯಾಗಿ ಬದುಕುತ್ತಿದ್ದ ರೈತ ಇಂದು ಸರ್ಕಾರದೆದುರು ಕೈಚಾಚಿ ನಿಲ್ಲುವ ಪರಿಸ್ಥಿತಿಯಿದೆ. ಸಾವಿರಾರು ಜನರಿಗೆ ಅನ್ನ ನೀಡುವ ಅನ್ನದಾತ ಇಂದು ಬೇರೆಯವರ ಎದುರಿಗೆ ಹಸಿವು ತೀರಿಸಿಕೊಳ್ಳಲು ಕೈಯ್ಯೊಡ್ಡುವ ಪರಿಸ್ಥಿತಿಗೆ ಬರಲು ಯಾರು ಕಾರಣರೆಂದು ರೈತ ಸಮುದಾಯ ಮನವರಿಕೆ ಮಾಡಿಕೊಳ್ಳಬೇಕಾಗಿದೆ.
ಮೊದಲು ಸುಗ್ಗಿಯ ಕಾಲದಲ್ಲಿ ರೈತರು ಕುಣಿದು ಕುಪ್ಪಳಿಸುತ್ತಿದ್ದರು. ಸುಗ್ಗಿಯು ಬಂದಿತು ಹಿಗ್ಗನು ತಂದಿತು ನಮ್ಮಯ ನಾಡಿನ ಜನಕೆಲ್ಲಾ – ಸಗ್ಗದ ಸುಖವನು ನೀಡಿತು ಇತ್ಯಾದಿ ಹಾಡಿಕೊಳ್ಳುತ್ತ ಸುಗ್ಗಿಯು ಮುಗಿದ ಮೇಲೆ ಎಲ್ಲರೂ ಚೆನ್ನಾಗಿ ಕೆಲಸವನ್ನು ಮುಗಿಸಿ ಮುಂದೆ ಸುಗ್ಗಿಯ ಕಾಲಕ್ಕೆ ಕಾಯುತ್ತಿದ್ದರು. ಆದರೆ ಈಗ ಅದೇ ಹಳ್ಳಿ ಜನ ಆಡಂಬರ ಜೀವನಕ್ಕೆ ಮೊರೆ ಹೋಗಿ, ಹಳ್ಳಿಗಳನ್ನು ಬಿಟ್ಟು ಬೆಂಗಳೂರು, ಪುಣೆ, ಮುಂಬೈ ನಂತಹ ದೊಡ್ಡ ದೊಡ್ಡ ನಗರಗಳಿಗೆ ವಲೆ ಹೋಗುತ್ತಿದ್ದಾರೆ. ಆದ್ದರಿಂದ ರೈತರಿಗೆ ಕೂಲಿ ಕಾರ್ಮಿಕರ ಅಭಾವ ಜಾಸ್ತಿಯಾಗುತ್ತಿದೆ. ಹಳ್ಳಿಗಳು ತನ್ನ ಹಿಂದಿನ ವೈಭವ, ತನ್ನದೇ ಆದ ಹಿರಿಮೆಯನ್ನು ಕಳೆದುಕೊಳ್ಳುತ್ತಿದೆ. ಕೂಲಿ ಕಾರ್ಮಿಕರು ಸಿಗದ ಕಾರಣ ರೈತರು ಬೇರೆ ಬೇರೆ ದೂರದ ಊರುಗಳಿಂದ ಕೂಲಿ ಕಾರ್ಮಿಕರನ್ನು ಅವರು ಕೇಳಿದಷ್ಟು ಹಣಕೊಟ್ಟು ಅವರಿಗೆ ವಾಹನದ ಸೌಲಭ್ಯವನ್ನೂ ಮಾಡಿ ಕರೆಸಿಕೊಳ್ಳಬೇಕಾದ ವಿಪರ್ಯಾಸ ಉಂಟಾಗಿದೆ.
ಇದು ರೈತರಿಗೆ ಒಂದು ಸವಾಲಾಗಿ ಪರಿಣಮಿಸಿದೆ (ಇದು ಹೈದ್ರಾಬಾದ್ – ಕರ್ನಾಟಕದ ಕೆಲವೊಂದು ಗ್ರಾಮಗಳಲ್ಲಿ ಚಾಲ್ತಿಯಲ್ಲಿದೆ). ಸರ್ಕಾರದ ಸೊಸೈಟಿಗಳು ರಸಗೊಬ್ಬರ ಸರಿಯಾಗಿ ಪೂರೈಸದೇ ಇರುವುದು, ಎಲ್ಲ ಇದ್ದರೂ ಸರಿಯಾದ ಸಮಯಕ್ಕೆ ಮಳೆಬಾರದೆ ಇರುವುದು ರೈತನನ್ನ ತಲೆ ಮೇಲೆ ಕೈ ಇಟ್ಟುಕೊಂಡು ಕೂರುವ ಹಾಗೆ ಮಾಡುತ್ತದೆ. ‘ದೇವರು ವರಕೊಟ್ಟರೂ ಪೂಜಾರಿ ವರ ಕೊಡಲಿಲ್ಲ’ ಎಂಬ ಗಾದೆ ಮಾತಿದೆ. ಅದೇ ರೀತಿ ಬೆೆ ಚೆನ್ನಾಗಿಬಂದರೂ ಸರ್ಕಾರ ರೈತರಿಗೆ ಬೆಂಬಲ ಬೆಲ ಕೊಡುವುದಿಲ್ಲ. ಲಕ್ಷಾಂತರ ರೂಪಾಯಿ ಸಾಲ ಮಾಡಿದ ರೈತನ ಆತ್ಮಸ್ಥೈರ್ಯ ಅಲ್ಲಿಯೇ ಕುಗ್ಗಿ ಹೋಗುತ್ತದೆ. ಸಾಲಗಾರರೆಲ್ಲ ಮನೆಯ ಮುಂದೆ ಬಂದಾಗ ಅವರಿಗೆ ಕೊಡಲು ಹಣವಿಲ್ಲ, ಮನೆಯಲ್ಲಿ ಬೆಳೆದ ಬೆಳೆಯೂ ಇಲ್ಲದ ಸ್ಥಿತಿ. ಬೆಳೆ ಸರ್ಕಾರದ ಗೋಡನ್‌ನಲ್ಲಿದ್ದರೂ ಬೇಗನೆ ಹಣ ಕೊಡದ ಸರ್ಕಾರ ಇತ್ಯಾದಿ ಕಾರಣಗಳಿಂದ ನೊಂದ ರೈತ ಹಣವಿಲ್ಲದ ಕಾರಣ ಆತ್ಮಹತ್ಯೆಗೆ ಶರಣಾಗುವ ಪ್ರಸಂಗ ಬಂದೊದಗುತ್ತದೆ. ಬಂದ ಕಷ್ಟವನ್ನು ಎದುರಿಸಲಾಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಇದಕ್ಕೆ ಸರ್ಕಾರವೇ ನೇರ ಹೊಣೆ ಹೊರಬೇಕಾಗುತ್ತದೆ.
ಸರ್ಕಾರದ ಎದುರಿಗೆ ರೈತ ಎಂದೂ ಹುಲಿಯಾಗಿ ರಬೇಕೇ ಹೊರತು ಬಲಿಕೊಡುವ ಕುರಿ ಹಾಗಲ್ಲ. ಒಂದೂವರೆ ವರ್ಷದ ಹಿಂದೆ ಬೆಳಗಾವಿಯಲ್ಲಿ ನಡೆದ ನಮ್ಮ ರಾಜ್ಯದ ಚಳಿಗಾಲದ ಅಧಿವೇಶನದಲ್ಲಿ ಕಬ್ಬು ಬೆಳೆಗೆ ಬೆಂಬಲ ಬೆಲೆ ಕೊಡಲಿಲ್ಲ ಎಂಬ ಕಾರಣಕ್ಕೆ ಒಬ್ಬ ರೈತ ಆತ್ಮಹತ್ಯೆ ಮಾಡಿಕೊಂಡ. ಅದಕ್ಕೆ ನಮ್ಮ ಮುಖ್ಯಮಂತ್ರಿಗಳು ‘ಅದು ಆತ್ಮಹತ್ಯೆ ಅಲ್ಲ, ಸಾರಾಯಿ ಕುಡಿದು ಸತ್ತಿದ್ದಾನೆಂದು ಹೇಳಿಕೆಯನ್ನು ನೀಡಿದರು. ಮೊನ್ನೆ ಒಂದು ತಿಂಗಳ ಹಿಂದೆ ದೆಹಲಿಯಲ್ಲಿ ನಡೆದ ಆಮ್ ಆದ್ಮಿ ಪಾರ್ಟಿ ಪಕ್ಷದ ರ‌್ಯಾಲಿಯಲ್ಲಿ ಒಬ್ಬ ರೈತ ಮುಖ್ಯಮಂತ್ರಿಯ ಎದುರಿನಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ. ಆದರೆ ಈ ವಿಷಯ ರಾಜಕೀಯ ಹಗ್ಗ ಜಗ್ಗಾಟವಾಯಿತೇ ಹೊರತು, ರೈತರ ಬಗ್ಗೆ, ಅವರ ಆತ್ಮಹತ್ಯೆ ಬಗ್ಗೆ ಸಮಗ್ರ ಚರ್ಚೆಯಾಗಲಿಲ್ಲ. ಬರೀ ಕರ್ನಾಟಕ, ದೆಹಲಿಯಲ್ಲಿ ಅಷ್ಟೇ ಅಲ್ಲದೆ ಉತ್ತರಪ್ರದೇಶ, ಬಿಹಾರ, ಒರಿಸ್ಸಾ, ಮಹಾರಾಷ್ಟ್ರ, ಸೀಮಾಂಧ್ರ, ತೆಲಂಗಾಣ ಇತ್ಯಾದಿ ಇನ್ನೂ ಅನೇಕ ರಾಜ್ಯಗಳಲ್ಲಿ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇಂಥ ಭೀಕರ ಸಂದರ್ಭದಲ್ಲಿ ರಾಜಕೀಯ ವ್ಯಕ್ತಿಗಳ ಬಣ್ಣದ ಮಾತು, ಮೊಸಳೆ ಕಣ್ಣೀರು ನೋಡಬೇಕೇ ಹೊರತು, ರೈತರ ಬಗ್ಗೆ ಸ್ವಂತ ಕಾಳಜಿ ವಹಿಸುವವರಿಲ್ಲ. ನಮ್ಮ ದೇಶದ ರಾಜಕೀಯ ನಾಯಕರ ಹುಲಿ ಕುರಿಯಂತಹ ಆಟಗಳಿಗೆ ರೈತರು ಕುರಿಗಳಾಗಿ ಬಲಿಯಾಗುತ್ತಿರುವುದು ತುಂಬಾ ನೋವನ್ನುಂಟು ಮಾಡುವ ಸಂಗತಿ. ನಮಗೆ ಅನ್ನ ನೀಡುವ ಅನ್ನದಾತ, ನೀನಿಲ್ಲದಿದ್ದರೆ ಭಾರತವಿಲ್ಲ ಎಂಬುವುದನ್ನು ನಮ್ಮ ರಾಜಕೀಯ ನಾಯಕರು ಮರೆತಿದ್ದಾರೆ. ಭಾರತಕ್ಕೆ ರೈತ ಬೆನ್ನೆಲುಬಾದರೆ, ರೈತನಿಗೆ ಗೋವು ಬೆನ್ನೆಲುಬು ಎಂದು ನಮ್ಮ ಸರ್ಕಾರ, ಸರ್ಕಾರವನ್ನಾಳುವರು ಅರ್ಥ ಮಾಡಿಕೊಳ್ಳಬೇಕಾಗಿದೆ. ಹೀಗೆ ನೆಲ – ಜಲ – ಗೋವು – ಇತ್ಯಾದಿ ಕೃಷಿ ಸಂಬಂಧಿತ ಸಂಪನ್ಮೂಲ ಸಂರಕ್ಷಣೆ, ಮಾರುಕಟ್ಟೆ ವ್ಯವಸ್ಥೆ, ಅಕಸ್ಮಾತ್ ಮಳೆಯಾಗದಿದ್ದಲ್ಲಿ ಬೆಳೆ ಕಾಪಾಡಲು ಸೂಕ್ತ ಬಂದೋಬಸ್ತ್, ಬೆಂಬಲ ಬೆಲೆ ಇತ್ಯಾದಿಗಳ ಮೂಲಕ ರೈತರ ಸ್ವಾಭಿಮಾನ ಕಾಪಾಡಬೇಕು. ರೈತರೂ ಸ್ವಾಭಿಮಾನದಿಂದ ಬಂದದ್ದನ್ನೆದುರಿಸುವ ಸ್ಥೈರ್ಯ ಬೆಳೆಸಿಕೊಳ್ಳಬೇಕು. ಈ ದೇಹದಿಂದ ದೂರವಾದೆ ಏಕೆ ಆತ್ಮವೆ ಈ ಸಾವು ನ್ಯಾಯವೇ? ಎಂಬ ಪ್ರಶ್ನೆ ಕಾಡುತ್ತದೆ.

– ಸೋಮಶೇಖರ, ಗುಲ್ಬರ್ಗಾ

   

Leave a Reply