ಧರ್ಮಾಧಾರಿತ ಶಿಕ್ಷಣದಿಂದ ಭಾರತಕ್ಕೆ ವಿಶ್ವಮಾನ್ಯತೆ

ಕಾರ್ಯಕ್ರಮಗಳು - 0 Comment
Issue Date : 07.05.2015

ಆರೆಸ್ಸೆಸ್ ಸರಸಂಘಚಾಲಕ ಮೋಹನ್ ಭಾಗವತ್ ಕರೆ

ಬೆಂಗಳೂರು: ನಮ್ಮ ಮಕ್ಕಳು ಹಾಗೂ ಯುವ ಪೀಳಿಗೆಗೆ ಧರ್ಮಾಧಾರಿತ ಶಿಕ್ಷಣ ನೀಡುವುದರಿಂದ ಭಾರತವು ವಿಶ್ವಮಾನ್ಯತೆ ಗಳಿಸಬಲ್ಲದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾದ ಮೋಹನ್ ಭಾಗವತ್ ಅವರು ಕರೆ ನೀಡಿದರು.
ಚನ್ನೇನಹಳ್ಳಿ ಜನಸೇವಾ ವಿಶ್ವಸ್ತ ಮಂಡಳಿ ವತಿಯಿಂದ ಏ. 30ರಂದು ಜನಸೇವಾ ವಿದ್ಯಾಕೇಂದ್ರ ಆವರಣದಲ್ಲಿ ನಡೆದ ವಸತಿ ಕಟ್ಟಡ ಸಮುಚ್ಚಯ ನಿರ್ಮಾಣ ಕಾಮಗಾರಿಯ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು. ವೈಜ್ಞಾನಿಕತೆಯ ಸೋಗಿನಲ್ಲಿ ಧರ್ಮದ ದಾರಿಯೇ ಸರಿಯಿಲ್ಲ ಎನ್ನುವ ಮಾತುಗಳು
ಕೇಳಿಬರುತ್ತಿವೆ. ಧರ್ಮ ಎಂದಿಗೂ ದಾರಿತಪ್ಪಿಲ್ಲ. ನಾವು ಧರ್ಮದ ದಾರಿಯನ್ನು ತಪ್ಪಿಸುತ್ತಿದ್ದೇವೆ. ವಿದ್ಯಾರ್ಥಿಗಳಲ್ಲಿ ರಾಷ್ಟ್ರಧರ್ಮ, ಸೇವಾಕಾರ್ಯದ ಮಹತ್ವವನ್ನು ಪಡಿಮೂಡಿಸಬೇಕು ಎಂದರು. (ನಿತಾಂತ ಮೇ ಆತ್ಮದರ್ಶನ್ ಕೀ ಸಾಧನಾ,
ಲೋಕಾಂತ್ ಮೇ ಸೇವಾ ಔರ್ ಪರೋಪಕಾರ್ ಲಾನಾ, ವಿಶ್ವಕೇ ಜೀವನ್ ಕೀ ಧಾರಣ ಕರನೇವಾಲಾ, ಏ ಸಫಲ್ ಜೀವನ್ ಮಾನಾ ಜಾತಾ ಹೈ).
ಪಕ್ಷ ಬದಲಾಯಿಸಿದಾಗ ಧರ್ಮದ ಕುರಿತು ಅತ್ಯಂತ ಕೆಟ್ಟದಾಗಿ ಮಾತನಾಡುತ್ತಾರೆ. ವ್ಯಕ್ತಿಯು ಪಕ್ಷ ಬದಲಾಯಿಸಿದಾಗ ಅಲ್ಲಿರುವ ಸಿದ್ಧಾಂತ ವ್ಯತ್ಯಯವಾಗಿದ್ದರೂ ಧರ್ಮದ ನಿಲುವಿನಲ್ಲಿ ಯಾವುದೇ ವ್ಯತ್ಯಯವಾಗುವುದಿಲ್ಲ. ಅಧಿಕಾರದ ಗುಂಗಿನಲ್ಲಿ ಧರ್ಮದ ದಾರಿ ತಪ್ಪಿಸುವ ಕಾರ್ಯವಾಗುತ್ತಿರುವುದು ವಿಪರ್ಯಾಸ. ಸನಾತನ ಮೌಲ್ಯ ಸತ್ವವನ್ನು ಅರಿತು ಜೀವನದಲ್ಲಿ ಅನುಷ್ಠಾನಗೊಳಿಸಿದರೆ, ಧರ್ಮದ ಕುರಿತು ಉತ್ತಮ ಮಾರ್ಗಗಳು ಬರುತ್ತವೆ ಎಂದು ಕಾರ್ಯಕ್ರಮದ ಸಾನ್ನಿಧ್ಯವಹಿಸಿದ್ದ ಆದಿಚುಂಚನಗಿರಿ ಮಠದ ಶ್ರೀ ನಿರ್ಮಲಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ವ್ಯಕ್ತಿತ್ವ ಚಾರಿತ್ರ್ಯವಧೆ ಮಾಡುವಂತಹ ಕಟ್ಟಡಗಳು ನಿರ್ಮಾಣವಾಗುವುದಕ್ಕಿಂತ ವ್ಯಕ್ತಿ ನಿರ್ಮಾಣ, ದೇಶದ ಉದ್ಧಾರಕ್ಕೆ ಕೊಡುಗೆ ನೀಡುವಂತಹ ಉತ್ತಮ ಕಟ್ಟಡಗಳು ನಿರ್ಮಾಣಗೊಳ್ಳಬೇಕು. ಪಾಶ್ಚಾತ್ಯರಿಗೆ ಮಣೆ ಹಾಕುವ ಪ್ರವೃತ್ತಿಗೆ ತಡೆಹಾಕಿ, ಯುವ ಜನತೆಗೆ ದೇಶೀಯ ಸಂಸ್ಕೃತಿ, ಆಧ್ಯಾತ್ಮದ ಸಾರವನ್ನು ತಿಳಿಸಿ ಪೋಷಿಸುವ ಕೆಲಸವಾಗಬೇಕು ಎಂದು ಅವರು ಹೇಳಿದರು.
ಜನಸೇವಾ ವಿದ್ಯಾಕೇಂದ್ರದ ಅಧ್ಯಕ್ಷ ಕೆ.ಜಿ. ಸುಬ್ಬರಾಮ ಶೆಟ್ಟಿ, ಜನಸೇವಾ ವಿಶ್ವಸ್ತ ಮಂಡಳಿಯ ನಿರ್ವಾಹಕ ವಿಶ್ವಸ್ತ ವೈ.ಕೆ. ರಾಘವೇಂದ್ರರಾವ್, ಉದ್ಯಮಿ ಶ್ರೀನಿವಾಸ ಗುಪ್ತಾ, ಆರೆಸ್ಸೆಸ್‌ನ ಪ್ರಮುಖರಾದ ಮಂಗೇಶ್ ಬೇಂಡೆ, ಮುಕುಂದ್, ಕೃ. ಸೂರ್ಯನಾರಾಯಣರಾವ್, ಮೈ.ಚ. ಜಯದೇವ್, ಕೃ. ನರಹರಿ, ರಾಮಕೃಷ್ಣರಾವ್, ಕಜಂಪಾಡಿ ಸುಬ್ರಹ್ಮಣ್ಯಭಟ್, ವಿ. ನಾಗರಾಜ್, ಎಂ. ವೆಂಕಟರಾಮ್, ಡಾ. ವಾಮನ್ ಶೆಣೈ, ಎನ್. ತಿಪ್ಪೇಸ್ವಾಮಿ ಮೊದಲಾದ ಪ್ರಮುಖರು ಉಪಸ್ಥಿತರಿದ್ದರು.
ಜನಸೇವಾ ವಿದ್ಯಾಕೇಂದ್ರ ಆರೆಸ್ಸೆಸ್ ಪ್ರೇರಿತ ಶಿಕ್ಷಣ ಸಂಸ್ಥೆಯಾಗಿದ್ದು 1970ರಲ್ಲಿ ಪ್ರಾರಂಭವಾಯಿತು. ಸಂಸ್ಥೆಯ ಹಳೆಯ ವಸತಿ ಕಟ್ಟಡಕ್ಕೆ 1995ರಲ್ಲಿ ನಾಲ್ಕನೇ ಸರಸಂಘಚಾಲಕರಾದ ಪ್ರೊ. ರಜ್ಜುಭಯ್ಯಾ ಅವರು ಅಡಿಗಲ್ಲು ಹಾಕಿದ್ದರು.

   

Leave a Reply