ಧೋನಿ ರವಾನಿಸಿದ ಸಂದೇಶ

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date :

-ದು. ಗು. ಲಕ್ಷ್ಮಣ, ಹಿರಿಯ ಪತ್ರಕರ್ತ

ಭಾರತ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಕಪ್ತಾನ ಮಹೇಂದ್ರ ಸಿಂಗ್ ಧೋನಿ ಇತ್ತೀಚೆಗೆ ಸೀಮಿತ ಓವರ್‌ನ ಪಂದ್ಯಗಳ ನಾಯಕತ್ವಕ್ಕೆ ವಿದಾಯ ಹೇಳಿದಾಗ ಅಚ್ಚರಿಪಟ್ಟವರೇ ಹೆಚ್ಚು . 2014ರ ಡಿಸೆಂಬರ್‌ನಲ್ಲಿ ನಡೆದ ಮೆಲ್ಬೋರ್ನ್ ಟೆಸ್ಟ್ ಬಳಿಕ ಸಾಂಪ್ರದಾಯಿಕ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿದ್ದ ಧೋನಿ, ಮುಂದಿನ ವಿಶ್ವಕಪ್‌ವರೆಗೂ ಸೀಮಿತ ಓವರ್‌ಗಳ ತಂಡವನ್ನು ಮುನ್ನಡೆಸುವ ಗುರಿ ಹೊತ್ತಿದ್ದರು. ಇದನ್ನು ಸ್ವತಃ ಅವರೇ ಆಗ ಪತ್ರಕರ್ತರೊಂದಿಗೆ ಅರುಹಿದ್ದರು. ಆದರೆ ಬದಲಾದ ಸನ್ನಿವೇಶದಲ್ಲಿ ಧೋನಿ ತನ್ನ ಈ ನಿರ್ಧಾರವನ್ನು ಕೈಗೊಂಡಿದ್ದು ಹಲವರ ಅಚ್ಚರಿಗೆ ಕಾರಣ.
ಹಾಗೆ ನೋಡಿದರೆ ಧೋನಿಗೆ ನಿವೃತ್ತಿಯಾಗುವ ವಯಸ್ಸೇನಲ್ಲ. ಆತನಲ್ಲಿ ಇನ್ನೂ ಒಂದಿಷ್ಟು ಕ್ರಿಕೆಟ್ ಕಸುವಿದೆ. ವಿಶ್ವಕಪ್‌ವರೆಗೆ ತಂಡವನ್ನು ಮುನ್ನಡೆಸುವ ಛಾತಿಯೂ ಇದೆ. ಆದರೂ ಅದಕ್ಕೆ ಮುನ್ನವೇ ಧೋನಿ ನಿವೃತ್ತಿ ಘೋಷಿಸಿದ್ದು ಹಲವರಿಗೆ ಅಚ್ಚರಿ, ಕೆಲವರಿಗೆ ಅದು ಸ್ವಾಭಾವಿಕ ಎನಿಸಿದೆ. ಖ್ಯಾತ ಕ್ರಿಕೆಟ್ ವಿಶ್ಲೇಷಕ ಹರ್ಷ ಭೋಗ್ಲೆ ‘ಚಾಂಪಿಯನ್ಸ್ ಟ್ರೋಫಿ ಬಳಿಕವೇ ಇಂತಹ ನಿರ್ಧಾರ ಬರಬಹುದೆಂದು ನಿರ್ಧರಿಸಿದ್ದೆ. ಇದು ಸ್ವಾರ್ಥರಹಿತ ನಡೆ. ಅಭೂತಪೂರ್ವ ಸೇವೆ ಸಲ್ಲಿಸಿದ ಧೋನಿಗೆ ವಂದಿಸುವ ಸಮಯವಿದು’ ಎಂದಿದ್ದರೆ, ಭಾರತ ಎ ತಂಡದ ತರಬೇತುದಾರ ಹಾಗೂ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ‘ಧೋನಿಯ ಈ ನಿರ್ಧಾರ ಸಕಾಲಿಕ ಹಾಗೂ ಸರಿಯಾದುದಾಗಿದೆ. ಇದು ನನ್ನನ್ನೇನೂ ಹೆಚ್ಚು ಚಕಿತಗೊಳಿಸಲಿಲ್ಲ ’ ಎಂದಿದ್ದಾರೆ. ಅಭಿಮಾನಿಗಳಿಗೆ ಮಾತ್ರ ಧೋನಿ ನೀಡಿದ ಈ ‘ಶಾಕ್’ನಿಂದ ಈಗಲೂ ಹೊರಬರಲು ಸಾಧ್ಯವಾಗಿಲ್ಲ.
ಧೋನಿ ನಾಯಕತ್ವದಲ್ಲಿ ಭಾರತ ಕ್ರಿಕೆಟ್ ವೈಭವದ ದಿನಗಳನ್ನು ಕಂಡಿತ್ತು. 2007ರಲ್ಲಿ ನಡೆದ ವಿಶ್ವ ಐಸಿಸಿ ಟಿ-20ಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಅನಂತರ 2011ರಲ್ಲಿ ಐಸಿಸಿ ವಿಶ್ವಕಪ್‌ನಲ್ಲಿ ಭಾರತ ಮತ್ತೆ ಚಾಂಪಿಯನ್ ಪಟ್ಟಕ್ಕೇರಿತ್ತು. ಅದಾದ ಬಳಿಕ 2013ರಲ್ಲಿ ಚಾಂಪಿಯನ್ ಟ್ರೋಫಿ ಜಯಿಸಿತ್ತು. ಈ ಎಲ್ಲಾ ಸಂದರ್ಭಗಳಲ್ಲಿ ತಂಡವನ್ನು ಯಶಸ್ಸಿನತ್ತ ಮುನ್ನಡೆಸಿದ ಕೀರ್ತಿ ಧೋನಿಗೇ ಸಲ್ಲುತ್ತದೆ. ಇದಕ್ಕೂ ಮುನ್ನ ಭಾರತ ಕ್ರಿಕೆಟ್‌ನಲ್ಲಿ ಇಂತಹ ಸಾಧನೆ ಮಾಡಿದವರಿರಲಿಲ್ಲ.
ಅಷ್ಟೇ ಅಲ್ಲ, ಧೋನಿಯ ವೈಯಕ್ತಿಕ ಸಾಧನೆಯೂ ಕಡಿಮೆಯದಲ್ಲ. ಏಕದಿನ ಕ್ರಿಕೆಟ್‌ನಲ್ಲಿ ಧೋನಿ 6633 ರನ್, 9 ಶತಕ, 61 ಅರ್ಧ ಶತಕ ಸಿಡಿಸಿದ್ದರೆ, ಟಿ-20 ಕ್ರಿಕೆಟ್‌ನಲ್ಲಿ 1112 ರನ್ ಬಾರಿಸಿ 35.87 ಸರಾಸರಿ ಹೊಂದಿರುವ ಸಾಧನೆ ಅವರದು. ಅವೆಲ್ಲಕ್ಕಿಂತ ಮುಖ್ಯವಾಗಿ, ಎಂತಹದೇ ಕಠಿಣ ಸಂದರ್ಭದಲ್ಲೂ ಎದೆಗುಂದದೆ ತಂಡವನ್ನು ಗೆಲುವಿನತ್ತ ಕೊಂಡೊಯ್ದ ಧೀರ ಕಪ್ತಾನ ಆತ. ಎದುರಾಳಿ ತಂಡದ ರನ್ ಮೊತ್ತ ಅದೆಷ್ಟೇ ಬೃಹತ್ತಾಗಿರಲಿ, ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಆ ಗುರಿಯನ್ನು ಬೆಂಬತ್ತಿ ಗೆಲುವು ಸಾಧಿಸುವುದರಲ್ಲಿ ಧೋನಿಯದು ಎತ್ತಿದ ಕೈ. ಸೋಲು-ಗೆಲುವು ಎರಡನ್ನೂ ಸಮಚಿತ್ತದಿಂದ ಕಂಡ ಸ್ಥಿತಪ್ರಜ್ಞ ಕ್ರಿಕೆಟಿಗ. ಹಾಗೆಂದೇ ಆತನನ್ನು ಮಾಧ್ಯಮಗಳು ಸೇರಿದಂತೆ ಎಲ್ಲರೂ ‘ಕೂಲ್ ಕಪ್ತಾನ’ ಎಂದು ಬಣ್ಣಿಸಿರುವುದುಂಟು. ಗೆದ್ದಾಗ ಹಿರಿಹಿರಿ ಹಿಗ್ಗದೆ, ಸೋತಾಗ ಮುಖ ಕೆಳಗೆಹಾಕಿ ಕುಗ್ಗದೆ ಕ್ರೀಡಾಮನೋಭಾವ ಮೆರೆದ ವಿರಳ ಆಟಗಾರ. ಸಾಮಾನ್ಯವಾಗಿ ತಂಡ ಗೆದ್ದಾಗ ಹಿರಿಹಿರಿ ಹಿಗ್ಗಿ ಆರ್ಭಟಿಸುವ ಕಪ್ತಾನರೇ ಹೆಚ್ಚು. ಸೋತಾಗ ನಿರಾಶರಾಗಿ ಸೋಲಿಗೆ ಯಾರನ್ನೋ ಬಲಿಪಶು ಮಾಡುವ ಕಪ್ತಾನರೂ ಇದ್ದಾರೆ. ಧೋನಿ ಮಾತ್ರ ಇದಕ್ಕೆ ಅಪವಾದ. ಗೆಲುವಿಗೆ ತನ್ನ ನಾಯಕತ್ವವೇ ಕಾರಣ ಎಂದು ಆತ ಯಾವತ್ತೂ ಹೇಳಿದ್ದಿಲ್ಲ. ಸೋತಾಗ ತನ್ನ ತಂಡದ ಕಳಪೆ ಆಟವೇ ಕಾರಣ ಎಂದು ವೈಯಕ್ತಿಕವಾಗಿ ಯಾರನ್ನೋ ದೂಷಿಸಿದ ನಿದರ್ಶನಗಳಿಲ್ಲ. ಹೃದಯವನ್ನು ಬೆಚ್ಚಗಿಟ್ಟುಕೊಂಡು, ತಲೆಯನ್ನು ಮಾತ್ರ ತಂಪಾಗಿಟ್ಟುಕೊಂಡ ವಿಶಿಷ್ಟ ಗುಣದ ನಾಯಕ ಧೋನಿ.
ಹೀಗಿದ್ದರೂ ಧೋನಿ ದಿಢೀರನೆ ಏಕೆ ನಾಯಕತ್ವಕ್ಕೆ ವಿದಾಯ ಹೇಳಿದರು? ಈ ಪ್ರಶ್ನೆ ಅಭಿಮಾನಿಗಳನ್ನು ಕಾಡುವುದು ಸಹಜ. ಧೋನಿಯೇ ಹೇಳಿದಂತೆ, ಮೂರೂ ಪ್ರಕಾರದ ಕ್ರಿಕೆಟ್‌ಗೆ ಒಬ್ಬನೇ ನಾಯಕನಿರಬೇಕಾದ್ದು ಅಗತ್ಯ. ಟೆಸ್ಟ್ ತಂಡಕ್ಕೊಬ್ಬ ನಾಯಕ, ಏಕದಿನ ಹಾಗೂ ಟಿ-20 ತಂಡಕ್ಕೆ ಮತ್ತೊಬ್ಬ ನಾಯಕನೆಂದು ನೇಮಿಸುವುದು ತರವಲ್ಲ ಎಂಬುದು ಧೋನಿಯ ಅಭಿಮತ. ಧೋನಿಯ ಸಮರ್ಥ ನಾಯಕತ್ವದಲ್ಲಿ ಭಾರತ ತಂಡ ಮೂರೂ ಬಗೆಯ ಕ್ರಿಕೆಟ್‌ನಲ್ಲಿ ಮನೋಜ್ಞ ಸಾಧನೆ ಮೆರೆದಿರುವುದೇ ಧೋನಿಯ ಈ ಹೇಳಿಕೆಯನ್ನು ಸಮರ್ಥಿಸುತ್ತದೆ. ಪ್ರತಿಯೊಂದು ಬಗೆಯ ಕ್ರಿಕೆಟ್‌ಗೂ ಆತ ನ್ಯಾಯ ಸಲ್ಲಿಸಿದ್ದಾನೆ.
ಅದೂ ಅಲ್ಲದೆ ಭಾರತ ಕ್ರಿಕೆಟ್ ರಂಗದಲ್ಲಿ ಇದೀಗ ಸಾಕಷ್ಟು ಪ್ರತಿಭಾವಂತ ಕುಡಿಗಳು ಮಿಂಚುತ್ತಿವೆ. ಸಮರ್ಥ ಕಪ್ತಾನನಾಗುವಂಥ ವಿರಾಟ್ ಕೊಹ್ಲಿ ಈಗಿದ್ದಾರೆ. ಅಂಥವರಿಗೆ ತಾನು ಅವಕಾಶ ಮಾಡಿಕೊಡಬೇಕು ಎಂಬುದು ಧೋನಿಯ ಇರಾದೆ. ನಾಯಕತ್ವಕ್ಕೆ ವಿದಾಯ ಹೇಳಿದ್ದರೂ ಏಕದಿನ ಹಾಗೂ ಟಿ-20 ತಂಡದಲ್ಲಿ ಆಟಗಾರನಾಗಿ ಮುಂದುವರೆಯುವ ಅವರ ನಿರ್ಧಾರ ಸ್ವಾಗತಾರ್ಹ. ತನಗಿಂತ ಅನುಭವದಲ್ಲಿ ಕಡಿಮೆ ಇರುವ ಹೊಸ ನಾಯಕನೊಬ್ಬನ ಅಡಿಯಲ್ಲಿ ಆಡುವ ನಿರ್ಧಾರವನ್ನು ಎಲ್ಲ ಕಪ್ತಾನರೂ ಕೈಗೊಳ್ಳಲಾರರು. ಅಂತಹ ನಿರ್ಧಾರ ತಮ್ಮ ಸ್ವಾಭಿಮಾನಕ್ಕೆ, ತಾವೇರಿದೆತ್ತರಕ್ಕೆ ಕುಂದು ತರಬಹುದೆಂಬ ಭ್ರಮೆ ಅವರೆಲ್ಲರಿಗಿರುತ್ತದೆ. ಧೋನಿಗೆ ಮಾತ್ರ ಅಂತಹ ಯಾವ ಭ್ರಮೆಯೂ ಇಲ್ಲ. 2007ರಿಂದ 2016ರ ವರೆಗೆ ಒಟ್ಟು 9 ವರ್ಷಗಳ ಕಾಲ ಭಾರತ ತಂಡವನ್ನು ಅದ್ವಿತೀಯವಾಗಿ ಮುನ್ನಡೆಸಿದ ಈ ರಾಂಚಿ ಆಟಗಾರ ಇದೀಗ ಸಾಮಾನ್ಯ ಆಟಗಾರನಾಗಿ ಮುಂದುವರೆಯುತ್ತಾನೆಂದರೆ ಆತನಲ್ಲಿ ಯಾವುದೇ ಅಹಂಭಾವ ಇಲ್ಲವೆಂದೇ ಅರ್ಥ.
ಆಡುವ ಕಸುವು ಇನ್ನಷ್ಟು ಇದ್ದಾಗಲೇ ಕಪ್ತಾನಗಿರಿಗೆ ಗುಡ್‌ಬೈ ಹೇಳಿದ ಧೋನಿ ಮಹತ್ವದ ಸಂದೇಶ ರವಾನಿಸಿದ್ದಾರೆ. ಕಪ್ತಾನಗಿರಿಯಿಂದ ಕೆಳಗೆ ಇಳಿಯಿರಿ ಎಂದು ಧೋನಿಗೆ ಯಾರದೇ ಒತ್ತಡ ಇರಲಿಲ್ಲ ಅಥವಾ ಭಾರತ ಕ್ರಿಕೆಟ್ ತಂಡದಲ್ಲೂ ಧೋನಿ ನಾಯಕತ್ವದ ವಿರುದ್ಧ ಅಪಸ್ವರಗಳಿರಲಿಲ್ಲ. ಧೋನಿ ಮೊನ್ನೆ ತನ್ನ ವಿದಾಯ ನಿರ್ಧಾರ ಪ್ರಕಟಿಸಿದಾಗ, ವಿರಾಟ್ ಕೊಹ್ಲಿ ‘ಈಗಲೂ ಧೋನಿಯೇ ನನ್ನ ನಾಯಕ’ ಎಂದು ಹೇಳಿರುವುದು ಇದಕ್ಕೊಂದು ನಿದರ್ಶನ. ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಬೇಕು, ನಿವೃತ್ತಿ ವಯಸ್ಸಿಗಿಂತ ಸಾಕಷ್ಟು ಮುನ್ನವೇ ನಿವೃತ್ತಿಯಾಗಬೇಕು-ಇದು ಧೋನಿ ರವಾನಿಸಿದ ಮಹತ್ವದ ಸಂದೇಶ.
ಈಗ ಕೊಂಚ ನಮ್ಮ ರಾಜಕೀಯ ರಂಗದತ್ತ ಹೊರಳೋಣ. ಇಳಿ ವಯಸ್ಸಾಗಿ ಕೈಕಾಲು ನಡುಗುತ್ತಿದ್ದರೂ, ನಾಲಿಗೆ ತೊದಲುತ್ತಿದ್ದರೂ, ನೆನಪಿನ ಶಕ್ತಿ ಕೈಕೊಡುತ್ತಿದ್ದರೂ ನಾಯಕತ್ವವನ್ನು ತ್ಯಜಿಸಲು ಸುತರಾಂ ಇಷ್ಟವಿಲ್ಲದವರೇ ನಮ್ಮ ರಾಜಕೀಯ ರಂಗದಲ್ಲಿ ತುಂಬಿಕೊಂಡಿದ್ದಾರೆ. 72ರ ಇಳಿ ವಯಸ್ಸಿನಲ್ಲಿರುವ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಈಗಲೂ ಕೆಳಗಿಳಿಯಲು ಸಿದ್ಧರಿಲ್ಲ. ಅವರ ಮಾತು ತೊದಲತೊಡಗಿದೆ. ಶರೀರದ ದೃಢತೆ ಮೊದಲಿನಂತಿಲ್ಲ . ಹೀಗಿದ್ದರೂ ಅವರಿಗೆ ಪಕ್ಷ ತನ್ನದು, ಮತ್ತೆ ಮುಖ್ಯಮಂತ್ರಿಯಾಗಲು ತಾನೇ ಸಮರ್ಥ ಎಂದು ಹೇಳುವಷ್ಟರ ಮಟ್ಟಿಗಿನ ಮೊಂಡುತನ. ಮುಖ್ಯಮಂತ್ರಿಯಾಗಿರುವ ಮಗನ ವಿರುದ್ಧ ತೊಡೆತಟ್ಟಿ ನಿಂತಿರುವ ಮುಲಾಯಂ ಸಿಂಗ್ ಅವರನ್ನು ನೋಡಿ ಇಡೀ ದೇಶ ಲೇವಡಿ ಮಾಡುತ್ತಿದೆ. ಉತ್ತರ ಪ್ರದೇಶ ರಾಜ್ಯಕ್ಕೆ ನಾಲ್ಕು ಬಾರಿ ಮುಖ್ಯಮಂತ್ರಿಯಾದ ಬಳಿಕವೂ ಈ ವಯೋವೃದ್ಧ ರಾಜಕಾರಣಿಗೆ ಅಧಿಕಾರದ ಆಸೆ ಬಿಟ್ಟಿಲ್ಲವಲ್ಲ ಎಂದು ಜನರು ಮರುಗುತ್ತಿದ್ದಾರೆ.
ಇಂತಹ ಅಧಿಕಾರ ವ್ಯಸನದಿಂದ ಬಳಲುತ್ತಿರುವವರು ಮುಲಾಯಂ ಒಬ್ಬರೇ ಅಲ್ಲ. ಕೇರಳದ ಕಮ್ಯುನಿಸ್ಟ್ ನಾಯಕಿ ಕೆ.ಆರ್. ಗೌರಿಯಮ್ಮ ಅವರು 98ರ ಇಳಿವಯಸ್ಸಿನಲ್ಲೂ ಅಧಿಕಾರದ ವ್ಯಸನ ಬಿಟ್ಟಿಲ್ಲ. ಕೆಲವು ಬೆಂಬಲಿಗರು, ಅನುಯಾಯಿಗಳನ್ನು ಕಟ್ಟಿಕೊಂಡು ಪಕ್ಷ ಮತ್ತು ಸರ್ಕಾರದ ಆಯಕಟ್ಟಿನ ಸ್ಥಾನಮಾನಗಳಿಗಾಗಿ ಬಡಿದಾಡುತ್ತಲೇ ಇದ್ದಾರೆ. ತಮಿಳುನಾಡಿನ ಹಿರಿಯ ರಾಜಕಾರಣಿ ಎಂ. ಕರುಣಾನಿಧಿಯವರಿಗೂ ಇದೀಗ 93 ವರ್ಷ ವಯಸ್ಸು. 5 ಬಾರಿ ಮುಖ್ಯಮಂತ್ರಿಯಾಗಿರುವ ಅವರೇ ಈಗಲೂ ಡಿಎಂಕೆ ಪಕ್ಷದ ಅಧಿನಾಯಕ. ಇತ್ತೀಚೆಗಷ್ಟೇ ತಮ್ಮ ಮಗ ಸ್ಟಾಲಿನ್‌ರನ್ನು ಉತ್ತರಾಧಿಕಾರಿಯಾಗಿ ನೇಮಿಸಿದ್ದರೂ ಆತ ಪಕ್ಷವನ್ನು ಮುನ್ನಡೆಸಬಲ್ಲ ಎಂಬ ನಂಬಿಕೆ ಅವರಿಗಿಲ್ಲ! ನಮ್ಮ ಕರ್ನಾಟಕದ 83ರ ವಯಸ್ಸಿನ ದೇವೇಗೌಡರು ಈಗಲೂ ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ಸದಾ ಮುಳುಗಿರುತ್ತಾರೆ. ತಾವು ಬದಿಗೆ ಸರಿದು ಯುವಕರಿಗೆ ದಾರಿ ಮಾಡಿಕೊಂಡಬೇಕೆಂದು ಅವರಿಗೆ ಅನಿಸುತ್ತಲೇ ಇಲ್ಲ. ಇಂತಹ ಇನ್ನೆಷ್ಟೋ ವೃದ್ಧ ರಾಜಕಾರಣಿಗಳಿದ್ದಾರೆ. ತಮ್ಮ ಹೊರತು ಜಗತ್ತೇ ಇಲ್ಲವೆನ್ನುವ ಕಾಯಿಲೆಯಿಂದ ಅವರೆಲ್ಲ ಬಳಲುತ್ತಿದ್ದಾರೆ. ಅಂತಹ ವಿಕ್ಷಿಪ್ತ ಮಾನಸಿಕತೆಯ ನಾಯಕರು ಧೋನಿಯ ನಿವೃತ್ತಿ ನಿರ್ಧಾರದಿಂದ ಪಾಠ ಕಲಿಯಬೇಕಿದೆ. ಆದರೆ ಕಲಿಯುತ್ತಾರಾ?

   

Leave a Reply