ನಗುಮೊಗದ ಮಗುವಿನಂತಹ ಮನಸ್ಸಿನ ಸ್ವಾಮೀಜಿ ಶ್ರೀ ಸುಧೀಂದ್ರತೀರ್ಥರು

ಸ್ಮರಣೆ - 0 Comment
Issue Date : 04.02.2016

ಕಾಶೀಮಠ ಸಂಸ್ಥಾನ ಗುರುಪೀಠ ಪರಂಪರೆಯ 20ನೇ ಯತಿವರ್ಯ ಹಾಗು ಗೌಡ ಸಾರಸ್ವತ ಬ್ರಾಹ್ಮಣ (ಜಿಎಸ್‌ಬಿ) ಸಮುದಾಯದ ಆರಾಧ್ಯ ಗುರುಗಳಾ
ಗಿದ್ದ ಶ್ರೀ ಸುಧೀಂದ್ರತೀರ್ಥ ಸ್ವಾಮೀಜಿ(90) ಜ.17 ರಂದು ಮುಂಜಾನೆ ಹರಿದ್ವಾರದಲ್ಲಿ ತಮ್ಮ ಇಹಲೋಕ ಯಾತ್ರೆ ಮುಗಿಸಿ ನಾರಾಯಣ ಸನ್ನಿಧಾನ ಸೇರಿದ್ದು ಹಿಂದು ಸಮಾಜಕ್ಕೆ ಅಪಾರ ನಷ್ಟವನ್ನುಂಟುಮಾಡಿದೆ.
ತುಂಬು ಜೀವನ ನಡೆಸಿದ್ದ ಸ್ವಾಮೀಜಿಯವರು 1944 ರಲ್ಲಿ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದರು. 1949 ರಲ್ಲಿ ತಮ್ಮ
23ನೇ ವಯಸ್ಸಿನಲ್ಲಿ ಪೀಠಾರೋಹಣ ಮಾಡಿ ಸಮಾಜವನ್ನು ಮುನ್ನಡೆಸಿದರು. ವೇದ, ಉಪನಿಷತ್ತು ಸೇರಿದಂತೆ ಅಪಾರ ಅಧ್ಯಯನ ಮಾಡಿದ್ದ ಸ್ವಾಮಿಗಳು ದೇಶಾದ್ಯಂತ ಅನೇಕ ಬಾರಿ ಪ್ರವಾಸ ಮಾಡಿ ಹಿಂದೂ ಸಮಾಜದ ಧಾರ್ಮಿಕ ಮತ್ತು ನೈತಿಕ ಉನ್ನತಿಗಾಗಿ ತಮ್ಮದೇ ಆದ ರೀತಿಯಲ್ಲಿ ಜಾಗೃತಿಗಾಗಿ ಶ್ರಮಿಸಿದ್ದಾರೆ. ಜಗತ್ತಿನಾದ್ಯಂತ ನೆಲೆಸಿರುವ ಜಿಎಸ್‌ಬಿ ಸಮಾಜದ ಬಂಧು-ಭಗಿನಿಯರು ತಮ್ಮ ಶ್ರದ್ಧೆ-
ಭಕ್ತಿಗಳನ್ನು ಬಿಡದೆ ರೀತಿ-ನೀತಿಗಳನ್ನು ಆಚರಿಸಿಕೊಂಡು ಬಂದಿರುವಲ್ಲಿ ಪೂಜ್ಯ ಸುಧೀಂದ್ರತೀರ್ಥರಂತಹ ಗುರು ಪರಂಪರೆಯ ಧಾರ್ಮಿಕ ಮಾರ್ಗದರ್ಶನ ಬಹು ಮುಖ್ಯ ಪಾತ್ರವಾದುದು.
ಸಾಮಾಜಿಕ ಚಟುವಟಿಕೆಗಳಲ್ಲಿ ಅತ್ಯಂತ ಆಸಕ್ತರಾಗಿದ್ದ ಸ್ವಾಮೀಜಿಯವರು ಆರ್ಥಿಕವಾಗಿ ಹಿಂದುಳಿದಿದ್ದ ಜ್ಞಾನಾಕಾಂಕ್ಷಿಗಳಿಗೆ ಅಧ್ಯಯನ ನಡೆಸಲು ವ್ಯಾಸಂಗ ವೇತನ ಒದಗಿಸಿ ಸಹಕರಿಸಿದ್ದಾರೆ. ಅಂತೆಯೇ, ಅನಾಥಾಶ್ರಮಗಳ ಸಬಲೀಕರಣಕ್ಕೆ, ದೇವಸ್ಥಾನಗಳ ನವೀಕರಣಕ್ಕೆ, ಬಡ ಕುಟುಂಬಗಳ ಶ್ರೇಯೋಭಿವೃದ್ಧಿಗೆ ಆರ್ಥಿಕ ಸಹಾಯ ಒದಗಿಸಿ ಬಲ ನೀಡಿದ್ದಾರೆ. ಅಂತೆಯೇ ನಾರಾವಿ, ಕೋಟ, ಸುರತ್ಕಲ್, ಮಂಗಳೂರು, ತಿರುಮಲೆ, ಕಲ್ಲಿಕೋಟೆ, ನಾಸಿಕ್, ಚೆನ್ನೈ… ಹೀಗೆ ನಾಡಿನ ಹಲವಾರು ಕಡೆ ದೇವತಾ ಮಂದಿರಗಳು-ಶ್ರೀಮಠದ ಶಾಖೆಗಳನ್ನು ಸ್ಥಾಪಿಸಿ ಸುತ್ತಲ ಸಮಾಜದಲ್ಲಿ ಧಾರ್ಮಿಕ-ಆಧ್ಯಾತ್ಮಿಕ ವಿಕಾಸಕ್ಕೆ ನೆಲೆ ಒದಗಿಸಿಕೊಟ್ಟಿದ್ದಾರೆ.
ಸುಧೀಂದ್ರತೀರ್ಥರ ವಿಶೇಷವೆಂದರೆ ದೊಡ್ಡ ದೊಡ್ಡ ಮೌಲಿಕ ವಿಚಾರಗಳನ್ನ್ನೂ ಸರಳ ಸೂತ್ರಗಳ ರೂಪದಲ್ಲಿ ತಿಳಿಸುತ್ತಿದ್ದುದು. ಪ್ರತಿದಿನವೂ ಆರಾಧ್ಯದೇವತೆ, ಕುಲದೇವತೆ, ಇಷ್ಟದೇವತೆ ಹಾಗೂ ಧರ್ಮಗುರುಗಳನ್ನು ಸ್ಮರಿಸಿ ಅವರಿಗೆ ವಂದನೆಗಳನ್ನು ಸಲ್ಲಿಸಬೇಕು; ಎಲ್ಲರನ್ನೂ ದಯಾಭಾವದಿಂದ ಕಾಣಬೇಕು; ಶಕ್ತ್ಯಾನುಸಾರ ದಾನ ಧರ್ಮಾದಿಗಳ ಮೂಲಕ ಇತರರಿಗೆ ಸಹಾಯವನ್ನೀಯಬೇಕು; ಮನಸ್ಸಿನಲ್ಲಿ ಯೋಚಿಸಿದಂತೆ ಮಾತನಾಡಬೇಕು. ಆಡಿದಂತೆ ನಡೆಯಬೇಕು. ಇತ್ಯಾದಿ ಗಳನ್ನೊಳಗೊಂಡ ದ್ವಾದಶ ಸೂತ್ರಗಳು ಪ್ರಸಿದ್ಧವಾಗಿವೆ.
ಅಂತೆಯೇ ತಮ್ಮ ಮೃದು ಮಧುರ ವಾಣಿಗಳ ಮೂಲಕ ನಡವಳಿಕೆಯ ರೀತಿಯನ್ನು ಕಲಿಸಿಕೊಡುತ್ತ್ತಿದ್ದರು. ಕೆಲವು ಉದಾಹರಣೆ ಹೇಳಬೇಕೆಂದಲ್ಲಿ …..

  •  ಪೂಜೆಯನ್ನು ಮನಃಪೂರ್ವಕ, ಮಾತಿನಲ್ಲಿ, ದೇಹ ಸಾಕ್ಷಾತ್ಕಾರ ಸಹಿತ ಅಂದರೆ ತ್ರಿಕರಣಪೂರ್ವಕವಾಗಿ; ಕಾಯಾ, ವಾಚಾ, ಮನಸಾ ನಿರ್ವಹಿಸಬೇಕು. ಈ ಮೂಲಕ ಭಕ್ತ ದೇವರನ್ನು ತನ್ನದಾಗಿಸಿ; ದೇವರು ಭಕ್ತನನ್ನು ತನ್ನದಾಗಿಸಿಕೊಳ್ಳುತ್ತಾನೆ.
  •  ದೇವರಿಗೆ ಅರ್ಪಿತನಾಗಿರುವವನು ಯಶಸ್ವಿಯಾಗುತ್ತಾನೆ. ದೇವರಿಗೆ ಸೇವೆ ಅರ್ಪಿಸಿದಾಗ ದೇವರಿಗೆ ಲಾಭವಾಗುವುದಿಲ್ಲ; ಆದರೆ, ಅರ್ಪಿಸಿಕೊಂಡವನು ಲಾಭ ಪಡೆಯುತ್ತಾನೆ. 
  •  ಹರಿಯು ಪ್ರಸನ್ನನಾದರೆ, ಸರ್ವಸ್ವವನ್ನೂ ದಯಪಾಲಿಸುತ್ತಾನೆ.
  •  ಧೈರ್ಯ ಎಂಬ ಗುಣವನ್ನು ನಾವು ನಮ್ಮಲ್ಲಿ ಬೆಳೆಸಿಕೊಳ್ಳಬೇಕು. ಯಾವುದೇ ಕಾರ್ಯಸಾಧನೆಗೆ ಮಾನವನು ಧೈರ್ಯವಂತನಾಗಬೇಕು. ಧೈರ್ಯವಿಲ್ಲದಿದ್ದರೆ ಉದ್ದೇಶ ಸಾಧನೆಯಾಗುವುದಿಲ್ಲ. ದೈರ್ಯ ಎಂಬುದು ನೈತಿಕತೆಯ ಬೆನ್ನೆಲುಬಾಗಿರುತ್ತದೆ. 
  •  ಪ್ರತಿಯೊಂದು ವಸ್ತುವಿನಲ್ಲೂ ದೇವರನ್ನು ಕಂಡರೆ; ಪರಸ್ಪರ ದ್ವೇಷಿಸಲು ಎಲ್ಲಾದರೂ ಸಾಧ್ಯವಿದೆಯೇ? ಪರಸ್ಪರ ಸೌಹಾರ್ದವೇ ಶಾಂತಿಯ ಮೂಲ.
  •  ನಾವು ಜೀವನದಲ್ಲಿ ಮಾಡಬೇಕಾದ ಕರ್ತವ್ಯವನ್ನು ಮಾಡಲು ಆದರೆ, ಮಾಡಬಾರದ್ದನ್ನು ಬಿಡಲು ಆಗುವುದಾದರೆ, ಅದು ಒಂದು ಮಹಾಭಾಗ್ಯ! ಅದು ದೇವರ ದಯೆಯಿಂದ ಆದುದು ಎಂದು ತಿಳಿಯಬೇಕು. 
  •  ಜೀವನ ಕೇವಲ ನಿರ್ಮಲ ಪ್ರೀತಿಗೆ ಕೇಂದ್ರೀಕೃತವಾಗಬೇಕು. ನಿರ್ಮಲ ಪ್ರೀತಿಗೆ ಧನದ ಅವಶ್ಯಕತೆ ಇಲ್ಲ. ಅದಕ್ಕೆ ಕೇವಲ ಉತ್ತಮ ಗುಣದ ಅವಶ್ಯಕತೆ ಇದೆ. 
  •  ಸೌಮ್ಯವಾಗಿಯೂ, ವಿಧೇಯರಾಗಿಯೂ ಇರುವುದು ಒಳ್ಳೆಯದು, ಆತ್ಮಬಲ ಇರಬೇಕು. ಇಲ್ಲದಿದ್ದರೆ ತಾವು ಮಾಡುವುದು ಕೆಟ್ಟದೆಂದು ತಿಳಿದರೂ ಅದನ್ನು ಬಿಡಲಿಕ್ಕೆ ಅವನಿಂದ ಸಾಧ್ಯವಿಲ್ಲ. ಈ ಆತ್ಮಬಲದ ಸಂಪಾದನೆಗೋಸ್ಕರ ಮಕ್ಕಳಿಗೆ ಚಿಕ್ಕಂದಿನಿಂದಲೇ ಆರಾಧನೆ ಉಪಾಸನೆಗಳನ್ನು ಆಭ್ಯಾಸ ಮಾಡಿಸಬೇಕು. 
  • ಯುವಕ ಯುವತಿಯರು ಧನವನ್ನು ಖರ್ಚು ಮಾಡುವಾಗ ಇತಿಮಿತಿ ಇರಬೇಕು. ಕೇವಲ ತಮ್ಮ ಆಡಂಬರಕ್ಕೋಸ್ಕರ ಖರ್ಚು ಮಾಡಬಾರದು.

ಈ ರೀತಿ ತಮ್ಮ ಶಿಷ್ಯವೃಂದವನ್ನು ಸಾರ್ಥಕ ಬದುಕು ರೂಪಿಸಿಕೊಳ್ಳುವತ್ತ ಸ್ವಾಮೀಜಿಯನ್ನು ‘ನಡೆದಾಡುವ ಭಗವಂತ’, ‘ನೊಂದವರ-ಆಶ್ರಿತರ ದೈವ’, ‘ಸಮಾಜದ ಒಳಿತಿಗಾಗಿ ಧಾರ್ಮಿಕ ಅನುಷ್ಠಾನ ನಿರತ’, ‘ನಗುಮೊಗದ ಮಗುವಿನಂತಹ ಮನಸ್ಸಿನವರು’, ‘ತಮ್ಮಲ್ಲಿ ಬಂದವರನ್ನು ಧೈರ್ಯ ತುಂಬಿ ಹರಸುವ ಸ್ವಾಮೀಜಿ’, ಇತ್ಯಾದಿ ವಿಶೇಷಣಗಳೊಂದಿಗೆ ಭಕ್ತರು ಕೊಂಡಾಡುತ್ತಾರೆ.
ಸಂಪ್ರದಾಯದ ಸಂರಕ್ಷಣೆಯ, ದೈವಭಕ್ತಿ ಜಾಗೃತಿಯ, ಆಚಾರ-ವಿಚಾರ ಪರಂಪರೆಯನ್ನು ಮುನ್ನಡೆಸುವ ಮಠಾಧೀಶರ ಬಿಡುವಿಲ್ಲದ ಕರ್ತವ್ಯದ ನಡುವೆಯೂ ಶ್ರೀಗಳು ಅಪಾರ ಸಾಹಿತ್ಯ ಪ್ರೀತಿಯನ್ನು ಹೊಂದಿದ್ದರು. ಭಗವದ್ಗೀತೆ, ಉಪನಿಷತ್, ಆಗಮಶಾಸ್ತ್ರ, ಬ್ರಹ್ಮಸೂತ್ರ, ದ್ವೈತ ಸಿದ್ಧಾಂತ, ಇತ್ಯಾದಿ ಶಾಸ್ತ್ರಾದಿಗಳಲ್ಲಿ ನಿಪುಣರಾಗಿ ಅಪ್ರತಿಮ ವಿದ್ವಾಂಸರೆನಿಸಿಕೊಂಡಿದ್ದರು. ಅಧ್ಯಯನ, ಪ್ರವಚನ ಇವುಗಳಷ್ಟೇ ಅಲ್ಲದೆ, ಭಕ್ತಸಮೂಹಕ್ಕ್ಕಾಗಿ ಅನೇಕ ಗ್ರಂಥಗಳನ್ನೂ ರಚಿಸಿದ ಹಿರಿಮೆ ಪೂಜ್ಯ ಸುಧೀಂದ್ರತೀರ್ಥರದ್ದು. ಗುರುಪರಂಪರಾಸ್ಥವಂ, ವೇದವ್ಯಾಸ ಶತಕಂ, ವ್ಯಾಸ ಬ್ರಹ್ಮಸ್ತೋತ್ರಂ ಇತ್ಯಾದಿಗಳು ಉಲ್ಲೇಖನೀಯ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಅ.ಭಾ. ಸಹ ಪ್ರಚಾರ ಪ್ರಮುಖ್ ಜೆ.ನಂದಕುಮಾರ್ ರವರು ಸ್ವಾಮೀಜಿಯವರ ಪಾವನ ಸ್ಮೃತಿಗೆ ನುಡಿನಮನ ಸಲ್ಲಿಸುತ್ತಾ ಹೀಗೆಂದಿದ್ದಾರೆ – ‘‘ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿಯವರ ಮಹಾಸಮಾಧಿಯಿಂದ ಅಪಾರ ನಷ್ಟವಾಗಿದೆ. ಅವರ ಏಳು ದಶಕಗಳಿಗೂ ಮಿಕ್ಕು ಐಹಿಕ ಪಾರಮಾರ್ಥಿಕ ಮಾರ್ಗದರ್ಶನ ನಮ್ಮೆಗೆಲ್ಲರಿಗೂ ದೊರಕಿತ್ತು. ವೈಶ್ವೀಕರಣದ ನಾಗಾಲೋಟದಲ್ಲಿ ಸಂಪ್ರದಾಯವನ್ನು ಉಳಿಸುವ ಸತ್ಕಾರ್ಯವನ್ನು ಸ್ವಾಮೀಜಿ ಮಾಡುತ್ತಿದ್ದರು. ರಾಮ ಜನ್ಮಭೂಮಿ ಆಂದೋಲನ, ಜಾತಿ ತಾರತಮ್ಯ ಇತ್ಯಾದಿ ವಿಷಯಗಳಲ್ಲಿ ಸ್ಪಷ್ಟ ನಿಲುವುಗಳನ್ನು ಹೊಂದಿ ವಿಭಾಜಕ ಶಕ್ತಿಗಳಿಂದ ಹಿಂದೂ ಸಮಾಜವನ್ನು ಸಂಘಟಿಸುವಲ್ಲಿ ಅವಿರತ ಶ್ರಮಿಸುತ್ತಿದ್ದರು. ಸುದೀರ್ಘ ಕಾಲದಿಂದ ಹಿಂದೂ ಸಮಾಜಕ್ಕೆ ಮಾರ್ಗದರ್ಶಕರಾಗಿದ್ದ ಪೂಜ್ಯ ಸುಧೀಂದ್ರತೀರ್ಥರ ವೈಕುಂಠವಾಸದಿಂದಾಗಿರುವ ನಷ್ಟವನ್ನು ಭರಿಸುವ ಸಾಮರ್ಥ್ಯವನ್ನು ನೀಡೆಂದು ಭಗವಂತನನ್ನು ಪ್ರಾರ್ಥಿಸುತ್ತಾ ಶ್ರದ್ಧೆಯ ನಮನಗಳು’’. ಅಂತೆಯೇ ದಕ್ಷಿಣ ಮದ್ಯ ಕ್ಷೇತ್ರ ಸಂಘಚಾಲಕ್ ವಿ.ನಾಗರಾಜ್‌ರವರೂ ಸೇರಿದಂತೆ ಅನೇಕ ಪ್ರಮುಖರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

   

Leave a Reply