ನಮ್ಮ ಭಾರತ ಇಂದಿಗೂ ಬಂಗಾರದ ಗಣಿಯೇ: ರವಿಕುಮಾರ್

ಹುಬ್ಬಳ್ಳಿ - 0 Comment
Issue Date : 03

ಹುಬ್ಬಳ್ಳಿ: ನಮ್ಮ ರಾಷ್ಟ್ರದ ಒಟ್ಟು ಜನಸಂಖ್ಯೆಯ ಕೇವಲ ಶೇ.1ರಷ್ಟು ಜನ ವಿದೇಶಕ್ಕೆ ಕೆಲಸ ಅರಸಿ ಹೋಗುತ್ತಿದ್ದರೆೆ ಅದನ್ನೇಕೆ ಪ್ರತಿಭಾ ಪಲಾಯನ ಎನ್ನಬೇಕು? ನಾವು ಬಾಕಿ ಶೇ.99ರಷ್ಟು ಲಭ್ಯ ದೇಸಿ ಮಾನವ ಸಂಪನ್ಮೂಲವನ್ನು ಹೇಗೆ ರಾಷ್ಟ್ರದ ಅಭ್ಯುದಯಕ್ಕೆ ಬಳಸಬಹುದು ಎಂದು ಯೋಜಿಸುವುದು ಜಾಣತನವಲ್ಲವೇ? ಅಥವಾ ಅವರೆಲ್ಲ ನಿರುಪಯುಕ್ತರು ಎಂಬ ಭಾವನೆ ಏಕೆ ಬಲಗೊಳಿಸಬೇಕು?
ಹಿಂದು ಸ್ವಯಂಸೇವಕ ಸಂಘದ ಅಂತಾರಾಷ್ಟ್ರೀಯ ಜಂಟಿ ಸಂಯೋಜಕ, ಚೆನ್ನೈ ಐಟಿಐ ಪದವೀಧರ ರವಿಕುಮಾರ ಜಿ. ಅಯ್ಯರ್ ಸಾತ್ವಿಕವಾಗಿ ಪ್ರಶ್ನಿಸಿದ್ದು ಹೀಗೆ. ನಗರದ ಬಿ.ವಿ.ಭೂಮರೆಡ್ಡಿ ತಾಂತ್ರಿಕ ಮತ್ತು ಅಭಿಯಾಂತ್ರಿಕ ಮಹಾವಿದ್ಯಾಲಯದ ಜೈವಿಕ ತಂತ್ರಜ್ಞಾನ ಸಭಾಮಂದಿರದಲ್ಲಿ ಜ.26ರಂದು ಸಂಘವು ವಿವಿಧ ಕ್ಷೇತ್ರಗಳ ಅಧ್ಯಾಪಕರಿಗೆ ಹಮ್ಮಿಕೊಂಡಿದ್ದ ‘ಜಾಗತಿಕ ಶಕ್ತಿಯಾಗಿ ಭಾರತದ ಪುನರುತ್ಥಾನ’ ವಿಷಯದ ವಿಚಾರ ಸಂಕಿರಣದಲ್ಲಿ ಮುಖ್ಯ ಭಾಷಣ ಮಾಡಿದರು.

ಕರ್‌ಲೋ ದುನಿಯಾ ಮುಠ್ಠೀ ಮೇ..!
ಭಾರತರತ್ನ ಅಬ್ದುಲ್ ಕಲಾಂ ಅವರಿಂದ ಪ್ರಶಸ್ತಿ ಪಡೆದ, ಮಿಟ್ಟಿಕೂಲ್ ಫ್ರಿಡ್ಜ್ ಸಂಶೋಧಕ ಮನಸೂಕಭಾಯಿ ಪ್ರಜಾಪತಿ (22), ದ್ವಿಚಕ್ರ ವಾಹನಕ್ಕೆ ಕೃಷಿ ಪರಿಕರ ಜೋಡಿಸಿ ಟ್ರ್ಯಾಕ್ಟರ್ ಪಲ್ಲಟಿಸಿದ ಮನಸೂಕಭಾಯಿ ಜಘಾನಿ(24), ಕೇವಲ ಎರಡು ನಿಮಿಷದಲ್ಲಿ ರಿಚಾರ್ಜ್ ಮಾಡಬಹುದಾದ ಚಾರ್ಜರ್ ಸಂಶೋಧಿಸಿದ ಈಶಾ ಖರೆ (18), ಥ್ರೀಡಿ ಮುದ್ರಕ ಸಂಶೋಧಿಸಿದ ಅಂಗದ ಧಮ್ಯಾನಿ (13), ಸುಹಾಸ ಗೋಪಿನಾಥ (14) ಕಿರಿಯ ವಯಸ್ಸಿನ ಕೋಟ್ಯಾಧಿಪತಿ, ಆಪಲ್‌ಗೆ ಪ್ರೋಗ್ರಾಂ ಬರೆದ ಚೆನ್ನೈನ ಸಂಜಯ್ (12), ಶ್ರವಣ್ (10), ಬೆಂಗಳೂರಿನ ಶ್ರೀಕಾಂತ (9) ಕಿರಿಯ ವಯಸ್ಸಿನ ಚಿತ್ರ ನಿರ್ದೇಶಕ. ಶಾಲೆಯ ಮೆಟ್ಟಿಲು ಮಾತ್ರ ಹತ್ತಿ ಇಳಿದವರ ಈ ಸಾಧನೆಗಳಿಗೆ ಐಐಟಿ, ಐಐಎಂ ಮತ್ತು ಐಐಎಸ್ಸಿಗಳಲ್ಲಿ ಚರ್ಚೆ, ಉಪನ್ಯಾಸ ಮತ್ತು ಒಡಂಬಡಿಕೆ ನಿತ್ಯ ನಡೆಯುತ್ತದೆ ಎಂಬುದನ್ನು ನಾವು ಮರೆಯಬಾರದು ಎಂದರು. ಆ್ಯಗ್ನಸ್ ಮೆಡಿಸನ್ ಎಂಬ ಅರ್ಥಶಾಸ್ತ್ರಜ್ಞ 2000 ವರ್ಷಗಳ ಇತಿಹಾಸ ಅಭ್ಯಸಿಸಿ, 1730ರವರೆಗೂ ನಮ್ಮ ದೇಶದ ನಿವ್ವಳ ಉತ್ಪನ್ನ ಶೇ.23 ರಿಂದ ಶೇ.33 ರಷ್ಟಿತ್ತು. ಜಗತ್ತಿನ ಎಲ್ಲ ರಾಷ್ಟ್ರಗಳ ಒಟ್ಟು ಉತ್ಪನ್ನದ 1/3 ಭಾಗ ಭಾರತದ್ದಾಗಿತ್ತು ಎಂದಿದ್ದರು. ಹಾಗಾಗಿ, ಬಂಗಾರದ ಗುಬ್ಬಚ್ಚಿಗಳೇ ಹಾರಾಡುತ್ತಿದ್ದ ಈ ದೇಶದೊಂದಿಗೆ ವ್ಯಾಪಾರ ಮತ್ತು ವ್ಯಾವಹಾರಿಕ ಸಂಬಂಧ ಬೆಳೆಸಿಕೊಂಡು ಶ್ರೀಮಂತರಾಗಲು ಹವಣಿಸಿದ ಡಚ್, ಫ್ರೆಂಚ್, ಇಂಗ್ಲೆಂಡ್ ಈಸ್ಟ್ ಇಂಡಿಯಾ ಕಂಪೆನಿಗಳ ನಡಾವಳಿಗೆ ಇತಿಹಾಸವೇ ಸಾಕ್ಷಿಯಾಗಿದೆ ಎಂದು ರವಿಕುಮಾರ ಹೇಳಿದರು.

ಕಲಿಕೆಗೂ-ಬದುಕಿಗೂ ಸಂಬಂಧ
ದೇವದಾರು ವೃಕ್ಷ ಮತ್ತು ದೇವನಾಗರಿ ಲಿಪಿ ಅಕ್ಷರಗಳ ಬಗ್ಗೆ ವಿಶೇಷವಾಗಿ ಪ್ರಸ್ತಾಪಿಸಿದ ಅವರು, ಅವುಗಳ ವಿನ್ಯಾಸವು ನಮ್ಮ ಕಲಿಕೆ, ಹಾಗೂ ಮಣ್ಣಿನ ಸೊಗಡಿನಲ್ಲಿ ಸಮ್ಮಿಳಿತವಾಗಿರುವುದರಿಂದ ಸೃಜನಶೀಲತೆ ನಮ್ಮ ವಂಶವಾಹಿಗಳಲ್ಲೇ ಟಂಕಿತವಾಗಿದೆ. ಜಗತ್ತಿನ ಗಮನ ಸೆಳೆವಂಥ ಸಂಶೋಧನೆಗಳಿಂದ ಭಾರತವನ್ನು ಹಗುರವಾಗಿ ಪರಿಗಣಿಸುವುದು ಯಾವ ಮುಂದುವರೆದ ರಾಷ್ಟ್ರಕ್ಕೂ ಸಾಧ್ಯವಿಲ್ಲ. ಸರ್ವೇ ಭವಂತು ಸುಖಿನಃ ಎಂಬ ಏಕೈಕ ಧ್ಯೇಯ ನಮ್ಮನ್ನು ಧನಾತ್ಮಕ ಅಭ್ಯುದಯದತ್ತ ಪ್ರೇರೇಪಿಸುತ್ತಿದೆ ಎಂದು ಅಭಿಪ್ರಾಯಪಟ್ಟರು. ಜಗತ್ತಿನ 42 ರಾಷ್ಟ್ರಗಳನ್ನು ಸುತ್ತಿರುವ ರವಿಕುಮಾರ, ಪ್ರಜಾಪ್ರಭುತ್ವ ವೇ ಅತ್ಯಂತ ಮಾದರಿ ಪ್ರಭುತ್ವ ಎಂದು ಪ್ರತಿಪಾದಿಸಿ, ದೇಶದ ಗಡಿ ರಕ್ಷಣೆಗೆ ಸೈನಿಕರ ಬಲಿದಾನ, ಆಂತರಿಕ ಮತ್ತು ಬಾಹ್ಯ ಸುರಕ್ಷೆಗೆ ಮತದಾನ ಮುಖ್ಯ ಎಂಬುದು ಮನವರಿಕೆ ಆಗಬೇಕು. ಮತದಾರ ದೇಶದ ಹಿತ, ಸಮಷ್ಟಿ ಪ್ರಜ್ಞೆ ಗೌರವಿಸಬೇಕು. ಸಮರ್ಥ ನೇತಾರ ದೇಶದ ಚುಕ್ಕಾಣಿ ಹಿಡಿಯಲು ಅಣಿಗೊಳಿಸುವ ದೂರದೃಷ್ಟಿ ಹೊಂದಬೇಕು. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವಷ್ಟು ಪ್ರಬುದ್ಧರು ನಾವಾಗಬೇಕೆ ವಿನಾ ಸಮಸ್ಯೆಯ ಶೋಷಕರು ಆಗಬಾರದು ಎಂದರು.
ಪ್ರತಿಭಟನೆಗೂ ಇಲ್ಲಿ ಅರ್ಥವಿದೆ


ಭಾರತದಲ್ಲಿ ಬಾಬಾ ರಾಮದೇವ್, ಅಣ್ಣಾ ಹಜಾರೆ ಅಂಥವರ ಪ್ರತಿಭಟನೆಗಳು ಶಾಂತಿಯುತವಾಗಿ ನಡೆದರೆ, ನಾವು ಅಂದುಕೊಂಡ ಮುಂದುವರೆದ ರಾಷ್ಟ್ರಗಳಲ್ಲಿ ಪ್ರತಿಭಟನೆಯ ಹೆಸರಿನಲ್ಲಿ ರಕ್ತಪಾತಗಳೇ ಆಗುತ್ತಿವೆ. ನಾಗರಿಕ ಸಮಾಜ ತಲೆತಗ್ಗಿಸಬೇಕಾದ ಭೋಗ ಪ್ರಧಾನ ಜೀವನ ಅಲ್ಲಿ ಮನೆಮಾಡಿ, ಶಾಂತಿ, ನೆಮ್ಮದಿ, ವಿಶ್ವಾಸ, ಪ್ರೀತಿ ಧೂಳೀಪಟವಾಗುತ್ತಿದೆ. ಜಗತ್ತೇ ಶಾಂತಿ-ನೆಮ್ಮದಿಗಾಗಿ ಭಾರತದತ್ತ ನೋಡುವಂತಾಗಿದೆ. ಅನ್ಯತ್ರ ಕಹೀಂ ನಹೀಂ.. ಯಹೀಂ ಹೈ.. ಎಂಬ ಮಾತು ಈಗ ಜಗತ್ತಿಗೆ ಅರಿವಾಗಿದೆ. ಅದು ಧರ್ಮ ಮಾರ್ಗ, ಕರ್ಮ ಮಾರ್ಗ ಮತ್ತು ಅಂತಿಮವಾಗಿ ಮೋಕ್ಷದ ಮಾರ್ಗ ಎಂದು ರವಿಕುಮಾರ ಹೇಳಿದರು. ಗಳಿಸು, ಉಳಿಸು ನಂತರ ಬಳಸು ಇದು ನಮ್ಮ ಸಂಸ್ಕೃತಿ. ಹಾಗಾಗಿ, ಆರ್ಥಿಕ ಮುಗ್ಗಟ್ಟು ನಮ್ಮನ್ನು ಬಾಧಿಸುವುದಿಲ್ಲ. ನಮ್ಮ ಮನೆಗಳಲ್ಲಿ ಅಮ್ಮಂದಿರ ಈ ಸಣ್ಣ ಉಳಿತಾಯದ ಗುಣವೇ ಕುಟುಂಬವನ್ನು ಸದಾ ಆರ್ಥಿಕ ಮುಗ್ಗಟ್ಟಿನಿಂದ ಕಾಯ್ದಿದೆ. ಸರಿಯಾದ ತಿಳಿವಳಿಕೆ, ನಮ್ಮ ಹಾಸಿಗೆ ಇದ್ದಷ್ಟು ಕಾಲು ಚಾಚುವ ಬಲಾಬಲಗಳ ಅರಿವು ಇರಬೇಕು. ಜಗತ್ತಿನ ಬಹುತೇಕ ಕ್ಷೇತ್ರಗಳಲ್ಲಿ ಮುಂಚೂಣಿ ಹುದ್ದೆಗಳಲ್ಲಿ ಮಿತವ್ಯಯಿ ಚಾಣಾಕ್ಷ ಭಾರತೀಯರೇ ಇದ್ದಾರೆ ಎಂಬುದನ್ನು ಮರೆಯಬಾರದು ಎಂದರು. ಸಂಘದ ಪ್ರಾಂತ ಸಹ ಕಾರ್ಯವಾಹ ಶ್ರೀಧರ ನಾಡಿಗೇರ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಪ್ರಚಾರಕ ದಾ.ಮ. ರವೀಂದ್ರ, ಪ್ರಾಂತ ಪ್ರಚಾರಕ ಶಂಕರಾನಂದ, ಪ್ರಾಂತ ಪ್ರಚಾರಕ ಪ್ರಮುಖ ರಘುನಂದನ್, ಸಹಪ್ರಮುಖ ರಾಮಚಂದ್ರ ಭಟ್ ಕಾಸರಗೋಡು, ಪ್ರಚಾರಕರಾದ ಡಾ. ರವೀಂದ್ರ, ಅರುಣಕುಮಾರ್ ಸೇರಿದಂತೆ ವಿಚಾರ ಸಂಕಿರಣದ ಸಂಯೋಜಕರಾದ ಸಂದೀಪ ಬೂದಿಹಾಳ, ಡಾ. ಜಗದೀಶ ಬಾರಗಿ ಹಾಗೂ ವಿವಿಧ ಕ್ಷೇತ್ರಗಳ ಅಧ್ಯಾಪಕರು ಪಾಲ್ಗೊಂಡಿದ್ದರು.

   

Leave a Reply