ನರಸಿಂಹನ ನೆಲೆಗಳು

ಧಾರ್ಮಿಕ - 0 Comment
Issue Date : 29.04.2015

ಪ್ರಹ್ಲಾದ ನಾರದ ಪರಾಶರ ಪುಂಡರೀಕ
ವ್ಯಾಸಾದಿ ಭಾಗವತ ಪುಂಗವಹೃನ್ನಿವಾಸ
ಭಕ್ತಾನುರಕ್ತ ಪರಿಪಾಲನ ಪಾರಿಜಾತ
ಲಕ್ಷ್ಮೀನೃಸಿಂಹ ಮಮದೇಹಿ ಕರಾವಲಂಬಂ॥
ಪ್ರಹ್ಲಾದ, ನಾರದ, ಪರಾಶರ, ಪುಂಡರೀಕ, ವ್ಯಾಸ ಮೊದಲಾದ ಭಾಗವತೋತ್ತಮರ ಹೃದಯದಲ್ಲಿ ವಾಸಿಸುವವನೆ, ಅನುರಾಗ ಯುಕ್ತರಾದ ಭಕ್ತರನ್ನು ಕಾಪಾಡುವುದರಲ್ಲಿ ಕಲ್ಪವೃಕ್ಷದಂತೆ ಇರುವವನೇ, ಹೇ ಲಕ್ಷ್ಮೀನೃಸಿಂಹ, ನಿನ್ನ ಕರಗಳ ಆಶ್ರಯ ಆಸರೆಯನ್ನು ದಯಪಾಲಿಸು – ಶ್ರೀ ಶಂಕರಾಚಾರ್ಯವಿರಚಿತ.
– (ಸ್ತವಕುಸುಮಾಂಜಲಿ)
ವೈಶಾಖ ಶುದ್ಧ, ಚತುರ್ದಶಿಯಂದು ನರಸಿಂಹ ಜಯಂತಿ
ನರಸಿಂಹಾರಾಧನೆಯ ಬಗ್ಗೆ ಸ್ಪಷ್ಟ ಚಿತ್ರವನ್ನು ಮನದಲ್ಲಿ ಮೂಡಿಸಿಕೊಳ್ಳುವ ಹಂತದಲ್ಲಿ ಕರ್ನಾಟಕದಲ್ಲಿರುವ ಶಿಲ್ಪಗಳಿಗೆ ಸಿಂಹಪಾಲು ದೊರೆತಿದೆ.
ಪುರಾಣದಲ್ಲಿ ಉಕ್ತವಾಗಿರುವಂತೆ ನರಸಿಂಹನ ಅವತಾರವು ಹೀಗಿದೆ. ಹಿಂದೆ ಭೂಲೋಕದಲ್ಲಿ ಹಿರಣ್ಯಕಶಿಪು ಎಂಬ ರಾಕ್ಷಸನ ಉಪಟಳವು ಅತಿಯಾಗಿದ್ದಿತು. ಅವನು ಘೋರ ತಪಸ್ಸು ಮಾಡಿ ಮಹೇಶ್ವರನಿಂದ ಒಂದು ಅಪರೂಪವಾದ ವರವನ್ನು ಪಡೆದು ಕೊಂಡಿದ್ದನು. ಅದೇನೆಂದರೆ ಅವನನ್ನು ಮನುಷ್ಯನಾಗಲೀ, ಪ್ರಾಣಿಯಾಗಲೀ, ಹೆಂಗಸಾಗಲೀ ಅಥವಾ ಗಂಡಸಾಗಲೀ, ಹಗಲು ಹೊತ್ತಿನಲ್ಲಾಗಲೀ, ರಾತ್ರಿಯ ಹೊತ್ತಿನಲ್ಲಾಗಲೀ, ಯಾವ ಆಯುಧದಿಂದಾಗಲೀ ಮರಣವು ಸಂಭವಿಸಬಾರದು. ಈ ಜಾಣ್ಮೆಯ ವರದ ಮಹತ್ತಿನಿಂದ ಸರ್ವತಂತ್ರಸ್ವತಂತ್ರನಾಗಿ ಲೋಕಕಂಟಕನಾಗಿ ಬೆಳೆಯುತ್ತಲೇ ಹೋದನು.
ಅವನ ಅಹಂಕಾರ, ದುಷ್ಕೃತ್ಯಗಳನ್ನು ಅಡಗಿಸಲು ದೇವತೆಗಳು ಚತುರತೆ ಯಿಂದ ಕೂಡಿದ ಒಂದು ಉಪಾಯವನ್ನು ರಚಿಸಿದರು. ಅದೇನೆಂದರೆ ಪ್ರಾಣಿ ಮತ್ತು ಮಾನವರೂಪಿ, ಉಗುರುಗಳೇ ಆಯುಧವಾಗಿ ಉಳ್ಳ ನರ – ಸಿಂಹ ಅವತಾರವನ್ನು ಸೃಷ್ಟಿಸಿ, ಸಂಜೆಯ ಹೊತ್ತಿನಲ್ಲಿ ಹಿರಣ್ಯಕಶಿಪುವನ್ನು ಸಂಹರಿಸಿ ಭೂಲೋಕವನ್ನು ಉದ್ಧರಿಸಲಾಯಿತು. ಇದಕ್ಕೆ ಹಿರಣ್ಯಕಶಿಪುವಿನ ಮಗ ಪ್ರಹ್ಲಾದನೇ ಕಾರಣನಾಗುತ್ತಾನೆ. ಪ್ರಹ್ಲಾದನು ಹಿರಣ್ಯಕಶಿಪುವಿನ ಮಗ, ತಾಯಿ ಕಯಾದು. ಹಿರಣ್ಯಕಶಿಪು ಶಿವಭಕ್ತ ಮಗ ಪ್ರಹ್ಲಾದನು ವಿಷ್ಣುಭಕ್ತ. ಮಗನನ್ನು ಶಿವಭಕ್ತನನ್ನಾಗಿ ಮಾಡಲು ನಡೆಸಿದ ಉಪಾಯಗಳೊಂದೂ ಫಲಿಸದೇ ಹೋಯಿತು. ಪ್ರಹ್ಲಾದನನ್ನು ಕೊಲ್ಲಲು ಹೋದನು. ಆಗ ಬಾಲಕ ಪ್ರಹ್ಲಾದನು ಭಕ್ತಿಯಿಂದ ವಿಷ್ಣುವನ್ನು ಪ್ರಾರ್ಥಿಸಲು ವಿಷ್ಣುವು ನರಸಿಂಹಾವತಾರ ತಾಳಿ ಹಿರಣ್ಯಕಶಿಪುವನ್ನು ಸಂಹಾರ ಮಾಡುತ್ತಾನೆ. ಇದು ಪುರಾಣದ ಪುಣ್ಯಕಥೆ.
ಭಾರತದಲ್ಲಿ ನರಸಿಂಹಾರಾಧನೆಯನ್ನು ಪ್ರಾಚೀನ ಕಾಲದಿಂದಲೂ ಮಾಡಿಕೊಂಡು ಬಂದಿದ್ದರೂ ಸಹ ಶತ್ರುಗಳ ಹತ್ತು ಹಲವು ದೂಂಬಿ ದಾಳಿದಂಡ ಯಾತ್ರೆಗಳಿಂದಾಗಿ ಆಲಯಗಳು ಜೀರ್ಣ. ಶಿಥಿಲವಾಗಿ ನಡುಗಾಲದಲ್ಲಿಯೇ ಕಾಲಗರ್ಭ ಸೇರಿಹೋಗಿವೆ.
ಕರ್ನಾಟಕ, ಆಂಧ್ರ, ತಮಿಳುನಾಡುಗಳಲ್ಲಿ ನರಸಿಂಹ ಆರಾಧನೆ ವಿಶೇಷವಾಗಿ ನಡೆಯುತ್ತಾ ಬಂದಿದೆ. ಕಾಲದಿಂದಲೂ ಈ ರಾಜ್ಯಗಳು ನರಸಿಂಹ ಸಾಹಿತ್ಯಕ್ಕೆ ಮನ್ನಣೆ ಮರ್ಯಾದೆ ನೀಡಿ ತಮ್ಮ ನಡುವೆ ನರಸಿಂಹಾಲಯಗಳನ್ನು ಕಟ್ಟಿಕೊಂಡು ನಮ್ಮೊಳಗಿನ ಹಿರಣ್ಯಸಮಾನ ಅಹಂಕಾರವನ್ನು ಕಳೆದುಕೊಳ್ಳಲು ಪ್ರಯತ್ನ ಪಡುತ್ತಿರುವುದು ಸ್ತುತ್ಯಾರ್ಹ, ಈ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಯಾ ಪ್ರದೇಶದ ಭೌಗೋಳಿಕ, ಚಾರಿತ್ರಿಕ, ಸಾಮಾಜಿಕ, ಆರ್ಥಿಕ ಸನ್ನಿವೇಶಗಳಿಗೆ ತಕ್ಕಂತೆ ದೇವಸ್ಥಾನಗಳು ನಿರ್ಮಾಣವಾಗಿವೆ. ನರಸಿಂಹ ಶಿಲ್ಪಗಳಲ್ಲಿ ಯೋಗಾನರಸಿಂಹ, ಲಕ್ಷ್ಮೀನರಸಿಂಹ, ಉಗ್ರ, ವೀರ, ಶಾಂತ, ಪ್ರಸನ್ನ ನರಸಿಂಹ, ಕಂಭ ನರಸಿಂಹ ಎಂದು ಅನೇಕ ವಿಧಗಳಿವೆ.
ಕರ್ನಾಟಕ: ಕರ್ನಾಟಕವನ್ನು ಆಳಿದ ರಾಜಮನೆತನಗಳಲ್ಲಿ ಬಾದಾಮಿ ಚಾಲುಕ್ಯರಿಗೆ ಗಮನಾರ್ಹವಾದ ಸ್ಥಾನ ಲಭಿಸಿರುವುದು ಅವರಲ್ಲಿನ ವಾಸ್ತುಶಿಲ್ಪ ಪ್ರಜ್ಞೆಯ ಪ್ರೌಢಿಮೆಯಿಂದಾಗಿ. ಇವರ ಕಾಲದಲ್ಲಿ ಗುಹಾಂತರ್ದೇವಾಲಯಗಳು ನಿರ್ಮಾಣವಾದವು. ಬೆಟ್ಟವನ್ನು ಭಗವಂತನೆಂದು ಭಾವಿಸಿ ಆ ಬೆಟ್ಟಗಳ ಬದಿಯ ಬೃಹತ್ ಬಂಡೆಗಳನ್ನು ಕೊರೆದು ಗುಹೆಗಳನ್ನು ನಿರ್ಮಿಸಿದ್ದೇ ಅಲ್ಲದೆ ಅವುಗಳನ್ನೇ ಆಲಯಗಳನ್ನಾಗಿ ಕೆತ್ತಿ ತಿದ್ದಿದರು. ಶಿಲ್ಪಿಗಳ ಕಲಾತ್ಮಕತೆಗೆ, ಸಾಹಸಕ್ಕೆ ಸಾಕ್ಷಿಯಾಗಿವೆ. ಹೀಗೆ ಕೊರೆದ ಆಲಯಗಳಲ್ಲಿ ಶಿವ, ವಿಷ್ಣು, ಜಿನರ ಮೂರ್ತಿಗಳನ್ನು ಕಲ್ಲಿನಲ್ಲಿ ಗುಹೆಯೊಳಗೇ ಕೆತ್ತುವುದರಿಂದ ಅವುಗಳನ್ನು ಪ್ರತಿಷ್ಠಾಪಿಸುವ ಅಗತ್ಯವೇ ಇರುವುದಿಲ್ಲ. ಕೈ ಮುಗಿದು ಪೂಜಿಸುವುದಷ್ಟೇ ಕಾಯಕ. ಹೀಗೆ ನರಸಿಂಹ ಮೂರ್ತಿಯ ವಿಶಿಷ್ಟ ಭಂಗಿಗಳನ್ನು ಬಾದಾಮಿ, ಪಟ್ಟದಕಲ್ಲುಗಳಲ್ಲಿ ಕಾಣಬಹುದು.
ಬಾದಾಮಿ ಚಾಲುಕ್ಯರಂತೆಯೇ ಕದಂಬರೂ ಸಹ ನರಸಿಂಹ ಶಿಲ್ಪಗಳ ನಿರ್ಮಾಣಕ್ಕೆ ಕಾರಣರಾಗಿದ್ದಾರೆ. ಇವರ ಆಳ್ವಿಕೆಯ ಪ್ರದೇಶಗಳಾದ ಹಲಸಿ, ಕುಬಟೂರು, ಕೂಡಲಿ ಮುಂತಾದ ಕಡೆಗಳಲ್ಲಿ ದ್ವಿಭುಜ ನರಸಿಂಹ ಶಿಲ್ಪಗಳಿವೆ. ನರಸಿಂಹ ರೂಪದ ಘನತೆಗೆ ಇವು ಸಾಕ್ಷಿಯಾಗಿವೆ.
ಕರ್ನಾಟಕವನ್ನು ಅತ್ಯಂತ ವೈಭವದಿಂದ ಆಳಿ, ಇಲ್ಲಿನ ನೆಲದಲ್ಲಿ ಉತ್ಕೃಷ್ಟವಾದ ಶಿಲ್ಪ ಕಲೆಯ ನೆಲೆಗಳನ್ನುಂಟು ಮಾಡಿದ ಕೀರ್ತಿ ಹೊಯ್ಸಳರಿಗೆ ಸೇರುತ್ತದೆ. ವಿಷ್ಣುವರ್ಧನನೂ ಒಂದನೆಯ ನರಸಿಂಹನಿಂದ ಆರಂಭಿಸಿ ಮೂರನೆಯ ನರಸಿಂಹನವರೆಗೆ ಈ ಮನೆತನದ ರಾಜರಲ್ಲಿ ಪ್ರಸಿದ್ಧರಾಗಿರುವರು. ಇವರ ಆಡಳಿತವನ್ನು ಅವಲೋಕಿಸಿದಾಗ ಈ ರಾಜರುಗಳಿಗೆ ನರಸಿಂಹನ ಬಗೆಗೆ ಇದ್ದ ಭಕ್ತಿ, ಪ್ರೀತಿಗಳು ಆಸಕ್ತಿ, ಆರಾಧನೆಗಳು ಸ್ಪಷ್ಟಗೊಳ್ಳುತ್ತದೆ. ಕರ್ನಾಟಕದ ದೊಡ್ಡಗದ್ದವಳ್ಳಿ, ಜಾವಗಲ್, ಭದ್ರಾವತಿ, ನುಗ್ಗೇಹಳ್ಳಿ, ಶಾಂತಿ ಗ್ರಾಮದಲ್ಲಿ ಹೊಯ್ಸಳ ಶಿಲ್ಪದ ನರಸಿಂಹ ದೇವಾಲಯಗಳಿವೆ. ಹೊಯ್ಸಳರಿಗೂ ಮುಂಚೆ ಗಂಗ ಮಂಡಲವನ್ನಾ ಕ್ರಮಿಸಿಕೊಂಡ ಚೋಳ ವಂಶದ ರಾಜರ ವೈಷ್ಣವಾರಾಧನೆಯ ನೆಲೆಯಾಗಿ ಮಾರೇಹಳ್ಳಿ ಲಕ್ಷ್ಮಿನರಸಿಂಹ ದೇವಾಲಯ ಮತ್ತು ಇಲ್ಲಿಯ ಶಿಲ್ಪಗಳು ನಮ್ಮ ಮನಸೆಳೆಯುತ್ತವೆ.
ದೇವರಾಯನದುರ್ಗ: ತುಮಕೂರಿನಲ್ಲಿ ಸಮುದ್ರಮಟ್ಟಕ್ಕಿಂತ 4000 ಅಡಿ ಎತ್ತರದ ಬೆಟ್ಟದ ಮೇಲೆ ಏಳುದ್ವಾರಗಳಿರುವ ಕೋಟೆ ಕೊತ್ತಳ (ವೀರ ಮದಕರಿ ನಾಯಕನ ಕಾಲ)ಗಳ ವಿಶೇಷ ಆಕರ್ಷಣೆಯಿರುವ ಲಕ್ಷ್ಮೀನರಸಿಂಹ ದೇವಾಲಯವು ಯಾತ್ರಾಸ್ಥಳವಾಗಿದೆ. ಆಂಜನೇಯ, ಸಂಜೀವರಾಯನ ಕಲ್ಲಿನ ಶಿಲ್ಪಗಳಿವೆ. ಬೆಟ್ಟದ ಮೇಲೆ ತಂಪಾದ ಹವೆ. ಚೈತ್ರ ಹುಣ್ಣಿಮೆಯಂದು ರಥೋತ್ಸವ, ಕೆಳಗೆ ಬಂದರೆ ನಾಮದ ಚಿಲುಮೆ. ಸಣ್ಣ ಝರಿ ನೀರಿನ ಪುಟ್ಟ ಚಿಲುಮೆ ಅಥವಾ ಕಾರಂಜಿ ಇದೆ. ಇದು ತಿಳಿನೀರಿನ ಬತ್ತದ ನೀರಿನ ಆಸರೆಯಾಗಿದೆ.
ದೊಡ್ಡದಾಳವಟ್ಟ: ತುಮಕೂರಿನ ಮಧುಗಿರಿ ಜಿಲ್ಲೆಗೆ ಸೇರಿದೆ. ಬೆಟ್ಟದ ಮೇಲಿರುವ ನರಸಿಂಹ ದೇವಾಲಯವನ್ನು ಹತ್ತುವುದು ಶ್ರಮದಾಯಕ. ಸುಮಾರು 300 ವರ್ಷಗಳದ್ದು. ಆಂಧ್ರ ಮತ್ತು ಕರ್ನಾಟಕದ ಗಡಿ ಪ್ರದೇಶದಲ್ಲಿದೆ. ನರಸಿಂಹ ನಾನಾ ರೂಪಗಳ ಜೊತೆಗೆ ಕಾಳಿಂಗಮರ್ದನ, ಬೆಣ್ಣೆ ತಿನ್ನುತ್ತಿರುವ ಕೃಷ್ಣ, ಕೃಷ್ಣನ ರಾಸಕ್ರೀಡೆ, ಶಿಲಾ ಪಟ್ಟಿಕೆ, ಸುಕನಾಸಿ, ನಂತರ ಗರ್ಭಗೃಹ, ಲಕ್ಷ್ಮೀದೇವರು ಮೂಲ ದೇವರು. ಪ್ರತಿ ವರ್ಷ ಆಷಾಢ ಶುದ್ಧ ದಶಮಿಯಿಂದ ಒಂದು ವಾರದವರೆಗೆ ತೇರು, ಜಾತ್ರೆ, ಕಲ್ಯಾಣೋತ್ಸವ ಮುಂತಾದವುಗಳು ಸಡಗರ ಸಂಭ್ರಮದಿಂದ ನಡೆಯುತ್ತವೆ.
ಹೊಳೇನರಸೀಪುರದ ಲಕ್ಷ್ಮೀನರಸಿಂಹ: ಹಾಸನ ಜಿಲ್ಲೆಯಲ್ಲಿ ಹೇಮಾವತೀ ಬಲದಂಡೆಯ ೆುೀಲಿದೆ. ಫಾಲ್ಗುಣ ಶುದ್ಧ ಪೌರ‌್ಣಮಿಯಂದು ರಥೋತ್ಸವ, 10ನೇ ಶತಮಾನದ ಚಂಗಾಳ್ವರು ಆಳಿದರು. 11ನೆಯ ಶತಮಾನದಲ್ಲಿ ಹೊಯ್ಸಳರು ಆಳಿದರು. ದ್ರಾವಿಡ ಶೈಲಿಯ ಮುಖ ಮಂಟಪ, ಶಿಖರ, ಗೋಪುರ, ಯಥಾಕ್ರಮದಲ್ಲಿದೆ, ದೇವಾಲಯ ಪೂರ್ವಾಭಿಮುಖವಾಗಿದೆ. ಪ್ರಾಂಗಣದ ಮಧ್ಯ ಭಾಗದಲ್ಲಿ ಸುಮಾರು ಆರೂವರೆ ಅಡಿ ಎತ್ತರದ ಕಂಭವಿದೆ.
ನುಗ್ಗೇಹಳ್ಳಿ ದೇವಾಲಯ: ಶಿಲ್ಪಗಳ ದಿಬ್ಬಣವೇ ಸಾಗಿದೆ. ಹಾಸನ ಜಿಲ್ಲೆಯಲ್ಲಿದೆ. 12ನೆಯ ಶತಮಾನದ ಹೊಯ್ಸಳರ ದಂಡನಾಯಕ ಬೊಮ್ಮಣ್ಣನ ಕಾಲದಲ್ಲಿ ರಚಿತವಾದದ್ದು. ನಕ್ಷತ್ರಾಕಾರದ ಬಹುಕೋನ ವೇದಿಕೆ. ಹೊರ ಮೈ 8 ಕೋಣದ ಸಾಲುಪಟ್ಟಿಕೆಯಲ್ಲಿ ವಿವಿಧ ಭಂಗಿಯ ಆನೆ, ಕುದುರೆ, ಅಲ್ಲದೇ ಅಲಂಕಾರದ ಸುರುಳಿಗಳೂ, ಕಮಲ, ಬಳ್ಳಿ, ಮಕರ, ಹಂಸಗಳ ದೊಡ್ಡ ಸಮೂಹವೇ ಇದೆ. ಇದು ಕೇಂದ್ರ ಪುರಾತತ್ವ ಇಲಾಖೆಯ ಉಸ್ತುವಾರಿಯಲ್ಲಿದೆ.
ಮೇಲುಕೋಟೆ: ಮೈಸೂರಿನಿಂದ 50 ಕಿ.ಮೀ. ಶ್ರೀವೈಷ್ಣವರ ಆರಾಧನಾ ಸ್ಥಳ. ಚೆಲುವನಾರಾಯಣ, ಯೋಗಾನರಸಿಂಹ ದೇವಾಲಯವು ಯದುಶೈಲದ ಮೇಲಿದೆ. ಗುಡಿಯ ಗೋಪುರವು ಶಿಖರದಂತಿದೆ. ಸೋಪಾನ ಮಾರ್ಗದಿಂದ ಕ್ರಮಿಸಬೇಕು. ಮಧ್ಯೆ ಮಧ್ಯೆ ಮಂಟಪಗಳಿವೆ. ಪ್ರಕೃತಿ ದೃಶ್ಯ ಮನೋಹರವಾಗಿದೆ. ಕಿರೀಟವನ್ನು ಹೋಲುವ ವಿಮಾನ ಗೋಪುರವಿದೆ. ಮುಮ್ಮಡಿ ಕೃಷ್ಣರಾಜರು ಒಪ್ಪಿಸಿರುವ ಬಂಗಾರದ ಕಿರೀಟವನ್ನು ನರಸಿಂಹ ಜಯಂತಿಯಂದು ತೊಡಿಸುತ್ತಾರೆ.
ಕನಕಗಿರಿ: ಕನಕಗಿರಿಯ ಸಾಲಿಗ್ರಾಮ ನರಸಿಂಹ ದೇವಾಲಯವು ಹಂಪೆಗೆ ಸಮೀಪದ ಕೊಪ್ಪಳದ ಗಂಗಾವತಿಯ ತಾಲೂಕಿನಲ್ಲಿದೆ. 3-4 ಶತಮಾನಗಳ ಪ್ರಾಚೀನತೆ ಇದಕ್ಕೆ ಇದೆ. ಮೂಲ ಮೂರ್ತಿ ಒಂದು ಅಡಿ ಎತ್ತರ, ಎರಡು ಅಡಿ ಅಗಲವಿರುವ ಸಾಲಿಗ್ರಾಮದ ಮೇಲೆ ನರಸಿಂಹ ಮುಖವಾಡವನ್ನಿಟ್ಟು ಪೂಜೆ ಮಾಡಲಾಗುತ್ತದೆ. ಪಕ್ಕದಲ್ಲಿ ದೇವಿಯ ವಿಗ್ರಹವಿದೆ. ಫಾಲ್ಗುಣ ಪಂಚಮಿಯಂದು ರಥೋತ್ಸವ. ರಥವು ಕಾಷ್ಠಶಿಲ್ಪ ಹಾಗೂ ಒಟ್ಟೆ ಪತಾಕೆಗಳಿಂದ ಶೃಂಗರಿಸಲ್ಪಟ್ಟಿರುತ್ತದೆ.
ಇತ್ತೀಚೆಗೆ ಕರ್ನಾಟಕದ ಎಲ್ಲ ಕಡೆಗಳಲ್ಲೂ ತನ್ನದೇ ಆದ ಐತಿಹ್ಯವನ್ನು ಹೊಂದಿರುವ ನರಸಿಂಹ ದೇವಾಲಯಗಳಿವೆ.
ಒಟ್ಟಾರೆ ನರಸಿಂಹಾವತಾರದ ಮುಖ್ಯ ಉದ್ದೇಶ ಹಿರಣ್ಯಕಶಿಪುವಿನ ವಧೆಯಾಗಿ ಆ ಮೂಲಕ ಅವನಿಗೆ ವೈಕುಂಠ ಪ್ರವೇಶ ಶೀಘ್ರಗೊಳಿಸುವುದಾಗಿದೆ. ಹರಿಯ ಸನ್ನಿಧಿಯಲ್ಲಿ ಅತ್ಯಂತ ಯೋಗ್ಯಸ್ಥಾನ ದಲ್ಲಿದ್ದು ತಮ್ಮ ತುಸುವೇ ಪ್ರಮಾದದಿಂದ ಲೋಕದ ಮತ್ತೊಂದು ನೆಲೆಯಲ್ಲಿ ದಾನವರಾಗಿ ಹರಿದ್ವೇಷಿಗಳಾಗಿ ಕಾಲ ಕಳೆಯಬೇಕಾಗಿ ಬಂದಾಗ, ಪುನರಪಿ ಹಿಂದಿನ ಉತ್ತಮ ನೆಲೆಗೇರಲು ತವಕಿಸುವುದು, ಪರಮಾತ್ಮನ ದಯಾಗುಣದ ಅತ್ಯಂತ ಶ್ರೇಷ್ಠ ಉದಾಹರಣೆಯಾಗಿದೆ. ಹಿರಣ್ಯನಂತಹವನನ್ನು ಹಿಡಿದು ಗತಿ ಕಾಣಿಸಿದ ನರಸಿಂಹನಲ್ಲಿ ಮಾನವ – ಪ್ರಾಣಿ ಸಂಬಂಧದ ಒಂದು ರೂಪವನ್ನು ಕಾಣುವುದು ಸಹಜವೇ ಆಗಿದೆ.
ಭರತ ಖಂಡದ ಧಾರ್ಮಿಕ, ಸಾಂಸ್ಕೃತಿಕ ಪರಂಪರೆಯಲ್ಲಿ ದೇವಸ್ಥಾನವು ವಿಶಿಷ್ಟವಾಗಿದೆ. ಶಿವ, ವಿಷ್ಣು, ಬ್ರಹ್ಮ, ದೇವ ದೇವಿಯರನ್ನು ನಾನಾ ರೂಪಗಳಲ್ಲಿ ಆರಾಧಿಸಲಾಗುತ್ತದೆ. ಆತನ ಕೃಪೆಗಾಗಿ ಹಲವು ಹನ್ನೊಂದು ರೀತಿಯಲ್ಲಿ ಪೂಜೆ ಉತ್ಸವಗಳನ್ನು ನಡೆಸಲಾಗುತ್ತದೆ. ಇದಕ್ಕಾಗಿಯೇ ದೇಶದ ಉದ್ದಗಲಕ್ಕೂ ಅಸಂಖ್ಯ ದೇಗುಲಗಳು ಹರಡಿ ನಿಂತಿವೆ.
ಈ ನೆಲೆಗಳನ್ನು ದರ್ಶಿಸುವುದರಿಂದ ಜನರಿಗೆ ದೈವೀಭಾವ, ವಿಭಿನ್ನ ಸಂಸ್ಕೃತಿ, ಆಚರಣೆ, ವೈವಿಧ್ಯ, ನಿಸರ್ಗದ ಸೊಬಗು ಎಲ್ಲವೂ ಒಟ್ಟಾಗಿ ಮೇಳೈಸಿ ನವಚೈತನ್ಯ ದೊರಕುತ್ತದೆಂದು ಪ್ರತೀತಿ.

– ಶಾರದಾ ಶಾಮಣ್ಣ

   

Leave a Reply