ನಾಜೂಕು ನಯನಕ್ಕೂ ಬೇಕು ವ್ಯಾಯಾಮ !

ಆರೋಗ್ಯ ; ಲೇಖನಗಳು - 0 Comment
Issue Date :

ಕಣ್ಣು ಮನುಷ್ಯನ ದೇಹದ ಬಹುಮುಖ್ಯ ಅಂಗ. ಪಂಚೇಂದ್ರಿಯಗಳಲ್ಲಿ ಬಹುಮುಖ್ಯವಾದ ಕಣ್ಣಿನ ಮೇಲೆ ಹೊಸ ಯುಗ ಇನ್ನಿಲ್ಲದಷ್ಟು ಅವಲಂಬಿತವಾಗಿದೆ. ಆದರೆ ಸದಾ ಕಂಪ್ಯೂಟರ್ ಮುಂದೆ ಕೂರುವ ಮತ್ತು ಮೊಬೈಲ್ ಫೋನ್‌ಗಳನ್ನು ಉಪಯೋಗಿಸುವವರು ತಮ್ಮ ಕಣ್ಣಿನ ಬಗ್ಗೆ ಎಷ್ಟು ಕಾಳಜಿ ತೆಗೆದುಕೊಳ್ಳುತ್ತಿದ್ದಾರೆಂದರೆ ಅದಕ್ಕೆ ಉತ್ತರವಿಲ್ಲ. ಏಕೆಂದರೆ ಕಣ್ಣಿಗೂ ಪ್ರತಿದಿನ ವ್ಯಾಯಾಮ ಬೇಕು ಎಂಬುದು ಹಲವರಿಗೆ ಗೊತ್ತಿರಲಿಕ್ಕಿಲ್ಲ. ಕಣ್ಣಿಗೆ ವಿಶ್ರಾಂತಿ ಬೇಕು. ನಿದ್ರೆಯ ಮೂಲಕ ಅದು ವಿಶ್ರಾಂತಿ ಪಡೆಯುತ್ತದೆ. ಆದರೆ ಕಣ್ಣಿಗೆ ವ್ಯಾಯಾಮವೂ ಬೇಕು ಎಂದರೆ ಎಷ್ಟು ಜನ ನಂಬಿಯಾರು?
ದೃಷ್ಟಿ ಶಕ್ತಿ ಸರಿಯಾಗಿರುವುದಕ್ಕೆ, ಕಣ್ಣಿನ ಸಮಸ್ಯೆಗಳ್ಯಾವುದೂ ಕಾಡಬಾರದು ಎಂದಾದರೆ ಕೆಲವು ವ್ಯಾಯಾಮಗಳನ್ನು ಮಾಡಲೇಬೇಕು. ಕಣ್ಣಿಗೆ ವ್ಯಾಯಾಮ ನೀಡುವುದಕ್ಕೆ ನಾವೇನು ಬೆಳಗ್ಗೆ ಬೇಗ ಎದ್ದು, ಓಡುವ ಅಗತ್ಯವಿಲ್ಲ. ಕೆಲಸ ಮಾಡುವ ಜಾಗದಲ್ಲೇ ಕೊಂಚ ಕಾಲ ಕಣ್ಣಿಗೆ ಬಿಡುವು ನೀಡಿ. ಕಂಪ್ಯೂಟರ್ ಅಥವಾ ಸ್ಮಾರ್ಟ್ ಫೋನ್ ಪರದೆಯಿಂದ ಕಣ್ಣನ್ನು ಕಿತ್ತಿಡಿ!

  •  ಮೊದಲು ಒಂದೆರಡು ನಿಮಿಷ ಕಣ್ಣನ್ನು ಮುಚ್ಚಿ ಕೊಂಡು, ನಿಮ್ಮ ಮೊಣಕೈ ಅನ್ನು ಟೇಬಲ್ ಮೇಲೆ ಊರಿ. ನಂತರ ನಿಮ್ಮ ಅಂಗೈಯಿಂದ ಕಣ್ಣನ್ನು ಮುಚ್ಚಿಟ್ಟುಕೊಳ್ಳಿ.
  •  ತಲೆ ಅಥವಾ ಕತ್ತನ್ನು ಅಲ್ಲಾಡಿಸದೆ ಕೇವಲ ನಿಮ್ಮ ಕಣ್ಣನ್ನು ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ ಹೊರಳಾಡಿಸಿ. ಕನಿಷ್ಟ 15 ಬಾರಿಯಾದರೂ ಇದನ್ನು ಮಾಡಿ.
  •  ಎಡದಿಂದ ಬಲಕ್ಕೆ ಮಾತ್ರವಲ್ಲದೆ ಮೇಲಿನಿಂದ ಕೆಳಕ್ಕೂ ಕಣ್ಣನ್ನು ಚಲಿಸಿರಿ.
  •  ವರ್ತುಲಾಕಾರದಲ್ಲೂ ಚಲಿಸುವುದಕ್ಕೆ ಸಾಧ್ಯವೇ ಎಂದು ಪ್ರಯತ್ನಿಸಿ.
  •  ಕೆಲ ಸಮಯ ಹತ್ತಿರದ ವಸ್ತುವನ್ನೂ, ಇನ್ನು ಕೆಲ ಸಮಯ ದೂರದ ವಸ್ತುವನ್ನು ನೋಡಿ.
  •  ನಿಮ್ಮ ಹುಬ್ಬಿನ ಮಧ್ಯ ಭಾಗವನ್ನು ನೋಡುತ್ತಿರಿ.
  •  ನಂತರ ಮೂಗಿನ ತುದಿಯನ್ನೂ ಕೆಲ ಸಮಯ ನೋಡಿ.
  •  ಇವೆಲ್ಲ ಮಾಡಿದ ನಂತರ ಮತ್ತೆರಡು ನಿಮಿಷ ನಿಮ್ಮ ಕಣ್ಣನ್ನು ಗಟ್ಟಿಯಾಗಿ ಮುಚ್ಚಿಟ್ಟುಕೊಳ್ಳಿ.
  •  ನಂತರ ನಿಮ್ಮ ಬೆರಳುಗಳಿಂದ ನಿಧಾನವಾಗಿ ಕಣ್ಣನ್ನು ಮಸಾಜ್ ಮಾಡುತ್ತಿರಿ. ಮೂರ‌್ನಾಲ್ಕು ನಿಮಿಷ ಹೀಗೇ ಮಾಡುತ್ತಿದ್ದರೆ ಕಣ್ಣು ಲವಲವಿಕೆಯಿಂದಿರುತ್ತದೆ. ಕಣ್ಣು ಶುಷ್ಕವಾಗುವುದನ್ನು ತಡೆಯಬಹುದು.

ಸೃಷ್ಟಿ ಸೌಂದರ್ಯವನ್ನು ಕಣ್ತುಂಬಿಸಿಕೊಳ್ಳುವುದಕ್ಕಾಗಿ ದೈವ ನೀಡಿದ ಅಮೂಲ್ಯ ವರವನ್ನು ಜೋಪಾನವಾಗಿ ಕಾಪಿಟ್ಟುಕೊಳ್ಳಲು ಅಷ್ಟನ್ನೂ ಮಾಡದಿದ್ದರೆ ಹೇಗೆ ಅಲ್ಲವೇ?

   

Leave a Reply