ನಾನು ಅವನಲ್ಲ…. ಇದು ಗಂಡಾಗಿ ಹುಟ್ಟಿ ಹೆಣ್ಣಾಗಿ ಸಾಧಿಸಿದವಳ ಕಥೆ

ಲೇಖನಗಳು - 0 Comment
Issue Date :

-ಮನೋಜ್ ಕುಮಾರ್ ಕೆ.ಬಿ.

ಹೀಗೆ ಹುಟ್ಟಿಸಬೇಕು ಅಂತ ನನ್ನ ಅಪ್ಪ ಅಮ್ಮ ಹುಟ್ಟಿಸಲಿಲ್ಲ. ಹೀಗೆ ಹುಟ್ಟಬೇಕು ಅಂತ ನಾನು ಕೂಡ ಹುಟ್ಟಲಿಲ್ಲ. ಹೀಗೆ ಹುಟ್ಟಬೇಕು, ಹೀಗೆ ಸಾಯಬೇಕು ಅಂತ ನಾವು ನಿರ್ಧರಿಸೋಕೆ ಆಗುತ್ತ ಹೇಳಿ. ಆದರೆ ಹೇಗೆ ಬದುಕಬೇಕು ಅನ್ನೋದು ಮಾತ್ರ ನಮ್ಮ ಕೈಯಲ್ಲಿ ಇರುತ್ತೆ. ಪ್ಲೀಸ್ ನಮಗೂ ಈ ಸಮಾಜದಲ್ಲಿ ಗೌರವ ಕೊಡಿ’ ಅನ್ನೋದು ರಾಜುವಿನ ಪ್ರಾರ್ಥನೆ. ಅಲ್ಲ, ಅಲ್ಲಲ್ಲಾ… ಭಾರತದ ಪ್ರಪ್ರಥಮ ಟ್ರಾನ್ಸ್ ಜೆಂಡರ್ ರೇಡಿಯೋ ಜಾಕಿ ಪ್ರಿಯಾಂಕಾರವರ ಪ್ರಾರ್ಥನೆ.

ರಾಜುರವರು (ಮೊದಲಿನ ಹೆಸರು) 1985 ಮೇ 30 ರಂದು ತಂದೆ ರಾಮು ಹಾಗೂ ತಾಯಿ ಚಿಕ್ಕಮ್ಮನವರ ಮೊದಲನೆಯ ಮಗನಾಗಿ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಜನಿಸಿದರು. ಗಂಡುಮಗು ಎಂದು ಮನೆಯವರು ಸಂತೋಷಪಟ್ಟರು. ಆದರೆ ಆ ಸಂತೋಷ ಹೆಚ್ಚು ಕಾಲ ಉಳಿಯಲಿಲ್ಲ. ರಾಜು 5ನೇ ತರಗತಿಯಲ್ಲಿದ್ದಾಗಲೇ ಹೆಣ್ಣಿನ ತರ ಆಡಲು ಶುರು ಮಾಡಿದ್ದ. ಇದು ದಿನೇ ದಿನೇ ಹೆಚ್ಚಾಗತೊಡಗಿತು. ಮನೆಯಲ್ಲಿ ಗಂಡುಮಕ್ಕಳ ಕೆಲಸ ಮಾಡಲು ಹೇಳಿದರೆ ರಾಜು ಪಾತ್ರೆ ತೊಳೆಯುವುದು, ರಂಗೋಲಿ ಹಾಕುವುದರಲ್ಲಿ, ಅಡುಗೆಮನೆಯ ಕೆಲಸಗಳನ್ನು ಮಾಡುತ್ತಿದ್ದ. 8ನೇ ತರಗತಿಗೆ ಬಂದ ಮೇಲಂತೂ ಹುಡುಗಿಯರ ಜೊತೆ ಸೇರುವುದು, ಅವರ ಜೊತೆ ಆಡುವುದು, ಅವರ ಬಟ್ಟೆ ಬರೆಗಳನ್ನು ಆಸಕ್ತಿಯಿಂದ ನೋಡುವುದು ಶುರುವಾಯಿತು. ಇದನ್ನೆಲ್ಲ ಗಮನಿಸಿದ ಜನ ಹಾಗೂ ಶಾಲೆಯ ಶಿಕ್ಷಕರು ಇವನನ್ನು ‘ಕೋಜ’ಎನ್ನಲು ಶುರು ಮಾಡಿದರು. ಆದರೆ ರಾಜುವಿಗೆ ನಾನೇಕೆ ಹೀಗೆ, ಜನರೇಕೆ ನನ್ನನ್ನು ಆಡಿಕೊಳ್ಳುತ್ತಾರೆಂಬುದು ಪ್ರಶ್ನೆಯೇ ಆಗಿತ್ತು.

 ಇತ್ತ ಮನೆಯಲ್ಲಿ ಇವನ ಹಾವ ಭಾವಗಳನ್ನು ನೋಡಿ ತಂದೆ ಹೊಡೆಯಲು ಶುರುಮಾಡಿದ್ದರು. ಆದರೆ ರಾಜುವಿನಲ್ಲಿ ಹೆಣ್ಣಿನ ನಡವಳಿಕೆ ಜಾಸ್ತಿಯೇ ಆಯಿತೆ ಹೊರತು ಕಮ್ಮಿಯಾಗಲಿಲ್ಲ. ಮನೆಯಲ್ಲಿ  ತಾಯಿಯ, ತಂಗಿಯ ಬಟ್ಟೆ ಹಾಕಿಕೊಂಡು ಸಂತೋಷಪಡುತಿದ್ದ  ರಾಜು. ಇತ್ತ ಸ್ನೇಹಿತರು ಆಡಿಕೊಳ್ಳಲು ಶುರುಮಾಡಿದರು. ಹಾಗಾಗಿ ರಾಜು 9ನೇ ತರಗತಿಯಲ್ಲಿ  ಶಾಲೆ ಬಿಟ್ಟ. ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸ ಮಾಡಲು ಶುರುಮಾಡಿದ. ಅಲ್ಲೂ ಕೂಡ ಇವನ ಹೆಣ್ಣಿನ ಹಾವ-ಭಾವಗಳನ್ನು ನೋಡಿ ಇವನನ್ನು ನೋಡುವ ದೃಷ್ಟಿಯೇ ಬದಲಾಯಿತು. ಹಾಗಾಗಿ ಅಲ್ಲಿ ಕೆಲಸ ಬಿಟ್ಟು ಬಟ್ಟೆ ಅಂಗಡಿಗೆ ಕೆಲಸಕ್ಕೆ ಸೇರಿದ ರಾಜು. ಬಟ್ಟೆ ಅಂಗಡಿಯಲ್ಲಿ ಇವನನ್ನು ಪುರುಷರ ಮಳಿಗೆಗೆ ಹಾಕಿದರು. ಆದರೆ ರಾಜುವಿಗೆ ಮಹಿಳೆಯರ ಮಳಿಗೆಯಲ್ಲಿ ಕೆಲಸ ಮಾಡಬೇಕೆಂಬ ಇಚ್ಛೆ ಇತ್ತು. ಆದರೆ ಇಚ್ಛೆ ಫಲಿಸಲಿಲ್ಲ. ಅಲ್ಲೂ ಕೂಡ ಇವನ  ಹೆಣ್ಣಿನ ವರ್ತನೆಯನ್ನು ನೋಡಿ ಎಲ್ಲರೂ ರಾಜುವನ್ನು ಒಂದು ರೀತಿಯಲ್ಲಿ ನೋಡುತ್ತಿದ್ದ  ಕಾರಣ ಬಟ್ಟೆ ಅಂಗಡಿಯ ಕೆಲಸವನ್ನು ರಾಜು ಬಿಡಬೇಕಾಯಿತು.

 ಇದರಿಂದ ಕುಪಿತಗೊಂಡ ತಂದೆ ದಿನಾಲು ಮನೆಯಲ್ಲಿ ಹೆಂಡತಿಯ ಜೊತೆ ಜಗಳವಾಡಿ ರಾಜುವನ್ನು ಹೊಡೆಯುತ್ತಿದ್ದರು. ಇತ್ತ ರಾಜುವಿಗೆ 14 ವರ್ಷವಾದಾಗ ಕಣ್ಣಿಗೆ ಕಪ್ಪು, ಕೈಗಳಿಗೆ ಬಳೆ ಹಾಗೂ ತಾಯಿಯ ಸೀರೆಯನ್ನು ಉಡಲು ಶುರು ಮಾಡಿದ. ಇಷ್ಟರಲ್ಲೆ ರಾಜುವಿಗೆ ಶಶಿ ಎಂಬ ಮಂಗಳಮುಖಿಯ ಪರಿಚಯವಾಗಿ ತನ್ನೆಲ್ಲ ದುಃಖವನ್ನು ಅವಳ ಜೊತೆ ಹಂಚಿಕೊಂಡಾಗ ಅವಳು ಇವನಿಗೆ ಸಮಾಧಾನ ಮಾಡಿ ನಮ್ಮಂಥವರ ಬದುಕೇ ಹೀಗೆ, ನಿನಗೇನಾದರೂ ಸಮಸ್ಯೆ ಆದರೆ ನನಗೆ ಫೋನ್ ಮಾಡು ಎಂದು ರಾಜುವಿಗೆ ಫೋನ್ ನಂಬರ್ ಕೊಟ್ಟಿದ್ದಳು.

 ಮನೆ ಹಾಗೂ ಸಮಾಜದಲ್ಲಿನ ಮಾನಸಿಕ ವೇದನೆಯನ್ನು ತಾಳಲಾರದೆ ತನ್ನ 15ನೇ ವರ್ಷದಲ್ಲಿ ಮನೆಯವರಿಗೆ ತಿಳಿಸದೆ ಮನೆ ಬಿಟ್ಟು ಶಶಿ ನೆರವಿನಿಂದ ಗೊರಗುಂಟೆಪಾಳ್ಯದ ಮಂಗಳಮಖಿಯರ ಸಂಘವನ್ನು ಸೇರಿದ. ಆ ‘ಹಮಾಮ್’ (ಮಂಗಳಮುಖಿಯರ ಕೇಂದ್ರ)ನಲ್ಲಿ ನಾಣಿ (ಮಂಗಳಮುಖಿಯರ ಗುರು) ಆಜ್ಞೆಯಂತೆ ರಾಜುವಿನ ಪ್ಯಾಂಟ್, ಶರ್ಟ್‌ಗಳನ್ನು ತೆಗೆಸಿ ಸೀರೆ ಉಡಿಸಲಾಯಿತು. ಇಲ್ಲಿಂದ ರಾಜುವಿನ ಇನ್ನೊಂದು ಬದುಕು ಶುರುವಾಯಿತು. ಪ್ರತಿನಿತ್ಯ ತಲೆಗೆ ವಿಗ್ ಹಾಕಿಕೊಂಡು, ಸೀರೆಯುಟ್ಟು ಭಿಕ್ಷೆಗಾಗಿ ಅಂಗಡಿಗಳ ಮುಂದೆ ಹೋಗಬೇಕಿತ್ತು. ಹೀಗೆ ಕೆಲವು ದಿನಗಳ ನಂತರ ರಾಜು ನಾಣಿಯ ಹತ್ತಿರ ನನ್ನನ್ನು ಹೆಣ್ಣು ಮಾಡಿ ಎಂದು ಕೇಳಿಕೊಂಡಾಗ ನಾಣಿ ರಾಜುವನ್ನು ಕರೆದುಕೊಂಡು ಬಾಂಬೆಗೆ ಬಂದಳು. ಅದಾಗಲೆ ಮಂಗಳಮುಖಿಯರ 7 ಮನೆ ಜಾತಿಯ ಪ್ರಮುಖರು (ನಾಣಿ) ರಾಜುವಿನ ಒಪ್ಪಿಗೆ ಪಡೆದು ‘ಪ್ರಿಯಾಂಕಾ’ ಎಂದು

ಮರುನಾಮಕರಣ ಮಾಡಿದರು. ರಾಜು ಪ್ರಿಯಾಂಕಾಳಾಗಿ ‘ಪಾಂ ಪಡ್ತಿ’ಅಂತ ಆ ನಾಣಿಯರಿಗೆಲ್ಲ ನಮಸ್ಕರಿಸಿ ‘ಜಯೋ’(ಆಶೀರ್ವಾದ) ಪಡೆದಳು. ಅಲ್ಲಿ ಪ್ರಿಯಾಂಕಾ ಒಂದು ವಾರ ಇದ್ದು ಎಲ್ಲಾ ಬಗೆಯ ಟ್ರೈನಿಂಗ್‌ಗಳನ್ನು ಪಡೆದುಕೊಂಡು ಬೆಂಗಳೂರಿಗೆ ವಾಪಸ್ಸಾದಳು. (ಮುಂಬೈನಲ್ಲಿರುವ  ‘ಹಮಾಮ್’ ಮಂಗಳಮುಖಿಯರಿಗೆ ತವರುಮನೆ ಇದ್ದಂತೆ).

 ಬೆಂಗಳೂರಿಗೆ ಬಂದ ಪ್ರಿಯಾಂಕಾ ತನ್ನ ಬದುಕಿಗಾಗಿ ಭಿಕ್ಷೆ ಬೇಡುತ್ತ, ಕೆಲವೊಮ್ಮೆ ತನ್ನ ಶರೀರವನ್ನು ಮಾರಿಕೊಳ್ಳುತ್ತಿದ್ದಳು. ಹೀಗೆ 6 ವರ್ಷಗಳು ಕಳೆದ ನಂತರ ಮತ್ತೆ ಪ್ರಿಯಾಂಕಾ ಬಾಂಬೆಯ ‘ಹಮಾಮ್’ಗೆ ಹೋಗಿ ಎಲ್ಲಾ ನಾಣಿಯರ ಒಪ್ಪಿಗೆ ಪಡೆದು ತನ್ನ 22 ವರ್ಷಕ್ಕೆ ಹೆಣ್ಣಾಗಿ ಆಪರೇಷನ್ ಮಾಡಿಸಿಕೊಂಡು ಬೆಂಗಳೂರಿಗೆ ವಾಪಸ್ಸಾದಳು.

 ಹೆಣ್ಣಾಗಿ ಆಪರೇಷನ್ ಮಾಡಿಸಿಕೊಂಡ ಬಳಿಕ ಮಂಗಳಮುಖಿಯರ ಸಂಪ್ರದಾಯದಂತೆ ಆ ಹೆಣ್ಣು 41 ದಿನಗಳವರೆಗೆ ಗಂಡಸರ ಮುಖವನ್ನು ನೋಡುವ ಹಾಗಿಲ್ಲ. ರೂಮಿನಿಂದ ಈಚೆಗೆ ಬರುವ ಹಾಗಿಲ್ಲ. ಇವರು ಬರಿ ಚಪಾತಿ, ತುಪ್ಪ, ಕಾಳು, ಸೊಪ್ಪನ್ನು ಬಿಟ್ಟು ಬೇರೆ ಆಹಾರ ಸೇವಿಸುವ ಹಾಗಿಲ್ಲ. ಹಾಗೂ ಇವರಿಗೆ 11ನೇ ದಿನಕ್ಕೊಮ್ಮೆ ಅರಿಶಿನದ ನೀರು ಹಾಕಿ ಸ್ನಾನ ಮಾಡಿಸಲಾಗುತ್ತದೆ. ಹೀಗೆ 3 ಬಾರಿ ಅರಿಶಿನದ ಸ್ನಾನವಾದ ಮೇಲೆ 41ನೇ ದಿನಕ್ಕೆ  ‘ಜಲ್ಸ’ಮಾಡಿಸುತ್ತಾರೆ. ಜಲ್ಸ ಎಂದರೆ ಮಂಗಳಮುಖಿಯರ ಆರಾಧ್ಯದೈವಿ (ಕೋಳಿ ಮೇಲೆ ಕುಳಿತ ಮಾತೆ)ಗೆ 6 ತರ ಅಭಿಷೇಕ ಮಾಡಿ 12 ತರದ ಹೂವುಗಳನ್ನು ಹಾಕಿ ಪೂಜೆ ಮಾಡುತ್ತಾರೆ. ನಂತರ ಆ ಹೆಣ್ಣಿಗೆ ನಾಣಿ (ಗುರು) ಅರಿಶಿನ, ಮೆಹಂದಿ, ಹಸಿರು ಸೀರೆ, ಹಸಿರು ಬಳೆ, ಮೂಗಿನ ಬಟ್ಟು, ಗೆಜ್ಜೆ, ಕಾಲುಂಗುರ, ಮೊಗ್ಗಿನ ಜಡೆ, ಓಲೆ, ಜುಮುಕಿ ರೆಡಿ ಮಾಡಿ ‘ಲಚ್ಚ’ ಕಟ್ಟುತ್ತಾರೆ. ದೇವರ ಮುಂದೆ ಒಂದು ತಾಮ್ರದ ಬಿಂದಿಗೆಯ ತುಂಬ ಹಾಲನ್ನು ಇಟ್ಟು ಆ ಹೆಣ್ಣಿನ ಕೈಯಲ್ಲಿ ರಾತ್ರಿಪೂರ್ತಿ ದೇವರ ನಾಮಸ್ಮರಣೆಯನ್ನು ಮಾಡಿಸುತ್ತಾರೆ. ಬೆಳಗಿನ ಜಾವ 5 ಗಂಟೆಗೆ ಹಾಲಿನ ಕೊಡವನ್ನು ಆ ಹೆಣ್ಣಿನ ಕೈಯಲ್ಲಿ  ಹೊರೆಸಿಕೊಂಡು ಕೆರೆಯ ಹತ್ತಿರ ಹೋಗಿ ಕೆರೆ ನೀರಿಗೆ ಪೂಜೆ ಸಲ್ಲಿಸಿ ಆ ಹೆಣ್ಣನ್ನು ಕೆರೆಯ ವಿರುದ್ಧದಿಕ್ಕಿಗೆ ನಿಲ್ಲಿಸಿ ಕೆರೆಗೆ ಹಾಲನ್ನು ಸುರಿಸಿ ಅ ಬಿಂದಿಗೆಯಲ್ಲಿ  ಕೆರೆ ನೀರನ್ನು ತುಂಬಿಸಿಕೊಂಡು ಹಮಾಮ್‌ಗೆ ಕರೆದುಕೊಂಡು ಬರುತ್ತಾರೆ. ನಂತರ ಆ ಹೆಣ್ಣು  ತನಗೆ ಇಷ್ಟವಾದ ಸಿಹಿಯನ್ನು ತಿಂದ ಮೇಲೆ ಗುರುಗಳ ಮುಖ ತೋರಿಸಿ ನಂತರ ಕನ್ನಡಿಯಲ್ಲಿ ಆ ಹೆಣ್ಣಿನ ಮುಖವನ್ನು ನೋಡಿಸುತ್ತಾರೆ. ಇದೇ ಜಲ್ಸಾ. ಈ ಜಲ್ಸದ ದಿನದಂದು ಎಲ್ಲಾ ಮಂಗಳಮುಖಿಯರು ಹಾಜರಿದ್ದು ಕುಣಿದು ಕುಪ್ಪಳಿಸುತ್ತಾರೆ. ಇದು ಇವರ ಪಾಲಿಗೆ ಹಬ್ಬ.

 ಹೀಗೆ 9 ವರ್ಷಗಳು ಕಳೆದ ಬಳಿಕ ಪ್ರಿಯಾಂಕಾಗೆ ತಂದೆ ತಾಯಿಯರ ನೆನಪಾಗಿ ಬೇರೊಬ್ಬರ ಮೂಲಕ ಅವರ ದೂರವಾಣಿ ಸಂಖ್ಯೆಯನ್ನು ಪಡೆದು ತಾಯಿಯನ್ನು ಬೇರೆ ಜಾಗದಲ್ಲಿ ಭೇಟಿ ಮಾಡುತ್ತಾಳೆ ನಿಮ್ಮ ಜೊತೆ ಉಳಿಯಲು ಅವಕಾಶವಿದ್ದರೆ ನಾನು ನಿಮ್ಮ ಬಳಿಯಲ್ಲೆ ಇರುವೆನು ಎಂದಾಗ ತಂದೆ-ತಾಯಿಗಳು ಅದಕ್ಕೆ ಒಪ್ಪಿ ಪ್ರಿಯಾಂಕಾಳನ್ನು ಮನೆಗೆ ಕರೆದುಕೊಂಡುಹೋಗುತ್ತಾರೆ. ಮನೆಗೆ ಬಂದ ನಂತರ ತನ್ನ ಮೈ ಮಾರಾಟ ಮತ್ತು ಭಿಕ್ಷೆ ವೃತ್ತಿಯನ್ನು ಬಿಟ್ಟು ತಾನೇ ಮುಂದೆ ನಿಂತು ಇದ್ದಂಥ ಒಬ್ಬಳ ತಂಗಿಯ ಮದುವೆಯನ್ನು ಮಾಡಿಸಿದ್ದಾರೆ.

 ಲಿಂಗ ಅಲ್ಪಸಂಖ್ಯಾತರ ಹಕ್ಕಿಗಾಗಿ ಹೋರಾಟ ನಡೆಸುತ್ತಿದ್ದ  ‘ಸಂಗಮ’ಎಂಬ ಸಂಘಟನೆ 2005 ರಲ್ಲಿ  ‘ಸಮರ’ಎನ್ನುವ ಸಮುದಾಯ ಯೋಜನೆಯೊಂದನ್ನು ಶುರುಮಾಡಿತು. ಈ ಸಂಸ್ಥೆಯ ಮೂಲಕ ಪ್ರಿಯಾಂಕಾ ಲಿಂಗ ಅಲ್ಪಸಂಖ್ಯಾತರ ಆರೋಗ್ಯದ ಕುರಿತು ಅರಿವು ಹಾಗೂ ಅವರ ಹಕ್ಕಿಗಾಗಿ ಹೋರಾಟ ನಡೆಸುವ ಕಾರ್ಯಕ್ರಮಗಳನ್ನು ಮಾಡಲು ಶುರುಮಾಡಿದರು. ಇದನ್ನು ಗಮನಿಸಿದ Radio Active 90.4 ಪ್ರಿಯಾಂಕಾರವರಿಂದ ರೇಡಿಯೋ ಸ್ಟೇಷನ್‌ನಲ್ಲಿ ಕಾರ್ಯಕ್ರಮವನ್ನು ಕೊಡಿಸಿದರು. ಆ ಕಾರ್ಯಕ್ರಮ ಅತ್ಯಂತ ಯಶಸ್ವಿಯಾದ್ದರಿಂದ ಆ ರೇಡಿಯೋ ಸ್ಟೇಷನ್ ಇಂಥ ಸಮುದಾಯದಿಂದ ಬಂದ ಒಬ್ಬರಿಗೆ ನಿರಂತರ ಕಾರ್ಯಕ್ರಮ ನೀಡಲು ಅವಕಾಶ ಕೊಟ್ಟಿತು. ಆಗ ಲಿಂಗ ಅಲ್ಪಸಂಖ್ಯಾತರ ಸಮುದಾಯವು ಪ್ರಿಯಾಂಕಾರ ಕೆಲಸವನ್ನು ಮೆಚ್ಚಿ ಅವರನ್ನೇ ರೇಡಿಯೋನಲ್ಲಿ ಕಾರ್ಯಕ್ರಮ ಕೊಡಲು ಕಳುಹಿಸಿತು. ಅಲ್ಲಿಂದ ಆಕೆಯ ಬದುಕು ಬದಲಾಯಿತು. ಇಂದು ಪ್ರಿಯಾಂಕಾರವರು ತೃತೀಯ ಲಿಂಗಿಗಳ ಕಷ್ಟಗಳ ಧ್ವನಿಯಾಗಿದ್ದಾರೆ. ಅಷ್ಟೆ ಅಲ್ಲದೆ ಪರಿಸರ ರಕ್ಷಣೆ, ಪ್ರಾಣಿಗಳ ರಕ್ಷಣೆ ಹಾಗೂ ಕಸ ಗುಡಿಸುವವರ ಸಮಸ್ಯೆಗಳ ಬಗ್ಗೆಯೂ ಜಾಗೃತಿ ಮೂಡಿಸುತ್ತಿದ್ದಾರೆ.

 ಅಷ್ಟೆ ಅಲ್ಲದೆ, ಪ್ರಸಿದ್ಧ  ಧಾರಾವಾಹಿ ‘ವಾರಸುದಾರ’, ‘ಸೂರ್ಯಕಾಂತಿ’ಗಳಲ್ಲಿ  ಅಭಿನಯಿಸಿದ್ದಾರೆ.  ಜಯನಗರ 4ನೇ ಬ್ಲಾಕ್’, ‘ನೀನು ಗಂಡ್ಸಾ, ಹೆಂಗ್ಸಾ’ ಎಂಬ ಶಾರ್ಟ್ ಫಿಲ್ಮ್‌ಗಳಲ್ಲಿ ಅಭಿನಯಿಸಿದ್ದಾರೆ. ಇಂದು ಈ ಕಿರುಚಿತ್ರವನ್ನು 3 ಮಿಲಿಯನ್‌ಗೂ ಹೆಚ್ಚು ಜನ ನೋಡಿದ್ದಾರೆ. ಜಾಹಿರಾತುಗಳಲ್ಲಿ ಅಭಿನಯಿಸಿದ ಹೆಗ್ಗಳಿಕೆ ಇವರದಾಗಿದೆ.

 ಮೊದಲ ಟ್ರಾನ್ಸ್ ಜೆಂಡರ್ ಆರ್.ಜೆ. ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಾಗಿದ್ದಾರೆ. ಒಟ್ಟಿನಲ್ಲಿ ಪ್ರಿಯಾಂಕಾರವರು ತಮಗೆ ಸಿಕ್ಕ ಎಲ್ಲಾ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಂಡು ಸಮಾಜದಲ್ಲಿ ಮುನ್ನುಗುತ್ತಿದ್ದಾರೆ.

 

   

Leave a Reply