ನಾ ಕಂಡ ‘ಇವಾಲೂನಾ’

ಕಥೆಗಳು - 0 Comment
Issue Date : 30.10.2015

‘‘ಆ  ಕಾಲದಲ್ಲಿ ಒಟ್ಟು ಕುಟುಂಬದಲ್ಲಿ ಬೇರೆ ಹೋಗುವ – ಬೇರೆ ಯಾಗುವ ವಿಚಾರ ಯಾರಿಗೂ ಬರುತ್ತಿರಲೇ ಇಲ್ವಾ? ವೃದ್ಧಾಶ್ರಮದ ಕಲ್ಪನೆ ಇತ್ತೀಚೆಗೆ ಬಂದಿದ್ದು. ತಂದೆ-ತಾಯಿಗೆ ಹತ್ತು ಮಕ್ಕಳನ್ನು ಸಾಕಿ-ಸಲಹುವುದು ದೊಡ್ಡ ವಿಷಯವೇ ಅಲ್ಲ! ಆದರೆ ತಂದೆ, ತಾಯಿ ಇಬ್ಬರನ್ನೂ ನೋಡಿಕೊಳ್ಳೋದು ಮೂರು ಮಕ್ಕಳಿಗೆ ಕಷ್ಟ! ನನಗಂತೂ ಗಂಡ ತೀರಿಹೋಗಿ ಎಂಟು ವರ್ಷ ಆಯಿತಲ್ಲ. ನನ್ನೊಬ್ಬಳನ್ನು ಸಾಕುವುದು ನನ್ನದೇ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲವಂತೆ!
 ಮದುವೆಯೋ. ಪ್ರೇಮ ವಿವಾಹ, ವಸುನಂದನರನ್ನು ಮದುವೆ ಯಾಗಿ ಅವಿಭಕ್ತ ಕುಟುಂಬದ ಸೊಸೆಯಾದೆ. ಅನ್ಯಧರ್ಮೀಯಳೆಂದು ಆ ಪರಿವಾರದವರು ಎಂದೂ ತಾರತಮ್ಯ ಮಾಡಲಿಲ್ಲ. ಕಷ್ಟ-ಸುಖ, ಬಡತನ-ಸಿರಿತನ ಎಲ್ಲಾ ಕಂಡಾಯ್ತು; ಮಕ್ಕಳನ್ನು ಸಂಸಾರಿಗಳಾಗಿ ಬೆಳೆಸಿದ್ದೂ ಆಯ್ತು. ವಯಸ್ಸಾದ ಕಾಲದಲ್ಲಿ ಆಸರೆಯಾಗಬೇಕಿದ್ದ ಮಕ್ಕಳು ಮಾತ್ರ ಈಗ ಕೈ ಬಿಡುತ್ತಿದ್ದಾರೆ.
 ವಸುನಂದನ್ ಒಳ್ಳೆಯ ಕಲಾವಿದ, ಚಿತ್ರ ರಚಿಸುವುದಲ್ಲಿ ನಿಷ್ಣಾತರು. ಅವರಿಗೆ ಅನೇಕ ಪುರಸ್ಕಾರ, ಪ್ರಶಸ್ತಿ ಲಭಿಸಿವೆ. ನಾನೂ ಸಹ ಚಿತ್ರ ಬಿಡಿಸುತ್ತಿದ್ದೆ. ಕ್ಯಾನ್‌ವಾಸಿನ ಖಾಲೀ ಜಾಗವೂ ಅಮೂರ್ತ ಕಲಾಕೃತಿ. ಆದರೆ ಪತಿಯ ಸಾವಿನಿಂದ ಬದುಕಿನ ಖಾಲೀಜಾಗ. ಅಪೂರ್ಣ ಚಿತ್ರದಂತೆ ಅನಿಸುತಿದೆ. ನನ್ನವರು ಗಳಿಸಿದ ಹೆಸರು ಮಕ್ಕಳ ದೃಷ್ಟಿಯಲ್ಲಿ ಏನೂ ಅಲ್ಲ. ಅವರು ಸಂಪಾದಿಸಿದ ಆಸ್ತಿಗಷ್ಟೇ ಬೆಲೆ. ನನ್ನಿಂದೆಲ್ಲ ಪತ್ರಗಳಿಗೆ ಸಹಿ ಹಾಕಿಸಿಕೊಂಡು ಈಗ ‘‘ವಾತ್ಸಲ್ಯ’’ ಎಂಬ ವೃದ್ಧಾಶ್ರಮದಲ್ಲಿ  ಸ್ಥಳ ನಿಗದಿಗೊಳಿಸಿದ್ದಾರೆ. ಇಬ್ಬರು ಗಂಡುಮಕ್ಕಳಿಗೆ – ಒಬ್ಬ ಮಗಳಿಗೆ ನಾನು ಭಾರ!!
 ಚಿಕ್ಕ ಚಿಕ್ಕ ಆಸೆಗಳು, ಕನಸುಗಳು ನನ್ನ ಪತಿಯ ಜೊತೆ ಪ್ರತೀಕ್ಷಣ ಹೊಸತಾಗುತ್ತಿತ್ತು. ಕಷ್ಟದಲ್ಲೂ ಸುಖ ಎನಿಸಿ ಹಾಯಾಗಿರಲು ಕಾರಣ ಅವರ ಪ್ರೀತಿ. ಮಕ್ಕಳ ಬಗ್ಗೆ ಅವರಿಗೆ ತುಂಬಾ ಹೆಮ್ಮೆ. ಆದರೆ ಈಗ ಅವರು ಬದುಕಿದ್ದಿದ್ದರೆ ನನ್ನ ಈ ಸ್ಥಿತಿಗೆ ಕಣ್ಣೀರಾಗುತ್ತಿದ್ದರು. ಬಹುಶಃ ಈ ಮಕ್ಕಳು ನಮ್ಮಿಬ್ಬರನ್ನೂ ವೃದ್ಧಾಶ್ರಮಕ್ಕೆ ದಬ್ಬಿಬಿಡುತ್ತಿದ್ದರೋ ಏನೋ? ಒಂಟಿಯಾಗಿ ಕಣ್ಣೀರು ಸುರಿಸುತ್ತ ಇದ್ದವಳಿಗೆ ಒಂದು ಒಳ್ಳೆಯ ಸ್ನೇಹ ಒಲಿದಿತ್ತು. ‘ಇವಾ ಯಾಕೆ ಅಳುತ್ತೀರಿ. ಮಕ್ಕಳು ಸ್ವಾರ್ಥಿಗಳು’ ಎಂಬ ಮಾತು ಹೇಳಿ ಧೈರ‌್ಯ ಕೊಟ್ಟವರೇ ದತ್ತಾ ಸಾಹೇಬ್, ಇವರ ಮಕ್ಕಳಿಗೆ ಇವರೆಂದರೆ ಪ್ರಾಣ, ಆದರೆ ಇವರಿಗೇ ಮಕ್ಕಳ ಕುರಿತು ನಂಬಿಕೆ ಇಲ್ಲ, ಆಸ್ತಿಗಾಗಿ ನಾಟಕ ಆಡ್ತಾರೆ ಅನ್ನೋ ಅಭಿಪ್ರಾಯ.
 ವಸುನಂದನ್ ಆಪ್ತ ಗೆಳೆಯರು ದತ್ತಾ ಸಾಬ್. ನನ್ನವರ ಒಂದು ಕಲಾಕೃತಿಯನ್ನು ತೊಂಭತ್ತು ಸಾವಿರಕ್ಕೆ ಖರೀದಿಸಿದ್ದರು. ಈಗ ಸ್ವ-ಇಚ್ಛೆಯಿಂದಲೇ ವೃದ್ಧಾಶ್ರಮ ಸೇರುತ್ತಿರುವುದೇ ವಿಪರ‌್ಯಾಸ. ಆಸ್ತಿಯನ್ನು ಟ್ರಸ್ಟಿಗೆ ಸೇರಿಸಿ ಸಂತೃಪ್ತಿಯಿಂದ ವೃದ್ಧಾಶ್ರಮ ಸೇರುತ್ತಿದ್ದಾರೆ. ಅವರ ಹೆಂಡತಿಯೂ ಹೊರಟಿದ್ದಾರೆ!
 ಬದುಕು ತುಂಬಾ ವಿಚಿತ್ರ. ನನಗೆ ಮಕ್ಕಳ ಬಗ್ಗೆ ಇನ್ನೂ ಮೊದಲಿನಷ್ಟೇ ಅಕ್ಕರೆ ಇದೆ. ಆಸ್ತಿಗಾಗಿ ನನ್ನನ್ನು ಪೀಡಿಸಿದರೂ ಅವರೆಂದರೆ ಈಗಲೂ ಅಕ್ಕರೆ ಉಳಿದಿದೆ. ದತ್ತಾ ಸಾಬ್ ಬಗ್ಗೆ ಅವರ ಮಕ್ಕಳಿಗೆ ಸತ್ಯವಾದ ಮಮತೆ, ಆದರೆ ಅವರಿದನ್ನು ನಂಬುವುದೇ ಇಲ್ಲ. ತನ್ನ ಆಸ್ತಿಗಾಗಿಯೇ ಪ್ರೀತಿಸುವ – ಗೌರವಿಸುವ ನಾಟಕವಾಡುತ್ತಾರೆ ಎಂಬ ಅಭಿಪ್ರಾಯ ಅವರದು. ಹೆಂಡತಿಯ ಮನದಲ್ಲೂ ಇದನ್ನೇ ತುಂಬಿದ್ದಾರೆ. ಮಕ್ಕಳ ಮಾತಿಗೆ ಮರುಳಾಗದಂತೆ ಎಚ್ಚರಿಸುತ್ತಿರುತ್ತಾರೆ. ಹೀಗೆ.. ಪ್ರೀತಿಗಾಗಿ ಹಂಬಲಿಸುವ ನಾನು – ಪ್ರೀತಿಯನ್ನು ಸಂದೇಹಿಸುವ ದತ್ತಾ ಒಂದೇ ಜಗದ ಎರಡು ಕಣ್ಣುಗಳಂತಿದ್ದೇವೆ. ದೃಷ್ಟಿ ಕೇಂದ್ರಿಕರಿಸಿರುವುದು ಮಾತ್ರಾ ಮಕ್ಕಳ ಮೇಲೆ.
 ವಯಸ್ಸಾಗುತ್ತಿದ್ದಂತೆ ಯಾರೂ ಮಾತನಾಡಿಸೋ ಗೋಜಿಗೆ ಹೋಗುವುದಿಲ್ಲ. ನೆನಪುಗಳ ಹೊದಿಕೆ ಹೊದ್ದು ಜೀವನ ಮಲಗಿರುತ್ತೆ. ವೃದ್ಧಾಶ್ರಮವನ್ನು ಸೇರಿಸಿಕೊಂಡರೆ ಬದುಕು ಇನ್ನಷ್ಟು ವಿಸ್ತಾರವಾಗುತ್ತದೆಯೇ? ಮಕ್ಕಳ ಹುಟ್ಟು , ಬಾಲ್ಯ, ಯೌವ್ವನ.. ಹೀಗೆ ಕಣ್ತುಂಬ ಸುಂದರ ನೆನಪಿನ ಚಿತ್ರಣಗಳು. ಬಹುಶಃ ಬಣ್ಣ ಮಾಸುವುದು ವೃದ್ಧಾಪ್ಯದಲ್ಲಿಯೇ!
 ಹಿರಿಯರ ಕಾಲದ ಮನೆಯನ್ನು ಕಣ್ಣ ಮುಂದೆಯೇ ಬೀಳಿಸಿ ಹೊಸಮನೆ           ಕಟ್ಟಲಾಯಿತು. ಅತ್ಯಂತ ಪ್ರೀತಿಯಿಂದ ಬೆಳೆಸಿದ ಗಿಡಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿಸಲಾಯಿತು. ಯಾವುದಕ್ಕೂ ನನ್ನ ಒಪ್ಪಿಗೆ ಇರಲಿಲ್ಲ. ನನ್ನ ಗಂಡ ಅಂದು ಹೇಳಿದ ಒಂದು ಮಾತು ಇಂದಿಗೂ ನೆನಪಾಗುತ್ತದೆ. ’ಇವಾ, ಇವರು ನಮ್ಮದೇ ಮಕ್ಕಳು, ಇವರ ಸಂತೋಷವೇ ನಮ್ಮ ಸಂತೋಷ. ಮನೆ ಕಟ್ಟುತ್ತಾರಂತೆ, ಕಟ್ಟಲೀ ಬಿಡು, ಹೊಸಮನೆ – ಹೊಸ ಬಾಳು’
 ವಸುನಂದನರ ನಂಬಿಕೆ ಸುಳ್ಳಾಗಿದೆ. ಮಕ್ಕಳ ನಿಜಬಣ್ಣವನ್ನು ತೋರಿಸಲು ದೇವರು ನನ್ನನ್ನು ಜೀವಂತವಾಗಿರಿಸಿದ್ದಾನೆ. ಒಂದು ಸಣ್ಣ ಪಶ್ಚಾತಾಪದ ಗೆರೆ ಯನ್ನೂ ಮಕ್ಕಳ ಮುಖದಲ್ಲಿ ಕಂಡಿಲ್ಲ. ತಾವು ಮಾಡುತ್ತಿರುವುದೇ ಸರಿ ಎಂಬ ಮನೋಭಾವ ಅವರಲ್ಲಿ ಸ್ಥಿರ. ನಾಳೆ ಬೆಳಿಗ್ಗೆ ಇಲ್ಲಿಂದ ಇಪ್ಪತ್ತೈದು ಕಿಲೋಮೀಟರ್ ದೂರದಲ್ಲಿರುವ ‘‘ವಾತ್ಸಲ್ಯ’’ ವೃದ್ಧಾಶ್ರಮದಲ್ಲಿ ನನಗಾಗಿ ಹೊಸ ಅನುಭವವೊಂದು ಕಾಯುತ್ತಿರುತ್ತೆ. ಮನೆಯಿಂದ ನನ್ನದು ಅಂತ, ವಸುನಂದನರ ಭಾವಚಿತ್ರ ತೆಗೆದುಕೊಂಡು ಹೋಗುತ್ತೇನೆ.
 ಈ ರಾತ್ರಿ ಈ ಮನೆಯಲ್ಲಿ ನನ್ನ ಅಂತಿಮ ರಾತ್ರಿ. ಮತ್ತೆಂದೂ ಬಹುಶ: ಇಲ್ಲಿಗೆ ಮರಳಲಾರೆ. ವಸುನಂದನರ ನೆನಪು, ನೆನಪಿನ ಗಂಧ, ಭಾವನಾತ್ಮಕ ಸಂಬಂಧ, ಕನವರಿಕೆಯ ಗಾಢತೆ ಎಲ್ಲವೂ ಇವತ್ತಿಗೇ ಕೊನೆ ಕಾಣಲಿದೆ. ಈ ಅಂತ್ಯಕ್ಕೆ ಆರಂಭ ಇನ್ನಿಲ್ಲ. ಇಂತಹ ಆಘಾತ ಬಹುಶಃ ವಸು ಸಹಿಸುತ್ತಿರಲಿಲ್ಲ. ಮೊನ್ನೆ ಎಷ್ಟು ನಿರ್ದಾಕ್ಷಿಣ್ಯವಾಗಿ ವಸು ರಚಿಸಿದ ಕಲಾಕೃತಿಗಳನ್ನು ಹಿರಿಯ ಮಗ ಎಡ್ವಿನ್ ಹರಾಜು ಹಾಕಿ ಹಣ ಗಳಿಸಿದ. ಹೋದ ವಾರ ಕಿರಿಯ ಮಗ ಕಾರ್ತಿಕ ಮಾಡಿದ ಕೆಲಸ ಇನ್ನೂ ಘೋರ! ಆತ ವಸುನಂದನರ ಉಡುಪುಗಳನ್ನು, ಪುಸ್ತಕಗಳನ್ನು ಸುಟ್ಟು ಹಾಕಿದ. ನನ್ನ ಕಣ್ಣೀರನ್ನು ಯಾರೂ ಗಮನಿಸಲಿಲ್ಲ. ಸೊಸೆಯಂದಿರಂತೂ ನನ್ನನ್ನು ಗೌರವಿಸುತ್ತಿಲ್ಲ. ಆದರೆ ಮಗಳು ನಾಜಿಯಾ, ಅವಳೂ ನನ್ನನ್ನು ವೃದ್ಧಾಶ್ರಮಕ್ಕೆ ಸೇರಿಸಲು ಸಮ್ಮತಿಸಿದಳು. ಅವಳ ಮಗ ಅಂದರೆ ನನ್ನ ಮೊಮ್ಮಗ ನನ್ನ ಪರವಾಗಿ ಮಾತನಾಡಿದ್ದಕ್ಕೆ ಅವನನ್ನೂ ಗದರಿಸಿದಳು! ಎಡ್ವಿನ್ನನ ಮಗಳಿಗೆ ಇವಾಲೂನಾ ಅಂತ ನನ್ನ ಹೆಸರನ್ನೇ ಇಟ್ಟಿದ್ದಾರೆ. ಆದರೆ ಆಕೆಗೆ ನನ್ನ ಯಾವ ಗುಣಗಳೂ ಬಂದಿಲ್ಲ; ಕಾರ್ತಿಕನ ಮಗನಿಗೆ ಇವಾವಸೂ ಅಂತ ಹೆಸರು. ಅವನೂ ಚಿತ್ರ ಬಿಡಿಸುತ್ತಾನೆ. ಆತನ ತಾಯಿಗೆ ಚಿತ್ರಕಲೆಯ ಬಗ್ಗೆ ಅಸಹನೆ ಇದೆ. ಇವಾವಸು ನನ್ನನ್ನು ಅತಿಯಾಗಿ ಪ್ರೀತಿಸುತ್ತಾನೆ. ’ಗ್ರ್ಯಾನೀ ಐ ಲವ್ ಯೂ, ಓಡಿ ಹೋಗೋಣ್ವಾ ಡಿಯರ್ ’ ಅಂತ ತಮಾಷೆ ಮಾಡುತ್ತಾನೆ. ಆತ ನಗುವುದು, ಮಾತನಾಡುವುದು ಥೇಟು ನನ್ನ ವಸುನಂದನನಂತೆಯೇ! ಇವರೆಲ್ಲ ನನ್ನವರೇ. ಆದರೆ ಯಾರೂ ನನ್ನವರಲ್ಲ. ನಾಳೆಯ ನಂತರ ಈ ಜಗಕ್ಕೂ ನನಗೂ ಸಂಬಂಧ ಇಲ್ಲ ಎಂಬ ವಾಸ್ತವವನ್ನು ನಾನು ಒಪ್ಪಿಕೊಳ್ಳಲೇಬೇಕು.
 ಮಗ್ಗಲು ಬದಲಿಸುತ್ತಲೇ ರಾತ್ರಿ ಅಂತ್ಯವಾಗುತ್ತದೆ. ಭಾವನೆಗಳನ್ನು ಅವುಗಳ ಪಾಡಿಗೆ ಇರಲು ಬಿಡುತ್ತೇನೆ. ಮಾತ್ರೆಗಳನ್ನು ಒಂದು ಸಣ್ಣ ಬ್ಯಾಗಿನಲ್ಲಿ ಹಾಕಿಟ್ಟುಕೊಳ್ಳುತ್ತೇನೆ. ನಿಲುವುಗನ್ನಡಿಯನ್ನು ವಸು ನನಗೆ ಉಡುಗೊರೆಯಾಗಿ ನೀಡಿದ್ದು. ಇದು ಇಲ್ಲಿಯೇ ಇರಲಿ.
 ಮಕ್ಕಳನ್ನು ಕಣ್ಣಿನಲ್ಲಿಟ್ಟುಕೊಂಡು ಬೆಳೆಸುತ್ತೇವೆ. ಪುಟ್ಟ ಕಾಲುಗಳ ಹಿತವಾದ ಒದೆತವನ್ನು ಸಹಿಸುತ್ತೇವೆ. ಬೆಳೆದ ನಂತರ ಹೀಗೆ ಹೃದಯಕ್ಕೇ ಒದ್ದಾಗ ಮಾತ್ರಾ ಸಾಯುವಂತಾಗುತ್ತದೆ! ನನ್ನದೇ ಮಕ್ಕಳಲ್ವಾ, ಚೆನ್ನಾಗಿರಲಿ. ನನ್ನಿಂದಾಗಿ ತೊಂದರೆ ಆಗೋದು ಬೇಡ. ನನ್ನ ನರಳಾಟ ಅವರ ಸಂಭ್ರಮಾಚಾರಣೆಯ ಪಾರ್ಟಿಗಳಿಗೆ ಅಡ್ಡಿಯಾಗದಿರಲಿ. ವಸುನಂದನರ ಜೊತೆಗಿನ ನೆನಪುಗಳೇ ಇನ್ನು ನನ್ನ ಬದುಕಿನ ಆಸರೆ. ಈ ಮನೆಯ ಕೊನೆಯ ನಿದ್ದೆಯ – ಕೊನೆಯ ಕನಸು ಒಂದು ಸುಂದರ ನೆನಪಾಗಿ ಉಳಿಯಲಿ ಎನ್ನುತ್ತಾ ಕಣ್ಮುಚ್ಚುತ್ತೇನೆ. ವಸು ನೀವೇ ಪುಣ್ಯವಂತರು ನಿಮ್ಮ ಉಸಿರು ಇದೇ ಮನೆಯಲ್ಲಿ ಕೊನೆಯಾಯಿತು. ನನ್ನ ಮಾತ್ರ ಯಾಕೆ ಬಿಟ್ಟು ಹೋದಿರಿ?
 ಬೆಳಿಗ್ಗೆಯೂ ರಾತ್ರಿಯ ಹತಾಶೆಯೇ ಮುಂದುವರಿಯುತ್ತಿದೆ. ಸ್ನಾನ ಮುಗಿಸಿ ದೇವರ ಸ್ಮರಿಸಿ, ತಿಂಡಿ ತಿಂದು – ಮಾತ್ರೆಯನ್ನು ತೆಗೆದುಕೊಂಡೆ. ಗೇಟಿನ ಹೊರಗೆ ನೀಲಿ ಬಣ್ಣದ ಕಾರು, ಕಿಟಕಿಯಿಂದಲೂ ಕಾಣುತ್ತಿದೆ. ಮನೆಯ ಯಾರೊಬ್ಬರಿಗೂ ನನ್ನ ಬಗ್ಗೆ ಕನಿಕರವಿಲ್ಲ. ಮುಂಬಾಗಿಲಿನಿಂದ ಮೆಲ್ಲಗೆ ಮೆಟ್ಟಿಲಿಳಿದೆ. ಕಾರ್ತಿಕನಿಗೆ ಸಿಕ್ಕಾಪಟ್ಟೆ ಅವಸರ. ’ಅಮ್ಮಾ ಬೇಗ ನಡೀ. ಆಮೇಲೆ ಮಳೆ ಶುರುವಾದ್ರೆ ಕಷ್ಟ’ ಎಂದ. ಅರವತ್ತೆಂಟರ ಅಮ್ಮನಿಗಿನ್ನೂ ಚಿಕ್ಕ ಪ್ರಾಯ ಅಂತ ತಿಳಿದಿದ್ದಾನೆ.
 ‘ಬರ‌್ತೀನಿ’ – ಎಂದು ಕಾರಿನಲ್ಲಿ ಕುಳಿತೆ. ಕಾರಿನ ಕಿಟಕಿ ಯಿಂದ ನೋಡಿದೆ. ವಸುನಂದನ ಬಾಗಿಲಿನಲ್ಲಿ ನಿಂತ ಹಾಗೆನಿಸಿತು. ಅದು ನನ್ನ ಭಾವುಕ ಮನದ ಮೃದು ಸಂವೇದನೆ ಅಷ್ಟೇ. ಇವಾವಸೂ ಬಿಕ್ಕಿ-ಬಿಕ್ಕಿ ಅಳುತ್ತಿದ್ದ. ಓಡೋಡಿ ಬಂದು ನಿಂತು ‘ಸ್ಟಿಲ್ ಐ ಲವ್ ಯೂ, ಈಗಲೂ ಟೈಮಿದೆ, ಓಡಿ ಹೋಗೋಣ್ವಾ’ ಎಂದ. ನಾನು ಮುಗುಳ್ನಕ್ಕೆ. ಅವನಿನ್ನೂ ನನ್ನ ಕೈ ಹಿಡಿದೇ ಇದ್ದ. ‘ನಿಮ್ ಸೇವೆ ಮಾಡಕಾಗಲ್ಲ’ ಎಂದಿದ್ದ ನನ್ನ ಹಿರಿ ಸೊಸೆಯ ಕಣ್ಣಲ್ಲೂ ನೀರು! ’ಇವಾವಸೂ. ಬರ‌್ತೀನಿ’ ಎಂದೆ.
 ಕಾರು ಹೊರಟಿತು. ಜನ್ಮದ ನಂಟಿನ ಕೊಂಡಿ ಕಳಚಿದಂತಹ ಭಾವ ನನ್ನೊಳಗೆ. ನಿಧಾನವಾಗಿ ಸಾಗುತ್ತಿದ್ದ ಕಾರು ನನ್ನ ಮೌನವನ್ನು ಕೆಣಕುತ್ತಿತ್ತು. ಎಡ್ವಿನ್ ಹಾಗೂ ನಾಜಿಯಾಳ ಗಂಡ, ಅಂದರೆ ನನ್ನ ಅಳಿಯ ನೆಮ್ಮದಿಯಾಗಿ ಕೂತಂತಿತ್ತು! ಭಾವನೆ ಇದ್ದಿದ್ದರೆ ಸ್ಪಂದನೆ ಇರುತ್ತಿತ್ತು ಅಂದುಕೊಂಡೆ. ಲಾಭ-ನಷ್ಟದಿಂದಲೇ ಎಲ್ಲಾ ಅಳೆಯುತ್ತಾರೆ ಜನ ಎಂದು ವಸು ಒಮ್ಮೆ ಬೇಸರ ವ್ಯಕ್ತಪಡಿಸಿದ್ದರು.
 ‘‘ವಾತ್ಸಲ್ಯ’’ ದಲ್ಲಿ ದತ್ತಾಸಾಬ್ ಮತ್ತು ಅವರ ಪತ್ನಿ ಅಪರ್ಣಾತಾಯಿ ಸಹ ಇರುವರೆಂದು ಇವಾವಸೂ ಹೇಳಿದ್ದ. ಪರಿಚಯದವರಿದ್ದಾರೆಂಬ ಸಮಾಧಾನ. ಆದರೆ ದತ್ತಾಸಾಬ್ ಆರೋಗ್ಯ ಸ್ಥಿತಿ ಗಂಭೀರವಿದೆಯೆಂದೂ ತಿಳಿಸಿದ್ದು ಬಹಳ ಖೇದವೆನಿಸಿತು.
 ಅಂತೂ-ಇಂತೂ ನನ್ನ ಜೀವನ ಅಂತಿಮ ಹಂತ ತಲುಪಿತು! ‘‘ವಾತ್ಸಲ್ಯ’’ ದ ವಿಶಾಲವಾದ ಅಂಗಳದ ಹೂವಿನ ಗಿಡಗಳು ನನ್ನ ಸ್ವಾಗತಿಸಿದವು. ಪಾರಿಜಾತದ ಮರ ನನ್ನ ಅಚ್ಚುಮೆಚ್ಚು ಅಂತ ಈ ಸಂಸ್ಥೆಯವರಿಗೂ ಗೊತ್ತಿತ್ತೆ ಎಂದು ಕೇಳಿಕೊಂಡೆ! ನನ್ನಂತೆಯೇ ಅನೇಕ ವೃದ್ಧರನ್ನು ಕಂಡೆ. ಮೂವರಿಗೆ ಸೇರಿ ಒಂದೊಂದು ಕೊಠಡಿ, ಆದರೆ ರಾತ್ರಿ ಎಲ್ಲರೂ ಹಾಲ್‌ನಲ್ಲೇ ಮಲಗಬೇಕು. ವಯಸ್ಸಾದವರು.. ಯಾವಾಗ ಏನಾಗುತ್ತೋ ಎಂಬ ಆತಂಕಕ್ಕೆ ಈ ವ್ಯವಸ್ಥೆಯಂತೆ. ಮೇಲ್ವಿಚಾರಕರೊಬ್ಬರು ಸದಾ ಇರುತ್ತಾರಂತೆ. ವೈದ್ಯರೂ ಇದ್ದಾರಂತೆ. ಎಲ್ಲಾ ಇದೆ. ನಮ್ಮವರ ಹೊರತು. ನನ್ನನ್ನು ಬಿಟ್ಟು ಮಕ್ಕಳು ಹೊರಟುಹೋದರು ಎಂಬ ದುಃಖ ಅನಾಥಪ್ರಜ್ಞೆಯಾಗಿ ಬದಲಾಗಿದ್ದು ನಿಜ. ಸ್ಕೂಲಿಗೆ ಹೋಗುವಾಗಲೂ ಹೇಳಿಹೋಗುತ್ತಿದ್ದ ಮಕ್ಕಳಿಗೆ ಈಗ ಅಮ್ಮ ಸದರ ಅನಿಸಿಬಿಟ್ಟಳು.
 ಹೊಂದಿಕೊಳ್ಳಲೇಬೇಕಿತ್ತು. ಇಲ್ಲಿನ ರೀತಿ-ನೀತಿ, ಊಟ-ತಿಂಡಿ, ಇರುವ ಶೈಲಿ. ಎಲ್ಲಾ ಭಿನ್ನ-ವಿಭಿನ್ನ. ನಿಧಾನಕ್ಕೆ ಈ ವಾತಾವರಣಕ್ಕೆ ಹೊಂದಿಕೊಂಡೆ. ಮಂಡಿ ನೋವು ಹೆಚ್ಚಾಗಿತ್ತು. ಉಳಿದವರಿಗೆ ವಾರಕ್ಕೆರಡು ಸಾರಿ ಮಕ್ಕಳಿಂದ – ಮೊಮ್ಮಕ್ಕಳಿಂದ ಫೋನು ಬರುತ್ತದೆಂದು ತಿಳಿಯಿತು. ನನಗೂ ಬರುತ್ತೆ ಅಂತ ಆ ಕ್ಷಣವೇ ಫೋನು ಬಂದಂತೆ ಸಂಭ್ರಮಿಸಿದೆ!
 ಅಪರ್ಣಾತಾಯಿ ಮನೆಯನ್ನು ತುಂಬಾ ನೆನೆಯುತ್ತಿದ್ದರು. ಗೌರೀಬಾಯಿಯ ಮಗ ವಿದೇಶದಿಂದ ಅವರಿಗೆ ಫೋನು ಮಾಡುತ್ತಿದ್ದ. ಬಿಪಿನ್‌ಸೇನ್‌ರ ಮಕ್ಕಳು ಹಣ ಕಳುಹಿಸುತ್ತಿದ್ದರಷ್ಟೇ; ಸುರಿಂದರ್ ಭಯ್ಯಾ ಮೊಮ್ಮಗಳ ಬರುವಿಕೆಗೆ ಸದಾಕಾಲ ‘‘ವಾತ್ಸಲ್ಯ’’ದ ಗೇಟಿನ ಬಳಿ ನಿಲ್ಲುತ್ತ, ಸೆಕ್ಯೂರಿಟಿ ನಾಯರ್‌ನಿಂದ ಬೈಸಿಕೊಳ್ಳುತ್ತಿದ್ದರು. ನಾನೂ ಕಾಯುತ್ತಿದ್ದೆ. ಮಕ್ಕಳ ಕರೆಗಾಗಿ, ಎಂದೂ ಬಾರದ ಕೂಗಿಗಾಗಿ. ಆದರೂ ಇಲ್ಲಿಗೆ ಬಂದ ಹದಿನೈದು ದಿನದಲ್ಲಿ ಇವಾವಸೂ ಎರಡು ಸಾರಿ ನನ್ನ ನೋಡಲು ಬಂದಿದ್ದ. ಅವನು ‘ಹಾಯ್ ಸ್ವೀಟಿ’ ಎನ್ನುವುದಕ್ಕೇ ನಾನು ಕಾತರದಿಂದಿದ್ದೆ. ಉಳಿದವರು ನಮ್ಮ ಪ್ರೀತಿಗೆ ಬೆರಗಾಗಿದ್ದು ನಿಜ. ಮತ್ತೆ ಯಾರೂ ಮನೆಯಿಂದ ಬರಲಿಲ್ಲ ನನಗಾಗಿ. ವೃದ್ಧಾಶ್ರಮ ಸೇರಿದ ನಂತರವೇ ನಿರೀಕ್ಷೆಗಳು ಹೆಚ್ಚು ಎನ್ನುವ ಭಾವನೆ ಹುಟ್ಟಿತು.
 ದತ್ತಾಸಾಬ್ ತೀರಿದ ನಂತರ ಅವರ ಪತ್ನಿಗೆ ಒಂಟಿತನ ಕಾಡುತ್ತಿತ್ತು. ಅವರಿಗೆ ಮಕ್ಕಳ ಕುರಿತು ಯಾವುದೇ ರೀತಿಯ ಸಂಶಯವಾಗಲೀ – ಬೇಸರವಾಗಲೀ ಇರಲಿಲ್ಲ. ದತ್ತಾಸಾಬ್ ಹೋದ ನಂತರ ಅರ್ಪಣಾತಾಯಿ ನಾಲ್ಕು ದಿನವಷ್ಟೇ ‘‘ವಾತ್ಸಲ್ಯ’’ ದಲ್ಲಿದ್ದರು. ನಂತರ ಅವರ ಮಕ್ಕಳು ಕರೆದುಕೊಂಡು ಹೋದರು. ಅಪರ್ಣಾತಾಯಿ ಇಷ್ಟು ದಿನ ನನ್ನೊಂದಿಗೆ ಆತ್ಮೀಯರಾಗಿದ್ದರು. ಈಗ ಅವರೂ ಹೋದರೆಂದು ಕೊಂಚ ಬೇಸರ! ಜೀವನದಲ್ಲಿ ಯಾವುದೂ ಸ್ಥ್ಥಿರವಲ್ಲ – ಯಾರೂ ಸ್ಥಿರವಲ್ಲ ಎಂಬ ಸತ್ಯ ಅರಿತ ಮೇಲೆ ಇನ್ನೇನು? ಆದರೂ ನನ್ನ ಮಕ್ಕಳಿಗೆ ನಾನೆಂದರೆ ಪ್ರೀತಿ ಇಲ್ವಾ? ವಸುನಂದನರ ಒಳ್ಳೆಯ ಸ್ವಭಾವ ಮಕ್ಕಳಲ್ಲಿ ಯಾರೊಬ್ಬರಿಗೂ ಬಂದಿಲ್ಲವಾ? ಹೀಗೆ ಒಂಟಿಯಾಗಿಹ ನನ್ನ ಸ್ಥಿತಿಯ ಬಗ್ಗೆ ವಿಚಾರಿಸಬೇಕೆಂದೂ ಅನಿಸುವುದಿಲ್ವಾ? ನನ್ನವರಿದ್ದೂ ನನಗೆ ಯಾರೂ ಇಲ್ಲ ಎಂದು ಗೌರೀಬಾಯಿ ಬಳಿ ಹೇಳುವಾಗ ಕಣ್ಣು ಹನಿಗೂಡುತ್ತೆ. ಬರಬಹುದು, ಇಂದಲ್ಲ-ನಾಳೆ ಹೋಗೋ ಪ್ರಾಣವನ್ನು ಅವರು ಬರುವ ತನಕ ಹಿಡಿದಿಟ್ಟುಕೊಳ್ಳುತ್ತೇನೆ. ಈ ಮೋಹ-ಪಾಶಗಳು ಮನುಷ್ಯನನ್ನು ಗಟ್ಟಿಗೊಳಿಸುತ್ತವೋ – ದುರ್ಬಲಗೊಳಿಸುತ್ತವೋ? ವಸುನಂ ದನರನ್ನು ನೆನೆಯೋದೊಂದೇ ಈಗ ಉಳಿದಿರುವ ಕೆಲಸ. ನನ್ನ ಕಣ್ಣೀರು ನಾನೇ ಒರೆಸಿಕೊಳ್ಳಬೇಕು.’’
 – ಇವಿಷ್ಟು ‘‘ಇವಾಲೂನಾ’’ ಎಂಬಾಕೆಯು ಬರೆದ ಬರಹವೊಂದರ ಸಾಲುಗಳು! ನಾನೂ ಸಹ ಇಷ್ಟೇನಾ – ಮುಂದೇನಾಯ್ತೆಂಬ ಕುತೂಹಲದಿಂದ ‘‘ವಾತ್ಸಲ್ಯ’’ ದ ಮಾಲಿಕರಾದ ಶ್ರೀಮತಿ ಅನುರಾಧಾ ಮೇಘರಾಜ ಅವರನ್ನು ಭೇಟಿಯಾದೆ. ಅವರು ಹೇಳಿದ ಸಂಗತಿ ಅಚ್ಚರಿ ಎನಿಸಿತು.
 ‘‘ಎಷ್ಟೇ ದಿನಗಳಾದರೂ ಇವಾಲೂನಾರ ಮಕ್ಕಳಾಗಲೀ, ಸಂಬಂಧಿಗಳಾಗಲೀ ಅವರನ್ನು ನೋಡಲು ಬರಲಿಲ್ಲ. ಇವಾವಸೂ ಎಂಬ ತರುಣ ವಿದೇಶಕ್ಕೆ ಕಲಿಯಲು ಹೋದ ನಂತರ ಇವಾ ಒಂಟಿಯಾದರು. ತಾನು ಬದುಕಿರುವಾಗಲೇ ತೊಂದರೆ ಎಂದುಕೊಂಡ ಮನೆಯವರ ಕುರಿತು ಆಕೆ ನೊಂದಿದ್ದರು. ಇದೇ ಕಾರಣದಿಂದ ತನ್ನ ಸಾವೂ ಅವರಿಗೆ ತೊಂದರೆಯಾಗದಿರಲೆಂದು.’’ – ಅನುರಾಧಾರ ಕಣ್ಣಿನಲ್ಲಿ ನೀರು ಕಂಡು ನನಗೂ ದುಃಖವಾಯಿತು. ‘‘ಆಮೇಲೆ.’’ ಎಂದೆ.
  ‘‘ಅವರು, ತಮ್ಮ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳು ಅಭ್ಯಾಸ ಮಾಡುವ ಪ್ರಯೋಗಾಲಯಕ್ಕೋ ಅಥವಾ ಕಣ್ಣು, ಕಿಡ್ನಿ, ಹೃದಯ ದಾನ ಮಾಡಲೆಂದೋ ಚಿಂತಿಸಿ, ದೇಹದಾನಕ್ಕೆ ಬದುಕಿರುವಾಗಲೇ ಸಮ್ಮತಿಸಿದರು. ಈಗಲೂ ಇವಾಲೂನಾರ ಶವ ಮೆಡಿಕಲ್ ಕಾಲೇಜಿನ ಲ್ಯಾಬ್‌ನಲ್ಲಿದೆ. ಅವರ ಮನೆಯವರಿಗೆ ಸತ್ತ ಸುದ್ದಿ ತಿಳಿಸಿದಾಗ ಬಂದಿದ್ದರು. ಹೀಗೊಂದು ಒಪ್ಪಂದಕ್ಕೆ ಅವರೇ ಸಹಿ ಹಾಕಿದ್ದಕ್ಕೆ ಶವ ನೀಡಲು ಸಾಧ್ಯವಿಲ್ಲ ಎಂದೆ. ಇವಾಲೂನಾರ ಮಕ್ಕಳು ಸ್ವಲ್ಪವೂ  ದುಃಖಿತರಾಗದೇ, ’ಒಳ್ಳೆಯದಾಯ್ತು’ ಎಂದು ನಿರ್ಭಾವುಕರಾಗಿ ಹಾಗೇ ಹೊರಟುಹೋದರು. ಮಕ್ಕಳಿಗಾಗಿ ಜೀವ ತೇಯುವ ಹೆತ್ತವರು ಒಂದೆಡೆಯಾದರೆ, ಇಂಥಾ ಮನುಷ್ಯತ್ವವಿಲ್ಲದ ಮಕ್ಕಳು ಒಂದೆಡೆ.’’ – ಅನುರಾಧಾ ನಿಟ್ಟುಸಿರಿಟ್ಟರು. ‘‘ಥ್ಯಾಂಕ್ ಯೂ.’’ ಎಂದು ಅಲ್ಲಿಂದ ಹೊರಟೆ.
 ಇವಾಲೂನಾರ ಪ್ರಜ್ಞೆಯ ಬಗ್ಗೆ ಗೌರವ ಮೂಡಿತು. ಉಸಿರಿರುವ ತನಕ – ಉಸಿರು ಹೋದ ನಂತರವೂ ತನ್ನಿಂದ ತೊಂದರೆಯಾಗದಿರಲಿ ಎಂದು ಆಶಿಸುತ್ತ ಮರೆಯದ ಇವಾಲೂನಾರ ಮಾತೃವಾತ್ಸಲ್ಯ ಅಮೂಲ್ಯವಾದುದು. ನಾನು ಬರೆಯಲು ಆರಂಭಿಸುತ್ತಿದ್ದಂತೆ. ಖುದ್ದು ಅವರೇ ಅವರ ಬದುಕಿನ ವಿವರಗಳನ್ನು ಬಿಚ್ಚಿಟ್ಟಂತೆ ಅನಿಸಿತು. ಕತೆಯ ಅಂತ್ಯವನ್ನು ವಾಸ್ತವಕ್ಕಿಂತ ತುಸು ಭಿನ್ನವಾಗಿಸಬೇಕೆಂದು ನಿರ್ಧರಿಸಿ, ಇವಾಲೂನಾರ ಭಾವಚಿತ್ರದಲ್ಲಿ ವಸುನಂದನರು ತುಂಬಿದ ಬಣ್ಣವನ್ನು ದಿಟ್ಟಿಸುತ್ತಾ ಕುಳಿತೆ. ಅವಲೋಕನ ಮುಂದುವರಿಯಿತು. ಹೊರಗೆ ಪಾರಿವಾಳಗಳು ಮುಗಿಲಿಗೇರಲು ರೆಕ್ಕೆ ಬಡಿದಿದ್ದು ಸಾಲೊಂದಕ್ಕೆ ಸ್ಫೂರ್ತಿ ಯಾಯಿತು.

   

Leave a Reply