ನಿತ್ಯ ನೂತನತೆ ಮತ್ತು ಅನೂಜಾನಪರಂಪರೆ

ಬೆಂಗಳೂರು - 0 Comment
Issue Date :

  • ಡಾ. ಮಹಾಬಲೇಶ್ವರ ಎಸ್. ಭಟ್ಟ, ಪ್ರಾಚಾರ್ಯರು, ವೇದವಿಜ್ಞಾನ

ಪಿಂಡೇ ಪಿಂಡೇ ಮತಿರ್ಭಿನ್ನಾ ಎಂಬ ಅನುಭವದ ಮಾತಿದೆ. ಅರ್ಥಾತ್ ಪ್ರತಿಯೊಬ್ಬನ ಚಿಂತನೆ ಮತ್ತು ಸ್ವಭಾವವೂ ವಿಭಿನ್ನವಾದದ್ದು. ಯಾರ ಸ್ವಭಾವವೂ ಇನ್ನೊಬ್ಬರಿಗೆ ಸರಿಯಾಗಿರಲಾರದು. ಕೆಲವರಿಗೆ ಸಿಹಿ ಇಷ್ಟವಾದರೆ ಇನ್ನೂ ಕೆಲವರಿಗೆ ಖಾರ ಇಷ್ಟವಾಗಬಹುದು. ರಾತ್ರಿ ನಿದ್ರೆ ಕೆಲವರಿಗೆ ಇಷ್ಟವಾದರೆ ಇನ್ನು ಕೆಲವರಿಗೆ ಪ್ರಾತಃಕಾಲ ನಿದ್ರೆಗೆ ಅನುಕೂಲವಾಗಬಹುದು. ಇಂತಹ ನೂರಾರು ಉದಾಹರಣೆಗಳನ್ನು ನೀಡಬಹುದಾಗಿದೆ. ಪ್ರಾಯಃ ಜಗತ್ತಿನಲ್ಲಿರುವ 600 ಕೋಟಿ ಜನರಲ್ಲಿಯೂ ಈ ನಿಯಮವು ಸಮಾನವಾದದ್ದು. ಒಟ್ಟಿಗೆ ಬಾಳುವವರಲ್ಲಿ ಈ ಸ್ವಭಾವವೈಚಿತ್ರ್ಯವು ಸಾಮರಸ್ಯಪೂರ್ಣವಾದರೆ ಜೀವನವು ಆನಂದದಾಯಕವಾಗುವುದು. ವಿಷಮವಾಗಿದ್ದರೆ ದುಃಖಕ್ಕೆ, ವೈಮನಸ್ಯಕ್ಕೆ ಕಾರಣವಾಗುವುದು.

 ಪ್ರಕೃತ ಶೀರ್ಷಕಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ಕೆಲವರು ಎಲ್ಲ ಕೆಲಸ ಮತ್ತು ವಿಷಯಗಳಲ್ಲಿಯೂ ನಾವೀನ್ಯವನ್ನು ಇಷ್ಟಪಟ್ಟರೆ, ಇನ್ನು ಕೆಲವರು ಸಮಾನತೆಯನ್ನು ಅಪೇಕ್ಷಿಸುತ್ತಾರೆ. ಯಾರು ನೀತ್ಯನೂತನತೆಯನ್ನು ಅಪೇಕ್ಷಿಸುತ್ತಾರೋ ಅವರು ಎಲ್ಲದರಲ್ಲಿಯೂ ಹೊಸತನವನ್ನು ಹುಡುಕುತ್ತಾರೆ. ಹೊಸ ಹೊಸ ಪ್ರಯೋಗಗಳಲ್ಲಿ ನಿರತರಾಗಿರುತ್ತಾರೆ. ಜೀವನದಲ್ಲಿ ಉತ್ಸಾಹವನ್ನು ಉಳಿಸಿ-ಬೆಳೆಸಿಕೊಳ್ಳಲು ಅವರು ಈ ಉಪಾಯವನ್ನು ಅನುಸರಿಸುತ್ತಾರೆ. ನಾವೀನ್ಯವೆಂಬುದು ಪ್ರಕೃತಿಯ ನಿಯಮ. ಮರಗಿಡಗಳಲ್ಲಿ ಚಿಗುರು, ಹೂವು, ಹಣ್ಣುಗಳು ಹೇಗೆ ಪರಿವರ್ತನೆಯಾಗುತ್ತಲೇ ಇರುವುದೋ ಅಂತೆಯೇ ಜೀವನದಲ್ಲಿಯೂ ಎಂಬುದು ಅವರ ವಾದ. ಯಾರ ಜೀವನದಲ್ಲಿ ನಾವೀನ್ಯವಿಲ್ಲವೋ ಅವರು ಗತಾನುಗತಿಕೋ ಲೋಕಃ ಎಂಬಂತೆ ಅನುಕರಣಾಶೀಲರಾಗಿರುತ್ತಾರೆ. ಅವರೂ ಜಡಸ್ವಭಾವದವರಾಗುವುದಷ್ಟೇ ಅಲ್ಲದೇ ಸಹಚಾರಿಗಳೂ ಜಡರಾಗುವಂತೆ ಮಾಡುತ್ತಾರೆ. ಆದ್ದರಿಂದ ಜೀವನದಲ್ಲಿ ಪ್ರತಿಯೊಂದು ಕ್ಷೇತ್ರದಲ್ಲಿಯೂ ನಾವೀನ್ಯವಿರಬೇಕೆಂಬುದು ಅವರ ವಾದ.

 ಇನ್ನು ಕೆಲವರು ಅನೂಚಾನತೆಯನ್ನು ಅಪೇಕ್ಷೆಪಡುತ್ತಾರೆ. ಯಾವುದು ಪರಂಪರಾಗತವಾಗಿ ಬಂದಿದೆಯೋ ಅದರಲ್ಲಿ ಸತ್ವ ಹೆಚ್ಚು. ಯಾವುದೇ ಒಂದನ್ನು ನಿರಂತರವಾಗಿ ಮಾಡುತ್ತಾ ಬಂದರೆ ಅದರಲ್ಲಿ ಶಕ್ತಿಯ ಆವಿರ್ಭಾವವಾಗುವುದು. ಉದಾಹರಣೆಗೆ, ಒಂದೇ ವಿಗ್ರಹದಲ್ಲಿ, ಒಂದೇ ಭಾವದಿಂದ, ಸಮಾನಕಾಲದಲ್ಲಿ, ಸಮಾನಕ್ರಮದಲ್ಲಿ ಪೂಜೆ ಪುನಸ್ಕಾರಗಳು
ನಡೆಯುತ್ತಾ ಬಂದರೆ ಆ ವಿಗ್ರಹದಲ್ಲಿ ದೇವತೆಯ ಆವಿರ್ಭಾವವಾಗುವುದು. ಆದ್ದರಿಂದ ಒಂದನ್ನೇ ನಿರಂತರವಾಗಿ ನಡೆಸಿಕೊಂಡು ಹೋಗಬೇಕೆಂಬುದು ಇವರ ವಾದ. ಇವರು ಹೊಸತನವನ್ನು ಚಿಂತನೆ ಮಾಡುವುದಕ್ಕಿಂತ ಹಿರಿಯರು ಹಾಕಿಕೊಟ್ಟ ಪರಂಪರೆಯ ವಿಷಯದಲ್ಲಿ ಬದ್ಧಾದರರಾಗಿರುತ್ತಾರೆ. ಕುಲಪರಂಪರೆ, ಸಾಂಸ್ಥಿಕ ಪರಂಪರೆ ಇವುಗಳ ವಿಷಯದಲ್ಲಿ ಆಗ್ರಹ ಉಳ್ಳವರಾಗಿರುತ್ತಾರೆ. ನಿತ್ಯವೂ ಹೊಸತನ್ನು ಹುಡುಕುವವರು ಯಾವುದನ್ನೂ ಸರಿಯಾಗಿ ಮಾಡಲಾರರು. ತಪಸ್ಸು ಎಂದರೆ ಒಂದನ್ನೇ ನಿರಂತರವಾಗಿ ಮಾಡುವ ಕ್ರಮಕ್ಕೆ ಇರುವ ಹೆಸರು. ಅಧ್ಯಾತ್ಮಕ್ಷೇತ್ರದಲ್ಲಿ, ನಿತ್ಯಚಟುವಟಿಕೆಗಳು ಪ್ರಧಾನವಾದ ಕ್ಷೇತ್ರದಲ್ಲಿ ಅನೂಚಾನತೆಗೆ ಹೆಚ್ಚು ಮಾನ್ಯತೆ ಇದೆ. ಆದ್ದರಿಂದ ಚಿಕ್ಕ ಕೆಲಸವನ್ನಾದರೂ ನಿರಂತರವಾಗಿ ಮಾಡಬೇಕು. ಆಗಮಾತ್ರ ನಾವು ನಮ್ಮ ಜೀವನದಲ್ಲಿ ಯಾವುದಾದರೊಂದನ್ನು ಸಾಧಿಸಬಹುದು.

 ಈ ಎರಡೂ ಪಕ್ಷಗಳೂ ಅವರವರ ವಾದಕ್ಕೆ ನಿಲುಕುವಂತಹದ್ದೇ ಆಗಿದೆ. ಅದರಿಂದಲೇ ಅವರಿಗೆ ಏನನ್ನಾದರೂ ಸಾಧಿಸಬಹುದು ಎಂಬ ವಿಶ್ವಾಸ ಮತ್ತು ಅನುಭವವೂ ಕೂಡಾ. ಮೊದಲೇ ತಿಳಿಸಿದಂತೆ ಯುಕ್ತಿಯೂ ಇದರಲ್ಲಿದೆ. ಆದರೆ ಎರಡೂ ವಾದಗಳೂ ವಿಪರೀತವಾದರೆ ಪರಸ್ಪರರು ಆರೋಪಿಸಿಕೊಂಡಂತೆ ಯಾವುದನ್ನೂ ಸಾಧಿಸಲಾಗದು, ಯಾರೂ ಸಹಚಾರಿಗಳಾಗಿ ಉಳಿಯಲಾರರು. ಹಾಗಾದರೆ ಹದವನ್ನು ನಿರ್ಣಯಿಸುವುದು ಹೇಗೆ? ಅದಕ್ಕೆ ಉದಾಹರಣೆ ನಾವು ನಿತ್ಯವೂ ನೋಡುವ ಮರಗಿಡಗಳೇ ಆಗಿವೆ. ನಿತ್ಯ ನಾವಿನ್ಯಕ್ಕೆ ಹೇಗೆ ಮರದ ಎಲೆಯೇ ಮೊದಲಾದವುಗಳು ರೂಪಕವಾಗುವವೋ, ಅಂತೆಯೇ ಶಾಶ್ವತಕ್ಕೆ
ಬೇರು ಉದಾಹರಣೆ. ಅರ್ಥಾತ್ ಯಾವುದು ಶಾಶ್ವತವಾಗಿರಬೇಕೋ ಅದು ಎಂದಿಗೂ ಬದಲಾಗಬಾರದು – ಬೇರಿನಂತೆ. ಬೇರು ನಿತ್ಯವಾದದ್ದೆಂದು ಎಲೆಯೇ ಮೊದಲಾದವುಗಳೂ ಬದಲಾಗಬಾರದು ಎನ್ನಬಾರದು. ಕೆಲ ವಿಚಾರಗಳು ಹೊಸತನವನ್ನು ಉಳಿಸಿಕೊಳ್ಳಲು ಪರಿವರ್ತನೆಗೊಳ್ಳಲೇಬೇಕು. ಹೂವು ಪ್ರತಿದಿನವೂ ಹೊಸತು ಮೂಡುವಂತೆ ಬೇರೂ ಹೊಸತಾಗಬೇಕೆನ್ನಬಾರದಷ್ಟೇ.

 ನಾವು ಎಲ್ಲಕಡೆಗಳಲ್ಲಿಯೂ ಹದವನ್ನೇ ಹುಡುಕುವವರು. ಅದು ಎಲ್ಲಿ ಬದಲಾವಣೆ ಆಗಬೇಕು ಎಲ್ಲಿ ಆಗಬಾರದು ಎಂಬುದಕ್ಕೆ ನಮ್ಮ ಅನುಭವವೇ ಪ್ರಮಾಣವಾಗುವುದು. ಹೊಸತೆಂಬುದರ ಹೆಸರಿನಲ್ಲಿ ಮೂಲವನ್ನೇ ಮರೆಯುವಂತಾಗಬಾರದು. ಪರಂಪರೆ ಎಂಬ ಹೆಸರಿನಲ್ಲಿ ಅಪ್ಪ ನೆಟ್ಟ ಆಲದಮರವೆಂದು ಅದಕ್ಕೆ ನೇಣು ಹಾಕಿಕೊಂಡರು ಎಂಬ ಗಾದೆಯಂತಾಗಬಾರದು.

 

   

Leave a Reply