ನಿರೀಕ್ಷೆಗಳೇಕೆ ಸದಾ ಸುಳ್ಳಾಗುತ್ತವೆ…?!

ಮಹಿಳೆ ; ಲೇಖನಗಳು - 0 Comment
Issue Date : 14.5.2016

ಶ್ರೀರಕ್ಷಾಗೆ ಕನಸಿನ ಪ್ರಪಂಚದಲ್ಲಿ ಬದುಕುವುದಂದ್ರೆ ಎಲ್ಲಿಲ್ಲದ ಖುಷಿ. ನನ್ನ ಬದುಕಲ್ಲಿ ಮುಂದೆ ಹೀಗಾಗಬೇಕು, ಹಾಗಾಗಬೇಕು ಎಂದುಕೊಳ್ಳುತ್ತಲೇ ಆಕೆ ಕಾಲಹರಣ ಮಾಡುತ್ತಾಳೆ. ಹಾಗಾಗಬೇಕೆಂದರೆ ತನ್ನ ಪ್ರಯತ್ನವೂ ಬೇಕು ಎಂಬುದು ಆಕೆಗೆ ಅರ್ಥವಾಗುವುದಿಲ್ಲ. ಎಲ್ಲವೂ ಮಂತ್ರದಂಡದಿಂದಲೇ ನೆರವೇರಿಬಿಡುತ್ತದೆ ಎಂಬಂತೆ ವರ್ತಿಸುತ್ತಿರುತ್ತಾಳೆ. ಆಕೆಯ ನಿರೀಕ್ಷೆಯೂ ನೈಜತೆಯನ್ನು ಮೀರಿಯೇ ಹುಟ್ಟುತ್ತಿರುತ್ತವೆ. ಪ್ರತಿ ಬಾರಿ ತನ್ನ ನಿರೀಕ್ಷೆ ಸುಳ್ಳಾದಾಗಲೂ ನಿರಾಶಳಾಗುತ್ತಾಳೆ. ಹೀಗೆ ಕನಸು ಕಾಣುತ್ತಲೇ ಬದುಕುತ್ತ, ತನ್ನ ಕನಸ್ಯಾವುದೂ ನನಸಾಗುವುವವಲ್ಲ ಎಂಬುದು ತಿಳಿದು ಹತಾಶಳಾಗುತ್ತಾಳೆ. ವಾಸ್ತವ ಮತ್ತು ಕಲ್ಪನೆ ಈ ಎರಡರ ನಡುವಿನ ಅಂತರವನ್ನು ಅರ್ಥ ಮಾಡಿಕೊಳ್ಳುವುದಕ್ಕಾಗದೆ ಖಿನ್ನಳಾಗುತ್ತಾಳೆ.
ಹಲವು ಹೆಂಗಸರ ಕತೆ ಇದು. ಮನೆಯಲ್ಲಿ ಕುಳಿತು ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಂಡಿರುವ, ಕ್ರಿಯಾಶೀಲವಾಗಿರುವ ಹೆಂಗಸರ ಮನಸ್ಸು ಸದಾ ಲವಲವಿಕೆಯಲ್ಲಿರುತ್ತದೆ. ಆದರೆ ಯಾವಾಗಲೂ ಒಂದಿಲ್ಲೊಂದು ಯೋಚನೆಯಲ್ಲೇ ಕಾಲಹರಣ ಮಾಡುತ್ತ, ಜಗತ್ತಿನ ಇತರರಿಂದ ಸಾಕಷ್ಟನ್ನು ನಿರೀಕ್ಷಿಸುತ್ತ, ಜನ ತಮ್ಮಿಂದಲೂ ನಿರೀಕ್ಷಿಸುತ್ತಾರೆಂಬುದನ್ನೇ ಮರೆಯುವವರ ಮನಸ್ಸು ಎಂದಿಗೂ ಸಂತೋಷದಿಂದಿರುವುದಿಲ್ಲ. ಅವರಿಗೆ ತಮ್ಮ ಗೋಳನ್ನು ಸದಾ ಆಲಿಸುತ್ತಾ, ತಮ್ಮ ಬಗೆಗೆ ಕರುಣೆ ತೋರಿಸುವಂಥವರೊಬ್ಬರಿದ್ದುಬಿಟ್ಟರೆ ಬೇರೇನೂ ಬೇಕಿಲ್ಲ.
ಇಂಥವರಿಗೆ ಯಾವುದೇ ಸಮಸ್ಯೆಯೂ ಇರುವುದಿಲ್ಲ. ಆದರೆ ಇಲ್ಲದ ಸಮಸ್ಯೆಗಳನ್ನು ಇದೆ ಎಂದುಕೊಂಡೇ ಸದಾ ಖಿನ್ನವಾಗಿಯೇ ಬದುಕುವುದರಲ್ಲಿ ಅವರಿಗೆ ಎಲ್ಲಿಲ್ಲದ ಖುಷಿ! ನಾಲ್ಕು ಜನ ತನ್ನ ಗೋಳಿಗೆ ಸೊಪ್ಪು ಹಾಕಿಬಿಟ್ಟರಂತೂ ಅವರ ಸಂತೋಷಕ್ಕೆ ಪಾರವೇ ಇಲ್ಲ. ಜಗತ್ತಿನಲ್ಲಿರುವ ಪ್ರತಿಯೊಬ್ಬರಿಗೂ ಅವರದೇ ಆದ ಕೆಲಸವಿದೆ. ಎಲ್ಲರೂ ತಮ್ಮ ಗೋಳಿಗೇ ಸೊಪ್ಪು ಹಾಕಿಕೊಂಡು ಕೂರುವುದಕ್ಕಾಗುವುದಿಲ್ಲ ಎಂಬುದು ಅವರಿಗೆಂದಿಗೂ ಅರ್ಥವಾಗುವುದಿಲ್ಲ.
ಕೆಲವು ಮಾನಸಿಕ ಸಮಸ್ಯೆಯಿಂದ ಮತ್ತು ಸುತ್ತಲ ವಾತಾವರಣದಿಂದ ಹಲವು ಮಹಿಳೆಯರು ಇಂಥ ಮನೋಭಾವದಿಂದ ಬದುಕುತ್ತಿರಬಹುದು. ಇದು ಖಂಡಿತ ಕಾಯಿಲೆಯಲ್ಲ. ಆದರೆ ಈ ಮನೋಭಾವವನ್ನು ಬದಲಿಸಿಕೊಳ್ಳದೆ ಅದನ್ನೇ ಮುಂದುವರಿಸಿಕೊಂಡು ಹೋದರೆ ಮುಂದೊಮ್ಮೆ ಕಾಯಿಲೆ ಕಟ್ಟಿಟ್ಟ ಬುತ್ತಿ ಅಷ್ಟೆ. ಖಿನ್ನತೆಯತ್ತ ಸರಿಯುವುದಕ್ಕೆ ಈ ಮನೋಭಾವವೇ ಮುಖ್ಯ ಕಾರಣ ಎಂಬುದು ಮನಃಶಾಸ್ತ್ರಜ್ಞರ ಅಭಿಪ್ರಾಯವೂ ಹೌದು.
ಇಂಥ ಮನೋಭಾವಕ್ಕೆ ಬಹುಮುಖ್ಯ ಕಾರಣ ಅಭದ್ರತೆಯ ಭಾವ ಮತ್ತು ಕೀಳರಿಮೆ ಎಂಬುದು ತಜ್ಞರ ವಿಶ್ಲೇಷಣೆ. ಇದಕ್ಕೆ ಪರಿಹಾರವಿಲ್ಲವೆಂದಿಲ್ಲ. ಆದರೆ ಇದಕ್ಕೆ ಯಾವುದೇ ನಿರ್ದಿಷ್ಟ ಮಾತ್ರೆಗಳಾಗಲಿ, ಔಷಧಗಳಾಗಲಿ ಖಂಡಿತ ಇಲ್ಲ. ನಮ್ಮ ಮನಸ್ಸನ್ನು ಸದಾ ಕ್ರಿಯಾಶೀಲವಾಗಿರುವಂತೆ ಮಾಡುವುದು ಮತ್ತು ಸದಾ ಧನಾತ್ಮಕ ಚಿಂತನೆ ಮಾಡುವುದರಿಂದ ಮಾತ್ರವೇ ಈ ಮನೋಭಾವದಿಂದ ಹೊರಬರುವುದಕ್ಕೆ ಸಾಧ್ಯ.
• ನಿರೀಕ್ಷೆ ಮಾಡುವುದು ತಪ್ಪಲ್ಲ. ಆದರೆ ನಿರೀಕ್ಷೆಗಳು ವಾಸ್ತವದ ಪರಿಧಿಯನ್ನು ದಾಟದಂತೆ ನೋಡಿಕೊಳ್ಳಿ.
• ಯಾವುದಾದರೂ ವ್ಯಕ್ತಿಯ ಬಗ್ಗೆ ಮನಸ್ಸು ಋಣಾತ್ಮಕವಾಗಿ ಯೋಚಿಸುವುದಕ್ಕೆ ತೊಡಗಿದರೆ ತಕ್ಷಣವೇ ಆ ವ್ಯಕ್ತಿಯಲ್ಲಿರಬಹುದಾದ ಧನಾತ್ಮಕ ಗುಣಗಳನ್ನು ಗುರುತಿಸುವುದಕ್ಕೆ ಶುರುಮಾಡಿ. ಎಲ್ಲರಲ್ಲೂ ದೋಷಗಳಿರುತ್ತವೆ. ಜಗತ್ತಿಗೇ ಬೆಳದಿಂಗಳೂಟ ಬಡಿಸುವ ಚಂದ್ರನೇನು ಕಂದಕದಿಂದ ಹೊರತಾಗಿಲ್ಲ!
• ಪ್ರತಿಯೊಂದು ಸನ್ನಿವೇಶವನ್ನೂ ತೀರಾ ಗಂಭಿರವಾಗಿಯೇ ನೋಡಬೇಕಿಲ್ಲ. ಏಕೆಂದರೆ ಪ್ರತಿಕ್ಷಣವೂ ಮುಖಗಂಟಿಕ್ಕಿಕೊಂಡೇ ಇರುವುದರಿಂದ ನಾವು ಪ್ರಬುದ್ಧರಾಗುವುದಿಲ್ಲ. ಬದಲಾಗಿ ಆ ಕ್ಷಣವನ್ನು ಸಂಭ್ರಮಿಸುವುದನ್ನು ಕಲಿತರೆ ಮನಸ್ಸು ಲವಲವಿಕೆಯಲ್ಲಿರುತ್ತದೆ.
• ದುಡಿದು ಬಂದ ಗಂಡನ ಬಳಿಯಾಗಲಿ, ಶಾಲೆೆ-ಕಾಲೇಜು ಮುಗಿಸಿ ಬಂದ ಮಕ್ಕಳ ಬಳಿಯಾಗಲಿ ಋಣಾತ್ಮಕ ವಿಷಯಗಳನ್ನು ಮಾತನಾಡಿ ಅವರ ಮೂಡ್ ಹಾಳು ಮಾಡುವ ಬದಲು ಏನಾದರೂ ಧನಾತ್ಮಕ ವಿಷಯವನ್ನು ಹೇಳಿ. ತೀರಾ ಪರಿಹರಿಸಲಾಗದ ಸಮಸ್ಯೆಯಿದ್ದರೆ ಅವರ ಬಳಿ ಹೇಳಿಕೊಳ್ಳಿ. ಅದನ್ನು ಬಿಟ್ಟು ಪ್ರತಿದಿನವೂ ಋಣಾತ್ಮಕ ವಿಷಯಗಳನ್ನೇ ಅವರ ಬಳಿ ಹೇಳುತ್ತಿದ್ದರೆ ನಿಮ್ಮೊಂದಿಗೆ ಮಾತನಾಡುವುದಕ್ಕೇ ಅಂಜುವ ಸನ್ನಿವೇಶ ನಿರ್ಮಾಣವಾಗಬಹುದು.
• ಇಷ್ಟದ ಪುಸ್ತಕಗಳನ್ನು ಓದಿ, ಸಿನೆಮಾ ನೋಡಿ. ಆದರೆ ಅವೂ ಧನಾತ್ಮಕ ಸಂದೇಶ ಕೊಡುವಂಥವಾಗಿರಲಿ.
• ಪತಿ-ಮಕ್ಕಳು ಎನ್ನುತ್ತ ಅವರು ಮನೆಯಲ್ಲಿರುವಷ್ಟು ಹೊತ್ತು ನೀವೂ ಅವರಾಗಿ ಅವರೊಂದಿಗೆ ಬೆರೆಯಿರಿ. ಅಷ್ಟು ಹೊತ್ತಾದರೂ ಮನಸ್ಸು ಉಲ್ಲಸಿತವಾಗಿರುತ್ತದೆ.
• ನಿಮ್ಮೊಂದಿಗೆ ಋಣಾತ್ಮಕ ಅಂಶಗಳನ್ನೇ ಹೇಳಿಕೊಳ್ಳುವ ಜನರೊಂದಿಗೆ ದೂರವಿದ್ದುಬಿಡಿ. ಅಥವಾ ಅವರೂ ಧನಾತ್ಮಕವಾಗಿ ಯೋಚಿಸುವಂತೆ ಅವರನ್ನು ಪ್ರೇರೇಪಿಸಿ.
• ಕರಕುಶಲ ಕೆಲಸಗಳು, ಒಳ್ಳೆಯ ಕಾರ್ಯಕ್ರಮಗಳ ವೀಕ್ಷಣೆ, ಆಗಾಗ ಪ್ರವಾಸಿ ತಾಣಗಳ ಭೇಟಿ ಈ ಎಲ್ಲವೂ ನಿಮ್ಮ ಮನಸ್ಸನ್ನು ಸದಾ ಚಟುವಟಿಕೆಯಿಂದಿರುವಂತೆ ಮಾಡುತ್ತದೆ.
• ನಿರೀಕ್ಷೆ ಮಾಡುವುದನ್ನೇ ಬಿಟ್ಟುಬಿಟ್ಟರೆ ಖಿನ್ನತೆಯಿಂಧ ಬಳಲುವ ಸನ್ನಿವೇಶ ನಿರ್ಮಾಣವಾಗುವುದಿಲ್ಲ. ಏನಾಗಬೇಕೋ ಅದಾಗುತ್ತದೆ ಹೀಗೇ ಆಗಬೇಕು, ಹೀಗಾಗಲೇಬಾರದು ಎಂದು ನಾವು ನಿರೀಕ್ಷಿಸುವುದರಿಂದ ಫಲಿತಾಂಶವೇನೂ ಭಿನ್ನವಾಗುವುದಿಲ್ಲ ಎಂಬ ಸಂಗತಿಯನ್ನು ಅರಿತುಕೊಳ್ಳಿ. ಆಗ ಯಾರಿಂದಲೂ, ಏನನ್ನೂ ನಿರೀಕ್ಷಿಸದೆ ಬದುಕಬಹುದು.
• ನಿರೀಕ್ಷೆಯನ್ನೇ ಮಾಡದಿದ್ದರೆ ನಿರೀಕ್ಷೆ ಸುಳ್ಳಾಯಿತಲ್ಲ ಎಂದು ಬೇಸರ ಪಟ್ಟುಕೊಳ್ಳುವ ಪರಿಸ್ಥಿತಿಯೇ ಬರುವುದಿಲ್ಲ.
• ಸಂಭ್ರಮವನ್ನು ನಾವೇ ಹುಡುಕಿಕೊಳ್ಳಬೇಕೇ ಹೊರತು, ನಮಗಾಗಿ ಅದನ್ನು ಬೇರಾರೋ ಖರೀದಿಸಿ ತರಲಾರರು ಎಂಬುದು ಗೊತ್ತಿದ್ದರೆ ಋಣಾತ್ಮಕವಾಗಿ ಯೋಚಿಸುವ, ನಿರೀಕ್ಷಿಸಿ ನಿರಾಶರಾಗುವ ಪ್ರಮೇಯ ಬರುವುದಿಲ್ಲ.

   

Leave a Reply