ನೆರೆ ಪರಿಹಾರ : ಸಂಘದ ವಿನೂತನ ಶೈಲಿ!

ಶಿವಮೊಗ್ಗ - 0 Comment
Issue Date : 04.03.2014

ತುಂಗೆ ಸೊಕ್ಕಿ ಉಕ್ಕಿ ಹರಿದು, ತೀರ್ಥಹಳ್ಳಿ ತಾಲೂಕಿನ ಕುರುವಳ್ಳಿ, ತೂದೂರು, ಮಂಡಗದ್ದೆ ಮುಂತಾದ ಗ್ರಾಮಗಳ ಜನರ ಪ್ರಾಣವೊಂದನ್ನುಳಿದು, ಮಿಕ್ಕೆಲ್ಲವನ್ನೂ ಕೊಚ್ಚಿಕೊಂಡು ಹೋದದ್ದು 1982ರ ಆಗಸ್ಟ್ ತಿಂಗಳಲ್ಲಿ. ನೊಂದವರಿಗೆ ಸರ್ಕಾರ ಹಾಗೂ ಸ್ಥಳೀಯ ಗ್ರಾಮಪಂಚಾಯಿತಿ ಮುಖ್ಯಸ್ಥರು ಸಕಾಲದಲ್ಲಿ ನೆರವು ನೀಡಿದುದು ಪ್ರಶಂಸಾರ್ಹವೇ. ರಾಷ್ಟ್ರೀಯ ಸ್ವಯಂಸೇವಕ ಸಂಘ ನೊಂದವರಿಗೆ ನೆರವು ನೀಡಿದ ಬಗೆ ಮಾತ್ರ ವಿನೂತನ; ಇದರಿಂದಾಗಿ ಈ ಬಂಧುಗಳ ಮನದಲ್ಲಿ ಸಂಘದ ನೆನಪು ಈಗ ಸದಾ ಹಸಿರು.

ಕುರುವಳ್ಳಿ, ತೂದೂರು, ಮಂಡಗದ್ದೆಗಳಲ್ಲಿ ಸಂಭವಿಸಿದ ಪ್ರವಾಹ ದುರಂತದ ಸುದ್ದಿ ತಿಳಿದೊಡನೆ ತೀರ್ಥಹಳ್ಳಿ, ಶಿವಮೊಗ್ಗದ ಸಂಘದ ಕಾರ್ಯಕರ್ತರು ಸ್ಥಳಕ್ಕೆ ಧಾವಿಸಿದರು. ಕುರುವಳ್ಳಿಯಲ್ಲಿ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸುವುದು, ಗಂಜಿ ಕೇಂದ್ರದ ನಿರ್ವಹಣೆ – ಈ ಕೆಲಸವನ್ನು ಅಚ್ಚುಕಟ್ಟಾಗಿ ಹಗಲಿರುಳೂ ತೀರ್ಥಹಳ್ಳಿಯ ಕಾರ್ಯಕರ್ತರು ನಿರ್ವಹಿಸಿದುದನ್ನು ಪ್ರವಾಹಕ್ಕೀಡಾದ ಬಂಧುಗಳು ಈಗಲೂ ಸ್ಮರಿಸುತ್ತಾರೆ. ತೂದೂರು, ಮಂಡಗದ್ದೆಗಳಲ್ಲಿ ಸಂಘದ ಕಡೆಯಿಂದ ಒಂದು ಸರ್ವೆ ನಡೆಸಲಾಯಿತು. ಮುದ್ರಿತ ಪತ್ರಕಗಳನ್ನು ಹಿಡಿದುಕೊಂಡು, ನೆರೆಪೀಡಿತರ ಬಳಿಗೇ ಕಾರ್ಯಕರ್ತರು ತೆರಳಿದರು. ಪತ್ರಿ ಕುಟುಂಬದಲ್ಲಿ ವಾಸಿಸುವವರ ಹೆಸರು, ವಯಸ್ಸು, ಅವರಿಗೆ ತುರ್ತಾಗಿ ಅಗತ್ಯವಿರು ಸಾಮಾಗ್ರಿಗಳು – ಎಲ್ಲವನ್ನೂ ಗುರುತು ಹಾಕಿಕೊಂಡರು. ಹೀಗೆ ಸರ್ವೆ ಮಾಡಿದ ಮನೆಗಳ ಸಂಖ್ಯೆ 180. ಆ ಬಳಿಕ ಶಿವಮೊಗ್ಗ, ಭದ್ರಾವತಿ ನಗರಗಳಲ್ಲಿ ಪ್ರತಿ ಮನೆಗೂ ಪಾದಯಾತ್ರೆ; ನೆರೆಪೀಡಿತರಿಗಾಗಿ ನೆರವು ನೀಡಲು ಕಾರ್ಯಕರ್ತರಿಂದ ನಾಗರಿಕರಲ್ಲಿ ಮನವಿ- ಈ ಮನವಿಗೆ ಓಗೊಡದವರೇ ಇಲ್ಲ ಎನ್ನುವುದು ಉತ್ಪ್ರೇಕ್ಷೆಯ ಮಾತಲ್ಲ. ಪ್ರತಿ ಮನೆಯಲ್ಲೂ ಹಣ, ಬಟ್ಟೆ, ಸಾಮಗ್ರಿ, ಕೊನೆಗೆ ಮನೆಯಲ್ಲಿ ಬಳಸುವ ಪಾತ್ರೆಯನ್ನೂ ಸಂತಸದಿಂದ ನೀಡಿದರು. ಹೀಗೆ ಸಂಗ್ರಹವಾದ ಮೊತ್ತ: 30 ಸಹಸ್ರ ರೂ. ಹಣ ಬಟ್ಟೆ ಬರೆ ಇತ್ಯಾದಿ.

20-8-82 ತೂದೂರು,ಮಂಡಗದ್ದೆ ಜನರಿಗೆ ಮರೆಯಲಾಗದ ದಿನ. ಸಂಘದ 70-80 ಕಾರ್ಯಕರ್ತರು ನಿಕ್ಕರ್ ಧರಿಸಿ, ಸುರಿವ ಮಳೆಯಲ್ಲೇ ಮನೆಮನೆಗೂ ಉತ್ಸಾಹದಿಂದ ಓಡಾಡುತ್ತಿರುವ ದೃಶ್ಯ. ಯಾವುದೇ ಆಡಂಬರ, ಸದ್ದುಗದ್ದಲ ಇಲ್ಲ; ಪ್ರಚಾರದ ಭರಾಟೆ ಇಲ್ಲ. ನೆರೆಪೀಡಿತ ನೊಂದ ಬಂಧುಗಳನ್ನು ಕೈಹಿಡಿದು ಕರೆತಂದು, ಅವರಿಗೆ, ಲಾರಿಯಲ್ಲಿ ಹೇರಿಕೊಂಡು ಬಂದ ಸಾಮಗ್ರಿಗಳ ವಿತರಣೆ, ಪ್ರತಿ ಕುಟುಂಬಕ್ಕೂ ಅವರ ಅವಶ್ಯಕತೆಗೆ ತಕ್ಕಂತೆ ಕಂಬಳಿ, ಚಾಪೆ, ಸ್ಟೌವ್, ಬಕೆಟ್, ಕೊಡ, ಸೀರೆ, ಪಂಚೆ, ಬಟ್ಟೆಗಳು; ಗಣೇಶನ ಹಬ್ಬದ ಅಡುಗೆಗೆಂದೇ ಬೇಳೆ ಮತ್ತು ಬೆಲ್ಲಗಳ ವಿತರಣೆ. ಜೊತೆಗೆ ಪ್ರತಿ ಮನೆಗೂ ಭಾರತ ಮಾತೆಯ ಕಟ್ಟು ಹಾಕಿಸಿದ ಒಂದು ಭಾವಚಿತ್ರ. ಹಿಂದು -ಮುಸ್ಲಿಂ ಕ್ರೈಸ್ತರಾದಿಯಾಗಿ ಎಲ್ಲರೂ ರಾಖಿ ಕಟ್ಟಿಸಿಕೊಂಡು, ಸ್ವಯಂಸೇವಕರು ಪ್ರೀತಿಯಿಂದ ಹಂಚಿದ ಸಾಮಗ್ರಿಗಳನ್ನು ಸಂತಸದಿಂದ ಪಡೆದುಕೊಂಡರು !

ಪಡೆದುಕೊಂಡವರಲ್ಲಿ ಹೆಚ್ಚಿನವರಿಗೆ ಹೇಳಲಾರದ ಸಂತಸ; ಕಣ್ಣಂಚಿನಲ್ಲಿ ಆನಂದಬಾಷ್ಪ. ತಮ್ಮ ಜೀವಮಾನದಲ್ಲಿ ಒಂದೇ ಬಾರಿಗೆ ಇಷ್ಟು ಸಾಮಗ್ರಿಗಳ ಒಡೆಯರಾಗುತ್ತಿರುವುದು ಬಹುಶಃ ಇದೇ ಮೊದಲ ಸಲ. ತಮ್ಮ ಭಾವನೆಗಳಿಗೆ ಧ್ವನಿವರ್ಧಕವಾದ, ತಮ್ಮ ಸ್ಪಂದನಕ್ಕೆ ನಾಲಗೆಯಾದ ಈ ಸ್ವಯಂಸೇವಕರನ್ನು ಕೃತಜ್ಞತೆಯಿಂದ ಮನದಲ್ಲೇ ಸ್ಮರಿಸಿದರು. ಸ್ವಯಂಸೇವಕರು ಪರಿಹಾರ ವಿತರಣೆ ಮಾಡುತ್ತಿರುವ ವೇಳೆಯಲ್ಲೇ ಮಂಡಗದ್ದೆ, ತೂದೂರುಗಳಿಗೆ ಕೇಂದ್ರ ಉಪವಿತ್ತ ಸಚಿವ ಜನಾರ್ದನ ಪೂಜಾರಿ, ಶಿವಮೊಗ್ಗ ಜಿಲ್ಲಾಧಿಕಾರಿ ಸುಧಾಕರ ರಾವ್, ಎಸ್‌ಪಿ, ಸ್ಥಳೀಯ ಶಾಸಕ ಕಡಿದಾಳ್ ದಿವಾಕರ್ ಇವರೆಲ್ಲರ ಆಗಮನ. ಮನೆ ಕಳಕೊಂಡವರಿಗೆ ಪಟ್ಟಾ ಹಂಚುವ ಕಾರ್ಯಕ್ರಮಕ್ಕಾಗಿ ಅವರು ಬಂದಿದ್ದರು. ಸಂಘ ಮಾಡುತ್ತಿರುವ ಕೆಲಸವನ್ನು ಅವರು ಗಮನಿಸಿದರು; ಮೆಚ್ಚುಗೆಯನ್ನು ಕಣ್ಣಂಚಿನಲ್ಲೇ ವ್ಯಕ್ತಪಡಿಸಿದರು. ಸಾಮಗ್ರಿಗಳ ವಿತರಣೆ ನಡೆಯುತ್ತಿರುವಾಗ ಸ್ಥಳೀಯ ಕಾಂಗೈ ಮುಖಂಡರೊಬ್ಬರು ಮಾರ್ಮಿಕವಾಗಿ ಹೇಳಿದ ಮಾತು : ‘ಆರೆಸ್ಸೆಸ್‌ನೋರು ಇಲ್ಲಿನ ನೆರೆಪೀಡಿತರಿಗೆ ನಿಜವಾಗ್ಲೂ ತುಂಬಾ ಕೆಲಸ ಮಾಡಿದ್ದಾರೆ. ಇಷ್ಟೆಲ್ಲ ಮಾಡಲು ನಮ್ಮ ಕೈಲೂ ಆಗ್ತಾ ಇರಲಿಲ್ಲ.’

(1982ರ ಸೆ. 19ರ ವಿಕ್ರಮ ಸಂಚಿಕೆಯಲ್ಲಿ ಪ್ರಕಟವಾದ ವರದಿ)

   

Leave a Reply