ನೆಲ್‌ಪಾಲಿಶ್ ಹಚ್ಚಬಹುದೇ?

ಲೇಖನಗಳು - 0 Comment
Issue Date :

-ಡಾ. ಶ್ರೀವತ್ಸ ಭಾರದ್ವಾಜ್

ಇತ್ತೀಚೆಗೆ ಹೋದ ಒಂದು ಕಾರ್ಯಕ್ರಮದಲ್ಲಿ ಪುಟ್ಟ ಹೆಣ್ಣು ಮಗು ನನ್ನ ಗಮನ ಸೆಳೆಯಿತು. ಏನಪ್ಪ ಈ ಮಗುವಿನಲ್ಲಿರುವ ವಿಶೇಷತೆ ಎಂದು ಕೇಳುತ್ತೀರ? ಈ ಮಗುವಿನ ಕೈ ಹಾಗು ಕಾಲು ಉಗುರುಗಳಲ್ಲಿ ಮದರಂಗಿಯ ಬಣ್ಣ ಚೆನ್ನಾಗಿ ಮೂಡಿತ್ತು. ನಾನು ಮದರಂಗಿಯನ್ನು ಕೈ-ಕಾಲುಗಳಿಗೆ ಹಾಕಿದ್ದನ್ನು ನೋಡಿದ್ದೇನೆ ಹೊರತು ಉಗುರುಗಳಿಗೆ ಮದರಂಗಿ ಹಚ್ಚಿದ್ದನ್ನು ನೋಡಿ ಹಲವು ವರ್ಷಗಳೇ ಆಗಿತ್ತು. ‘ಅಯ್ಯೋ! ಮದರಂಗಿ ಹಚ್ಚುವುದು ಏನು ದೊಡ್ಡ ವಿಷಯವೇ? ಸಣ್ಣಗಿರುವಾಗ ಹಬ್ಬ ಹಾಗು ಕಾರ್ಯಕ್ರಮಗಳಿಗೆ ನಾವು ಮದರಂಗಿಯನ್ನೇ ಹಚ್ಚುತ್ತಿದ್ದೆವು’ ಎಂದು ಅಲ್ಲಿದ್ದ ಮಿತ್ರರೊಬ್ಬರು ಹೇಳಿದರು.

ಈಗಿನ ಕಾಲದಲ್ಲಿ ಬರೇ ಪಾಲಿಶ್‌ಗಳು ಮಾತ್ರ ನಿಮ್ಮ ಬೆರಳುಗಳಲ್ಲಿ ರಾರಾಜಿಸುತ್ತಿದೆ. ದಿನೇದಿನೆ ಸಹಜವಾಗಿ ಸಿಗುವ ಸೌಂದರ್ಯವರ್ಧಕಗಳನ್ನು ರಾಸಾಯನಿಕಯುಕ್ತ ಸೌಂದರ್ಯ ವರ್ಧಕಗಳು ಬದಲಾಯಿಸಿವೆ.

ತಾವು ಸುಂದರವಾಗಿ ಕಾಣಬೇಕೆಂದು ಯಾರಿಗೆ ತಾನೆ ಇಷ್ಟ ಇರೋದಿಲ್ಲ ಹೇಳಿ? ನೋಡಲು ಸುಂದರವಾದ ಮುಖ, ದಟ್ಟಗೆ-ಕಪ್ಪನೆ ಉದ್ದವಾದ ಕೂದಲು, ಸುಂದರವಾದ ವಸ್ತ್ರ ಧರಿಸುವಿಕೆ ಹೀಗೆ ಹಲವಾರು ರೀತಿಯ ವೇಷ-ಭೂಷಣಗಳಿಂದ ತಮ್ಮನ್ನು ಸುಂದರವಾಗಿ ಬಿಂಬಿಸಲು ಪ್ರತಿಯೊಬ್ಬರೂ ಪ್ರಯತ್ನಿಸುತ್ತಾರೆ. ಈ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಸುಂದರ ಕಾಣಲು ಹಲವರು ಕೃತಕ ಬಣ್ಣಗಳ ಮೊರೆಹೋಗುತ್ತಾರೆ. ಇದಕ್ಕೆ ಒಂದು ಉದಾಹರಣೆ ಉಗುರಿಗೆ ಬಣ್ಣ ಹಚ್ಚುವಿಕೆ. ಉಗುರಿಗೆ ರಾಸಾಯನಿಕ ಬಣ್ಣ ಹಚ್ಚುವ ಮೊದಲು ಇದರಲ್ಲಿ ಏನಿದೆ ಎಂದು ತಿಳಿಯುವುದು ಅತ್ಯಗತ್ಯ. ಈ ಪಾಲಿಶ್‌ಗಳನ್ನು ದ್ರವರೂಪದಲ್ಲಿರಿಸಲು, ಒಣಗಿದ

ಮೇಲೆ ಒಡೆಯದಿರಲು ಮತ್ತು ಅದರ ಹೊಳಪನ್ನು ಉಳಿಸಲು ರಾಸಾಯನಿಕಗಳನ್ನು ಉಪಯೋಗಿಸುತ್ತಾರೆ. ಇವುಗಳಲ್ಲಿ ಫಾರ್ಮಾಲ್ಡಿಹೈಡ್, ಟೊಲ್ವಿನ್ ಮತ್ತು ಡೈಬುಟೈಲ್ ಫಾಲೇಟ್‌ಗಳನ್ನು ಮುಖ್ಯವಾಗಿ ಉಪಯೋಗಿಸುತ್ತಾರೆ. ಈ ಮೂರು ವಿಷಗಳು ನಮ್ಮ ಶರೀರಕ್ಕೆ ಯಾವ ರೀತಿಯಲ್ಲಿ ಸಮಸ್ಯೆಗಳನ್ನುಂಟುಮಾಡುತ್ತದೆ ಎಂದು ನೋಡೋಣ. ನಾವು ಎಷ್ಟು ಜಾಗರೂಕತೆ ವಹಿಸಿದರೂ ದಿನನಿತ್ಯದಲ್ಲಿ ಇವುಗಳು ಶರೀರದ ಒಳಗೆ ಅಲ್ಪ ಪ್ರಮಾಣದಲ್ಲಿ ಸೇರಿಯೇ ಸೇರುತ್ತವೆ. ಈ ರಾಸಾಯನಿಕ ಘಟಕಗಳು ನಮ್ಮ ರಕ್ತವನ್ನು ಆಮ್ಲೀಯಗೊಳಿಸುತ್ತವೆ. ಹೆಂಗಸರಲ್ಲಿ ಗರ್ಭಕೋಶದ ಗೆಡ್ಡೆ ಉಂಟು ಮಾಡುತ್ತವೆ. ಮುಟ್ಟಿನ ಸಮಯವನ್ನು ಏರುಪೇರು ಮಾಡಿ ಅತಿಯಾದ ಸ್ರಾವವನ್ನು ಉಂಟು ಮಾಡುತ್ತವೆೆ. ಈ ಪಾಲಿಶ್‌ನಿಂದ ಹೊರಬರುವ ವಾಸನೆ ತಲೆನೋವು, ಕಣ್ಣಿನ ಸಮಸ್ಯೆಗಳನ್ನು ಹುಟ್ಟುಹಾಕುತ್ತದೆ. ನರಗಳ ದುರ್ಬಲತೆ, ನೆನಪುಶಕ್ತಿಯ ಕೊರತೆ ಮತ್ತು ಮಾನಸಿಕ ಖಿನ್ನತೆಗಳು ಕೂಡ ಈ ಪಾಲಿಶ್‌ಗಳಿಂದಾಗುತ್ತವೆ. ಇವುಗಳು ರಕ್ತದ, ಮೆದುಳಿನ ಮತ್ತು ಚರ್ಮದ ಕ್ಯಾನ್ಸರ್‌ಗಳನ್ನು ಹುಟ್ಟುಹಾಕುತ್ತವೆ ಎಂದು ಸಂಶೋಧನೆ ತಿಳಿಸಿವೆ. ವಿಧವಿಧವಾದ ಚರ್ಮದ ಸಮಸ್ಯೆಗಳು ಇದರಿಂದ ಬರುತ್ತವೆ. ಗರ್ಭಿಣಿಯರು ಇದನ್ನು ಬಳಸಿದಾಗ ತಮ್ಮ ಗರ್ಭದಲ್ಲಿರುವ ಶಿಶುವಿನ ಬೆಳವಣಿಗೆ ಸರಿಯಾಗಿ ಆಗುವುದಿಲ್ಲ, ಗರ್ಭಪಾತವಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಸಂಶೋಧನೆಗಳು ತಿಳಿಸುತ್ತವೆ.

 ಈ ಪಾಲಿಶ್‌ಗಳು ವಿದೇಶದ ಕೊಡುಗೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಆದರೆ ಈ ಪಾಲಿಶ್‌ಗಳು ವಿದೇಶೀಯರಿಗೆ ಮಾಡುವ ಸಮಸ್ಯೆಗಳಿಗಿಂತ ನಮ್ಮವರಿಗೇ ಜಾಸ್ತಿ. ವಿದೇಶೀಯರು ಆಹಾರವನ್ನು ಚಮಚದಲ್ಲಿ ತಿನ್ನುತ್ತಾರೆಯೇ ಹೊರತು ಬರೇ ಕೈಗಳಲ್ಲಿ ಅಲ್ಲ. ಹೀಗಾಗಿ ತಿನ್ನುವ ಆಹಾರಕ್ಕೂ ಕೈ-ಉಗುರುಗಳಿಗೂ ನೇರ ಸಂಪರ್ಕವಿರುವುದಿಲ್ಲ. ಹೀಗಿರುವಾಗ ಉಗುರಿನಲ್ಲಿರುವ ಪಾಲಿಶ್ ಹೊಟ್ಟೆಗೆ ಹೋಗುವ ಸಾಧ್ಯತೆ ಕಡಿಮೆ. ಆದರೆ ನಾವು ತಿನ್ನಲು ನೇರ ಕೈಗಳನ್ನೇ ಬಳಸುವ ಕಾರಣ ಉಗುರಿಗೆ ಹಚ್ಚಿದ ಪಾಲಿಶ್ ಹೊಟ್ಟೆಗೆ ಹೋಗುವಲ್ಲಿ ಸಂಶಯವೇ ಇಲ್ಲ. ಈ ವಿಷಕಾರಿ ಕೃತಕ ವರ್ಣಗಳನ್ನು ತ್ಯಜಿಸಿ ಸಹಜವಾಗಿ ಸಿಗುವ ಮದರಂಗಿಯ ವರ್ಣವನ್ನು ಉಗುರುಗಳಿಗೆ ಬಳಿದರೆ ಉತ್ತಮ.

 

   

Leave a Reply