ನೇಪಾಳ ಭೂಕಂಪ – 1600 ಸ್ವಯಂಸೇವಕರಿಂದ ಪರಿಹಾರ ಕಾರ್ಯ

ರಾಜ್ಯಗಳು - 0 Comment
Issue Date : 29.05.2015


ಹೊಸದಿಲ್ಲಿ: ಭೂಕಂಪ ಪೀಡಿತ ನೇಪಾಳದಲ್ಲೀಗ 1600ಕ್ಕೂ ಅಧಿಕ ಆರೆಸ್ಸೆಸ್ ಸ್ವಯಂಸೇವಕರು ಪರಿಹಾರ ಕಾರ್ಯದಲ್ಲಿ ತೊಡಗಿದ್ದಾರೆ. ಅತ್ಯಂತ ಕಠಿಣ ಪರಿಸ್ಥಿತಿಯಲ್ಲಿ ಈ ಪರಿಹಾರ ಕಾರ್ಯಗಳು ನಡೆಯುತ್ತಿದ್ದು, ಅಲ್ಲಿನ ಜನರು ಮತ್ತೆ ಬದುಕು ಕಟ್ಟಿಕೊಳ್ಳಲು ನೆರವಾಗಬೇಕಾಗಿದೆ ಎಂದು ಸೇವಾಭಾರತಿಯ ರಾಷ್ಟ್ರೀಯ ಅಧ್ಯಕ್ಷ ಸೂರ್ಯಪ್ರಕಾಶ್ ಟಾಂಕ್ ಮತ್ತು ಸೇವಾ ಇಂಟರ್‌ನ್ಯಾಷನಲ್‌ನ ಸಂಯೋಜಕ ಶ್ಯಾಮ್‌ಪರಾಂಡೆ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಭಾರತ ಮತ್ತು ನೇಪಾಳ ಶತಶತಮಾನಗಳ ಸಾಂಸ್ಕೃತಿಕ, ಐತಿಹಾಸಿಕ, ಸಾಮಾಜಿಕ ಸಂಬಂಧಗಳನ್ನು ಹೊಂದಿವೆ. ಈ ಸಂಕಷ್ಟದ ಸಂದರ್ಭದಲ್ಲಿ ಭಾರತ ನೇಪಾಳಕ್ಕೆ ನೆರವಾಗುವುದು ಅತ್ಯಂತ ಸಹಜ ಹಾಗೂ ಅಗತ್ಯ. ಭಾರತದೆಲ್ಲೆಡೆಯಿಂದ ಜನರು ಪರಿಹಾರ ನೆರವು ಸಂಗ್ರಹಿಸಿ ಆರೆಸ್ಸೆಸ್ ಮೂಲಕ ನೀಡಿದ್ದಾರೆ. ಭೂಕಂಪ ಸಂಭವಿಸಿದ 3 ಘಂಟೆಯೊಳಗೆ ನೇಪಾಳದ ಹಿಂದು ಸ್ವಯಂಸೇವಕ ಸಂಘ ಮತ್ತು 6 ಇತರ ಸಂಘಟನೆಗಳು ಪರಿಹಾರ ಕಾರ್ಯದಲ್ಲಿ ತೊಡಗಿವೆ. ನೇಪಾಳದ ಎಲ್ಲ ಸಂತ್ರಸ್ತ ಜಿಲ್ಲೆಗಳಲ್ಲೂ 1600ಕ್ಕೂ ಅಧಿಕ ಸ್ವಯಂಸೇವಕರು 350 ಹಳ್ಳಿಗಳಲ್ಲಿ ಪರಿಹಾರ ಕಾರ್ಯಗಳಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಎಚ್ಚೆಸ್ಸೆಸ್ ಅಲ್ಲದೆ, ಜನ ಕಲ್ಯಾಣ ಪ್ರತಿಷ್ಠಾನ್ ನೇಪಾಳ್, ವಿಶ್ವ ಹಿಂದು ಪರಿಷತ್, ಪಶುಪತಿ ಶಿಕ್ಷಾ ಸಮಿತಿ, ಪ್ರಾಜ್ಞಿಕ್ ವಿದ್ಯಾರ್ಥಿ ಪರಿಷತ್, ಜನಜಾತಿ ಕಲ್ಯಾಣ ಪರಿಷತ್, ಸೇವಾ ಇಂಟರ್‌ನ್ಯಾಷನಲ್ ಪರಿಹಾರ ಕಾರ್ಯದಲ್ಲಿ ತೊಡಗಿವೆ. ದುರಂತ ಸಂಭವಿಸಿದ ಮೂರು ದಿನಗಳಲ್ಲಿ ಅಲ್ಲಿನ ಸಂತ್ರಸ್ತರಿಗೆ ಸೇವಾಭಾರತಿ 55,133 ಟಾರ್ಪಾಲಿನ್‌ಗಳು, 40 ಸಾವಿರ ಕಿಲೋ ಅಕ್ಕಿ, 1500 ಚೀಲ ನಯಗೊಳಿಸಿದ ಅಕ್ಕಿ, 1300 ಚೀಲ ಗೋಧಿ, 83,790 ಬ್ಲಾಂಕೆಟ್‌ಗಳು, 70,754 ಆಹಾರ ಪೊಟ್ಟಣ, 13017 ಕಿಲೋ ಸಕ್ಕರೆ, 1877 ಕಿಲೋ ಉಪ್ಪು, 500 ಚೀಲ ಬೆಲ್ಲ, 2800 ಟೆಂಟ್‌ಗಳು, 8035 ಕಿಲೋ ಹಾಲಿನ ಪುಡಿ, 5 ಲಕ್ಷ ರೂ. ಮೌಲ್ಯದ ಔಷಧಿಗಳನ್ನು ತುರ್ತಾಗಿ ಒದಗಿಸಿದೆ.
ದಾನಿಗಳಿಗೆ ಕೃತಜ್ಞತೆ
ಈ ಪರಿಹಾರ ವಸ್ತುಗಳನ್ನು ವಿಮಾನ, ರೈಲು, ರಸ್ತೆ ಮಾರ್ಗವಾಗಿ ಕಳುಹಿಸಲಾಗಿದ್ದು, ಇದುವರೆಗೆ 200 ಮೆಟ್ರಿಕ್‌ಟನ್ ಪರಿಹಾರ ಸಾಮಗ್ರಿಗಳನ್ನು ಅಲ್ಲಿಗೆ ಕಳುಹಿಸಲಾಗಿದೆ. ಇನ್ನು 30 ಟನ್‌ಗಳಷ್ಟು ಕಳುಹಿಸಲು ಬಾಕಿ ಇದೆ. ಈ ಪರಿಹಾರಕಾರ್ಯದಲ್ಲಿ ಕೈಜೋಡಿಸಿದ ದಾನಿಗಳಿಗೆ ಸೇವಾಭಾರತಿ ಕೃತಜ್ಞತೆ ಸಲ್ಲಿಸಿದೆ.
ರೋಟರಿ ಇಂಟರ್‌ನ್ಯಾಷನಲ್, ಬುಲಿಯನ್ ಮರ್ಚೆಂಟ್ ಅಸೋಸಿಯೇಷನ್, ಬ್ರಹ್ಮ ಕುಮಾರೀಸ್, ಶಾಸ್ತ್ರ ಯೂನಿರ್ವಸಿಟಿ, ಭಾರತ್ ವಿಕಾಸ್ ಪರಿಷತ್, ಇಂಡಿಯನ್ ಆಯಿಲ್ ಕಾರ್ಪೊರೇಷನ್, ಗೋಕುಲ್ ವ್ರಜ್ ಫೌಂಡೇಷನ್, ಆಶೀರ್ವಾದ್ ಟ್ರಸ್ಟ್, ಅ.ಭಾ. ವಿದ್ಯಾರ್ಥಿ ಪರಿಷತ್, ವಿಶ್ವ ಹಿಂದು ಪರಿಷತ್, ರೆಸಿಡೆಂಟ್ ವೆಲ್‌ಫೇರ್ ಅಸೋಸಿಯೇಷನ್ ದಿಲ್ಲಿ ಮತ್ತಿತರ ಸಂಘಟನೆಗಳು ನೆರವಾಗಿರುವುದಾಗಿ ಸೂರ್ಯಪ್ರಕಾಶ್ ಟಾಂಕ್  ತಿಳಿಸಿದರು.
ಭೂಕಂಪ ಸಂಭವಿಸಿದ ಸಂದರ್ಭದಲ್ಲಿ ಆರೆಸ್ಸೆಸ್‌ನ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಸುನಿಲ್ ಅಂಬೇಕರ್ ಅವರು 5 ದಿನಗಳ ಕಾಲ ನೇಪಾಳದಲ್ಲೇ ಇದ್ದು, ಪರಿಹಾರಕಾರ್ಯದಲ್ಲಿ ಖುದ್ದಾಗಿ ತೊಡಗಿ, ಸ್ವಯಂಸೇವಕರಿಗೆ ಪ್ರೇರಣೆ ನೀಡಿದರು. ಕಠ್ಮಂಡುವಿನ ಭಾರತೀಯ ರಾಯಭಾರ ಕಚೇರಿಯೂ ದಿನದ 24 ಘಂಟೆಗಳ ಕಾಲ ತೆರೆದಿದ್ದು ಸೇವೆ ಸಲ್ಲಿಸಿದೆ. ಅಲ್ಲದೇ ಆರೋಗ್ಯ ಭಾರತಿಯ ವೈದ್ಯರು, ನ್ಯಾಷನಲ್ ಮೆಡಿಕೋಸ್ ಆರ್ಗನೈಜೇಷನ್ ಮತ್ತಿತರ ಸಂಘಟನೆಗಳು ನಮ್ಮ ಜತೆ ಕೈಗೊಂಡಿಸಿವೆ ಎಂದು ಹೇಳಿದರು.

ನೇಪಾಳ ಸಂತ್ರಸ್ತರಿಗೆಕರ್ನಾಟಕ ಆರೆಸೆ್ಸಸ್‌ನಿಂದ 25 ಲಕ್ಷ

ಬೆಂಗಳೂರು: ನೇಪಾಳದ ಭೂಕಂಪ ಪೀಡಿತ ಸಂತ್ರಸ್ತರ ನಿಧಿಗೆ ಕರ್ನಾಟಕ ಆರೆಸ್ಸೆಸ್ ಘಟಕವು 25 ಲಕ್ಷ ರೂ.ಗಳನ್ನು ಸಂಗ್ರಹಿಸಿ ಸೇವಾ ಭಾರತಿಯ ಮೂಲಕ ನೀಡಿದೆ. ಸೇವಾ ಭಾರತಿ ಆರೆಸ್ಸೆಸ್‌ನ ಸೇವಾ ಘಟಕವಾಗಿದೆ.
ಕರ್ನಾಟಕ ಆರೆಸ್ಸೆಸ್ ಘಟಕವು ನೇಪಾಳ ಭೂಕಂಪ ಸಂತ್ರಸ್ತರಿಗಾಗಿ ನೆರವು ನೀಡಲು ಸಾರ್ವಜನಿಕರಲ್ಲಿ ಮನವಿ ಮಾಡಿತ್ತು. ‘ಆರೆಸ್ಸೆಸ್ ಸಂಚಾಲಿತ ಸಂತ್ರಸ್ತ ಪರಿಹಾರ ನಿಧಿ’ಗೆ ರಾಜ್ಯದ ಜನತೆ ಮೊದಲ ಹಂತವಾಗಿ 25 ಲಕ್ಷ ರೂ.ಗಳನ್ನು ದೇಣಿಗೆಯಾಗಿ ನೀಡಿದ್ದರು. ಸಕಾಲದಲ್ಲಿ ನೆರವು ನೀಡಿದ ರಾಜ್ಯದ ಎಲ್ಲ ಸಹೃದಯರಿಗೆ ಆರೆಸ್ಸೆಸ್ ಕೃತಜ್ಞತೆ ಸಲ್ಲಿಸಿದೆ.

   

Leave a Reply