ನೇಪಾಳ

ಜಗದ್ಗುರು ಭಾರತ - 0 Comment
Issue Date : 30.04.2015

 

 • ನೇಪಾಳದ ಉತ್ತರಕ್ಕೆ ಟಿಬೆಟ್ ಇದ್ದರೆ, ಉಳಿದೆಲ್ಲ ದಿಕ್ಕುಗಳಲ್ಲೂ ಭಾರತವೇ ಇದೆ. ಸಾಂಸ್ಕೃತಿಕವಾಗಿಯೂ ಭಾರತೀಯತೆಯಿಂದ ಆವೃತವಾದ ದೇಶವಿದು.
 •  ಇತ್ತೀಚಿನವರೆಗೂ ಏಕೈಕ ಹಿಂದೂ ರಾಷ್ಟ್ರವೆಂಬ ಹೆಮ್ಮೆಗೆ ಭಾಜನವಾಗಿದ್ದ ದೇಶವಿದು. ಈಗ ರಾಜಕೀಯವಾಗಿ ಜಾತ್ಯತೀತವಾಗಿದ್ದರೂ ನೇಪಾಳವು ಹಿಂದೂ ರಾಷ್ಟ್ರವೆಂದೇ ಗುರುತಿಸಲ್ಪಡುತ್ತದೆ.
 •  2011ರ ಜನಗಣತಿಯಲ್ಲಿ ನೇಪಾಳದ ಶೇಕಡ 80ಕ್ಕೂ ಹೆಚ್ಚು ಜನರು ತಮ್ಮನ್ನು ಹಿಂದೂಗಳೆಂದು ಗುರುತಿಸಿಕೊಂಡಿದ್ದರು.
 •  ನೇಪಾಳದ ಕಾಲಗಣನೆಯು ಹಿಂದೂ ಪಂಚಾಂಗದ ರೀತ್ಯಾ ವಿಕ್ರಮ ಶಕೆಯಿಂದಲೇ ಆರಂಭವಾಗುತ್ತದೆ ಮತ್ತು ಇದು ರಾಷ್ಟ್ರೀಯ ಮನ್ನಣೆ ಪಡೆದ ಅಧಿಕೃತ ಪದ್ಧತಿಯಾಗಿದೆ.
 •  ಪಶುಪತಿ ಪುರಾಣದ ಪ್ರಕಾರ ನೆ ಮುನಿ ಎಂಬ ತಾಪಸಿಯು ಭಾಗಮತಿ, ಬಿಷ್ಣುಮತಿ ಹಾಗೂ ಕೇಶಮತಿ ಎಂಬ ನದೀತೀರಗಳಲ್ಲಿ ಯಜ್ಞನವನ್ನಾಚರಿಸಿ, ಆ ನದಿಗಳು ಹರಿಯುವ ಪ್ರದೇಶದಲ್ಲಿ ನೆಲೆಸಿದನು. ಅವನ ಪಾಲನೆಗೆ ಒಳಪಟ್ಟ ಭೂಭಾಗಕ್ಕೆ ನೇಪಾಲ ಎಂದು ಹೆಸರಾಯ್ತು.
 •  ನೆ ಮುನಿಯು ಭುಕ್ತಮಾನ್ ಎಂಬುವನಿಗೆ ಪಟ್ಟ ಕಟ್ಟಿ, ಗೋಪಾಲ ರಾಜವಂಶದ ಸ್ಥಾಪನೆಗೆ ಕಾರಣನಾದನು. ಇದು ನೇಪಳವನ್ನಾಳಿದ ಮೊದಲ ರಾಜವಂಶ.
 •  ಕ್ರಿ.ಪೂ. 6 ಮತ್ತು 5ನೇ ಶತಮಾನಗಳಲ್ಲಿ ಈ ದೇಶವು ಶಾಕ್ಯ ವಂಶಸ್ಥರ ಆಳ್ವಿಕೆಯಲ್ಲಿತ್ತು. ಅನಂತರ ಮೌರ್ಯ, ಗುಪ್ತ, ಲಿಚ್ಛವಿ ಹಾಗೂ ಚಾಲುಕ್ಯ ವಂಶಗಳು ಈ ದೇಶವನ್ನಾಳಿದ ಇತರ ರಾಜವಂಶಗಳು.
 •  ಸೀತೆಯ ಜನ್ಮಭೂಮಿ ಮಿಥಿಲಾ ಇದ್ದುದು ನೇಪಾಳದಲ್ಲಿಯೇ. ಈ ದೇಶ ಸೀತೆಯ ತವರು ಮನೆಯಾಗಿದ್ದು, ಹಲವು ಸೀತಾ ಮಂದಿರಗಳನ್ನು ಹೊಂದಿದೆ.
 •  ಸೀತಾ ವಿವಾಹ ಪಂಚಮಿ. ಈ ದೇಶದ ಪ್ರಮುಖ ಆಚರಣೆಗಳಲ್ಲಿ ಒಂದು. ರಾಮ ಈ ದೇಶದ ಅಳಿಯ ದೇವರು.
 •  ಇಲ್ಲಿಯ ಚಿತ್‌ವನ ರಾಷ್ಟ್ರೀಯ ಉದ್ಯಾನವನದಲ್ಲಿ ವಾಲ್ಮೀಕಿ ಆಶ್ರಮವಿದ್ದು, ಸೀತೆಯು ತನ್ನ ಮಕ್ಕಳಿಗೆ ಜನ್ಮ ನೀಡಿದ್ದು ಇಲ್ಲೇ ಎನ್ನುವ ಪ್ರತೀತಿ ಇದೆ.
 •  ಈ ದೇಶದ ಜನರು ಹೆಚ್ಚಿನದಾಗಿ ಶಾಕ್ತ ಹಾಗೂ ಶೈವ ಸಂಪ್ರದಾಯಗಳನ್ನು ಅನುಸರಿಸುತ್ತಾರೆ. ಉಳಿದಂತೆ ಇಲ್ಲಿ ಬೌದ್ಧ ಧರ್ಮದ ಪ್ರಭಾವವೂ ಸಾಕಷ್ಟಿದೆ.
 •  ನಮ್ಮ ಪ್ರಾಚೀನ ಸಾಹಿತ್ಯದಲ್ಲಿ ಕಂಡುಬರುವ ಕಿರಾತ ಸಮುದಾಯ ನೇಪಾಳದ ಬುಡಕಟ್ಟು ಜನಾಂಗವನ್ನು ಸೂಚಿಸುತ್ತದೆ. ಕಿರಾತ ಮತವು ಅನುಸರಿಸುವುದು ಶೈವ ತತ್ತ್ವಗಳನ್ನು.
 •  ಕಿರಾತರು ಮುಖ್ಯವಾಗಿ ಚಂಡಿಕಾ ದೇವಿಯನ್ನು ಪೂಜಿಸುತ್ತಾರೆ. ಇವರು ಪ್ರತಿ ವರ್ಷ ಆಚರಿಸುವ ಚಂಡಿ ನಾಚ್ ಕುರಿತು ಹರಿವಂಶ ಪುರಾಣದಲ್ಲಿ ಉಲ್ಲೇಖವಿದೆ.
 •  ಶುದ್ಧ ವೈದಿಕ ತತ್ತ್ವಗಳನ್ನು ಆಚರಿಸುವ ನೇಪಾಳದಲ್ಲಿ ಇಂದಿಗೂ ಇಂದ್ರದೇವನು ಪೂಜೆಗೊಳ್ಳುತ್ತಿದ್ದು, ಇಂದ್ರಜಾತ್ರೆಯು ಅದ್ದೂರಿಯಾಗಿ ನಡೆಯುತ್ತದೆ.
 •  ಹಿಂದೂ ಮತ್ತು ಬೌದ್ಧ ಧರ್ಮಗಳ ಸಾಮರಸ್ಯ ಭೂಮಿ ಇದಾಗಿದ್ದು, ಈ ಎರಡು ಧರ್ಮಗಳ ನಡುವೆ ಅಂತರವೇ ಗೋಚರಿಸದಷ್ಟು ಹಿಂದೂ ರೀತಿನೀತಿಗಳನ್ನು ಇಲ್ಲಿನ ಬೌದ್ಧರು ಅನುಸರಿಸುತ್ತಾರೆ.
 •  ಸೂರ್ಯ – ಚಂದ್ರರನ್ನುಳ್ಳ ನೇಪಾಳದ ಪತಾಕೆಯನ್ನು ವಿಷ್ಣುವು ನೇಪಾಳೀಯರಿಗೆ ನೀಡಿದನೆಂದು ಪುರಾಣಗಳು ಹೇಳುತ್ತವೆ. ಅದು ಇಂದಿಗೂ ನೇಪಾಳೀಯರ ಧ್ವಜವಾಗಿದೆ.
 •  ಧರ್ಮ ರಕ್ಷಣಾರ್ಥವಾಗಿ ಶಿವನು ವಿಷ್ಣುವಿಗೂ ವಿಷ್ಣುವು ಇಂದ್ರನಿಗೂ ಈ ಪತಾಕೆಯನ್ನು ವರ್ಗಾಯಿಸಿದನೆಂದು ಪೌರಾಣಿಕ ಉಲ್ಲೇಖಗಳಿವೆ.
 •  ಶ್ರೇಷ್ಠ ಭಾರತೀಯ ಸಂತ ಗೋರಖನಾಥರು ನೇಪಾಳದಲ್ಲಿ ನೆಲೆಸಿ ಧರ್ಮರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದರು. ಅವರ ಅನುಚರರೇ ಗೂರ್ಖ ಸಮುದಾಯವಾಯಿತು.
 •  ಗೂರ್ಖ ಜನಾಂಗದವರು ಅತ್ಯಂತ ಶೂರರೂ ಪ್ರಾಮಾಣಿಕರೂ ಆಗಿದ್ದು, ಭಾರತೀಯ ಸೇನೆಯ ಬಹುಮುಖ್ಯ ಅಂಗಗಳಲ್ಲಿ ಒಂದಾಗಿದ್ದಾರೆ.
 •  ಜನಕ ಮಹಾರಾಜನ ಸ್ಮರಣೆಯ ಜನಕ ಪುರ, ಮಹಾಕಾಳಿಯ ಮಹಾ ಕಾಳಿ ಝೋನ್, ಕಪಿಲ ಮುನಿಯನ್ನು ನೆನಪಿಸುವ ಕಪಿಲ ವಸ್ತು ಹಾಗೂ ವ್ಯಾಸರ ಸ್ಮರಣೆಯ ವ್ಯಾಸ ಕಣಿವೆಗಳು ಈ ದೇಶದಲ್ಲಿವೆ.
 •  ನೇಪಾಳದ ರಾಜಧಾನಿ ಕಾಠ್ಮಂಡು ಒಂದು ಮಹತ್ವದ ಶಿವಕ್ಷೇತ್ರವಾಗಿದ್ದು, ವಿಶ್ವವಿಖ್ಯಾತವಾದ ಪಶುಪತಿನಾಥ ಮಂದಿರವನ್ನು ಹೊಂದಿದೆ.
 •  ಇತ್ತೀಚಿನ ವರ್ಷಗಳ ಗಣತಿಯ ಪ್ರಕಾರ, ಪ್ರತಿವರ್ಷ ಶಿವರಾತ್ರಿಯಂತು ಪಶುಪತಿನಾಥ ದೇಗುಲಕ್ಕೆ ಸುಮಾರು 7 ಲಕ್ಷದಷ್ಟು ಭಕ್ತರು ಭೇಟಿ ನೀಡುತ್ತಾರೆ. ಇಲ್ಲಿ ಜನ್ಮತಃ ಹಿಂದೂಗಳಿಗೆ ಮಾತ್ರ ಪ್ರವೇಶ.
 •  ಪಶುಪತಿ ದೇಗುಲದ ಉಸ್ತುವಾರಿಗಳನ್ನು ಇಂದಿಗೂ ದಕ್ಷಿಣ ಭಾರತೀಯರೇ ನೋಡಿಕೊಳ್ಳುತ್ತಿದ್ದು, ಕರ್ನಾಟಕ ಹಾಗೂ ಕೇರಳೀಯರು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ನೆಲೆಸಿದ್ದಾರೆ.
 •  ಸುಮಾರು ಐದು ಶತಮಾನಗಳಿಗೂ ಹಿಂದಿನಿಂದ ಕರ್ನಾಟಕದ ಭಟ್ಟ ಸಮುದಾಯದವರೇ ಪಶುಪತಿನಾಥ ದೇಗುಲದ ಮುಖ್ಯ ಅರ್ಚಕರಾಗಿ ಸೇವೆ ಸಲ್ಲಿಸುತ್ತ ಬಂದಿದ್ದಾರೆ.
 •  ಮುಕ್ತಿನಾಥ, ನೇಪಾಳದಲ್ಲಿರುವ ಮತ್ತೊಂದು ಪ್ರಮುಖ ಹಿಂದೂ ಯಾತ್ರಾಕ್ಷೇತ್ರ. ಇದು ಶಕ್ತಿಪೀಠವೂ ಹೌದು.
 •  ವೈಷ್ಣವರ 108 ದಿವ್ಯದೇಶಗಳಲ್ಲಿ ಒಂದಾಗಿರುವ ಮುಕ್ತಿನಾಥದಲ್ಲಿ ಭಗವಾನ್ ವಿಷ್ಣುವು ಪೂಜೆಗೊಳ್ಳುತ್ತಾನೆ.
 •  ಮುಕ್ತಿನಾಥವು ಗಂಡಕೀ ನದೀ ತೀರದಲ್ಲಿದ್ದು, ಈ ನದಿಯು ಸಾಲಗ್ರಾಮ ಶಿಲೆಗಳ ಮೂಲ ಆಗರವಾಗಿದೆ. ಈ ನದಿಯು ನೇಪಾಳೀಯರಿಗೆ ಗಂಗೆಯಂತೆಯೇ ಪೂಜನೀಯ.
 •  ಭಾರತದಲ್ಲಿ ಕೇವಲ ಗಂಡಕಿಯಾಗಿ ಹರಿಯುವ ಈ ನದಿಯನ್ನು ನೇಪಾಳದಲ್ಲಿ ಕೃಷ್ಣ ಗಂಡಕೀ, ಚಕ್ರತೀರ್ಥ, ನಾರಾಯಣೀ ಎಂಬ ಹೆಸರುಗಳಿಂದ ಕರೆಯಲಾಗುತ್ತದೆ.
 •  ಚೀನೀಯರು ಭಾರತವನ್ನು ತೀನ್ ಚು ಎಂದು ಕರೆಯುತ್ತಿದ್ದರು. ಇದು ಸಿಂಧೂ ಎನ್ನುವುದರ ಚೈನೀ ಉಚ್ಚಾರ.
 •  ಬೌದ್ಧ ಧರ್ಮ ಚೀನಾ ದೇಶಕ್ಕೆ ಕಾಲಿಡುವ ಮೊದಲೂ ಉಭಯ ದೇಶಗಳು ವಾಣಿಜ್ಯ ಹಾಗೂ ಸಾಂಸ್ಕೃತಿಕ ಸಂಬಂಧ ಹೊಂದಿದ್ದವು ಮತ್ತು ಚೀನಾದ ಕಾಲಕ್ರಮ ವಿಕಾಸದಲ್ಲಿ ಭಾರತೀಯರ ಕೊಡುಗೆ ಇದ್ದಿತು.
   

Leave a Reply