ನೋಟು ಅಮಾನ್ಯದ ಒಂದು ವರ್ಷ

ಲೇಖನಗಳು - 0 Comment
Issue Date :

-ಡಾ. ಶ್ರೀನಿವಾಸ ಪಾಟೀಲ

ಕಳೆದ ವರ್ಷ ನವೆಂಬರ್ 8ರಂದು ಪ್ರದಾನಿ ಮೋದಿ 500 ಮತ್ತು 1000 ರೂಪಾಯಿ ನೋಟು ರದ್ದು ಮಾಡಿದ ಕ್ಷಣದಿಂದ ಆಕಾಶವೇ ಕಳಚಿ ಬಿದ್ದಂತೆ ಸಾವಿರಾರು ಜನರು ತಲೆ ಕೆಡಿಸಿಕೊಂಡಿದ್ದರು. ಒಂದು ವರ್ಷದಲ್ಲಿ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗಿವೆ. ನೋಟು ರದ್ದತಿಯಿಂದ ಅಲ್ಪಾವದಿಗೆ ತೊಂದರೆ ಆದರೂ ತಕ್ಕ ಮಟ್ಟಿಗೆ ಭಾರತದ ಆರ್ಥಿಕತೆ ಸುದಾರಿಸುತ್ತಿದೆ. ಭ್ರಷ್ಟಾಚಾರ, ಕಾಳಧನಕ್ಕೆ ಕಡಿವಾಣ ಹಾಕಿ ದೇಶದ ಆರ್ಥಿಕತೆಗೆ ಹೊಸ ದಿಕ್ಕು ತೋರಿಸುವ ಕ್ರಮವನ್ನು ಜಗತ್ತಿನ ಅನೇಕ ಆರ್ಥಿಕ ತಜ್ಙರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಅರ್ಥ ವ್ಯವಸ್ಥೆಯಲ್ಲಿ ಹೆಚ್ಚಿನ  ಪ್ರಮಾಣದಲ್ಲಿ ನಗದು ಲಭ್ಯತೆ ಇದ್ದರೆ ಅಪಾಯ. ನೋಟು ಅಮಾನ್ಯದ ಬಳಿಕ ದೇಶದ ಅರ್ಥ ವ್ಯವಸ್ಥೆ ಡಿಜಿಟಲ್ ಪಾವತಿ ವ್ಯವಸ್ಥೆಯತ್ತ ಹೊರಳಿಕೊಳ್ಳುತ್ತಿದೆ. ಇಂದು ಜನರು ವಿಶೇಷವಾಗಿ ಯುವಕರು ಡಿಜಿಟಲ್‌ಗೆ ಹೆಚ್ಚಿನ ಒಲವು ತೋರಿಸುತ್ತಿರುವದು ಕಂಡುಬರುತ್ತಿದೆ. ಅಂತೆಯೇ ಬ್ಯಾಂಕುಗಳಲ್ಲಿ ಹೆಚ್ಚಿದ ಠೇವಣಿ ಪ್ರಮಾಣದಿಂದ ಸಾಲ ನೀಡಿಕೆಯಲ್ಲೂ ಭಾರಿ ಪ್ರಮಾಣದಲ್ಲಿ ಏರಿಕೆ ಅಗುತ್ತಿದೆ. ಜಿಎನ್‌ಡಿಐ  ಪ್ರಕಾರ ಷೇರು, ಠೇವಣಿ, ವಿಮೆ, ಸಾಲಪತ್ರ, ಪಿಂಚಣಿ, ಕರೆನ್ಸಿ, ಕಮೊಡಿಟಿ ಹೀಗೆ ಅನೇಕ ಮಾರುಕಟ್ಟೆಗಳಲ್ಲಿ ಹೂಡಿಕೆ ಪ್ರಮಾಣ ಶೆ. 9 ರಿಂದ 13.3 ಕ್ಕೆ ಏರಿಕೆ ಕಂಡಿದೆ. ವಿಶೇಷವಾಗಿ ಬಡ್ಡಿ ದರ ಕಡಿಮೆಯಾಗಿರುವದರಿಂದ ಆರ್ಥಿಕತೆ ಚೇತರಿಸುತ್ತಿದೆ. ಇದರಿಂದ ಬ್ಯಾಂಕಿಂಗ್ ಕ್ಷೇತ್ರದ ಭಾರಿ ಬದಲಾವಣೆ ಜತೆಗೆ ದೇಶದ ನೈಜ ಆರ್ಥಿಕತೆ ಸುದಾರಿಸುತ್ತಿರುವದು ಸಂತಸದ ವಿಷಯ. ಅಷ್ಟೇ ಅಲ್ಲದೆ ಜನರ ವಿಮಾ ಕ್ಷೇತ್ರದಲ್ಲಿ, ಮ್ಯುಚುಯಲ್ ಫಂಡ್‌ಗಳಲ್ಲಿ, ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಹೆಚ್ಚಾಗುತ್ತಿದೆ. ಮ್ಯುಚುಯಲ್ ಫಂಡ್‌ಗಳಲ್ಲಿ ಹೂಡಿಕೆಯಾದ ಹಣದ ಪ್ರಮಾಣ ಸೆಪ್ಟೆಂಬರ್ 2017ರ ಅಂತ್ಯಕ್ಕೆ 20 ಲಕ್ಷ ಕೋಟಿಗೂ ಹೆಚ್ಚಾಗಿದೆ ಅಂದರೆ ನಾವು ಊಹಿಸಬಹುದು ಯಾವ ರೀತಿ ಇದರಿಂದ ಪರಿಣಾಮ ಬೀರಿದೆ ಎಂದು.  ಇತ್ತೀಚಿನ ಆದಾಯ ತೆರಿಗೆ ಇಲಾಖೆಯ ವರದಿ ಪ್ರಕಾರ ಸುಮಾರು 17 ಲಕ್ಷ ಶಂಕಿತ ಪ್ರಕರಣಗಳಲ್ಲಿ 3.68 ಲಕ್ಷ ಕೋಟಿ ರೂಪಾಯಿಗಳ ತನಿಖೆ ನಡೆದಿದೆ.  ಸುಮಾರು 20 ಸಾವಿರ ಐಟಿ ರಿಟರ್ನ್ ವಿರುದ್ದ ತನಿಖೆ ನಡೆಸಲು ಇಲಾಖೆ ನಿರ್ಧರಿಸಿದೆ. ಹಾಗು ನೋಟು ಅಮಾನ್ಯೀಕರಣದ ನಂತರ ಮತ್ತು ಮೊದಲು, ಖಾತೆದಾರರ ವಿವರ ಹೋಲಿಕೆಯಾಗದ ಕಾರಣ ಈ ಎಲ್ಲ ಖಾತೆಗಳನ್ನು ತನಿಖೆಗೆ ಒಳಪಡಿಸಲಾಗಿದೆ. 2016-17 ನೇ ಸಾಲಿನಲ್ಲಿ ತೆರಿಗೆ ಪಾವತಿ ಮಾಡುವವರ ಸಂಖ್ಯೆ ಶೇಕಡಾ 24.7 ರಷ್ಟು ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ.  ಇದೇ ಸಾಲಿನಲ್ಲಿ 13,715 ಕೋಟಿಯಷ್ಟು ಅಘೋಷಿತ ಆದಾಯ ಪತ್ತೆ ಚ್ಚಲಾಗಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಸ್ಥಳೀಯ ಆಡಳಿತ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹ ಹೆಚ್ಚಾಗಿದ್ದು ಆದಾಯ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಉತ್ತರ ಪ್ರದೇಶ, ಮಧ್ಯ ಪ್ರದೇಶ, ಗುಜರಾತ್ ಹಾಗೂ ಇನ್ನು ಕೆಲವು ರಾಜ್ಯಗಳು ಹೆಚ್ಚು ತೆರಿಗೆ ಸಂಗ್ರಹಿಸಿ ದಾಖಲೆ ನಿರ್ಮಿಸಿದೆ. ಕೆಲವು ಜನರ ಕಪಿಮುಷ್ಟಿಯಲ್ಲಿದ್ದ ರಿಯಲ್ ಎಸ್ಟೇಟ ದರಗಳು ನಿಯಂತ್ರಣದಲ್ಲಿವೆ. ನಕಲಿ ನೋಟುಗಳ ಮೂಲಕ ದೇಶ ಆರ್ಥಿಕತೆಯನ್ನು ಬುಡಮೇಲು ಮಾಡುವ ದೇಶದ್ರೋಹಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ. 75 ರಷ್ಟು ಭಯೋತ್ಪಾನೆ ಚಟುವಟಿಕೆಗಳು ಕಡಿಮೆಯಾಗಿವೆ. ಅಂತೆಯೇ ಎಡ ಪಂಥೀಯರ ಚಟುವಟಿಕೆಗಳೂ ಶೇ. 20 ರಷ್ಟು ಕಡಿಮೆ ಯಾಗಿವೆ. ಅಷ್ಟೆ ಅಲ್ಲದೆ 7.62 ಲಕ್ಷ ನಕಲಿ ನೋಟುಗಳು ಪತ್ತೆ ಆಗಿವೆ.  ಡಿಜಿಟಲ್ ವ್ಯವಹಾರ ಸೆಪ್ಟೆಂಬರ 2017 ರ ಅಂತ್ಯಕ್ಕೆ 863 ಲಕ್ಷಕ್ಕೆ ಹೆಚ್ಚಳವಾಗಿದೆ. ಹಾಗೂ ಉದ್ಯೋಗವಕಾಶಗಳು ಹೆಚ್ಚುತ್ತಲೇ ಇವೆ. ನಮ್ಮ ದೇಶದಲ್ಲಿ ಇದುವರೆಗಿನ ಗರಿಷ್ಠ ಪ್ರಮಾಣದ ಕಾಳಧನ ಬಹಿರಂಗ ಗೊಂಡಿದೆ. ದೇಶದಲ್ಲಿ ಅನೇಕ ವರ್ಷಗಳ ಹಿಂದೆಯೇ ಇಂತಹ ಮಹತ್ವದ ನಿರ್ಧಾರ ಕೈಕೊಳ್ಳಲು ಒತ್ತಡವಿದ್ದರೂ ಯಾರೂ ಈ ಸಾಹಸಕ್ಕೆ ಕೈಹಾಕಿರಲಿಲ್ಲ. ಜಗತ್ತಿನ ಅನೇಕ ದೇಶಗಳು ಇಂತಹ ಕ್ರಮ ಕೈಗೊಂಡಿದು ನಾವು ನೋಡಿದ್ದುವೆ. ಬ್ರಿಟನ್, ಫ್ರಾನ್ಸ್ಸ್, ಬೆಲ್ಜಿಯಂ ಹಾಗು ಇತರ ದೇಶಗಳು ಎರಡನೇ ಯುದ್ದದ ನಂತರ ನೋಟು ಅಮಾನ್ಯ ಮಾಡಿದ ಉದಾಹರಣೆಯಿದೆ.

 ಒಂದು ವೇಳೆ ಇಂತಹ ಕ್ರಮಕ್ಕೆ ದೇಶ ಮುಂದಾಗದೇ ಇದ್ದಿದ್ದರೆ, ಇನ್ನು ಕೆಲವೇ ವರ್ಷಗಳಲ್ಲಿ ದೇಶ ಆರ್ಥಿಕ ಗಂಭೀರತೆ ಎದುರಿಸಬೇಕಿತ್ತು. ಏಕೆಂದರೆ ಕಳೆದ ವರ್ಷಕ್ಕಿಂತ ಮೊದಲು ದೇಶ ಕೃತಕ ಅಭಿವೃದ್ಧಿ ಹೊಂದಿತ್ತು. ಉದ್ಯೋಗ ಸೃಷ್ಟಿಸದ  ಅಭಿವೃದ್ಧಿ ಉಪಯೋಗವಿಲ್ಲದ್ದು. ಈಗಿನ ಜಿಡಿಪಿ ಶೇ. 6 ಕ್ಕಿಂತ ಕಡಿಮೆ ಇದ್ದರೂ ಉದ್ಯೋಗ ಸೃಷ್ಟಿಯಲ್ಲಿ ಮುಂದಿದೆ. ರಾಷ್ಟ್ರೀಯ ಒಟ್ಟು ಆದಾಯ (ಜಿಎನ್‌ಡಿಐ) ಪ್ರಮಾಣ ಕಳೆದ ಹತ್ತು ವರ್ಷಗಳಲ್ಲಿ ಶೇ. 10ಕ್ಕೇ ಸೀಮಿತವಾಗಿತ್ತು. ಈ ವರ್ಷ ಅದು ಶೇ. 11.8ಕ್ಕೆ ಏರಿಕೆಯಾಗಿದ್ದು ನೋಟು ಅಮಾನ್ಯೀಕರಣದಿಂದಲೇ ಎಂಬುದು ವಿರೋಧಿಸುವವರು ಯೋಚಿಸಬೇಕಾದ ವಿಷಯ. 2004 ರಲ್ಲಿ ಶೇ. 30ರ ಆಸುಪಾಸಿನಲ್ಲಿದ್ದ 500 ಮತ್ತು 1000 ಮುಖಬೆಲೆಯ ನೋಟುಗಳು 2014 ರ ಹೊತ್ತಿಗೆ ಶೇ. 80 ಕ್ಕಿಂತಲು ಹೆಚ್ಚಾಗಿತ್ತು. ಕಡಿಮೆ ಮುಖಬೆಲೆಯ ನೋಟುಗಳು ಕೇವಲ ಶೇ. 15% ಕ್ಕೆ ಬಂದಿಳಿಯಿತು. ಇದರಿಂದ ಕಪ್ಪು ಹಣ ಶೇಖರಿಸುವವರಿಗೆ, ಖೋಟಾ ನೋಟು ಚಲಾಯಿಸುವವರಿಗೆ, ಭ್ರಷ್ಟರಿಗೆ ಭಾರಿ ಅನುಕೂಲವಾಗಿತ್ತು. ನೋಟು ಅಮಾನ್ಯೀಕರಣಕ್ಕಿಂತ ಮೊದಲು, ಆರ್‌ಬಿಐ ವರದಿ ಪ್ರಕಾರ 500 ಮತು 1000 ರುಪಾಯಿ ನೋಟುಗಳಲ್ಲಿ ಶೇಕಡಾ 30 ರಷ್ಟು ಹಣ ಬ್ಯಾಂಕಿಗೆ ಮತ್ತೆ ವಾಪಸ್ ಬರುತ್ತಿರಲಿಲ್ಲ. ಅನೇಕರು ಪಾರ್ಟಿಸಿಪೇಟರಿ ನೋಟುಗಳ ಮೂಲಕ ವಿದೇಶಿದಿಂದ ಹಣ ಹೂಡಿ ಕಪ್ಪು ಹಣವನ್ನು ಬಿಳಿ ಮಾಡಿಸಿಕೊಳ್ಳುತ್ತಿದ್ದರು. ಇದರಿಂದ ಹೆಚ್ಚಾಗಿ ಕೃತಕ ಆರ್ಥಿಕಾಭಿವೃದ್ಧಿಯಾಗಿತ್ತು.

 ನೋಟು ಅಮಾನ್ಯೀಕರಣದಿಂದ ಡಿಜಿಟಲೀಕರಣ ಮತ್ತು ನಗದುರಹಿತ ವ್ಯವಹಾರ ಮಾರ್ಗ ಸುಲಭವಾಯಿತು. ಹಣಕಾಸಿನ ಆನ್‌ಲೈನ್ ವ್ಯವಹಾರದಿಂದಾಗಿ ತೆರಿಗೆಗಳ್ಳತನಕ್ಕೆ ತಡೆ ಬಿದ್ದಂತಾಗಿದೆ. ದೇಶದ 73.63 ಕೋಟಿ ಬ್ಯಾಂಕ್ ಖಾತೆಗಳು ಆಧಾರ ಸಂಖ್ಯೆಯೊಂದಿಗೆ ಜೋಡಣೆಯಾಗಿವೆ. ನೋಟು ಅಮಾನ್ಯೀಕರಣ ಕ್ರಮದಿಂದಾಗಿ ಗರಿಷ್ಠ ಮೌಲ್ಯದ ನೋಟುಗಳ ಸಂಖೆ 6 ಲಕ್ಷ ಕೋಟಿ ಕಡಿಮೆಯಾಗಿದೆ. ಅಂದರೆ ಪ್ರಸ್ತುತ ಮೌಲ್ಯದ ಶೇ. 50 ರಷ್ಟು ಇಳಿಕೆಯಾಗಿದೆ. ಇದರಿಂದ ಭ್ರಷ್ಟಚಾರ ಮತ್ತು ಭಯೋತ್ಪಾದನೆಗೆ ಹಣ ಪೂರೈಕೆ ಯಾಗುವದನ್ನು ನಿಯಂತ್ರಿಸಲಾಗಿದೆ.

 ಇತ್ತೀಚಿನ ವಿಶ್ವಬ್ಯಾಂಕಿನ ವರದಿ ಪ್ರಕಾರ ವ್ಯಾಪಾರ ವಹಿವಾಟನ್ನು ಸುಲಭ ಮಾಡುವ ದೇಶಗಳ ಪಟ್ಟಿಯಲ್ಲಿ ಭಾರತ 30 ಸ್ಥಾನ ಬಡ್ತಿಯೊಂದಿಗೆ ಅಗ್ರ 100ರ ಪಟ್ಟಿಯಲ್ಲಿ ಬಂದಿರುವದು ಸಂತಸದ ವಿಷಯ.

 ನೋಟು ಅಮಾನ್ಯೀಕರಣದ ನಂತರ ಮಹತ್ವದ ಬೆಳವಣಿಗೆಯಲ್ಲಿ, 2.24 ಲಕ್ಷಕ್ಕೂ ಅಧಿಕ ಖೊಟ್ಟಿ ಕಂಪನಿಗಳ ನೋಂದಣಿ ರದ್ದು ಮಾಡಿರುವುದು ಹಾಗೂ ಸುಮಾರು 1100 ಕ್ಕೂ ಹೆಚ್ಚು ಕಂಪನಿಗಳ ವಿರುದ್ದ ತನಿಖೆಗೆ ಕ್ರಮ ಕೈಗೊಂಡಿದ್ದು ವಿಶೇಷವಾಗಿದೆ. ನೋಟು ನಿಷೇಧದ ಬಳಿಕ ದೇಶದ ಒಟ್ಟು ಉತ್ಪನ್ನ (ಜಿಡಿಪಿ) ಶೇ. 5.7 ಕ್ಕೆ ಕುಸಿದಿದ್ದರೂ ಇದು ಬೇಗನೇ ಶೇ.7 ಕ್ಕಿಂತಲೂ ಹೆಚ್ಚಾಗಲಿದೆ ಎಂದು ವಿಶ್ವ ಬ್ಯಾಂಕು ಅಭಿಪ್ರಾಯಪಟ್ಟಿದೆ.

 ನೋಟು ಅಮಾನ್ಯದಿಂದ ಜನರಿಗೆ ತಾತ್ಕಾಲಿಕವಾಗಿ ಸ್ವಲ್ಪ ಮಟ್ಟಿಗೆ ತೊಂದರೆ ಆದರೂ ಜನರು ವಿಚಲಿತರಾಗದೇ, ದೇಶದ ಒಳಿತಿಗೆ ಸಹಕರಿಸಿರುವುದು ಶ್ಲಾಘನೀಯ. ನೋಟು ಅಮಾನ್ಯದಿಂದ ಹೆಚ್ಚು ತೊಂದರೆ ಆಗಿರುವದು ಕಾಳ ಧನಿಕರಿಗೆ, ಭ್ರ್ರಷ್ಟರಿಗೆ, ದೇಶ ವಿರೋದಿ ಚಟುವಟಿಕೆಯಲ್ಲಿ ತೊಡಗಿರುವವರಿಗೆ ಹಾಗು ತೆರಿಗೆ ವಂಚಕರಿಗೆ. ಶೇಕಡಾ 85 ಕ್ಕಿಂತಲೂ ಹೆಚ್ಚು ಇದ್ದ 500 & 1000 ರೂಪಾಯಿಗಳ ನೋಟುಗಳನ್ನು ರದ್ದು ಮಾಡಿ ಭ್ರ್ರಷ್ಟಾಚಾರ, ಕಪ್ಪುಹಣ ಹಾಗೂ ನಕಲಿ ನೋಟುಗಳನ್ನು ತಡೆಯಲು ಮಹಾಸಮರವನ್ನೆ ಮಾಡಿದ ಪ್ರದಾನಿಯವರ ನಡೆ ನಿಜವಾಗಿಯೂ ಶ್ಲಾಘನೀಯ. ಒಟ್ಟಿನಲ್ಲಿ ದೇಶದಲ್ಲಿ ನೋಟು ಅಮಾನ್ಯೀಕರಣದಿಂದ ಭಾರೀ ಬದಲಾವಣೆಯಾಗಿದ್ದು, ಭ್ರಷ್ಟಾಚಾರ, ಕಪ್ಪುಹಣ ಹಾಗು ದೇಶವಿರೋದಿಗಳ ವಿರುದ್ದ ನಡೆಸಿದ ಸರ್ಜಿಕಲ್ ದಾಳಿ ಆಗಿದೆ. ದೇಶ ಅಭಿವೃದ್ಧಿ ಹೊಂದಿದ ಅರ್ಥವ್ಯವಸ್ಥೆಯೆಡೆಗೆ ಹೊತ್ತೊಯ್ಯುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಈ ಯಜ್ಞದಲ್ಲಿ ನಾವೆಲ್ಲರೂ ಭಾಗಿಯಾಗೋಣ.

 

   

Leave a Reply