ನ್ಯಾಯದೇವತೆಯ ಕಣ್ಣಿಗೇಕೆ ಕಪ್ಪುಬಟ್ಟೆ?

ದು ಗು ಲಕ್ಷ್ಮಣ್ ; ಲೇಖನಗಳು - 0 Comment
Issue Date :

-ದು. ಗು. ಲಕ್ಷ್ಮಣ, ಹಿರಿಯ ಪತ್ರಕರ್ತ

ಕಳೆದೊಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕರ್ನಾಟಕ ಲೋಕಾಯುಕ್ತರ ಹುದ್ದೆಗೆ
ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಅವರನ್ನು ನೇಮಕ ಮಾಡಲು ಸರ್ಕಾರವೇನೋ ನಿರ್ಧರಿಸಿತ್ತು. ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವಿಶ್ವನಾಥ ಶೆಟ್ಟಿ ಅವರು ಅವಿರೋಧವಾಗಿ ಆಯ್ಕೆಯೂ ಆಗಿದ್ದರು. ಆ ಸಭೆಯಲ್ಲಿ ವಿಧಾನಮಂಡಲದ ವಿರೋಧಪಕ್ಷದ ನಾಯಕರು, ವಿಧಾನಸಭೆ ಅಧ್ಯಕ್ಷರು, ವಿಧಾನಪರಿಷತ್ ಸಭಾಪತಿ ಮತ್ತು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಇದ್ದರು. ಅವರೆಲ್ಲರೂ ವಿಶ್ವನಾಥ ಶೆಟ್ಟಿ ಅವರ ನೇಮಕಾತಿಗೆ ಅವರೆಲ್ಲರೂ ಸಮ್ಮತಿ ಸೂಚಿಸಿದ ಬಳಿಕವೇ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ಶಿಫಾರಸು ಮಾಡಲಾಗಿತ್ತು. ಈ ಶಿಫಾರಸನ್ನು ರಾಜ್ಯಪಾಲರ ಅಂಕಿತಕ್ಕಾಗಿ ಕಳುಹಿಸಿಕೊಡಲಾಗಿತ್ತು. ಆದರೆ ರಾಜ್ಯಪಾಲರು ಈ ಶಿಫಾರಸನ್ನು ಮರುಪರಿಶೀಲಿಸುವಂತೆ ವಾಪಸ್ ಕಳುಹಿಸಿದ್ದಾರೆ. ಇತ್ತ ಸಾಮಾಜಿಕ ಹೋರಾಟಗಾರ ಎಸ್.ಆರ್. ಹಿರೇಮಠ ಅವರು ನ್ಯಾ. ವಿಶ್ವನಾಥ ಶೆಟ್ಟಿ ಅವರ ಆಯ್ಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಶೆಟ್ಟಿ ಅವರ ವಿರುದ್ಧ ಕೆಲವು ಆರೋಪಗಳಿವೆ. ಹೀಗಿರುವಾಗ ಅವರ ಆಯ್ಕೆ ಸರಿಯಲ್ಲ ಎಂಬುದು ಅವರ ಆಕ್ರೋಶ.
ಹೀಗಿದ್ದರೂ ಮತ್ತೊಮ್ಮೆ ನ್ಯಾ. ವಿಶ್ವನಾಥ ಶೆಟ್ಟಿ ಅವರ ಹೆಸರನ್ನೇ ಮತ್ತೊಮ್ಮೆ ರಾಜ್ಯಪಾಲರಿಗೆ ಕಳುಹಿಸಿಕೊಡುವುದಾಗಿ ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿ, ರಾಜ್ಯಪಾಲರು ಕೇಳಿದ ಸೂಕ್ತ ವಿವರಣೆಗಳನ್ನು ಒದಗಿಸುವುದಾಗಿ ಹೇಳಿದ್ದಾರೆ.
ಕಳೆದೊಂದು ವರ್ಷದಿಂದ ಲೋಕಾಯುಕ್ತರ ಹುದ್ದೆ ಖಾಲಿಯಾಗಿಯೇ ಇತ್ತು. ಲೋಕಾಯುಕ್ತರಾಗಿದ್ದ ನ್ಯಾ. ವೈ. ಭಾಸ್ಕರ್ ರಾವ್ ವಿರುದ್ಧ ಭ್ರಷ್ಟಾಚಾರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಅವರು 2015ರ ಡಿ. 8ರಂದು ರಾಜೀನಾಮೆ ನೀಡಿದ್ದರು. ಅದಾದ ಬಳಿಕ ಸರ್ಕಾರ ಛತ್ತೀಸ್‌ಗಡ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ, ರಾಜ್ಯ ಮಾನವ ಹಕ್ಕುಗಳ ಆಯೋಗದ ಮಾಜಿ ಅಧ್ಯಕ್ಷ ಎಸ್.ಆರ್. ನಾಯಕ್ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡಲು ನಿರ್ಧರಿಸಿತ್ತು. ಆದರೆ ನ್ಯಾ. ನಾಯಕ್ ಸಹಕಾರ ಸಂಘಗಳ ನಿಯಮ ಉಲ್ಲಂಘಿಸಿ ನಿವೇಶನ ಪಡೆದುಕೊಂಡಿದ್ದಾರೆ ಎಂಬ ಆರೋಪ ಕೇಳಿಬಂತು. ಹಾಗಾಗಿ ಅವರ ನೇಮಕಕ್ಕೆ ವಿರೋಧ ವ್ಯಕ್ತವಾಗಿತ್ತು. ರಾಜ್ಯಪಾಲರಿಗೂ ಈ ಬಗ್ಗೆ ದೂರು ಕೊಡಲಾಗಿತ್ತು. ಸರ್ಕಾರದ ನೇಮಕಾತಿ ಪ್ರಸ್ತಾವನೆಯನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಈಗಲೂ ನ್ಯಾ. ವಿಶ್ವನಾಥ ಶೆಟ್ಟಿ ಅವರ ವಿರುದ್ಧ ಆರೋಪಗಳು ಕೇಳಿಬಂದಿರುವುದರಿಂದ ಮತ್ತೆ ಪ್ರಸ್ತಾವನೆ ಸರ್ಕಾರದ ಅಂಗಳಕ್ಕೆ ಬಂದು ಬಿದ್ದಿದೆ.
ಲೋಕಾಯುಕ್ತ ಹುದ್ದೆಗೆ ಹಾಗಿದ್ದರೆ ನಿಷ್ಪಕ್ಷಪಾತ, ಕಳಂಕರಹಿತ, ಪಾರದರ್ಶಕ ವ್ಯಕ್ತಿತ್ವದ ಯಾವ ನ್ಯಾಯಾಧೀಶರೂ ಸರ್ಕಾರಕ್ಕೆ ಸಿಗುತ್ತಿಲ್ಲವೆ? ಅಥವಾ ಸರ್ಕಾರ ಅಂತಹ ವ್ಯಕ್ತಿಗಳ ಹೆಸರನ್ನು ಬೇಕೆಂದೇ ಶಿಫಾರಸು ಮಾಡುತ್ತಿಲ್ಲವೆ? ಅಥವಾ ಪಾರದರ್ಶಕ ವ್ಯಕ್ತಿತ್ವದ ನ್ಯಾಯಾಧೀಶರು ಭ್ರಷ್ಟಾಚಾರ ಮೆತ್ತಿಕೊಂಡಿರುವ ಲೋಕಾಯುಕ್ತ ಹುದ್ದೆಯೇ ಬೇಡವೆಂದು ಹೆದರಿ ದೂರ ಸರಿದಿರುವರೆ? ಇಂತಹ ಹಲವು ಪ್ರಶ್ನೆಗಳು ಈಗ ಕಾಡುತ್ತಿವೆ. ಲೋಕಾಯುಕ್ತ ಸಂಸ್ಥೆಯ ಘನತೆ, ಗೌರವಗಳು ರಸಾತಳಕ್ಕೆ ತಲುಪಿವೆ ಎಂಬುದರಲ್ಲಿ ಅನುಮಾನವೇ ಉಳಿದಿಲ್ಲ. ನ್ಯಾ. ಭಾಸ್ಕರ ರಾವ್ ಲೋಕಾಯುಕ್ತದಂತಹ ಶ್ರೇಷ್ಠ ಸಂಸ್ಥೆಯ ಘನತೆ ಗೌರವಗಳನ್ನು ಮಣ್ಣುಪಾಲು ಮಾಡಿದರು ಎಂಬುದು ಈಗ ಇಡೀ ಲೋಕಕ್ಕೇ ವೇದ್ಯ. ಆ ಸಂಬಂಧವಾಗಿ ನಡೆದಿರುವ ಮೊಕದ್ದಮೆ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಈ ಪ್ರಕರಣದಿಂದ ಪಾರಾಗಲು ಅವರು ಕೋರ್ಟಿಗೆ ಅಲೆಯುತ್ತಲೇ ಇದ್ದಾರೆ. ನ್ಯಾಯಾಧೀಶರ ಮುಂದೆ ಆರೋಪಿ ಸ್ಥಾನದಲ್ಲಿ ನ್ಯಾಯಾಧೀಶರೊಬ್ಬರೇ ಮುಖ ಕೆಳಗೆಹಾಕಿ ನಿಲ್ಲಬೇಕಾದ ಪರಿಸ್ಥಿತಿ ಅದೆಂತಹ ಹೀನಾಯವಾದದ್ದೆಂದು ನೀವೇ ಯೋಚಿಸಿ. ನ್ಯಾಯವನ್ನು ಎತ್ತಿಹಿಡಿಯಬೇಕಾದ, ಭ್ರಷ್ಟಾಚಾರವನ್ನು ಮೂಲೋತ್ಪಾಟನೆಗೊಳಿಸಿ, ಅದಕ್ಕೆ ಹೆಡೆಮುರಿ ಕಟ್ಟಬೇಕಾದ ಲೋಕಾಯುಕ್ತರೇ ಭ್ರಷ್ಟಾಚಾರಕ್ಕೆ ನೀರೆರೆಯುತ್ತಾರೆ, ಆ ಸಂಸ್ಥೆಯನ್ನು ಭ್ರಷ್ಟಾಚಾರದ ಅಡ್ಡೆಯನ್ನಾಗಿ ಮಾಡುತ್ತಾರೆಂದರೆ ಅದಕ್ಕಿಂತ ದುರಂತ ಇನ್ನೊಂದಿಲ್ಲ. ಪ್ರಜಾತಂತ್ರ ವ್ಯವಸ್ಥೆಯ ನಾಲ್ಕು ಆಧಾರಸ್ತಂಭಗಳಲ್ಲಿ ಒಂದಾದ ನ್ಯಾಯಾಂಗಕ್ಕೇ ಇದೊಂದು ದೊಡ್ಡ ಕಳಂಕ.
ಆದರೆ ನ್ಯಾಯಾಂಗಕ್ಕೆ ಇಂತಹ ಕಳಂಕ ಮೆತ್ತಿಕೊಂಡಿರುವುದು ಈಗೇನಲ್ಲ. ಕಳಂಕ ಮೆತ್ತಿಕೊಂಡ ನ್ಯಾಯಾಧೀಶರಲ್ಲಿ ಭಾಸ್ಕರ್ ರಾವ್ ಅವರೇ ಮೊದಲಿಗರೂ ಅಲ್ಲ. 2011ರ ಸೆಪ್ಟೆಂಬರ್‌ನಲ್ಲಿ ಹಿರಿಯ ವಕೀಲ ಶಾಂತಿಭೂಷಣ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿ, ಸೀಲ್‌ಮಾಡಿದ ಕವರ್ ಒಂದನ್ನು ನೀಡಿ, ಸ್ವಾತಂತ್ರ್ಯ ಬಂದ ಬಳಿಕ ಆಗಿಹೋದ 16 ಮಂದಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶರ ಪೈಕಿ 8 ಮಂದಿ ಭ್ರಷ್ಟರು, 6 ಮಂದಿ ಅತ್ಯಂತ ಪ್ರಾಮಾಣಿಕರು, ಉಳಿದ ಇಬ್ಬರ ಬಗ್ಗೆ ಅವರು ಪ್ರಾಮಾಣಿಕರೋ ಅಥವಾ ಭ್ರಷ್ಟರೋ ಎಂಬುದನ್ನು ಸ್ಪಷ್ಟವಾಗಿ ಹೇಳಲು ಸಾಧ್ಯವಿಲ್ಲ ಎಂದಿದ್ದರು. ನಾನು ಹೀಗೆ ಅಧಿಕೃತವಾಗಿ ಹೇಳಿದ್ದು ನ್ಯಾಯಾಂಗ ನಿಂದನೆಯಾಗಿದ್ದಲ್ಲಿ ನನ್ನನ್ನು ಜೈಲಿಗೆ ಕಳಿಸಿ. ನನಗೇನೂ ಬೇಸರವಿಲ್ಲ ಎಂದು ಶಾಂತಿಭೂಷಣ್ ಸುಪ್ರೀಂಕೋರ್ಟ್‌ಗೆ ಸವಾಲು ಹಾಕಿದ್ದರು. ಅಷ್ಟೇ ಅಲ್ಲ, ಆ 8 ಮಂದಿ ಭ್ರಷ್ಟಾತಿಭ್ರಷ್ಟ ಮುಖ್ಯ ನ್ಯಾಯಾಧೀಶರು(ಸಿಜೆಐ) ಯಾರೆಂಬುದನ್ನು ಪಟ್ಟಿಮಾಡಿ, ಸೀಲ್‌ಮಾಡಿದ ಕವರ್‌ನಲ್ಲಿ ಇಟ್ಟಿದ್ದರು. ಧೈರ್ಯವಿದ್ದರೆ ಸೀಲ್‌ಮಾಡಿದ ಈ ಕವರ್ ಒಡೆದು ಅಲ್ಲಿರುವ ಹೆಸರುಗಳನ್ನು ಓದಿ ಎಂದೂ ಸವಾಲೆಸೆದಿದ್ದರು. ಆದರೆ ಆ ಕವರ್ ಒಡೆದು ಅದರಲ್ಲಿರುವ ಕಳಂಕಿತ ಸಿಜೆಐಗಳ ಹೆಸರನ್ನು ಬಹಿರಂಗಗೊಳಿಸುವ ಧೈರ್ಯವನ್ನು ಸುಪ್ರೀಂಕೋರ್ಟ್ ಇದುವರೆಗೂ ಪ್ರದರ್ಶಿಸಿಲ್ಲ. ಶಾಂತಿಭೂಷಣ್ ನ್ಯಾಯಾಲಯಕ್ಕೆ ಸಲ್ಲಿಸಿದ ಆ ಅರ್ಜಿಯನ್ನು ಸ್ವೀಕರಿಸಿ ವಿಚಾರಣೆಗೆ ಎತ್ತಿಕೊಳ್ಳಲೂ ಇಲ್ಲ.
ಅರ್ಜಿದಾರರು ಯಾರೋ ಅಬ್ಬೆಪಾರಿಯಾಗಿದ್ದರೆ, ಮಾಡಲು ಕೆಲಸವಿಲ್ಲದೆ ಕೀಟಲೆಗಾಗಿ, ಕಾಲಹರಣಕ್ಕಾಗಿ ಅಂತಹ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರೆ ಅದು ಯಾವಾಗಲೋ ತಿರಸ್ಕೃತವಾಗಿರುತ್ತಿತ್ತು. ನ್ಯಾಯಾಲಯದ ಕಾಲಹರಣ ಮಾಡಿದ ತಪ್ಪಿಗೆ ಅರ್ಜಿದಾರನಿಗೆ ದಂಡವನ್ನೂ ವಿಧಿಸಲಾಗುತ್ತಿತ್ತು. ಶಾಂತಿಭೂಷಣ್ ಯಾರೋ ಅಬ್ಬೆಪಾರಿಯಲ್ಲ. ಪ್ರಖ್ಯಾತ ವಕೀಲರು. ಇಂದಿರಾಗಾಂಧಿಯಂತಹ ಪ್ರಚಂಡ ನಾಯಕಿಯನ್ನೇ 1975ರಲ್ಲಿ ಆಕೆ ಭ್ರಷ್ಟಾಚಾರವೆಸಗಿ ಚುನಾವಣೆ ಗೆದ್ದಿದ್ದಾರೆಂದು ನ್ಯಾಯಾಲಯದಲ್ಲಿ ಸಾಬೀತುಪಡಿಸಿದ ದಿಟ್ಟ ವಕೀಲ. ಇದೇ ಕಾರಣದಿಂದಾಗಿ ಇಂದಿರಾಗಾಂಧಿ ಪದಚ್ಯುತರಾಗಬೇಕಾಯಿತು. ಅದೆಲ್ಲ ಈಗ ಇತಿಹಾಸ.
8 ಮಂದಿ ಮಾಜಿ ಸಿಜೆಐ ಭ್ರಷ್ಟರಾಗಿದ್ದರು ಎಂದು ಬಹಿರಂಗ ಹೇಳಿಕೆ ನೀಡಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಾದರೆ ಶಾಂತಿಭೂಷಣ್ ಅವರಿಗಿದ್ದ ಧೈರ್ಯವನ್ನು ಯಾರಾದರೂ ಮೆಚ್ಚಲೇಬೇಕು. ಶಾಂತಿಭೂಷಣ್ ಹೆಸರಿಸಿದ್ದ ಕಳಂಕಿತ 8 ಮಂದಿಯಲ್ಲಿ ರಂಗನಾಥ ಮಿಶ್ರ, ಕೆ.ಎನ್. ಸಿಂಗ್, ಎಲ್.ಎಂ. ಶರ್ಮ, ಎಂ.ಎನ್. ವೆಂಕಟಾಚಲಯ್ಯ, ಎ.ಎಂ. ಅಹ್ಮದಿ, ಜೆ.ಎಸ್. ವರ್ಮ, ಎ.ಎಸ್.ಆನಂದ್, ಎಸ್.ಪಿ. ಭರೂಚ, ಬಿ.ಎನ್. ಕೃಪಾಲ್, ಜಿ.ಬಿ. ಪಟ್ನಾಯಕ್, ವೈ.ಕೆ. ಸಬರವಾಲ್ ಮೊದಲಾದವರ ಹೆಸರುಗಳಿದ್ದವು. ಈ ಪೈಕಿ ಮಾಜಿ ಸಿಜೆಐ ವೈ.ಕೆ. ಸಬರವಾಲ್ ಅವರಂತೂ ಅತ್ಯಂತ ಭ್ರಷ್ಟರೆಂದು ಪ್ರಬಲ ಸಾಕ್ಷ್ಯಾಧಾರಗಳ ಸಹಿತ ಶಾಂತಿಭೂಷಣ್ ವಿವರಿಸಿದ್ದರು. ತಮ್ಮ ಪುತ್ರನಿಗೆ ಅನುಕೂಲವಾಗಲೆಂದು ದೆಹಲಿಯ ಲಕ್ಷಾಂತರ ವಾಣಿಜ್ಯ ಸಂಸ್ಥೆಗಳನ್ನು ಮುಚ್ಚಿಸುವ ತೀರ್ಪು ನೀಡಿದ್ದು , ಅವರ ಪುತ್ರರು ತಮ್ಮ ವ್ಯಾಪಾರಿ ಸಂಸ್ಥೆಗಳ ವಿಳಾಸವನ್ನು ಸಿಜೆಐಯ ಅಧಿಕೃತ ನಿವಾಸವೆಂದು ಕೊಟ್ಟಾಗಲೂ ಸುಮ್ಮನಿದ್ದುದು, ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿದ್ದ ಮುಲಾಯಂ ಸಿಂಗ್ ಅವರಿಂದ ಸಬರ್‌ವಾಲಾ ಪುತ್ರರು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ 4 ಬೆಲೆಬಾಳುವ ಪ್ಲಾಟ್‌ಗಳನ್ನು ಪಡೆದದ್ದು, ಇದಕ್ಕೆ ಪ್ರತಿಯಾಗಿ ಮುಲಾಯಂ ಸಿಂಗ್‌ಗೆ ಆಗ ತುಂಬಾ ಆಪ್ತರಾಗಿದ್ದ ಅಮರ್ ಸಿಂಗ್‌ಗೆ ಸಂಬಂಧಿಸಿದ್ದ ಮೊಕದ್ದಮೆಯೊಂದರಲ್ಲಿ ಅಮರ್ ಸಿಂಗ್ ಪರವಾಗಿ ತೀರ್ಪು ನೀಡಿದ್ದು… ಹೀಗೆ ಸಬರ್‌ವಾಲಾರ ವಿರುದ್ಧ ಶಾಂತಿಭೂಷಣ್ ಅದೆಷ್ಟೋ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು. ಶಾಂತಿಭೂಷಣ್ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ್ದ ದೂರು ಉತ್ಪ್ರೇಕ್ಷೆಯದಂತೂ ಖಂಡಿತ ಆಗಿರಲಿಲ್ಲ.
ಸುಪ್ರೀಂಕೋರ್ಟ್ ಕಳಂಕಿತ ಸಿಜೆಐಗಳ ವಿರುದ್ಧ ಯಾಕೆ ವಿಚಾರಣೆ ನಡೆಸಲಿಲ್ಲ ಎಂಬ ಪ್ರಶ್ನೆ ಈಗಲೂ ಜೀವಂತ. ಸುಪ್ರೀಂಕೋರ್ಟ್ ಒಂದು ವೇಳೆ ವಿಚಾರಣೆ ನಡೆಸಿ, ಅದೇನಾದರೂ ನಿಜವಾಗಿ, ಸೂಕ್ತ ಶಿಕ್ಷೆ ವಿಧಿಸಿದ್ದಲ್ಲಿ ನ್ಯಾಯಾಂಗಕ್ಕೆ ಭರ್ಜರಿಯಾದ ಸರ್ಜರಿ ಮಾಡಿದಂತಾಗುತ್ತಿತ್ತು. ಸುಪ್ರೀಂಕೋರ್ಟ್ ಹಾಗೆ ಮಾಡದೆ ಮೌನಕ್ಕೆ ಶರಣಾಗಿದ್ದರಿಂದಲೇ ಭಾಸ್ಕರ್ ರಾವ್‌ರಂತಹ ಕಳಂಕಿತ ಲೋಕಾಯುಕ್ತರು ಹುಟ್ಟಿಕೊಳ್ಳಲು ಸಾಧ್ಯವಾಗಿದ್ದು. ಭಾಸ್ಕರ್ ರಾವ್‌ರಂತೆಯೇ ಇನ್ನೂ ಅದೆಷ್ಟೋ ಕಳಂಕಿತ ನ್ಯಾಯಾಧೀಶರಿದ್ದಾರೆ.
ರಾಜ್ಯಸರ್ಕಾರ ಈಗ ಯಾರನ್ನೇ ಲೋಕಾಯುಕ್ತ ಹುದ್ದೆಗೆ ನೇಮಿಸಿದರೂ ಸಾರ್ವಜನಿಕರು ಸಂಶಯದಿಂದ ನೋಡದೇ ಇರಲಾರರು. ನ್ಯಾಯಾಲಯಗಳಲ್ಲಿರುವ ನ್ಯಾಯದೇವತೆಯ ಪ್ರತಿಮೆಯ ಕಣ್ಣಿಗೆ ಕಪ್ಪುಬಟ್ಟೆ ಕಟ್ಟಿರುವುದನ್ನು ನೀವು ನೋಡಿರಬಹುದು. ಅದೇಕೆ ಹಾಗೆ ಎಂಬುದು ನನಗಂತೂ ಗೊತ್ತಿಲ್ಲ. ಕಳಂಕಿತ ನ್ಯಾಯಾಧೀಶರನ್ನು ನಾನು ಕಣ್ಣೆತ್ತಿ ನೋಡಲಾರೆ ಎಂದು ನ್ಯಾಯದೇವತೆ ಬಟ್ಟೆ ಬಿಗಿದುಕೊಂಡಿರಬಹುದೆ?
ಲೋಕಾಯುಕ್ತ ಹುದ್ದೆಗೆ ಯಾರೇ ನೇಮಕವಾದರೂ ಅವರನ್ನು ಸಾರ್ವಜನಿಕ ಕಣ್ಣುಗಳು ಸಂಶಯದಿಂದಲೇ ನೋಡುತ್ತವೆ. ಏಕೆಂದರೆ ಈ ಹಿಂದೆ ಲೋಕಾಯುಕ್ತರಾಗಿದ್ದ ಭಾಸ್ಕರ್ ರಾವ್ ಲೋಕಾಯುಕ್ತ ಸಂಸ್ಥೆಗೆ ಅಂತಹ ಕಳಂಕ ಮೆತ್ತಿಬಿಟ್ಟಿದ್ದಾರೆ.

   

Leave a Reply