ಪಂಚಮುಖಿ ಶಿಕ್ಷಣದ ಕಿರು ಪರಿಚಯ

ಲೇಖನಗಳು - 0 Comment
Issue Date :

ಶೃತಿ ಕೆ.ಎಸ್. –

ಭಾವ ಸಂವತ್ಸರದ ಆಷಾಢ ಶುದ್ಧ ಗುರುಪೂರ್ಣಿಮೆ (ದಿ.24.07.1994) ರಂದು ಆರಂಭಗೊಂಡ ಗುರುಕುಲಕ್ಕೆ ಈಗ 24 ವರ್ಷಗಳು ಸಂದಿವೆ. ಮಂಗಳೂರಿನಿಂದ 45 ಕಿ.ಮೀ ಮತ್ತು ಪುತ್ತೂರಿನಿಂದ 15 ಕಿ.ಮೀ ದೂರದಲ್ಲಿರುವ ಮೂರುಕಜೆ ಎಂಬ ಗ್ರಾಮದ ಸುಂದರ ಪ್ರಶಾಂತ ಪರಿಸರದಲ್ಲಿ ಗುರುಕುಲ ರೂಪುಗೊಂಡಿದೆ. ಪ್ರಸ್ತುತ 6 ರಾಜ್ಯಗಳ 97 ವಿದ್ಯಾರ್ಥಿನಿಯರು 15 ಜನ ಆಚಾರ್ಯ ಮಾತೃಶ್ರೀಯರ ಮಾರ್ಗದರ್ಶನದಲ್ಲಿ ಮುನ್ನಡೆಯುತ್ತಿದ್ದಾರೆ. ಸ್ವಸ್ಥ ಸಮಾಜ ನಿರ್ಮಾಣ ಎಂಬ ಉದ್ದೇಶದ ಸಫಲತೆಗಾಗಿ ತನ್ನದೇ ಆದಂತಹ ಪಂಚಮುಖೀ ಶಿಕ್ಷಣ ಪದ್ಧತಿಯನ್ನು ಗುರುಕುಲ ಅಳವಡಿಸಿಕೊಂಡಿದೆ. ಶಿಕ್ಷಣದ ಆ ಪಂಚ ಮುಖಗಳು- ವೇದ, ಯೋಗ, ವಿಜ್ಞಾನ, ಕೃಷಿ ಮತ್ತು ಕಲಾ ಕೌಶಲ.

 ವೇದ

 ಸಂಸ್ಕೃತ ವಾಙ್ಮಯದ ಶ್ರೇಷ್ಠ ಮಾದರಿ ವೇದ. ವೇದದಲ್ಲಿ ಅನೇಕ ಜೀವನ ಮೌಲ್ಯಗಳು ಅಡಕವಾಗಿವೆ. ಅಂತೆಯೇ ವೇದದ ನಂತರ ಬಂದಂತಹ ಉಪನಿಷತ್, ವೇದಾಂಗ, ದರ್ಶನ, ರಾಮಾಯಣ, ಮಹಾಭಾರತಾದಿ ಕಾವ್ಯಗಳೂ ಕೂಡ ಜೀವನಮೌಲ್ಯಗಳನ್ನು ಸಾರುವ ಅದ್ಭುತ ವಾಙ್ಮಯಗಳಾಗಿವೆ. ಇವೆಲ್ಲವುಗಳ ಅಧ್ಯಯನ, ಅಧ್ಯಾಪನ, ತನ್ಮೂಲಕ ಇವುಗಳ ರಕ್ಷಣೆ ಮಾಡುವ ದೃಷ್ಟಿಯಿಂದ ವೇದವನ್ನು ಅಧ್ಯಯನ ಬಿಂದುವಾಗಿ ಇಲ್ಲಿ ಜೋಡಿಸಲಾಗಿದೆ. ಆರಂಭದಲ್ಲಿ ಸಂಸ್ಕೃತ ಭಾಷೆಯನ್ನು ಅಭ್ಯಸಿಸಿ ತದನಂತರ ವೇದ, ವೇದಾಂಗ, ದರ್ಶನ ಕಾವ್ಯಗಳ ಅಧ್ಯಯನವನ್ನು ಮಾಡುವ ಪ್ರಯತ್ನ ಇಲ್ಲಿ ನಡೆದಿದೆ.

  ಯೋಗ

 ಸ್ವಸ್ಥ ಜೀವನದ ಭದ್ರ ಬುನಾದಿ ಯೋಗವಾದ ಕಾರಣ ಇಲ್ಲಿ ಯೋಗ ಶಿಕ್ಷಣವನ್ನು ವಿದ್ಯಾರ್ಥಿನಿಯರಿಗೆ ನೀಡಲಾಗುತ್ತಿದೆ. ಪ್ರತಿ ದಿನ ಪ್ರಾತಃಕಾಲದಲ್ಲಿ 30 ನಿಮಿಷಗಳ ಆಸನ, ಪ್ರಾಣಾಯಾಮ, ಧ್ಯಾನಗಳ ಅಭ್ಯಾಸವನ್ನು ಜೋಡಿಸಲಾಗಿದೆ. ಇದರ ಜೊತೆಗೆ ಪತಂಜಲಿಮುನಿ ಪ್ರಣೀತ ಯೋಗ ದರ್ಶನದ ಅಧ್ಯಾಪನವನ್ನು ಇಲ್ಲಿ ಮಾಡಲಾಗುತ್ತದೆ. ಇದರ ಜೊತೆಗೆ ಆಷ್ಟಾಂಗಯೋಗದ ಮೊದಲೆರಡು ಮೆಟ್ಟಿಲುಗಳಾದ ಯಮ ಅಂದರೆ ಅಹಿಂಸಾ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ ಮತ್ತು ನಿಯಮ ಅಂದರೆ ಶೌಚ, ಸಂತೋಷ, ತಪಸ್ಸು, ಸ್ವಾಧ್ಯಾಯ, ಈಶ್ವರಪ್ರಣಿಧಾನ ಇವುಗಳ ಅರಿವು ಮತ್ತು ಅನುಷ್ಠಾನದ ಪ್ರಯತ್ನದಲ್ಲೂ ವಿದ್ಯಾರ್ಥಿನಿಯರಿದ್ದಾರೆ.

  ವಿಜ್ಞಾನ

 ವಿಶೇಷವಾದ ಜ್ಞಾನ ವಿಜ್ಞಾನ. ಹಾಗಾಗಿ ಗಣಿತ, ವಿಜ್ಞಾನ, ಇತಿಹಾಸ, ಭಾಷಾಜ್ಞಾನ, ಆಯುರ್ವೇದ ಮುಂತಾದ ವಿಷಯಗಳು ವಿಜ್ಞಾನ ಎಂದೇ ಪರಿಗಣಿಸಲ್ಪಡುತ್ತವೆ. ಈ ಎಲ್ಲಾ ಕ್ಷೇತ್ರಗಳಲ್ಲೂ ನಮ್ಮ ಪೂರ್ವಜರು ಅನೇಕ ಸಂಶೋಧನೆಗಳನ್ನು ನಡೆಸಿ ಜಗತ್ತಿಗೆ ಅನೇಕ ಅತ್ಯಮೂಲ್ಯ ಕೊಡುಗೆಗಳನ್ನು ಕೊಟ್ಟಿದ್ದಾರೆ.

 ಇವುಗಳನ್ನು ಹೊರತರುವ ದೃಷ್ಟಿಯಿಂದ ಮತ್ತು ಯುವ ಪೀಳಿಗೆಯಲ್ಲಿ ಇವುಗಳ ಬಗ್ಗೆ ಹೆಮ್ಮೆ ಮೂಡಿಸಿ ಅವರನ್ನು ಪ್ರೇರೇಪಿಸುವ ದೃಷ್ಟಿಯಿಂದ ವಿಜ್ಞಾನವನ್ನು ಶಿಕ್ಷಣದ ಒಂದು ವಿಷಯವಾಗಿ ಇಲ್ಲಿ ಜೋಡಿಸಲಾಗಿದೆ. ವಿದ್ಯಾರ್ಥಿನಿಯರು ಆರ್ಷ ಮತ್ತು ಆಧುನಿಕ ಗಣಿತ ವಿಜ್ಞಾನಾದಿಗಳ ತುಲನಾತ್ಮಕ ಅಧ್ಯಯನದ ಮೂಲಕ ವಿಜ್ಞಾನ ಶಿಕ್ಷಣವನ್ನು ಪಡೆಯುತ್ತಾರೆ.

 ಕೃಷಿ

 ಸ್ವಾವಲಂಬಿ ಜೀವನದ ಆಧಾರ ಸ್ತಂಭ ಕೃಷಿಯಾದ ಕಾರಣ ಕೃಷಿ ಶಿಕ್ಷಣವನ್ನು ವಿದ್ಯಾರ್ಥಿನಿಯರಿಗೆ ಕೊಡಲಾಗುತ್ತಿದೆ. ಪ್ರಕೃತಿಯೊಡನೆ ಸಾಮರಸ್ಯದ ಬದುಕು ನಮ್ಮದಾಗಬೇಕು ಎಂಬ ಪರಿಕಲ್ಪನೆಯನ್ನು ವಿದ್ಯಾರ್ಥಿನಿಯರಲ್ಲಿ ಮೂಡಿಸಬೇಕೆಂಬ ಉದ್ದೇಶದಿಂದ ಕೃಷಿಯ ಜೊತೆ ಕೃಷಿಗೆ ಪೂರಕವಾದ ಗೋಸೇವೆ, ಅಗ್ನಿಹೋತ್ರಾದಿಗಳನ್ನು ಇಲ್ಲಿ ಜೋಡಿಸಲಾಗಿದೆ.

 ಕಲಾ ಕೌಶಲ

 ಭಾವನೆಗಳ ಉದಾತ್ತೀಕರಣದಲ್ಲಿ ಕಲೆಗಳ ಪಾತ್ರ ಬಹು ಮುಖ್ಯವಾದ ಕಾರಣ ಅನೇಕ ಕಲಾ ತರಬೇತಿಗಳನ್ನು ಇಲ್ಲಿ ಕೊಡಲಾಗುತ್ತಿದೆ. ಭಾವನೆಗಳ ವಿಕಾಸಕ್ಕಾಗಿ ಕಲೆಯೇ ಹೊರತು ಪ್ರದರ್ಶನ ಮಾತ್ರಕ್ಕಲ್ಲ ಎಂಬ ನಿಲುವು ಗುರುಕುಲದ್ದು. ಅದರಂತೆ ಸಂಗೀತ, ಭರತನಾಟ್ಯ, ಚಿತ್ರಕಲೆ, ಕಂಪ್ಯೂಟರ್, ಹೊಲಿಗೆ, ತಬಲ, ವಯೋಲಿನ್, ಪಾಕಶಾಸ್ತ್ರ, ರಂಗೋಲಿ ಮುಂತಾದ ಕಲೆಗಳ ಕಲಿಕೆಗೆ ಇಲ್ಲಿ ಮುಕ್ತ ಅವಕಾಶ ಕಲ್ಪಿಸಲಾಗಿದೆ.

 ಮೈತ್ರೇಯಿ ಗುರುಕುಲದ ಕೆಲವೊಂದು ವಿಶೇಷತೆಗಳು ಹೀಗಿವೆ –

 ಎಲ್ಲರೂ ಎಲ್ಲವನ್ನೂ ಕಲಿಯಬೇಕೆಂಬ ಹೇರಿಕೆಯ ಬದಲಾಗಿ ಸಾಮರ್ಥ್ಯ ಮತ್ತು ಆಸಕ್ತಿಗೆ ಅನುಗುಣವಾಗಿ ಶಿಕ್ಷಣವನ್ನು ಕೊಡಲಾಗುತ್ತದೆ. ಶಿಕ್ಷಣ, ಆಹಾರ ಮತ್ತು ಔಷಧಿಗಳು ಸಮಾಜ ಬಾಂಧವರೆಲ್ಲರಿಗೂ ಸಮಾನವಾಗಿಯೂ ಉಚಿತವಾಗಿಯೂ ಸಿಗಬೇಕಾದದ್ದು. ಆದ್ದರಿಂದ
ಪ್ರಾಚೀನ ಕಾಲದಲ್ಲಿ ಈ ಮೂರನ್ನೂ ಉಚಿತವಾಗಿಯೇ ಎಲ್ಲರಿಗೂ ಕೊಡಲಾಗುತ್ತಿತ್ತು. ಕಾಲ ಬದಲಾದಂತೆ ಈ ಮೂರೂ ಕೂಡಾ ಮಾರಾಟದ ವಸ್ತುಗಳಾಗಿ ಪರಿಣಮಿಸಿವೆ. ಇದರಿಂದ ಅನೇಕ ಸಮಸ್ಯೆಗಳನ್ನು ಸಮಾಜದಲ್ಲಿ ನಾವು ಕಾಣುತ್ತಿದ್ದೇವೆ. ಸಮಾಜದಲ್ಲಿ ಪರಿವರ್ತನೆ ತರುವ ದೃಷ್ಟಿಯಿಂದ ಗುರುಕುಲದಲ್ಲಿ ಶಿಕ್ಷಣ-ಆಹಾರ-ಔಷಧಿಗಳನ್ನು ವಿದ್ಯಾರ್ಥಿನಿಯರಿಗೆ ಉಚಿತವಾಗಿ ಕೊಡಲಾಗುತ್ತಿದೆ.

  –  ಪರೀಕ್ಷೆ, ಪರೀಕ್ಷೆಯಲ್ಲಿ ಗಳಿಸಿದ ಅಂಕಗಳ ಮೂಲಕ ಮಗುವಿನ ಬೌದ್ಧಿಕ ಸಾಮರ್ಥ್ಯದ ಅರಿವು ಪರಿಪೂರ್ಣವಾಗದ ಕಾರಣ ಹೊರಗಿನ ಪರೀಕ್ಷಾ ಪದ್ಧತಿಯ ಬದಲಾಗಿ ಭಾರತೀಯ ಪರೀಕ್ಷಾ ಪದ್ಧತಿಗಳಾದ ಶಲಾಕಾ, ಘಟಿಕಾ ಮುಂತಾದ ಪರೀಕ್ಷೆಗಳ ಮೂಲಕ ಮಕ್ಕಳ ಬೌದ್ಧಿಕ ಸ್ತರದ ಅವಲೋಕನ ಮಾಡಲಾಗುತ್ತದೆ. ಹಾಗೆಯೇ ಆತ್ಮಾವಲೋಕನ, ಮುಕ್ತ ಸಂವಾದದ ಮೂಲಕ ವಿದ್ಯಾರ್ಥಿನಿಯರ ಮಾನಸಿಕ ಸ್ಥಿತಿಯ ಅವಲೋಕನ ಮಾಡಲಾಗುತ್ತದೆ.

  –  ವೇದ ಎಂದರೆ ಜ್ಞಾನ. ಜ್ಞಾನ ಎಲ್ಲರಲ್ಲೂ ಇರಬೇಕಾದ ಅನರ್ಘ್ಯ ಸಂಪತ್ತು. ಹಾಗಾಗಿ ಜ್ಞಾನಾರ್ಜನೆಯ ಅವಕಾಶ ಸರ್ವರಿಗೂ ಸಮಾನ. ಹಾಗಾಗಿ ಲಿಂಗ ಮತ್ತು ಜಾತಿ ಭೇದವಿಲ್ಲದೆ ಎಲ್ಲರಿಗಾಗಿ ವೇದ ಎಂಬ ನಂಬಿಕೆಯಂತೆ ಇಲ್ಲಿ ಹೆಣ್ಣು ಮಕ್ಕಳಿಗೆ ಮತ್ತು ಸಮಾಜದ ಎಲ್ಲಾ ಆಸಕ್ತ ಬಾಂಧವರಿಗೆ ವೇದ ಶಾಸ್ತ್ರಾದಿಗಳನ್ನು ಕಲಿಸುವ ವ್ಯವಸ್ಥೆಯನ್ನು ಗುರುಕುಲ ರೂಪಿಸಿದೆ.

  –   ಗುರುಕುಲದ ಪ್ರವೇಶ ಕ್ರಮ ಹೀಗಿರುತ್ತದೆ –
5ನೇ ತರಗತಿ ಮುಗಿಸಿದ ಅಥವಾ 10ನೇ ತರಗತಿ ಮುಗಿಸುವುದರ ಜೊತೆಗೆ ಸಂಸ್ಕೃತ ಭಾಷಾ ಜ್ಞಾನವನ್ನು ಹೊಂದಿದ ಹೆಣ್ಣು ಮಕ್ಕಳಿಗೆ ಇಲ್ಲಿ ಪ್ರವೇಶಾವಕಾಶವನ್ನು ಕಲ್ಪಿಸಲಾಗಿದೆ. ವಿದ್ಯಾರ್ಥಿನಿಯ ಜೊತೆ ಪಾಲಕರಿಗೂ ಸಂದರ್ಶನ ನಡೆಸಿ ಅಲ್ಲಿ ಆಯ್ಕೆಯಾದ ವಿದ್ಯಾರ್ಥಿನಿಯನ್ನು ಗುರುಕುಲ ಶಿಕ್ಷಣಕ್ಕೆ ಸೇರಿಸಿಕೊಳ್ಳಲಾಗುತ್ತದೆ. ಸಮಾಜದಲ್ಲಿ, ಅದರಲ್ಲೂ ಮುಖ್ಯವಾಗಿ ಶಿಕ್ಷಣ ಕ್ಷೇತ್ರದಲ್ಲಿ ಸುಧಾರಣೆಯನ್ನು ಬಯಸುವ ಹಾಗೂ ಗುರುಕುಲ ಶಿಕ್ಷಣ ಪದ್ಧತಿಯಲ್ಲಿ ಸಂಪೂರ್ಣ ವಿಶ್ವಾಸವಿಟ್ಟಿರುವ ಪೋಷಕರು ತಮ್ಮ ಮಕ್ಕಳನ್ನು ಗುರುಕುಲಕ್ಕೆ ಕಳುಹಿಸಬಹುದು.

 

   

Leave a Reply