ಪಂ. ಉಪಾಧ್ಯಾಯರ ಕರೆ

ಲೇಖನಗಳು - 0 Comment
Issue Date :

1967ರಲ್ಲಿ ಜನಸಂಘದ ಅಧ್ಯಕ್ಷರಾಗಿ ಮಾಡಿದ ಪ್ರಥಮ ಭಾಷಣ

ಭಾರತ ಸರ್ಕಾರ ತನ್ನ ಹಳೆಯ ಹಠವನ್ನು ತೊರೆದು ಅಣ್ವಸ್ತ್ರ ತಯಾರಿಸಬೇಕು. ಅಣ್ವಸ್ತ್ರ ಇಲ್ಲದಿದ್ದರೆ ನಮ್ಮ ಸಂರಕ್ಷಣೆ ಗಂಡಾಂತರಕ್ಕಿಡಾದೀತು ಎಂದು ಅಖಿಲ ಭಾರತೀಯ ಜನಸಂಘದ ಹದಿನಾಲ್ಕನೇ ಆಧಿವೇಶನದ ಅಧ್ಯಕ್ಷ ಸ್ಥಾನದಿಂದ ಪಂ. ದೀನದಯಾಳ ಉಪಾಧ್ಯಾಯರು ಕೊಟ್ಟಿರುವ ಎಚ್ಚರಿಕೆ ಅತ್ಯಂತ ಸಕಾಲಿಕವಾಗಿದೆ. ದೇಶದ ರಕ್ಷಣೆಯ ವಿಷಯದಲ್ಲಿ – ಪಕ್ಕದ ಶತ್ರು ಅಣ್ವಸ್ತ್ರಗಳನ್ನು ಹೊಂದಿರುವಾಗ – ಪರಾವಲಂಬಿಯಾಗಿರುವುದು ಆತ್ಮಘಾತುಕವೆನಿಸುವುದೆಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ಜನಸಂಘದ ಅಧ್ಯಕ್ಷರು ತಮ್ಮ ಭಾಷಣದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಂಧ, ರಾಜ್ಯಪಾಲರ ನೇಮಕ, ತೆರಿಗೆಗಳ ಪುನರ್ವಿಮರ್ಶೆಯ ಅವಶ್ಯಕತೆ, ಯೋಜನೆಯ ಕುರಿತು ಬದಲಾಗಬೇಕಾದ ದೃಷ್ಟಿಕೋನ, ಬ್ಯಾಂಕುಗಳ ಸಾಮಾಜಿಕ ಹತೋಟಿಯ ಪರಿಣಾಮ, ಆಹಾರ ಉತ್ಪಾದನೆ ಹೆಚ್ಚಲು ಅಗತ್ಯವಿರುವ ಕ್ರಮಗಳು ಇತ್ಯಾದಿಯಾಗಿ ನಮ್ಮ ರಾಷ್ಟ್ರವು ಇಂದು ಎದುರಿಸುತ್ತಿರುವ ಎಲ್ಲ ಪ್ರಮುಖ ಸಮಸ್ಯೆಗಳ ಬಗ್ಗೆ ಉಪಯುಕ್ತ ಹಾಗೂ ವ್ಯಾವಹಾರಿಕವಾದ ಸಲಹೆಗಳನ್ನು ನೀಡಿದ್ದು ಸಂಬಂಧಪಟ್ಟವರು ಅವುಗಳನ್ನು ರಾಷ್ಟ್ರಹಿತದ ದೃಷ್ಟಿಯಿಂದ ಪರಿಶೀಲಿಸುವರೆಂದು ಅಪೇಕ್ಷಿಸುತ್ತೇವೆ. ಭಾರತದ ಶ್ರೇಷ್ಠ ನ್ಯಾಯಾಲಯದ ನಿವೃತ್ತ ನ್ಯಾಯಧೀಶರನ್ನು ಅವರ ನಿವೃತ್ತಿಯ ಕಾಲಕ್ರಮದಂತೆ ರಾಜ್ಯಪಾಲರಾಗಿ ನೇಮಕ ಮಾಡಬೇಕೆನ್ನುವ ಅವರ ಸಲಹೆಯು ನಾವೀನ್ಯದಷ್ಟೇ ಮಹತ್ವಪೂರ್ಣವೂ ಆಗಿದೆ. ಇಂದು ದೇಶದಲ್ಲಿ ಎರಡು ತೀವ್ರಗಾಮಿ ವಿಚಾರಗಳು ಬಲವಾಗಿವೆ. ಎಲ್ಲಿ ನೋಡಿದರು ಚಳುವಳಿ ಎದ್ದು ಅದು ಹಿಂಸಾತ್ಮಕ ಸ್ವರೂವ ತಾಳಿ, ದೇಶದ ಸಂಪತ್ತನ್ನು ನಾಶ ಮಾಡುತ್ತಿರುವುದು ಹಾಗೂ ಜನತೆಯ ಎಲ್ಲ ವರ್ಗಗಳಲ್ಲೂ ಅಶಿಸ್ತು, ಬೇಜವಾಬ್ದಾರಿತನವನ್ನುಂಟು ಮಾಡುವುದನ್ನು, ಪ್ರಾಂತೀಯ ಮತ್ತು ಭಾಷೇಯ ವೈಷಮ್ಯ, ವರ್ಗ ಕಲಹ ಹರಡುವುದನ್ನೂ ಕಂಡು ಬೇಸತ್ತು ಎಲ್ಲವೂ ಇದ್ದ ಹಾಗೇ ಇರಲಿ ಎನ್ನುವವರು ಒಂದು ಕಡೆಯಾದರೆ, ಜನತೆಯ ದುಃಸ್ಥಿತಿ ಮತ್ತು ಸರ್ಕಾರದ ದೌರ್ಬಲ್ಯವನ್ನು ಕಂಡು ತಮ್ಮ ರಾಜಕೀಯ ಬೇಳೆ ಬೇಯಿಸಲು ಅವುಗಳನ್ನುಪಯೋಗಿಸಿಕೊಳ್ಳುವ ದೇಶದ್ರೋಹಿಗಳು ಇನೊಂದು ಕಡೆ ಇದ್ದಾರೆ. ಮೊದಲ ಎರಡನೇ ಗುಂಪು ರಾಷ್ಟ್ರದ ಪ್ರಗತಿಯನ್ನು ತಡೆಯುವ ನಿಲುವನ್ನು ತಾಳಿದರೆ, ಎರಡನೇ ಗುಂಪು ದೇಶವನ್ನು ಶತ್ರುಗಳ ದಾಸ್ಯಕ್ಕೆ ತಳ್ಳಲು ತೀವ್ರಗಾಮಿ ಹಿಂಸಾತ್ಮಕ ಚಳುವಳಿಯ ಮೆಟ್ಟಾಗಿ ಜನತೆಯ ಸಂಕಷ್ಟ ಸ್ಥಿತಿಯ ದುರುಪಯೋಗ ಮಾಡಿಕೊಳ್ಳುತ್ತಿದೆ. ಸ್ವಾತಂತ್ರ್ಯಾನಂತರ ದೇಶವು ಪ್ರಗತಿಯ ಕಡೆಗೆ ಪರಿವರ್ತನೆ ಹೊಂದುತ್ತಿರುವ ಸಂಕ್ರಮಣಕಾಲದಲ್ಲಿ ಈ ಚಳುವಳಿಗಳು ಏಳುವುದು ಸ್ವಾಭಾವಿಕವೆಂದೂ, ಆದರೆ
ಅವು ಹಿಂಸಾತ್ಮಕರೂಪ ತಾಳದಂತೆ ಮತ್ತು ರಾಷ್ಟ್ರಕ್ಕೆ ಹಾನಿಕಾರಕವಾಗಿ ಪರಿಣಮಿಸದಂತೆ ಮುನ್ನಡೆಸುವ ಕಾರ್ಯವನ್ನು ಜನಸಂಘದ ಕಾರ್ಯಕರ್ತರು ನಿರ್ವಹಿಸಬೇಕೆಂದೂ ಶ್ರೀ ಉಪಾಧ್ಯಾಯರು ಕರೆ ಕೊಟ್ಟಿದ್ದಾರೆ. ಎದುರಾದ ಸ್ವಾಭಾವಿಕ ಪರಿಸ್ಥಿತಿಯಿಂದ ಗಾಬರಿಗೊಂಡು ಓಡಿಹೋಗದೆ, ಅದನ್ನು ದೇಶದ ಉನ್ನತಿಗೆ ಪೂರಕವಾಗಿ ಉಪಯೋಗಿಸುವ ಬಹಳ ಮೌಲಿಕ ವಿಚಾರವನ್ನೇ ಜನಸಂಘದ ಅಧ್ಯಕ್ಷರು ಮಂಡಿಸಿದ್ದಾರೆ. ಸಮಸ್ಯೆಗಳ ಪರ್ವತಗಳನ್ನೂ, ಚಳುವಳಿಗಳ ಜ್ವಾಲಾಮುಖಿಯನ್ನೂ ಕಂಡು ರಾಷ್ಟ್ರದ ಭವಿಷ್ಯದ ಬಗ್ಗೆ ಭಯಭೀತ ಹಾಗೂ ನಿರಾಶರಾದ ಜನರಿಗೆ ಯೋಗ್ಯ ಮಾರ್ಗದರ್ಶನ ಮಾಡಿರುವ ಶ್ರೀ ಉಪಾಧ್ಯಾಯರನ್ನು ಹಾರ್ದಿಕವಾಗಿ ಅಭಿನಂದಿಸುತ್ತ, ತನ್ನ ರಾಷ್ಟ್ರದ ಪ್ರಬುದ್ಧ ರಾಜಕೀಯ ಪಕ್ಷವವಾಗಿ ಬೆಳೆಯುತ್ತಿರುವ ಜನಸಂಘವು, ತನ್ನ ಅನುಭವಪೂರ್ಣ ನೂತನ ಅಧ್ಯಕ್ಷರ ನೇತೃತ್ವದಲ್ಲಿ ಮುನ್ನಡೆದು, ಜನತೆಯ ಅಪೇಕ್ಷೆಗಳನ್ನು ಪೂರೈಸುತ್ತ ದೇಶದ ರಾಜಕೀಯ ಕ್ಷೇತ್ರದಲ್ಲಿ ಕಾಂಗ್ರೆಸ್ಸಿನ ಪತನದಿಂದಾಗಿರುವ ಶೂನ್ಯವನ್ನು (ಇತರ ಅರಾಷ್ಟ್ರೀಯ ಹಾಗೂ ಅನಪೇಕ್ಷೀತ ಶಕ್ತಿಗಳನ್ನು ಹಿಮ್ಮೆಟ್ಟಿಸಿ) ತುಂಬಲೆಂದು ಆಶಿಸುತ್ತೇವೆ.

   

Leave a Reply