ಪಗಡೆ ಆಟ

ಸ್ವದೇಶೀ ಕ್ರೀಡೆ - 0 Comment
Issue Date : 15.01.2015

ಪ್ರಾಚೀನ ಭಾರತಕಾಲದಿಂದಲೂ ಪರಿಚಿತವಾದ ಆಟ ಪಗಡೆಯಾಟ. ಈಗಲೂ ಸಾಕಷ್ಟು ಮನೆಗಳಲ್ಲಿ ಪಗಡೆಯ ಹಾಸುಗಳನ್ನು ಕಾಣಬಹುದು. ಮಹಾಭಾರತದ ಕತೆಗೆ ತಿರುವು ಕೊಟ್ಟ ಆಟ ಪಗಡೆಯಾಟ. ಇದನ್ನು ಆರ್ಷಕ್ರೀಡೆ ಎಂದು ಕರೆಯುತ್ತಾರೆ.
 ಮರ, ಮೂಳೆಯಿಂದ ಮಾಡಿದ ದಾಳಗಳನ್ನು ಆಟವಾಡಲು ಉಪಯೋಗಿಸುತ್ತಾರೆ. ಇದರಲ್ಲಿ ಎರಡು ರೀತಿಯ ದಾಳಗಳನ್ನು ಉಪಯೋಗಿಸುತ್ತಾರೆ. ಚೌಕಾಕೃತಿಯ ಆರು ಮುಖದ ದಾಳದಲ್ಲಿ 4 ಮುಖಗಳಲ್ಲಿ 1 ರಿಂದ 6 ರವರೆಗಿನ ಸಂಖ್ಯೆಗಳನ್ನು ಯಾವುದೇ ವಿರುದ್ಧ ಮುಖದ ಅಂಕೆಗಳನ್ನು ಕೂಡಿದಾಗ 7 ಬರುವಂತೆ ಕೆತ್ತಿರುತ್ತಾರೆ. ಆಯುತಾಕಾರದ ದಾಳಗಳು 4 ಮುಖವುಳ್ಳದಾಗಿದ್ದು 1,6 ಸಂಖ್ಯೆಗಳು ಒಂದು ಜೋಡಿ ವಿರುದ್ಧ ಮುಖದಲ್ಲೂ, 3,4 ಸಂಖ್ಯೆಗಳು ಇನ್ನೊಂದು ಜೋಡಿ ಮುಖದಲ್ಲೂ ಕೆತ್ತಿರುತ್ತಾರೆ. ಪಗಡೆ ಆಟದಲ್ಲಿ ಹೀಗಿರುವ ದಾಳಗಳನ್ನು ಉರುಳಿಸಿದಾಗ 1,1 ಬಿದ್ದರೆ ದುಗ ಎಂದು, 3,3 ಬಿದ್ದರೆ ಇತ್ತಿಗೆ ಎಂದು, 4,4 ಮತ್ತು 6,6 ಬಿದ್ದರೆ ಕ್ರಮವಾಗಿ ಎಂಟು, ಹನ್ನೆರಡು ಎಂದು ಕರೆಯುತ್ತಾರೆ.
 ಪಗಡೆಯ ಹಾಸು ತೀರಾ ಸರಳವಾಗಿ ಯಾರು ಬೇಕಾದರೂ ಬಟ್ಟೆಯಲ್ಲಿ ಮಾಡಬಹುದಾಗಿರುತ್ತದೆ. ಬಣ್ಣಬಣ್ಣದ ಮನೆಯ ಮೂರು ಸಾಲಿನ 8 ಮನೆಗಳು ಬರುವಂತೆ 4 ಪಟ್ಟಿಗಳನ್ನು ಮಾಡಿಕೊಂಡು ಒಂದು ಮಧ್ಯದ ಚೌಕಕ್ಕೆ ಇದನ್ನು ಹೊಲಿದರೆ ಪಗಡೆ ಹಾಸು ಸಿದ್ಧ (ಚಿತ್ರದಲ್ಲಿರುವಂತೆ). ಒಂದು ಪಟ್ಟಿಯ ಕೆಳಗಿನಿಂದ ಮೊದಲನೆಯ ಮತ್ತು ಮೂರನೆಯ ಾಲುಗಳಲ್ಲಿ 1ನೇ, 4ನೇ, 7ನೇ ಮನೆಗಳು ಮಧ್ಯದ ಸಾಲಿನಲ್ಲಿ 3ನೇ, 6ನೇ ಮನೆಗಳಿಗೆ ‘್ಡ’ ಹಾಕಬೇಕು. ಇದನ್ನು ಕಟ್ಟೆಮನೆ ಎನ್ನುತ್ತಾರೆ. ಹಸಿರು, ಹಳದಿ, ಕೆಂಪು ಹಾಗೂ ಕಪ್ಪು ಬಣ್ಣದ ಗಂಟೆಯಾಕಾರದ 16 ಕಾಯಿಗಳು (ಒಂದೊಂದು ಬಣ್ಣದಲ್ಲಿ 4 ರಂತೆ) ಪಗಡೆ ಆಟವಾಡಲು ಉಪಯೋಗಿಸುತ್ತಾರೆ. ಇದರ ಜೊತೆಗೆ ಆಯತಾಕಾರದ 2 ದಾಳಗಳು.
 ಇಬ್ಬರು ಆಡುವ ಆಟದಲ್ಲಿ ಒಬ್ಬೊಬ್ಬರು 2 ಬಣ್ಣದ ಕಾಯಿಗಳನ್ನು ಇಟ್ಟುಕೊಳ್ಳಬೇಕು. ಆಟಗಾರರು ಹಾಸಿನ ವಿರುದ್ಧದಿಕ್ಕಿನ ಎರಡು ಕಡೆಗಳಲ್ಲಿ ನಾಲ್ಕು ಕಾಯಿಗಳನ್ನು ಇಟ್ಟುಕೊಳ್ಳಬೇಕು. ಬಲಗಡೆ ಸಾಲಿನ ಮಧ್ಯದ ಕಟ್ಟೆಮನೆಯಲ್ಲಿ ಎರಡು ಕಾಯಿಗಳನ್ನು, ಮಧ್ಯದ ಸಾಲಿನ ಕೆಳಗಿನಿಂದ 2 ಹಾಗೂ 3ನೇ ಮನೆಗಳಲ್ಲಿ ಒಂದೊಂದು ಕಾಯಿಗಳನ್ನು ಇಟ್ಟುಕೊಳ್ಳಬೇಕು.
 ಉರುಳಿಸಿದಾಗ ಎರಡು ದಾಳಗಳಲ್ಲಿ ಸೇರಿ ಎಷ್ಟು ಸಂಖ್ಯೆಯಾಗುತ್ತದೊ ಅದನ್ನು ಗರ ಎನ್ನುತ್ತಾರೆ. ಒಬ್ಬ ಆಟಗಾರ ದಾಳ ಉರುಳಿಸಿ ಎಷ್ಟು ಸಂಖ್ಯೆ ಬರುತ್ತದೋ ಅಷ್ಟು ಮನೆಗಳಲ್ಲಿ ಯಾವುದಾದರು ಒಂದು ಬಣ್ಣದ ಕಾಯಿಯನ್ನು ನಡೆಸಬೇಕು. ಮೊದಲು ಜೋಡಿಯಾಗಿರುವ ಕಾಯಿಗಳನ್ನು ನಡೆಸಬೇಕು. ಗರ ಬಿದ್ದುದಕ್ಕೆ ಅನುಸಾರವಾಗಿ ಕಾಯಿಗಳನ್ನು ನಡೆಸುತ್ತ 4 ಕಡೆಗಳಲ್ಲೂ ಸುತ್ತಿಕೊಂಡು ಬಂದು ಆ ಕಾಯಿಯಿದ್ದ ಮನೆಯ ಮಧ್ಯದ ಸಾಲಿನ ಮನೆಯಿಂದ ಒಳಗೆ ಹೋಗಬೇಕು. ಒಳಗೆ ಹೋದ ಕಾಯಿಯನ್ನು ಮಲಗಿಸಬೇಕು. ಅಲ್ಲಿಂದ ಮಧ್ಯದ ಚೌಕ ಅಥವಾ ಹಣ್ಣಿನ ಮನೆಗೆ ಸೇರಿಸಿದರೆ ಕಾಯಿ ಹಣ್ಣಾದಂತೆ.
 ಯಾರು 8 ಕಾಯಿಯನ್ನು ಮೊದಲು ಹಣ್ಣು ಮಾಡು್ತಾರೋ ಅವರು ಗೆದ್ದ ಹಾಗೆ. ಕಾಯಿಗಳನ್ನು ಒಂದೊಂದನ್ನೇ ನಡೆಸಬೇಕು. 2, 6, 8, 10, 12 ಹೀಗೆ, ಜೋಡಿ ಗರ ಬಿದ್ದಾಗ ಎರಡು ಕಾಯಿಗಳನ್ನು ಜೋಡಿ ಮಾಡಿಕೊಂಡು ನಡೆಸಬೇಕು. ಜೋಡಿ ಕಾಯಿಯಿಂದ ಜೋಡಿಯನ್ನು, ಒಂಟಿ ಕಾಯಿಯಿಂದ ಒಂಟಿ ಕಾಯಿಯನ್ನು ಹೊಡೆಯಬೇಕು. ಜೋಡಿ ಕಾಯಿಗಳನ್ನು ಬೇರ್ಪಡಿಸಿ ಅನಂತರ ಜೊತೆಗೂಡಿಸಿ ನಡೆಸಬೇಕು.
 4 ಜನರು ಆಡುವಾಗ ಒಬ್ಬೊಬ್ಬರು ಒಂದೊಂದು ಬಣ್ಣದ ಕಾಯಿಯನ್ನು ಇಟ್ಟುಕೊಳ್ಳುತ್ತಾರೆ. ಒಬ್ಬ ಆಟಗಾರನ ಎಲ್ಲಾ ಕಾಯಿಗಳು ಹಣ್ಣಾದರೆ ಅವನು ಗೆದ್ದಂತೆ. ಅನಂತರ ಉಳಿದ ಮೂರು ಆಟಗಾರರು ಮುಂದುವರೆಯುತ್ತಾರೆ. ಕೊನೆಗೆ ಉಳಿದವನು ಪರಾಜಿತ.
 ಪಗಡೆಯಾಟದಲ್ಲಿ ಒಂಬತ್ತರಾಟ ಎಂಬ ಆಟವಿದೆ. ಆಟವನ್ನು ಮೊದಲು ಮಾಡುವಾಗ ಕಾಯಿಗಳನ್ನು 9 ಗರ ಬಿದ್ದಾಗ ಮಾತ್ರ ಮಧ್ಯದ ಸಾಲಿನ ಕೆಳಗಿನ ಮನೆಯಿಂದ 9ನೇ ಮನೆಯಲ್ಲಿ ಕಾಯಿ ಇಟ್ಟುಕೊಳ್ಳಬೇಕು. ಇದೇ ರೀತಿ 4 ಕಾಯಿಗಳನ್ನು ಇಟ್ಟುಕೊಂಡು ಆಡಬೇಕು. ಯಾವುದಾದರೂ ಕಾಯಿ ಹೊಡೆಸಿಕೊಂಡರೆ ಅದನ್ನು ಪುನಃ 9 ಗರ ಬಿದ್ದಾಗ ಹಾಸಿನ ಮೇಲೆ ಇಟ್ಟುಕೊಳ್ಳಬೇಕು. ಉಳಿದ ಆಟ ಮೇಲಿನ ಆಟದಂತೆ ಮುಂದುವರೆಯುತ್ತದೆ. ಈ ರೀತಿ ಜೋಡಿ ಆಟ, ಹತ್ತರ ಆಟಗಳನ್ನು ಪಗಡೆಯಲ್ಲಿ ಆಡಬಹುದು. ಮುಂದಾಲೋಚನೆ ಹಾಗೂ ಸ್ವಲ್ಪ ಅದೃಷ್ಟವಿದ್ದಲ್ಲಿ ಈ ಆಟ ಗೆಲ್ಲಲು ಸುಲಭ.
 ಹಿಂದಿನ ವಾರದ ಪ್ರಶ್ನೆಗೆ ಉತ್ತರ
 ಆಟದ ಬಯಲಿನಲ್ಲಿ ಇದ್ದ ವಿದ್ಯಾರ್ಥಿಗಳ ಸಂಖ್ಯೆ 58.

***
 ಈ ಬಾರಿ ನಿಮ್ಮ ಬುದ್ಧಿಗೆ ಸಾಣೆ ಹಿಡಿಯುವ ಕೆಲವು ಒಗಟನ್ನು ಹೇಳುವೆ. ಅದಕ್ಕೆ ತಲೆ ಕೆಡಿಸಿಕೊಂಡು ಉತ್ತರಿಸುವ ಪ್ರಯತ್ನ ಮಾಡಿ. ಗೊತ್ತಾಗದಿದ್ದರೆ ಎಂದಿನಂತೆ ಮುಂದಿನ ವಿಕ್ರಮ ಬರುವವರೆಗೆ ಕಾಯದೆ ವಿಧಿಯಿಲ್ಲ.
 1. ಅಕ್ಕನ ಮನೆಗೆ ತಂಗಿ ಹೋಗ್ತಾಳೆ, ತಂಗಿ ಮನೆಗೆ ಅಕ್ಕ ಹೋಗಲ್ಲ.
 2. ಅಜ್ಜನಿಗೊಂದು ಅಂಗಿ, ಅಂಗಿಯೊಳಗೆ ಮೀಸೆ, ಮೀಸೆ ಬಿಡಿಸೆ ಹಲ್ಲು, ಹಲ್ಲು ಕಡಿಯೆ ಹಿಟ್ಟು, ಹಿಟ್ಟು ತಟ್ಟಿ ರೊಟ್ಟಿ.

-ಶಿ.ನಾ. ಚಂದ್ರಶೇಖರ

   

Leave a Reply