ಪದಗಳ ಬಳಕೆ: ಲೇಖಕರ ಎಚ್ಚರ ಅಗತ್ಯ

ಕಾರ್ಯಕ್ರಮಗಳು - 0 Comment
Issue Date : 03.06.2015

ವಿಕ್ರಮ ‘ಲೇಖಕರ ಮಿಲನ’ದಲ್ಲಿ  ಡಾ. ಮನಮೋಹನ ವೈದ್ಯ

ಬೆಂಗಳೂರು: ಲೇಖನ ಕೃಷಿಯಲ್ಲಿ ನಿರತರಾಗಿರುವ ಲೇಖಕರು ಪದಗಳ ಸಮರ್ಪಕ ಬಳಕೆಯತ್ತ ತೀವ್ರ ಗಮನ ಹರಿಸಬೇಕು. ಎಲ್ಲರೂ ಬಳಸುತ್ತಾರೆಂದು ತಾವು ಅದೇ ರೀತಿ ಪದಗಳನ್ನು ಬಳಸುವುದು ಅನುಚಿತವಾಗುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅ.ಭಾ. ಪ್ರಚಾರ ಪ್ರಮುಖ್ ಡಾ. ಮನಮೋಹನ ವೈದ್ಯ ಅವರು ಕಿವಿಮಾತು ಹೇಳಿದ್ದಾರೆ.
ವಿಕ್ರಮ ವಾರಪತ್ರಿಕೆ ಮೇ 19ರಂದು ಏರ್ಪಡಿಸಿದ್ದ ‘ಲೇಖಕರ ಮಿಲನ’ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಇಂಗ್ಲಿಷಿನ ‘ಸೆಕ್ಯುಲರ್’ ಎಂಬ ಪದಕ್ಕೆ ಭಾರತೀಯ ಭಾಷೆಗಳಲ್ಲಿ ಪರ್ಯಾಯ ಪದಗಳಿಲ್ಲ. ಜಾತ್ಯತೀತ, ಧರ್ಮನಿರಪೇಕ್ಷ ಇತ್ಯಾದಿ ಪದಗಳನ್ನು ‘ಸೆಕ್ಯುಲರ್’ ಪದಕ್ಕೆ ಸಮಾನಾರ್ಥಕವಾಗಿ ಬಳಸುವುದು ಸಮಂಜಸವಲ್ಲ. ‘ಸೆಕ್ಯುಲರ್’ಯೆಂಬ ಇಂಗ್ಲಿಷ್ ಪದಕ್ಕೆ ಭಾರತೀಯ ಭಾಷೆಗಳಲ್ಲಿ ‘ಸೆಕ್ಯುಲರ್’ಯೆಂದೇ ಬಳಸುವುದು ಸೂಕ್ತ ಎಂದರು. ಇಂಗ್ಲಿಷ್ ಭಾಷೆಯಲ್ಲಿ ತುಪ್ಪಕ್ಕೆ ಅದರದೇ ಆದ ಸಮಾನಾರ್ಥಕ ಶಬ್ದವಿಲ್ಲ. ಏಕೆಂದರೆ ಚಳಿ ದೇಶವಾಗಿರುವ ಇಂಗ್ಲೆಂಡ್‌ನಲ್ಲಿ ಎಲ್ಲರೂ ಹೆಚ್ಚಾಗಿ ಬಳಸುವುದು ಮೊಸರು ಹಾಗೂ ಬೆಣ್ಣೆಯನ್ನು. ಬೆಣ್ಣೆಯನ್ನು ಕಾಯಿಸಿ ಅದು ತುಪ್ಪವಾಗುವ ಬಗೆ ಆ ದೇಶಕ್ಕೆ ಗೊತ್ತೇ ಇಲ್ಲ. ಹೀಗಾಗಿ ತುಪ್ಪಕ್ಕೆ ಇಂಗ್ಲಿಷ್‌ನಲ್ಲಿ ಭಾರತೀಯ ಶಬ್ದವಾದ ‘ಘೀ’ ಎಂದೇ ಬಳಸಲಾಗುತ್ತಿದೆ. ಅದೇ ರೀತಿ ಪಾಶ್ಚಾತ್ಯ ಕಲ್ಪನೆಯಾಗಿರುವ ‘ಸೆಕ್ಯುಲರ್’ ಪದಕ್ಕೆ ಅದೇ ಪದವನ್ನೇ ಭಾರತೀಯ ಭಾಷೆಗಳಲ್ಲಿ ಬಳಕೆ ಮಾಡುವುದು ಸೂಕ್ತ ಎಂದರು. ಇಂಗ್ಲಿಷಿನ ‘ಕನ್ವರ್ಶನ್’ಗೆ ಭಾರತೀಯ ಅಥವಾ ಕನ್ನಡ ಭಾಷೆಯಲ್ಲಿ ‘ಮತಾಂತರ’ ಎಂಬ ಬಳಕೆ ಕೂಡ ಸೂಕ್ತವಾದುದಲ್ಲ ಎಂದೂ ಅವರು ಹೇಳಿದರು.
ವಿಕ್ರಮ ಸಂಪಾದಕ ದು.ಗು. ಲಕ್ಷ್ಮಣ, ವ್ಯವಸ್ಥಾಪಕ ಶಿ.ನಾ. ಚಂದ್ರಶೇಖರ್, ನ. ನಾಗರಾಜ್ ಸೇರಿದಂತೆ ಬೆಂಗಳೂರು, ಮೈಸೂರು, ಹಾಸನ ಮೊದಲಾದ ಊರುಗಳಿಂದ 25ಕ್ಕೂ ಹೆಚ್ಚು ಲೇಖಕ – ಲೇಖಕಿಯರು ಈ ಮಿಲನದಲ್ಲಿ ಪಾಲ್ಗೊಂಡಿದ್ದರು.

   

Leave a Reply