ಪರಿವರ್ತನೆ ಸಂಭ್ರಮದಿಂದ ಸ್ವಾಗತಿಸುತ್ತ ಸುಖವನ್ನು ಸ್ವಾಗತಿಸೋಣ

ಲೇಖನಗಳು - 0 Comment
Issue Date :

-ಮಹದೇವಯ್ಯ ಕರದಳ್ಳಿ

ಪರಿವರ್ತನೆ, ಬದಲಾವಣೆ, ಕ್ರಾಂತಿ ಮುಂತಾದ ಸಮಾನಾರ್ಥದ ಸಂಗತಿಗಳು ಪ್ರಕೃತಿಯಲ್ಲಿ ಸಹಜವಾಗಿ ಕಾಣಸಿಗುತ್ತವೆ. ಯಾವತ್ತೂ ಮರಪೂರ್ತಿಯಾಗಿ ಖಾಲಿ ಆಗುವುದಿಲ್ಲ. ಮರದಲ್ಲಿ ಹಣ್ಣೆಲೆ ಉದುರುತ್ತಿದ್ದಂತೆ ಹಸಿರೆಲೆ ಚಿಗುರುತ್ತದೆ. ಗಿಡದಿಂದ ಮರ, ಹೂ, ಹಣ್ಣು, ಬೀಜವಾಗುವ ಪ್ರಕ್ರಿಯೆಗೆ ಪರಿವರ್ತನೆ ಎನ್ನುತ್ತಾರೆ. ಯಾವತ್ತೂ ಬದಲಾವಣೆ ಪ್ರತ್ಯೇಕವಾಗಿ ಕಾಣುವುದಿಲ್ಲ. ಪ್ರಕೃತಿಯಲ್ಲಿ ಅಂತರ್ಗತವಾದ ಪರಿವರ್ತನೆ ಪ್ರಕ್ರಿಯೆ ಸಹಜವಾಗಿದೆ, ನಿರಂತರವಾಗಿದೆ. ಪ್ರಕೃತಿಯಲ್ಲಿನ ಈ ರೀತಿಯ ಕ್ರ್ರಾಂತಿಯನ್ನು ಸಂಕ್ರಾಂತಿ ಎನ್ನುತ್ತಾರೆ. ಬೆಳಕು, ಸುಖ ತರುವಂತಹ ಪ್ರಕ್ರಿಯೆಯನ್ನು ಒಪ್ಪಿ ಬದುಕಲು ಕಲಿಯಬೇಕು. ನಿಸರ್ಗಸ್ನೇಹಿ ಜೀವನ ಸಾಗಿಸುವ ಭಾರತೀಯರು ಪರಂಪರೆಯ ಭಾಗವಾದ ಪರಿವರ್ತನೆಯಿಂದಾಗಿ ಕತ್ತಲಿನಿಂದ ಬೆಳಕಿಗೆ, ಅಜ್ಞಾನದಿಂದ ಜ್ಞಾನ ದೆಡೆಗೆ ಸಾಗಬಹುದು ಎಂಬುದು ದೃಷ್ಟಾರರ ಅಭಿಮತವಾಗಿತ್ತು. ಪ್ರತಿ ನಿತ್ಯ, ಪ್ರತಿ ಘಳಿಗೆ ನಡೆವ ಪ್ರಕೃತಿಯ ಬದಲಾವಣೆಯಿಂದ ಪ್ರಕೃತಿ ಸುಂದರವಾಗಿದೆ. ತಾಯಿ ಗರ್ಭದಿಂದ ಹೊರಬಂದ ಮಗು ಬದಲಾವಣೆಗೆ ಮೈ ಒಡ್ಡಿ ಹೊಂದಾಣಿಕೆ ಮಾಡಿಕೊಂಡು ಬದುಕುವುದರಿಂದ ಬೆಳವಣಿಗೆ ಸಾಧಿಸುತ್ತದೆ. ಮಗು ಬೆಳೆದು ದೊಡ್ಡದಾಗುತ್ತಿದ್ದಂತೆ ಮನದಲ್ಲಿ ಹುಟ್ಟುವ ತನ್ನದೇ ಆದ ಆಸೆ ಆಕಾಂಕ್ಷೆಗಳು, ಅನಿಸಿಕೆಗಳಂತಹ ಭ್ರಮೆಗಳಿಂದಾಗಿ ತನಗೆ ತಾನೇ ಮಿತಿ ಹಾಕಿಕೊಂಡು ಬದಲಾವಣೆಗೆ ಬ್ರೇಕ್ (ತಡೆ) ಹಾಕಿಕೊಳ್ಳುತ್ತಿದ್ದಂತೆ ಬೆಳವಣಿಗೆಗೆ ಅಡ್ಡಿಯಾಗುವ ಸಮಸ್ಯೆಗಳು ಚಿಗುರಲಾರಂಭಿಸುತ್ತವೆ. ಜಗತ್ತು ಒಂದು ವಿಶಾಲ ವೃಕ್ಷ ಅದರ ಒಂದು ಎಲೆ ನಾನು ಎಂಬುದು ಮರೆತು ನಾನೇ ಮರ ಎನ್ನುವ ರೀತಿಯ ವರ್ತನೆಯಿಂದ ಅಹಂ ನೆತ್ತಿಗೇರುತ್ತದೆ. ಪ್ರಕೃತಿಯಲ್ಲಿರುವ ಸಹಜ ಧರ್ಮ ಮಾನವನಲ್ಲಿ ಮರೆಯಾಗುತ್ತದೆ. ಬದಲಾವಣೆ ಕುಂಠಿತವಾಗುತ್ತದೆ. ಬದಲಾವಣೆಯನ್ನು ತುಂಬು ಹೃದಯದಿಂದ ಸಂಭ್ರಮದಿಂದ ಸ್ವಾಗತಿಸುವವರು ಮಾತ್ರ ಜೀವನದಲ್ಲಿ ಸಾಧಿಸಬಹುದು ಎಂಬುದಕ್ಕೆ ಭಾರತೀಯ ಮಹಿಳೆ ಜೀವಂತ ಉದಾಹರಣೆಯಾಗಿದ್ದಾಳೆ. ಹುಟ್ಟಿದ ಮನೆಯಲ್ಲಿ ಮುದ್ದಿನ ಮಗಳಾಗಿ ಬೆಳೆದವಳು ಮದುವೆಯಾದ ನಂತರ ಸಂಭ್ರಮದಿಂದ ಸೊಸೆಯಾಗಿ ಮತ್ತೊಂದು ಮನೆ ಸೇರುತ್ತಾಳೆ. ಹುಟ್ಟಿದ ಮನೆಯವರು, ಕೊಟ್ಟ ಮನೆಯವರು ಸಂಭ್ರಮದಿಂದ ಸ್ವಾಗತಿಸುವ ಬದಲಾವಣೆಯ ಈ ಮಧುರ ಕ್ಷಣದಿಂದಾಗಿ ಪರಿವಾರದ ಪರಿಕಲ್ಪನೆ ಎಂಬ ಸಸಿ ಚಿಗುರಲು ಕಾರಣವಾಗುವಂತಹ, ಬದಲಾವಣೆ ಮನಸಾರೆ ಸ್ವೀಕರಿಸುವಂತಹ ಮದುವೆ ಎಂಬ ಸಂಪ್ರದಾಯ ಹುಟ್ಟುಹಾಕಿ ಬದಲಾವಣೆ ಸಹಜವಾಗಿಸಿದ, ಧನ್ಯತೆಗೆ, ಹೆಮ್ಮೆಗೆ ಕಾರಣವಾಗುವ, ನಮ್ಮ ಸನಾತನರ ಚಿಂತನೆಗೆ ಜೈ ಎನ್ನಬೇಕು. ಸುಮಾರು 2 ದಶಕಗಳ ತನ್ನದಾದ ಜೀವನದ ಅನುಭವವನ್ನು ಮದುವೆ ನಂತರದ ಜೀವನದ ಯಶಸ್ವಿಗಾಗಿ ಸಮರ್ಥವಾಗಿ ಬಳಸಿ ಕೊಳ್ಳುತ್ತಾಳೆ. ಅಲ್ಲಿರುವವರನ್ನು, ಅಲ್ಲಿರುವುದನ್ನು ಎಲ್ಲವನ್ನೂ ತನ್ನದಾಗಿ ಭಾವಿಸಿಕೊಂಡು ಬದುಕುತ್ತಾಳೆ. ನಂತರ ಗಂಡ ಮಕ್ಕಳ ಸುಖದಲ್ಲಿ ತನ್ನ ಸುಖ ಕಾಣುತ್ತಾಳೆ. ಪರಿವರ್ತನೆ ಸುಖವಾಗಿಸಲು ತನ್ನದಾದ ಕೊಡುಗೆಯನ್ನು ನಿರ್ವಿಕಾರದಿಂದ, ನಿರಂತರವಾಗಿ ನೀಡುತ್ತಿರುವ ಹೆಣ್ಣನ್ನು ಸಂಸಾರದ ಕಣ್ಣು ಎಂದರು ನಮ್ಮ ಸನಾತನರು. ಬದಲಾವಣೆ ಬಯಸಿ ಒಪ್ಪಿಕೊಂಡ ಕಬ್ಬಿಣ ಕ್ರಿಯಾಶೀಲವಾಗಿ ನೇಗಿಲಾಗಿ, ಕೊಡಲಿಯಾಗಿ ಅನ್ಯವ ಛೇದಿಸಬಹುದು. ಬದಲಾವಣೆ ಬಯಸದ ಕಬ್ಬಿಣ ಸುಮ್ಮನೆ ಬಿದ್ದರೆ ಜಂಗು(ತುಕ್ಕು) ಹಿಡಿಯುತ್ತದೆ. ತಾನಾಗಿ ಹಾಳಾಗುತ್ತದೆ. ಬದಲಾವಣೆ ಅನಿವಾರ್ಯ ಎಂದು ಭಾವಿಸಿ ತಾನಾಗಿ ಬರುವ, ಬಂದುದನೆ ಬಂದಂತೆ ಸ್ವೀಕರಿಸುತ್ತ ಬದುಕು ಸಾಗಿಸುವ ರೀತಿ ನೀತಿಗಳು ನಮ್ಮದಾಗಿಸಿಕೊಂಡು ಯಶ ಸಾಧಿಸುವ. ನಮ್ಮ ಉನ್ನತಿ ಅವನತಿಗೆ ನಾವೇ ಕಾರಣ ಎಂದರಿತು ಬಾಳೋಣ. ಪರಿವರ್ತನೆಯನ್ನು ಸಂಭ್ರಮದಿಂದ ಸ್ವಾಗತಿಸುತ್ತ ಸುಖ ನಮ್ಮದಾಗಿಸಿಕೊಳ್ಳೋಣ.

   

Leave a Reply