ಪರಿಸರ ಕಾಳಜಿ

ಲೇಖನಗಳು - 0 Comment
Issue Date :

-ಹನಿಯ ರವಿ

ಶಿವಮೊಗ್ಗಾ ಕೃಷಿ-ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ನೀಡಿದ 777 ಎಕರೆ ಭೂಮಿ ಕಾನು ಅರಣ್ಯ ಪ್ರದೇಶವಾಗಿದೆ.  ಒಂದು ಲಕ್ಷ ವೃಕ್ಷಗಳನ್ನು ಕಟಾವು ಮಾಡದೇ ಅಭಿವೃದ್ಧಿ ಮಾಡುವ ಸವಾಲು ಕೃಷಿ ವಿಶ್ವವಿದ್ಯಾಲಯ ಮತ್ತು  ಸರ್ಕಾರದ ಮುಂದೆ ಇದೆ.  ವೃಕ್ಷಲಕ್ಷ ಆಂದೋಲನದಿಂದ ಇರುವಕ್ಕಿ ಕಾನುಗಳ ಸಮೀಕ್ಷೆ  ನಡೆಸಲಾಗಿದೆ.

 ಕಾನು ರಕ್ಷಣಾ ಅಭಿಯಾನದ ಹಿನ್ನೆಲೆ: ಕಳೆದ ಹತ್ತು ವರ್ಷಗಳಿಂದ ವೃಕ್ಷಲಕ್ಷ ಸಂಘಟನೆ ಕಾನು ರಕ್ಷಣಾ ಅಭಿಯಾನ ನಡೆಸುತ್ತಿದೆ.  ಇರುವಕ್ಕಿ, ಅಡೂರು, ಗೌತಮ ಪರ, ಕೆ. ಹುಣಸವಳ್ಳಿ, ಬಾಣಿಗಾ, ಬರೂರು, ಸೇರಿ 160 ಹಳ್ಳಿಗಳಲ್ಲಿ ಕಾನು ಸಮೀಕ್ಷೆ, ಜಾಗೃತಿ ಮಾಡಿದೆ.  40 ಸಾವಿರ ಎಕರೆ ಕಾನುಗಳನ್ನು ಅರಣ್ಯ ಇಲಾಖೆ ರಕ್ಷಣೆ ಮಾಡಿದೆ.  ಕೆರೆ, ಹಳ್ಳ, ಜಲಮೂಲಗಳ ಉಳಿವಿಗೆ, ಮಲೆನಾಡಿನ ಉಳಿವಿಗೆ ಕಾನುಗಳ ಕೊಡುಗೆ ಅಪಾರ.  ಎಂಬುದನ್ನು ವೃಕ್ಷಲಕ್ಷ ನೆನಪಿಸುತ್ತಿದೆ.

 ವರದಿಯ ಮುಖ್ಯಾಂಶಗಳು

 ಶಿವಮೊಗ್ಗಾ ಜಿಲ್ಲೆ ಸಾಗರ ತಾ ಆನಂದಪುರ ಯಡೇಹಳ್ಳಿ ಹೋಬಳಿಯ ಇರುವಕ್ಕಿ ಹಾಗೂ ಸುತ್ತಲಿನ ಹಳ್ಳಿಗಳ ವ್ಯಾಪ್ತಿಯ 777 ಎಕರೆ ಕಾನು ಅರಣ್ಯ ಪ್ರದೇಶಗಳನ್ನು ರಾಜ್ಯ ಸರ್ಕಾರ ಶಿವಮೊಗ್ಗಾ ಕೃಷಿ, ತೋಟಗಾರಿಕಾ ವಿಶ್ವವಿದ್ಯಾಲಯಕ್ಕೆ ನೀಡಿದೆ (ಆದೇಶ 13-3-2015).  2014ರಲ್ಲಿ ವಿಶ್ವವಿದ್ಯಾಲಯ 2. 38 ಕೋಟಿ ರೂ ಹಣ ನೀಡಿ 777 ಎಕರೆ ಭೂಮಿ ಖರೀದಿ ಮಾಡಿದೆ.  ಕಂದಾಯ ಇಲಾಖೆಯವರು ಸರ್ವೇ ಗಡಿ ಗುರುತಿಸಿಯೂ ಆಗಿದೆ.  ಕಟ್ಟಡಗಳ ಕಾಮಗಾರಿಗಳು ಇನ್ನೂ ಆರಂಭವಾಗಬೇಕಾಗಿದೆ.  ಈ ಹಂತದಲ್ಲಿ ಇರುವಕ್ಕಿ ಗ್ರಾಮಜನರ ಆಹ್ವಾನದ ಮೇರೆಗೆ ವೃಕ್ಷಲಕ್ಷ ಆಂದೋಲನದ ಪರಿಸರ ತಜ್ಞರು, ಕಾರ್ಯಕರ್ತರ ತಂಡ ಶ್ರೀ ಅನಂತ ಹೆಗಡೆ ಅಶೀಸರ ಅವರ ನೇತೃತ್ವದಲ್ಲಿ ಕಾನು ಅರಣ್ಯ ಪ್ರದೇಶಕ್ಕೆ ಇತ್ತೀಚೆಗೆ (16-5-2017) ಭೇಟಿ ನೀಡಿತು, ಓಡಾಟ ನಡೆಸಿತು.  ರೈತರ ಜೊತೆ ಸಮಾಲೋಚನೆ ನಡೆಸಿತು.

 ಇರುವಕ್ಕಿ ಕಾನುಗಳ ಸ್ಥಿತಿಗತಿ: ಇರುವಕ್ಕಿ, ಹೆಬ್ಬೋಡಿ, ಸರಗುಂದ ಹಳ್ಳಿಗಳ 777 ಎಕರೆ ಕಾನು ಪ್ರದೇಶ ರೆವಿನ್ಯೂ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತವೆ.  ದನಗಳಿಗೆ ಮುಫತ್ತು, ಹುಲ್ಲುಬನ್ನಿ, ಕಾನು ಎಂಬ ಹೆಸರು ಭೂ ದಾಖಲೆಗಳಲ್ಲಿವೆ. ಅರಣ್ಯ ಸಂರಕ್ಷಣಾ ಕಾಯಿದೆ ವ್ಯಾಖ್ಯೆ ಪ್ರಕಾರ ಇವೆಲ್ಲವೂ ಡೀಮ್ಡ್ ಅರಣ್ಯಗಳು ಎಂತಲೇ ಪರಿಗಣಿತವಾಗಿವೆ.  ಕಾನು ಅರಣ್ಯಗಳಲ್ಲಿ ಬೀಟೆ, ಹೊನ್ನೆ, ಹುನಾಲು, ನಂದಿ, ಮತ್ತಿ, ಬಿದಿರು, ಹಾಗೂ ಇತರೇ ಜಾತಿಯ ಮರಗಳು, ಕುರುಚಲು ಗಿಡಗಳು ಎಲ್ಲ ಇವೆ ಎಂದು ಸಾಗರದ ಅಂದಿನ ಉಪರಣ್ಯ ಸಂರಕ್ಷಣಾಧಿಖಾರಿ ಶ್ರೀ ಬ್ಯಾನರ್ಜಿ ಅಭಿಪ್ರಾಯ ಪಟ್ಟಿದ್ದಾರೆ.  ಆಶ್ಚರ್ಯವೆಂದರೆ ಅವರೇ ಈ ಕಾನು ಅರಣ್ಯ ಭೂಮಿಯನ್ನು ಕೃಷಿ ವಿಶ್ವವಿದ್ಯಾಲಯಕ್ಕೆ ಕೊಡಬಹುದು ಎಂದು ವರದಿ ನೀಡಿದ್ದಾರೆ!

 ಇಲ್ಲಿನ ಕಾನು ಅರಣ್ಯಗಳಲ್ಲಿ ಬೀಟೆ, ನೇರಳೆ, ಬೆಳ್ಳಟ್ಟೆ, ಶ್ರೀಗಂಧ, ಕೌಲ, ಹೊನ್ನೆ, ತಾರೆ ನಂದಿ, ಮತ್ತಿ, ಮಾವು, ಹಲಸು, ಸಾಲುದೂಪ, ಹೆಬ್ಬೇವು, ದೇವದಾರು ಮುಂತಾದ 32 ಜಾತಿಯ ಬೆಲೆಬಾಳುವ ಮರಗಳು ಹೇರಳವಾಗಿವೆ.  ಔಷಧಿ ಸಸ್ಯಗಳಿವೆ.  ಸುಮಾರು 95 ಎಕರೆ ಅರಣ್ಯ ಒತ್ತುವರಿ ಆಗಿದೆ.  ಸುಮಾರು 40 ಸಾವಿರ ದೊಡ್ಡ ಮರಗಳಿವೆ, ಸುಮಾರು 80,000 ವಿವಿಧ ಜಾತಿಯ ಗಿಡಗಳಿವೆ.  ಇವುಗಳ ಪಾರಿಸಾರಿಕ ಸೇವೆ ಲೆಕ್ಕ ಹಾಕಿದರೆ ಇಲ್ಲಿನ ಕಾನು ಅರಣ್ಯಗಳ ಮೌಲ್ಯ ಒಂದು ಸಾವಿರ ಕೋಟಿ ರೂಪಾಯಿಗಳಿಗಿಂತ ಹೆಚ್ಚು ಎಂದು ವೃಕ್ಷಲಕ್ಷ ಸಮೀಕ್ಷೆ ತಿಳಿಸಿದೆ.

 ಕೃಷಿ ವಿಶ್ವವಿದ್ಯಾಲಯಕ್ಕೆ ನೀಡಿದ ಭೂಮಿ ಮಂಜೂರಿ ಪತ್ರ, ಒಪ್ಪಂದ ಪತ್ರದಲ್ಲಿ (31-1-2015 & 13-3-2015) ಬೆಲೆಬಾಳುವ ಮರಗಳನ್ನು ವಿಶ್ವವಿದ್ಯಾಲಯ ಸಂರಕ್ಷಿಸಬೇಕು ಎಂಬ ಷರತ್ತು ಇದೆ ಎಂಬುದನ್ನು ಗಮನಿಸಬೇಕು.  ಆದರೆ ಕೃಷಿ ವಿಶ್ವವಿದ್ಯಾಲಯ ಕಟ್ಟಡಗಳನ್ನು ನಿರ್ಮಿಸಬೇಕು, ವಸತಿ ಕಾಲೋನಿ, ಕಛೇರಿ ಸಮುಚ್ಚಯಗಳು ಬೇಕು ಎಂಬ  ಅಭಿವೃದ್ಧಿ ಕಾರ್ಯಕ್ಕೆ ಈಗಿರುವ ಕಾನು ಅರಣ್ಯಗಳನ್ನು ತೆಗೆದು ನೆಲಸಮ ಮಾಡಲೇಬೇಕು.  ಹಾಗಿರುವಾಗ ವಿಶ್ವವಿದ್ಯಾಲಯ ಗಿಡಮರ  ರಕ್ಷಿಸುವುದು ಹೇಗೆ? ಕೃಷಿ ತೋಟಗಾರಿಕಾ ವಿಶ್ವವಿದ್ಯಾಲಯ ಮಾದರಿ ಪ್ರಾತ್ಯಕ್ಷಿಕೆ, ಫಾರಂಗಳನ್ನು ನಿರ್ಮಿಸಬೇಕು ಇದಕ್ಕಾಗಿ ನೂರಾರು ಎಕರೆ ಬೇಕು.  ಕಾನು ಕಡಿಯದೇ ಬೇರೆ ದಾರಿ ಇದೆಯೇ? ಎಂಬ ಗಂಭೀರ ಸಮಸ್ಯೆ ಎದುರಿಸಬೇಕಿದೆ.

 ಪರಿಹಾರ ಇದೆ: ಕೃಷಿ ವಿಶ್ವವಿದ್ಯಾಲಯ ನಿರ್ಮಾಣ, ಸುಸ್ಥಿರ ಅಭಿವೃದ್ಧಿ, ಕಾನು ಅರಣ್ಯಗಳ ರಕ್ಷಣೆಗೆ ಅರಣ್ಯ ಇಲಾಖೆ, ಪರಿಸರ ತಜ್ಞರು, ಕೃಷಿ ಪಂಡಿತರ ಜೊತೆ ಕೃಷಿ ವಿಶ್ವವಿದ್ಯಾಲಯ ಜಂಟಿ ಸಮಾಲೋಚನೆ ಸಭೆ ಏರ್ಪಡಿಸಬೇಕು.  ಕಾನು ಅರಣ್ಯ ಸಂರಕ್ಷಣೆಯ ವಿಶೇಷ ಯೋಜನೆಯನ್ನು ರೂಪಿಸಿ ಜಾರಿ ಮಾಡಲು (ನಿರ್ದಿಷ್ಟ ಕಾಲಮಿತಿಯಲ್ಲಿ) ಆದ್ಯತೆ ನೀಡಬೇಕು.  ಜಿಲ್ಲಾಧಿಕಾರಿ, ಜಿಲ್ಲಾ ಅರಣ್ಯ ಅಧಿಕಾರಿ ಇರುವಕ್ಕಿ ಡೀಮ್ಡ್ ಅರಣ್ಯ ನಾಶವಾಗದಂತೆ ಕ್ರಮ ಕೈಗೊಳ್ಳಬೇಕು ಎಂಬುದು ನಮ್ಮ ಆಗ್ರಹ.

 ಅರಣ್ಯ ಇಲಾಖೆ ಇರುವಕ್ಕಿ ಕಾನುಗಳಲ್ಲಿ ಇರುವ ಮರಗಳ ಸಮೀಕ್ಷೆ ನಡೆಸಬೇಕು.  ಜೀವ ವೈವಿಧ್ಯ ಮಂಡಳಿ ಜೀವ ವೈವಿಧ್ಯ ದಾಖಲಾತಿ ಮಾಡಬೇಕು.  ಸರ್ಕಾರ, ಅರಣ್ಯ ಇಲಾಖೆ ಇಲ್ಲಿನ ಕಾನು ಅರಣ್ಯ ರಕ್ಷಣೆಗೆ ಇನ್ನಷ್ಟು ಷರತ್ತು ವಿಧಿಸಬೇಕು.  ವಿಶ್ವವಿದ್ಯಾಲಯ ತನ್ನ ನಿರ್ಮಾಣ ಯೋಜನೆಗೆ ಅಗತ್ಯ ಮಾರ್ಪಾಡು ಮಾಡಬೇಕು.  ಸರ್ಕಾರದ ಭಾಗವಾದ ಕೃಷಿ ವಿಶ್ವವಿದ್ಯಾಲಯ ಪಶ್ಚಿಮಘಟ್ಟ ರಕ್ಷಣೆಯ ಧ್ವನಿಗೆ ಸ್ಪಂದಿಸಬೇಕು.

 ಶಿವಮೊಗ್ಗಾ ಕೃಷಿ / ತೋಟಗಾರಿಕಾ ವಿಶ್ವವಿದ್ಯಾಲಯ ಮಲೆನಾಡಿನ ಸಮಗ್ರ ಕೃಷಿ-ತೋಟಗಾರಿಕೆಯ ಸುಸ್ಥಿರ ಅಭಿವೃದ್ಧಿಗೆ ವಿಶೇಷ ಕೊಡುಗೆ ನೀಡಬೇಕು ಎಂದು ವೃಕ್ಷಲಕ್ಷ ಆಂದೋಲನ ಅಭಿಪ್ರಾಯ ವ್ಯಕ್ತ ಮಾಡುತ್ತದೆ.  ಜೊತೆಗೆ ಇರುವಕ್ಕಿ ಕಾನುಗಳ ಉಳಿವು ಮುಖ್ಯ ಎಂಬುದು ಒತ್ತಿ ಹೇಳುತ್ತದೆ.

 ಇರುವಕ್ಕಿ ರೈತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ: ವಿಶ್ವವಿದ್ಯಾಲಯ ಪಡೆದ ಭೂಮಿ ಇರುವಕ್ಕಿ ಗ್ರಾಮದಲ್ಲಿದೆ.  ಕಳೆದ 3 ವರ್ಷಗಳಲ್ಲಿ ಕೃಷಿ ವಿಶ್ವವಿದ್ಯಾಲಯ, ಜಿಲ್ಲಾಡಳಿತ ಇರುವಕ್ಕಿಯ ರೈತರನ್ನು ಗೊಂದಲಕ್ಕೆ ತಳ್ಳಿದೆ.  ರೈತರಿಗೆ ಮಾಹಿತಿ ಇಲ್ಲ, ಸತ್ಯಾಗ್ರಹ, ಧರಣಿ ನಡೆಸಿದರೂ ಕೇಳಿಲ್ಲ, ವಿಶ್ವವಿದ್ಯಾಲಯಕ್ಕೆ ಕೊಟ್ಟಿರುವ ಭೂಮಿಯಲ್ಲಿ ಬಗರ್‌ಹುಕುಂ ಸಾಗುವಳಿದಾರರಿದ್ದಾರೆ, ಹಕ್ಕುಪತ್ರ ಪಡೆದವರಿದ್ದಾರೆ.  ಬೆಟ್ಟ ಸೌಲಭ್ಯ ಪಡೆದವರಿದ್ದಾರೆ.  ಇಲ್ಲಿ 200 ರೈತ ಕುಟುಂಬಗಳಿವೆ.  ಸಾವಿರ ಜನಸಂಖ್ಯೆ ಇದೆ.  ಶರಾವತಿ ಮುಳುಗಡೆಯಿಂದ ಬಂದವರು ನಾವು, ಪುನಃ ಒಕ್ಕಲೆಬ್ಬಿಸುತ್ತಾರಾ?  ರಸ್ತೆ ಸಂಪರ್ಕ ಬಂದ್ ಮಾಡ್ತಾರಾ? ನೀರಾವರಿಗೆ ಡ್ಯಾಂ ಕಟ್ತಾರಾ? ಇತ್ಯಾದಿ ಆತಂಕ, ಅತಂತ್ರ ಸ್ಥಿತಿಯಲ್ಲಿ ಇರುವಕ್ಕಿ ರೈತರು ಇದ್ದಾರೆ.  ಜಿಲ್ಲಾಡಳಿತ ರೈತರು, ವಿಶ್ವವಿದ್ಯಾಲಯದ ವರ ಜಂಟಿ ಸಭೆಯನ್ನು ಗ್ರಾಮದಲ್ಲಿ ನಡೆಸಬೇಕು.  ಸ್ಥಾನಿಕ ರೈತರ ಸಹಭಾಗಿತ್ವವನ್ನು ವಿಶ್ವವಿದ್ಯಾಲಯ ಪಡೆಯಬೇಕು.  ಮೊದಲು ರೈತರ ಭೂಮಿ ಸಮಸ್ಯೆ ಪರಿಹರಿಸಬೇಕು.

 ರಾಜ್ಯ ಮುಖ್ಯ ಕಾರ್ಯದರ್ಶಿ, ಕಂದಾಯ ಅರಣ್ಯ, ಕೃಷಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಶಿವಮೊಗ್ಗಾ ಜಿಲ್ಲಾಧಿಕಾರಿ, ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿಗಳಿಗೆ ವೃಕ್ಷಲಕ್ಷದ ಸಮೀಕ್ಷಾ ವರದಿ ಸಲ್ಲಿಸಿ ಒತ್ತಾಯ ಮಾಡಲಾಗಿದೆ.

 ಇದುವರೆಗಿನ ಹೆಜ್ಜೆಗಳು

 ಕೃಷಿ ವಿಶ್ವವಿದ್ಯಾಲಯ ನಿರ‌್ಮಾಣ ಆರಂಭಕ್ಕೆ ಮೊದಲೇ ವೃಕ್ಷಲಕ್ಷ ಆಂದೋಲನ ಇರುವಕ್ಕಿ (ಆನಂದಪುರ ಸಾಗರ ತಾಲೂಕು) 800 ಎಕರೆ ಕಾನು ಅರಣ್ಯ ನಾಶ ಮಾಡಬಾರದು ಎಂದು 3 ತಿಂಗಳ ಹಿಂದೆಯೇ ಧ್ವನಿ ಎತ್ತಿ ಸರ್ಕಾರದ ಗಮನ ಸೆಳೆದಿತ್ತು.  ಇದೀಗ ಕೃಷಿ ಇಲಾಖೆ ಕಾರ್ಯದರ್ಶಿ ಅವರು ಪರಿಸರ ತಜ್ಞರ ಸಭೆ ಕರೆದು ವೃಕ್ಷಲಕ್ಷ  ಎತ್ತಿದ ಅರಣ್ಯ ನಾಶ ಸಮಸ್ಯೆ ಪರಿಹರಿಸಬೇಕು ಎಂದು ಆದೇಶಿಸಿದ್ದಾರೆ.  ಶಿವಮೊಗ್ಗಾ ಕೃಷಿ ವಿಶ್ವವಿದ್ಯಾಲಯ ಉಪಕುಲಪತಿಗಳು ಇದೀಗ ತಜ್ಞರ ಸಭೆ ಕರೆಯಲು ಮುಂದಾಗಿದ್ದಾರೆ.  ವೃಕ್ಷ ಲಕ್ಷ ಆಂದೋಲನಕ್ಕೆ ಈ ಬಗ್ಗೆ ಕೃಷಿ ವಿ. ವಿ ಮಾಹಿತಿ ನೀಡಿದೆ.

 ರೈತರ ವಿೋಧ : ಈ ಮಧ್ಯೆ ಸಾಗರ ತಾಲೂಕು ಆನಂದಪುರದ ಬಳಿ ಇರುವಕ್ಕಿ ಗ್ರಾಮದಲ್ಲಿ ರೈತರು ಮರ ಕಟಾವಿಗೆ ಬಂದ ವಿಶ್ವವಿದ್ಯಾಲಯದವರ ಕಾಮಗಾರಿಯನ್ನು ತಾತ್ಕಾಲಿಕವಾಗಿ ತಡೆದಿದ್ದಾರೆ.  ಬಗರ್‌ಹುಕುಂ ಹಕ್ಕುಪತ್ರ ಪಡೆದ ರೈತರು ತಮಗೆ ಮಂಜೂರಾದ ಭೂಮಿಯನ್ನು ಸರ್ಕಾರ ವಿಶ್ವವಿದ್ಯಾನಿಲಯಕ್ಕೆ ಹಸ್ತಾಂತರಿಸಿದೆ ಎಂದು ಆಕ್ರೋಶಗೊಂಡಿದ್ದಾರೆ.  ಜಿಲ್ಲಾಧಿಕಾರಿಗಳು, ಅಸಿಸ್ಟೆಂಟ್ ಕಮೀಶನರ್, ಜನ ಪ್ರತಿನಿಧಿಗಳು ನಮ್ಮ ಧರಣಿ ಧ್ವನಿಗೆ ಬೆಲೆ ನೀಡಿಲ್ಲ.  ರೈತರು ಆತಂಕದಲ್ಲಿದ್ದಾರೆ ಎಂದು ಸ್ಥಳೀಯ ಹೋರಾಟಗಾರ ಸೋಮಶೇಖರ ಇರುವಕ್ಕಿ ತೀವ್ರ ಬೇಸರ ವ್ಯಕ್ತ ಮಾಡಿದ್ದಾರೆ.

 ರಾಜ್ಯ ಅರಣ್ಯ ಪರಿಸರ ಕಾರ್ಯದರ್ಶಿ ಭೇಟಿ: Cನಂತ ಹೆಗಡೆ ಅಶೀಸರ ನೇತೃತ್ವದ ಪರಿಸರ ನಿಯೋಗ ಆ.3ನೇ ವಾರದಲ್ಲಿ ರಾಜ್ಯ ಅರಣ್ಯ-ಪರಿಸರ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಇರುವಕ್ಕಿ ಕಾನು ಅರಣ್ಯ ಉಳಿಸಿ ಎಂಬ ಮನವಿ ಸಲ್ಲಿಸಿತು.  ಸಾಗರದ ಅಂದಿನ ಅರಣ್ಯ ಅಧಿಕಾರಿ ಡೀಮ್ಡ್ ಅರಣ್ಯವನ್ನು ಕೃಷಿ ವಿಶ್ವವಿದ್ಯಾಲಯಕ್ಕೆ ನೀಡಲು ಒಪ್ಪಿಗೆ ನೀಡಿದ್ದು ಅರಣ್ಯ ಕಾಯಿದೆಯ ಉಲ್ಲಂಘನೆ ಆಗಿದೆಯೆಂಬ ಮಾಹಿತಿ ನೀಡಿತು.  ಪರಿಣಾಮವಾಗಿ ಡೀಮ್ಡ್ ಅರಣ್ಯವನ್ನು ವಿಶ್ವವಿದ್ಯಾಲಯಕ್ಕೆ ನೀಡಿರುವ ಬಗ್ಗೆ ವಿಚಾರಣೆ ನಡೆಸಲು ರಾಜ್ಯ ಹೆಚ್ಚುವರಿ ಮುಖ್ಯ ಅರಣ್ಯ ಪರಿಸರ ಕಾರ್ಯದರ್ಶಿ  ರವಿಕುಮಾರ್ ಮುಂದಾಗಿದ್ದಾರೆ.

 ಶಿವಮೊಗ್ಗಾ ಸಮೀಪ ಕೃಷಿ ವಿ. ವಿ ಗೆ ಭೂಮಿ: ಶಿವಮೊಗ್ಗ ಸಮೀಪ 600 ಎಕರೆ ಭೂಮಿಯನ್ನು 2012-13 ರಲ್ಲೇ ಗುರುತಿಸಲಾಗಿತ್ತು.  ಈ ಭೂಮಿ ಕೃಷಿ ವಿಶ್ವವಿದ್ಯಾಲಯಕ್ಕೆ ಹಸ್ತಾಂತರ ಆಗಬೇಕಾದ್ದನ್ನು ಸಿದ್ದರಾಮಯ್ಯ ಸರ್ಕಾರ ತಡೆಹಿಡಿಯಿತು.  2013 ಮಧ್ಯಭಾಗದಲ್ಲಿ ಹಾಲಿ ಕಂದಾಯ ಸಚಿವರು ಕೃಷಿ ವಿ. ವಿ. ಗೆ ಸಾಗರ ತಾಲೂಕಿನ ಅರಣ್ಯ ಭೂಮಿ ನೀಡಿದ್ದಾರೆ.  ತಮ್ಮ ಬಳಿಯಲ್ಲಿ ಎಲ್ಲಾ ದಾಖಲೆ ಇದೆ.  ಪಶ್ಚಿಮ ಘಟ್ಟದ ಅರಣ್ಯ ನಾಶ ಮಾಡಿ ವಿಶ್ವವಿದ್ಯಾಲಯ ನಿರ‌್ಮಿಸಬೇಕೇ? ಎನ್ನುವ ಪ್ರಶ್ನೆಯನ್ನು ಶಿವಮೊಗ್ಗಾ ಗ್ರಾಮಾಂತರ ಮಾಜಿ ಶಾಸಕ ಕುಮಾರ ಸ್ವಾಮಿ ಎತ್ತಿದ್ದಾರೆ.  ವೃಕ್ಷಲಕ್ಷದ ಇರುವಕ್ಕಿ ಅರಣ್ಯ ಉಳಿಸಿ ಹೋರಾಟಕ್ಕೆ ಬೆಂಬಲ ನೀಡಿದ್ದಾರೆ.

  ಡೀಮ್ಡ್ ಅರಣ್ಯ ಪ್ರಶ್ನೆ: ಈ ಹಂತದಲ್ಲಿ ಡೀಮ್ಡ್ ಅರಣ್ಯಗಳ ಪಟ್ಟಿ ಸುಪ್ರಿಂಕೋರ್ಟಿನಲ್ಲಿದೆ.  ಈ ಪಟ್ಟಿಗೆ ಸೇರಿರುವ ಇರುವಕ್ಕಿ ಕಾನು ಅರಣ್ಯ ಭೂಮಿ ವಿಷಯ ಭಾರಿ ವಿವಾದ ಸೃಷ್ಟಿಸಲಿದೆಯೇ? ಎಂಬ ಪ್ರಶ್ನೆ ಮುಖ್ಯವಾಗಲಿದೆ.

 ಕೃಷಿ ವಿ. ವಿ ನಿರ್ಮಾಣಕ್ಕೆ ಹಲವು ಆತಂಕ ಗೊಂದಲಗಳು: ಈ ಮಧ್ಯೆ ವಿಶ್ವವಿದ್ಯಾಲಯ ಕಾಮಗಾರಿ ಶಂಕುಸ್ಥಾಪನೆ ಆಗಿದೆ.  ನೂರಾರು ಕೋಟಿ ರೂಪಾಯಿ ಮಂಜೂರು ಸಿಕ್ಕಿದೆ.  ಮರ ಕಟಾವಿಗೆ ಮುಂದಾಗದೇ ವಿಶ್ವವಿದ್ಯಾಲಯ ನಿರ್ಮಾಣ ಹೇಗೆ ಸಾಧ್ಯ ಎಂಬ ಚಿಂತೆಯಲ್ಲಿ ವಿಶ್ವ ವಿದ್ಯಾಲಯದ ಆಡಳಿತವಿದೆ.  ರೈತರ ವಿರೋಧ, ಅರಣ್ಯ ಕಾಯಿದೆ ಉಲ್ಲಂಘನೆ ಇವೆಲ್ಲ ಎದುರಿಸಿ ವಿಶ್ವವಿದ್ಯಾಲಯ ನಿರ್ಮಾಣಕ್ಕೆ ಹಿನ್ನಡೆ ಆಗಲಿದೆ.

 ಈ ಹಂತದಲ್ಲಿ ವೃಕ್ಷಲಕ್ಷ ಆಂದೋಲನದವರು ಎತ್ತಿದ ಪ್ರಶ್ನೆಗಳ ಬಗ್ಗೆ ಕೃಷಿ ವಿಶ್ವವಿದ್ಯಾಲಯ ಸಭೆ ನಡೆಸಲು ಮುಂದಾಗಿದೆ.  ವಿಶ್ವವಿದ್ಯಾಲಯ ನಿರ್ಮಾಣ ಕಾಮಗಾರಿ ಆರಂಭಕ್ಕೆ ಮೊದಲು ನಾವು ಎತ್ತಿರುವ ಇರುವಕ್ಕಿ ಅರಣ್ಯ, ಪರಿಸರ, ರೈತರ ಜ್ವಲಂತ ವಿಷಯಗಳ ಕುರಿತು ಸಮಗ್ರ ಚರ್ಚೆ ನಡೆಯಬೇಕು.  ಕಾನು ಉಳಿಸಿ, ಡೀಮ್ಡ್ ಅರಣ್ಯ ಉಳಿಸಿ ಎಂಬ ಹಕ್ಕೊತ್ತಾಯ ನಮ್ಮದು ಎನ್ನುತ್ತಾರೆ ವೃಕ್ಷಲಕ್ಷ ಆಂದೋಲನದ ಅಧ್ಯಕ್ಷರಾದ ಅನಂತ ಹೆಗಡೆ ಅಶೀಸರ ಅವರು.  ಶಿವಮೊಗ್ಗಾ ಜಿಲ್ಲೆ ಕಾನು ಅರಣ್ಯಗಳ ಬಗ್ಗೆ ಅಧ್ಯಯನ ನಡೆಸಿರುವ ಡಾ ಟಿ. ವಿ ರಾಮಚಂದ್ರ ಅವರು ಈಗಾಗಲೇ ನಮ್ಮ ಕಾನು ವರದಿ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದೇವೆ.  ಶಿವಮೊಗ್ಗಾ ಸಮೀಪ ವಿಶ್ವ ವಿದ್ಯಾಲಯಕ್ಕೆ ಭೂಮಿ ಇದ್ದಲ್ಲಿ ಈಗಲೇ ಸರ್ಕಾರ ಇರುವಕ್ಕಿ ಪ್ರದೇಶದ ಅರಣ್ಯ ಭೂಮಿ ವಾಪಾಸ್ ಪಡೆಯಲಿ ಎನ್ನುತ್ತಾರೆ.

 * * * * *

 ಶಿವಮೊಗ್ಗಾ ಕೃಷಿ ವಿಶ್ವವಿದ್ಯಾಲಯಕ್ಕೆ ಅರಣ್ಯ ಭೂಮಿ ನೀಡಿಕೆ ವಿವಾದ ಸಾಗರದಲ್ಲಿ ನಡೆದ ನಿರ್ಣಾಯಕ ಸಭೆ. 

 ಅರಣ್ಯ ರಕ್ಷಣೆ ಮಾಡುವ ಕೃಷಿ ವಿಶ್ವವಿದ್ಯಾಲಯದ ಭರವಸೆ ಈಡೇರುವದೆ?

 ಸಾಗರದಲ್ಲಿ 30-10-2017 ಕೃಷಿ ವಿಶ್ವವಿದ್ಯಾಲಯದವರು ಪರಿಸರ ತಜ್ಞರು, ರೈತರ ಜೊತೆ ವಿಶೇಷ ಸಮಾಲೋಚನಾ ಸಭೆ ನಡೆಸಿದರು.  ಅರಣ್ಯ ಹಸಿರು ಉಳಿಸಲು ಭರಪೂರ ಆಶ್ವಾಸನೆಗಳನ್ನು ಕೃಷಿ ವಿ. ವಿಯವರು ನೀಡಿದರು.

 ಕಾನು ಅರಣ್ಯಗಳನ್ನು ಕೃಷಿ ವಿ. ವಿ. ಗೆ ನೀಡಿದ ವಿಷಯದ ಬಗ್ಗೆ 5 ತಿಂಗಳ ಹಿಂದೆ ಧ್ವನಿ ಎತ್ತಿ ಈ ಬಗ್ಗೆ ಸರ್ಕಾರದ, ಜಿಲ್ಲೆಯ ಜನತೆಯ ಗಮನಸೆಳೆದ ವೃಕ್ಷಲಕ್ಷ ಆಂದೋಲನದ ಕಾರ್ಯಕರ್ತರು ಸಭೆಯಲ್ಲಿ ಎತ್ತಿದ ಗಂಭೀರ ಪ್ರಶ್ನೆಗೆ ರೆವಿನ್ಯೂ ಇಲಾಖೆ ಅಥವಾ ಕೃಷಿ ವಿ. ವಿ ಉತ್ತರ ನೀಡುವ ಗೋಜಿಗೆ ಹೋಗಲೇ ಇಲ್ಲ.

 ಡೀಮ್ಡ ಅರಣ್ಯ ಹೌದು : ಸಾಗರದ ಉಪಅರಣ್ಯ ಸಂರಕ್ಷಣಾ ಅಧಿಕಾರಿಗಳು ಕೃಷಿ ವಿ. ವಿ ಸಾಗರ ಸಭೆಯಲ್ಲಿ ಭಾಗವಹಿಸಿ 400 ಎಕರೆ ಡೀಮ್ಡ್ಡ್ ಅರಣ್ಯ ಎಂಬುದನ್ನು ಅಧಿಕೃತವಾಗಿ ದೃಢೀಕರಿಸಿದ್ದಾರೆ.  ಇದು ಗಮನಿಸಬೇಕಾದ ಸಂಗತಿ ಆಗಿದೆ.

 ಮರಗಳ ಸ್ಥಳಾಂತರ: 10-20 ಗಿಡಮರಗಳನ್ನು ಬುಡ ಸಹಿತ ಕಿತ್ತು ಜೀವಂತ ಬೇರೆಡೆ ಮರುನಾಟಿ ಮಾಡುವುದು ಸಾಧ್ಯ.  ಆದರೆ ಸಾವಿರಾರು ಮರಗಳನ್ನು ಕಡಿಯದೇ ಕಿತ್ತು ನೆಡುವುದು ಭಾರೀ ವೆಚ್ಚದಾಯಕ, ಅಸಾಧ್ಯವಾದ ಸಂಗತಿ.  ಅರಣ್ಯ ನಾಶ ದೊಡ್ಡ ಪ್ರಮಾಣದಲ್ಲಿ ಆಗುವುದನ್ನು ಹೇಗೆ ತಪ್ಪಿಸುತ್ತೀರಿ ಎಂಬ ಪರಿಸರ ಕಾರ್ಯಕರ್ತರ ಪ್ರಶ್ನೆಗೆ ಸಾಗರದ ಸಭೆಯಲ್ಲಿ ವಿ. ವಿ ಅಧಿಕಾರಿಗಳಿಂದ ಉತ್ತರ ಸಿಗಲೇ ಇಲ್ಲ.

 ಸ್ವಾಗತಾರ್ಹ ಸಂಗತಿ:  150 ಎಕರೆ ಅರಣ್ಯವನ್ನು ಹಾಗೇ ಉಳಿಸಿಕೊಳ್ಳುತ್ತೇವೆ ಎಂಬ ಕೃಷಿ ವಿ. ವಿ ಅಧಿಕಾರಿಗಳ ಭರವಸೆ ಸ್ವಾಗತಾರ್ಹ ಎಂದು ಪರಿಸರ ಕಾರ್ಯಕರ್ತರು ಅಭಿಪ್ರಾಯಪಡುತ್ತಾರೆ.  ಆದರೆ, ಕೃಷಿ ತೋಟಗಾರಿಕೆಗೆ ಭೂಮಿ ಸಮತಟ್ಟು ಮಾಡುವಾಗ ಪ್ರತಿ ವಿಭಾಗದ ಸುತ್ತ ಅಂಚಿನಲ್ಲಿ ಇರುವ ನೈಸರ್ಗಿಕ ಗಿಡಮರ ಉಳಿಸಿಕೊಳ್ಳಿ ಎಂಬ ಪರಿಸರ ತಜ್ಞರ ಸಲಹೆ ಜಾರಿಗೆ ತರುವ ಬಗ್ಗೆ ಸ್ಪಷ್ಟ ನಿರ್ಧಾರ ಆಗಿಲ್ಲ.  ಸ್ಥಳದಲ್ಲಿ (ಇರುವಕ್ಕಿಯಲ್ಲಿ) ಇದಕ್ಕಾಗಿ ಇನ್ನೊಂದು ಸಮಾಲೋಚನಾ ಸಭೆ ನಡೆಸಬೇಕು ಎಂದು ಸಮುದಾಯ ವಿಜ್ಞಾನ ಕೇಂದ್ರದ ವೆಂಕಟೇಶ ಅಭಿಪ್ರಾಯ ಪಡುತ್ತಾರೆ.

 ಜೀವ ವೈವಿಧ್ಯದ ಉಳಿವು: ಇರುವಕ್ಕಿ ಪ್ರದೇಶದ ಜೀವ ವೈವಿಧ್ಯ ದಾಖಲಾತಿ ಮಾಡಿ ವರದಿ ನೀಡಿರುವ ಅರಣ್ಯ ಕಾಲೇಜು, ಪೊನ್ನಂಪೇಟೆ ಇದರ ತಜ್ಞರು ಸಾಗರ ಸಭೆಯಲ್ಲಿ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಲಿಲ್ಲ.

ಆದರೆ ಮರಗಳ ಎಕರೆವಾರು ಸಂಖ್ಯೆ, ಸುತ್ತಳತೆ ಇತ್ಯಾದಿ ಅಂಕಿಸಂಖ್ಯೆ ನೀಡಿದ ವಿಶ್ವವಿದ್ಯಾಲಯ ಒಟ್ಟು 777 ಎಕರೆಯಲ್ಲಿ ಇರುವ ಗಿಡ-ಮರಗಳ ಒಟ್ಟು ಸಂಖ್ಯೆ, ಕಟಾವು ಮಾಡಬೇಕಾದ ಗಿಡಗಳ ಸಂಖ್ಯೆಯನ್ನೇ ನೀಡಲಿಲ್ಲ.

  ಜೀವ ವೈವಿಧ್ಯ ವಿಷಯದಲ್ಲಿ ದೊಡ್ಡ ಮರಗಳು, ಚಿಕ್ಕಗಿಡಗಳು ಎಂಬುದು ಮುಖ್ಯ ಅಲ್ಲ.  ಅಲ್ಲಿ ಲಕ್ಷಾಂತರ ಗಿಡ, ಬಳ್ಳಿ, ಔಷಧಿ ಸಸ್ಯಗಳು ಇವೆ ಎಂಬುದು ಮುಖ್ಯವಾಗುತ್ತದೆ.  ಇವು ಕಾನು ಅರಣ್ಯಗಳಾಗಿರುವದರಿಂದ ಸಸ್ಯ ವೈವಿಧ್ಯತೆಯ ವಿಷಯ ಇಲ್ಲಿ ಮುಖ್ಯವಾಗುತ್ತದೆ! ಇರುವಕ್ಕಿ ಪ್ರದೇಶದ ನೀರಿನ ಮೂಲಗಳು, ಕೆರೆ, ಜರಿ,ಹೊಳೆ, ರೈತರ ಜೀವ ಸಂಕುಲಜ್ಞಾನ, ಜಾನುವಾರು ಇತ್ಯಾದಿ ಇವುಗಳ ದಾಖಲಾತಿ ಮಾಡುವ ಅವಶ್ಯಕತೆ ಇತ್ತು ಎಂದು ವಿಜ್ಞಾನಿ ಪ್ರೊ ಸುಭಾಸ್‌ಚಂದ್ರನ್ ಅಭಿಪ್ರಾಯ ಪಟ್ಟಿದ್ದಾರೆ.

 ರೈತರ  ಸುಸ್ಯೆಗಳ ಬಗ್ಗೆ ಸಾಗರದ ಸಭೆ ವಿಶೇಷ ಚರ್ಚೆ ನಡೆಸಿದೆ.  ಅಸಿಸ್ಟಂಟ್ ಕಮೀಶನರ್ ಸಾಗರ ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಇದೀಗ ತಕ್ಷಣದಲ್ಲಿ ರೆವೆನ್ಯೂ ಅಧಿಕಾರಿಗಳು ರೈತರ ಭೂಮಿ ಸಮಸ್ಯೆ ಪರಿಹರಿಸುತ್ತಾರೆಯೆ ಎಂಬುದು ಮುಖ್ಯ ಪ್ರಶ್ನೆ.

 ಅಗ್ನಿಪರೀಕ್ಷೆ: ಮಲೆನಾಡಿನಲ್ಲಿ ಕೃಷಿ-ತೋಟಗಾರಿಕೆ ವಿಶ್ವವಿದ್ಯಾಲಯ ಆರಂಭದಲ್ಲೇ ಅಗ್ನಿಪರೀಕ್ಷೆ ಎದುರಿಸುತ್ತಿದೆ.  ಮಲೆನಾಡಿನ ಪ್ರಜ್ಞಾವಂತ, ಪ್ರಗತಿಪರ ರೈತರ ಸಹಭಾಗಿತ್ವ ಪಡೆಯಬೇಕೆಂಬ ಒಕ್ಕೊರಲ ಧ್ವನಿ ಸಾಗರದಲ್ಲಿ ನಡೆದ ಕೃಷಿ ವಿ.  ವಿ.  ಸಭೆಯಲ್ಲಿ ಜನಪ್ರತಿನಿಧಿಗಳು, ರೈತರು, ಪರಿಸರ ತಜ್ಞರಿಂದ ವ್ಯಕ್ತವಾಗಿದೆ.

 ಕೇವಲ ಸಭೆಯಿಂದ ಪರಿಹಾರ ಸಿಗದು: ಒಟ್ಟಿನಲ್ಲಿ ಶಿವಮೊಗ್ಗ ಕೃಷಿ ವಿಶ್ವವಿದ್ಯಾಲಯ ಸಾಗರದಲ್ಲಿ ನಡೆಸಿದ  ಸಭೆಯಲ್ಲಿ ಕೈಗೊಂಡ ನಿರ್ಧಾರಗಳ ಬಗ್ಗೆ ಖಚಿತತೆ ಬೇಕು, ಅವುಗಳ ಅನುಷ್ಠಾನದ ಬಗ್ಗೆ ಸಮಯಮಿತಿ ಬೇಕು, ಬದ್ಧತೆ ಬೇಕು  ಎಂಬುದು ಪರಿಸರ ತಜ್ಞರ ಅಭಿಪ್ರಾಯವಾಗಿದೆ.  ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ  ಮತ್ತು  ಇರುವಕ್ಕಿ ಅರಣ್ಯ ನಾಶ ವಿವಾದ ಕೇವಲ ಸಭೆ ನಡೆಸಿದರೆ ಪರಿಹಾರ ಆಗದು ಎನ್ನುತ್ತಾರೆ ಪರಿಸರ ಕಾರ್ಯಕರ್ತರು.  ಪರಿಸರ ತಜ್ಞರು, ಕಾರ್ಯಕರ್ತರು ಹಲವು ರಚನಾತ್ಮಕ ಸಲಹೆಗಳನ್ನು ನೀಡಿ, ಮಲೆನಾಡಿನ ಸಮಗ್ರ ಸುಸ್ಥಿರ ಕೃಷಿ ತೋಟಗಾರಿಕಾ ಅಭಿವೃದ್ಧಿ ಬಗ್ಗೆ ಇರುವಕ್ಕಿಯಲ್ಲಿ ಸ್ಥಾಪನೆಗೊಳ್ಳುತ್ತಿರುವ ಕೃಷಿ ವಿ.ವಿ ಬಹಳಷ್ಟು ಶ್ರಮವಹಿಸಲು ಆಗ್ರಹಿಸುತ್ತೇವೆ.

   

Leave a Reply