This page was exported from Vikrama [ http://vikrama.in ]
Export date: Mon Aug 14 13:52:24 2017 / +0000 GMT

ಪರೀಕ್ಷೆಮಾಲೂರಿನ್ಲೊಂದು ಅನಾಥಾಶ್ರಮ. ನೆಲೆಯಿಲ್ಲದ ಮಹಿಳೆಯರಿಗೆ, ಹುಡುಗಿಯರಿಗೆ ಆಶ್ರಯವನ್ನು ಕೊಟ್ಟಿದ್ದಿತು. ಅಲ್ಲಿ ಕೆಂಪಿ, ನೀಲಿ, ಬೆಳ್ಳಿ ಎಂಬ ಮೂರು ಜನ ಗೆಳತಿಯರಿದ್ದರು.
ಒಮ್ಮೆ ಮಾಲೂರಿನ ಜಮೀನುದಾರಿಣಿಯೊಬ್ಬರಿಗೆ ಮನೆ ಕೆಲಸ ಹುಡುಗಿಯ ಅವಶ್ಯತೆ ಬಿತ್ತು. ಆಕೆ ಅನಾಥಾಶ್ರಮದ ಮೇಲ್ವಿಚಾರಕಿಯನ್ನು ಕಂಡು ‘‘ನಿಮ್ಮಲ್ಲಿರುವ ಹುಡುಗಿಯರಲ್ಲಿ ಯಾರನ್ನಾದರೂ ಮನೆಗೆಲಸಕ್ಕೆ ಕಳುಹಿಸಿ ಕೊಡು'' ಎಂದು ಕೇಳಿಕೊಂಡಳು. ಅದಕ್ಕೆ ಮೇಲ್ವಿಚಾರಕಿ ಆ ಮೂವರಲ್ಲಿ ಯಾರನ್ನಾದರೂ ಒಬ್ಬರನ್ನು ಕಳುಹಿಸುವ ಆಲೋಚನೆಯನ್ನು ಮಾಡಿ ಆ ಜಮೀನುದಾರಿಣಿಯನ್ನು ಭರವಸೆ ಕೊಟ್ಟು ಕಳುಹಿಸಿ ಕೊಟ್ಟರು.
ಮಾರನೆಯ ದಿನ ಕೆಂಪಿಯ ಜಮೀನುದಾರಿಣಿಯ ಮನೆಗೆ ಕೆಲಸಕ್ಕೆ
ಹೋದಳು. ಜಮೀನುದಾರಿಣಿಯು ಅವಳನ್ನು ಸಂತೋಷದಿಂದ ಬರಮಾಡಿ ಕೊಂಡು ತಿನ್ನಲು ತಿಂಡಿ ಕೊಟ್ಟು ಮಾಡಬೇಕಾದ ಕೆಲಸಗಳನ್ನು ಹೇಳಿದಳು. ಮನೆಯನ್ನೆಲ್ಲಾ ಒಮ್ಮೆ ತೋರಿಸಿ ಕಿಟಕಿ ಬಾಗಿಲುಗಳನ್ನು ಒರೆಸುವ ರೀತಿ, ಫೋಟೋ, ವಿಗ್ರಹಗಳು, ಜಮಖಾನ, ಇವುಗಳನ್ನು ಎತ್ತಿ ಅದರ ಕೆಳಗೆಲ್ಲಾ ಸ್ವಚ್ಛ ಮಾಡುವ ರೀತಿ, ಅಡುಗೆ ಮನೆ, ಮುಂಬಾಗಿಲು, ಅಂಗಳ ಎಲ್ಲನ್ನೂ ಶುದ್ಧಿಗೊಳಿಸುವ ರೀತಿಯನ್ನು ತಿಳಿಸಿದಳು. ಕೆಂಪಿಯು ಆಗಲಿ ಎಂದು ಒಪ್ಪಿಕೊಂಡಳು. ಮಧ್ಯಾಹ್ನದ ಊಟವನ್ನು ಅಡಿಗೆ ಮನೆಯ ಗೂಡಿನಲ್ಲಿಟ್ಟಿದ್ದೇನೆ. ನಾನು ನನ್ನ ಗೆಳತಿಯ ಮಗಳ ಮದುವೆಗೆ ಹೋಗಿ ಸಾಯಂಕಾಲ ಬರುವೆನು, ಅಚ್ಚುಕಟ್ಟಾಗಿ ಕೆಲಸ ಮಾಡು, ‘‘ಶುದ್ಧಿ ಮಾಡುವಾಗ ಏನಾದರೂ ಸಾಮಾನು ಸಿಕ್ಕರೆ ಈ ಮಣೆಯ ಮೇಲಿಡು'' ಎಂದು ಹೇಳಿ ಜಮೀನುದಾರಿಣಿ ಹೊರಟುಹೋದಳು.
ಕೆಂಪಿ ಹಾಗೆಯೇ ಒಂದು ಸುತ್ತು ನೋಡಿ ಬಂದಳು. ತುಂಬಾ ವಿಶಾಲವಾದ ಮನೆ. ಮನೆಯಲ್ಲಿದ್ದ ಎಲ್ಲಾ ಅಲಂಕಾರ ವಸ್ತುಗಳೂ, ಕಿಟಕಿಯ ಪರದೆಗಳೂ, ನೆಲಹಾಸುಗಳೂ, ತುಂಬಾ ಸುಂದರವಾಗಿದ್ದಿತು. ಹೂದೋಟವಂತೂ ಮನೋಹರವಾಗಿದ್ದಿತು. ಬಣ್ಣ ಬಣ್ಣದ ಹೂಗಳು ಚೆಂದಾಗಿ ಅರಳಿದ್ದವು. ಮುಟ್ಟಿ, ಮೂಸಿ ನೋಡುತ್ತಾ ಅಲ್ಲಿಯೇ ನಿಂತಳು. ಹೊತ್ತು ಹೋದದ್ದೇ ತಿಳಿಯಲಿಲ್ಲ. ಹೊಟ್ಟೆ ಚುರುಗುಟ್ಟುತ್ತಿದ್ದಿತು. ಜಮೀನುದಾರಿಣಿ ಹೇಳಿದ್ದ ಕೆಲಸಗಳೆಲ್ಲಾ ಜ್ಞಾಪಕಕ್ಕೆ ಬಂದ್ದಿತು. ಊಟ ಮಾಡಿ ನಂತರ ಎಲ್ಲವನ್ನೂ ತಟತಟನೆ ಮಾಡೋಣವೆಂದು ಅಡಿಗೆ ಮನೆಗೆ ಹಾರಿದಳು. ಅಲ್ಲಿ ಗೂಡಿನಲ್ಲಿ ಊಟವಿದ್ದಿತು. ಅಡುಗೆ ತುಂಬಾ ರುಚಿಯಾಗಿದ್ದತು. ಹೊಟ್ಟೆತುಂಬಾ ತಿಂದಳು. ನಂತರ ಕೆಲಸ ಮಾಡಲು ಹೊರಟಳು. ಕುರ್ಚಿಗಳನ್ನು ಮೊದಲು ಒರಸಿ ಬಿಡೋಣವೆಂದು ಪೊರಕೆ, ಒರಸುವ ಬಟ್ಟೆ ತೆಗೆದುಕೊಂಡು ಶುದ್ಧಿ ಮಾಡಲಾರಂಭಿಸಿದಳು. ಕುರ್ಚಿಯ ಮೇಲೆ ಹಾಕಿದ್ದ ಒರಗು ದಿಂಬುಗಳು ತುಂಬಾ ವೃದುವಾಗಿದ್ದವು. ಅದರ ಮೇಲೆ ಮಲಗಿ ಹಾಗೆಯೇ ನಿದ್ದೆ ಹೋದಳು.
ಕುದುರೆಗಾಡಿಯ ಶಬ್ದ ಕೇಳಿ ಕೆಂಪಿಗೆ ಥಟ್ ಅಂತ ಎಚ್ಚರವಾಯಿತು. ಜಮೀನುದಾರಿಣಿ ಗಾಡಿಯಿಂದ ಕೆಳಗೆ ಇಳಿಯುತ್ತಿದ್ದಳು. ಕೆಂಪಿ ದಡಬಡಿಸಿಗೊಂದು ಪೊರಕೆ, ಬಟ್ಟೆ ತೆಗೆದುಕೊಂಡು ಗುಡಿಸಿದಂತೆ ಮಾಡಿದಳು.ಜಮೀನುದಾರಿಣಿ ಒಳಗೆ ಬಂದಳು. ಬಂದವಳೇ ಒಂದು ಸುತ್ತು ಕಣ್ಣಾಡಿಸಿದಳು. ಗುಡಿಸುವಾಗ ನಿನಗೇನಾದರೂ ‘‘ಸಣ್ಣ ವಸ್ತುಗಳು ಸಿಕ್ಕಿದವೇ'' ಎಂದು ಕೇಳಿದಳು. ‘‘ಇಲ್ಲ'' ಎಂದಳು ಕೆಂಪಿ. ‘‘ಸರಿ ಹಾಗಾದರೆ ನೀನು ಇನ್ನು ಹೋಗು. ತೆಗೆದುಕೋ ಇಂದಿನ ಕೆಲಸದ ಹಣ'' ಎಂದು ಅವಳನ್ನು ಕಳುಹಿಸಿದಳು.
ಮಾರನೆಯ ದಿನ ನೀಲಿಯು ಕೆಲಸಕ್ಕೆ ಬಂದಳು. ಅವಳನ್ನು ಆದರದಿಂದ ಬರಮಾಡಿಕೊಂಡು ತಿನ್ನಲು ಕೊಟ್ಟು, ಮನೆಯ ಕೆಲಸದ ವಿವರಗಳನ್ನೆಲ್ಲಾ ಹಿಂದಿನ ದಿನ ಕೆಂಪಿಗೆ ವಿವರಿಸಿದಂತೆಯೇ ಹೇಳಿ ಕೆಳಗೆ ಸಿಕ್ಕಿದ ಸಣ್ಣಪುಟ್ಟ ಸಾಮಾನುಗಳನ್ನು ಈ ಮಣೆಯ ಮೇಲಿಟ್ಟಿರು ಎಂದು ಹೇಳಿದಳು. ಮಧ್ಯಾಹ್ನದ ಊಟದ ಗೂಡನ್ನೂ ತೋರಿಸಿ ಊಟ ಮಾಡುವಂತೆ ಹೇಳಿ ‘‘ನಾನು ದೇವಸ್ಥಾನದಲ್ಲಿ ನಡೆಯುವ ವಿಶೇಷ ಪೂಜೆಗೆ ಹೋಗುತ್ತೇನೆ. ‘‘ನಾನು ಬರುವುದು ಇನ್ನು ಸಾಯಂಕಾಲವೇ'' ಎಂದು ಹೇಳಿ ಕುದುರೆಗಾಡಿಯನ್ನು ಹತ್ತಿ ಹೊರಟು ಹೋದಳು. ನೀಲಿಯು ಕೆಲಸ ಮಾಡಲಾರಂಭಿಸಿದಳು. ಮನೆಯನ್ನು ಒಂದು ಸುತ್ತು ಹಾಕಿಕೊಂಡು ಬಂದಳು. ಹೂದಾನಿ, ಕಾಲೊರಸು, ನೆಲಹಾಸು, ಕಿಟಕಿ, ಪರದೆಗಳನ್ನು ಚೆನ್ನಾಗಿ ಒದರಿ, ಗುಡಿಸಿ ಶುದ್ಧ ಮಾಡಿದಳು. ಅಡುಗೆ ಮನೆಗೆ ಹೋಗಿ ಊಟ ಮಾಡಿ ಸ್ವಲ್ಪ ವಿಶ್ರಾಂತಿ ತೆಗೆದುಕೊಂಡು ನಂತರ ಜಮೀನುದಾರಿಣಿಯು ಹೇಳಿದ ಕೆಲಸಗಳನ್ನೆಲ್ಲಾ ಒಪ್ಪವಾಗಿ, ನಿಧಾನವಾಗಿ ಮಾಡಿ ಮುಗಿಸುವ ಹೊತ್ತಿಗೆ ಜಮೀನುದಾರಣಿ ಬಂದೇ ಬಿಟ್ಟಳು.
ನೀಲಿ ಹೊರಡಲು ಸಿದ್ಧಳಾಗಿ ನಿಂತಿದ್ದಳು. ಜನೀನುದಾರಿಣಿಯು ಮನೆಯನ್ನೆಲ್ಲಾ ಒಮ್ಮೆ ನೋಡಿ ಅಂದಿನ ಕೆಲಸದ ಹಣವನ್ನು ಕೊಟ್ಟು ‘‘ನೀನು ಹೋಗು, ಮನೆ ಚೊಕ್ಕಗೊಳಿಸುವಾಗ ಏನಾದರೂ ಸಣ್ಣ ಪುಟ್ಟ ಸಾಮಾನು ಸಿಕ್ಕಿತೇ? ಎಂದು ಕೇಳಿದಳು. ಅದಕ್ಕೆ ನೀಲಿ ಇಲ್ಲವೆಂದು ಹೇಳಿ ಹೊರಟುಹೋದಳು.ಮುಂದಿನ ದಿನದ ಸರದಿ ಬೆಳ್ಳಿಯದಾಗಿದ್ದಿತು. ಅವಳೂ ಸಮಯಕ್ಕೆ ಸರಿಯಾಗಿ ಜಮೀನುದಾರಿಣಿಯ ಮನೆಗೆ ಬಂದಳು. ಅವಳಿಗೂ ಕೆಲಸದ ವರದಿಯನ್ನು ಹೇಳಿ ‘‘ನಾನು ನಮ್ಮ ನೆಂಟರೊಬ್ಬರ ಮನೆಗೆ ಹೋಗಿ ಸಾಯಂಕಾಲ ಬರುತ್ತೇನೆಂದು'' ಹೇಳಿ ಹೊರಟುಹೋದಳು. ನೀನು ಕಸ ಗುಡಿಸುವಾಗ ಸಿಗುವ ಸಾಮಾನುಗಳನ್ನು ಈ ಮಣೆಯ ಮೇಲಿಡು'' ಎಂದು ಹೇಳುವುದನ್ನು ಮರೆಯಲಿಲ್ಲ.
ಬೆಳ್ಳಿ ಒಡತಿಯು ಹೇಳಿದ ಪ್ರತಿಯೊಂದು ಕೆಲಸವನ್ನೂ ಗಮನವಿಟ್ಟು ಕೇಳಿಸಿಕೊಂಡಳು. ತಿಂಡಿಯನ್ನು ತಿಂದು ಕೆಲಸ ಆರಂಭಿಸಿದಳು. ನೀರು, ಪೊರಕೆ, ಹಳೆಬಟ್ಟೆಯೆಲ್ಲವನ್ನೂ ತೆಗೆದುಕೊಂಡು ಒಂದೊಂದಾಗಿ ಶುಚಿ ಮಾಡುತ್ತಾ ಬಂದಳು. ಎಲ್ಲಾ ಸಾಮಾನನ್ನು ಎತ್ತಿ ಇಡುವಾಗಲೂ ಏನಾದರೊಂದು ಪುಟ್ಟ ವಸ್ತು ಸಿಗುತ್ತಲೇ ಇದ್ದಿತು. ಪುಟ್ಟ ಪದಕ, ತಲೆ ಹೂ, ಉಂಗುರ, ಸಣ್ಣ ಎಳೆಸರ, ಕಾಲುಸರ, ಕೈಬಳೆ, ಹೀಗೆ ಪುಟ್ಟ ಪುಟ್ಟ ವಸ್ತುಗಳು. ಎಲ್ಲವನ್ನೂ ಒಟ್ಟಿಗೆ ಜೋಡಿಸಿ ಒಪ್ಪವಾಗಿ ಒಡತಿ ಹೇಳಿದಂತೆ ಮಣೆಯ ಮೇಲಿಟ್ಟಳು.
ಮಧ್ಯಾಹ್ನದ ಹೊತ್ತಿಗೆ ಮುಕ್ಕಾಲು ಕೆಲಸಗಳೆಲ್ಲಾ ಮುಗಿದಿದ್ದವು. ನಂತರ ಊಟ ಮುಗಿಸಿ ಹಾಗೆಯೇ ಉಳಿದ ಕೆಲಸಗಳನ್ನೆಲ್ಲಾ ಮಾಡಿ ಮುಂದಿನ ಹೂ ತೋಟದಲ್ಲಿ ಅಡ್ಡಾಡತೊಡಗಿ ಹೊಸ ಹೂಗಳನ್ನು ಕಿತ್ತು ತಂದು ಹೂದಾನಿಯಲ್ಲಿ ಅಂದವಾಗಿ ಜೋಡಿಸಿಟ್ಟಳು. ಮಲ್ಲಿಗೆಯ ಬಿರಿ ಮೊಗ್ಗುಗಳನ್ನು ತಂದು ಅಂದವಾದ ಮಾಲೆಯನ್ನು ಕಟ್ಟಿದಳು. ಅಷ್ಟು ಹೊತ್ತಿಗೆ ಜಮೀನುದಾರಿಣಿಯ ಆಗಮನವಾಯಿತು. ದಣಿದು ಬಂದಿದ್ದ ಒಡತಿಗೆ ಬೆಳ್ಳಿ ತಂಪು ಮಜ್ಜಿಗೆಯನ್ನು ಕುಡಿಯಲು ತಂದು ಕೊಟ್ಟಳು.
ಮನೆಯ ಒಳಗೊಮ್ಮೆ ಯಜಮಾನಿ ಕಣ್ಣಾಡಿಸಿದಳು. ಎಲ್ಲವೂ ಸ್ವಚ್ಛವಾಗಿ ಸುಂದರವಾಗಿ ಶಿಸ್ತಿನಿಂದ ಕುಳಿತಿದ್ದವು. ಪಕ್ಕದಲ್ಲೇ ಮಣೆಯ ಮೇಲೆ ಪುಟ್ಟ ಪದಕ, ತಲೆಹೂವು, ಸಣ್ಣ ಸರ, ಉಂಗುರ ಎಲ್ಲವೂ ಒಪ್ಪಾಗಿ ಮಲಗಿದ್ದವು. ಜಮೀನುದಾರಿಣಿ ಬೆಳ್ಳಿಯನ್ನು ಕರೆದು ‘‘ನೀನು ಈಗ ಹೋಗು, ನಾಳೆ ಬರುವಾಗ ನೀನು ಆಶ್ರಮದ ಮುಖ್ಯಸ್ಥರನ್ನು ಕರೆದು ತಾ'' ಎಂದು ಹೇಳಿ ಕಳುಹಿಸಿದಳು.
ಮಾರನೆಯ ದಿನ ಬೆಳಗ್ಗೆ ಬೆಳ್ಳಿ ಮೇಲ್ವಿಚಾರಕರನ್ನು ಕರೆದುಕೊಂಡು ಬಂದಳು. ಯಜಮಾನಿ ಮೇಲ್ವಿಚಾರಕರನ್ನು ಸಂತೋಷದಿಂದ ಬರಮಾಡಿಕೊಂಡಳು. ಬೆಳ್ಳಿಯನ್ನು ಕೆಲಸಕ್ಕೆ ಒಳಗಡೆಗೆ ಕಳುಹಿಸಿದರು. ಮೇಲ್ವಿಚಾರಕರು ನಗುತ್ತಾ ‘‘ನೀವು ಬೆಳ್ಳಿಯನ್ನೇ ಆಯ್ಕೆ ಮಾಡಿದುದು ಹೇಗೆ?'' ತಿಳಿಸಿ ಎಂದರು. ಅದಕ್ಕೆ ಜಮೀನುದಾರಿಣಿ ‘‘ನಾನು ಈ ಮೂವರಿಗೂ ಅವರಿಗೆ ತಿಳಿಯದಂತೆ ಒಂದು ಪರೀಕ್ಷೆಯನ್ನಿಟ್ಟಿದ್ದೆನು. ಮನೆಗೆಲಸ ಮಾಡುವಾಗ ಸಾಮಾನುಗಳ ಕೆಳಗೆ ಒಂದೊಂದು ವಸ್ತುಗಳನ್ನು ಇಟ್ಟಿದ್ದೆ. ಸಾಮಾನನ್ನು ಎತ್ತಿ ಗುಡಿಸುವಾಗ, ಒರಸುವಾಗ ಹಾಗೆ ಸಿಕ್ಕಿದ ವಸ್ತುಗಳನ್ನು ಒಂದು ಮಣೆಯ ಮೇಲೆ ಇಡುವಂತೆಯೂ ಹೇಳಿದ್ದೆ. ಅದರಂತೆ ಮೊದಲನೆಯ ಕೆಂಪಿ ತುಂಬಾ ಸೋಮಾರಿ, ಮೇಲೆ ಮೇಲೆ ಹಾಗೆಯೇ ಗುಡಿಸಿದ ಹಾಗೆ ಮಾಡಿ ಹೊರಟು ಹೋದಳು. ಎರಡನೆಯವಳು ನೀಲಿ, ಕೆಲಸವನ್ನೇನೋ ಚೆನ್ನಾಗಿ ಮಾಡಿದ್ದಳು. ಸಾಮಾನಿನ ಕೆಳಗಿದ್ದ ವಸ್ತುಗಳನ್ನು ನಾನು ಹೇಳಿದ್ದ ಮಣೆಯ ಮೇಲೆ ಇಡದೇ ತಾನೇ ತೆಗೆದುಕೊಂಡು ಹೋಗಿದ್ದಳು. ಇನ್ನು ಮೂರನೆಯವಳು ಬೆಳ್ಳಿ. ಚೆನ್ನಾಗಿ ಕೆಲಸ ಮಾಡುವವಳೂ ಮತ್ತು ಪ್ರಾಮಾಣಿಕಳೂ ಆಗಿದ್ದಾಳೆ. ಸಿಕ್ಕಿದ ವಸ್ತುಗಳನ್ನೆಲ್ಲಾ ಜೋಪಾನವಾಗಿ ಮಣೆಯ ಮೇಲೆ ಇಟ್ಟಿದ್ದಳು. ಅವಳು ನನಗೆ ಮೆಚ್ಚುಗೆ ಆಯಿತು'' ಎಂದಳು.
‘‘ಒಳ್ಳೆಯ ಸ್ವಾರಸ್ಯಕರವಾದ ರೀತಿಯಲ್ಲೇ ಪರೀಕ್ಷೆ ಮಾಡಿದ್ದೀರಿ'' ಎಂದರು ಮೇಲ್ವಿಚಾರಕರು. ಯಜಮಾನಿ ಮುಂದುವರಿಯುತ್ತಾ ‘‘ಇನ್ನು ಮುಂದೆ ಬೆಳ್ಳಿ ನಮ್ಮ ಮನೆಯಲ್ಲಿರಲಿ, ಅವಳ ಪೂರ್ಣವಾದ ಜವಾಬ್ದಾರಿ ನನಗಿರಲಿ'' ಎಂದಳು. ಬೆಳ್ಳಿಯನ್ನು ಕೇಳಿದ್ದಕ್ಕೆ ಅವಳೂ ಒಪ್ಪಿದಳು.
ಮೇಲ್ವಿಚಾರಕರಿಗೆ ಧನ್ಯವಾದಗಳನ್ನು ಜಮೀನುದಾರಿಣಿ ಅರ್ಪಿಸಿದಳು.
(ನೀತಿ: ಪ್ರಾಮಾಣಿಕತೆಯಿಂದ ಮತ್ತು ಕಷ್ಟಪಟ್ಟು ಕೆಲಸ ಮಾಡಿದರೆ ಮುಂದಿನ ಬದುಕು ಸುಖವಾಗಿರುತ್ತದೆ.)

 

 


Post date: 2016-02-07 11:07:35
Post date GMT: 2016-02-07 05:37:35
Post modified date: 2016-02-06 11:21:44
Post modified date GMT: 2016-02-06 05:51:44

Powered by [ Universal Post Manager ] plugin. MS Word saving format developed by gVectors Team www.gVectors.com