ಪುರಂದರದಾಸರು ಮತ್ತು ಭಾರತದ ಐಕ್ಯತೆ

ಸಂತ ಪರಂಪರೆ - 0 Comment
Issue Date : 27.11.2014


ಶ್ರೀ ಪುರಂದರದಾಸರು ವೈಕುಂಠವಾಸಿಗಳಾಗಿ ನಾನ್ನೂರ ಐವತ್ತು ವರ್ಷಗಳಾಗಿರುತ್ತದೆ (ತಾರೀಖು 14-01-1964).ಶ್ರೀ ಪುರಂದರದಾಸರ ನಾಮವೂ ಅವರ ಪದಗಳ ಪ್ರಭಾವವೂ ದೇಶ ಕಾಲಗಳ ಗಡಿ-ಮಿತಿಗಳನ್ನೂ ಮೀರಿ, ಕನ್ನಡಿಗರ ಪ್ರತಿಯೊಂದು ಮನೆಯನ್ನೂ ವ್ಯಾಪಿಸಿದೆ. ಆ ಪುಣ್ಯಾತ್ಮರ ನಾಮಶ್ರವಣ ಮಾಡದ ಕನ್ನಡಿಗನಿಲ್ಲ. ಇಂದಿಗೆ ನಾನ್ನೂರೈವತ್ತು ವರ್ಷಗಳ ಹಿಂದಿದ್ದು ನಿರ್ಯಾಣಹೊಂದಿದ ಆ ದಾಸವರ್ಯರ ಪವಿತ್ರ ನಾಮವು ಇಂದಿಗೂ ಪ್ರತಿ ಮನೆಯ ಮಾತಾಗಿ ಕನ್ನಡಿಗರ ಜೀವಿತದೊಂದಿಗೆ ಹೊಂದಿ ಹೋಗಿರುವುದರ ಗುಟ್ಟೇನು ? ಎಂದು ಯೋಚಿಸಬೇಕಾಗಿದೆ.

ಅವರು ತಮ್ಮ ಜೀವನದಲ್ಲಿ ಅತ್ಯಗಾಧವಾದ ತ್ಯಾಗ ಮಾಡಿ, ಲೌಕಿಕವಾದ ಸಕಲ ಭೋಗಭಾಗ್ಯಗಳನ್ನೂ ತ್ಯಜಿಸಿ, ಕಡುಬಡತನವನ್ನು ಸ್ವೀಕರಿಸಿದ ಮಹಾನುಭಾವರು. ಅವರು ತ್ಯಾಗ ಮಾಡಿದ ಐಶ್ವರ್ಯದ ಮೊತ್ತವೇನೂ ಅಲ್ಪವಾದುದಲ್ಲ ! ಅವರು ನವಕೋಟಿ ನಾರಾಯಣ ಎಂಬ ಪ್ರಶಸ್ತಿಯನ್ನು ಪಡೆದು ಕೊಬ್ಬಿದ ಶ್ರೀಮಂತರಾಗಿದ್ದವರು. ಅಂತಹ ಆಗರ್ಭ ಶ್ರೀಮಂತರು ಆ ಸರ್ವಸ್ವವನ್ನೂ ತ್ಯಾಗ ಮಾಡಬೇಕೆಂದೇ ಕಡುಬಡತನವನ್ನು ಉಡಿದುಂಬಿಸಿಕೊಂಡು, ಮುಂದಿನ ತಮ್ಮ ಜೀವಿತ ಕಾಲವನ್ನೆಲ್ಲ ನಿತ್ಯ ಭಿಕ್ಷಾವೃತ್ತಿಯಿಂದ ಜೀವಿಸಿರಲು ಸಿದ್ಧರಾದರು. ಅವರ ಈ ಮಹಾತ್ಯಾಗವು ಲೌಕಿಕ ಕೀರ್ತಿ ಪ್ರತಿಷ್ಠೆಗಳನ್ನು ಬಯಸಿಯಾಗಲೀ, ಅಧಿಕಾರ ಆಧಿಪತ್ಯಗಳನ್ನು ಅಪೇಕ್ಷಿಸಿಯಾಗಲೀ ಮಾಡಿದುದಲ್ಲ. ಅವರ ತ್ಯಾಗವು ವೈರಾಗ್ಯ ಪ್ರಧಾನವಾದುದು. ಐಹಿಕ ಸುಖಸಂಪತ್ತುಗಳ ಅನಿತ್ಯತೆಯನ್ನು ತಿಳಿದು, ಕೇವಲ ಭಗವತ್ಪ್ರಿಯಕರವಾದ ಮಹಾಯಜ್ಞವೆಂಬ ದೃಷ್ಟಿಯಿಂದ ಮಾಡಿದ ನಿಸ್ಸೀಮ ತ್ಯಾಗವದು.

ನಮ್ಮ ಇಂದಿನ ಪರಿಸ್ಥಿತಿಯನ್ನು ಕುರಿತು ಯೋಚಿಸಿದರೆ, ಭಾರತದೇಶದ ಸ್ವಾತಂತ್ರ್ಯವೂ ಅದರ ಇಂದಿನ ಸಕಲ ವಿಧ ಉನ್ನತಿಯೂ ಮಹಾಮತಿಗಳಾದ ತ್ಯಾಗಶೀಲರಾದ ಮಹಾಪುರುಷರ ಸ್ವಾರ್ಥತ್ಯಾಗದ ಕಾರಣದಿಂದಲೇ ಪ್ರಾಪ್ತವಾಗಿ ಲೋಕದಲ್ಲಿ ತನ್ನ ಕೀರ್ತಿಯನ್ನು ಬೆಳಗಿಸಲು ಸಾಧ್ಯವಾಗಿದೆ ಎಂಬುದನ್ನು ತಿಳಿಯಬಹುದು. ಮಹಾತ್ಮಾಗಾಂಧಿಯವರು, ತಮ್ಮ ಸರ್ವಸ್ವವನ್ನೂ ತ್ಯಾಗಮಾಡಿ ಬಿಳೀಬಟ್ಟೆಯ ಸನ್ಯಾಸಿಯಾಗದಿದ್ದರೆ-ಅಧಿಕಾರ ಐಶ್ವರ್ಯ ಮೋಹಪೀಡಿತರಾಗಿ ತಮ್ಮ ಜೀವನವನ್ನು ಕಳೆದಿದ್ದರೆ-ಭಾರತ ದೇಶವು ಇಂದು ಪರದೇಶೀಯರ ಆಡಳಿತದಿಂದ ನಿರ್ಮುಕ್ತಿ ಹೊಂದಿ ಸ್ವಾತಂತ್ರ್ಯವನ್ನು ಗಳಿಸಿರಲು ಸಾಧ್ಯವಿದ್ದಿತೆ ? ಅದರಂತೆಯೇ ವಿವೇಕಾನಂದರೆಂದು ಸುಪ್ರಸಿದ್ಧರಾದ ಶ್ರೀ ನರೇಂದ್ರನಾಥ ದತ್ತರು ತಮ್ಮ ವಿದ್ಯಾಬುದ್ಧಿ ಪ್ರೌಢಿಮೆ ಪ್ರತಿಭೆಗಳಿಗೆ ತಕ್ಕಂತಹ ಒಂದು ಲೌಕಿಕ ಉದ್ಯೋಗವನ್ನು ಸ್ವೀಕರಿಸಿ ಧನಗಳಿಕೆಯಲ್ಲಿ ನಿರತರಾಗಿ ಕುಳಿತಿದ್ದರೆ, ಭಾರತದ ಆಧ್ಯಾತ್ಮಿಕ ಕೀರ್ತಿ ವೈಭವವು ದಿಗ್ದೆಶೆಗಳಲ್ಲಿ ವಿಸ್ತರಿಸಲು ಸಾಧ್ಯವಿದ್ದಿತೆ ? ಇವರಂತೆಯೇ ಚಿತ್ತರಂಜನದಾಸ್, ಮೋತೀಲಾಲ್ ನೆಹ್ರೂ ಮೊದಲಾದ ಮಹನೀಯರೆಲ್ಲ ಅಗಾಧ ತ್ಯಾಗಮಾಡಿ ಬಡತನವನ್ನು ಸ್ವೀಕರಿಸಿ, ಭಾರತದ ಸ್ವಾತಂತ್ರ್ಯ ಸಮರವನ್ನು ಉಜ್ವಲಗೊಳಿಸಿದರು. ಹೀಗೆ ಲೋಕದಲ್ಲಿ ನಿಸ್ವಾರ್ಥಿಗಳಾದ ತ್ಯಾಗಿ ಮಹಾಪುರುಷರಿಂದ ಆಗಿರುವ ಮಹಾಕಾರ್ಯ ಸುಖಾಪೇಕ್ಷಿಗಳೂ, ಶ್ರೀಮಂತರೂ, ಸ್ವಾರ್ಥನಿರತರೂ ಆದ ಭೋಗೀ ಜನರಿಂದ ಆಗಲು ಸಾಧ್ಯವಿಲ್ಲ. ತಮ್ಮ ನವಕೋಟಿ ನಿಧಿಯನ್ನು, ಶ್ರೀಹರಿ ಪ್ರೀತಿಯಾಗಲೆಂದು ತ್ಯಾಗಮಾಡಿ, ಅಗಾಧ ವೈರಾಗ್ಯ ಭಾಗ್ಯವನ್ನು ಗಳಿಸಿಕೊಂಡು, ಪತ್ನೀಪುತ್ರರೊಂದಿಗೆ ಮನೆಬಿಟ್ಟು ಹೊರಹೊರಟ ನಾಯಕರು ಆನೇಗೋಂದಿಯಲ್ಲಿ ಶ್ರೀ ವ್ಯಾಸರಾಯ ಸ್ವಾುಗಳನ್ನು ಕಂಡರು. ಶ್ರೀ ವ್ಯಾಸರಾಯರು ವಿಜಯನಗರ ಸಾಮ್ರಾಜ್ಯದ ರಾಜಗುರುಗಳು. ಅವರು ಶ್ರೀಮಂತ ಶ್ರೀನಿವಾಸ ನಾಯಕರು ಪರಮ ವೈರಾಗ್ಯಶಾಲಿಗಳಾಗಿ ಸರ್ವಸ್ವ ತ್ಯಾಗ ಮಾಡಿ ಬಂದುದನ್ನು ತಮ್ಮ ಜ್ಞಾನ ದೃಷ್ಟಿಯಿಂದ ತಿಳಿದು, ಅವರನ್ನು ಆದರಿಸಿ, ತಮ್ಮ ಬಳಿಯಿಟ್ಟುಕೊಂಡು, ಶಾಸ್ತ್ರೋಪದೇಶಮಾಡಿ, ಪುರಂದರ ವಿಠಲ ಎಂಬ ಅಂಕಿತವನ್ನು ಕೊಟ್ಟು ಶ್ರೀ ಹರಿಕೀರ್ತನೆ ರಚಿಸಿರೆಂದು ಅನುಮತಿಯಿತ್ತರು.
ಶ್ರೀ ಪುರಂದರದಾಸರು, ತಮ್ಮ ಕೀರ್ತನೆ ಸುಳಾದಿ ಉಗಾಭೋಗಗಳಲ್ಲಿ ಮಾನವ ಜೀವನದ ವಿವಿಧಾನುಭವಗಳನ್ನು, ಕುರಿತು ಹೇಳದಿರುವ ವಿಚಾರವೇ ಇಲ್ಲ. ಅವರು ಐಶ್ವರ್ಯ ಭೋಗಭಾಗ್ಯಗಳ ಅಶಾಶ್ವತ ವಿಚಾರವನ್ನು ಕಂಡು ಜುಗುಪ್ಸೆಪಟ್ಟು ಬಂದವರಾದುದರಿಂದ ಅವರ ದೃಷ್ಟಿ ಕೇವಲ ಭಗವದ್ಭ ಕ್ತಿ, ಜ್ಞಾನ, ವೈರಾಗ್ಯ ವಿಚಾರಗಳನ್ನು ಕುರಿತುದೇ ಆಗಿತ್ತು. ಆದುದರಿಂದ ಅವರು ಲೋಕದ ಪ್ರಾಣಿಕೋಟಿಗಳಲ್ಲಿ ಮನುಷ್ಯ ಜನ್ಮವು ಸರ್ವ ಶ್ರೇಷ್ಠವಾದುದು; ಇದು ಲಭ್ಯವಾಗಿರುವ ಈ ಸುಸಂದರ್ಭದಲ್ಲಿ ಅದನ್ನು ವ್ಯರ್ಥಗೊಳಿಸದೆ ಸಾರ್ಥಕಗೊಳಿಸಬೇಕಾದುದು ಹೇಗೆ ಎಂಬುದನ್ನು ಕುರಿತು ಸೂಚಿಸಬೇಕಾದುದೇ ಅತಿ ಮುಖ್ಯ ಕರ್ತವ್ಯ ಎಂದು ಕಂಡುಕೊಂಡರು.
‘‘ಮಾನವ ಜನ್ಮ ದೊಡ್ಡದು. ಇದ ಹಾನಿಮಾಡಲಿ ಬ್ಯಾಡಿ ಹುಚ್ಚಪ್ಪಗಳಿರಾ.’’ ಎಂಬ ಪದದಲ್ಲಿ-ಲೋಕದ ಇತರ ಯಾವ ಪ್ರಾಣಿಗೂ ಇಲ್ಲದ ಸಕಲೇಂದ್ರಿಯ ಸಂಪತ್ತು ಮನಸ್ಸು ಬುದ್ಧಿವೈಭವ ಮುಂತಾದುವೆಲ್ಲ ಈ ಮನುಷ್ಯ ದೇಹಕ್ಕೆ ದೊರೆತಿರುವಾಗ, ಇಂತಹ ಉತ್ಕೃಷ್ಟ ದೇಹವನ್ನು ಹೆಣ್ಣು-ಮಣ್ಣು-ನಾಲ್ಕು ಹಣ ಹೊನ್ನುಗಳಿಗಾಗಿ ವ್ಯಯಗೊಳಿಸಿ, ವ್ಯರ್ಥಮಾಡುವುದು ಯುಕ್ತವೇ? ಈ ಬಾಳ್ವೆಯೇನು ಶಾಶ್ವತವಾಗಿರುವುದಿಲ್ಲ. ನೀರುಗುಳ್ಳೆಯಂತೆ, ಇಂದಿದ್ದು ಉತ್ತರ ಕ್ಷಣದಲ್ಲಿ ನಾಶಹೊಂದುವಂತಹ ಅನಿತ್ಯ ವಸ್ತು. ಆದುದರಿಂದ ಮೃತ್ಯು ಬರುವುದರೊಳಗಾಗಿ ಇದನ್ನು ಸಾರ್ಥಕಪಡಿಸಿಕೋ ಎಂದು ಬೋಧಿಸಿದ್ದಾರೆ.
ಭಾರತ ದೇಶಕ್ಕೆ ಸ್ವಾತಂತ್ರ್ಯವನ್ನು ಗಳಿಸುವಲ್ಲಿ ಮಹಾಮತಿಗಳಾದ ನಮ್ಮ ರಾಷ್ಟ್ರನಾಯಕರಿಗ ಇದ್ದ ಮಹೋದ್ದೇಶವೇನೆಂಬುದನ್ನು ಅತಿಮುಖ್ಯವಾಗಿ ನಾವಿಂದು ಯೋಚಿಸಬೇಕಾಗಿದೆ. ಆದ್ಯಂತ ಪ್ರಪಂಚದಲ್ಲಿ ಭಾರತ ದೇಶಕ್ಕಿರುವ ಸ್ಥಾನಮಾನ, ಅದರ ಆಧ್ಯಾತ್ಮಿಕ ಸಂಪತ್ತಿನ ಮೇಲ್ಮೆಯನ್ನು ಕುರಿತುದು. ಪ್ರಪಂಚಕ್ಕೆ ಆಧ್ಯಾತ್ಮಿಕ ಮಾರ್ಗದಲ್ಲಿ ಮುನ್ನಡೆಯನ್ನು ತೋರಿಸಲು-ಅದರ ಪ್ರಾಚೀನ ಸಂಸ್ಕೃತಿಯ ಪ್ರಭಾವದಿಂದ ಭಾರತ ದೇಶವೊಂದು ಮಾತ್ರವೇ ಯೋಗ್ಯತೆಯನ್ನು ಗಳಿಸಿದೆ; ಅದು ಲೌಕಿಕವಾಗಿಯೂ ಸ್ವತಂತ್ರ್ಯವಾಗಿರದೆ ಅಧೀನ ರಾಷ್ಟ್ರವಾಗಿದ್ದರೆ-ಗುಲಾಮ ರಾಷ್ಟ್ರವಾಗಿದ್ದರೆ, ಅದು ಹೇಳುವ ಎಂತಹ ಉತ್ತಮ ಮಾತಿಗಾದರೂ ಒಂದು ಮಾನ್ಯತೆ ದೊರೆಯಲಾರದು. ಆದುದರಿಂದ ಅದು ಮೊದಲು ರಾಜಕೀಯ ದಾಸ್ಯದಿಂದ ಮುಕ್ತವಾಗಬೇಕು ಎಂದು ಆ ನಮ್ಮ ರಾಷ್ಟ್ರಧುರೀಣರು ಬಯಸಿದ್ದುದು ಸಮಂಜಸವೇ ಆಗಿದೆ. ಈ ದೃಷ್ಟಿಯಿಂದ ಪಡೆದ ಈ ಲೌಕಿಕ ಸ್ವಾತಂತ್ರ್ಯವು, ನಮ್ಮ ಆಧ್ಯಾತ್ಮಿಕ ಉನ್ನತಿಗೆ ಸಾಧಕವಾಗದಿದ್ದರೆ ಪ್ರಯೋಜನವೇನು? ಭಾರತದೇಶವು ತನ್ನ ರಾಜ್ಯಾಂಗ ನಿಬಂಧನೆಗಳಲ್ಲಿ, ಸಕಲರೂ ತಮ್ಮ ಮತಧರ್ಮ ನಡವಳಿಕೆಗಳಲ್ಲಿ ರಾಜಕೀಯದ ಯಾವ ಆತಂಕವೂ ಇಲ್ಲದೆ, ತಮ್ಮ ತಮ್ಮ ಇಚ್ಛಾನುಸಾರವಾಗಿ ನಡೆಯಲು ಅನುಕೂಲಿಸುವ ಸದವಕಾಶವನ್ನು ಕಲ್ಪಿಸಿಕೊಟ್ಟಿದೆ ! ಆದುದರಿಂದ ಈ ಲೌಕಿಕ ಸ್ವಾತಂತ್ರ್ಯವನ್ನು ಅತ್ಯುತ್ತಮ ರೀತಿಯಲ್ಲಿ ಉಪಯೋಗಿಸಿಕೊಳ್ಳುವ ಒಂದು ಮಾರ್ಗವೆಂದರೆ, ಭಾರತೀಯನು ತನ್ನ ಜನನಮರಣ ಬಂಧವಿಮೋಚನೆಗೆ ಪ್ರಯತ್ನಪಡುವುದೇ ಆಗಿದೆ. ಇದಕ್ಕಿಂತಲೂ ಹೆಚ್ಚಿನ ಜನ್ಮಸಾರ್ಥಕ್ಯ ಮಾರ್ಗ ಮತ್ಯಾವುದಿದೆ?
ಶ್ರೀ ಪುರಂದರದಾಸರು, ತಮ್ಮ ಜೀವಿತದಲ್ಲಿ ಆಚರಿಸಿದಂತೆಯೇ, ಮನುಷ್ಯನು ತನ್ನ ಜನ್ಮಸಾರ್ಥಕ್ಯಕ್ಕಾಗಿ ಮಾಡಬೇಕಾದ ಅತಿಮುಖ್ಯ ಕರ್ತವ್ಯವೇನೆಂಬುದನ್ನು ಈ ಕೆಳಕಂಡ ಪದದಲ್ಲಿ ಸೂತ್ರ ವಾಕ್ಯಗಳಂತಿರುವ ತಮ್ಮ ಬೋಧನೆಯಲ್ಲಿ ಕ್ರೋಢೀಕರಿಸಿರುತ್ತಾರೆ.
‘ವಿಷಯದ ವಿಚಾರಬಿಡು-ವಿಹಿತಕರ್ಮವಮಾಡು ವೈರಾಗ್ಯಭಾಗ್ಯ ಬೇಡು.’ ಜನನಮರಣ ಬಂಧರೂಪವಾದ ಈ ಸಂಸರದಿಂದ ಮುಕ್ತಿ ಪಡೆವ ಉಪಾಯಗಳಲ್ಲಿ ಮೊಟ್ಟಮೊದಲಿನದು ವಿಷಯ ವಿರಕ್ತಿ. ರಸನೇಂದ್ರಿಯ, ಶ್ರವಣೇಂದ್ರಿಯ, ಸ್ಪರ್ಶೇಂದ್ರಿಯ, ಘ್ರಾಣೇಂದ್ರಿಯ, ಚಕ್ಷುರಿಂದ್ರಿಯ ಈ ಐದು ವಿಷಯೇಂದ್ರಿಯಗಳಲ್ಲಿ ಒಂದೊಂದೂ, ಮನುಷ್ಯ ಪ್ರಾಣಿಯ ಸತ್ವಹರಣ ಮಾಡಿ, ಅವನನ್ನು ಮೃತ್ಯುಗೀಡುಮಾಡಲು-ಅಥವಾ ಅಧೋಗತಿಗೆಳೆಯಲು ಶಕ್ತವಾಗಿವೆ. ಹೀಗಿರುವಲ್ಲಿ ಈ ಐದೂ ಉಲ್ಬಣಗೊಂಡರೆ, ಮನುಷ್ಯನು ಪಶುಪ್ರಾಯನಾಗಿ ನಾಶವಾಗುವುದರಲ್ಲಿ ಸಂಶಯವೇನಿದೆ? ಆದುದರಿಂದ ದಾಸರು- ‘ವಿಷಯದ ವಿಚಾರಬಿಡು’ ಮಾತ್ರವಲ್ಲ, ಜಾಗ್ರತನಾಗಿ ‘ವಿಹಿತ ಕರ್ಮವಮಾಡು’ ನಿನಗೆ ನಿನ್ನ ವರ್ಣ ಮತ್ತು ಆಶ್ರಮ ಇವುಗಳಿಗೆ ಉಕ್ತವಾದ ಕರ್ಮಗಳಲ್ಲಿ ನಿರತನಾಗು. ಮನಸ್ಸು ಸದಾ ಸತ್ಕರ್ಮ ಸಚ್ಚಿಂತನೆಗಳಲ್ಲಿ ನಿರತವಾಗಿದ್ದರೆ ದುಶ್ಚಿಂತನೆಗೆ ಪ್ರವೇಶವೇ ಇರುವುದಿಲ್ಲ.
ಹೀಗೆ ದುಷ್ಕರ್ಮಗಳನ್ನು ಪ್ರಯತ್ನಪೂರ್ವಕ ನಿವಾರಿಸಿ, ಆಸಕ್ತಿಪೂರ್ವಕ ಸತ್ಕರ್ಮಗಳಲ್ಲಿ ನಿರತನಾಗಿದ್ದು ನೀನು ಮಾಡಬೇಕಾದ ಕಾರ್ಯವ್ಯಾವುದು ? ಬೇಡಬೇಕಾದ ಭಾಗವ್ಯಾವುದು ಎಂದರೆ ? ಅದೇ ವೈರಾಗ್ಯ ! ವೈರಾಗ್ಯವೆಂದರೆ ಎಲ್ಲ ವಿಚಾರಗಳನ್ನು ನಿರಾಕರಿಸಿ ಕೌಪೀನಧಾರಿಯಾಗಿ ಕೂಡುವುದಲ್ಲ. ವಿಹಿತವಾದ ಸಕಲವನ್ನೂ ಭಗವಂತನಿಂದ ದತ್ತವಾದ ಮಹಾಪ್ರಸಾದವೆಂದು ಅಂಗೀಕರಿಸಿ ಅನುಭವಿಸುವುದು. ಯಾವುದೊಂದೂ ನನ್ನದು, ನನಗಾಗಬೇಕು ಎಂದು ಅಪೇಕ್ಷಿಸದೆ ನಿಷ್ಕಾಮಿಯಾಗಿರುವುದು, ತಾನು ಮಾಡುವ ಸಕಲ ಕಾರ್ಯಗಳನ್ನೂ ಭಗವತ್ಸೇವೆ ಎಂಬ ದೃಷ್ಟಿಯಿಂದ ಮಾಡುವುದು. ಈ ಪದದಲ್ಲಿ ದಾಸರು ಮುಖ್ಯವಾಗಿ ಸರ್ವವಿಧದಿಂದಲೂ ಭಗವದ್ಭಕ್ತಿ ಮಾಡುವ ವಿಚಾರದಲ್ಲೇ ಸದಾ ನಿರತನಾಗಿರಬೇಕೆಂದು ತಿಳಿಸಿದ್ದಾರೆ. ಕೊನೆಯಲ್ಲಿ-ನಶ್ವರವಾದ ಈ ದೇಹದ ವಿಷಯದಲ್ಲಿ ವಿಶೇಷ ಅಭಿಮಾನ ಮಾಡಬೇಡಿರೆಂದು ಎಚ್ಚರಿಸಿದ್ದಾರೆ.
ನಂಬದಿರು ಈ ದೇಹ ಅಂಬುಗುಳ್ಳೆಯಂತೆ ನಂಬಿ ನೀ
ಕೆಡಲುಬೇಡ ॥
ರುಪ್ಪಿಯನು ಅಂಬುಜಾಕ್ಷ ಪುರಂದರ ವಿಠಲನ್ನ ನೆನೆ ಮನವೆ ॥

­ಈ ದೇಹವು ನೀರಿನ ಮೇಲಿನ ಗುಳ್ಳೆಯಂತೆ ಕೇವಲ ಅನಿತ್ಯವಾದುದು. ಆದುದರಿಂದ ಇದನ್ನು ನಂಬಿ, ಇದರ ಕೇಶಭೂಷಣಾದಿ ಅಲಂಕಾರಗಳಲ್ಲೇ ಮಗ್ನನಾಗಿ-ನಿನಗೆ ವಿಹಿತವಾದ ಕರ್ಮಗಳಲ್ಲಿ ಉದಾಸೀನನಾಗಬೇಡ. ಏಕೆಂದರೆ ಇದು ಬೆಲೆುಲ್ಲದ ಪದಾರ್ಥ. ಹೇಗೆಂದರೆ, ಕುರಿ, ಕೋಳಿ, ಹಂದಿ ಮುಂತಾದ ಇತರ ಪ್ರಾಣಿಗಳ ಮೃತ ದೇಹಕ್ಕಾದರೂ ಅದರಲ್ಲಿನ ಮಾಂಸ, ಚರ್ಮ, ಎಲುಬುಗಳಿಗಾಗಿ ಬೆಲೆಸಿಕ್ಕೀತು ! ಮನುಷ್ಯ ಪ್ರಾಣಿಯ ಮೃತದೇಹವು ಅಂತಹ ಯಾವ ಪ್ರಯೋಜನವನ್ನೂ ಒದಗಿಸಲಾರದು. ಆದುದರಿಂದ ಜನ್ಮಸಾರ್ಥಕ್ಯಕ್ಕಾಗಿ ಭಗವಂತನನ್ನು ಧ್ಯಾನಿಸುವ ಕಾರ್ಯದಲ್ಲಿ ನಿರತನಾಗು ಎಂದು ಬೋಧಿಸಿದ್ದಾರೆ. ಭಾರತ ದೇಶದಲ್ಲಿ ಐಕ್ಯತೆಯು ಸಂಸ್ಕೃತಿಮೂಲವಾದುದು. ದೇಶಾದ್ಯಂತ, ಅಸೇತು ಹಿಮಾಚಲವಾಗಿ, ಪೂರ್ವ ಪಶ್ಚಿಮ ಅಸ್ಸಾಮಿನಿಂದ ಕಾಥೇವಾಡಿಯವರೆಗೆ ಅನೇಕಾನೇಕ ಜಾತಿಮತ ಪಂಗಡಗಳವರಿದ್ದರೂ, ಅವರ ಹೃದಯದ ಅಂತರಾಳದಲ್ಲಿ ನೆಲೆಸಿರುವ ಧರ್ಮಪ್ರೇಮ- ಭಗವದ್ಭಕ್ತಿ, ಅತಿಥಿ ಸತ್ಕಾರ ಮುತಾಂದ ಉದಾತ್ತ ಗುಣಗಳು ಶೈವ, ವೈಷ್ಣವ, ಜೈನ, ಬೌದ್ಧ ಎಂಬ ಭೇದವಿಲ್ಲದೆ ಸರ್ವರಲ್ಲೂ ಒಂದೇ ಬಗೆಯಲ್ಲಿ ನೆಲೆಸಿವೆ. ಈ ಸಂಸ್ಕೃತಿಯ ಆಧಾರವನ್ನೇ ಮೂಲವಾಗಿಟ್ಟುಕೊಂಡು, ನಮ್ಮ ನಾಡಿನ ಸಕಲ ಸಾಧು ಸಂತರೂ ಆಗಾಗ ಅವಶ್ಯಕವೆನ್ನಿಸಿದ್ದ ಅಲ್ಪಸ್ವಲ್ಪ ಸುಧಾರಣೆಗಳನ್ನು ಮಾಡಿರುವುದು ಕಂಡುಬಂದಿದೆ. ಶ್ರೀ ಪುರಂದರ ದಾಸರ ಜೀವಿತಕಾಲದಲ್ಲಿ ಒಮ್ಮೆ ಸೋಲಾಪುರದಲ್ಲಿ ವೀರಶೈವರಿಗೂ, ಬ್ರಾಹ್ಮಣರಿಗೂ ಒಂದಾನೊಂದು ಕಾರಣಕ್ಕಾಗಿ ಮಟಮಟ ಮಧ್ಯಾಹ್ನದ ವೇಳೆಯಲ್ಲಿ ಬಹುಬಿಕ್ಕಟನ ಪ್ರಸಂಗವೊಂದು ಸಂಘಟಿಸಿದಂತೆ! ಉಭಯ ಪಕ್ಷದಲ್ಲೂ ಹಲವರು ನೆರೆದು ಮಾತು ಪ್ರತಿಮಾತು-ಬಿರುನುಡಿಗಳ ಹದ್ದನ್ನು ಮೀರಿ ಮುಷ್ಟಾಮುಷ್ಟಿ ಕೇಶಾಕೇಶಿಯಾಗುವಂಥಾ ಪ್ರಸಂಗ ಬಂತಂತೆ ! ಆ ವಿಚಾರವನ್ನು ಕೇಳಿದ ದಾಸರು ಆ ಸ್ಥಳಕ್ಕೆ ಬರಲು ಅವರ ಸಾತ್ವಿಕ ಸ್ವರೂಪ ವ್ಯಕ್ತಿತ್ವಗಳ ಪ್ರಭಾವದಿಂದ ಉಭಯ ಪಕ್ಷದವರೂ ತಮ್ಮ ತಮ್ಮ ಉದ್ವೇಗ ಕಾರಣವನ್ನು ಕುರಿತು ಅವರಲ್ಲಿ ನಿವೇದಿಸಿಕೊಂಡರಂತೆ. ಆಗ ಅ ಮಹಾನುಭಾವರು – ‘‘ಇಲ್ಲಿ ಕೇಳಿ ಬ್ರಾಹ್ಮಣರು ಜಂಗಮರು ಎಂಬ ಈ ಬಡಿದಾಟವೇಕೆ ? ಜಂಗಮರು ನಾವು ಜಗದೊಳು ಜಂಗಮರು ನಾವು, ನಾವೂ ಜಂಗಮರೇ ? (ಸ್ಥಾವರರೇನಲ್ಲ) ಲಿಂಗಾಂಗಿಗಳು (ಲಿಂಗದೇಹವುಳ್ಳವರು) ಮಂಗಳವಂತರ ಮಂಗಳ ಸ್ವರೂಪನಾದ ಶಿವನ ಭಕ್ತರನ್ನು ಭವಿಗಳೆಂದೇಕೆ ಜರಿಯುವಿರಿ ! ಭೂತಿ ನಮಗುಂಟು. ವಿಶ್ವೇಶ ನಮಗುಂಟು ಶೋಭನ ಮುದ್ರೆಯೂ ನಮಗುಂಟು.’’ ಅಷ್ಟು ಮಾತ್ರವಲ್ಲ ‘ರಕ್ತರು ನಾವು, ಶೀಲವಂತರು ನಾವು, ವೀರಭದ್ರನ ಪ್ರಿಯ ಭಕ್ತರು ನಾವು’ ಎಂದೀಪರಿಯಲ್ಲಿ ಹಾಡಿ ಉಭಯ ಧರ್ಮಗಳವರಲ್ಲೂ ಭಕ್ತಿ, ಜ್ಞಾನ, ಶೀಲ, ವಿರಕ್ತಿ ಮುಂತಾದವುಗಳೆಲ್ಲ ಬೇರೆ ಬೇರೆ ನಾಮರೂಪಗಳಿಂದ ಇರುವ ವಿಚಾರಗಳನ್ನು ವ್ಯಕ್ತಪಡಿಸಿ ಉಭಯ ಪಕ್ಷದವರನ್ನೂ ಸಮಾಧಾನಪಡಿಸಿದರಂತೆ.
ಭಾರತ ದೇಶಾದ್ಯಂತ ವ್ಯಾಪಿಸಿರುವ ಪುಣ್ಯ ತೀರ್ಥಕ್ಷೇತ್ರಗಳು-ದಕ್ಷಿಣ ಭಾರತದವರು ಕಾಶಿ, ಹರಿದ್ವಾರ, ಹೃಷೀಕೇಶ, ಬದರಿ, ಕೈಲಾಸಗಳಿಗಾಗಿ ಉತ್ತರಭಾರತಕ್ಕೂ; ತಿರುಪತಿ, ರಾಮೇಶ್ವರ, ಕಾಂಚೀಪುರ, ಕನ್ಯಾಕುಮಾರಿ, ಚಿದಂಬರಂ, ಉಡುಪಿ ಮುಂತಾದ ಕ್ಷೇತ್ರಗಳಿಗಾಗಿ ಉತ್ತರ ಭಾರತದವರು ದಕ್ಷಿಣ ಭಾರತಕ್ಕೂ ಯಾತ್ರೆಗಾಗಿ ಬರುವುದೂ; ಗಂಗಾಸ್ನಾನ, ಸೇತುಸ್ನಾನಗಳಿಗಾಗಿ ತಮ್ಮ ಜೀವನದಲ್ಲಿ ಒಮ್ಮೆಯಾದರೂ ಯಾತ್ರೆ ಮಾಡಬೇಕೆಂದು ಅಪೇಕ್ಷಿಸುವುದೂ ಭಾರತ ದೇಶೀಯರ ಹೃದಯಾಂತರಾಳದಲ್ಲಿ ನೆಲೆಸಿದ ರಕ್ತಗತ ಭಾವನೆಯಾಗಿದೆ. ಹೀಗೆ ಧಾರ್ಮಿಕ ದೃಷ್ಟಿಯಿಂದ ಸಾಂಸ್ಕೃತಿಕ ದ್ಟೃುಂದ ನೆಲೆಸಿದ್ದ ಭಾರತೀಯ ಭಾವೈಕ್ಯತೆಗೆ ಈಗ್ಗೆ ನಾಲ್ಕು ಶತಮಾನಗಳ ಹಿಂದೆ ವಿಶೇಷ ಉತ್ತೇಜನಕರಾಗಿದ್ದು , ಭಾರತ ದೇಶಾದ್ಯಂತ ಸಕಲ ತೀರ್ಥಕ್ಷೇತ್ರಗಳಿಗೂ ಸಂಚರಿಸಿ, ತಮ್ಮ ಮೃದು ಮಧುರ ಕನ್ನಡ ಪದ ಸುಳಾದಿಗಳ ಮೂಲಕ ವೇದಶಾಸ್ತ್ರ ಪುರಾಣ ಇತಿಹಾಸಗಳ ಸಾರಾಂಶವನ್ನು ಕನ್ನಡ ವಾಜ್ಞಯ ಭಂಡಾರದಲ್ಲಿ ತುಂಬಿಸಿದ ಮಹಾ ಪುರುಷರು ಶ್ರೀ ಪುರಂದರದಾಸರು. ಈ ಮಹನೀಯರ ಪುಣ್ಯ ನಾಮಸ್ಮರಣೆ ಸಕಲರಿಗೂ ಶ್ರೇಯಸ್ಕರವಾದುದು.

-ಶ್ರೀ ಸುಬೋಧ ರಾಮರಾವ್

 

 

   

Leave a Reply