ಪುರಾಣ: ಬದುಕಿನ ದಾರಿದೀಪ

ಚಿಂತನ - 0 Comment
Issue Date : 29.04.2015

ಬಹು ಪ್ರಾಚೀನ ಭಾರತೀಯ ಸಂಸ್ಕೃತಿ ಪರಂಪರೆಯನ್ನು ಯೋಗ್ಯವಾಗಿ ಅರ್ಥ ಮಾಡಿಕೊಳ್ಳಬೇಕಾದರೆ ವೇದಗಳನ್ನೇ ಆಶ್ರಯಿಸಬೇಕು.
ಅಲ್ಲಿರುವ ಗಹನ ತತ್ತ್ವಗಳನ್ನು ಸಾಮಾನ್ಯರಿಗೂ ಎಟುಕುವಂತೆ ಮಾಡಿದ್ದು ಪುರಾಣಗಳು. ವೇದಜ್ಞಾನವನ್ನು ಸಂಪಾದಿಸಿಕೊಟ್ಟವರು ವ್ಯಾಸಮಹರ್ಷಿಗಳು. ಹಾಗೆಂದೇ ಅವರು ವೇದವ್ಯಾಸ ಎನಿಸಿದ್ದು, ಅವರೇ ವೇದವಿಹಿತ ಧರ್ಮ ಪ್ರತಿಪಾದನೆಗಾಗಿ ವೇದಾಂತ ಸಂಪಾದಿಸಿದರು. ಆಗಲೂ ಅವರಿಗೆ ತೃಪ್ತಿ ಆಗದೇ ಪುರಾಣಗಳನ್ನು ‘ಕಂಡರು.’ ಹದಿನೆಂಟು ಪುರಾಣಗಳು, ಅಷ್ಟೇ ಸಂಖ್ಯೆಯ ಉಪಪುರಾಣಗಳು ಹೀಗೆ ಜನ್ಮ ತಾಳಿದವು. ಇಷ್ಟಾದರೂ ಅವರ ಜ್ಞಾನ ಪ್ರಸಾರದ ಹಸಿವು ಹಿಂಗಲಿಲ್ಲ! ಪಂಚಮವೇದ ಎಂದು ಖ್ಯಾತವಾದ ಮಹಾಭಾರತವನ್ನು ಸಂರಚಿಸಿದರು. ಅಲ್ಲಿನ ಕಥೆಗೆ ತಾನೇ ಒಂದು ಪಾತ್ರವಲ್ಲ ಪ್ರತ್ಯಕ್ಷದರ್ಶಿ ಆದುದು ವಿಶೇಷ. ಭಗವಂತನ ಗುಣಗಾನ ಮಾಡಿದ್ದು ಮತ್ತೂ ಕಡಿಮೆ ಎನ್ನಿಸಿ ಭಾಗವತ ಪುರಾಣ ರಚಿಸಿದ್ದಾರೆ!
ಪುರಾಣ ಸಾಹಿತ್ಯವನ್ನು ಈ ನೆಲೆಯಲ್ಲಿ ನಾವು ನೋಡಿದರೆ ಅದು ಪುರಾತನರ ಭಾಷೆ ಎಂಬ ಬಣ್ಣನೆ ಯೋಗ್ಯವೆನಿಸುತ್ತದೆ. ಅದೇನೂ ಕಟ್ಟು ಕಥೆಯಲ್ಲ, ಕಾವ್ಯ ಕಲ್ಪನೆಯೂ ಅಲ್ಲ. ದರ್ಶನ, ಗುಹ್ಯ ಹಾಗೂ ಸಮಾಧಿ ಎಂಬ ಭಾಷಾತ್ರಯಗಳು, ನೂರು ಬಗೆಯ ರೀತಿ ವ್ಯತ್ಯಾಸ ಮೊದಲಾದ ಏಳು ಭೇದಗಳನ್ನು ತಿಳಿಯೇ ಪುರಾಣಾದಿಗಳನ್ನು ಅರ್ಥೈಸಲು ಸಾಧ್ಯವಿಲ್ಲ, ‘ಅರಿಯದೇ ಅರ್ಥೈಸಿದರೆ ಅರ್ಥಕ್ಕಿಂತ ಅಪಾರ್ಥವೇ ಆದೀತು’ ಎಂಬುದು ಸ್ವತಃ ವೇದವ್ಯಾಸರದೇ ಮಾತು.
ವೇದ ಪ್ರತಿಪಾದಿತವಾದ ತತ್ತ್ವಜ್ಞಾನವು ಅಂತಿಮ ಸತ್ಯಶೋಧನೆಗೆ ತೊಡಗಿದ್ದು. ಅದನ್ನು ಸರಿಯಾಗಿ ಅರಿತವರಿಗೆ ಸತ್ಯದರ್ಶನ ಖಂಡಿತಾ ಆಗುವುದು. ಈ ನಿಟ್ಟಿನಿಂದ ನೋಡಿದರೆ ಪುರಾಣ ಸಾಹಿತ್ಯವು ಎಲ್ಲ ಅನುಭವವು ಪ್ರತಿಬಿಂಬಿತವಾಗಿರುವ ಉ ಪಾಂತ ಸತ್ಯವನ್ನಾದರೂ ದೊರಕಿಸುವ ಮಾನವಸಾಧನೆಯನ್ನು ಪ್ರತಿಬಿಂಬಿಸುತ್ತದೆ.
ಒಂದು ಜನಾಂಗದ ಮನೋವಿಶ್ಲೇಷಣೆಯನ್ನು ಅದರ ಪುರಾಣ ಸಾಹಿತ್ಯದ ವಿಮರ್ಶಾತ್ಮಕ ಅಧ್ಯಯನದಿಂದ ಮಾಡಬಹುದು ಎಂಬುದು ವಿಚಾರವಂತರ ಮತ.
ತಮ್ಮ ಕಾಲದಲ್ಲೇ ನಡೆದ, ಅಥವಾ ತಮ್ಮ ಹಿಂದಿನವರು ಹೀಗೆ ನಡೆದಿತ್ತೆಂದು ಹೇಳಿದ ಸಂಗತಿಗಳೇ ಪುರಾಣಗಳ ಹೂರಣ. ಇದು ಸರಿ, ಇದು ತಪ್ಪು, ಇದು ಮಾಡಬೇಕು, ಇದನ್ನು ಮಾಡಬಾರದು ಇತ್ಯಾದಿ ಬದುಕಿಗೆ ಬೇಕಾದ ಸಂಗತಿಗಳನ್ನು ಉದಾಹರಣೆಗಳ ಮೂಲಕ ಪುರಾಣ ಸಾಹಿತ್ಯವು ನಮಗೆ ನೀಡಿದೆ. ಅನುನಯದ ಮಾತಿನಲ್ಲಿ ನೀತಿಯನ್ನು ನಮಗೆ ಉಣಬಡಿಸುವ ಕಾರ್ಯ ಈ ಪುರಾಣಗಳಿಂದಾಗಿದೆ. ಹಾಗೆಂದೇ ಪೌರಾಣಿಕ ನೀತಿತತ್ತ್ವದ ತಳಹದಿ ಧರ್ಮ. ಈ ಧರ್ಮವು ವ್ಯಕ್ತಿ, ಸಮಾಜ ಮತ್ತು ಸಮಸ್ತ ವಿಶ್ವದ ಏಳಿಗೆ ಮತ್ತು ಒಳಿತಿಗೆ ಸಹಾಯಕವಾಗುವ ಎಲ್ಲ ಅಂಶಗಳನ್ನು ಒಳಗೊಳ್ಳುವುದು ವಿಶೇಷ. ಮನುಷ್ಯನ ಗುಣಸ್ವಾವಗಳು, ಆತನು ಮಾಡಬೇಕಾದ ಉಚಿತ ಕರ್ಮಗಳು, ಮಾಡಲೇಬಾರದಾದ ಅನುಚಿತ ಕರ್ಮಗಳು ಇವೆಲ್ಲದರ ನಿರೂಪಣೆ ಇಲ್ಲಿದೆ.
ಇಷ್ಟೇ ಅಲ್ಲದೇ ಪುರಾಣಗಳು ಸಾಮಾನ್ಯ ಮತ್ತು ವಿಶೇಷ ಎಂಬ ಎರಡು ರೀತಿಯ ಧರ್ಮಗಳನ್ನು ಕುರಿತು ಹೇಳುವುದು ಮತ್ತು ವಿಶೇಷ. ಹಾಗೆಂದೇ ಪುರಾಣವೆಂದರೆ ನಮಗೆ ಸುಲಭವಾಗಿ ನಡೆಯಲು ದಾರಿದೀಪ.

– ಶ್ರೀನಿಧಿ

   

Leave a Reply