ಪುಲ್ಲೇಲ ಗೋಪಿಚಂದ್‌ಗೆ ‘ಹಿಂದು ರತ್ನ’ ಪ್ರಶಸ್ತಿ

ಸಾಧನೆ - 0 Comment
Issue Date : 08.05.2015

ಕರ್ಣಾವತಿ (ಅಹಮದಾಬಾದ್): ಹಿಂದು ಹೆಲ್ಪ್‌ಲೈನ್‌ನ ನಾಲ್ಕನೆಯ ವಾರ್ಷಿಕೋತ್ಸವದ ಅಂಗವಾಗಿ ‘ಹಿಂದು ರತ್ನ’ ಪುರಸ್ಕಾರವನ್ನು ಈ ಬಾರಿ ಬ್ಯಾಡ್ಮಿಂಟನ್ ದಂತಕಥೆಯಾಗಿರುವ ಖ್ಯಾತ ಬ್ಯಾಡ್ಮಿಂಟನ್ ಪಟು ಪುಲ್ಲೇಲ ಗೋಪಿಚಂದ್ ಅವರಿಗೆ ನೀಡಲಾಗಿದೆ. ಅದೇ ರೀತಿ ಕೃಷಿಕರಾದ ಡಾ. ಆರ್.ಕೆ. ಪಾಠಕ್ ಹಾಗೂ ಡಾ. ರಾಮ್ ಅವರಿಗೂ ‘ಹಿಂದು ರತ್ನ’ ಪ್ರಶಸ್ತಿ ನೀಡಲಾಗಿದೆ.

 ಹಿಂದು ಸಮಾಜಕ್ಕೆ ಗಮನಾರ್ಹ ಸೇವೆ ಸಲ್ಲಿಸಿದವರಿಗೆ, ರಾಷ್ಟ್ರದ ಹಿರಿಮೆಯನ್ನು ಕಲೆ, ಸಂಸ್ಕೃತಿ, ವಿಜ್ಞಾನ, ಕೈಗಾರಿಕೆ, ಕ್ರೀಡೆ, ಅರ್ಥಕ್ಷೇತ್ರ, ಬುಡಕಟ್ಟು ಕಲ್ಯಾಣ ಮುಂತಾದ ಕ್ಷೇತ್ರಗಳಲ್ಲಿ ಎತ್ತಿಹಿಡಿದವರಿಗೆ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಇದಕ್ಕೂ ಮುನ್ನ ‘ಹಿಂದು ರತ್ನ’ ಪ್ರಶಸ್ತಿಯನ್ನು ನಟ ಪೋಂಕ್ಷೆ, ಗುಹೆ ಕಲಾವಿದ ಡಾ. ಯಶೋಧರ ಮಠ್‌ಪಾಲ್, ಬುಡಕಟ್ಟು ಕಲ್ಯಾಣದ ಡಾ. ವಿನೋದ್‌ಕುಮಾರ್, ವಿಷ್ಣು ಹರಿ ದಾಲ್ಮಿಯಾ, ಡಾ. ಸುಬ್ರಮಣಿಯನ್‌ಸ್ವಾಮಿ, ನಾನಾ ಪಾಲ್ಕರ್ ಸ್ಮೃತಿ ಸಮಿತಿ ಮತ್ತು ಶ್ರೀಮತಿ ಸುನಂದಾ ಪಟವರ್ಧನ್ ಇವರಿಗೆ ನೀಡಲಾಗಿತ್ತು.

 ಈ ಸಂದರ್ಭದಲ್ಲಿ ಮಾತನಾಡಿದ ಡಾ. ಪ್ರವೀಣ್ ತೊಗಾಡಿಯಾ ಅವರು, ಆಪತ್ಕಾಲದಲ್ಲಿ ಹಿಂದುಗಳಿಗೆ ನೆರವು ನೀಡುವುದು ಅತ್ಯಂತ ಮುಖ್ಯವಾಗಿದೆ. ನೆರವು ಲಭ್ಯವಿಲ್ಲ ಎಂಬ ಕಾರಣಕ್ಕಾಗಿ ಯಾವುದೇ ಹಿಂದುವು ನರಳುವಂತಾಗಬಾರದು. ರಕ್ತ, ಆರೋಗ್ಯ, ಅಪಘಾತ, ಪ್ರಯಾಣ, ಪ್ರಾಕೃತಿಕ ದುರಂತಗಳು ಇತ್ಯಾದಿ ಸಂದರ್ಭದಲ್ಲಿ ನೆರವು ಸಿಗದಿರುವ ಸಾಧ್ಯತೆಗಳು ಇರುತ್ತವೆ. ಈ ವರ್ಷ ನಮ್ಮ ದೇಶದಲ್ಲಿ ರೈತರು ಅಂತಹ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ. ಹಾಗಾಗಿ ಹಿಂದು ಹೆಲ್ಪ್‌ಲೈನ್ ಅಂತಹ ರೈತರಿಗಾಗಿ ನೆರವು ನೀಡಲು ಬಯಸಿದೆ. 2013ರಲ್ಲೂ ಹಿಂದು ಹೆಲ್ಪ್‌ಲೈನ್ ಮಹಾರಾಷ್ಟ್ರದ ಬರಪೀಡಿತ ರೈತರಿಗಾಗಿ ನೀರಿನ ಟ್ಯಾಂಕರ್, ಹಸುಗಳಿಗೆ ಮೇವು ಒದಗಿಸಲು ಧಾವಿಸಿತ್ತು ಎಂದು ಹೇಳಿದರು.

 ಹಿಂದು ಹೆಲ್ಪ್‌ಲೈನ್ ಆರಂಭವಾದ ಬಳಿಕ ಸುಮಾರು 1.5 ಲಕ್ಷಕ್ಕೂ ಹೆಚ್ಚು ಮಂದಿಗೆ ನೆರವು ನೀಡಲಾಗಿದೆ. ಹಿಂದು ಹೆಲ್ಪ್‌ಲೈನ್‌ಗಾಗಿ ಸಂಪರ್ಕಿಸಿ: 020 – 66803300 ಮತ್ತು 07588682181

   

Leave a Reply