ಪೋಷಕರು ಹೇಗಿರಬೇಕು?

ಯುವ - 0 Comment
Issue Date : 08.05.2015

ಪೋಷಕರು ಮಕ್ಕಳ ಹತ್ತಿರ ಮಾತನಾಡುವಾಗ ಸಮಾಧಾನವಾಗಿ, ಆಲೋಚಿಸಿ ಮಾತಾಡುವ ಪರಿಪಾಠ ಬೆಳೆಸಿಕೊಂಡರೆ ನಿಮ್ಮ ಮಕ್ಕಳ ಬಾಲ್ಯ ಸುಂದರವಾಗಿರುತ್ತದೆ.
ಮಕ್ಕಳ ಮನಸ್ಸು ಸೂಕ್ಷ್ಮ. ನಿಮ್ಮ ಒರಟು ಮಾತುಗಳು ಅವುಗಳ ಕೋಮಲ ಮನಸ್ಸನ್ನು ಘಾಸಿಗೊಳಿಸುತ್ತವೆ. ಸಹನೆ ಮತ್ತು ಸಮಾಧಾನವಾಗಿ ತಿಳಿಹೇಳಿದಾಗ ಮಕ್ಕಳು ತಿದ್ದಿಕೊಳ್ಳುವುದು ಜಾಸ್ತಿ.
ಮಕ್ಕಳು ಮತ್ತು ನಿಮ್ಮ ಸಂಬಂಧ ಸುಂದರವಾಗಿರಬೇಕೆಂದರೆ ನಿಮ್ಮ ಮಕ್ಕಳ ಜತೆಯಲ್ಲಿ ನೀವಾಡುವ ಮಾತುಗಳು, ಸಾಮೀಪ್ಯ, ಸಾಂತ್ವನ ಇವುಗಳೇ ಪ್ರಧಾನವಾದದ್ದು. ನಿಜ… ನೀವಿಬ್ಬರೂ ಉದ್ಯೋಗಕ್ಕೆ ಹೋಗುವವರು, ಸಮಯವೇ ಸಾಲದು. ಇನ್ನು ಮಕ್ಕಳ ಮಾತು ಕೇಳುವುದೆತ್ತ….? ಮಾತಾಡಿದರೂ… ಏನು? ಹೋಂವರ್ಕ್ ಮಾಡಿದಿಯಾ? ಈ ಟೆಸ್ಟ್ ನಲ್ಲಿ ಕಡಿಮೆ ಅಂಕಗಳು ತೆಗೆದಿದ್ದೀಯಾ? ಮುಂದೆ ಕತ್ತೆ ಕಾಯಬೇಕಾಗುತ್ತದೆ… ಹಾಗೆ… ಹೀಗೆ… ಎನ್ನುವುದರಲ್ಲೇ ದಿನ ಮಗಿದುಬಿಡುತ್ತದೆ. ಬದಲಾಗಿ ತನ್ನ ಮಗುವಿಗೆ ಕಡಿಮೆ ಅಂಕಗಳು ಏಕೆ ಬಂದವು, ಅವನ ಓದು, ಬರಹಗಳ ಬಗ್ಗೆ ನಾವೆಷ್ಟು ಸಹಕರಿಸುತ್ತಿದ್ದೇವೆ ಎಂದು ಯೋಚಿಸಲಾರರು.
ಅವರ ಆಲೋಚನೆಗಳೆಲ್ಲಾ ಒಂದೇ. ತುಂಬಾ ಡೊನೇಷನ್ ಕೊಟ್ಟು ಒಳ್ಳೆ ಶಾಲೆಗೆ ಸೇರಿಸಿದ್ದೀವಿ. ಟ್ಯೂಷನ್‌ಗೆ ಹಾಕಿದ್ದೇವೆ, ಎಲ್ಲಾ ಸವಲತ್ತುಗಳನ್ನು ಕೊಟ್ಟಿದ್ದೇವೆ. ಇನ್ನೇನು ಕಡಿಮೆಯಾಗಿದೆ…? ಕಡಿಮೆ ನಂಬರ್‌ನ್ನು ತೆಗೆದಿದ್ದಾನೆ ಎಂದು ಬೈಯುವುದು…. ಹೊಡೆಯುವುದು ಮಾಡುತ್ತಿದ್ದರೆ, ಮಕ್ಕಳು ತಮ್ಮ ವಿದ್ಯಾಭ್ಯಾಸವಿರಲಿ ಜೀವನದ ಆಸಕ್ತಿಯನ್ನೇ ಕಳೆದುಕೊಳ್ಳುವರು. ಅಲ್ಲದೆ ದೊಡ್ಡವರಾಗುತ್ತಾ ನೀವು ತಿಳಿಹೇಳಿದರೂ ಕೇರ್ ಮಾಡುವುದಿಲ್ಲ. ತಂದೆ-ತಾಯಿಗಳು ಮಕ್ಕಳೊಂದಿಗೆ ಎಂದೂ ಹೀಗೆ ಹೇಳಬೇಡಿ.
ಹೌದು, ನಿಮಗೆ ನಿಮ್ಮ ಕೆಲಸದ ಒತ್ತಡವಿರುತ್ತದೆ. ಆದರೆ… ಯೋಚಿಸಿ ನೀವು ದುಡಿಯುತ್ತಿರುವುದು ಈ ನಿಮ್ಮ ಮಕ್ಕಳಿಗೇ ತಾನೇ… ಅವರೇ ನಿಮ್ಮಿಂದ ಆನಂದ ಪಡೆಯದಿದ್ದರೆ, ನೀವು ಸಂಪಾದಿಸಿ ಪ್ರಯೋಜನವೇನು? ನಿಮಗೆ ಕೆಲಸದ ಒತ್ತಡವಿದೆ ಎಂದು ತಿಳಿಯುವ ವಯಸ್ಸು… ಮನಸ್ಸು ಅವರಿಗಿರುವುದಿಲ್ಲ. ತಮ್ಮ ಶಾಲೆಯಲ್ಲಾದ ವಿಚಾರ, ಸ್ನೇಹಿತರು, ತಮ್ಮ ಗುರುಗಳು ಪ್ರತಿಯೊಂದನ್ನು ಹೇಳಿ, ಸಡಗರ ಪಡಲು ಇಷ್ಟಪಡುತ್ತಾರೆ. ಆಗ ನೀವು ನನಗೆ ಟೈಮ್ ಇಲ್ಲ, ಸುಮ್ಮನೆ ಹೋಗಿ ಓದಿಕೋ ಬೇರೆ ಕೆಲಸ ಇಲ್ಲವಾ… ಎಂದು ಮಾತ್ರ ಹೇಳಬೇಡಿ.
ಈ ರೀತಿ ಮಾಡಿದರೆ ಆ ಎಳೆಮನಸ್ಸಿಗೆ ತುಂಬಾ ನೋವಾಗುತ್ತದೆ. ಮುಂದೆ ಆ ಮಕ್ಕಳು ಏನು ಮಾಡುತ್ತಿದ್ದಾರೆ…? ಒಳ್ಳೆಯ ಹಾದಿಯಲ್ಲಿದ್ದಾರೋ… ದಾರಿ ತಪ್ಪಿದ್ದಾರೋ ತಿಳಿಯುವುದಿಲ್ಲ. ಆದ್ದರಿಂದ ಅವರನ್ನು ಬಾಲ್ಯದಿಂದಲೇ ಪ್ರೀತಿ, ಮಮತೆ ಕೊಟ್ಟು ಬೆಳೆಸಿರಿ. ಅವರ ಸುಂದರ ಬಾಲ್ಯವನ್ನು ಕೊನೆಯವರೆಗೂ ಅವರು ನೆನಪಿಸಿಕೊಳ್ಳಬೇಕಿದ್ದರೆ, ಬಾಲ್ಯದಲ್ಲಿ ನೀವು ನೀಡುವ ಭದ್ರತೆ, ಮಮತೆ, ಆತ್ಮೀಯತೆಯೇ ಅತೀ ಮುಖ್ಯ.
ಮಕ್ಕಳು ಬೆಳೆದು ಎಷ್ಟೇ ಪ್ರೌಢರಾದರೂ… ಪೋಷಕರ ಹತ್ತಿರ ಬಾಲಿಶವಾಗಿಯೇ ಆಡುತ್ತಾರೆ. 20 ವರ್ಷದ ಮಗ 10 ವರ್ಷದ ಹುಡುಗನ ಹಾಗೆ ವ್ಯವಹರಿಸುತ್ತಾನೆ. ಆಗ… ನಿನ್ನ ವಯಸ್ಸಿಗೆ ತಕ್ಕ ಹಾಗೆ ಆಡು ಎಂದು ಬೈಯುವುದು ತರವಲ್ಲ. ಕೆಲವು ವಿಚಾರಗಳು ನಿಮಗೆ ಕಿರಿಕಿರಿ ಎನಿಸಿದರೂ, ಆ ಕ್ಷಣ ಪ್ರತಿಕ್ರಿಯಿಸಲು ಹೋಗಬಾರದು. ನಂತರ ಸಮಯ ಸಾಧಿಸಿ, ನೀನು ಹೀಗೆ ಮಾಡಿದ್ದು ಸರಿಯೇ. ನೀನೇ ಹೇಳು ಅಂತಾ ತಿದ್ದಿ, ಬುದ್ಧಿ ತಿಳಿಸಿ.
ಮಕ್ಕಳಿಗೆ ಪಾಠ ಹೇಳಿಕೊಡಲು ಸಹನೆ ಬೇಕು. ತುಂಬಾ ಸಲ ಹೇಳಿಕೊಟ್ಟರೂ, ಎಷ್ಟು ಬಾರಿ ಹೇಳಲಿ, ನಿನಗೇನು ಬುದ್ದಿ ಇಲ್ಲವಾ? ಏನು ತಲೆಯಲ್ಲಿ ತುಂಬಿಕೊಂಡಿರುವೆ? ಎಂದೆಲ್ಲಾ ಹೇಳಬಾರದು. ಏಕೆಂದರೆ ಮಕ್ಕಳಿಗೂ ಅಮ್ಮ-ಅಪ್ಪನಿಂದ ‘ಶಬಾಷ್‌ಗಿರಿ’ ಪಡೆಯಬೇಕೆಂಬ ಮಹದಾಸೆ ಇರುತ್ತದೆ. ಹಾಗಾಗಿ ಸಾವಧಾನವಾಗಿ ಒಮ್ಮೆಯಲ್ಲ್ಲ… ಮತ್ತೊಮ್ಮೆ… ಮಗದೊಮ್ಮೆ… ಮಗುವಿಗೆ ಪಾಠ-ಪ್ರವಚನಗಳನ್ನು ಮನದಟ್ಟು ಮಾಡಿಸಿರಿ. ನಿಮ್ಮ ಮಕ್ಕಳೇ ನಿಮ್ಮ ಒಳ್ಳೆಯ ಗೆಳೆಯರು. ನಿಮ್ಮ ವರ್ತನೆ ಮಕ್ಕಳೊಂದಿಗೆ ಸ್ನೇಹಿತರಂತೆಯೇ ಇರಬೇಕು.

– ಪದ್ಮಾಮೂರ್ತಿ, ಅರಸೀಕೆರೆ

   

Leave a Reply