ಪ್ರಗತಿಪರರ ವಕಾಲತ್ತು ಇನ್ನು ನವೀದ್ ಪರ!

ದು ಗು ಲಕ್ಷ್ಮಣ್ - 0 Comment
Issue Date : 10.08.2015

    ಮಳೆ ನಿಂತರೂ ಮಳೆಯ ಹನಿ ನಿಂತಿಲ್ಲ. ಯಾಕೂಬ್ ಮೆಮನ್ ಎಂಬ ದೇಶದ್ರೋಹಿಯನ್ನು ಗಲ್ಲಿಗೇರಿಸಿ ವಾರ ಕಳೆದರೂ ಆತನ ಗುಣಗಾನ ನಿಂತಿಲ್ಲ. ಕೆಲವು ಬುದ್ಧಿಜೀವಿಗಳಿಗೆ, ಪ್ರಗತಿಪರರಿಗೆ, ಸೆಕ್ಯುಲರ್‌ವಾದಿಗಳಿಗೆ ಆತನದ್ದೇ ಚಿಂತೆ! ಅನ್ಯಾಯವಾಗಿ ಅವನನ್ನು ಗಲ್ಲಿಗೇರಿಸಲಾಯಿತೆಂಬ ಸೊಲ್ಲು ಈಗಲೂ ಈ ದೇಶದಲ್ಲಿ ಕೇಳಿಬರುತ್ತಿದೆ. ಯಾಕೂಬ್ ಮೆಮನ್‌ನ ದುಷ್ಟ ಸಂಚಿನಿಂದಾಗಿ ಪ್ರಾಣ ಕಳೆದುಕೊಂಡ 257 ಅಮಾಯಕರ ಬಗ್ಗೆ ಮಾತ್ರ ಈ ಮಂದಿಯ ಸೊಲ್ಲೇ ಇಲ್ಲ. ಅವರೆಲ್ಲಾ ಈ ಪ್ರಗತಿಪರರ ದೃಷ್ಟಿಯಲ್ಲಿ ಬಹುಶಃ ಮನುಷ್ಯರಾಗಿರುವುದಕ್ಕೇ ನಾಲಾಯಕ್ ಇರಬಹುದು!  


   ಯಾಕೂಬ್‌ನನ್ನು ನೇಣಿಗೇರಿಸಿದ್ದಕ್ಕೆ ಆತನ ಹಿರಿಯ ಸೋದರ, ಮುಂಬೈ ಸರಣಿ ಸ್ಫೋಟದ ಪ್ರಮುಖ ರುವಾರಿ ಮುಸ್ತಾಕ್ ‘ಟೈಗರ್’ ಮೆಮನ್ ಭಾರತದ ಮೇಲೆ ಪ್ರತೀಕಾರ ತೀರಿಸಿಕೊಳ್ಳದೆ ಬಿಡುವುದಿಲ್ಲ ಎಂದು ಪಾಕಿಸ್ಥಾನದ ಅದಾವುದೋ ಮೂಲೆಯಲ್ಲಿ ಅಡಗಿಕೊಂಡು ಗುಡುಗಿದ್ದಾನೆ. ಯಾಕೂಬ್‌ನನ್ನು ನೇಣಿಗೆ ಹಾಕಿದಾಗ, ತನ್ನ ತಾಯಿಗೆ ಫೋನ್ ಮಾಡಿ ಆತ ಹೀಗೆ ಹೇಳಿದನಂತೆ. ಟೈಗರ್ ಮೆಮನ್‌ಗೆ ಅನ್ನ ಕೊಟ್ಟಿದ್ದು ಇದೇ ದೇಶ. ಆತ ಬೆಳೆದಿದ್ದು ಇದೇ ದೇಶದಲ್ಲಿ. ಈಗ ಆತ ತನಗೆ ಅನ್ನ ಕೊಟ್ಟ , ಬೆಳೆಸಿದ ದೇಶದ ವಿರುದ್ಧವೇ ಪ್ರತೀಕಾರ ತೀರಿಸಲು ಹೊರಟಿದ್ದಾನೆ. ‘ಇದುವರೆಗೂ ನಡೆದ ಹಿಂಸೆಯೇ ಸಾಕು, ಇನ್ನು ಹಿಂಸೆ ಬೇಡ’ ಎಂದು ತಾಯಿ ಬುದ್ಧಿವಾದ ಹೇಳಿದರೂ ಟೈಗರ್ ಮೆಮನ್ ಸೇಡಿನ ಕಿಡಿ ಸಿಡಿಸಿದ್ದಾನೆ. ಆತ ಇಂಟರ್‌ನೆಟ್ ಕರೆ ಮಾಡಿದ್ದರಿಂದ ಟೈಗರ್ ಪಾಕಿಸ್ಥಾನದಲ್ಲಿ ಅವಿತ ಸ್ಥಳದ ಪತ್ತೆ ಮಾಡುವುದು ಕಷ್ಟವಾಗಿದೆ.
 ಅಷ್ಟೇ ಅಲ್ಲ , ಯಾಕೂಬ್‌ನ ಕ್ಷಮಾದಾನ ಅರ್ಜಿ ತಿರಸ್ಕರಿಸಿದ್ದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಜೀವ ಬೆದರಿಕೆ ಪತ್ರವೊಂದು ಬಂದಿದೆ. ಮಿಶ್ರಾ ಅವರ ದೆಹಲಿಯ ತುಘಲಕ್ ರಸ್ತೆಯ ನಿವಾಸದ ಹಿಂಭಾಗದ ಪ್ರವೇಶ ದ್ವಾರದಲ್ಲಿ  ಈ ಬೆದರಿಕೆ ಪತ್ರ ಪತ್ತೆಯಾಗಿದೆ. ಹಿಂಭಾಗದ ಪ್ರವೇಶ ದ್ವಾರದ ಸಮೀಪ ದಟ್ಟವಾದ ಮರಗಳು ಇರುವುದರಿಂದ ಪತ್ರ ಎಸೆದವರನ್ನು ಸಿಸಿ ಟಿವಿಗಳು ಸೆರೆ ಹಿಡಿಯಲು ಸಾಧ್ಯವಾಗಿಲ್ಲ. ಮಿಶ್ರಾ ಅವರ ಮನೆಯ ಭದ್ರತೆಯ ಮಾಹಿತಿ ಇದ್ದವರೇ ಈ ಕೆಲಸ ಮಾಡಿರುವುದು ನಿಶ್ಚಿತ. ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಯಾಕೂಬ್‌ಗೆ ಗಲ್ಲು ಶಿಕ್ಷೆ ಎತ್ತಿಹಿಡಿದಿದ್ದು ಅವರ ವೈಯಕ್ತಿಕ ನಿರ್ಧಾರವೇನಲ್ಲ. ಅದು ಕಾನೂನು, ವಿಚಾರಣೆ, ಸಾಕ್ಷ್ಯಾಧಾರ ಇತ್ಯಾದಿ ಪ್ರಕ್ರಿಯೆಗಳು ನಡೆದ ಬಳಿಕ ಮೂಡಿಬಂದ ಅಭಿಪ್ರಾಯ, ಅಷ್ಟೇ. ಅದಕ್ಕೆ ಮಿಶ್ರಾ ತೀರ್ಪಿನ ರೂಪ ನೀಡಿದ್ದಾರೆ. ಅವರನ್ನೂ ಕೊಲ್ಲುವ ಬೆದರಿಕೆ ಹಾಕಿರುವವರಿಗೆ ಈ ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿ ಕಿಂಚಿತ್ತೂ ನಂಬಿಕೆ ಇಲ್ಲವೆಂದೇ ಹೇಳಬೇಕಾಗಿದೆ. ಇಂಥವರಿಗೆ ಪ್ರಜಾತಂತ್ರ ವ್ಯವಸ್ಥೆ, ಕಾನೂನು ಯಾವುದರಲ್ಲೂ ಯಾವ ನಂಬಿಕೆಯೂ ಇರುವುದಿಲ್ಲ, ಬಿಡಿ.

***

ಯಾಕೂಬ್ ಎಂಬ ದೇಶದ್ರೋಹಿಯ ಪ್ರಕರಣವನ್ನು ಮರೆಯುವಷ್ಟರಲ್ಲೇ ಮೊಹಮ್ಮದ್ ನವೀದ್ ಎಂಬ ಇನ್ನೊಬ್ಬ ದೇಶದ್ರೋಹಿ ಪ್ರತ್ಯಕ್ಷನಾಗಿದ್ದಾನೆ. ನಮ್ಮ 43 ಮಂದಿ ಬಿಎಸ್‌ಎಫ್ ಯೋಧರನ್ನು ಕೊಂದು ಹಾಕಲು ಆತ ಹವಣಿಸಿದ್ದ. ಅಷ್ಟರಲ್ಲಿ ಉಧಂಪುರ ಬಳಿಯ ಗ್ರಾಮಸ್ಥರೇ ಆತನನ್ನು ಹೆಡೆಮುರಿಕಟ್ಟಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಕಸಬ್ ಬಳಿಕ ಜೀವಂತವಾಗಿ ಸೆರೆಸಿಕ್ಕ ಇನ್ನೊಬ್ಬ ಪಾಕ್ ಉಗ್ರ ಈತ. ಬಂಧನದ ಬಳಿಕ ವಿಚಾರಣೆ ವೇಳೆ ಆತ ಕಾಶ್ಮೀರದೊಳಗಿನ ತನ್ನ ಓಡಾಟದ ಕುರಿತು ನೀಡಿದ ವಿವರಗಳು ಅತ್ಯಂತ ಆಘಾತಕಾರಿಯಾಗಿವೆ. 45 ದಿನಗಳ ಹಿಂದೆಯೇ ಆತ ಪಾಕಿಸ್ಥಾನದಿಂದ ಭಾರತಕ್ಕೆ ನುಸುಳಿದ್ದ. ಈತನಿಗೆ ಲಷ್ಕರ್ ಎ ತೊಯ್ಬ ಉಗ್ರರು ಮಾತ್ರವಲ್ಲದೇ ಸ್ಥಳೀಯರು ಕೂಡ ಸಹಾಯ ಮಾಡಿದ್ದರು ಎಂಬ ಮಾಹಿತಿ ಬೆಳಕಿಗೆ ಬಂದಿದೆ. ಆ ಸ್ಥಳೀಯರು ಯಾರು ಎಂಬುದನ್ನು ಆತ ಬಾಯಿ ಬಿಟ್ಟಿದ್ದಾನೆ. ಒಬೇದ, ದುಜಾನಾ, ಕಾಸಿಂ… ಇವರೇ ನವೀದ್‌ಗೆ ನೆರವಾದ ಸ್ಥಳೀಯರು. ಕಾಶ್ಮೀರದ ಗಡಿಪ್ರದೇಶದಲ್ಲಿ ಉಗ್ರರಿಗೆ ನೆರವಾಗುವ ಇಂತಹ ಅದೆಷ್ಟೋ ದೇಶದ್ರೋಹಿ ಸ್ಥಳೀಯರು ತುಂಬಿದ್ದಾರೆ. ಗಡಿ ಭದ್ರತಾ ಪಡೆ ಯೋಧರು ಸಂಶಯದಿಂದ ಇಂಥವರ ಮೇಲೇನಾದರೂ ಗುಂಡು ಹಾರಿಸಿದರೆ ಅಥವಾ ಆಕ್ರಮಣ ಎಸಗಿದರೆ ಇಡೀ ದೇಶದಲ್ಲಿ ಒಂದು ವರ್ಗ ‘ಇದು ಮಾನವ ಹಕ್ಕುಗಳ ಅಪಹರಣ, ಅಮಾಯಕರ ಮೇಲೆ ಸೈನಿಕರ ಪೈಶಾಚಿಕ ವರ್ತನೆ…’ ಎಂದೆಲ್ಲಾ ಚೀತ್ಕರಿಸುತ್ತದೆ. ಸ್ಥಳೀಯರ ಸಹಾಯವಿಲ್ಲದೆ ನವೀದ್ ಎಂಬ ಪಾಕ್ ಉಗ್ರ 45 ದಿನದಿಂದ ಭಾರತದ ನೆಲದಲ್ಲೇ ಅಡಗಿರಲು ಸಾಧ್ಯವೇ?
  ನವೀದ್‌ನ ತಂದೆಯೇ ‘ಆತ ತನ್ನ ಮಗ, ಲಷ್ಕರ್ ಎ ತೊಯ್ಬದ ಉಗ್ರರೇ ಆತನನ್ನು ಹಾದಿ ತಪ್ಪಿಸಿದ್ದಾರೆ. ಆತನನ್ನು ಗಲ್ಲಿಗೇರಿಸದೆ ಬಿಟ್ಟುಬಿಡಿ’ ಎಂದು ಗೋಗರೆದಿದ್ದರೂ ಪಾಕ್ ಪ್ರಧಾನಿ ನವಾಜ್ ಷರೀಫ್ ಮಾತ್ರ ನವೀದ್ ಪಾಕಿಸ್ಥಾನದ ಪ್ರಜೆಯೇ ಅಲ್ಲ ಎಂದು ಹೇಳಿದ್ದಾರೆ. ಕಸಬ್ ಬಂಧನವಾದಾಗಲೂ ಪಾಕ್ ಪ್ರಧಾನಿ ಹೀಗೆಯೇ ಹೇಳಿದ್ದರು! ಹಾಗಿದ್ದರೆ ನವೀದ್ ಎಂಬ ಉಗ್ರ ಆಕಾಶದಿಂದ ಉದುರಿ ಕಾಶ್ಮೀರಕ್ಕೆ ಬಿದ್ದನೇ? ಅಥವಾ ಬೇರೆ ಯಾವುದೋ ಗ್ರಹದಿಂದ ನೇರವಾಗಿ ಕಾಶ್ಮೀರದ ನೆಲಕ್ಕೆ ಇಳಿದನೇ? ಸುಳ್ಳು ಹೇಳುವುದಕ್ಕೂ ಒಂದು ಮಿತಿ ಬೇಡವೇ? ಪಾಕ್ ಪ್ರಧಾನಿ ಹೇಳುವ ಇಂತಹ ಹಸೀ ಸುಳ್ಳುಗಳನ್ನು ಕೇಳಿಸಿಕೊಳ್ಳಲು ಭಾರತದ ಪ್ರಜೆಗಳು ಕಿವಿ ಮೇಲೆ ಹೂ ಇಟ್ಟುಕೊಂಡಿದ್ದಾರೆಯೇ? ನವೀದ್ ಪಾಕಿಸ್ಥಾನಿಯಲ್ಲ ಎಂದು ಹೇಳುತ್ತಿರುವ ಪಾಕ್, ಕಾರ್ಗಿಲ್‌ನಲ್ಲಿ ಭಾರತೀಯರ ಗುಂಡಿಗೆ ಅಂದು ಸತ್ತ ಯೋಧರೂ ಪಾಕ್‌ನವರಲ್ಲ ಎಂದು ಹೇಳುತ್ತದೆಯೇ?
  ಅಸಲಿಗೆ ಮುಂಬೈ ದಾಳಿಯಲ್ಲಿ ಪಾಲ್ಗೊಂಡಿದ್ದ ಅಜ್ಮಲ್ ಕಸಬ್‌ಗೂ ಇದೀಗ ಉಧಂಪುರದಲ್ಲಿ ಸೆರೆಸಿಕ್ಕ ಉಗ್ರ ನವೀದ್ ಯಾಕೂಬ್‌ಗೂ ತರಬೇತಿ ನೀಡಿದ್ದು ಒಂದೇ ಕ್ಯಾಂಪ್‌ನಲ್ಲಿ. ಇದನ್ನು ಸ್ವತಃ ಬಂಧಿತ ನವೀದ್ ಯಾಕೂಬ್‌ನೇ ಬಹಿರಂಗ ಪಡಿಸಿದ್ದಾನೆ. ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಮನ್ಸ್‌ಹೆರ‌್ರಾದಲ್ಲಿರುವ ಮರ್ಕಜ್ ತೈಬಾ ಪ್ರದೇಶದಲ್ಲಿ ಆ ಕ್ಯಾಂಪ್ ಈಗಲೂ ಅಸ್ಥಿತ್ವದಲ್ಲಿದೆ ಎಂದು ಮಾಧ್ಯಮ ವರದಿ.
  ಉಗ್ರ ನವೀದ್‌ಗೆ ಈಗಿನ್ನೂ 20 ವರ್ಷ. ಆದರೆ ಕೇವಲ 20 ವರ್ಷದ ಯುವಕನನ್ನು ಪಾಕಿಸ್ಥಾನ ರೂಪಿಸಿದ್ದು ಒಬ್ಬ ಉಗ್ರನನ್ನಾಗಿ. ನಿಜವಾಗಿ ನವೀದ್ ಈ ವಯಸ್ಸಿಗೆ ವಿದ್ಯಾವಂತನಾಗಿ ಪದವೀಧರನಾಗಿರಬೇಕಿತ್ತು. ಆದರೆ ಆತ ಪಾಕಿಸ್ಥಾನದ ಪ್ರಜೆ. ಅಲ್ಲಿ ಉಗ್ರರಾಗುವುದನ್ನು ಬಿಟ್ಟರೆ ಬೇರೆ ಆಯ್ಕೆಯೇ ಇಲ್ಲ. ಪಾಕಿಸ್ಥಾನದಲ್ಲಿ ಯುವಕರಿಗೆ ಯಾವ ಭವಿಷ್ಯವೂ ಇಲ್ಲ. ಉಗ್ರರಾಗಿ ಸಾಯುವುದೇ ಅವರಿಗಿರುವ ಏಕೈಕ ಆಯ್ಕೆ! ಕೇವಲ 20 ವರ್ಷದ ಯುವಕನನ್ನು ಪಾಕಿಸ್ಥಾನ ಉಗ್ರನನ್ನಾಗಿ ಮಾಡುತ್ತದೆ ಎಂದಾದರೆ, ಆ ದೇಶದ ಪರಿಸ್ಥಿತಿ ಎಲ್ಲಿಗೆ ತಲುಪಿರಬೇಕು ಎಂದು ನೀವೇ ಊಹಿಸಿ.
  ಪಾಕ್ ಉಗ್ರ ನವೀದ್ ಈಗ ಪೊಲೀಸರ ಅತಿಥಿ. ಇನ್ನು ಆತನ ವಿಚಾರಣೆ, ತನಿಖೆ, ಕೋರ್ಟು ಕಲಾಪ…. ಎಂದೆಲ್ಲಾ ಕನಿಷ್ಠ 20-22 ವರ್ಷ ನಡೆಯಬಹುದು. ಆತನಿಗೆ ಉತ್ತಮ ಸೌಲಭ್ಯ ನೀಡಬೇಕು ಎಂದು ಆತನ ವಕೀಲರು ಹಕ್ಕೊತ್ತಾಯ ಮಂಡಿಸಲೂ ಬಹುದು. ಜೈಲಿನಲ್ಲಿ ಆತನಿಗೆ ತಿನ್ನಲು ರುಚಿರುಚಿಯಾದ ಬಿರಿಯಾನಿ, ಚಿಕನ್ ಇತ್ಯಾದಿ ಒದಗಿಸಬೇಕೆಂದು ಜಡ್ಜ್ ಮುಂದೆ ವಾದಿಸಲೂ ಬಹುದು. ಇದ್ದಕ್ಕಿದ್ದಂತೆ ಉಗ್ರ ನವೀದ್‌ಗೆ ಹೃದಯ ಸಂಬಂಧಿ ಖಾಯಿಲೆ, ಎದೆನೋವು ಇತ್ಯಾದಿ ಕಾಣಿಸಲೂ ಬಹುದು. ಚಿಕಿತ್ಸೆಗಾಗಿ ಆತನನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೊಂಡೊಯ್ಯಲೂ ಬಹುದು. ಒಟ್ಟಾರೆ ಇದಕ್ಕೆಲ್ಲಾ ಸಾಮಾನ್ಯ ಜನರ ಕೋಟಿ ಕೋಟಿ ಮೊತ್ತದ ತೆರಿಗೆ ಹಣ ಖರ್ಚಾಗುತ್ತದೆ ಎಂಬುದನ್ನು ಮರೆಯಲು ಸಾಧ್ಯವೇ? ಇನ್ನು ಈ ಉಗ್ರ ನವೀದ್ ಗಲ್ಲಿಗೇರುವ ತನಕ, ಅನಂತರವೂ ಇಲ್ಲಿನ ಎಡಪಂಥೀಯರು, ಪ್ರಗತಿಪರರು, ಡೋಂಗಿ ಜಾತ್ಯಾತೀತವಾದಿಗಳಿಗೆ ಪುರಸೊತ್ತೇ ಸಿಗುವುದಿಲ್ಲ! ಉಗ್ರ ನವೀದ್ ಪರವಾಗಿ ಪ್ರತಿನಿತ್ಯ ಬ್ಯಾಟಿಂಗ್ ಮಾಡುತ್ತಲೇ ಇರಬೇಕು. ಇಲ್ಲದಿದ್ದರೆ ಅವರನ್ನು ಪ್ರಗತಿಪರರೆಂದು ಯಾರು ಹೇಳುತ್ತಾರೆ?
  ಮುಸ್ಲಿಂ ದೇಶಗಳಲ್ಲಾದರೆ ಅಪರಾಧಿಗಳನ್ನು ಗಲ್ಲಿಗೇರಿಸುವ ವಿಚಾರಕ್ಕೆ ಯಾವುದೇ ಪ್ರಚಾರ ದೊರೆಯುವುದಿಲ್ಲ. ಗಲ್ಲಿಗೇರಿದ ಸುದ್ಧಿ ಅಲ್ಲಿನ ಪತ್ರಿಕೆಗಳ ಯಾವುದೋ ಮೂಲೆಯಲ್ಲಿ ಅಚ್ಚಾಗಿರುತ್ತದೆ. ಅದನ್ನು ಯಾರೂ ಗಮನಿಸುವುದೂ ಇಲ್ಲ. ಕಟ್ಟರ್ ಇಸ್ಲಾಮಿಕ್ ದೇಶವಾಗಿರುವ ಸೌದಿ ಅರೇಬಿಯಾದಲ್ಲಿ ಕಳ್ಳತನ, ವಿಮಾನ ಅಪಹರಣ, ಮಾದಕ ದ್ರವ್ಯ, ಕಳ್ಳಸಾಗಣೆ, ಅತ್ಯಾಚಾರ, ಕೊಲೆ, ಭಯತ್ಪಾದನೆ, ದೇವರ ನಿಂದನೆ ಮುಂತಾದ ಅಪರಾಧಗಳಿಗಾಗಿ ನೇಣಿಗೇರಿಸಲಾಗುತ್ತದೆ. ಕಳ್ಳತನದಂತಹ ಕೃತ್ಯ ಮಾಡಿದವರಿಗೆ ಕಲ್ಲಿನಲ್ಲಿ ಹೊಡೆದು ಸಾಯಿಸಲಾಗುತ್ತದೆ. 2011ರ ಜೂನ್‌ನಲ್ಲಿ ಇಂಡೋನೇಷಿಯಾಕ್ಕೆ ಸೇರಿದ ರುಯತಿ ಬಿಂಥಿ ಸತುಬಿ ಎಂಬ ಮನೆ ಕೆಲಸದವಳನ್ನು ಆಕೆ ಮನೆ ಕೆಲಸ ಮಾಡುತ್ತಿದ್ದ ಮಾಲೀಕನ ಹೆಂಡತಿಯನ್ನು ಕೊಂದಿದ್ದಕ್ಕೆ ಶಿರಚ್ಛೇದನ ಮಾಡಲಾಯಿತು. ಆಕೆಯ ಶಿರಚ್ಛೇದನ ಮಾಡಿದ ವೀಡಿಯೋ ಯು ಟ್ಯೂಬ್‌ನಲ್ಲಿ ಹರಿದಾಡುತ್ತಿತ್ತು. 2013ರ ಜನವರಿಯಲ್ಲಿ ಶ್ರೀಲಂಕಾಕ್ಕೆ ಸೇರಿದ ಮನೆ ಕೆಲಸದಾಕೆ ರಿಜಾನಾ ನಫೀಕ್ ಎಂಬಾಕೆಯನ್ನೂ ಮಗುವೊಂದರ ಕೊಲೆ ಮಾಡಿದ್ದಕ್ಕೆ ಇದೇ ರೀತಿ ಶಿರಚ್ಛೇದನ ಮಾಡಲಾಗಿತ್ತು. 2010ರ ಅಮ್ನೆಸ್ಟಿ ಇಂಟರ್‌ನ್ಯಾಷನಲ್ ಸಂಸ್ಥೆಯ ವರದಿಯ ಪ್ರಕಾರ ಸೌದಿಯಲ್ಲಿ ಕನಿಷ್ಠ 27 ಮಂದಿಯ ಶಿರಚ್ಛೇದನ ಮಾಡಲಾಗಿದೆ. ಸೌದಿಯ ಕಥೆ ಇದಾದರೆ ಉಳಿದ ತುನಿಶಿಯ, ಇರಾನ್, ಇರಾಕ್, ಮಸ್ಕತ್, ಈಜಿಪ್ಟ್ ಮುಂತಾದ ಮುಸ್ಲಿಂ ದೇಶಗಳ ಕ್ರೌರ್ಯದ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಆದರೆ ಅಲ್ಲೆಲ್ಲಾ ಯಾವುದೇ ಪ್ರಗತಿಪರರು, ಡೋಂಗಿ ಜಾತ್ಯಾತೀತವಾದಿಗಳು ಈ ಅನಾಗರಿಕ, ಕ್ರೌರ್ಯದ ಪರಮಾವಧಿಯ ಶಿರಚ್ಛೇದನ ಶಿಕ್ಷೆಯ ವಿರುದ್ಧ ಸಣ್ಣ ದನಿಯನ್ನೂ ಎತ್ತಲಿಲ್ಲ. ಮಾದ್ಯಮಗಳಲ್ಲಿ ಇವೆಲ್ಲಾ ಸುದ್ದಿಯಾಗಲೇ ಇಲ್ಲ.
 ಭಾರತದಲ್ಲಿ ಮಾತ್ರ ಕಾನೂನು ಪ್ರಕಾರವೇ ಕಸಬ್, ಯಾಕೂಬ್, ಅಫಜಲ್‌ಗುರು ನೇಣಿಗೇರಿದರೆ ದೇಶದಾದ್ಯಂತ ದೊಡ್ಡ ಗುಲ್ಲಾಗುತ್ತದೆ. ಮಾನವೀಯತೆಯ ಹರಣವಾಯಿತೆಂದು ಬೊಬ್ಬಿಡಲಾಗುತ್ತದೆ. ಮುಸ್ಲಿಂ ದೇಶಗಳಲ್ಲಿ ನಡೆಯುವ ಶಿರಚ್ಛೇದನ, ಗಲ್ಲುಶಿಕ್ಷೆ ಇವೆಲ್ಲಾ ಹಾಗಿದ್ದರೆ ಮಾನವೀಯತೆಯನ್ನು ವೈಭವೀಕರಿಸುವ ಕೃತ್ಯಗಳೇ?
 

   

Leave a Reply