‘ಪ್ರತಿಯೊಂದು ದೇವಸ್ಥಾನ ಸೇವಾಚಟುವಟಿಕೆ ಹಮ್ಮಿಕೊಳ್ಳಲಿ’

ಜಿಲ್ಲೆಗಳು ; ಮೈಸೂರು - 0 Comment
Issue Date : 30.12.2013


ಮೈಸೂರು: ಎಲ್ಲ ದೇವಸ್ಥಾನಗಳ ಆಡಳಿತ ವರ್ಗ ದೀನದಲಿತರ ಉದ್ಧಾರಕ್ಕಾಗಿ ಕೆಲವು ಸೇವಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಹಾಗೂ ಪ್ರತಿಯೊಬ್ಬ ಹಿಂದುವಿಗೂ ಸರಳವಾದ ಪೂಜಾ ಪದ್ಧತಿಯನ್ನು ಕಲಿಸಬೇಕು. ಹಾಗೆ ಮಾಡಿದರೆ ನಾವೆಲ್ಲ ಒಂದು ಎಂಬ ಭಾವ ಸಮಾಜದಲ್ಲಿ ಮೂಡಬಲ್ಲದು ಎಂದು ಶ್ರೀರಾಮಕೃಷ್ಣಾಶ್ರಮದ ಅಧ್ಯಕ್ಷರಾದ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್ ಅವರು ಕರೆ ನೀಡಿದ್ದಾರೆ.

ಇಲ್ಲಿನ ರಾಜೇಂದ್ರ ಕಲಾಮಂದಿರದಲ್ಲಿ ಡಿ.25ರಂದು ಜರುಗಿದ ವನಯೋಗಿ ಬಾಳಾ ಸಾಹೇಬ್ ದೇಶಪಾಂಡೆ ಜನ್ಮಶತಾಬ್ದಿ ಉದ್ಘಾಟನಾ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ದೇಶದಲ್ಲಿರುವ 7 ಕೋಟಿ ವನವಾಸಿಗಳ ಪೈಕಿ 1 ಕೋಟಿಯಷ್ಟು ಮಂದಿಯನ್ನು ಸ್ವಾತಂತ್ರ್ಯಪೂರ್ವದಲ್ಲೇ ಕ್ರೈಸ್ತ ಮತಕ್ಕೆ ಮತಾಂತರಿಸಲಾಯಿತು. ಈಗಲೂ ಅದೇ ಪ್ರವೃತ್ತಿ ಮುಂದುವರಿಯುತ್ತಿರುವುದು ವಿಷಾದನೀಯ. ಅರಣ್ಯ ಪ್ರದೇಶದಲ್ಲಿ ಹಿಂದೂ ಮುಖಂಡರ ಪ್ರವೇಶವನ್ನು ನಿರಾಕರಿಸಿ, ಕ್ರೈಸ್ತ ಮಿಷನರಿಗಳಿಗೆ ಬ್ರಿಟಿಷ್ ಸರ್ಕಾರ ಅವಕಾಶ ಕಲ್ಪಿಸಿದ್ದರಿಂದ ಮತಾಂತರ ಕಾರ್ಯ ನಡೆಯುತ್ತಲೇ ಇದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅ.ಭಾ. ಸಹ ವ್ಯವಸ್ಥಾ ಪ್ರಮುಖ್ ಮಂಗೇಶ್ ಭೇಂಡೆ ವಿಷಾದಿಸಿದರು. ವನವಾಸಿಗಳಿಗೆ ಸೂಕ್ತ ಶಿಕ್ಷಣ ನೀಡಿ, ಗೌರವಾನ್ವಿತ ಬದುಕು ನಡೆಸುವಂತೆ ಅವರಿಗೆ ಎಲ್ಲ ಬಗೆಯ ಸೌಲಭ್ಯ ನೀಡಬೇಕೆಂದು ಅವರು ಆಗ್ರಹಿಸಿದರು.

ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಜಡೇ ಗೌಡ ಮಾತನಾಡಿ, ವನವಾಸಿ ಮಕ್ಕಳಿಗೆ ಸೂಕ್ತ ಶಿಕ್ಷಣ ನೀಡುವುದರ ಜೊತೆಗೆ ಅವರ ಪೋಷಕರಿಗೂ ತಿಳಿವಳಿಕೆ ನೀಡಬೇಕಾದ ಅಗತ್ಯವಿದೆ. ದೇಶದ ಒಟ್ಟು 10 ಕೋಟಿ ವನವಾಸಿ ಜನರ ಪೈಕಿ ರಾಜ್ಯದಲ್ಲೇ 48 ಲಕ್ಷ ಮಂದಿ ಇದ್ದಾರೆ. ಅವರೆಲ್ಲರಿಗೂ ನಾಗರಿಕ ಸೌಲಭ್ಯ ಕಲ್ಪಿಸಬೇಕಾದ ಅಗತ್ಯವಿದೆ ಎಂದರು.

ಮುಖ್ಯ ಅತಿಥಿಗಳಾಗಿ ಎಂ.ಜಗನ್ನಾಥ ಶೆಣೈ, ಡಾ.ನಾನಾ ಪಾಟೀಲ್ ಪಾಲ್ಗೊಂಡಿದ್ದರು. ಜ್ಯುಬಿಲೆಂಟ್ ಲೈಫ್ ಸೈನ್ಸಸ್ ಲಿ. ಉಪಾಧ್ಯಕ್ಷ ಪಿ.ಯೋಗಾಂಜನೇಯ ರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮಕ್ಕೆ ಮುನ್ನ ಮೈಸೂರು, ಮಂಡ್ಯ, ಚಾಮರಾಜನಗರ ಹಾಗೂ ಕೊಡಗು ಪ್ರದೇಶದಿಂದ ಬಂದಿದ್ದ ಸಾವಿರಾರು ವನವಾಸಿ ಬಂಧುಗಳ ಶೋಭಾಯಾತ್ರೆ ನೋಡುಗರ ಕಣ್ಮನ ಸೆಳೆಯಿತು. ಕೊನೆಯಲ್ಲಿ ವನವಾಸಿ ಬಂಧುಗಳಿಂದ ಪಾರಂಪರಿಕ ನೃತ್ಯ ಪ್ರದರ್ಶನ ಏರ್ಪಡಿಸಲಾಗಿತ್ತು. ವನವಾಸಿ ಕಲ್ಯಾಣ (ರಿ) ತನ್ನ ಸಂಸ್ಥಾಪಕ ಬಾಳಾ ಸಾಹೇಬ್ ದೇಶಪಾಂಡೆ ಅವರ ಜನ್ಮಶತಾಬ್ದಿ ನಿಮಿತ್ತ ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.

   

Leave a Reply