ಪ್ರತಿವರ್ಷ ಆ ಹೊತ್ತಿಗೆ ಓದಬೇಕು ಈ ಹೊತ್ತಿಗೆ !

ಲೇಖನಗಳು - 0 Comment
Issue Date :

– ಪ್ರದೀಪ್ ಮೈಸೂರು

ಅಕ್ಟೋಬರ್ 20 ರಂದು ಭಾರತ ಮತ್ತು ಚೀನಾದ ನಡುವೆ ನಡೆದ 1962ರ ಯುದ್ಧದ ಚರ್ಚೆ ಎಂದಿನಂತೆ ನಡೆಯಿತು. ಅದಾಗಿ ಕೆಲವು ಪೀಳಿಗೆ ಕಳೆದರೂ ಎರಡೂ ದೇಶಗಳ ಜನರಿಗದು ಇನ್ನೂ ಪ್ರಸ್ತುತ. ಆದರೆ ಅದರ ಚರ್ಚೆ ನಡೆಯುವುದು ಒಂದೊಂದು ವಲಯದಲ್ಲಿ ಒಂದೊಂದು ರೀತಿ. ಯೋಧರ ಸಾಹಸವನ್ನು ನೆನೆದು ಕೆಲವರು ಮನಸ್ಸನ್ನು ಹಗುರಗೊಳಿಸಿಕೊಂಡರೆ ಅಂದಿನ ರಾಜಕೀಯ ಗೊಂದದ ಬಗ್ಗೆ ಮೂಗುಮುರಿಯುತ್ತಾ ಹಲವರು ನಾಲಗೆಯನ್ನು ಮತ್ತೊಮ್ಮೆ ಸಾಣೆ ಹಿಡಿಸಿಕೊಳ್ಳುತ್ತಾರೆ. ಅವರು ಹಾಗೆ ಮಾಡಬೇಕಿತ್ತು ಹೀಗೆ ಮಾಡಬೇಕಿತ್ತು ಎಂದು ಇತಿಹಾಸಕ್ಕೆ ಪುಕ್ಕಟೆ ಸಲಹೆ ಕೊಡುವ ಬುದ್ಧಿವಂತರು ವಿರಳವಾದರೂ ಇನ್ನೂ ಇದ್ದಾರೆ. ಆದರೆ ಒಂದು ಪುಸ್ತಕ ಹಿಡಿಯಷ್ಟು ಜನರ ಗಮನವನ್ನು ಮತ್ತೊಮ್ಮೆ ಸೆಳೆಯಿತು. ಅದು India`s China War.

ಆಸ್ಟ್ರೇಲಿಯಾದ ಒಬ್ಬ ಪತ್ರಕರ್ತ ನೆವಿಲ್ ಮ್ಯಾಕ್ಸ್ ವೆಲ್ ಎಂಬುವನು 1970ರಲ್ಲಿ ಈ ಪುಸ್ತಕವನ್ನು ಮೊದಲ ಬಾರಿಗೆ ಬರೆದು ಪ್ರಕಟಿಸಿದ. ನೆವಿಲ್ ದೆಹಲಿಯಲ್ಲಿದ್ದು ದಿ ಟೈಮ್ಸ್ ಪತ್ರಿಕೆಗೆ ಬರೆಯುತ್ತಿದ್ದ. ಯುದ್ಧದ ನಂತರ ಭಾರತ ಸರ್ಕಾರವು ಅಧಿಕೃತವಾಗಿ ಸಾರ್ವಜನಿಕಗೊಳಿಸಿದ ಸಮರ ವರದಿಯನ್ನು ನೆವಿಲ್ ಒಪ್ಪಲು ಸಿದ್ಧನಿರಲಿಲ್ಲ. ಆತನಿಗೆ ಅದೆಂಥದ್ದೋ ಒಂದು ವಿಲಕ್ಷಣ ಅನುಮಾನ. ಸರ್ಕಾರದ ವರದಿಯು ಸಹಜವಾಗಿಯೇ ಚೀನಾದ ಆಕ್ರಮಣಕಾರಿ ನೀತಿಯನ್ನು, ಅದು ಹೇಗೆ ಭಾರತದ ಸ್ನೇಹವನ್ನು ಅಪಮಾನಿಸಿತು, ಚೀನಾದ ಅಪ್ಪುಗೆ ಹೇಗೆ ಭಾರತಕ್ಕೆ ಧೃತರಾಷ್ಟ್ರ ಆಲಿಂಗನವಾಯ್ತು ಎಂಬುದನ್ನು ನಾಜೂಕಾಗಿ ಹೇಳುತ್ತಿತ್ತು. ಆದರೆ ಪತ್ರಕರ್ತ ನೆವಿಲ್ ಭಾರತದ ಸರ್ಕಾರವು ಏನನ್ನು ಹೇಳುತ್ತಿಲ್ಲ ಎಂಬುದನ್ನು ಹುಡುಕತೊಡಗಿದ. ತೋರಿಸುತ್ತಿರುವುದನ್ನು ಮಾತ್ರವೇ ನೋಡದೆ ಯಾವುದನ್ನು ಹೊರಗೆಡವುತ್ತಿಲ್ಲ ಎಂಬುದನ್ನು ಬಿಡಿಸಿ ನೋಡಲು ಹುಡುಕಾಟದ ಬುದ್ಧಿಯಿರಬೇಕು. ಅವನು ಆ ಹುಡುಕಾಟದಲ್ಲೇ ಇದ್ದಾಗ ಇಬ್ಬರು ಸೇನಾಧಿಕಾರಿಗಳು ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಪ್ರತಿಯನ್ನು ಯಾರೋ ನೆವಿಲ್‌ಗೆ ತಲುಪಿಸಿದರು. ಅದು ಯಾರು ಎಂಬುದನ್ನು ಈಗ 88 ವರ್ಷದ ನೆವಿಲ್ ಗೌಪ್ಯವಾಗಿಯೇ ಇರಿಸಿದ್ದಾನೆ. ಸಹಜವಲ್ಲವೇ? ಆ ವರದಿಯನ್ನು ಆಧಾರವಾಗಿಟ್ಟುಕೊಂಡು 1970 ರಲ್ಲಿ ಆತ ಪುಸ್ತಕವನ್ನು ಬರೆದ. ಅವನಿಗೆ ಹುಡುಕಾಟದಲ್ಲಿ ಸಿಕ್ಕಿದ್ದೇನೆಂದರೆ 1962ರ ಯುದ್ಧವು ಕೇವಲ ಚೀನಾದ ವಿಸ್ತರಣವಾದಿ ಧೊರಣೆಯಿಂದ ಆಗಿದ್ದಲ್ಲ, ಆ ಯುದ್ಧಕ್ಕೆ ಮುಖ್ಯ ಕಾರಣ ಭಾರತದ ಪ್ರಚೋದನೆ!

 ಪುಸ್ತಕವು ಬಿಡುಗಡೆಯಾದಾಗ ದೇಶದ ರಹಸ್ಯಗಳ ವಿಷಯದಲ್ಲಿ ನೆವಿಲ್ ನಿಯಮವನ್ನು ಉಲ್ಲಂಘಿಸಿದ್ದಾನೆ  ಎಂಬ ಆರೋಪದ ಮೇಲೆ ಆತನನ್ನು ದೇಶದಿಂದ ಹೊರಗಿರುವಂತೆ ಮಾಡಲಾಯ್ತು. ಅದಾಗಿ 8 ವರ್ಷಗಳ ನಂತರ ಪ್ರಧಾನಿ ಮೊರಾರ್ಜಿ ದೇಸಾಯಿಯವರು ಅವನನ್ನು ದೋಷಮುಕ್ತಗೊಳಿಸಿದರು. ನೆವಿಲ್‌ನ ಕೈಗೆ ಅಂದು ಸಿಕ್ಕ ವರದಿಯೇ ಪ್ರಸಿದ್ಧವಾದ ಹೆಂಡರ್ಸನ್ ಬ್ರೂಕ್ಸ್ – ಭಗತ್ ರಿಪೋರ್ಟ್ (Henderson Brooks – Bhagat report) ಲೆ.ಜ.ಹೆಂಡರ್ಸನ್ ಬ್ರೂಕ್ಸ್ ಮತ್ತು ಬ್ರಿ. ಪ್ರೇಮಿಂದರ್ ಸಿಂಗ್ ಭಗತ್  ಇಬ್ಬರು ಸೇನಾಧಿಕಾರಿಗಳು ಭಾರತದ ಸೋಲಿಗೆ ಕಾರಣವನ್ನು ವಿಶ್ಲೇಷಿಸಿ ಒಂದು ವರದಿಯನ್ನು ಬರೆದರು. ಅದನ್ನು ಬಹಿರಂಗಗೊಳಿಸಿದರೆ ಸರ್ಕಾರವು ತನಗೆ ಮುಖಭಂಗವಾಗಬಹುದು ಎಂಬ ಕಾರಣದಿಂದಲೋ ಅಥವಾ ಕಾಲ ಅಪಕ್ವ ಎಂಬ ನೆಪದಿಂದಲೋ ಅಥವಾ ಎಲ್ಲಕ್ಕಿಂತ ಪ್ರಮುಖವಾಗಿ ರಾಜನು ಬೆತ್ತಲಾಗಿದ್ದಾನೆಂಬುದು ಬೀದಿರಂಪವಾಗಿ ಮಾನ ಮೂರಾಬಟ್ಟೆಯಾಗಬಹುದು ಎಂಬ ಭಯದಿಂದಲೋ ಆ ವರದಿಯನ್ನು ವರ್ಗೀಕರಿಸಿಟ್ಟಿತು. ಈ ರೀತಿ ವರ್ಗೀಕರಿಸಿಟ್ಟ ವರದಿಗಳಿಗೆ Classified reports ಎನ್ನುವರು. ಇದು ನಮ್ಮ ದೇಶದಲ್ಲಿ ಮಾತ್ರವಲ್ಲ ಪ್ರಪಂಚದ ಯಾವುದೇ ದೇಶದಲ್ಲಿ ಸರ್ಕಾರಗಳು ಅನುಸರಿಸುವ ಸಾಮಾನ್ಯ ನಿಯಮ. ಆದರೆ ಕಾಲಸರಿದಂತೆ ಅಥವಾ ಇನ್ನಾವುದೇ ಕಾರಣದಿಂದ, ಯಾವುದಾದರೂ ಪ್ರಮುಖ ವಿದ್ಯಮಾನ ಜರುಗಿದಾಗ ಸರ್ಕಾರಗಳು ವರ್ಗೀಕೃತ ವರದಿಗಳನ್ನು ಬಹಿರಂಗಪಡಿಸುತ್ತವೆ. ಈ ಪ್ರಕ್ರಿಯೆಗೆ ಹೆಸರು Declassifying the reports. ಅಂದು ಅವರಿಬ್ಬರು ಸೇನಾಧಿಕಾರಿಗಳು ನೀಡಿರುವ ವರದಿಗಳಿನ್ನೂ ಬಹಿರಂಗಗೊಂಡಿಲ್ಲ. ಬಹಿರಂಗ ಗೊಳಿಸಬೇಕೆಂಬ ಒತ್ತಡ ಸರ್ಕಾರದ ಮೇಲಿನ್ನೂ ಇದೆ.

 2010 ರಲ್ಲಿ ಭಾರತದ ರಕ್ಷಣಾ ಸಚಿವರಾಗಿದ್ದ ಎ.ಕೆ. ಆಂಟೊನಿಯವರು ಸದನದಲ್ಲಿ ಮಾತನಾಡುತ್ತ, ‘1962ರ ಯುದ್ಧ ವರದಿಗಳನ್ನು ಬಹಿರಂಗಗೊಳಿಸಲು ಸಾಧ್ಯವಿಲ್ಲ ಏಕೆಂದರೆ ಆ ವರದಿಗಳು ಅತಿ ಸೂಕ್ಷ್ಮ ಮಾತ್ರವಲ್ಲ, ಪ್ರಸ್ತುತ ಕಾರ್ಯಕಾರಿ ಮಹತ್ವವನ್ನು ಪಡೆದಿದೆ’ (not only extremely sensitive but are of current operational value) ಎಂದರು.

ಆ ವರದಿಯಲ್ಲಿರುವ ಪ್ರಮುಖ ಸಂಗತಿಗಳೆಂದರೆ :

  1. ಚೀನಾ ದೇಶದವರು ಆಕ್ರಮಣ ಮಾಡಲಾರರು ಎಂಬ ಸೈನಿಕೀಯ ಅಪ್ರಬುದ್ಧತೆಯನ್ನು ಭಾರತ ಪ್ರದರ್ಶಿಸಿತು. ವೈರಿಯನ್ನು ಎದುರಿಸಲು ಬೇಕಾದ ಸ್ವಂತದ ತಯಾರಿ ಇರಲಿಲ್ಲ.
  2. ಉನ್ನತ ಮಟ್ಟದ ನಿರ್ಣಯಗಳು ಸೈನ್ಯದ ಸಿದ್ಧತೆಯನ್ನು ಗಣನೆಗೆ ತೆಗೆದುಕೊಳ್ಳದೆ ಆದವು. ಸೈನ್ಯಾಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಾಗಿತ್ತು.
  3. ಬೇಹುಗಾರಿಕಾ ಸಂಸ್ಥೆಯ ಮಾಹಿತಿಯ ಪ್ರಕಾರ – ಭಾರತವು ತನ್ನ ಗಡಿ ಪ್ರದೇಶದಲ್ಲಿ ಕಟ್ಟುವ ಬಂಕರ್‌ಗಳನ್ನು ಚೀನಾ ಧ್ವಂಸ ಮಾಡುವುದಿಲ್ಲ, ಅಷ್ಟು ಮಾತ್ರವಲ್ಲ ಗಡಿಯಲ್ಲಿನ ಭಾರತದ ಚಟುವಟಿಕೆಗೆ ಚೀನಾ ತಕರಾರನ್ನು ಸಹ ಮಾಡುವುದಿಲ್ಲ.
  4. ಮೇಲಿನ ವರದಿಗೆ ಸಂಪೂರ್ಣ ವ್ಯತಿರಿಕ್ತವಾಗಿ ಮಿಲಿಟರಿ ಅಧಿಕಾರಿಗಳು ಅಭಿಪ್ರಾಯ ನೀಡಿದರು. ಅದೇನೆಂದರೆ, ಚೀನಾದ ವಶದಲ್ಲಿರುವ ನಮ್ಮ ಭೂಭಾಗವನ್ನೇನಾದರೂ ನಾವು ವಶಪಡಿಸಿಕೊಳ್ಳಲು ಯತ್ನಿಸಿದಲ್ಲಿ ಚೀನಾ ಅದಕ್ಕೆ ಪ್ರತಿರೋಧ ಒಡ್ಡುತ್ತದೆ.
  1. ರಾಜಕೀಯ ನಾಯಕತ್ವವು ಅಂದು ಘೋಷಿಸಿದ ಫಾರ್ವರ್ಡ್ ಪಾಲಿಸಿಯನ್ನು ಅನುಷ್ಠಾನಗೊಳಿಸಲು ಸೈನ್ಯಕ್ಕಿರುವ ಮಿತಿಯನ್ನು ಸರ್ಕಾರಕ್ಕೆ ತಿಳಿಸಲಾಗಲಿಲ್ಲ ಎಂಬುದು ಇಂದಿಗೂ ಅಕಲ್ಪನೀಯ.
  2. ಜನರಲ್ ಕೌಲ್ ತಮ್ಮ ವರದಿಯಲ್ಲಿ ಹೀಗೆ ಬರೆದಿದ್ದಾರೆ.  1961-62ರ ಸಮಯದಲ್ಲಿ ಹಲವು ಬಾರಿ ಸರ್ಕಾರಕ್ಕೆ, ನಮ್ಮ ಸೈನ್ಯದಲ್ಲಿರುವ ಕುಂದುಕೊರತೆಗಳ ಬಗ್ಗೆ ತಿಳಿಸಲಾಗಿತ್ತು.  (ಆುುಧಗಳ ಕೊರತೆ, ಸಾಗಾಟಕ್ಕೆ ಬೇಕಾದ ವ್ಯವಸ್ಥೆಗಳ ಅಸಮರ್ಪಕತೆ, ಮಾನವ ಸಂಪನ್ಮೂಲದ ಕೊರತೆ) ಚೀನಾ ಏನಾದರೂ ಆಕ್ರಮಣ ಮಾಡಿದಲ್ಲಿ ಈ ಎಲ್ಲ ಕೊರತೆಗಳ ಕಾರಣದಿಂದ ಅವರನ್ನು ಎದುರಿಸಲಾಗದು.
  3. ರಕ್ಷಣಾ ಮಂತ್ರಾಲಯವು ಎಷ್ಟೇ ಒತ್ತಡ ಹೇರಿದರೂ, ಫಾರ್ವರ್ಡ್ ಪಾಲಿಸಿಯಲ್ಲಿರುವ ನ್ಯೂನತೆಗಳನ್ನು ಹಾಗೂ ಅದನ್ನು ಅನುಷ್ಠಾನಗಳಿಸಲು ಇರುವ ತೊಂದರೆಗಳನ್ನು ಸ್ಪಷ್ಟವಾಗಿ ತಿಳಿಸಬೇಕಿತ್ತು.
  4. ಫಾರ್ವರ್ಡ್ ಪಾಲಿಸಿಯನ್ನು ಅನುಷ್ಠಾನಗೊಳಿಸಲು ಅವಶ್ಯಕವಿರುವ ಸೇನೆ ಮತ್ತು ಸಂಪನ್ಮೂಲಗಳ ಕುರಿತು ಸರ್ಕಾರಕ್ಕೆ ಯಾವುದೇ ಹಂತದಲ್ಲೂ ತಿಳಿಸಿರಲಿಲ್ಲ.
  5. ವಸ್ತುನಿಷ್ಠ ವರದಿಯನ್ನು ಮತ್ತು ವಾಸ್ತವವನ್ನು ಸಾಕಷ್ಟು ಮುಂಚಿತವಾಗಿ ರಾಜಕೀಯ ನಾಯಕತ್ವಕ್ಕೆ ತಿಳಿಸದೇ ಇರುವುದು ಅಪ್ರಬುದ್ಧ ಮಾನಸಿಕತೆಯನ್ನು ತೋರಿಸುತ್ತದೆ.

 10.ಸೈನ್ಯವು ತಿರುಳುಹುರುಳುಗಳಿಲ್ಲದ ನೀತಿಯನ್ನು ಅನುಷ್ಠಾನ ಮಾಡದಿರುವಂತೆ ರಾಜಕೀಯ ನಾಯಕರ ಮೇಲೆ ಒತ್ತಡ ಹೇರಬೇಕಿತ್ತು.

 (ಇವು ವರದಿಯ ಪ್ರಮುಖ ಅಂಗಳು. ಇದನ್ನು ಬರೆದವನು ನೆವಿಲ್ ಅಲ್ಲ ಎಂಬುದನ್ನು ಮತ್ತೆ ಸ್ಪಷ್ಟಪಡಿಸಿಕೊಳ್ಳಬೇಕು. ಈ ವರದಿಯ ಆಧಾರದ ಮೇಲೆ ಆತ ಇಂಡಿಯಾಸ್ ಚೈನಾ ವಾರ್ ಪುಸ್ತಕವನ್ನು ಬರೆದನಷ್ಟೆ. 126 ಪುಟಗಳ ವರದಿಯ ಪೂರ್ಣಪಾಠವು ಅಂತರ್ಜಾಲದಲ್ಲಿ ಇಂದಿಗೂ ಲಭ್ಯವಿದೆ)

 ಅಸಮರ್ಪಕ ನೀತಿ, ದೂರದೃಷ್ಟಿಯ ಕೊರತೆಯ ಕಾರಣಗಳಿಂದಾದ ಘೋರ ಪ್ರಮಾದವನ್ನು ಚೀನಾದ ತಲೆಗೆ ಕಟ್ಟಲಾಯ್ತು. ಇಂತಹ ಹೊತ್ತಿಗೆಗಳು ಹೊರಬಂದಾಗಲೇ ಒಳಮನೆಯ ರಹಸ್ಯಗಳು, ಅಲ್ಲಿನ ಚರ್ಚೆಗಳು, ದೊಡ್ಡವರ ಗೊಂದಲಗಳು ಅಂತೆಯೇ ನಿರ್ಣಯ ಕೈಗೊಳ್ಳುವ ಸ್ಥೈರ್ಯ ಯಾ ಕೈಗೊಳ್ಳದ ದ್ವಂದ್ವಗಳು ಮುಂದಿನ ಪೀಳಿಗೆಗೆ ತಿಳಿಯುವುದು. ತಿಳಿದರೆ ಮಾತ್ರ ಮುಂದೆ ಈ ರೀತಿಯ ಘಟನೆಗಳು ಸಂಭವಿಸದಂತೆ ಎಚ್ಚರವಹಿಸಬಹುದು. ಕಳೆದ 20 ವರ್ಷಗಳಲ್ಲಿ ಪ್ರಪಂಚದ ಹಲವು ದೇಶಗಳಲ್ಲಿ ಅವರವರ ಇತಿಹಾಸದ ಸತ್ಯಗಳನ್ನು ತೆರೆದಿಡುವ ಹಲವಾರು ಗ್ರಂಥಗಳು ಪ್ರಕಟಗೊಂಡಿವೆ.

 ಪಿ.ವಿ. ನರಸಿಂಹರಾವ್ ಅವರು ದೇಶದ ಪ್ರಧಾನಿಯಾಗಿದ್ದಾಗ ಚೀನಾದೊಂದಿಗೆ ಮಾಡಿಕೊಂಡ Border Peace and Tranquility Agreement (BPTA), 1993, ಎರಡೂ ದೇಶಗಳ ನಡುವಿನ ಗಡಿವಿವಾದವನ್ನು ಬಗೆಹರಿಸುವ ನಿಟ್ಟಿನಲ್ಲಿ ಭಾರತವೇ ಇಟ್ಟ ನಿರ್ಣಾಯಕ ಹೆಜ್ಜೆಯೆಂದು ಹೇಳಬಹುದು. ಆದರದು ಅಷ್ಟು ಸುಲಭವಲ್ಲ. ಚೀನಾ ದೇಶಕ್ಕೆ ಒತ್ತುವರಿಗಿಂತ ವಿಸ್ತರಣೆಯಲ್ಲಿ ಆಸಕ್ತಿ. ಇವೆರಡಕ್ಕೂ ಇರುವ ವ್ಯತ್ಯಾಸವನ್ನು ಕಂಡುಕೊಂಡಾಗಲಷ್ಟೇ ಆ ದೇಶವನ್ನು ನಿಭಾಯಿಸಲು ಮತ್ತು ಎದುರಿಸಲು ಸಾಧ್ಯ. ಇತ್ತೀಚೆಗೆ ದೋಖ್ಲಾಮ್‌ನ ಸಮಸ್ಯೆಯನ್ನು ಭಾರತ ಬಗೆಹರಿಸಿದ ರೀತಿ ನೋಡಿದರೆ ಅಪಕ್ವ ನಾಯಕತ್ವ, ಅಪ್ರಬುದ್ಧ ಮಿಲಿಟರಿ ಚಿಂತನೆಯಿಂದ ದೇಶವು ಹೊರಬಂದು ನಿರ್ಣಾಯಕ ಮುಂದಾಳುತನ ಹಾಗೂ ಸಾಮರ್ಥ್ಯ ಮತ್ತು ಜಾಣ್ಮೆಯಿರುವ ಸೇನಾ ನಾಯಕತ್ವವು ಸಕ್ರಿಯವಾಗಿದೆಯೆಂದು ಹೇಳಲಡ್ಡಿಯಿಲ್ಲ. ನೀವೂ ಈ ಹೊತ್ತಿಗೆಯನ್ನು ಓದಿ ನೋಡಿ. ಚೀನಾಗೆ ಅಷ್ಟೋತ್ತರ ಮಾಡುತ್ತಿರುವ ಬಾಯಿಂದ ಭಾರತದ ಅಂದಿನ ಸೌತ್ ಬ್ಲಾಕ್ ನಾಯಕರಿಗೆ ಸಹಸ್ರನಾಮ ಮಾಡದಿದ್ದರೆ ಹೇಳಿ.

 

   

Leave a Reply