ಪ್ರಾಚೀನ ಭಾರತದ ಕನ್ನಡಿ : ಉಪ ಪುರಾಣ ಲೋಕ

ನುಡಿ-ಕಿಡಿ - 0 Comment
Issue Date :

ಬೃಹದ್ಧರ್ಮ ಪುರಾಣವು ಉಪಪುರಾಣಗಳ ಸಂಖ್ಯೆ ಹದಿನೆಂಟೇ ಎಂದು ಹೇಳಿದರೂ ಇನ್ನು ಹಲವು ಉಪಪುರಾಣಗಳು ದೊರೆಯುತ್ತವೆ.
ಕೂರ್ಮ, ಬೃಹದ್ಧರ್ಮ, ಏಕಾಮ್ರ ಈ ಪುರಾಣಗಳು ಕೊಡುವ ಉಪಪುರಾ ಣಗಳ ಪಟ್ಟಿಯು ಬೇರೆಬೇರೆಯೇ ಇದೆ. ಸಂಸ್ಕೃತ ಗ್ರಂಥರಾಶಿಯಲ್ಲಿ ಒಂದುನೂರು ಉಪಪುರಾಣಗಳು ಇದ್ದ ಮಾಹಿತಿಯಿದೆ. ಇಷ್ಟಾದರೂ ಹಲವು ನಷ್ಟವಾಗಿರಬಹುದು ಎನ್ನಲು ಬೇಕಾದಷ್ಟು ಪುರಾವೆಗಳು ಲಭ್ಯವಾಗಿವೆ.
ಉಪ ಪುರಾಣಗಳನ್ನು ವೈಷ್ಣವ, ಶಾಕ್ತ, ಶೈವ, ಸೌರ, ಗಾಣಾಪತ್ಯ ಎಂಬ ಪಂಚಪ್ರಕಾರಗಳಲ್ಲದೇ ಇವು ಯಾವುದಕ್ಕೂ ಸೇರದ ಕೆಲವನ್ನು ಗಮನಿಸಿ ಅಪಂಥೀಯ ಎಂಬ ಆರನೇ ಪ್ರಕಾರವನ್ನೂ ಪಟ್ಟಿಮಾಡಬಹುದು.
ನೃಸಿಂಹ ಪುರಾಣವು ಉಪಲಬ್ಧ ಉಪಪುರಾಣಗಳಲ್ಲಿ ಪ್ರಾಚೀನ. ವಿಷ್ಣುಧ ರ್ಮೋತ್ತರ ಪುರಾಣವು ಅತಿ ಆಸಕ್ತಿಜನಕ ಹಾಗೂ ವಿಶ್ವಕೋಶ ಸಮ ಗ್ರಂಥ. ದೇವಾಸುರರ ರಮ್ಯಕಥೆಗಳು, ಸೃಷ್ಟಿಯ ಸಾತ್ವಿಕ – ಭೌತಿಕ ವರ್ಣನೆ, ಭೂಗೋಲ – ಖಗೋಲ ವರ್ಣನೆ, ಕಾಲವಿಭಾಗ, ನಕ್ಷತ್ರ ರಾಶಿ ವಿವರ, ಕರ್ತವ್ಯ – ಪ್ರಾಯಶ್ಚಿತ್ತ, ಜನರ ಆಚಾರ – ವಿಚಾರ, ನ್ಯಾಯ ನಿರ್ಣಯ, ಯುದ್ಧನೀತಿ, ಶರೀರ ಶಾಸ್ತ್ರ, ರೋಗನಿದಾನ, ವೈದ್ಯ ಶಾಸ್ತ್ರ, ಪಶುವೈದ್ಯ, ವನಸ್ಪತಿ ಸಂವರ್ಧನೆ, ವ್ಯಾಕರಣ, ನಿಘಂಟು, ಕೋಶ, ಛಂದಸ್ಸು, ಅಲಂಕಾರ, ನಾಟ್ಯ, ಗಾನ, ವಾದ್ಯ, ಸಂಗೀತ, ಶಿಲ್ಪ, ವಾಸ್ತು ಇತ್ಯಾದಿ ಹಲವು ಸಂಗತಿಗಳನ್ನು ಅತಿ ನಿಖರವಾಗಿ ಈ ಪುರಾಣವು ವರ್ಣಿಸುತ್ತದೆ. ಆ ಕಾಲದಲ್ಲೂ ಈಗಿನವರೂ ಹುಬ್ಬೇರಿಸುವಂತೆ ಸಾಧನೆಗಳನ್ನು ಮಾಡಿದ್ದ ಜನಾಂಗವೊಂದು ಈ ದೇಶದಲ್ಲಿ ಇದ್ದಿತೆನ್ನಲು ಇದೊಂದು ಖಚಿತ ಪುರಾವೆ. ಬೃಹನ್ನಾರದೀಯ ಪುರಾಣವು ಬ್ರಹ್ಮ-ವಿಷ್ಣು-ಶಿವ ಈ ಮೂರು ಶಕ್ತಿಗಳಲ್ಲಿ ಭೇದ ಕಲ್ಪನೆ ಮಾಡಲಾಗದೆಂದು ಎಚ್ಚರಿಸುತ್ತದೆ. ಬ್ರಹ್ಮ ಎಂದರೆ ಜ್ಞಾನ, ವಿಷ್ಣು ಎಂದರೆ ವ್ಯಾಪಕ ಪಾಲಕ ಹಾಗೂ ಶಿವ ಎಂದರೆ ಮಂಗಲ ಎಂಬ ಅರ್ಥವನ್ನು ನೀಡುವ ಈ ಪುರಾಣವು ಸರ್ವಶಕ್ತ ಭಗವಂತನನ್ನು ಚಿತ್ರಿಸುವುದು ತುಂಬಾ ಕುತೂಹಲಕಾರಿ.
ಶಾಕ್ತ ಉಪಪುರಾಣದಲ್ಲಿ ಪ್ರಮುಖವಾದ ದೇವೀಪುರಾಣವು ಇನ್ನಷ್ಟು ವಿವರದ ಆಗರ. ಪುರ-ದುರ್ಗ ನಿರ್ಮಿತಿ ರಹಸ್ಯ, ಹಸ್ತಪ್ರತಿ ಲೇಖನ ವಿಧಾನ, ಲಿಪಿ-ಬರೆಹ ಸಾಮಗ್ರಿ ಇತ್ಯಾದಿ ಕುತೂಹಲಕಾರಿ ಅಂಶಗಳನ್ನು ಒಳಗೊಂಡಿದೆ. ಕ್ರಿ.ಶ. ಏಳನೆಯ ಶತಮಾನದಷ್ಟು ಹಿಂದೆಯೇ ರಚಿತವಾಗಿರಬಹುದೆಂಬ ಅಭಿಪ್ರಾಯ (ಈ ಪುರಾಣ ಹಸ್ತಪ್ರತಿ) ಇರುವುದರಿಂದ ಒಂದು ಐತಿಹಾಸಿಕ ದಾಖಲೆಯೂ ಹೌದು.
ಸೌರ ಉಪಪುರಾಣವಾದ ಶಾಂಬ ಪುರಾಣವು ಸೌರಮಂಡಲದ ಅಪೂರ್ವ ವಿವರ ನೀಡುತ್ತದೆ.
ಗಾಣಪತ್ಯ ಉಪಪುರಾಣವಾದ ಮುದ್ಗಲ ಹಾಗೂ ಗಣೇಶ ಪುರಾಣಗಳು ಮೂರ್ತಿ ಶಿಲ್ಪ ಹಾಗೂ ದೇವತಾತತ್ತ್ವವಿಕಾಸದ ಅಮೂಲ್ಯ ಮಾಹಿತಿಯನ್ನು ನೀಡುತ್ತವೆ. ಭವಿಷ್ಯೋತ್ತರ ಮತ್ತು ಬೃಹದ್ಧರ್ಮ ಪುರಾಣಗಳು ಅಪಂಥೀಯ ಪುರಾಣಗಳಲ್ಲಿ ಪ್ರಮುಖವಾದವು. ಉತ್ಸವ, ವ್ರತ, ದಾನ ಇತ್ಯಾದಿಗಳ ಅಪೂರ್ವ ಮಾಹಿತಿ ಒದಗಿಸುವ ಈ ಗ್ರಂಥಗಳು ಸಾಮಾಜಿಕ, ಧಾರ್ಮಿಕ, ಇತಿಹಾಸ ಅಧ್ಯಯನ ದೃಷ್ಟಿಯಿಂದ ಮಹತ್ತ್ವವುಳ್ಳವು.
ಇವಲ್ಲದೇ ಆತ್ಮ, ಭೂಗೋಲ, ಬ್ರಹ್ಮವೈವರ್ತ, ನೀಲ(ರಾಜತರಂಗಿಣಿಯಲ್ಲಿ ಉಲ್ಲೇಖಿತ) ಬಾರ್ಹಸ್ಪತ್ಯ, ಬೃಹದೌಶನಸ ಮುಂತಾಗಿ ಹಲವು ಉಪಪುರಾಣಗಳ ಪಟ್ಟಿ ದೊರೆಯುತ್ತದೆ. ಇವೆಲ್ಲ ದೊರೆತರೆ ಉಪಪುರಾಣಗಳ ಪ್ರಪಂಚ ಪ್ರಾಚೀನ ಭಾರತದ ಕನ್ನಡಿ ಎನ್ನಲು ಅಡ್ಡಿಯಿಲ್ಲ.

   

Leave a Reply