ಬಲರಾಜ್‍ ಮಧೋಕ್‍

ಸ್ಮರಣೆ - 0 Comment
Issue Date :

ಭಾರತೀಯ ಜನಸಂಘದ ಸ್ಥಾಪಕ ಸದಸ್ಯರೂ ಆರೆಸ್ಸೆಸ್‌ನ ಪ್ರಮುಖ ನಾಯಕರೂ ಆಗಿದ್ದ ಬಲರಾಜ್ ಮಧೋಕ್ (96) ಹೊಸದಿಲ್ಲಿಯ ಏಮ್ಸ್‌ನಲ್ಲಿ ಮೇ 2ರಂದು ಕೊನೆಯುಸಿರೆಳೆದರು.
ಅವರು ಅನಾರೋಗ್ಯದ ಕಾರಣದಿಂದಾಗಿ ಕಳೆದ ಒಂದು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
2 ಹಾಗೂ 4ನೇ ಸಂಸತ್ ಚುನಾವಣೆಗಳಲ್ಲಿ ದೆಹಲಿಯ ಎನ್‌ಸಿಟಿ ಮತ್ತು ದಕ್ಷಿಣ ದೆಹಲಿ ಲೋಕಸಭಾ ಕ್ಷೇತ್ರದಿಂದ
ಸ್ಪರ್ಧಿಸಿ ಸಂಸತ್ ಪ್ರವೇಶಿಸಿದ್ದ ಬಲರಾಜ್ ಅವರು 60 ಮತ್ತು 70ನೇ ದಶಕದ ಪ್ರಾರಂಭದ ದಿನಗಳು ರಾಜಕೀಯವಾಗಿ ಬಹಳ ಚಟುವಟಿಕೆಯಿಂದಿದ್ದ ಕಾಲ.
1920ರ ಫೆ. 25ರಂದು ಜಮ್ಮು ಮತ್ತು ಕಾಶ್ಮೀರದ ಸ್ಕುರ್ದು ಪ್ರದೇಶದಲ್ಲಿ ಬಲರಾಜ್ ಅವರ ಜನನವಾಯಿತು. 1938ರಲ್ಲಿ ಲಾಹೋರ್‌ನಲ್ಲಿ ವಿದ್ಯಾಭ್ಯಾಸ ಮಾಡುವಾಗ ಆರೆಸ್ಸೆಸ್ ಸಂಪರ್ಕವಾಯಿತು. 1942ರಲ್ಲಿ ಸಂಘದ ಪ್ರಚಾರಕರಾದರು. ದೇಶ ವಿಭಜನೆಯ ವೇಳೆ ಪಾಕಿಸ್ಥಾನದಿಂದ ಬಂದ ಹಿಂದುಗಳ ಪುನರ್ವಸತಿ ಕಾರ್ಯಗಳಲ್ಲಿ ಬಲರಾಜ್ ಅವರ ಪಾತ್ರ ಮಹತ್ವದ್ದಾಗಿತ್ತು.
ಮುಂದೆ 1948 ರಲ್ಲಿ ಸ್ಥಾಪನೆಯಾದ ಎಬಿವಿಪಿಯ ಸ್ಥಾಪಕ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದರು. 1951ರಲ್ಲಿ ನಡೆದ ಜನಸಂಘದ ಮೊದಲ ಸಮಾವೇಶದ ಸಂಚಾಲಕರಾಗಿದ್ದರು ಮತ್ತು ಜನಸಂಘದ ರಾಷ್ಟ್ರೀಯ ಕಾರ್ಯದರ್ಶಿಯಾಗಿ ನೇಮಕವಾದರು. ಮುಂದೆ 1966ರಲ್ಲಿ ಜನಸಂಘದ ರಾಷ್ಟ್ರಾಧ್ಯಕ್ಷರಾಗಿ ಚುನಾಯಿತರಾದರು. 1967ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ 37 ಸ್ಥಾನ ಗೆಲ್ಲುವುದರ ಹಿಂದೆ ಬಲರಾಜ್ ಅವರ ಶ್ರಮವಿದೆ.
ರಾಜಕಾರಣ ಮಾತ್ರವಲ್ಲದೆ, ಇತರ ಕ್ಷೇತ್ರಗಳಲ್ಲೂ ಬಲರಾಜ್ ಸೇವೆ ಅಪಾರ. ಪಿಜಿಡಿಎವಿ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥರಾಗಿದ್ದರು. 1947-48ರಲ್ಲಿ ಆರ್ಗನೈಸರ್ ಮತ್ತು 1948ರಲ್ಲಿ ವೀರ ಅರ್ಜುನ ವಾರಪತ್ರಿಕೆಗಳ ಸಂಪಾದಕರಾಗಿದ್ದರು. ಅಲ್ಲದೆ ಜಮ್ಮು ಮತ್ತು ಕಾಶ್ಮೀರ ಪ್ರಜಾ ಪರಿಷತ್‌ನ ಸ್ಥಾಪಕ ಕಾರ್ಯದರ್ಶಿಯಾಗಿ ನಡೆಸಿದ ಕಾರ್ಯಗಳು ಅಪಾರ. ತುರ್ತು ಪರಿಸ್ಥಿಯ ಸಂದರ್ಭದಲ್ಲಿ 18 ತಿಂಗಳ ಸೆರೆವಾಸದ ಶಿಕ್ಷೆಯೂ ಬಲರಾಜ್ ಅವರ ಪಾಲಿಗೊದಗಿತ್ತು.
ಬಲರಾಜ್ ಮಧೋಕ್ ಅವರ ಸಾವಿಗೆ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಮುಖಂಡ ಎಲ್.ಕೆ. ಆಡ್ವಾಣಿ ಹಾಗೂ ಇತರರು ಸಂತಾಪ ಸೂಚಿಸಿದ್ದಾರೆ. ಬಲರಾಜ್ ಅವರಿಗೆ ಬಲವಾದ ಸೈದ್ಧಾಂತಿಕ ಬದ್ಧತೆಯಿತ್ತು, ಚಿಂತನೆಯಲ್ಲಿ ಸ್ಪಷ್ಟತೆಯಿತ್ತು ಮತ್ತು ನಿಸ್ವಾರ್ಥ ಮನೋಭಾವದಿಂದ ದೇಶಕ್ಕಾಗಿ ತಮ್ಮನ್ನು ಮುಡಿಪಾಗಿಟ್ಟಿದ್ದರು ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.

   

Leave a Reply