ಬಹುಮಾನ

ಕಿರಿಯರ ಲೋಕ ; ಲೇಖನಗಳು - 0 Comment
Issue Date : 30.4.2016

ಬೆಳಗ್ಗೆ ಮೇಷ್ಟರು ಶಾಲೆಗೆ ಬರುವ ಹಾದಿಯಲ್ಲಿ ಮಕ್ಕಳು ಗುಂಪುಗೂಡಿ ಹಣ ಖರ್ಚುಮಾಡುವ ವೈಖರಿಯನ್ನು ನೋಡಿದ್ದರು. ಕೆಲವರು ಐಸ್‌ಕ್ಯಾಂಡಿ ಖರೀದಿ ಮಾಡಿ ಚೀಪುತ್ತಿದ್ದರು. ಇನ್ನು ಕೆಲವರು ನೆಲಗಡಲೆ ತೆಗೆದುಕೊಂಡು ತಿನ್ನುತ್ತ ಅಲ್ಲೇ ಸುಲಿದು ಸಿಪ್ಪೆಯನ್ನು ರಸ್ತೆಯ ಪಕ್ಕದಲ್ಲೇ ಚೆಲ್ಲುತ್ತಿದ್ದರು. ಕುರುಕಲು ತಿಂಡಿ ತಿಂದು ಪ್ಲಾಸ್ಟಿಕ್ ಚೀಲಗಳನ್ನು ಕಂಡಲ್ಲಿ ಎಸೆದು ಖುಷಿಪಡುತ್ತ ಶಾಲೆಗೆ ತಲಪುತ್ತಿದ್ದರು.
ಅಂದು ಮೇಷ್ಟರು ತರಗತಿ ಆರಂಭವಾಗುತ್ತಲೇ ಮಕ್ಕಳಿಗೆ ಒಂದು ವಿಷಯವನ್ನು ಬೋಧಿಸಿದರು, ‘‘ನಾವು ನಮ್ಮ ಬದುಕಿನಲ್ಲಿ ಅಗತ್ಯಕ್ಕಿಂತ ಹೆಚ್ಚಿಗೆ ಏನನ್ನೂ ಮುಗಿಸಬಾರದು. ಉಳಿತಾಯ ಎಂಬುದು ಜೀವನದಲ್ಲಿ ದೊಡ್ಡ ಮಂತ್ರವಾಗಬೇಕು. ದುಬಾರಿ ಖರ್ಚು ಮಾಡುವವನಿಗೆ ಮುಂದೆ ಜೀವನದಲ್ಲಿ ಮಿತವಾಗಿ ಬಳಸುವುದು ಸಾಧ್ಯವಾಗದು. ಇಂದು ನಾವು ಉಳಿತಾಯ ಮಾಡಿದರೆ ನಾಳೆ ನಮಗೇ ಒದಗುತ್ತದೆ. ಮುಂದಿನ ಪೀಳಿಗೆಗೂ ಸಿಗುತ್ತದೆ,ನೀವೆಲ್ಲರೂ ಉಳಿತಾಯ ಮಾಡಿ ತೋರಿಸಬೇಕು. ಯಾರು ಅತಿ ಅಮೂಲ್ಯವಾದ ಉಳಿತಾಯ ಮಾಡಿ ತೋರಿಸುತ್ತೀರೋ ಅವರಿಗೆ ದೊಡ್ಡ ಬಹುಮಾನ ಕೊಡುತ್ತೇನೆ. ಯಾರೂ ಈ ಮಾತನ್ನು ಕಡೆಗಣಿಸಬಾರದು. ಇನ್ನು ಎರಡು ತಿಂಗಳಿನಲ್ಲಿ ನಿಮ್ಮನ್ನೆಲ್ಲ ಕರೆದು ವಿಚಾರಿಸುತ್ತೇನೆ’’ ಎಂದರು.
ಪೇಟೆಯ ತಿಂಡಿಗಳ ರುಚಿಗೆ ಮಾರುಹೋಗಿದ್ದ ಮಕ್ಕಳಿಗೆ ಪೇಚಾಟಕ್ಕಿಟ್ಟುಕೊಂಡಿತು. ದಾರಿಯುದ್ದಕ್ಕೂ ಯಾರದೋ ಮರದ ಗೇರುಬೀಜ ಕೊಯಿದು ತಂದು ಹಣ ಸಂಪಾದನೆಗೆ ಶ್ರಮಪಟ್ಟು ಕಡೆಗೂ ಅದನ್ನು ಖರ್ಚು ಮಾಡದೆ ಉಳಿತಾಯ ಮಾಡಬೇಕಲ್ಲ ಎಂದು ಕೆಲವರಿಗೆ ಅನಿಸಿತು. ಆದರೆ ಮೇಷ್ಟರು ಕರೆದು ವಿಚಾರಿಸುತ್ತಾರೆ ಅನ್ನುವಾಗ ಉಳಿತಾಯವನ್ನು ಅವರಿಗೆ ತೋರಿಸಬೇಕು. ಅದರಿಂದ ಬಹುಮಾನ ಸಿಕ್ಕಿದರೆ ಹಿರಿಯರೂ ಖುಷಿಪಡುತ್ತಾರೆಂದು ಉಮೇದು ತಂದುಕೊಂಡರು.
ತರಗತಿಯಲ್ಲಿ ರಂಗಣ್ಣ ಎಂಬ ಹುಡುಗನಿದ್ದ. ಬಡವರ ಕೇರಿಯಲ್ಲಿ ಅವನ ಮನೆ. ಎಳವೆಯಲ್ಲೆ ತಂದೆಯನ್ನು ಕಳೆದುಕೊಂಡಿದ್ದ. ತಾಯಿ ಅವರಿವರ ಮನೆಗಳಲ್ಲಿ ಕೂಲಿ ಮಾಡಿ ಹೇಗೋ ಸಂಪಾದಿಸಿ ಮಗನನ್ನು ಸಾಕುತ್ತಿದ್ದಳು. ಆದರೆ ಇತ್ತೀಚೆಗೆ ಅವಳೂ ಕಾಯಿಲೆ ಬಿದ್ದು ದುಡಿಯಲಾಗದ ಹಂತ ತಲಪಿದ್ದಳು. ರಂಗಣ್ಣ ಬೆಳಗ್ಗೆ ಬೇಗನೆ ಎದ್ದು ಪೇಟೆಯ ಮನೆಗಳಿಗೆ ಪತ್ರಿಕೆ, ಹಾಲು ಹಾಕಿ ಬರುತ್ತಿದ್ದ. ಸಂಜೆ ಶೆಟ್ಟರ ಅಂಗಡಿಯಲ್ಲಿ ಸಾಮಾನು ಕಟ್ಟಿ ಕೊಡುತ್ತಿದ್ದ. ಸರಿರಾತ್ರೆಯ ತನಕ ಬೀದಿದೀಪದ ಕೆಳಗೆ ಓದುತ್ತಿದ್ದ. ಜೀವನ ನಿರ್ವಹಣೆಗೆ ಕಷ್ಟಪಡುತ್ತಿದ್ದರೂ ಚೆನ್ನಾಗಿ ಕಲಿತು ನೌಕರಿಗೆ ಸೇರಿ ತಾಯಿಯನ್ನು ಸುಖವಾಗಿಡಬೇಕೆಂಬ ಕನಸು ಅವನ ಮುಂದಿತ್ತು.
ಎಲ್ಲ ಹುಡುಗರೂ ದುಬಾರಿ ಖರ್ಚು ಮಾಡುವಾಗ ರಂಗಣ್ಣನ ಬಳಿ ಒಂದು ಬಿಲ್ಲೆಯೂ ಅಂತಹ ಖರ್ಚಿಗೆ ಇರುತ್ತಿರಲಿಲ್ಲ.ಇದನ್ನು ತಿಳಿದು ಉಳಿದ ಹುಡುಗರು,‘‘ಈ ಸಲ ಉಳಿತಾಯದಲ್ಲಿ ಮೇಷ್ಟರ ಬಹುಮಾನ ಬರುವುದು ರಂಗಣ್ಣನಿಗೆ. ಯಾಕೆ ಅಂದರೆ ಅವನು ಒಂದು ಪೈಸೆಯನ್ನೂ ಖರ್ಚು ಮಾಡದೆ ಉಳಿಸುತ್ತಿದ್ದಾನೆ. ಅವನ ಉಳಿತಾಯದ ಹಣ ಎಷ್ಟಿರಬಹುದು? ಒಂದು ಕೋಟಿ ಇದ್ದೀತು! ನಾವೆಲ್ಲ ಅವನ ಮುಂದೆ ಏನೂ ಅಲ್ಲ’’ಎಂದು ಅವನನ್ನು ಗೇಲಿ ಮಾಡಿ ನೋಯಿಸುತ್ತಿದ್ದರು.
ಕಡೆಗೂ ಮೇಷ್ಟರು ಹುಡುಗರ ಉಳಿತಾಯವನ್ನು ಪರೀಕ್ಷೆ ಮಾಡುವ ಸಮಯ ಬಂದಿತು. ‘‘ಯಾರು ಎಷ್ಟು ಉಳಿತಾಯ ಮಾಡಿದ್ದೀರಿ? ಹಣವನ್ನು ತೋರಿಸಿ’’ ಎಂದರು. ಎಲ್ಲ ಹುಡುಗರೂ ಒಂದೊಂದು ಡಬ್ಬಿ ಇರಿಸಿಕೊಂಡಿದ್ದರು. ದುಬಾರಿ ಖರ್ಚಿನ ಹಣವನ್ನೆಲ್ಲ ಅದಕ್ಕೆ ತುಂಬಿದ್ದರು. ಮೇಷ್ಟರು ಪ್ರತಿಯೊಂದರ ಮುಚ್ಚಳ ತೆರೆದು ಅದರಲ್ಲಿರುವುದನ್ನು ಎಣಿಕೆ ಮಾಡಿದರು. ಆಶ್ಚರ್ಯವಾಯಿತು ಅವರಿಗೆ. ದೊಡ್ಡ ಮೊತ್ತವನ್ನೇ ಉಳಿಸಿದ್ದರು. ರಂಗಣ್ಣ ಮಾತ್ರ ಪೆಚ್ಚುಮೋರೆ ಹಾಕಿಕೊಂಡು ಎದ್ದು ನಿಂತ. ಹಳೆಯ ಪುಸ್ತಕಗಳಿಂದ ಖಾಲಿ ಹಾಳೆಗಳನ್ನು ಸಂಗ್ರಹಿಸಿ ನಿಬಂಧ ಪುಸ್ತಕ ತಯಾರಿಸಿದ್ದ. ಹೊಸ ಪುಸ್ತಕಕ್ಕೆ ಕೊಡುವ ಎರಡು ರೂಪಾಯಿ ಮೊತ್ತವನ್ನು ಉಳಿಕೆ ಎಂದು ತೋರಿಸಿದ. ಹುಡುಗರೆಲ್ಲ ಗೊಳ್ ಎಂದು ನಕ್ಕರು. ‘‘ಬಹುಮಾನ ಅವನಿಗೇ’’ ಎಂದು ಚಪ್ಪಾಳೆ ತಟ್ಟಿದರು. ಆದರೆ ಮೇಷ್ಟರು ಹೇಳಿದರು, ‘‘ನಿಮ್ಮ ಮಾತು ನಿಜ, ಬಹುಮಾನ ಅವನಿಗೇ!’’
ರಂಗಣ್ಣನ ಮನೆಯಿದ್ದ ಕೇರಿಗೆ ಒಂದು ಬಾವಿ ಮಾತ್ರ ಇತ್ತು. ಬೇಸಗೆಯಲ್ಲಿ ಅದು ಬರಡಾಗುತ್ತಿತ್ತು. ಬಲು ದೂರದಿಂದ ಕೊಡದಲ್ಲಿ ನೀರು ಹೊತ್ತು ತರುವ ದುಸ್ಥಿತಿ ಇತ್ತು. ಮೇಷ್ಟರು ನೀರಿಂಗಿಸುವ ಬಗ್ಗೆ ಮಾಡಿದ ಪಾಠವನ್ನು ಕೇಳಿದ್ದ ರಂಗಣ್ಣ. ಕಳೆದ ಮಳೆಗಾಲದಲ್ಲಿ ಬಾವಿಯ ಬಳಿ ಹೊಂಡ ತೋಡಿ ಮರಳು ತುಂಬಿಸಿ ನೀರಿಂಗಿಸುವ ವ್ಯವಸ್ಥೆ ಮಾಡಿದ್ದ. ವ್ಯರ್ಥ ಹರಿದು ಹೋಗುವ ಮಳೆನೀರನ್ನು ಶುದ್ಧೀಕರಿಸಿ ಬಾವಿಗೆ ತುಂಬಿಸಿದ್ದ. ಈ ವರ್ಷ ಬಿರು ಬೇಸಗೆಯಲ್ಲೂ ಬಾವಿ ಬತ್ತಲಿಲ್ಲ. ಮೊಗೆದಷ್ಟೂ ಲಕಲಕ ನೀರು ದೊರಕಿತ್ತು, ಕೇರಿಯವರಿಗೆಲ್ಲ ಸಂತಸ. ಇದನ್ನು ನೋಡಿದ್ದ ಮೇಷ್ಟರು ರಂಗಣ್ಣನ ಸಾಧನೆಯನ್ನು ವಿವರಿಸಿದರು. ಹನಿ ಹನಿ ನೀರಿನ ಉಳಿತಾಯ ಕೂಡ ಹಣಕ್ಕಿಂತ ಅಮೂಲ್ಯ. ಜನರಿಗೆ, ಪ್ರಾಣಿಗಳಿಗೆ, ಪಕ್ಷಿಗಳಿಗೆ, ಸಸ್ಯಗಳಿಗೆ ಬದುಕಲು ಬೇಕಾದ ನೀರನ್ನು ಉಳಿಸಿ ಕೊಡುವವನನ್ನು ಎಲ್ಲರಿಗಿಂತ ದೊಡ್ಡವನೆಂದು ಹೊಗಳಿದರು.
ರಂಗಣ್ಣನ ಉಳಿತಾಯ ದೊಡ್ಡದು ಎಂಬುದನ್ನು ಹುಡುಗರೆಲ್ಲ ಒಪ್ಪಿಕೊಂಡರು, ತಾವು ಉಳಿಸಿದ ಹಣವನ್ನು ಬಹುಮಾನವೆಂದು ಅವನಿಗೇ ಕೊಟ್ಟು ತಾವೂ ಒಳ್ಳೆಯವರೆಂದು ಪ್ರಕಟಿಸಿದರು.

   

Leave a Reply