ಬಹುಮುಖ ಪ್ರತಿಭೆಯ ಡಾ. ಸತ್ಯನಾರಾಯಣ ಶಾಸ್ತ್ರೀ

ಸ್ಮರಣೆ - 0 Comment
Issue Date : 06.02.2016

ಮೂಲತಃ ಹೊಸಹಳ್ಳಿಯ ವೆಂಕಟೇಶ ಶರ್ಮಾ ಶಾಸ್ತ್ರೀ ಮತ್ತು ಸೀತಮ್ಮನವರ ಸೀಮಂತ ಪುತ್ರರಾದ ಡಾ. ಸತ್ಯನಾರಾಯಣಶಾಸ್ತ್ರಿಗಳು ಜನವರಿ 28ರಂದು ಲಂಡನ್ ನಗರದಲ್ಲಿ ದಿವಂಗತರಾದರೆಂದು ತಿಳಿಸಲು ವಿಷಾದ ವಾಗುತ್ತದೆ. ಶ್ರೀಯುತರು ಬಹುಮುಖ ಪ್ರತಿಭೆಯುಳ್ಳವರು. ಬಿ.ಎ. ಮತ್ತು ಎಂ.ಎ. (ಸಂಸ್ಕೃತ) ಪರೀಕ್ಷೆಗಳಲ್ಲಿ ವಿಶ್ವವಿದ್ಯಾನಿಲಯಕ್ಕೆ ಪ್ರಥಮ ರ‌್ಯಾಂಕ್ ಪಡೆದವರಾಗಿದ್ದರು. 1970ರಲ್ಲಿ ಜಪಾನ್ ದೇಶದಲ್ಲಿ ನಡೆದ EXPO 70 ಮೇಳದಲ್ಲಿ ಕರ್ನಾಟಕ ರಾಜ್ಯದ ಪ್ರತಿಭಾ
ವಂತ ವಿದ್ಯಾರ್ಥಿಯಾಗಿ ಆಯ್ಕೆಯಾಗಿ ಭಾಗವಹಿಸಿದ್ದರು. ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಪದವಿ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸುಮಾರು 25 ವರ್ಷಗಳ ಕಾಲ ಸೇವೆ ಸಲ್ಲಿಸಿ ಉತ್ತಮ ಶಿಕ್ಷಕರು ಎಂಬುದಾಗಿ ಜನ ಮೆಚ್ಚುಗೆಯನ್ನು ಪಡೆದವರಾಗಿದ್ದರು. (ಎಬಿವಿಪಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಕರ್ತವ್ಯವನ್ನು ನಿರ್ವಹಿಸಿದ್ದರು) ಸಾಹಿತ್ಯ-ಸಂಸ್ಕೃತ-ಸಮಾಜಸೇವೆ ಈ ಕ್ಷೇತ್ರಗಳ ಅಭಿವೃದ್ಧಿಗೆ ಅಪಾರವಾಗಿ ಶ್ರಮಿಸಿದ್ದಾರೆ. ಕನ್ನಡದ ‘ಸಾಕ್ಷಿಕಲ್ಲು’ ಗೇಯ ನಾಟಕವನ್ನು ಸಂಸ್ಕೃತಕ್ಕೆ ಅನುವಾದಿಸಿ ಅನೇಕ ಸ್ಥಳಗಳಲ್ಲಿ ಈ ನಾಟಕವನ್ನು ಯಶಸ್ವಿಯಾಗಿ ನಿರ್ದೇಶಿಸಿರುತ್ತಾರೆ. ಐವತ್ತು ವಸಂತಗಳನ್ನು ಕಂಡ ಹೊಸಹಳ್ಳಿ ಗೆಳೆಯರ ಬಳಗದ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಇವರ ಪಾತ್ರ ಪ್ರಮುಖವಾದದ್ದು. ಸಂಸ್ಕೃತ ಸಂಭಾಷಣಾ ಶಿಬಿರಗಳನ್ನು ಯಶಸ್ವಿಯಾಗಿ ದೇಶ-ವಿದೇಶಗಳಲ್ಲಿ ನಡೆಸಿ ಕೊಟ್ಟಿರುತ್ತಾರೆ. ಭದ್ರಾವತಿ ಕಾಲೇಜಿನಲ್ಲಿ ಸ್ವಯಂ ನಿವೃತ್ತಿ ತಡೆದ ನಂತರ ಲಂಡನ್‌ನಲ್ಲಿರುವ ಭಾರತೀಯ ವಿದ್ಯಾಭವನದಲ್ಲಿ ಕಾರ್ಯಕ್ರಮ ನಿಯೋಜಕರಾಗಿ ಸುಮಾರು 15 ವರ್ಷಗಳ ಕಾಲ ಸೇವೆ ಸಲ್ಲಿಸಿ, ಅಲ್ಲಿ ಸಂಸ್ಕೃತ ತರಗತಿಗಳು, ಸಂಭಾಷಣೆ ಶಿಬಿರ, ಉಪನ್ಯಾಸಗಳ ಮೂಲಕ ವಿದೇಶದಲ್ಲಿ ಭಾರತೀಯ ಸಂಸ್ಕೃತಿಯ ಬೇರು ಗಟ್ಟಿಯಾಗಿ ನೆಲೆನಿಲ್ಲುವಂತೆ ಮಾಡಿರುವುದು ವಿಶೇಷ. ಲಂಡನ್‌ನಲ್ಲಿರುವ ಆಕ್ಸ್
ಫರ್ಡ್, ಕೇಂಬ್ರಿಜ್ ಮೊದಲಾದ ವಿಶ್ವವಿದ್ಯಾನಿಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ, ಭಾರತೀಯ ಸಂಸ್ಕೃತಿ ಮತ್ತು ಸಂಸ್ಕೃತದ ಪ್ರಸಾರದಲ್ಲಿ ತಮ್ಮ ಯೋಗದಾನವನ್ನು ಮಾಡಿದ್ದಾರೆ. ಹಿಂದೂ ಸ್ವಯಂಸೇವಕ ಸಂಘದ ಸ್ವಯಂಸೇವಕರಾಗಿ, ಕಾರ್ಯಕರ್ತರಾಗಿ ವಿದೇಶದಲ್ಲಿ ಹಿಂದುಗಳ ಸಂಘಟನೆಗೆ ಶ್ರಮಿಸಿರುತ್ತಾರೆ. ಇಂಗ್ಲೆಂಡ್ ಜೊತೆಗೆ ಇನ್ನೂ ಅನೇಕ ದೇಶಗಳಲ್ಲಿ ಉಪನ್ಯಾಸದ ಮೂಲಕ ಭಾರತೀಯ ಸಂಸ್ಕೃತಿಯನ್ನು ಪರಿಚಯಿಸಿರುವುದು ಇವರ ಪ್ರತಿಭೆ ಮತ್ತು ವಿದ್ವತ್ತಿನ ದ್ಯೋತಕವಾಗಿದೆ.
ಇಂತಹ ಬಹುಮುಖ ಪ್ರತಿಭೆಯುಳ್ಳ ಶಾಸ್ತ್ರಿಗಳು ಇತ್ತೀಚೆಗೆ ಪತ್ನಿ, ಇಬ್ಬರು ಮಕ್ಕಳು, ಮೊಮ್ಮಗಳು, ವಯಸ್ಸಾದ ತಂದೆ, ಸೋದರ-ಸೋದರಿ ಮತ್ತು ಅಪಾರ ಬಂಧು-ಅಭಿಮಾನಿ ಬಳಗವನ್ನು ಅಗಲಿ ಬಾರದ ಲೋಕಕ್ಕೆ ಹೋಗಿರುತ್ತಾರೆ. ಇವರ ಆತ್ಮಕ್ಕೆ ಚಿರಶಾಂತಿ ದೊರಕಲೆಂದು ಭಗವಂತನಲ್ಲಿ ಪ್ರಾರ್ಥಿಸುವೆ.

   

Leave a Reply