ಬಾಲಕ ಭಕ್ತ ಧ್ರುವ ಮತ್ತು ಆತನ ದೃಢ ಪ್ರತಿಜ್ಞೆ

ಕಿರಿಯರ ಲೋಕ - 0 Comment
Issue Date : 23.04.2016

ಶ್ರೀಕಾಂತ ಕೋರಡ್ಡಿ

ಬಾಲಕ ಭಕ್ತ ಧ್ರುವನ ಹೆಸರು ಲೋಕ ಪ್ರಸಿದ್ಧವಾಗಿದೆ. ಅವನು 15 ವರ್ಷದವನಿದ್ದಾಗ, ಒಂದು ಸಾರಿ ತನ್ನ ತಂದೆಯ ತೊಡೆಯ ಮೇಲೆ ಕುಳಿತುಕೊಂಡಾಗ ರಾಣಿ ಸುರುಚಿಯು ರಾಜನ ಎದುರಿಗೆ ಸವತಿಯ ಮಗ ಧ್ರುವನಿಗೆ ಅಸೂಯೆತನದಿಂದ, ಎಲೈ ಧ್ರುವನೇ ನೀನು ರಾಜನ ತೊಡೆಯ ಮೇಲೆ ಕುಳಿತುಕೊಳ್ಳಲು ಮತ್ತು ಸಿಂಹಾಸನದ ಮೇಲೆ ಕುಳಿತುಕೊಳ್ಳಲು ಅಧಿಕಾರಿ ಅಲ್ಲ, ಏಕೆಂದರೆ ನೀನು ನನ್ನ ಹೊಟ್ಟೆಯಲ್ಲಿ ಹುಟ್ಟಿಲ್ಲ. ಒಂದು ವೇಳೆ ರಾಜ್ಯದ ಸಿಂಹಾಸನದ ಮೇಲೆ ಕುಳಿತುಕೊಳ್ಳುವ ಇಚ್ಛೆಯಿದ್ದಲ್ಲಿ, ತಪಸ್ಸು ಮಾಡಿ ಪರಮಾತ್ಮನ ಆರಾಧನೆ ಮಾಡು ಮತ್ತು ಆ ಈಶ್ವರನ ಅನುಗ್ರಹದಿಂದ, ನನ್ನ ಗರ್ಭದಿಂದ ಜನ್ಮಪಡೆದುಕೋ ಎಂದು ಕಠೋರ ನುಡಿಗಳನ್ನ್ನಾಡಿದಳು.
ಮಲತಾಯಿ ನುಡಿದ ಕಟು ವಚನಗಳು ಧ್ರುವನ ಹೃದಯಕ್ಕೆ ಬಾಣದಂತೆ ನಾಟಿ ಘಾಸಿ ಮಾಡಿದವು. ಆಗ ಅವನು ಅಳುತ್ತ ತನ್ನ ತಾಯಿ ಸುನೀತಿಯ ಬಳಿಗೆ ಬಂದನು. ಧ್ರುವನ ಕಣ್ಣುಗಳಲ್ಲಿ ಕಣ್ಣೀರು ತುಂಬಿದ್ದು ನೋಡಿ ಮಗನನ್ನು ಎತ್ತಿಕೊಂಡಳು. ಅಷ್ಟರಲ್ಲಿ ಸೇವಕರೇ ಬಂದು ನಡೆದುದೆಲ್ಲವನ್ನು ಹೇಳಿದರು. ಸವತಿ ಅಂದ ಮಾತುಗಳಿಂದ ಸುನೀತಿಗೆ ದುಃಖವಾಯಿತು. ಆಗ ಅವಳು ಮಗನನ್ನು ಉದ್ದೇಶಿಸಿ ‘ಮಗು, ಈ ವಿಷಯದಲ್ಲಿ ಅನ್ಯರನ್ನು ದೂಷಿಸುವುದು ಸರಿ ಅಲ್ಲ ಕಾರಣ ಇದೆಲ್ಲವೂ ನಮ್ಮ-ನಮ್ಮ ಪೂರ್ವಜನ್ಮದ ಕರ್ಮಗಳಿಗನುಸಾರವಾಗಿ ಪ್ರಾಪ್ತವಾಗಿವೆ. ಅದಕ್ಕೆ ಚಿಂತಿಸಿ ಫಲವಿಲ್ಲ. ನೀನು ನನ್ನಂಥವಳ (ಭಾಗ್ಯಹೀನಳ) ಗರ್ಭದಲ್ಲಿ ಜನಿಸಿರುವೆ. ನಾನೇ ದೌರ್ಭಾಗ್ಯಳು, ಏಕೆಂದರೆ ರಾಜನು ನನ್ನನ್ನು ‘ದಾಸಿಯ’ ರೂಪದಲ್ಲಿ ಸ್ವೀಕರಿಸಿದ್ದಾನೆ. ಹಾಗಾಗಿ ರಾಜನಿಗೆ ಇದು ಲಜ್ಜಾಸ್ಪದ ಸಂಗತಿಯೇ ಅಗಿದೆ. ನಿನ್ನ ಮಲತಾಯಿ ಸರಿಯಾಗಿಯೇ ಹೇಳಿದ್ದಾಳೆ. ನೀನು ಉತ್ತಮನ (ಸುರಚಿಯ ಮಗನ) ಹಾಗೆ, ರಾಜ ಸಿಂಹಾಸನ ಪಡೆಯುವ ಇಚ್ಛೆ ಇದ್ದಲ್ಲಿ, ಶ್ರೀಹರಿಯ ಚರಣಕಮಲಗಳ ಆರಾಧನೆ ಮಾಡಿ ಅವನ ಕೃಪೆಗೆ ಪಾತ್ರನಾಗು. ಶುದ್ಧ ಮನಸ್ಸಿನಿಂದ ಭಕ್ತವತ್ಸಲ ಶ್ರೀಹರಿಯ ಚರಣಗಳಲ್ಲಿ ಶರಣಾಗು. ಆ ಭಕ್ತವತ್ಸಲನಲ್ಲದೇ ನಿನ್ನ ದುಃಖ ಹೋಗಲಾಡಿಸಲು ಈ ಪ್ರಪಂಚದಲ್ಲಿ ಬೇರೆ ಯಾರೂ ಇಲ್ಲ’ ಎಂದು ಹೇಳಿದ್ದನ್ನು ಕೇಳಿ ಧ್ರುವನು ತನ್ನ ಮನಸ್ಸಿಗೆ ಧೈರ್ಯತಂದುಕೊಂಡು ತಾಯಿ ಹೇಳಿದ ಮಾತನ್ನು ಪಾಲಿಸಲು ಕಾಡಿಗೆ ಪ್ರಯಾಣ ಮಾಡಿದನು. ನಾರದ ಮಹರ್ಷಿಗಳು ತಮ್ಮ ತಪೋಬಲದಿಂದ ಧ್ರುವನ ಸ್ಥಿತಿಯನ್ನು ಅರಿತು ಧ್ರುವನಿಗೆ ಆಶೀರ್ವದಿಸಿ ‘ಬಾಲಕನೇ ಶ್ರೀಹರಿಯ ನಾಮಸ್ಮರಣೆಯೇ ಶ್ರೇಷ್ಠ. ನಿನ್ನ ಪೂರ್ವಜರು ಪಡೆಯಲಾಗದ ಪರಮ ಪದವಿಯನ್ನು ಪಡೆಯಲು ಪರಮಾತ್ಮನ ಅನುಗ್ರಹ ಬೇಕು. ಆ ಸಚ್ಚಿದಾನಂದ ಘನ ಪರಮಾತ್ಮನ ಅನನ್ಯ ನಾಮಸ್ಮರಣೆ ಮಾಡು. ಅವನ ದಯೆಗೆ ಪಾತ್ರನಾಗು. ಆಗ ನೀನು ಈ ಲೋಕದಲ್ಲಿ ಪ್ರಸಿದ್ಧನಾಗಿ ಅನವರತ ಬೆಳಗುವಿ’ ಎಂದು ಉಪದೇಶ ಮಾಡಿ ತಮ್ಮ ಅಮೃತ ಹಸ್ತವನ್ನು ಅವನ ಶಿರದ ಮೇಲೆ ಸ್ಪರ್ಶಿಸಿ ಆಶೀರ್ವದಿಸಿದರು. ದೇವರ್ಷಿ ನಾರದ ಮಹರ್ಷಿಗಳ ಉಪದೇಶದಿಂದ ದಿವ್ಯಾನಂದ ಹೊಂದಿ ಅವರನ್ನು ಪ್ರದಕ್ಷಿಣೆ ಮಾಡಿ ಸಾಷ್ಟಾಂಗ ವಂದನೆಗಳನ್ನು ಅರ್ಪಿಸಿದನು. ಕಾಡಿನಲ್ಲಿ ಗಡ್ಡೆ ಗೆಣಸುಗಳನ್ನು ಸೇವಿಸುತ್ತ ಹಗಲಿರುಳೂ ಆತನ ನಾಮಸ್ಮರಣೆ ಮಾಡುತ್ತ ಕಾಲಕಳೆಯುತ್ತಿರಲು ಧ್ರುವನ ಧೃಡ ಭಕ್ತಿಗೆ ಆ ಭಗವಂತನು ಸಂಪ್ರೀತನಾಗಿ ಧ್ರುವನ ಎದುರಿಗೆ ಪ್ರತ್ಯಕ್ಷನಾದನು. ‘ಬಾಲಕ ಧ್ರುವನೇ ನಿನ್ನ ಆನನ್ಯ ಭಕ್ತಿಗೆ ಮೆಚ್ಚಿದ್ದೇನೆ ನಿನಗೇನು ಬೇಕು ಕೇಳಿಕೋ’ ಎಂದಾಗ ಬಾಲಕ ಧ್ರುವನು ಪರಮಾತ್ಮನನ್ನು ತದೇಕಚಿತ್ತದಿಂದ ಆನಂದಾಶ್ಚರ್ಯಗಳಿಂದ ಕಣ್ತುಂಬ ನೋಡಿ ಹರ್ಷಪಟ್ಟನು.
ಈಗ ದಯಾಸಾಗರನಾದ ಭಕ್ತವತ್ಸಲನಾದ ಆ ಸಚ್ಚಿದಾನಂದ ಪರಮಾತ್ಮನು ‘ಎಲೈ ರಾಜಕುಮಾರ! ನಿನಗೆ ಮಂಗಳ ಉಂಟಾಗಲಿ. ನನ್ನ ಕೃಪೆಯಿಂದ ನಿನಗೆ ಧ್ರುವ ಪದವಿ ಪ್ರಾಪ್ತವಾಗುವುದು. ಆ ಧ್ರುವಲೋಕ ಪರಮ ಪ್ರಕಾಶಮಯವಾದುದು. ಕಲ್ಪಾಂತರ ಪರ್ಯಂತ ಇರುವ ಜನರ ನಾಶವಾದರೂ ಸಹ ಅದು (ಧ್ರುವಲೋಕ) ನಾಶವಾಗುವುದಿಲ್ಲ. ಆ ಲೋಕಕ್ಕೆ (ಧ್ರುವ) ಎಲ್ಲ ಜನರೂ ನಮಸ್ಕಾರ ಮಾಡುತ್ತಾರೆ. ಅಲ್ಲದೆ (ಧ್ರುವಲೋಕಕ್ಕೆ) ಹೋದ ಯೋಗಿಗಳು ಪುನಃ ತಿರುಗಿ ಬರುವುದಿಲ್ಲ. ಅಷ್ಟೇ ಅಲ್ಲ, ನಿನ್ನ ತಂದೆ ನಿನಗೆ ರಾಜ್ಯ ಕೊಟ್ಟು ವನವಾಸಕ್ಕೆ ಹೋಗುವರು. ನೀನು 36 ಸಾವಿರ ವರ್ಷ ರಾಜ್ಯಭಾರ ಮಾಡುವೆ. ನಿನ್ನ ಅಂತಃಕರಣವು ನನ್ನ ಕೃಪೆಯಿಂದ ವಿಷಯಭೋಗಗಳಲ್ಲಿ ಬೆರೆಯುವುದಿಲ್ಲ’. ಹೀಗೆ ಭಗವಂತನು ಧ್ರುವನಿಗೆ ವರಕೊಟ್ಟು ಅಂತರ್ಧಾನನಾದನು.
ಅಂತೆಯೇ ಧ್ರುವನು ಯುಗ-ಯುಗಗಳಿಂದ ಲೋಕ ಪ್ರಸಿದ್ಧನಾಗಿ ಇಂದಿಗೂ ಬೆಳಗುತ್ತಿದ್ದಾನೆ! ಬಾಲಕ ಭಕ್ತ ಧ್ರುವನು ಪರಮಾತ್ಮನ ಪರಮಕೃಪೆಗೆ ಪಾತ್ರನಾಗಿ ಇಂದಿಗೂ, ಎಂದೆಂದಿಗೂ ಸೂರ್ಯ-ಚಂದ್ರಾದಿಗಳ ಜೊತೆ ಬೆಳಗುತ್ತಿದ್ದಾನೆ. ದಾಸಿಯ ಮಗನಾದರೂ, ತಾಯಿಯ, ನಾರದ ಮಹರ್ಷಿಗಳ ಆಶೀರ್ವಾದದಿಂದ ಭಗವಂತನ ಪ್ರೀತಿಗೆ ಪಾತ್ರನಾಗಿ, ಸಾಯುಜ್ಯ ಪದವಿಯನ್ನು ಹೊಂದಿ ಈ ಲೋಕದಲ್ಲಿ ಪ್ರಸಿದ್ಧನಾಗಿ ಬೆಳಗುತ್ತಿದ್ದಾನೆ.

   

Leave a Reply