ಬಿಜೆಪಿಗೆ ಶಕ್ತಿವರ್ಧಕವಾದ ಫಲಿತಾಂಶ

ಚುನಾವಣೆಗಳು - 0 Comment
Issue Date : 17.12.2013

ದೇಶದ ರಾಜಧಾನಿ ದಿಲ್ಲಿ ಸೇರಿದಂತೆ ಐದು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ನಿರೀಕ್ಷಿಸಿದಂತೆಯೇ ಪ್ರಕಟವಾಗಿದೆ. ಮಧ್ಯಪ್ರದೇಶ, ಛತ್ತೀಸ್‌ಗಢ ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿ ಅಧಿಕಾರ ಉಳಿಸಿಕೊಂಡು ಹ್ಯಾಟ್ರಿಕ್ ಸಾಧನೆ ಮಾಡಿದ್ದರೆ, ರಾಜಸ್ಥಾನದಲ್ಲಿ ಆಡಳಿತಾರೂಢ ಕಾಂಗ್ರೆಸ್ ಹೀನಾಯವಾಗಿ ಸೋತು ನೆಲಕಚ್ಚಿದೆ. ರಾಜಧಾನಿ ದಿಲ್ಲಿಯಲ್ಲೂ ಕಾಂಗ್ರೆಸ್‌ನದು ಅದೇ ಕಥೆ. ಆ ಪಕ್ಷಕ್ಕೆ ಸಮಾಧಾನ ತಂದುಕೊಟ್ಟ ಒಂದೇ ಒಂದು ಫಲಿತಾಂಶವೆಂದರೆ ಮಿಜೋರಾಂನದು. ಅಲ್ಲಿ ಕಾಂಗ್ರೆಸ್ ಮತ್ತೆ ಬಹುಮತ ಪಡೆದು ಅಧಿಕಾರಕ್ಕೇರಿದೆ. ನಾಲ್ಕು ರಾಜ್ಯಗಳಲ್ಲಿ ಕಾಂಗ್ರೆಸ್‌ನ ಪರಾಭವ ಆ ಪಕ್ಷಕ್ಕೆ ಸದ್ಯಕ್ಕಂತೂ ಸಹಿಸಲಾಗದ ಭಾರೀ ಪೆಟ್ಟು. ರಾಹುಲ್ ಗಾಂಧಿಯ ‘ಮ್ಯಾಜಿಕ್’ ಎಲ್ಲೂ ನಡೆದಿಲ್ಲವೆನ್ನುವುದು ಮತ್ತೆ ಸಾಬೀತಾಗಿದೆ. ಹಾಗಾಗಿ ಮುಂದಿನ ಲೋಕಸಭಾ ಚುನಾವಣೆಗೆ ರಾಹುಲ್ ಗಾಂಧಿಯನ್ನು ಪ್ರಧಾನಿ ಅಭ್ಯರ್ಥಿಯಾಗಿ ಘೋಷಿಸುವ ಕಾಂಗ್ರೆಸ್‌ನ ತಂತ್ರಕ್ಕೆ ಹಿನ್ನಡೆ ಉಂಟಾಗಿದೆ. ಬೆಲೆಯೇರಿಕೆ, ಭ್ರಷ್ಟಾಚಾರ, ದುರಾಡಳಿತ ಮುಂತಾದ ಜನವಿರೋಧಿಅಂಶಗಳು ಕಾಂಗ್ರೆಸ್‌ಗೆ ಮಾರಕವಾಗಿ ಪರಿಣಮಿಸಿದ್ದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ.
ಬಿಜೆಪಿಗೆ ಮಾತ್ರ ನಾಲ್ಕು ರಾಜ್ಯಗಳ ಫಲಿತಾಂಶವೂ ಮತ್ತಷ್ಟು ಶಕ್ತಿವರ್ಧಕವಾಗಿ ಪರಿಣಮಿಸಿದೆ. ಮ.ಪ್ರ., ಛತ್ತೀಸ್‌ಗಢದಲ್ಲಿ ಅಧಿಕಾರ ಉಳಿಸಿಕೊಂಡು ಹ್ಯಾಟ್ರಿಕ್ ಸಾಧನೆ ಮಾಡಿದ್ದರೆ, ರಾಜಸ್ಥಾನದಲ್ಲಿ ಮತ್ತೆ ಕಾಂಗ್ರೆಸ್‌ನಿಂದ ಅಧಿಕಾರ ಕಸಿದುಕೊಂಡಿರುವುದು ಕಡಿಮೆ ಸಾಧನೆಯೇನಲ್ಲ. ದಿಲ್ಲಿಯಲ್ಲಿ ಕೇಜ್ರಿವಾಲರ ಆಮ್ ಆದ್ಮಿ ಪಕ್ಷದ ಭರಾಟೆಯ ನಡುವೆಯೂ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊಮ್ಮಿರುವುದು ಆ ಪಕ್ಷಕ್ಕೆ ಜನಬೆಂಬಲ ಹೆಚ್ಚಾಗಿರುವುದರ ಸಂಕೇತ. ಈ ನಾಲ್ಕೂ ರಾಜ್ಯಗಳಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯ ಚುನಾವಣಾ ರ್ಯಾಲಿಗಳು ಆ ಪಕ್ಷಕ್ಕೆ ಗೆಲುವು ತಂದುಕೊಡುವಲ್ಲಿ ಪರಿಣಾಮ ಬೀರಿವೆ. ಅದರಲ್ಲೂ ರಾಜಸ್ಥಾನದಲ್ಲಿ ಮೋದಿ ಭಾಷಣ ಮಾಡಿದ 21 ಕ್ಷೇತ್ರಗಳ ಪೈಕಿ 17ರಲ್ಲಿ ಬಿಜೆಪಿ ಗೆದ್ದಿದೆ. ಅದೇ ರೀತಿ ಮ.ಪ್ರ.ದ 15 ಕ್ಷೇತ್ರಗಳಲ್ಲಿ 14ರಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಛತ್ತೀಸ್‌ಗಢದಲ್ಲೂ ಮೋದಿ ಭಾಷಣ ಮಾಡಿರುವ 6 ಕ್ಷೇತ್ರಗಳ ಪೈಕಿ 4ರಲ್ಲಿ ಬಿಜೆಪಿ ಗೆದ್ದಿದೆ. ಆದರೆ ರಾಹುಲ್ ಭಾಷಣ ಮಾಡಿದ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹೀನಾಯವಾಗಿ ಸೋತಿದೆ. ರಾಜಸ್ಥಾನದಲ್ಲಂತೂ ರಾಹುಲ್ ಭಾಷಣ ಮಾಡಿದ 10 ಕಡೆಗಳಲ್ಲೂ ಕಾಂಗ್ರೆಸ್ ನೆಲಕಚ್ಚಿದೆ. ಮೋದಿ ಪ್ರಭಾವ ಈ ಚುನಾವಣೆಯಲ್ಲಿ ಇರಲಿಲ್ಲವೆಂದು ಈಗ ವಾದಿಸುವವರು ಈ ಎಲ್ಲಾ ಅಂಶಗಳನ್ನು ಗಮನಿಸುವುದು ಒಳಿತು. ದಿಲ್ಲಿಯಲ್ಲಿ ಎಎಪಿಯ ಭರಾಟೆ ಇದ್ದಾಗ್ಯೂ ಬಿಜೆಪಿ 31 ಸ್ಥಾನಗಳನ್ನು ಗಳಿಸಲು ಕಾರಣವಾಗಿರುವುದು ಮೋದಿಯ ಪ್ರಭಾವವೇ.
ಯಾವುದೇ ಪಕ್ಷ ಸರಳ ಬಹುಮತ ಪಡೆಯದ ದಿಲ್ಲಿಯಲ್ಲಿ ಈಗ ಅತಂತ್ರ ಸ್ಥಿತಿ. ಬಿಜೆಪಿ ಹಾಗೂ ಎಎಪಿ ಎರಡೂ ಪಕ್ಷಗಳು ತಾವು ಸರ್ಕಾರ ರಚಿಸುವುದಿಲ್ಲ ಎಂದು ಸ್ಪಷ್ಟವಾಗಿ ಸಾರಿರುವುದರಿಂದ ಅಲ್ಲಿ ಒಂದೋ ರಾಷ್ಟ್ರಪತಿ ಆಡಳಿತ ಅಥವಾ ಮರುಚುನಾವಣೆ ನಡೆಸಬೇಕಾದ ಅನಿವಾರ್ಯತೆ. ಎಎಪಿಗೆ ಕಾಂಗ್ರೆಸ್ ಬೇಷರತ್ ಬೆಂಬಲ ನೀಡುವುದಾಗಿ ಹೇಳಿದೆ ಎಂಬ ವರದಿಯೂ ಇದೆ. ಆದರೆ ಕಾಂಗ್ರೆಸ್ ಬೆಂಬಲ ಪಡೆದು ಅದೇನಾದರೂ ಸರ್ಕಾರ ರಚಿಸಿದರೆ ಆ ಪಕ್ಷದ ಮೂಲ ಉದ್ದೇಶವೇ ಹಾಸ್ಯಾಸ್ಪದ ಎನಿಸಿಕೊಂಡೀತು. ಎಎಪಿ ಆಶ್ಚರ್ಯಕರ ರೀತಿಯಲ್ಲಿ ಮೊದಲ ಬಾರಿಗೆ ದಿಲ್ಲಿ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗಳಿಸಿರುವುದಕ್ಕೆ ಯುವ ಮತದಾರರು ಕಾರಣ. ಆದರೆ ಒಂದು ಗಟ್ಟಿಯಾದ ಸಿದ್ಧಾಂತ, ನಿರ್ದಿಷ್ಟ ಬದ್ಧತೆ, ಆಡಳಿತದ ಅನುಭವ – ಯಾವುದೂ ಇಲ್ಲದ ಕೇಜ್ರಿವಾಲರ ಎಎಪಿಯ ಭವಿಷ್ಯದ ಬಗ್ಗೆ ಎಲ್ಲರಿಗೂ ಸಂದೇಹವಿದೆ. ಹಿಂದೆ ಅಸ್ಸಾಂನಲ್ಲಿ ಎಜಿಪಿ ಕೂಡ ಇದೇ ರೀತಿ ಭ್ರಷ್ಟಾಚಾರ ವಿರೋಧಿಹೋರಾಟ ನಡೆಸಿ ಅಧಿಕಾರಕ್ಕೆ ಬಂದಿದ್ದರೂ ಅನಂತರ ಆ ಪಕ್ಷವೇ ಭ್ರಷ್ಟಾಚಾರ ನಡೆಸಿದ ಪರಿಣಾಮ ಮೂಲೆಗುಂಪಾಯಿತು. ಆದ್ದರಿಂದ ಲೋಕಸಭೆ ಚುನಾವಣೆಯಲ್ಲಿ ಮತದಾರರು ಬದ್ಧತೆ, ಗಟ್ಟಿ ಸಿದ್ಧಾಂತ ಹೊಂದಿರುವ ಪಕ್ಷವನ್ನೇ ಆಯ್ಕೆ ಮಾಡಬೇಕಾದುದು ಪ್ರಜಾತಂತ್ರ ವ್ಯವಸ್ಥೆಯ ಆರೋಗ್ಯದ ದೃಷ್ಟಿಯಿಂದ ಅತ್ಯಗತ್ಯವಾಗಿದೆ.

   

Leave a Reply