ಬಿಸಿಲಿನಿಂದ ಮಕ್ಕಳ ರಕ್ಷಿಸಿ

ಆರೋಗ್ಯ ; ಲೇಖನಗಳು - 0 Comment
Issue Date : 30.4.2016

ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಮಕ್ಕಳ ಸಂತೋಷಕ್ಕೆ ಎಲ್ಲೆ ಇರುವುದಿಲ್ಲ. ಆ ಮೈಸುಡುವ ಬಿಸಿಲಲ್ಲಿ ದೊಡ್ಡವರೆಲ್ಲ ಹೊರಬರುವುದಕ್ಕೇ ಬೇಸರಿಸಿಕೊಳ್ಳುತ್ತಿದ್ದರೆ ಮಕ್ಕಳಿಗೆ ಮಾತ್ರ ಈ ಯಾವುದರ ಅರಿವೂ ಇರುವುದಿಲ್ಲ. ಮನಸೋ ಇಚ್ಛೆ ಕುಣಿಯುತ್ತಿರುತ್ತವೆ. ಚರ್ಮ ಕಪ್ಪಾಗುತ್ತದೆಂಬ ಭಯವಾಗಲಿ, ಆರೋಗ್ಯ ಕೆಟ್ಟರೆ ಎಂಬ ಹೆದರಿಕೆಯಾಗಲಿ ಅವಕ್ಕಿರುವುದೇ ಇಲ್ಲ. ಹೀಗೆ ಬಿಸಿಲಿನಲ್ಲಿ ನಿರಂತರವಾಗಿ ಆಟ ಆಡುವುದರಿಂದ ಮಕ್ಕಳ ಆರೋಗ್ಯ ಹಾಳಾಗಬಹುದು. ಆದ್ದರಿಂದ ಅವರನ್ನು ರಕ್ಷಿಸುವುದು, ಬೇಸಿಗೆಯಲ್ಲಿ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ತೋರಬೇಕೆಂಬುದನ್ನು ಕಲಿಸಬೇಕಾದ್ದು ಪಾಲಕರ ಜವಾಬ್ದಾರಿ.
1. ಬೇಸಿಗೆಯಲ್ಲಿ ಮಕ್ಕಳು ಹೆಚ್ಚು ಹೆಚ್ಚು ಶುದ್ಧ ನೀರನ್ನು ಕುಡಿಯುವಂತೆ ನೋಡಿಕೊಳ್ಳಿ.
2. ಆದಷ್ಟು ಹೆಚ್ಚು ಹಣ್ಣು-ತರಕಾರಿಗಳನ್ನು ಸೇವಿಸುವುದಕ್ಕೆ ಹೇಳಿ.
3. ದೇಹದ ಉಷ್ಣತೆಯನ್ನು ಕಡಿಮೆ ಮಾಡುವ ಮತ್ತು ನಿರ್ಜಲೀಕರಣದಿಂದ ದೇಹವನ್ನು ರಕ್ಷಿಸುವ ಹಣ್ಣು-ತರಕಾರಿಗಳನ್ನು ನೀಡಿ.
4. ಮಕ್ಕಳ ತಲೆಗೆ ಕೊಬ್ಬರಿ ಎಣ್ಣೆ ಹಚ್ಚುವುದನ್ನು ಮರೆಯದಿರಿ.
5. ಮಕ್ಕಳು ಅತಿಯಾದ ಬಿಸಿಲಿನಲ್ಲಿ ಆಟವಾಡಿ ಬಂದ ನಂತರ ಸ್ನಾನ ಮಾಡುವುದಕ್ಕೆ ಹೇಳಿ. ಆಟ ಆಡಿದ ನಂತರ ಸ್ನಾನ ಮಾಡದೇ ಇದ್ದಲ್ಲಿ ಮೈಗಂಟಿದ ಬೆವರು ಹಾಗೆಯೇ ಉಳಿದು ಅಲರ್ಜಿಯಂಥ ಸಮಸ್ಯೆಗೆ ಕಾರಣವಾಗಬಹುದು.
6. ಸೆಖೆಯೆಂದು ಫ್ರಿಡ್ಜ್‌ನಲ್ಲಿರುವ ನೀರನ್ನೋ, ಕೂಲ್‌ಡ್ರಿಂಕ್ಸ್ ಅನ್ನೋ ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ.
7. ಅತಿಯಾದ ಎಸಿ ಅಥವಾ ಫ್ಯಾನ್ ಗಾಳಿಯೂ ಆರೋಗ್ಯಕ್ಕೆ ಒಳ್ಳೆಯದಲ್ಲ.
8. ಈ ಸಮಯದಲ್ಲಿ ಮಕ್ಕಳಿಗೆ ಹೆಚ್ಚು ಹತ್ತಿ ಬಟ್ಟೆಯನ್ನೇ ಧರಿಸುವುದಕ್ಕೆ ಕೊಡಿ. ಮತ್ತು ಅವು ಹೆಚ್ಚು ಬಿಗಿಯಾಗಿರದಂತೆ ನೋಡಿಕೊಳ್ಳಿ.
9. ಕಪ್ಪು ಬಣ್ಣದ ಬಟ್ಟೆಯನ್ನು ಧರಿಸುವುದಕ್ಕೆ ಕೊಡಬೇಡಿ. ಏಕೆಂದರೆ ಕಪ್ಪು ಬಣ್ಣ ಉಷ್ಣವನ್ನು ಹೀರಿಕೊಳ್ಳು ವುದರಿಂದ ಮತ್ತಷ್ಟು ಸೆಖೆಯ ಅನುಭವವಾಗುತ್ತದೆ.
10. ಇಂದು ಉಷ್ಣ ಗಾಳಿಯಿಂದಾಗಿ ದೇಹ ನಿರ್ಜಲೀಕರಣಗೊಂಡು ಸಾವಿಗೀಡಾಗುತ್ತಿರುವ ವರದಿಯನ್ನೂ ಕೇಳುತ್ತಿದ್ದೇವೆ. ಆದ್ದರಿಂದ ಅತೀ ಬಿಸಿಲಿದ್ದಾಗ ಮಕ್ಕಳನ್ನು ಆಡುವುದಕ್ಕೆ ಬಿಡಬೇಡಿ. ಆ ಸಮಯದಲ್ಲಿ ಮನೆಯಲ್ಲೇ ಆಡುವ ಆಟವನ್ನು ಅವರು ಆಡಿಕೊಳ್ಳಲಿ. ಅಥವಾ ಬೇರೆ ಯಾವುದಾದರೂ ಕ್ರಿಯಾಶೀಲ ಕೆಲಸದಲ್ಲಿ ಅವರು ತೊಡಗಿಕೊಳ್ಳಲಿ.
11. ಮಕ್ಕಳಿಗೆ ಆಡಲೇ ಬೇಕೆನ್ನಿಸಿದರೆ ಅವರನ್ನು ಬೆಳಗ್ಗೆ ಬೇಗನೇ ಎಬ್ಬಿಸಿ ಆಡುವುದಕ್ಕೆ ಕಳಿಸಿ. ಬೆಳಗಿನ ಸೂರ್ಯ ಕಿರಣ ದೇಹಕ್ಕೆ ಒಳ್ಳೆಯದೂ ಹೌದು.
12. ಹೆಚ್ಚು ಖಾರದ, ಮಸಾಲೆ ಪದಾರ್ಥಗಳನ್ನು ಸೇವಿಸುವುದಕ್ಕೆ ಕೊಡಬೇಡಿ.
13. ಕುರುಕಲು ತಿಂಡಿಗಳೂ ಈ ಸಂದರ್ಭದಲ್ಲಿ ಒಳ್ಳೆಯದಲ್ಲ.

   

Leave a Reply