ಬುದ್ಧಿ ಜೀವಿಗಳ ಬೊಬ್ಬೆಗೆ ಹಿಂದುಗಳ ಶ್ರದ್ಧೆ ಕುಸಿದಿಲ್ಲ!

ಪ್ರವಾಸ - 1 Comment
Issue Date : 06.08.2015

-ಕಲ್ಯಾಣ ಮರಳಿ, ಗುಳೇದಗುಡ್ಡ

ನಾನು ಹಾಗೂ ನನ್ನ ಧರ್ಮಪತ್ನಿ ಇಬ್ಬರೂ ಮಂಗಳೂರಿನ ನಿರ್ಮಲಾ ಟ್ರಾವೆಲ್ಸ್‌ನಲ್ಲಿ ಉತ್ತರ ಭಾತರದ ಪುಣ್ಯ ಕ್ಷೇತ್ರಗಳ ದರ್ಶನಕ್ಕೆ ಹೋಗಿದ್ದೆವು. ಕೆಲವರು ಬೆಂಗಳೂರು ಹಾಗೂ ಹುಬ್ಬಳ್ಳಿಯಿಂದ ರೈಲು ಮೂಲಕ ದೆಹಲಿಗೆ ಬಂದಿಳಿದರು. ಇನ್ನು ಕೆಲವರು ವಿಮಾನ ಮೂಲಕ ಬೆಂಗಳೂರಿನಿಂದ ದೆಹಲಿಗೆ ಬಂದಿದ್ದರು. ಒಟ್ಟು 42 ಜನರ ನಮ್ಮ ತಂಡ 2ಎ.ಸಿ. ಬಸ್ಸುಗಳ ಮೂಲಕ ಮೊದಲು ತೀರ್ಥರಾಜ ಪ್ರಯಾಗ, ತ್ರಿವೇಣಿ ಸಂಗಮ ನಂತರ ಅಯೋಧ್ಯೆ, ಕಾಶಿ ಸಾರನಾಥ ಬೋಧಗಯಾ ಮತ್ತು ಗಯಾಕ್ಕೆ ಹೋಗಿ ಮರಳಿ ದಿಲ್ಲಿ ಸೇರಿದೆವು. ಅಯೋಧ್ಯೆಯಲ್ಲಿ ಬಾಬರಿ ಗುಮ್ಮಟಗಳು ಉರುಳಿ ಅಲ್ಲಿ ರಾಮಲಲ್ಲಾ ಮೂರ್ತಿಯನ್ನು ಇಟ್ಟ ನಂತರ ಭಯಾನಕವಾದಂಥ ಭದ್ರತಾ ವ್ಯವಸ್ಥೆಯಿದೆ. ಸುಮಾರು ಎರಡು ಸಾವಿರ ಭದ್ರತಾ ಪಡೆ, ಇದರಲ್ಲಿ ಮಹಿಳಾ ಭದ್ರತಾ ಸಿಬ್ಬಂದಿಯೂ ಇದ್ದು ಸುಮಾರು ನಾಲ್ಕು ಕಡೆ ಯಾತ್ರಿಕರ ತಪಾಸಣೆ ನಡೆಯುತ್ತಿತ್ತು. ನಮ್ಮದೇ ದೇಶದಲ್ಲಿ ನಮ್ಮದೇ ದೇವರು ಇಷ್ಟೊಂದು ಚಕ್ರವ್ಯೆಹದಲ್ಲಿ ಸಿಲುಕಿದ್ದು ಯಾವ ನ್ಯಾಯ? ಒಂದು ದಿನ ವಿಶ್ರಾಂತಿಯ ನಂತರ ಹರಿದ್ವಾರ, ಋಷಿಕೇಶಗಳ ದರ್ಶನ ಮಾಡಿ ಕೇದಾರದತ್ತ ಪ್ರಯಾಣ. ಮಿನಿ ಬಸ್‌ಗಳ ಮೂಲಕ ಕೇದಾರಕ್ಕೆ ಸಮೀಪವಿರುವ (35ಕಿ.ಮೀ) ಸೀತಾಪೂರದಲ್ಲಿ ವಿಶ್ರಾಂತಿ ತೆಗೆದುಕೊಂಡು ಮರುದಿನ 5-6 ಜನರ ತಂಡ ಮಾಡಿ ಹೆಲಿಕ್ಯಾಪ್ಟರ್ ಮೂಲಕ ಕೇದಾರನಾಥನ ದರ್ಶನ ಮಾಡಿದೆವು. ಹೆಲಿಕ್ಯಾಪ್ಟರ್‌ನ ಪೈಲಟ್ ಒಬ್ಬ ಹೆಣ್ಣು ಮಗಳು ಎಂಬುದು ಅತ್ಯಂತ ಅಭಿಮಾನದ ಸಂಗತಿ.
 ನಂತರ ಸೀತಾಪೂರ್‌ನಿಂದ ಬೆಳಿಗ್ಗೆ 4 ಘಂಟೆಗೆ ಬಿಟ್ಟು ಬೆಳಗಿನ 9-30 ಘಂಟೆಗೆ ಬದರಿನಾಥಕ್ಕೆ ಹೋದೆವು. ಅದು ಬದರಿವಿಶಾಲ ಎಂದೇ ಕರೆಯುವರು. ಈ ಎಲ್ಲ ಸ್ಥಳಗಳಲ್ಲಿ ಆದ ಅನುಭವ ಹೇಳತೀರದು.
 ಮುಖ್ಯವಾಗಿ ಹರಿದ್ವಾರ ಹಾಗೂ ಕಾಶಿಯಲ್ಲಿ ಗಂಗೆಯ ಪಾತ್ರ ವಿಶಾಲವಾದದ್ದು. ಅಲ್ಲಿ ಲಕ್ಷಾನುಗಟ್ಟಲೆ ಭಕ್ತರು ಭಕ್ತಿಯಿಂದ ಸ್ನಾನಮಾಡಿ ಪಿತೃಗಳಿಗೆ ಪಿಂಡಪ್ರದಾನ ಮಾಡುವರು. ನಮ್ಮ ಜೊತೆಗೆ ಬಂದವರಲ್ಲಿ ಡಾಕ್ಟರ್, ಎಂಜನಿಯರ್, ನಿವೃತ್ತ ಶಿಕ್ಷಕರು, ಶಿಕ್ಷಕಿಯರು, ನಗರ ಸಭೆಯ ನಿವೃತ್ತ ಮುಖ್ಯಾಧಿಕಾರಿಗಳು ಹುಬ್ಬಳ್ಳಿ – ಧಾರವಾಡದ ಮಾಜಿ ಉಪಮೇಯರ್, ವಕೀಲರು – ಹೀಗೆ ಸಮಾಜದ ಹತ್ತು ಹಲವು ವರ್ಗಗಳ ದಂಪತಿಗಳು ಇದ್ದರು. ಯಾರಲ್ಲಿಯೂ ಅಸಡ್ಡೆ ಮಾತು ಇರಲಿಲ್ಲ. ಎಲ್ಲರೂ ಹಿಂದು ಶ್ರದ್ಧಾಕೇಂದ್ರಗಳನ್ನು ಅವಹೇಳನ ಮಾಡುವವರನ್ನು ಸಮಾಜದಿಂದ ಬಹಿಸ್ಕರಿಸಬೇಕೆಂಬ ಮನೋಭಾವವನ್ನು ಮೇಲಿಂದ ಮೇಲೆ ವ್ಯಕ್ತಪಡಿಸುತ್ತಿ ದ್ದರು. ಅದೇರೀತಿ ಭಗವದ್ಗೀತೆಯನ್ನು ಸುಡಬೇಕೆಂದು ಅಪ್ಪಣೆ ಕೊಡಿಸಿದ ಭಗವಾನರನ್ನು ಬಹಿರಂಗವಾಗಿ ದಹಿಸ ಬೇಕೆಂದು ಕೆಲವರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಬಹಿರಂಗವಾಗಿ ಬೆಂಗಳೂರಿನಲ್ಲಿ ಗೋಮಾಂಸ ಭಕ್ಷಣೆ ಮಾಡಿಸಿದ ಗಿರೀಶ್ ಕಾರ್ನಾಡ ಒಬ್ಬ ಪಾಪಿ, ಅವಿವೇಕಿ ಎಂದು ಹಿಡಿಶಾಪ ಹಾಕಿದರು.
 ಕಾಶಿ ಹಾಗೂ ಹರಿದ್ವಾರದಲ್ಲಿ ಸೂರ್ಯಾಸ್ತ ವಾಗುತ್ತಲೇ ನದಿಯ ಎರಡೂ ದಂಡೆಯಲ್ಲಿ ಲಕ್ಷೋ ಪಲಕ್ಷ ಜನರು ತಾವಾಗಿಯೇ ಸೇರುತ್ತಾರೆ. ಆಗ ಅಲ್ಲಿ ಗಂಗೆಯ ಪೂಜೆ, ಅಭಿಷೇಕ, ಕುಂಕುಮಾರ್ಚನೆ ನಂತರ ಮಹಾ ಆರತಿ ನಡೆಯುತ್ತದೆ. ಒಂದೊಂದು ದಿನದ ಈ ಆರತಿಯ ಪೂಜೆಯನ್ನು ಸ್ವಇಚ್ಛೆಯಿಂದ ದೂರದಿಂದ ಬಂದ ದಂಪತಿಗಳು ವಹಿಸಿಕೊಂಡಿರುತ್ತಾರೆ. ಅದನ್ನು ನೆರವೇರಿಸುವ ಪುರೋಹಿತರು ಅವರಿಂದ ಸಂಕಲ್ಪ ಮಾಡಿಸಿ ಪೂಜೆ ಪ್ರಾರಂಭಿಸುತ್ತಾರೆ. ಸಂಕಲ್ಪದ ಮಂತ್ರವು ಭರತವರ್ಷೇ, ಭರತಖಂಡೇ, ಹಿಮಾಲಯ ದಕ್ಷಿಣ ಭಾಗೇ, ಆರ್ಯಾವರ್ತೇ ಗಂಗಾತೀರೆ ಎಂದು ಪ್ರಾರಂಭವಾಗಿ ಪೂಜೆ ಮಾಡಿಸುವವರ ಹೆಸರು, ಗೋತ್ರಗಳೊಂದಿಗೆ ಅವರ ಗೋತ್ರದಲ್ಲಿ ಜನಿಸುವವರೆಲ್ಲ ಸುಖ, ಸಂಪತ್ತು, ಐಶ್ವರ್ಯ ಪಡೆಯಲಿ ಎಂಬ ಆಶಯದೊಂದಿಗೆ ಮುಕ್ತಾಯವಾಗುತ್ತದೆ.
 ನಂತರ ಅತೀ ಮುಖ್ಯವಾದ ಗಂಗಾಆರತಿ ಪ್ರಾರಂಭ. ನದಿಯ ಎರಡು ದಂಡೆಯಲ್ಲಿ  ಸೇರಿದ ಜನ ಗಂಗಾ ಮಾತಾಕೀ ಜಯ್, ಜಯ ಗಂಗೆ, ಹರ ಹರ ಗಂಗೆ ಎಂದು ಎತ್ತರದ ಧ್ವನಿಯಿಂದ ಘೋಷಣೆ ಹಾಕುತ್ತಾರೆ. ಅಲ್ಲಿ ನೆರೆದ ಮಹಿಳೆಯರು ಆರತಿ ಪ್ರಾರಂಭವಾಗುತ್ತಿದ್ದಂತೆ ನದಿದಂಡೆಗೆ ಮಾರಲು ಬಂದಿರುವ ಪ್ರಣತಿ ಹಾಗೂ ಹೂವುಗಳನ್ನು ತೆಗೆದುಕೊಂಡು ಗಂಗೆಗೆ ಪೂಜೆ ಸಲ್ಲಿಸಿ ಪ್ರಣತಿಯನ್ನು ಬೆಳಗಿಸಿ ನದಿಯಲ್ಲಿ ದೀಪಗಳನ್ನು ತೇಲಿ ಬಿಡುತ್ತಾರೆ. ಸಾವಿರಾರು ದೀಪಗಳು ಗಂಗೆಯಲ್ಲಿ ತೇಲಿಹೋಗುವ ಆ ದೃಶ್ಯ ಅಮೋಘವಾದದ್ದು. ಎಲ್ಲರೂ ಸ್ವಯಂಸ್ಫೂರ್ತಿಯಿಂದ ಶ್ರದ್ಧೆಯಿಂದ ಬಂದು ಈ ಸೇವೆ ಮಾಡುತ್ತಾರೆ. ಇವರಲ್ಲಿ ದೇಶದ ನಾನಾ ಭಾಗಗಳಿಂದ ಬಂದವರು ವಿದೇಶದಿಂದ ಬಂದ ಭಾರತೀಯರಷ್ಟೇ ಅಲ್ಲ ವಿದೇಶಿ ಮಹಿಳೆಯರೂ ಸಹ ಭಾಗವಹಿಸಿದ್ದು ಆಶ್ಚರ್ಯ ಕರ. ಇದನ್ನು ನೋಡುವುದೇ ಒಂದು ಹಬ್ಬ. ಆದ್ದರಿಂದ ಈ ಬುದ್ಧಿಜೀವಿಗಳೆಂದು ತಿಳಿದವರು ತಮ್ಮ ಹೊಲಸು ಬಾಯಿಯನ್ನು ಚಪ್ಪರಿಸಿಕೊಳ್ಳಲು ಎಂಥ ಅಸಭ್ಯ ಟೀಕೆ ಮಾಡಿದರೂ ಜನರು ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಇಂಥ ನಾಯಿಗಳು ಪ್ರಾಚೀನ ಕಾಲದಿಂದಲೂ ಬೊಗಳು ತ್ತಲೇ ಬಂದಿವೆ. ನಾಯಿ ಬೊಗಳಿದರೆ ದೇವಲೋಕ ಹಾಳಾಗುವುದಿಲ್ಲ. ಆದ್ದರಿಂದಲೇ ಸನಾತನ ಸಂಸ್ಕೃತಿ 9 ಸಾವಿರ ವಷರ್ದಿಂದ ನಮ್ಮ ದೇಶದಲ್ಲಿ ಗಟ್ಟಿಯಾಗಿ ನಿಂತಿದೆ ಎಂಬುದಕ್ಕೆ ಇದೊಂದು ನಿದರ್ಶನ.
 ಉತ್ತರಾಖಂಡದ ದೇವಭೂಮಿಯ ಹಿಮಾಲಯದ ಒಡಲಿನಲ್ಲಿ ನೆಲೆಸಿರುವ ಕೇದಾರನಾಥ ಹಾಗೂ ಬದರಿನಾಥಗಳಿಗೆ ಹೋಗುವ ಮಾರ್ಗ ಅತ್ಯಂತ ದುರ್ಗ ಮವಾಗಿದ್ದರೂ ಶ್ರದ್ಧಾಳುಗಳ ಸಂಖ್ಯೆ ಕಡಿಮೆಯಾಗಿಲ್ಲ. ಋಷಿಕೇಶದಿಂದ ಹಿಮಾಲಯದ ಘಾಟ್ ಮಾರ್ಗ ದಿಂದಲೇ ಹೋಗಬೇಕಾಗುತ್ತದೆ. ಪರ್ವತವನ್ನು ಸುತ್ತಿಕೊಂಡು ಹೆಬ್ಬಾವಿನ ಹಾಗೆ ಚಿಕ್ಕ ರಸ್ತೆಗಳ ಮೂಲಕ ಒಂದೊಂದೇ ಪರ್ವತವನ್ನು ಹತ್ತುವುದು ಇಳಿಯುವುದು ಹೀಗೆಯೇ ಪಯಣ ಸಾಗುತ್ತದೆ.
 ನಾವು ಕ್ರಮಿಸಿ ಬಂದ ಹಿಂದಿನ ಮಾರ್ಗಗಳನ್ನು ಎತ್ತರದಿಂದ ನೋಡಿದರೆ ಕೇವಲ ಒಂದು ಗೆರೆ ಎಳೆದ ಹಾಗೆ ಕಾಣಿಸುತ್ತಿತ್ತು. ಅಂಥ ಮಾರ್ಗದಲ್ಲಿ 100 ಅಥವಾ 120 ಕಿ.ಮೀ ಚಲಿಸಬೇಕಾದರೆ ಕನಿಷ್ಠ 12 ಘಂಟೆ ಸಮಯ ಬೇಕಾಗುತ್ತಿತ್ತು. ಅಲ್ಲಲ್ಲಿ ಬಂಡೆಗಲ್ಲುಗಳು ಉರುಳಿ ಬಿದ್ದು ಅಥವಾ ಪರ್ವತದ ಮಣ್ಣಿನ ಭಾಗ ಕುಸಿದು ಬಿದ್ದು ಪ್ರಯಾಣಕ್ಕೆ ಅಡಚಣೆ ಉಂಟಾದ ಪ್ರಸಂಗಗಳು ಅನೇಕ. ಅಲ್ಲಿನ ಬಸ್‌ಚಾಲಕರು ನಿಜವಾಗಿ ಸ್ಕಿಲ್ ಇದ್ದವರು. ಆದ್ದರಿಂದ ವೈದ್ಯೋ ನಾರಾಯಣೋ ಹರಿಃ ಅಂದ ಹಾಗೆ ‘ಚಾಲಕ ದೇವೋಭವ’ ಎಂದು ಕರೆಯುತ್ತಿದ್ದೆವು. ಅವರು ನಮ್ಮನ್ನು ಸುಸೂತ್ರವಾಗಿ ಪಾರುಮಾಡಿ ತಂದರು. ಚಾಲಕರು ಆಯ ತಪ್ಪಿದರೆ ಕಾಯ ಪಾತಾಳಕ್ಕೆ ಹೋಗುವದರಲ್ಲಿ ಯಾವುದೇ ಸಂಶಯವಿಲ್ಲ.
 ದುರ್ಗಮ ರಸ್ತೆಗಳು ಎಂದು ನಾವು ಪಾಠದಲ್ಲಿ, ಕಾದಂಬರಿಯಲ್ಲಿ ಓದುತ್ತಿದ್ದೆವು. ಆದರೆ ಪ್ರತ್ಯಕ್ಷ ಅನುಭವ ಆಗಿದ್ದು ಇದೇ ಯಾತ್ರೆಯ ಸಮಯದಲ್ಲಿ. ನೇಪಾಳ ಭೂಕಂಪ ಸಂಭವಿಸಿ ಕೇವಲ 8-10 ದಿನಗಳಲ್ಲೆ ನಮ್ಮ ಯಾತ್ರೆ ಪ್ರಾರಂಭವಾಯಿತು ದಿಲ್ಲಿ ಮುಟ್ಟಿದ ಮರುದಿನವೇ ಲಘು ಭೂಕಂಪನದ ಅನುಭವ ಆಯಿತು. ಇಂಥ ಪರಿಸ್ಥಿತಿಯಲ್ಲೂ ನಿರ್ಮಲಾ ಟ್ರಾವೆಲ್ಸ್ ದವರು ಒಳ್ಳೆಯ ಚಾಕಚಕ್ಯತೆ ಹಾಗೂ ಸುವ್ಯವಸ್ಥಿತವಾಗಿ ನಡೆಸಿಕೊಟ್ಟಿದ್ದು ಒಂದು ಅಭಿಮಾನದ ಸಂಗತಿ.

   

1 Response to ಬುದ್ಧಿ ಜೀವಿಗಳ ಬೊಬ್ಬೆಗೆ ಹಿಂದುಗಳ ಶ್ರದ್ಧೆ ಕುಸಿದಿಲ್ಲ!

  1. manu

    estey aagli sanathana alva… sanathanakke saavu illa huttu illa

Leave a Reply