ಬ್ಟಿಟಿಷರ ವಿರುದ್ಧದ ಕ್ರಾಂತಿಕಾರಿ ಹೋರಾಟದ ಹಿನ್ನೆ

ಇತಿಹಾಸ ; ಲೇಖನಗಳು - 0 Comment
Issue Date : 16.5.2016

-ಸಿ.ಎಸ್.ಶಾಸ್ತ್ರೀ

ಆಧುನಿಕ ಭಾರತದ ಇತಿಹಾಸದಲ್ಲಿ ಬ್ರಿಟಿಷರ ವಿರುದ್ಧದ ಭಾರತೀಯರ ಹೋರಾಟದ ಇತಿಹಾಸ ಜಾಗತಿಕ ಮಟ್ಟದಲ್ಲೇ ಮನಸೆಳೆಯುವುದಾಗಿದೆ. ಅದೊಂದು ವಿಶಿಷ್ಟ ರೀತಿಯ ಹೋರಾಟದ ಮಾದರಿಯಾಗಿತ್ತು. ಅದು ಅಹಿಂಸಾತ್ಮಕ ಹಾಗೂ ಹಿಂಸಾಸ್ವರೂಪದ ಪ್ರತಿಭಟನೆಯಾಗಿತ್ತು. ಅದರಲ್ಲಿ ಅಸಂಖ್ಯಾತ ಜನರು ದೇಶಕ್ಕಾಗಿ ಪ್ರಾಣಾರ್ಪಣೆಗೈದುದರ ಪರಿಣಾಮವಾಗಿ ಇಂದು ನಾವು ಸ್ವತಂತ್ರರಾಗಿದ್ದೇವೆ. ಆ ಹೋರಾಟದ ಹಿನ್ನೆಲೆಗೆ ಒಂದು ಸುದೀರ್ಘ ಇತಿಹಾಸವಿದೆ.

ವಾಸ್ಕೋ ಡಾ ಗಾಮ ಭಾರತಕ್ಕೆ ಜಲಮಾರ್ಗದ ಮೂಲಕ ಬರುವುದರೊಂದಿಗೆ ಯುರೋಪಿಯನ್ನರಿಗೆ ಭಾರತದ ವ್ಯಾಪಾರದಲ್ಲಿ ಆಸಕ್ತಿಯಾಯಿತು. ಆಧುನಿಕ ಶಕ 1600ರಲ್ಲಿ ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಯ ಸ್ಥಾಪನೆಯಾಯಿತು. ಮೊಗಲ್ ಬಾದಷಹ, ಜಹಾಂಗೀರನ ಕಾಲದಲ್ಲಿ (1605-27) ಇಂಗ್ಲಿಷ್ ಈಸ್ಟ್ ಇಂಡಿಯಾ ಕಂಪೆನಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಒಪ್ಪಿಗೆ ದೊರೆಯಿತು. 1615ರಲ್ಲಿ ಇಂಗ್ಲೆಂಡಿನ ಒಂದನೇ ಜೇಮ್ಸ್‌ನ ಆದೇಶದ ಮೇರೆಗೆ ಸರ್ ಥಾಮಸ್ ರೋ ಜಹಾಂಗೀರನ ಆಸ್ಥಾನಕ್ಕೆ ವ್ಯಾಪಾರ ಅಭಿವೃದ್ಧಿಯ ಉದ್ದೇಶಕ್ಕಾಗಿ ಬಂದ. ಇಂಗ್ಲೀಷರು ಜಹಾಂಗೀರನಿಗೆ ಯುರೋಪಿನ ಬೆಲೆಬಾಳುವ ಹಾಗೂ ಅಪೂರ್ವ ಕೊಡುಗೆಗಳನ್ನು ನೀಡಲು ಒಪ್ಪಿದರು ಹಾಗೂ ಜಹಾಂಗೀರ ಅವರಿಗೆ ಭಾರತದಲ್ಲಿ ಅವರಿಗೆ ಬೇಕಾದಂತೆ ವ್ಯಾಪಾರ ಮಾಡಲು ಅನುಮತಿ ನೀಡಿದ. ಮಾತ್ರವಲ್ಲದೆ, ಜಹಾಂಗೀರ, ಇಂಗ್ಲೆಂಡಿನ ರಾಜ ಜೇಮ್ಸ್‌ಗೆ ಒಂದು ಪತ್ರವನ್ನು ಬರೆದು ಈಸ್ಟ್ ಇಂಡಿಯಾ ಕಂಪೆನಿಗೆ ಮುಕ್ತ ವ್ಯಾಪಾರ ಸ್ವಾತಂತ್ರ್ಯವನ್ನೂ, ಎಲ್ಲಾ ಸಹಕಾರವನ್ನೂ ನೀಡುವ ನಿರ್ಧಾರ ತಿಳಿಸಿ, ‘‘ನಮ್ಮೊಳಗಿನ ಸ್ನೇಹಾಚಾರ ಶಾಶ್ವತವಾಗಲಿ’’ ಎಂದು ಹೇಳಿದ. ಯುರೋಪಿನ ಬೆಲೆಬಾಳುವ ಮತ್ತು ಅಪೂರ್ವ ವಸ್ತುಗಳಿಗಾಗಿ ಜಹಾಂಗೀರ ಭಾರತವನ್ನು ಇಂಗ್ಲಿಷರಿಗೆ ನಿರ್ಬಂಧರಹಿತವಾಗಿ ತೆರೆದ ! ಇಂಗ್ಲಿಷರು ಸೂರತ್-ಮದ್ರಾಸ್‌ಗಳಲ್ಲಿ (1650) ಮತ್ತು ಬಂಗಾಳದಲ್ಲಿ (1690) ಬಲವಾಗಿ ತಳವೂರಿದರು. 1698ರಲ್ಲಿ ‘ಫೋರ್ಟ್ ವಿಲಿಯಂ’ ಸ್ಥಾಪಿಸಿ ಬಲಪಡಿಸಿಕೊಂಡರು. ಬಂಗಾಳದಲ್ಲಿ ಸುತಾನತಿ, ಕಾಳಿಕಟಾ ಮತ್ತು ಗೋಬಿಂದ್‌ಪುರ್ ಗ್ರಾಮಗಳನ್ನು ಒಂದುಗೂಡಿಸಿ ‘ಕಲ್ಕಟಾ’ ಎಂದು ಹೆಸರಿಸಿ ಈಸ್ಟ್ ಇಂಡಿಯಾ ಕಂಪೆನಿಯ ಬಲ ವೃದ್ಧಿಸಿಕೊಂಡರು. ಕಲ್ಕತ್ತಾ ಅವರ ವ್ಯಾಪಾರ ಮತ್ತು ರಾಜಕೀಯ ಕೇಂದ್ರವಾಯಿತು. ಅದಾದ ಮೇಲೆ ಹಂತಹಂತವಾಗಿ ಬ್ರಿಟಿಷರು ಅವರ ವ್ಯಾಪಾರದೊಂದಿಗೆ ಆಡಳಿತ ಅಧಿಕಾರವನ್ನೂ ಚಲಾಯಿಸತೊಡಗಿದರು. ಈಸ್ಟ್ ಇಂಡಿಯಾ ಕಂಪೆನಿ ನಾಣ್ಯ ಹೊರಡಿಸಿತು, ಕೋಟೆಗಳನ್ನು ಸೈನಿಕ ಕೇಂದ್ರವನ್ನಾಗಿ ಮಾಡಿತು, ಒಂದೊಂದೇ ಪ್ರದೇಶಗಳನ್ನು ತನ್ನ ಆಳ್ವಿಕೆಗೆ ಒಳಪಡಿಸಿತು ಹಾಗೂ ದೇಶೀಯ ರಾಜರೊಡನೆ ಒಪ್ಪಂದ ಅಥವಾ ಯುದ್ಧಗಳನ್ನು ಮಾಡತೊಡಗಿತು. 1757ರ ‘ಪ್ಲಾಸೀ ಕದನ’ ಬ್ರಿಟಿಷರ ಸಾರ್ವಭೌಮತ್ವದ ಸ್ಥಾಪನೆಯ ಮೊದಲ ಹೆಜ್ಜೆಯಾಯಿತು. ಆಮೇಲೆ, ಸುಮಾರು ಎರಡು ಶತಮಾನಗಳ ಕಾಲ ಬ್ರಿಟಿಷರು ಭಾರತದಲ್ಲಿ ರಾಜ್ಯಭಾರ ಮಾಡಿದರು. ಹಾಗೆಯೇ, 1764ರ ‘ಬಕ್ಸಾರ್ ಕದನ’ ಬ್ರಿಟಿಷರಿಗೆ ಬಂಗಾಳದಲ್ಲಿ ಕಂದಾಯ ಸಂಗ್ರಹಿಸುವ ಅಧಿಕಾರ ಒದಗಿಸಿತು. ಈಸ್ಟ್ ಇಂಡಿಯಾ ಕಂಪೆನಿ ಕೇವಲ ವ್ಯಾಪಾರೀ ಸಂಸ್ಥೆಯಾಗಿ ಉಳಿಯಲಿಲ್ಲ. ಹಿಂದಿನ ಯಾವುದೇ ಆಳ್ವಿಕೆಗಳಿಗಿಂತಲೂ ಹೆಚ್ಚಿನ ಸಾಮರ್ಥ್ಯ ಶಕ್ತಿಯಾಗಿ ಬ್ರಿಟಿಷರು ನೆಲೆಯೂರಿದರು. ನಿಧಾನವಾಗಿ ರಾಜಕೀಯಕ್ಕೆ ನುಸುಳಿದ ಅವರು ಆಮೇಲೆ ರಾಜಕೀಯ ನಿರ್ದೇಶನ ಮಾಡತೊಡಗಿದರು.
ಬ್ರಿಟಿಷರು ಭಾರತದ ರಾಜಕೀಯ ಗುಲಾಮಗಿರಿಯನ್ನೂ (Political Enslavement) ವಾಣಿಜ್ಯ ಶೋಷಣೆಯನ್ನೂ (Commercial Exploitation) ಗಮನದಲ್ಲಿರಿಸಿ ಕಾರ್ಯ ಪ್ರವೃತ್ತರಾದರು. ಸಮಗ್ರ ಭಾರತವನ್ನು ಕಬಳಿಸುವುದೇ ಅವರ ಅಂತರ್ಗತ ರಾಜಕೀಯ ಧ್ಯೇಯವಾಗಿತ್ತು. ಅದು ಭಾರತದ ಅಮೂಲಾಗ್ರವಾದ ರಾಜಕೀಯ, ಸಾಮಾಜಿಕ ಹಾಗೂ ಆರ್ಥಿಕ ಬದಲಾವಣೆಯನ್ನು ರೂಪಿಸಿತು. ಅವರಿಗೆ ಭಾರತವನ್ನು ಅಧೀನವಾಗಿರಿಸಲು ಆ ಬದಲಾವಣೆಯ ಅಗತ್ಯವಿತ್ತು.
ಬ್ರಿಟಿಷರಿಂದಾಗುತ್ತಿದ್ದ ವ್ಯವಸ್ಥಿತವಾದ ಆರ್ಥಿಕ ಶೋಷಣೆ, ದೇಶೀಯ ಸಂಸ್ಥಾನಗಳ ಕಬಳಿಸುವಿಕೆ, ಭಾರತೀಯರ ಆರ್ಥಿಕ, ಸಾಮಾಜಿಕ ಹಾಗೂ ಧಾರ್ಮಿಕ ವ್ಯವಹಾರಗಳನ್ನು ನಿಯಂತ್ರಿಸುವಿಕೆ ಮುಂತಾದ ಉದ್ದೇಶಗಳಿಗೆ ಭಾರತದಲ್ಲಿ ತೀವ್ರ ಪ್ರತಿಕ್ರಿಯೆ ಮತ್ತು ಪ್ರತಿರೋಧ ವ್ಯಕ್ತವಾಯಿತು. 1857ರಲ್ಲಿ ಭಾರತದ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ ಅಥವಾ ಸಿಪಾಯಿ ದಂಗೆ’ ಎಂದು ಬ್ರಿಟಿಷರಿಂದ ಕರೆಯಲ್ಪಡುವ ಹೋರಾಟ ಸ್ಫೋಟವಾಯಿತು. ಆಮೇಲೆ, ‘ಸಂನ್ಯಾಸೀ ದಂಗೆ’, ‘ರೈತರ ದಂಗೆ’, ‘ನಾಗರಿಕ ಬಂಡಾಯ’, ‘ಬುಡಕಟ್ಟುಗರ ಬಂಡಾಯ’, ‘ಕೃಷಿಕರ ಚಳುವಳಿ’ ಮೊದಲಾದ ಬ್ರಿಟಿಷ್ ವಿರೋಧೀ ಆಂದೋಲನಗಳು ತಲೆದೋರಿದವು. ಅವುಗಳನ್ನೆಲ್ಲಾ ಹತ್ತಿಕ್ಕುವ ಕಠಿಣ ನೀತಿಯಲ್ಲಿ ಬ್ರಿಟಿಷರು ಸಫಲರಾದರು. 1857ರ ಹೋರಾಟದ ಪರಿಣಾಮವಾಗಿ ಕಂಪೆನಿ ಆಡಳಿತ ಅಂತ್ಯವಾಗಿ, ಭಾರತ ನೇರವಾಗಿ ಬ್ರಿಟನ್ನಿನ ರಾಣಿಯ ಅಧೀನಕ್ಕೆ ಒಳಗಾಯಿತು. ವಿಕ್ಟೋರಿಯಾ ರಾಣಿಯನ್ನು ‘ಭಾರತದ ಮಹಾರಾಣಿ’ ಎಂದು ಘೋಷಿಸಲಾಯಿತು. ಅದರೊಂದಿಗೆ ಬ್ರಿಟಿಷ್ ಧೋರಣೆಯಲ್ಲಿ ಭಾರೀ ಬದಲಾವಣೆಯಾಗಿ, ಭಾರತೀಯರನ್ನು ಮೆಚ್ಚಿಸುವ ಪ್ರಯತ್ನಗಳಾದವು. ಆದರೂ, ರೈತರು, ಗುಡಿಕೈಗಾರಿಕಾ ಕಾರ್ಮಿಕರು, ಸಿಪಾಯಿಗಳು ಹಾಗೂ ಇತರ ವರ್ಗದವರು ಬ್ರಿಟಿಷ್ ಆಳ್ವಿಕೆಯ ವಿರುದ್ಧ ಅತೀ ಅತೃಪ್ತರಾಗಿದ್ದರು. ಆ ಜನ ವಿರೋಧೀ ಆಡಳಿತವನ್ನು ಬಹಿರಂಗವಾಗಿ ವಿಮರ್ಶಿಸಲಾಗುತ್ತಿತ್ತು ಮತ್ತು ಪತ್ರಿಕೆಗಳು ಜನರನ್ನು ಜಾಗೃತಗೊಳಿಸುತ್ತಿದ್ದವು. ಅದನ್ನು ತಡೆಯುವುದಕ್ಕಾಗಿ 1878ರಲ್ಲಿ ಪತ್ರಿಕಾ ಕಾಯಿದೆಯನ್ನು (The Vernacular Press Act) ಲಿಟ್ಟನ್ (1876-1880) ಜಾರಿಗೊಳಿಸಿ ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕಿದ. ಅದರೊಂದಿಗೆ, ಶಸ್ತ್ರಾಸ್ತ್ರ ನಿರ್ಬಂಧವನ್ನು ಹೇರಲಾಯಿತು. (The Indian Arms
Act–1878).
1885ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆಯಾಗಿ ಭಾರತದಲ್ಲಿಯ ರಾಜಕೀಯ ಕ್ಷೇತ್ರಕ್ಕೆ ಒಂದು ಹೊಸ ತಿರುವು ನೀಡಿತು. ಆಗಲೇ ಭಾರತದಲ್ಲಿ ಸಾಂಸ್ಕೃತಿಕ ಹಾಗೂ ರಾಜಕೀಯ ಜಾಗೃತಿಯುಂಟಾಗಿ ಬ್ರಿಟಿಷರ ವಿರುದ್ಧ ಜನಾಭಿಪ್ರಾಯ ರೂಪುಗೊಂಡಿತು. ಸ್ವಾಮಿ ವಿವೇಕಾನಂದ (1863-1902) ಅರಬಿಂದೋ (1872-1950) ಸ್ವಾಮಿ ದಯಾನಂದ ಸರಸ್ವತಿ (1824-1883)….. ಮೊದಲಾದವರು ಭಾರತೀಯ ಸಂಸ್ಕೃತಿಯ ಮೌಲ್ಯಗಳನ್ನು ಪ್ರತಿಪಾದಿಸುತ್ತಾ ಸ್ವಾತಂತ್ರ್ಯದ ಸಂದೇಶವನ್ನು ಸಾರಿದರು. 1861-1897ರ ಮಧ್ಯೆ ಭಾರತದ ವಿವಿಧೆಡೆಗಳಲ್ಲಿ ಸುಮಾರು 70,000 ಚದರ ಮೈಲು ಪ್ರದೇಶದಲ್ಲಿ ಬರಗಾಲ ತಲೆದೋರಿತ್ತು. ಅದರಿಂದಾಗಿ ಸುಮಾರು ಇಪ್ಪತ್ತು ಮಿಲಿಯ ಜನರು ಸಂಕಷ್ಟಕ್ಕೊಳಗಾದರು. ಆ ಬರಗಾಲದೊಂದಿಗೆ ಬೊಂಬೈ ಪ್ರದೇಶದಲ್ಲಿ ಭೀಕರ ಪ್ಲೇಗ್ ಸಾವಿರಾರು ಜನರನ್ನು ಬಲಿತೆಗೆದುಕೊಂಡಿತ್ತು. ಬರಗಾಲ ಮತ್ತು ಪ್ಲೇಗ್ ನಿರ್ವಹಣೆಯಲ್ಲಿ ಬ್ರಿಟಿಷರು ತೋರಿದ ಅಸಡ್ಡೆ ಹಾಗೂ ಕ್ರೌರ್ಯಕ್ಕಾಗಿ ಜನ ನೊಂದು ಸಿಡಿದೆದ್ದರು. 1899ರಲ್ಲಿ ಕರ್ಜನ್ ಭಾರತದ ವೈಸರಾಯಿಯಾಗಿ ನೇಮಿಸಲ್ಪಟ್ಟ. ಅವನು ಅನೇಕ ಜನವಿರೋಧಿ ಕಾರ್ಯಗಳನ್ನು ಅನುಸರಿಸಿದ. 1905ರಲ್ಲಿ ಅವನು ಬಂಗಾಳದ ವಿಭಜನೆ ಮಾಡಿ (ಜುಲಾಯಿ 19) ಭಾರತೀಯರಲ್ಲಿಯ ಏಕತಾ ಭಾವನೆಯನ್ನು ನಿರ್ಮೂಲನ ಮಾಡುವ ಪ್ರಯತ್ನ ಮಾಡಿದ. ಅದು ‘ಅಲ್ಪಸಂಖ್ಯಾತ-ಬಹುಸಂಖ್ಯಾತ’ ಎಂಬ ಅಥವಾ ‘ಹಿಂದೂ-ಮುಸ್ಲಿಂ’ ಎಂಬ ಪರಸ್ಪರ ವೈಷಮ್ಯದ ಭಾವನೆಯನ್ನು ಸೃಷ್ಟಿಸುವುದರಲ್ಲಿ ಸಫಲವಾಯಿತು. ಈ ವಿಷಬೀಜ ಬಿತ್ತಿ ಬ್ರಿಟಿಷರು ಅವರ ಹಿತಾಸಕ್ತಿಗಳನ್ನು ಅವರ ನಿರ್ಗಮನದ ತನಕವೂ ಸದಾ ಹಸಿರಾಗಿ ಇಡುವುದರಲ್ಲಿ ಯಶಸ್ವಿಯಾದರು. ದುರದೃಷ್ಟಕರವಾಗಿ, ಸ್ವಾತಂತ್ರ್ಯೋತ್ತರ ಭಾರತದಲ್ಲಿಯೂ ‘ಅಲ್ಪಸಂಖ್ಯಾತ’ರೆಂದು ಒಂದು ವರ್ಗದವರನ್ನು ಓಲೈಸುವ ಸ್ವಾರ್ಥ ರಾಜಕಾರಣ ದೇಶದ್ರೋಹಿಗಳಿಂದ ಆಗುವುದು ವಿಷಾದನೀಯ!

ಬಂಗಾಳದ ವಿಭಜನೆಗೆ ರಾಷ್ಟ್ರದಾದ್ಯಂತ ತೀವ್ರ ಅಸಮಾಧಾನ ವ್ಯಕ್ತವಾಗಿ ಬೇರೆ ಬೇರೆ ಚಳುವಳಿಗಳು ಪ್ರಾರಂಭವಾದವು. ಅದು ಸ್ವದೇಶೀ ಚಳುವಳಿ, ವಿದೇಶಿ ವಸ್ತುಗಳ ಬಹಿಷ್ಕಾರ, ರಾಷ್ಟ್ರೀಯ ವಿದ್ಯಾಲಯಗಳ ಸ್ಥಾಪನೆ… ಮೊದಲಾದವುಗಳೊಂದಿಗೆ ಜನರಲ್ಲಿ ರಾಷ್ಟ್ರೀಯ ಭಾವನೆ ಬೆಳೆಯುವಂತೆ ಮಾಡಿತು. ಕೆಲವೆಡೆಗಳಲ್ಲಿ ಅದು ಹಿಂಸಾಸ್ವರೂಪವನ್ನೂ ತಾಳಿತು ಮಾತ್ರವಲ್ಲದೆ, ಪ್ರತಿಭಟನೆ ದೇಶದಾದ್ಯಂತ ಕಂಡುಬಂತು. ಸ್ವದೇಶಿ ಚಳುವಳಿ, ಸ್ವರಾಜ್ಯ, ವಿದೇಶೀಯವುಗಳ ಬಹಿಷ್ಕಾರ ಮತ್ತು ‘ವಂದೇ ಮಾತರಂ’ – ಇವು ನಾಲ್ಕು ರಾಷ್ಟ್ರೀಯವಾದಿಗಳ ಜೀವದುಸಿರಾಯಿತು. ಈ ರೀತಿಯ ಹಿನ್ನೆಲೆಯಲ್ಲಿ ಬ್ರಿಟಿಷರ ವಿರುದ್ಧದ ಕ್ರಾಂತಿಕಾರಿ ಹೋರಾಟಕ್ಕೆ ಭೂಮಿಕೆ ಸಿದ್ಧವಾಯಿತು. ಮದ್ಯ-ಮಾಂಸಗಳ ಮಧ್ಯೆಯಿದ್ದ ಆ ಮೊಗಲ್ ವಿಲಾಸೀ ಜಹಾಂಗೀರ ವಿಲಾಯತೀ ವಸ್ತುಗಳಿಗೆ – ಮದಿರೆಗೆ ಮನಸೋತು ವಿವೇಚನಾವಿಹೀನನಾಗದಿದ್ದರೆ ಬ್ರಿಟಿಷರಿಗೆ ಭಾರತದಲ್ಲಿ ನೆಲೆಯೂರುವುದು ಸುಲಭವಾಗಿರಲಿಲ್ಲ.

   

Leave a Reply